ADVERTISEMENT

ಅನುದಾನ ನಿಯಂತ್ರಣ ಕಾಯ್ದೆ ಆತಂಕಕಾರಿ

ಡಾ.ಮೀನಾಕ್ಷಿ ಬಾಳಿ
Published 20 ಜುಲೈ 2014, 19:30 IST
Last Updated 20 ಜುಲೈ 2014, 19:30 IST

ವಿದ್ಯೆ ಎಂಬುದು ಪಡೆಯುವ ಮತ್ತು ಕೊಡುವ ಸಂಗತಿ, ಮನುಷ್ಯ ಪ್ರಾಣಿ­ಗ­ಳನ್ನು ಮಾನವ ಸಮುದಾಯದ ಸದಸ್ಯರ­ನ್ನಾ­ಗಿ­ಸು­­ವುದೇ ವಿದ್ಯೆ ಎಂದು ಶರಣರು 12ನೇ ಶತ­ಮಾ­ನ­ದ­ಲ್ಲಿಯೇ ಹೇಳಿದ್ದರು. ಆ ಮೂಲಕ ಅಕ್ಷರ ಮತ್ತು ಅರಿವು ಪ್ರತಿಯೊಬ್ಬರಿಗೂ ಸಿಗುವಂತಾ­ಗ­ಬೇಕೆಂದು ಆಶಿಸಿದ್ದರು. ಆದರೆ ಹಲವು ಸಂಘರ್ಷಗಳ ಬಳಿಕ  ಸಾರ್ವ­ಜ­­ನಿಕ ಶಿಕ್ಷಣದ ಪರಿಕಲ್ಪನೆ ಭಾರತದಲ್ಲಿ ಮೂಡಿದ್ದು ಬ್ರಿಟಿಷರ ಕಾಲದಲ್ಲಿಯೇ ಎಂಬುದು ಚಾರಿ­­ತ್ರಿಕ ವ್ಯಂಗ್ಯ.

ಮೊದಲು ನಮ್ಮಲ್ಲಿ ನಿರ್ದಿಷ್ಟ  ಸಮು­ದಾ­ಯ­ದವರಿಗೆ ಮೀಸಲಾಗಿದ್ದ  ಶಿಕ್ಷಣ, ಲೌಕಿಕ ಬದುಕಿಗಿಂತಲೂ ಹೆಚ್ಚಾಗಿ ಆಧ್ಯಾತ್ಮಿಕ ಅಭೀ­ಪ್ಸೆಯನ್ನು ತಣಿಸುತ್ತಿತ್ತು. ಉಳಿದಂತೆ ಆಯಾ ಕುಲ ಕಸುಬಿನವರು ವ್ಯವಹಾರ ಕೌಶ­ಲ­ವನ್ನು ವಂಶಪಾರಂಪರ್ಯವಾಗಿ ಕಲಿಯು­ತ್ತಿ­ದ್ದರು. ಹೀಗಿರುವಾಗ ವಿವಿಧ ವಸ್ತು ಉತ್ಪಾದನಾ ಜ್ಞಾನ­­ಶಿಸ್ತುಗಳನ್ನು ವಿದ್ಯೆ ಎಂದು ಪರಿಗಣಿಸಲಿಲ್ಲ. ತತ್ಪ­­ರಿ­ಣಾಮವಾಗಿ ಅಸಮಾನ ಸಮಾಜ ವ್ಯವಸ್ಥೆ­ಯು ದೈವೀಕರಣಗೊಂಡು ಅದೇ ಸ್ಥಾಯಿಯಾಗಿತ್ತು.

ಬ್ರಿಟಿಷರು ತಮ್ಮ ಸಾಮ್ರಾಜ್ಯದ ಅಭಿವೃದ್ಧಿ­ಗಾಗಿ ಪರಿಚಯಿಸಿದ ಸಾರ್ವಜನಿಕ ಶಿಕ್ಷಣವು ಭಾರ­­ತೀ­ಯರ ಬದುಕನ್ನು ಬದಲಿಸಿದ್ದು ಚಾರಿತ್ರಿಕ ಸತ್ಯ. ಬ್ರಿಟಿಷ್‌ಭಾರತದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಮಟ್ಟದವರೆಗೆ  ಸಂಪೂರ್ಣ ಶಿಕ್ಷಣವನ್ನು ಎಲ್ಲರಿಗೂ ನೀಡಬೇಕೆಂದು ಶಿಫಾರಸು ಮಾಡ­ಲಾ­ಗಿತ್ತು. ಸ್ವತಂತ್ರ ಭಾರತವಂತೂ ಶಿಕ್ಷಣವು ಪ್ರಜೆ­ಗಳ ಮೂಲಭೂತ ಹಕ್ಕಾಗಿಸಿತು. ಜವಾಬ್ದಾರಿ­ಯುತ ಸರ್ಕಾರವು ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ನೀಡುವುದನ್ನು ಕಾಲಬದ್ಧ ಯೋಜನೆ­ಯಾಗಿ ಘೋಷಿಸಿತು.

ವಿಶಾಲವಾದ ದೇಶಕ್ಕೆ ಬೇಕಾದಷ್ಟು ಶಾಲಾ ಕಾಲೇಜು­ಗಳನ್ನು ತೆಗೆಯುವುದು ಅದೇ ತಾನೆ ಅಸ್ತಿತ್ವಕ್ಕೆ ಬಂದಿದ್ದ ಹೊಸ ಸರ್ಕಾರಕ್ಕೆ ಸಾಧ್ಯವಿರ­ಲಿಲ್ಲ. ಈ ಕೊರತೆಯನ್ನು ನೀಗಿಸಲು ಸ್ವಾತಂತ್ರ­ಪೂರ್ವ ಕಾಲದಿಂದಲೂ ಕ್ರಿಯಾಶೀಲವಾಗಿದ್ದ ಖಾಸಗಿ­ ಶಿಕ್ಷಣ ಸಂಸ್ಥೆಗಳು ಮುಂದೆ ಬಂದವು. ಒಂದು ರೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಸಾರ್ವ­ಜನಿಕ ಶಿಕ್ಷಣ ಇಲಾಖೆಗೆ ಬುನಾದಿ ಹಾಕಿದವು.

೧೮೨೦ರಲ್ಲಿ ಮಹಾರಾಷ್ಟ್ರದಲ್ಲಿ ಬಾಂಬೆ ಎಜುಕೇಷನ್ ಸೊಸೈಟಿ ಎಂಬ ಮೊದಲ ಖಾಸಗಿ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ಈ ಸಂಸ್ಥೆ ತುಂಬಾ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ­ದ್ದ­ಲ್ಲದೇ ಶಿಕ್ಷಣ ಪ್ರಸಾರದಲ್ಲಿ ಖಾಸಗಿ ಸಂಸ್ಥೆಗಳ ಸಹ­ಭಾಗಿತ್ವದ ಅನಿವಾರ್ಯವನ್ನು ಎತ್ತಿ ಹಿಡಿ­ಯಿತು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಬಂಡ­ವಾಳ ಕೇಂದ್ರಿತ ಉದ್ಯಮವಾಗಿ ಹೊರಳು ಹಾದಿ ಹಿಡಿ­ದಿವೆ. ಅದಕ್ಕೂ  ಸರ್ಕಾರದ ಹೊಸ ಆರ್ಥಿಕ ನೀತಿಗಳೇ ಕಾರಣ.

ಪ್ರಾರಂಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಸೇವಾ ವಲಯವೇ ಆಗಿದ್ದವು. ಶಿಕ್ಷಣ ಪ್ರಸಾರ ಪ್ರಚಾರವೇ ಇವುಗಳ ಗುರಿ­ಯಾ­ಗಿತ್ತು. ಇವು ಕೊಡಮಾಡುವ ಪ್ರಮಾಣ ಮತ್ತು ಗುಣ­­­ಮಟ್ಟವನ್ನು ಪರಿಗಣಿಸಿಯೇ ಸರ್ಕಾರ ಅನು­ದಾನ ನೀಡುವ ಪದ್ಧತಿಯನ್ನು ಜಾರಿಯಲ್ಲಿ ತಂದಿತು. ಈ ಅನುದಾನ ನೀಡುವ ಪದ್ಧತಿಯು ೧೮೧೩ರಲ್ಲಿ ಪ್ರಾರಂಭವಾಯಿತು.  ಆಗಿನ ಮುಂಬೈ ಸರ್ಕಾರ ಪ್ರಥಮ ಬಾರಿಗೆ ಇಂತಹ­ದೊಂದು ಕಾಯ್ದೆ ಪಾಸು ಮಾಡಿ ಜಾಗತಿಕ ಮಟ್ಟ­ದಲ್ಲಿಯೇ ದೊಡ್ಡ ಕ್ರಾಂತಿ ಮಾಡಿತು.

ಏಕೆಂದರೆ ೧೮೩೩ರವರೆಗೆ ಬ್ರಿಟನ್ನಿನಲ್ಲಿಯೂ ಶಾಲೆ­­ಗಳಿಗೆ ಅನುದಾನ ನೀಡುವ ಪದ್ಧತಿ ಇರ­ಲಿಲ್ಲ. ಆದಾಗ್ಯೂ ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ­­ಗಳಿಗೆ ಅನುದಾನ ನೀಡುವ ಪದ್ಧತಿಗೆ ಚಾಲನೆ ಸಿಕ್ಕಿದ್ದು ಹಂಟರ್ ಕಮಿಷನ್‌ನಿಂದಲೇ.  ೧೮೮೨ರ ಅಕ್ಟೋಬರ್ ೧೯ ರಂದು ಭಾರತದ ಶೈಕ್ಷ­­ಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ನೇಮಿ­ಸ­­ಲಾದ ಹಂಟರ್ ಕಮಿಷನ್‌ಗೆ ತಮ್ಮ ಶಿಫಾರಸು­ಗ­ಳನ್ನು ನೀಡುವಾಗ ಆಗಿನ ಶಿಕ್ಷಣತಜ್ಞ ಜ್ಯೋತಿ­ರಾವ್ ಫುಲೆ ಅವರು ಖಾಸಗಿ ಶಿಕ್ಷಣ ಸಂಸ್ಥೆ­ಗಳು ಸರ್ಕಾರಿ ಇಲಾಖೆಯ ನಿಯಮಗಳ ಪ್ರಕಾರ ನಡೆ­ಯು­ತ್ತಿದ್ದರೆ ಅವುಗಳಿಗೆ ನಗರ­ಪಾ­ಲಿಕೆ ಅನುದಾನ ನೀಡ­ಬೇಕು (ಆಗ ನಗರಪಾಲಿಕೆ ಮಟ್ಟ­ದಲ್ಲಿ ಶಿಕ್ಷಣ ಇಲಾಖೆ ಇರುತ್ತಿತ್ತು), ಅನು­ದಾನ ಹಂಚಲು ಸರಿಯಾದ ನಿಯಮಗಳನ್ನು ರಚಿಸ­ಬೇಕು ಎಂದು ಹೇಳಿದ್ದರು.

ಈ ವ್ಯವಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸಕಾರಾ­ತ್ಮಕ ಪರಿಣಾಮವನ್ನು ಬೀರಿತು. ಆದ್ದರಿಂದಲೇ ಅನು­­ದಾನ ಪದ್ಧತಿಯು ಸ್ವಾತಂತ್ರ್ಯೋತ್ತರ ಕಾಲ­ದ­­ಲ್ಲಿಯೂ ಮುಂದುವರಿಯಿತು. ಈ ಅನುದಾನ ವ್ಯವ­ಸ್ಥೆ­ಯಿಂದಾಗಿ ದೇಶದಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಹುಟ್ಟಿಕೊಂಡು ಸರ್ಕಾ­ರಕ್ಕೆ ಹೆಗಲೆಣೆಯಾಗಿ ನಿಂತಿದ್ದವು. ಹಾಗೆ ನೋಡಿ­ದರೆ ಸರ್ಕಾರವೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂಪೂರ್ಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ನಿಭಾಯಿಸ­ಬೇ­ಕಿತ್ತು.

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ­ವಾದಿ ದೇಶಕ್ಕೆ ಇದು ಅಸಾಧ್ಯವೇನಾಗಿರಲಿಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್‌ ಪ್ರಮಾ­ಣ­­­ದಿಂದ ಮತ್ತು ಗುಣಮಟ್ಟದ ಶಿಕ್ಷಣದ ದಕ್ಕು­ವಿ­ಕೆ­­­­ಯಿಂದಾಗಿ ಸರ್ಕಾರ– ಖಾಸಗಿ ಸಹ­ಭಾಗಿ­ತ್ವವು ಕಾಯಮ್ಮಾಗಿ ಮುಂದುವರಿದಿತ್ತು. ಈ ಅನು­­ದಾನ, ಭಿಕ್ಷೆಯೂ ಅಲ್ಲ ಯಾರ ಹಂಗೂ ಅಲ್ಲ. ಹೀಗಾಗಿಯೇ ಇಂದು ಒಟ್ಟು ಶಿಕ್ಷಣ ಪ್ರಸಾ­ರ­ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದೇ ಸಿಂಹಪಾಲು. ಈ ಹಿನ್ನೆಲೆಯಲ್ಲಿ  ಇತ್ತೀಚೆಗೆ ಕರ್ನಾಟಕ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನ ನಿಯಂತ್ರಣ ಎಂಬ ಹೊಸ ಕಾಯ್ದೆ ತಂದಿರುವುದು ಆಘಾತಕಾರಿ.

ಈ ಕಾಯ್ದೆಯ ಅನ್ವಯ ೧೯೯೬ರ ನಂತರ ಅನುದಾನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸೇವಾ ಭದ್ರತೆಯನ್ನು ನೀಡ­ಲಾ­ಗು­ವು­ದಿ­ಲ್ಲವೆಂದು ವ್ಯಾಖ್ಯಾನಿಸಲಾ­ಗು­ತ್ತಿದೆ. ‘ಕರ್ನಾ­ಟಕ ಖಾಸಗಿ ಅನುದಾನಿತ ಶೈಕ್ಷ­ಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ನಿಯಂತ್ರಣ) ಅಧಿನಿ­ಯಮ – ೨೦­೧೪’ ಎಂಬ ಹೆಸರಿನ ಈ ಕಾಯ್ದೆ­ಯು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವ­ಹಿ­ಸುತ್ತಿರುವ ಶಿಕ್ಷ­ಕರ ಮೇಲೆ ಹದ್ದಿನಂತೆ ಎರ­ಗತೊಡಗಿದೆ.

ಇದರ ಅನ್ವಯ  ೧೯೯೬ಕ್ಕಿಂತ ಮೊದಲು ಸೇವೆ ಸಲ್ಲಿ­ಸಿದ ಅವಧಿಯನ್ನು ಅನು­ದಾನ ರಹಿತವೆಂದು ಹಾಗೂ ಅಲ್ಲಿ ಈಗಾಗಲೇ ನೀಡ­ಲಾದ ವಾರ್ಷಿಕ ಬಡ್ತಿ, ಮುಂಬಡ್ತಿ ಇತ್ಯಾದಿ ಸೌಲ­ಭ್ಯಗಳನ್ನು ಕಾಲ್ಪ­ನಿ­ಕವೆಂದು, ಇವುಗಳನ್ನು ಹಿಂಪ­ಡೆಯ­ಬೇ­ಕೆಂದು ಹೊರಟಿದೆ. ಈ ಕಾಯ್ದೆಯು ಪ್ರಾಥಮಿಕ­ದಿಂದ ಉನ್ನತ ಮಟ್ಟದ­ವ­ರೆ­ಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವು­ದಾ­ದರೂ ಇದು ­ಪ್ರಧಾ­ನ­ವಾಗಿ ವಿಶ್ವವಿದ್ಯಾಲಯ ಧನ­ಸಹಾಯ ಆಯೋಗ (ಯುಜಿಸಿ) ವೇತನ ಪಡೆ­ಯುತ್ತಿರುವ ಖಾಸಗಿ ಪದವಿ ಕಾಲೇಜುಗಳ ಸಿಬ್ಬಂದಿಯನ್ನು ಗುರಿ ಮಾಡಿಕೊಂಡಂತಿದೆ.

ಶೈಕ್ಷಣಿಕ ಅನುದಾನ ಪದ್ಧತಿಯನ್ನು  ಅನು­ದಾ­ನ­ರಹಿತ ಅವಧಿಗೂ ಅನ್ವಯಿಸ­ಲಾ­ಗು­ತ್ತಿತ್ತು. ೧೯೯೬ರ ನಂತರ ಸರ್ಕಾರಕ್ಕೆ ಆರ್ಥಿಕ ಹೊರೆ­­ಯಾ­ಗುತ್ತದೆ ಎಂಬ ನೆಪವೊಡ್ಡಿ ಅನು­ದಾನ­ರಹಿತ ಅವ­ಧಿಯಲ್ಲಿ ಶಿಕ್ಷಣ ಸಂಸ್ಥೆಗಳು ತನ್ನ ಸಿಬ್ಬಂದಿಗೆ ನೀಡಿದ ಮೊತ್ತವನ್ನು ಮರಳಿಸ­ಲಾಗ­ದೆಂದು ಷರತ್ತು­ ವಿಧಿಸಿತ್ತು. ಆದರೆ ಹಿಂದಿನ ಬಾಕಿ ಕೊಡ­ಲಾ­ಗದಿದ್ದರೂ ಸಿಬ್ಬಂದಿಯು ಅನು­ದಾನ­ರ­ಹಿತ ಅವ­ಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗ­ಣಿಸಿ ವೇತನ ನಿಗದೀಕರಣ, ಮುಂಬಡ್ತಿ ಮತ್ತು ಇತರ ಸೌ­ಲಭ್ಯಗಳನ್ನು ನೀಡಿತ್ತು.

ಈಗ ಜಾರಿ ಮಾಡಲು ಹೊರ­ಟಿರುವ ಹೊಸ ಕಾನೂನಿನ ಪ್ರಕಾರ ಅನು­ದಾ­ನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆ­ಯನ್ನು ಕಾಲ್ಪ­ನಿ­ಕವೆಂದು ವ್ಯಾಖ್ಯಾನಿಸಿ ಆ ಅವ­ಧಿಯಲ್ಲಿ ನೀಡ­ಲಾದ ಮುಂಬಡ್ತಿ ಹಾಗೂ ಇತರ ಸೌಲಭ್ಯ­ಗ­­ಳನ್ನು ಹಿಂಪಡೆಯಲು ಹೊರ­ಟಿದೆ. ಇದು ತೀರಾ ಅವೈ­­­ಜ್ಞಾ­­ನಿಕ ಮತ್ತು ಅತಾ­ರ್ಕಿಕ ನಡೆ ಎಂಬು­ದ­ರಲ್ಲಿ ಸಂಶಯವಿಲ್ಲ. ಏಕೆಂದರೆ ಈ ಕಾಯ್ದೆಯನ್ನು ೧೯೯೫ ರಿಂ­ದಲೇ­­ ಪೂರ್ವಾನ್ವಯ­ಗೊ­ಳಿಸಿ ಈಗಾಗಲೇ ಕೊಡ ಮಾಡಿದ ಸೌಲಭ್ಯ­ಗ­ಳನ್ನು ಕಸಿದು­ಕೊ­ಳ್ಳಲು ಹೊರಟಿದ್ದು ಸಹಜ ನ್ಯಾಯಕ್ಕೆ ವಿರುದ್ಧ­ವಾಗಿದೆ.

ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವ ಕನಿಷ್ಠ ವೆಚ್ಚವನ್ನು ಸರ್ಕಾರ  ಆರ್ಥಿಕ ಹೊರೆ ಎಂದು ಪರಿ­ಗಣಿಸುತ್ತಿರುವುದೇ ದುರಂತ. ಹಾಗೆ ನೋಡಿ­ದರೆ ಉನ್ನತ ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾ­ರಗಳು ಈವರೆಗೆ ವಿನಿಯೋಗಿಸಿದ ಹಣ ತೀರ ಅತ್ಯಲ್ಪ. ಅಂಕಿಸಂಖ್ಯೆಗಳು ಇದನ್ನು ಸೂಚಿ­ಸು­ತ್ತವೆ. ಕೇಂದ್ರ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ೧೯೮೦-– ೯೦ರಲ್ಲಿ ಶೇ ೬.೩ರಷ್ಟು ಹಣ ನೀಡಿ­ದರೆ, ೧೯೯೦–-೨೦೦೦ದಲ್ಲಿ ಶೇ ೪.೮ರಷ್ಟು ನೀಡಿದೆ. ೨೦೦೦–-೨೦೧೨ರ ಅವಧಿಯಲ್ಲಿ  ಶೇ ೬.೨ ರಷ್ಟು ಹಣ ಖರ್ಚು ಮಾಡಿದೆ.

ರಾಜ್ಯ ಸರ್ಕಾರ ೧೯೮೦–೧೯೯೦ರಲ್ಲಿ ಶೇ ೭ ರಷ್ಟು, ೧೯೯೦–೨೦೦೦ರಲ್ಲಿ ಶೇ ೩.೭ರಷ್ಟು, ನಂತರ ೨೦೦೦–-೨೦೧೨ ರಲ್ಲಿ ಶೇ ೪.೨ರಷ್ಟು ಹಣ ವ್ಯಯಿಸಿವೆ. ತನ್ನ ಒಟ್ಟು ಜಿಡಿಪಿಯಲ್ಲಿ ರಾಜ್ಯಗಳು ದಶಕ­ದಿಂದ ದಶಕಕ್ಕೆ ಶಿಕ್ಷಣಕ್ಕೆ ನೀಡುತ್ತಿರುವ ಹಣ­ದಲ್ಲಿ ಕಡಿತ ಮಾಡುತ್ತಲೇ ಬರುತ್ತಿವೆ. ೧೯೮೦–-೧೯೯೦ರಲ್ಲಿ ಒಟ್ಟು ಜಿಡಿಪಿಯ ಶೇ ೦.೩೨ ರಷ್ಟು ಹಣ ನೀಡಿದರೆ ೧೯೯೦–-೨೦೦೧ರಲ್ಲಿ ಇದರ ಪ್ರಮಾಣ ಶೇ ೦.೩೦ಕ್ಕೆ ಇಳಿದಿದೆ. ೨೦೦೧–-೨೦೧೦ರಲ್ಲಿ ಇದರ ಪ್ರಮಾಣ ಮತ್ತೆ ಶೇ ೦.೨೭ಕ್ಕೆ ಕುಸಿದಿದೆ. ಇದು ಉನ್ನತ ಶಿಕ್ಷಣದ ಬಗೆಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.

ಸರ್ಕಾರ ಒಂದೆಡೆ, ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸು­ವುದಾಗಿ  ಘೋಷಿಸುತ್ತಿದೆ. ಇನ್ನೊಂದೆಡೆ ಉನ್ನತ ಶಿಕ್ಷಣವನ್ನು ಅನುತ್ಪಾದಕ ಕ್ಷೇತ್ರ ಅಥವಾ ಗ್ರಾಹ­ಕಸರಕು ಎಂದು ಪರಿಭಾವಿಸುತ್ತದೆ. ಸರ್ಕಾರಕ್ಕೆ ಶಿಕ್ಷಣ ಕುರಿತಂತೆ ಉದ್ದೇಶಪೂರ್ವಕ ಗೊಂದಲಗಳಿವೆ. ವಾಣಿಜ್ಯ, ವಿಜ್ಞಾನ ಮುಂತಾದ ಪದವಿ­ಗಳಲ್ಲದೆ ತಾಂತ್ರಿಕ, ವೈದ್ಯಕೀಯ ಹಾಗೂ ಇತರೆ ವೃತ್ತಿಪರ ಶಿಕ್ಷಣವೂ ಒಂದು ದೇಶದ ಅಭಿವೃದ್ಧಿಗೆ ಅತ್ಯಂತ ಅವಶ್ಯ. ದೇಶವನ್ನು ನಡೆಸಲು ಬೇಕಾದ ಕಾರ್ಯ ಕೌಶಲ, ಮೌಲ್ಯ ಮತ್ತು ಅರಿವು ನೀಡುವುದೇ ಪದವಿ ಶಿಕ್ಷಣ.

ಅಕ್ಷರ ಕಲಿಸುವಷ್ಟಕ್ಕೆ ಶಿಕ್ಷಣ ನಿಂತು ಹೋದರೆ ಅದು ಅನುಪಯುಕ್ತ.  ಎಲ್ಲ ಜ್ಞಾನಶಿಸ್ತುಗಳ ತಿಳಿ­ವ­­ಳಿಕೆ ಮತ್ತು ಮೌಲ್ಯಗಳ ಸಂವರ್ಧನೆಗೆ ಉನ್ನತ ಶಿಕ್ಷ­ಣವೇ ಏಕೈಕ ದಾರಿ. ಹೀಗಾಗಿ ಸರ್ಕಾರವು ಶಿಕ್ಷಣಕ್ಕಾಗಿ ಮಾಡುವ ವೆಚ್ಚದಲ್ಲಿ ಹಂತದಿಂದ ಹಂತಕ್ಕೆ ಏರಿಕೆಯಾಗಬೇಕೆ ಹೊರತು ಇಳಿಕೆ­ಯಲ್ಲ. ಹಾಗೆಯೇ ಹೆಚ್ಚಾಗುತ್ತಿರುವ ಜನ­ಸಂಖ್ಯೆಯನ್ವಯ ದಶಕದಿಂದ ದಶಕಕ್ಕೆ ಶಿಕ್ಷಣಕ್ಕೆ ನೀಡುವ ಅನುದಾನ ವೃದ್ಧಿಯಾಗಬೇಕು.

ದುರಂತ­ವೆಂದರೆ ನಮ್ಮ ಸರ್ಕಾರ ರಕ್ಷಣಾ ಇಲಾ­ಖೆಗೆ ಬಜೆಟ್‌ನಲ್ಲಿ ತೆಗೆದಿರಿಸುವ ಹಣದಲ್ಲಿ ಅರ್ಧ­ದಷ್ಟನ್ನೂ  ಶಿಕ್ಷಣಕ್ಕಾಗಿ ನೀಡುತ್ತಿಲ್ಲ. ಈ ಎರಡೂ ಇಲಾಖೆಗೂ ಅವಿನಾ ಸಂಬಂಧವಿದೆ. ದೇಶದ ಪ್ರಜೆಗಳು ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಕಾರ್ಯ ಕುಶಲತೆ ಪಡೆದಷ್ಟೂ ಸಂವೇದ­ನಾ­ಶೀಲರಾಗುತ್ತಾರೆ. ಆದ್ದರಿಂದ ಯುವಜನತೆಗೆ ಉನ್ನತ ಮಟ್ಟದ ತಾಂತ್ರಿಕ, ವೈದ್ಯಕೀಯ, ಸಾಮಾನ್ಯ ಪದವಿ, ವೃತ್ತಿಪರ ಹೀಗೆ ಎಲ್ಲ ಶಿಕ್ಷಣ ನೀಡು­ವುದು ಸರ್ಕಾರದ ಆದ್ಯತೆಯಾಗಬೇಕು.

ಹಣ­ಕಾಸಿನ ಹೊರೆ ಎಂಬ ನೆಪವೊಡ್ಡಿ ಖಾಸಗಿ ಸಂಸ್ಥೆ­ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡಿದ ಸೌಲಭ್ಯಗಳನ್ನು ಹಿಂಪಡೆಯುವುದು ಅಸಂಬದ್ಧ ಅಷ್ಟೇ ಅಲ್ಲ ಅನರ್ಥಕಾರಿ. ಹೊಸ ಶಿಕ್ಷಣ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ಉನ್ನತ ಶಿಕ್ಷಣವನ್ನು ಸರ್ಕಾರ ಒಂದೆಡೆ ಸಂಪೂರ್ಣ ­ಖಾಸಗೀಕರಣ ಮಾಡತೊಡಗಿದರೆ, ಇನ್ನೊಂದೆಡೆ ಅಸ್ತಿತ್ವದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆ­ಗಳನ್ನು ಉಸಿರುಗಟ್ಟಿಸುವ ಕಾಯ್ದೆ ತರಲು ಹೊರ­­ಟಿದೆ. ಸರ್ಕಾರ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ತನ್ನ ಹೊಣೆಯನ್ನು ಸಂಪೂರ್ಣ ಕಳಚಿ­ಕೊಳ್ಳಲು ಹೊರಟಿದೆ ಎಂಬುದನ್ನು ಈ ದ್ವಂದ್ವ ನೀತಿ ಬಯಲಿಗೆಳೆಯುತ್ತದೆ. ಅನು­ದಾ­ನಿತ ಶಿಕ್ಷಣ ಸಂಸ್ಥೆಗಳಿಗೆ ನಿರ್ಬಂಧವೆಂದರೆ ಸಂಪೂರ್ಣ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿ­ದಂತೆ.

ಈ ವಿಷಯವನ್ನು ಕರ್ನಾಟಕ ರಾಜ್ಯ ಖಾಸಗಿ ಕಾಲೇಜು ಅಧ್ಯಾಪಕರ ಒಕ್ಕೂಟವು ಸರ್ಕಾರಕ್ಕೆ  ಮನ­­ವರಿಕೆ ಮಾಡಲು ಹಲವು ಬಾರಿ ಪ್ರಯ­ತ್ನಿ­ಸಿದೆ. ಇದನ್ನು ಕೇವಲ ಅಧ್ಯಾಪಕರ ಸಂಬಳದ ಪ್ರಶ್ನೆ­­ಯಾಗಿ ಪರಿಗಣಿಸದೆ ರಾಜ್ಯಾದಾದ್ಯಂತ ಶಿಕ್ಷಣ ಪಡೆಯುತ್ತಿರುವ ಅಪಾರ ಸಂಖ್ಯೆಯ  ವಿದ್ಯಾ­­ರ್ಥಿಗಳಿಗೆ ದೊರೆಯುತ್ತಿರುವ ಜ್ಞಾನದ ಗಳಿಕೆ­ಯಾಗಿ ಪರಿಗಣಿಸಬೇಕಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.