ಉನ್ನತ ಶಿಕ್ಷಣ ಕ್ಷೇತ್ರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದು ದೊಡ್ಡ ಕೆಲಸ– ಪ್ರಯಾಸದ ಕೆಲಸವೂ ಹೌದು. ಈ ಸಮಸ್ಯೆಗಳಲ್ಲಿ ಒಂದು ಯಾವುದೆಂದರೆ ವಿದ್ಯಾರ್ಥಿಗಳ– ಅಧ್ಯಾಪಕರುಗಳ ಸರಾಸರಿ ಪ್ರಮಾಣದ ವಿಷಯ. ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಿಂತ ಅಧ್ಯಾಪಕರುಗಳ ಸಂಖ್ಯೆಯೇ ಹೆಚ್ಚು.
ಇನ್ನಿತರ ಕಾಲೇಜುಗಳಲ್ಲಿ ಅಧ್ಯಾಪಕರುಗಳ ಕೊರತೆ. ಉನ್ನತ ಶಿಕ್ಷಣ ಸಚಿವರಾದ ಟಿ.ಬಿ. ಜಯಚಂದ್ರ ಇದನ್ನು ಗಂಭೀರವಾಗಿ ಪರಿಗಣಿಸಿ, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇತ್ತೀಚೆಗಷ್ಟೇ ಸಮಾಲೋಚನೆ ನಡೆಸಿದ್ದಾರೆ. ಇದು ಸ್ವಾಗತಾರ್ಹ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಒಟ್ಟಿಗೆ ಸೇರಿ ನಿವಾರಿಸಬೇಕು. ನಮ್ಮ ಸನ್ನಿವೇಶದಲ್ಲಿ ಇದು ಬಹಳ ಮುಖ್ಯ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕೆಲವು ಮುಖ್ಯ ಆಯಾಮಗಳನ್ನು ಗುರುತಿಸುವುದು ಈ ಲೇಖನದ ಉದ್ದೇಶ.
ಖಾಸಗಿ ವಿದ್ಯಾಸಂಸ್ಥೆಗಳಿಗೆ, ಅಲ್ಲಿನ ಕಾಯಂ ಅಧ್ಯಾಪಕರುಗಳಿಗೆ ಅನುದಾನವನ್ನು ಸರ್ಕಾರ ಮಂಜೂರು ಮಾಡುವುದಕ್ಕಿಂತ ಮುಂಚೆಯೇ ಖಾಸಗಿ ವಿದ್ಯಾಸಂಸ್ಥೆಗಳು, ಅವುಗಳ ಆಡಳಿತ ವರ್ಗ ಉನ್ನತ ಶಿಕ್ಷಣವನ್ನು ಗಂಭೀರವಾಗಿಯೇ ಪರಿಗಣಿಸಿದ್ದವು. ವಿಜ್ಞಾನ, ಮಾನವಿಕ ಶಾಸ್ತ್ರ, ಸಾಹಿತ್ಯ, ಭಾಷಾ ಅಧ್ಯಯನದಂತಹ ಅನೇಕ ವಿಷಯಗಳನ್ನು ಖಾಸಗಿ ವಿದ್ಯಾಸಂಸ್ಥೆಗಳು ಬಹಳ ಲಕ್ಷಣವಾಗಿ ಎತ್ತಿಹಿಡಿದಿದ್ದ ವಾಸ್ತವ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರಿಗೂ ತಿಳಿದಿರುವ ಸಂಗತಿ.
ದಶಕಗಳ ಹಿಂದೆ ವಾಣಿಜ್ಯ ಶಾಸ್ತ್ರಕ್ಕೆ ಮೀಸಲಾದ ಕಾಲೇಜುಗಳು ವಿಜ್ಞಾನ ಮತ್ತು ಕಲಾ ಕಾಲೇಜುಗಳಿಗೆ ಇದ್ದ ವ್ಯಾಪ್ತಿಯನ್ನು, ಮಹತ್ವವನ್ನು ಪಡೆದುಕೊಂಡಿರದ ಕಾಲವದು. ಶಿಕ್ಷಣವೆಂಬುದು ಲಾಭಕ್ಕೆ, ಮಾರುಕಟ್ಟೆಯ ನಿಯಮಗಳಿಗೆ ಸೇರಿದ ವಿಷಯವೆಂದು ಖಾಸಗಿ ಸಂಸ್ಥೆಗಳು ಆ ಯುಗದಲ್ಲಿ ತಿಳಿದಿರಲಿಲ್ಲ. ಆದ್ದರಿಂದಲೇ ವಿಜ್ಞಾನವನ್ನು, ಕಲಾಧ್ಯಯನವನ್ನು ಎತ್ತಿಹಿಡಿದ ವಿದ್ಯಾಸಂಸ್ಥೆಗಳೇ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದವು. ಈ ಸತ್ಯವನ್ನು ಯಾರೂ ಮರೆಯುವಂತಿಲ್ಲ.
ಅಧ್ಯಾಪಕರುಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನುದಾನ ಕೊಟ್ಟು ಅನೇಕ ದಶಕಗಳಾದರೂ ಮೇಲಿನ ವಾಸ್ತವ ಬದಲಾಗಿರಲಿಲ್ಲ. ಆದರೆ ಕಳೆದ ಮೂರು ದಶಕಗಳಲ್ಲಿ ವಿಜ್ಞಾನ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಭಾಷೆ ಮತ್ತು ಸಾಹಿತ್ಯಾಧ್ಯಯನ ತಿಂದಿರುವ ಭಾರಿ ಪೆಟ್ಟು ಶಿಕ್ಷಣದ ಬಗ್ಗೆ ಕಾಳಜಿ ಇರುವ ಯಾರೂ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿದೆ. ಇದಲ್ಲದೆ ನ್ಯಾಯ, ಸಮಾನತೆಯ ಸಮಾಜವನ್ನು ಬಯಸುವವರೆಲ್ಲರಿಗೂ ಈ ಬದಲಾವಣೆ ಸಮಾಜದ ದುರಂತವನ್ನು ಸೂಚಿಸುವ ಸಂಕೇತವಾಗಿದೆ. ಜಾಗತೀಕರಣದ ದೊಡ್ಡ ಅಂಶವಾದ ಖಾಸಗೀಕರಣ ಶಿಕ್ಷಣ ಕ್ಷೇತ್ರವನ್ನು ಮಾರುಕಟ್ಟೆಯ ವರ್ತುಲದೊಳಗೆ ತಳ್ಳಿ, ಲಾಭದ ದೃಷ್ಟಿಯಿಂದ ವಿದ್ಯಾಸಂಸ್ಥೆಗಳು ಅಧ್ಯಯನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿರುವುದನ್ನು ಯಾರೂ ಕಡೆಗಣಿಸುವಂತಿಲ್ಲ.
ಇಂದು ವಿಜ್ಞಾನ, ಕಲೆ, ಮಾನವಿಕ ಶಾಸ್ತ್ರಗಳ ಅಧ್ಯಯನ ಕುಸಿಯುತ್ತಿರುವ ಸನ್ನಿವೇಶ ಒದಗಿಬಂದಿರುವುದು ಖಾಸಗೀಕರಣದಿಂದಾಗಿ. ಇದನ್ನು ಉನ್ನತ ಶಿಕ್ಷಣ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಕೇವಲ ವಾಣಿಜ್ಯ ಶಾಸ್ತ್ರ, ಬಿಸಿನೆಸ್ ಮ್ಯಾನೇಜ್‌ಮೆಂಟ್, ಕಂಪ್ಯೂಟರ್ ಸೈನ್ಸ್‌ನಂತಹ ವಿಷಯಗಳನ್ನು ಮಾತ್ರ ಎತ್ತಿ ಹಿಡಿಯುವ ಶಿಕ್ಷಣ ಸಂಸ್ಥೆಗಳ ಪ್ರವೃತ್ತಿಯನ್ನು ತಡೆಯಬೇಕು. ವಿದ್ಯಾರ್ಥಿ– ಶಿಕ್ಷಕರುಗಳ ಸರಾಸರಿಯಲ್ಲಿ ಅಸಮತೋಲನವಿರುವುದು ಈ ಕಾರಣದಿಂದ ಎಂಬುದನ್ನು ಅರಿಯಬೇಕು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ವಿದ್ಯಾಸಂಸ್ಥೆಗಳು ಲಾಭ ನಷ್ಟದ ದೃಷ್ಟಿಯಿಂದ ಹಲವಾರು ವಿಭಾಗಗಳನ್ನು ಮುಚ್ಚುತ್ತಾ ಬರುವುದನ್ನು ನೋಡಬಹುದು. ಕೇವಲ ಲಾಭದ ದೃಷ್ಟಿಯಿಂದ ವಾಣಿಜ್ಯ ಶಾಸ್ತ್ರವನ್ನು, ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಸೈನ್ಸನಂತಹ ವಿಷಯಗಳನ್ನು ಮಾತ್ರ ಬೆಳೆಸುವುದು ಯಾವ ರೀತಿಯಲ್ಲೂ ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ವಿಜ್ಞಾನ, ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯಾಧ್ಯಯನಕ್ಕೆ ಬೆಲೆ ಕೊಡದ ವಿದ್ಯಾಸಂಸ್ಥೆಗಳು, ಸರ್ಕಾರಗಳು ಸಮಾಜಕ್ಕೆ ಎಂದೂ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ– ಅಧ್ಯಾಪಕರುಗಳ ಸರಾಸರಿಗೂ ಮೇಲೆ ಚರ್ಚಿಸಿರುವ ವಿಷಯಕ್ಕೂ ನೇರವಾದ ಸಂಬಂಧವಿರುವುದನ್ನು ಶಿಕ್ಷಣ ಸಚಿವರು, ಉನ್ನತ ಇಲಾಖೆಯ ಹಿರಿಯ ಅಧಿಕಾರಿಗಳು ಅರಿಯಬೇಕು. ಇದನ್ನು ಗೌಣಗೊಳಿಸಬಾರದು.
ಖಾಸಗಿ ಸಂಸ್ಥೆಗಳಲ್ಲಿ ಮೇಲಿನ ವಿಷಯ ಬೇರೊಂದು ಸ್ವರೂಪವನ್ನೇ ಪಡೆದುಕೊಂಡಿದೆ. ಇದನ್ನು ಶಿಕ್ಷಣ ಸಚಿವರು, ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನಾತ್ಮಕ ರೀತಿಯಲ್ಲಿ, ನಾಡಿನ ಕಾನೂನಿನ ಚೌಕಟ್ಟಿನಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ನಡೆದುಕೊಳ್ಳಬೇಕು. ಹಾಗೆ ನಡೆಯುವಂತೆ ಮಾಡುವುದು ಸರ್ಕಾರದ ಧರ್ಮ. ಶಿಕ್ಷಣ ಸಚಿವರ ಗಮನಕ್ಕೆ ಕೆಲವು ಮುಖ್ಯ ಸಂಗತಿಗಳು ಬರಬೇಕು. ಅವು ಹೀಗಿವೆ: ವರ್ಗಾವಣೆಯ ಅನೈತಿಕ ವ್ಯವಹಾರಗಳು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ.
ಅನುದಾನ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ ಅನೇಕ ಕಾರಣಗಳಿಂದ ಕೆಲವು ವಿಭಾಗಗಳಲ್ಲಿ ಕಾರ್ಯಭಾರ ಕಮ್ಮಿ ಆದಾಗ ಅಲ್ಲಿರುವ ಅಧ್ಯಾಪಕರುಗಳನ್ನು ಉನ್ನತ ಶಿಕ್ಷಣದ ಆಯುಕ್ತರು ‘ಕೌನ್ಸೆಲಿಂಗ್’ ಮೂಲಕ ಮುಕ್ತವಾಗಿ, ಪಾರದರ್ಶಕತೆಯಿಂದ ಕಾರ್ಯಭಾರವಿರುವ ಅನುದಾನಿತ ವಿದ್ಯಾಸಂಸ್ಥೆಗಳಿಗೆ ತಾತ್ಕಾಲಿಕವಾಗಿ ‘ನಿಯೋಜಿಸುತ್ತಾರೆ’ (Deputation). ಆದರೆ ಮಾತೃಸಂಸ್ಥೆಯಲ್ಲಿ ಪುನಃ ಕಾರ್ಯಭಾರ ಉಂಟಾದಾಗ ಆ ಅಧ್ಯಾಪಕರನ್ನು ಮಾತೃಸಂಸ್ಥೆಗೆ ‘ಮರು ನಿಯೋಜನೆ’ (re deputation) ಮಾಡುತ್ತಾರೆ. ಈ ಕೆಲಸವನ್ನು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಶ್ರದ್ಧೆಯಿಂದ ಸಂವಿಧಾನಾತ್ಮಕವಾಗಿ ಮಾಡುತ್ತಲೇ ಬಂದಿದ್ದಾರೆ. ಇದು ವಿದ್ಯಾಸಂಸ್ಥೆಗಳಲ್ಲಿರುವ ವಿದ್ಯಾರ್ಥಿ– ಅಧ್ಯಾಪಕರುಗಳ ಸರಾಸರಿಯ ಸಮತೋಲನವನ್ನು ಕಾಪಾಡುವ ಕ್ರಿಯೆಯೂ ಹೌದು. ಇದಕ್ಕಾಗಿ ಇಲಾಖೆಯ ಆಯುಕ್ತರನ್ನು ಮೆಚ್ಚಲೇಬೇಕು.
ಆದರೆ ಕೆಲವು ಅಧ್ಯಾಪಕರು ಅನೈತಿಕವಾದ ಸ್ವಂತ ಕಾರಣಗಳಿಗೆ ಅಸಂವಿಧಾನಾತ್ಮಕವಾಗಿ, ವಾಮಮಾರ್ಗಗಳ ಮೂಲಕ, ಭ್ರಷ್ಟ ವ್ಯವಹಾರಗಳ ಮುಖೇನ ತಮ್ಮ ಮಾತೃ ಸಂಸ್ಥೆಯಲ್ಲಿ ಪೂರ್ಣ ಕಾರ್ಯಭಾರವಿದ್ದರೂ, ತಾವು ಇರುವ ನಗರದ ವ್ಯಾಪ್ತಿಯ ಒಳಗೆ ಇರುವ ಮತ್ತೊಂದು ವಿದ್ಯಾಸಂಸ್ಥೆಗೆ (ಯಾವುದೇ ನೈತಿಕ, ಶೈಕ್ಷಣಿಕ ಕಾರಣಗಳಿಲ್ಲದೆ ಹೋದರೂ) ವರ್ಗಾವಣೆ ಪಡೆಯುವ ಹುನ್ನಾರವನ್ನು ನಡೆಸುತ್ತಾರೆ. ಅಂತಹ ಅಧ್ಯಾಪಕರುಗಳಿಗೆ ಮಾತೃಸಂಸ್ಥೆಯ ಆಡಳಿತ ವರ್ಗ ಅನೈತಿಕವಾಗಿ ‘ನಿರಾಕ್ಷೇಪಣಾ ಪತ್ರ’ವನ್ನು (noc) ಕೊಡುತ್ತದೆ. ಸಂಸ್ಥೆಯ ಇಲಾಖೆಯಲ್ಲಿ ಪೂರ್ಣ ಕಾರ್ಯಭಾರವಿದ್ದರೂ ಈ ರೀತಿಯ ಅವ್ಯವಹಾರಗಳು ಆಗುತ್ತವೆ.
ಇದುವರೆಗೂ ಉನ್ನತ ಶಿಕ್ಷಣ ಇಲಾಖೆಯ ಬಹುತೇಕ ಆಯುಕ್ತರು ಇಂತಹ ಅನೈತಿಕ ವ್ಯವಹಾರಗಳನ್ನು ಗಟ್ಟಿಯಾಗಿ ತಳ್ಳಿಹಾಕಿದ್ದಾರೆ, ತಿರಸ್ಕರಿಸಿದ್ದಾರೆ, ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಆಯುಕ್ತರ ಕ್ರಮ ಮಾತೃಸಂಸ್ಥೆಯಲ್ಲಿ ವಿಭಾಗದ ಕಾರ್ಯಭಾರವನ್ನೂ, ವಿದ್ಯಾರ್ಥಿ– ಅಧ್ಯಾಪಕರುಗಳ ಸರಾಸರಿಯನ್ನು ಕಾಪಾಡುವ ಸತ್ಯದ ಕ್ರಮವೂ ಹೌದು. ಅನೈತಿಕ ವರ್ಗಾವಣೆ ಮಾತೃಸಂಸ್ಥೆಯೊಳಗೆ ವಿದ್ಯಾರ್ಥಿ– ಅಧ್ಯಾಪಕರುಗಳ ಸರಾಸರಿಯಲ್ಲಿ ಅಸಮತೋಲನವನ್ನುಂಟು ಮಾಡುವುದಲ್ಲದೆ ವಿಭಾಗವನ್ನು ಮುಚ್ಚುವ ಅನೈತಿಕ ಕ್ರಿಯೆಯೂ ಆಗಿರುವುದನ್ನು ಯಾರೂ ಕಡೆಗಣಿಸುವಂತಿಲ್ಲ. ಶಿಕ್ಷಣ ಇಲಾಖೆ ಕೆಲವು ಕ್ರಮಗಳನ್ನು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾಗಿದೆ.
1. ಮಾತೃ ಸಂಸ್ಥೆಯಲ್ಲಿ ಕಾರ್ಯಭಾರವಿದ್ದೂ ವರ್ಗಾವಣೆ ಪಡೆಯುವುದು ಆ ಸಂಸ್ಥೆಯಲ್ಲಿ ಕೃತಕವಾದ ಖಾಲಿ ಹುದ್ದೆಯನ್ನು ಸೃಷ್ಟಿಸಿದಂತೆ. ಸರ್ಕಾರದಿಂದ ಲಕ್ಷ ಲಕ್ಷ ರೂಪಾಯಿ ವೇತನ ಪಡೆದು ಅನೈತಿಕ ವರ್ಗಾವಣೆ ಬಯಸುವ ಅಧ್ಯಾಪಕರುಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಸಂಸ್ಥೆಯಲ್ಲಿ ಕಾರ್ಯಭಾರವಿದ್ದರೂ ‘ನಿರಾಕ್ಷೇಪಣಾ ಪತ್ರ’ವನ್ನು ಕೊಡುವ ಆಡಳಿತವರ್ಗದ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು. ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯನ್ನು ಕಡೆಗಣಿಸುವಂತಿಲ್ಲ, ಹಾಗೆ ಕಡೆಗಣಿಸಿದರೆ ಅವು ಶಿಕ್ಷೆಯನ್ನು ಅನುಭವಿಸಬೇಕು.
2. ಒಂದು ಸಂಸ್ಥೆಯಲ್ಲಿ ಕಾರ್ಯಭಾರವಿದ್ದರೆ ಅದನ್ನು ಶಿಕ್ಷಣ ಇಲಾಖೆ ಸರಿಪಡಿಸಬೇಕು. ಮೀಸಲಾತಿ ಅನ್ವಯ ಮಾಡಿ, ಬ್ಯಾಕ್‌ಲಾಗ್ ನಿಯಮದ ಪ್ರಕಾರ ಖಾಲಿ ಹುದ್ದೆಗಳನ್ನು ಶಿಕ್ಷಣ ಇಲಾಖೆಯ ಆಯುಕ್ತರು ತುಂಬಬೇಕು. ಅನೈತಿಕ ಒಳ ಒಪ್ಪಂದಗಳ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕೆಲಸವನ್ನು ಮಾಡುವಂತಿಲ್ಲ. ಮೀಸಲಾತಿ ನಿಯಮಗಳನ್ನು ಅನುಸರಿಸುವುದರಿಂದ ಮಾತ್ರ ಸಾಮಾಜಿಕ ನ್ಯಾಯವನ್ನು ಕಾಪಾಡಬಹುದಾಗಿದೆ. ಕೆಲವೇ ಖಾಸಗಿ ಸಂಸ್ಥೆಗಳು ಖಾಲಿ ಹುದ್ದೆಗಳನ್ನು ತುಂಬುವಾಗ ಮೀಸಲಾತಿ ಪದ್ಧತಿಯನ್ನು ಪಾಲಿಸಲು ಪ್ರಯತ್ನಿಸುತ್ತವೆ.
3. ಖಾಸಗಿ ಕಾಲೇಜುಗಳಲ್ಲಿ ಕಾರ್ಯಭಾರ ಇಳಿದಾಗ ಅಧ್ಯಾಪಕರುಗಳನ್ನು ಸರ್ಕಾರಿ ಕಾಲೇಜುಗಳಿಗೆ ಮಾತ್ರ ‘ನಿಯೋಜನೆ’ ಅಥವಾ ‘ವರ್ಗಾವಣೆ’ ಮಾಡುವಂತಾಗಬೇಕು. ಒಂದು ಖಾಸಗಿ ಸಂಸ್ಥೆಯಿಂದ ಮತ್ತೊಂದು ಖಾಸಗಿ ಸಂಸ್ಥೆಗೆ ಆಗುವ ‘ವರ್ಗಾವಣೆ’ಯನ್ನು ಉನ್ನತ ಶಿಕ್ಷಣ ಇಲಾಖೆ ನಿರಾಕರಿಸಬೇಕು. ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು. ಸರ್ಕಾರದ ವೇತನ ಪಡೆಯುವ ಅಧ್ಯಾಪಕರ ಸೇವೆ ಸರ್ಕಾರದ ವಿದ್ಯಾಸಂಸ್ಥೆಗಳಿಗೆ ಲಾಭವಾಗುವಂತಾಗಬೇಕು. ಸಂಸ್ಥೆಗಳು, ಅಧ್ಯಾಪಕರು ಸಂವಿಧಾನಾತ್ಮಕವಾಗಿ ನಡೆಯುವಂತೆ ಮಾಡಬೇಕು. ಸರ್ಕಾರಿ ಕಾಲೇಜುಗಳ ಅನೇಕ ಸಮಸ್ಯೆಗಳನ್ನು ಈ ಕ್ರಮದಿಂದ ಸರಿಪಡಿಸಬೇಕು. ಇದನ್ನು ಉನ್ನತ ಶಿಕ್ಷಣ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ವಿಳಂಬವಿಲ್ಲದೆ ಅನುಷ್ಠಾನಕ್ಕೆ ತರಬೇಕು.
4. ಸರ್ಕಾರಿ ಕಾಲೇಜುಗಳಲ್ಲಿ, ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ‘ಬೌದ್ಧಿಕ ಶ್ರೇಷ್ಠತೆ’ ಮತ್ತು ‘ಸಾಮಾಜಿಕ ನ್ಯಾಯ’ ಮೇಳೈಸುವಂತೆ ಮಾಡಬೇಕು. ಇದು ಸಾಧ್ಯವೂ ಕೂಡ. ಒಳ್ಳೆಯ ಸಮಾಜಕ್ಕೆ ಅಗತ್ಯವಿರುವ ವಿಷಯಗಳನ್ನು, ವಿದ್ಯಾಸಂಸ್ಥೆಗಳು ಕಾಪಾಡುವಂತಹ ನಿಯಮಗಳನ್ನು ಸರ್ಕಾರ ರೂಪಿಸಬೇಕು. ನ್ಯಾಯ ಸಮಾನತೆಯ ಪ್ರಶ್ನೆಗಳು ಅಳಿಸಿ ಹೋಗದಂತೆ ನೋಡಿಕೊಳ್ಳುವುದು ಸರ್ಕಾರದ ಧರ್ಮ. ಇದು ಕೇವಲ ಅಂಕಿ–ಅಂಶಗಳ ಪ್ರಶ್ನೆ ಅಲ್ಲ. ಸರ್ಕಾರಿ ಕಾಲೇಜುಗಳ, ಖಾಸಗಿ ವಿದ್ಯಾ ಸಂಸ್ಥೆಗಳ ಅನೇಕ ಸಮಸ್ಯೆಗಳು ಹುಟ್ಟಿರುವುದು ‘ಹೊಸ ಆರ್ಥಿಕವಾದದಿಂದ’ ಎಂದು ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಹಿಸುವಷ್ಟು ಸಮರ್ಥರಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಅನೇಕ ಆತಂಕಕಾರಿ ಬದಲಾವಣೆಗಳನ್ನು ಸಂಕೀರ್ಣವಾಗಿ, ಸಮಗ್ರವಾಗಿ ಅಧ್ಯಯನ ಮಾಡಿ, ಹಿರಿಯ ಅಧಿಕಾರಿಗಳೊಂದಿಗೆ, ಶಿಕ್ಷಣ ತಜ್ಞರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ ಸಚಿವರು ಸುಧಾರಣೆಯನ್ನು ತರಬೇಕು. ಇದು ಇಂದಿನ ನಿಜವಾದ ಅಗತ್ಯಗಳಲ್ಲಿ ಒಂದು. ನಮ್ಮ ಸಮಾಜದ ಒಳಿತು ಸರ್ಕಾರ ಮತ್ತು ಶಿಕ್ಷಣದ ನೈತಿಕ ಸಂಬಂಧವನ್ನು ಅವಲಂಬಿಸಿದೆ ಎಂಬುದನ್ನು ಎಲ್ಲರೂ ಗಟ್ಟಿಯಾಗಿ ಹೇಳಬೇಕು. ಆ ಸಂಬಂಧವನ್ನು ಸಂರಕ್ಷಿಸುವ ಕ್ರಿಯೆಯಲ್ಲಿ ಸರ್ಕಾರ ತೊಡಗಬೇಕು.
ಲೇಖಕ ಪ್ರಾಧ್ಯಾಪಕ
editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.