ADVERTISEMENT

ಆರನೇ ಜೈವಿಕ ಸಾಮೂಹಿಕ ಅಳಿವು!

ಬರಲಿರುವ ಅಳಿವು ಮನುಷ್ಯನ ಸ್ವಯಂಕೃತಾಪರಾಧದ ಫಲ

ಎಂ.ವೆಂಕಟಸ್ವಾಮಿ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

‘ಎಲ್ಲರ ಆಸೆಗಳನ್ನು ಪೂರೈಸುವ ಶಕ್ತಿ ನಿಸರ್ಗಕ್ಕಿದೆ; ಆದರೆ ಎಲ್ಲರ ದುರಾಸೆಗಳನ್ನಲ್ಲ’ ಎಂದು ಗಾಂಧೀಜಿ ಹೇಳಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಕೆಲವರು ಭೂಮಿಯ ನಾಶದ ಬಗ್ಗೆ, ಮನುಷ್ಯನ ಅಳಿವಿನ ಬಗ್ಗೆ ಆಗಾಗ ಜನರ ನಡುವೆ ಆತಂಕಕಾರಿ ವಿಷಯಗಳನ್ನು ತೂರಿಬಿಡುತ್ತಲೇ ಬರುತ್ತಿದ್ದಾರೆ. 2012ರ ಡಿಸೆಂಬರ್ 21ರಂದು ‘ಡೂಮ್ಸ್ ಡೇ’, ಭೂಮಿ ಇನ್ನೇನು ಛಿದ್ರವಾಗಿಬಿಡುತ್ತದೆ ಎನ್ನುವ ಕೂಗು ಭಾರಿ ಜೋರಾಗಿಯೇ ಕೇಳಿಬಂದಿತ್ತು. ಮತ್ತೆ ಇನ್ನೊಂದು ಸುದ್ದಿ ‘ನಿಬಿರು’ ಎನ್ನುವ ಗೊತ್ತಿಲ್ಲದ ಕ್ಷುದ್ರಗ್ರಹ ಭೂಮಿಗೆ ಬಡಿಯುತ್ತದೆ ಅಥವಾ ಭೂಮಿಯ ಹತ್ತಿರದಿಂದ ಹಾದುಹೋಗುತ್ತದೆ ಎನ್ನುವುದು. ಸೂರ್ಯನಿಂದ 11 ವರ್ಷಗಳಿಗೆ ಒಮ್ಮೆ ಅತಿ ಹೆಚ್ಚು ಸೌರಮಾರುತ ಬೀಸಿ ಬರುವುದರಿಂದ ಭೂಮಿಗೆ ಹಾನಿಯಾಗುತ್ತದೆ ಎನ್ನುವುದು, ಭೂಮಿಯ ಎರಡೂ ಧ್ರುವಗಳು ಒಮ್ಮೆಲೆ ಅದಲುಬದಲಾಗುತ್ತವೆ ಎನ್ನುವುದು,  ಸೂರ್ಯನೂ ಸೇರಿ ಎಲ್ಲ ಗ್ರಹಗಳೂ ಒಂದೇ ಗೆರೆಯಲ್ಲಿ ಬಂದರೆ ಎಲ್ಲವೂ ನಾಶ ಎನ್ನುವುದು, ನಾವಿರುವ ನಿಹಾರಿಕೆಯ ಮಧ್ಯದಿಂದ ಅಥವಾ ಅಂತರಿಕ್ಷದಲ್ಲಿ ಸೂಪರ್‌ನೋವಾ ಸ್ಫೋಟದಿಂದ ಉದ್ಭವಿಸುವ ಗಾಮಾ ಕಿರಣಗಳು ಭೂಮಿಗೆ ಬಡಿದು ಜೀವಸಂಕುಲ ನಾಶವಾಗುತ್ತದೆ ಎನ್ನುವುದು, 1982ರಲ್ಲಿ ಹ್ಯಾಲಿ ಧೂಮಕೇತು ಬಂದರೆ ಭೂಮಿಗೆ ಏನೋ ಆಗುತ್ತದೆ ಎಂಬುದು, 1997ರಲ್ಲಿ  ಹೇಲ್‌ಬಾಪ್ ಧೂಮಕೇತು, 2000ದಲ್ಲಿ ಮಿಲಿಯನ್ ಬಗ್ ಬಂದಿದ್ದು... ಹೀಗೆ ಏನಾದರೂ ಒಂದು ವಿಷಯವನ್ನು ಕೆಲವರು ಜನರ ಮಧ್ಯೆ ಛೂ ಬಿಡುತ್ತಲೇ ಬರುತ್ತಿದ್ದಾರೆ. ಆದರೆ ಈಗ ವಿಜ್ಞಾನ ಲೋಕದಲ್ಲಿ ಎದ್ದಿರುವ ಆತಂಕ ಇವೆಲ್ಲಕ್ಕಿಂತ ಸ್ವಲ್ಪ ಭಿನ್ನ ಎನ್ನಬಹುದು. ಅದೆಂದರೆ, ಆರನೇ ಜೈವಿಕ ಸಾಮೂಹಿಕ ಅಳಿವು, ಅಂದರೆ ಮುಖ್ಯವಾಗಿ ಮನುಷ್ಯನ ಅಳಿವು ಬಾಗಿಲಿಗೆ ಬಂದೇಬಿಟ್ಟಿದೆ ಎನ್ನುವುದು!

ಈಗ ಭೂಮಿಯ ವಯಸ್ಸು 450 ಕೋಟಿ ವರ್ಷಗಳಾದರೆ ಜನರ ಸಂಖ್ಯೆ 700 ಕೋಟಿ ದಾಟಿದೆ. ಇಷ್ಟು ಜನರ ಅಗತ್ಯಗಳನ್ನು ಪೂರೈಸಲು ಭೂಮಿತಾಯಿ ಪಾಪ ಹೆಣಗಾಡುತ್ತಿದ್ದಾಳೆ. ಕಳೆದ ಮುಖ್ಯ ಐದು ಸಾಮೂಹಿಕ ಅಳಿವುಗಳು ಮತ್ತು ಇತರ ವಿಪತ್ತುಗಳಿಂದ ಭೂಮಿಯ ಮೇಲೆ ಸೃಷ್ಟಿಯಾಗಿದ್ದ ಶೇಕಡ 99ರಷ್ಟು ಪ್ರಾಣಿ ಸಮೂಹ ಈಗ ಭೂಮಿಯಿಂದ ಅಳಿಸಿಹೋಗಿದೆ. ಸುಮಾರು 75 ಭಾಗದಷ್ಟು ಸಸ್ಯಸಂಕಲವೂ ಮಾಯವಾಗಿದೆ. ಮುಖ್ಯವಾಗಿ ಕಳೆದ 13 ಸಾವಿರ ವರ್ಷಗಳ ಈಚೆಗೆ, ಅಂದರೆ ಹಾಲೋಸೀನ್ (ಇದಕ್ಕೆ ‘ಹಾಲೋಸೀನ್ ಅಳಿವು’ ಎಂದು ಹೆಸರು ನೀಡಲಾಗಿದೆ) ಯುಗದಿಂದ ಮನುಷ್ಯ ಭೂಮಿಯ ಮೇಲೆ ನಡೆಸಿದ ಉಪಟಳದಿಂದ ಈಗ ಆರನೇ ಜೈವಿಕ ಸಾಮೂಹಿಕ ಅಳಿವಿನ ಅಂಚಿಗೆ ತಲುಪಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಪ್ರಸ್ತುತ ವರ್ಷಕ್ಕೆ ಸರಾಸರಿ 1.40 ಲಕ್ಷ ಪ್ರಾಣಿ ಸಮೂಹ ಭೂಮಿಯಿಂದ ಮಾಯವಾಗುತ್ತಿದೆ. ಭೂಮಿಗೆ ದೊಡ್ಡ ಗಂಡಾಂತರ ಬಂದಿದ್ದು ಜ್ವಾಲಾಮುಖಿಗಳ ಸ್ಫೋಟ ಮತ್ತು ಉಲ್ಕಾಶಿಲೆಗಳ ದಾಳಿಯಿಂದ.  ಆದರೆ ಈಗ ಅದಕ್ಕಿಂತ ದೊಡ್ಡ ಗಂಡಾಂತರ ಬಂದಿರುವುದು ಇಂಗಾಲದ ಡೈಆಕ್ಸೈಡ್‌ನಿಂದ.     
    
ಹಿಂದಿನ ಐದು ಸಾಮೂಹಿಕ ಅಳಿವುಗಳು: 

ಎ. ಸುಮಾರು 44 ಕೋಟಿ ವರ್ಷಗಳ ಹಿಂದೆ ಸಮುದ್ರದಲ್ಲಿದ್ದ ಶೇ 85ರಷ್ಟು ಜೀವಸಂಕುಲ ನಾಶವಾಯಿತು.
ಬಿ. 37.5 ಕೋಟಿ–45.6 ಕೋಟಿ ವರ್ಷಗಳ ಹಿಂದೆ ಅಗಾಧ ಪರಿಸರ ಬದಲಾವಣೆಯಿಂದ ಸಮುದ್ರದಲ್ಲಿದ್ದ ಮತ್ಸ್ಯ ಸಂತತಿ ನಾಶವಾಯಿತು; ಆಗ 10 ಕೋಟಿ ವರ್ಷಗಳ ಕಾಲ ಹೊಸ ಹವಳಗಳ ಸಂತತಿ ಸಮುದ್ರದಲ್ಲಿ ಸೃಷ್ಟಿಯಾಗಲಿಲ್ಲ.
ಸಿ. 25.2 ಕೋಟಿ ವರ್ಷಗಳ ಹಿಂದೆ ಶೇಕಡ 97ರಷ್ಟು  ಜೀವಸಂಕುಲ ಭೂಮಿಯ ಮೇಲಿನ ಪರಿಸರದ ಬದಲಾವಣೆಯಿಂದಾಗಿ ನಾಶಹೊಂದಿತು; ಇದು ಪಳೆಯುಳಿಕೆಗಳಿಂದ ದೃಢಪಟ್ಟಿದೆ.
ಡಿ. ಟ್ರೈಯಾಸಿಕ್ ಯುಗದಲ್ಲಿ ಮೊದಲಿಗೆ ಡೈನೊಸಾರ್‌ಗಳು ಕಾಣಿಸಿಕೊಂಡವು. ಆದರೆ ಇವುಗಳ ಜೊತೆಗೆ ದೊಡ್ಡ ಉಭಯಚರಗಳು ಮತ್ತು ಸಸ್ತನಿಗಳ ರೀತಿಯ ಸರೀಸೃಪಗಳು ಇದ್ದವು. ಎಲ್ಲವೂ 20.1 ಕೋಟಿ ವರ್ಷಗಳ ಹಿಂದೆ ನಾಶವಾದವು.
ಇ. 6.6 ಕೋಟಿ ವರ್ಷಗಳ ಹಿಂದೆ ದೈತ್ಯ ಕ್ಷುದ್ರಗ್ರಹಗಳು ಭೂಮಿಗೆ ಬಡಿದು ಡೈನೊಸಾರ್‌ಗಳು ಸಂಪೂರ್ಣವಾಗಿ ಅಳಿವು ಕಂಡವು ಎನ್ನಲಾಗಿದೆ.

ಪೃಥ್ವಿಯ ಮೇಲೆ ಜೀವಸಂಕುಲದ ಸಾಮೂಹಿಕ ಅಳಿವು ಅಧಿಕೃತವಾಗಿ ಈಗ ಪ್ರಾರಂಭವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಹೇಗೆ ಎನ್ನುವುದಕ್ಕೆ ಅವರು ಹಲವು ವೈಜ್ಞಾನಿಕ ಕಾರಣಗಳನ್ನು ಕೊಟ್ಟಿದ್ದಾರೆ. ಭೂಮಿಯ ಮೇಲಿರುವ ಮನುಷ್ಯನೆಂಬ ಪ್ರಾಣಿ ಇರಲಿ ಇಲ್ಲದೆ ಹೋಗಲಿ, ಭೂಮಿ ಉಳಿಯುತ್ತದೆ. ಆದರೆ ಅದೇ ಭೂಮಿಯ ಮೇಲಿರುವ ಸಮಸ್ತ ಹುಳುಹುಪ್ಪಟೆ, ಪಕ್ಷಿ ಪ್ರಾಣಿಗಳು ಇಲ್ಲದೆ ಇದ್ದರೆ ಮನುಷ್ಯ ಖಂಡಿತಾ ಉಳಿಯಲಾರ. ಇದು ವೈಜ್ಞಾನಿಕ ಸತ್ಯ. ಭೂಮಿಯ ಮೇಲಿರುವ ಎಲ್ಲ ಜೀವಸಂಕುಲ (ಮನುಷ್ಯನನ್ನು ಬಿಟ್ಟು) ಸರಾಸರಿ ಸಾಮಾನ್ಯ ಪ್ರಮಾಣಕ್ಕಿಂತ 100– 114 ಪಟ್ಟು (ಹಿಂದಿನ ಮಾಹಿತಿಯ ಆಧಾರದ ಮೇಲೆ)  ವೇಗವಾಗಿ ನಾಶವಾಗುತ್ತಿದೆ. ಹಾಗೇನಾದರೂ ಆದಲ್ಲಿ ಮತ್ತೆ ಚೇತರಿಸಿಕೊಳ್ಳಲು ಲಕ್ಷಾಂತರ ವರ್ಷಗಳೇ ಬೇಕಾಗಬಹುದು. ಒಮ್ಮೆ ನಶಿಸಿಹೋದ ಪ್ರಾಣಿಗಳು ಮತ್ತೆ ಮರುಹುಟ್ಟು ಪಡೆಯಲಾರವು! ಈ ಪ್ರಕ್ರಿಯೆಯಲ್ಲಿ ಮನುಷ್ಯ ಖಂಡಿತಾ ಉಳಿಯಲಾರ. ಕಳೆದ ಐದು ವಿಪತ್ತುಗಳು ನೈಸರ್ಗಿಕವಾಗಿ ಘಟಿಸಿದ್ದರೆ, ಈ ಆರನೇ ವಿಪತ್ತು ಮಾತ್ರ ಮನುಷ್ಯನ ಸ್ವಯಂ ಸೃಷ್ಟಿ.

ಅಮೆರಿಕದ ವಿಜ್ಞಾನಿಗಳ ಸಂಶೋಧನೆಯಂತೆ ಭೂಮಿ ಈಗ ಯಾವ ಅನುಮಾನವೂ ಇಲ್ಲದೆ ಆರನೇ ಸಲ ಸಾಮೂಹಿಕ ಜೈವಿಕ ಅಳಿವಿನ ಅಂಚಿಗೆ ದೊಡ್ಡ ಪ್ರಮಾಣದಲ್ಲಿ ಸರಿಯುತ್ತಿದೆ. 1800– 1900ರ ನಡುವೆ 144 ರೀತಿಯ ಪ್ರಾಣಿ ಸಮೂಹಗಳು ಅಂತ್ಯವನ್ನು ಕಂಡರೆ, 1900– 2010ರ ನಡುವೆ 396 ರೀತಿಯ ಸಸ್ತನಿಗಳು ಪಕ್ಷಿ, ಮತ್ಸ್ಯ, ಸರೀಸೃಪಗಳು ಮತ್ತು ಉಭಯಚರಗಳು ಮಾಯವಾಗಿವೆ. ಕಶೇರುಕಗಳು, ಇವುಗಳ ಜೊತೆಗೆ ಹೇರಳ ಸಸ್ಯ ಸಂಪತ್ತು ನಾಶವಾಗಿದೆ. ಉಳಿದ ಶೇಕಡ 25ರಷ್ಟು ಪ್ರಾಣಿ ಸಮೂಹ ಅಳಿವಿನ ಅಂಚಿನಲ್ಲಿದೆ. ಹಲವಾರು ಕಶೇರುಕಗಳಿಗೂ ಇದೇ ಗತಿ ಬಂದಿದೆ. ಆನೆ, ಘೇಂಡಾಮೃಗ, ಪೋಲಾರ್ ಕರಡಿಗಳು ಇತ್ಯಾದಿ ಸಾವಿರಾರು ದೊಡ್ಡ ಪ್ರಾಣಿಗಳು ಮನುಷ್ಯನ ಉಪಟಳದಿಂದ ಭೂಮಿಯಿಂದ ಮಾಯವಾಗುತ್ತಿವೆ. ಇದರ ಜೊತೆಗೆ ಪರಿಸರದ ಕೊಂಡಿಗಳಾದ ಕೀಟಗಳ ಪರಾಗಸ್ಪರ್ಶ ಮತ್ತು ಗದ್ದೆಗಳಲ್ಲಿ ನೀರಿನ ಜಲಶುದ್ಧೀಕರಣಕ್ಕೆ ಧಕ್ಕೆಯಾಗುತ್ತಿದೆ. ಪ್ರಸ್ತುತ ನಾಶವಾಗುತ್ತಿರುವ ಜೀವಸಂಕುಲದಿಂದ ಮನುಷ್ಯ ಅನೇಕ ರೀತಿಯ ಜೀವವೈವಿಧ್ಯಮಯ ಪ್ರಯೋಜನಗಳನ್ನು ಮುಂದಿನ 2– 3 ಪೀಳಿಗೆಗಳ ಅಂತರದಲ್ಲಿಯೇ ಕಳೆದುಕೊಳ್ಳಬೇಕಾಗುತ್ತದೆ.

‘ನಾವು ಕುಳಿತಿರುವ ರೆಂಬೆಯನ್ನು ನಾವೇ ಕೊಡಲಿಯಿಂದ ಕತ್ತರಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಪ್ರೊ. ಎರ್ಲಿಚ್. ಜೀವವೈವಿಧ್ಯದ ನಷ್ಟ ಜಾಗತಿಕ ಮಟ್ಟದಲ್ಲಿಯೇ ಘಟಿಸುತ್ತಿದೆ. ಎಲ್ಲಕ್ಕೂ ಮೂಲ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ. ಮನುಷ್ಯ, ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತನ್ನು ಕೊಳ್ಳೆಯೊಡೆದು ಬಳಸಿ ಬಿಸಾಕುತ್ತಿರುವುದು ಮತ್ತು ಭೂಮಿಯನ್ನು ಬಂಜರು ಮಾಡುತ್ತಿರುವುದು. ಇದರಿಂದ ಸ್ವಾಭಾವಿಕ ಆವಾಸಸ್ಥಾನಗಳು ನಾಶ ಹೊಂದುತ್ತಿರುವುದು. ಕೃಷಿಗಾಗಿ ಅರಣ್ಯ ಭೂಮಿಯನ್ನು ನಾಶ ಮಾಡಿ ವಸತಿಗಳನ್ನು ಕಟ್ಟಿಕೊಳ್ಳುತ್ತಿರುವುದು. ಇದರಿಂದ ಪ್ರಾಣಿಗಳು ನಾಡಿಗೆ ಬಂದು ಉಪಟಳ ಮಾಡುವುದು, ಅವುಗಳನ್ನು ಕೊಲ್ಲುವುದು. ಇಂಗಾಲದ ವಿಸರ್ಜನೆಯಿಂದ ಹವಾಮಾನದ ಬದಲಾವಣೆ ಮತ್ತು ಸಮುದ್ರ ಆಮ್ಲೀಕರಣ. ಪಾದರಸ ಮೀನುಗಳ ಹೊಟ್ಟೆ ಸೇರುತ್ತಿರುವುದು. ಭೂಮಿ, ಸಮುದ್ರಗಳು ಪ್ಲಾಸ್ಟಿಕ್ ತಿಪ್ಪೆಗಳಾಗುತ್ತಿರುವುದು, ರಾಸಾಯನಿಕಗಳ ವಿಸರ್ಜನೆಯಿಂದ ಪರಿಸರ ವಿಷವಾಗಿ ಪರಿವರ್ತನೆಯಾಗುತ್ತಿರುವುದು. ಇವೆಲ್ಲದರ ಕಾರಣದಿಂದ ಶೇಕಡ 41ರಷ್ಟು ಉಭಯಚರಗಳು ಮತ್ತು ಶೇಕಡ 26ರಷ್ಟು ಸಸ್ತನಿಗಳು ನಾಶದ ಬಲೆಗೆ ಸಿಲುಕಿಕೊಂಡಿವೆ.
ಪಳೆಯುಳಿಕೆಗಳ ಆಧಾರದಿಂದ ನೈಸರ್ಗಿಕವಾಗಿ 10 ಸಾವಿರ ವರ್ಷಗಳಲ್ಲಿ ಎರಡು ಸಸ್ತನಿಗಳು ನಾಶ ಹೊಂದುತ್ತವೆ. ಉಷ್ಣವಲಯದ ದ್ವೀಪಗಳಲ್ಲಿ ಕಳೆದ 2 ಸಾವಿರ ವರ್ಷಗಳಲ್ಲಿ 1800 ಪಕ್ಷಿ ಸಂಕುಲ ನಶಿಸಿಹೋಗಿದೆ. ಕೆಲವು ಕಡೆ ಆದಿಮಾನವ ಕೂಡ ಹೇರಳ ಬೇಟೆಯಾಡಿ ನೂರಾರು ಪ್ರಾಣಿ ಸಂಕುಲಗಳನ್ನು ಇಲ್ಲದಂತೆ ಮಾಡಿ ಹೋಗಿದ್ದಾನೆ. ಉದಾಹರಣೆಗೆ ಆಸ್ಟ್ರೇಲಿಯಾದಲ್ಲಿದ್ದ ದೈತ್ಯ ಸಸ್ಯಾಹಾರಿ ವೊಂಬೆಟ್, ಹೊಟ್ಟೆಚೀಲದ ಸಿಂಹ, ಮಾಂಸಾಹಾರಿ ಕಾಂಗರೂ ಇತ್ಯಾದಿ. ನಾಶ ಹೊಂದುತ್ತಿರುವ 10 ಮುಖ್ಯ ಪ್ರಾಣಿಗಳಲ್ಲಿ ದಕ್ಷಿಣ ಚೀನಾದ ಹುಲಿ, ಸುಮತ್ರಾ ಆನೆ, ರಷ್ಯಾದ ಅಮುರ್ ಚಿರತೆ, ದೈತ್ಯ ಅಟ್ಲಾಂಟಿಕ್ ಸಮುದ್ರ ಮೀನು, ಗಲ್ಫ್ ಸಮುದ್ರ ಹಂದಿ, ಉತ್ತರ ಬೋಳು ಐಬಿಸ್ ಹಕ್ಕಿ, ಗಿಡುಗ ಮೂಗಿನ ಆಮೆ, ಕಪ್ಪು ಘೇಂಡಾಮೃಗ, ಮೂರು ಕಾಲ್ಬೆರಳಿನ ಪಿಗ್ಮಿ ಮತ್ತು ಚೀನಾ ಪಂಗೋಲಿನ್. ಪ್ರಕೃತಿ ಸೃಷ್ಟಿ ಮಾಡುತ್ತಿರುವ ವೇಗಕ್ಕಿಂತ ಮನುಷ್ಯ ಪ್ರಾಣಿಗಳನ್ನು ಹೆಚ್ಚಾಗಿ ಕೊಲ್ಲುತ್ತಿದ್ದಾನೆ. ಹಾಗೆ ಅರಣ್ಯವನ್ನು ನಾಶ ಮಾಡಿ, ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತ ಪರಿಸರಕ್ಕೆ ಹೇರಳ ವಿಷ ತುಂಬುತ್ತಿದ್ದಾನೆ.    
                                                       
ಜಾಗತಿಕ ತಾಪಮಾನ ತೀವ್ರ ವೇಗವನ್ನು ಪಡೆದುಕೊಳ್ಳುತ್ತಿದ್ದರೂ ಅದು ಇನ್ನೂ ಪ್ರಾರಂಭದ ಹಂತದಲ್ಲೇ ಇದ್ದು, ಪ್ರಸ್ತುತ ಜೈವಿಕ ಅಳಿವಿನ ಬಿಕ್ಕಟ್ಟನ್ನು ಸೃಷ್ಟಿಸಲಾರದು. ಹಾಗಾದರೆ ಆರನೇ ಜೈವಿಕ ಸಾಮೂಹಿಕ ಅಳಿವಿಗೆ ನಿಜವಾದ ಕಾರಣವಾದರೂ ಏನು? ಮನುಷ್ಯ ಜಾತಿಯೊಂದೇ ಭೂಮಿಯ ಮೇಲಿನ ಸುಮಾರು 40 ಭಾಗದಷ್ಟು ಪ್ರಾಥಮಿಕ ಉತ್ಪಾದನೆಯನ್ನು ವಶಪಡಿಸಿಕೊಳ್ಳುತ್ತಿದೆ ಅಥವಾ ನುಂಗಿ ಹಾಕುತ್ತಿದೆ. ಅಗಾಧ ಪ್ರಮಾಣದ ಆಹಾರ ಬೆಳೆಯಲು ಲಕ್ಷಾಂತರ ಟನ್‌ ಸಾರಜನಕವನ್ನು ರಸಗೊಬ್ಬರಕ್ಕೆ ಸೇರಿಸಿ ಫಲವತ್ತು ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ. ಅಷ್ಟೇ ಪ್ರಮಾಣದ ಫಾಸ್ಪೇಟನ್ನು ನೆಲದಿಂದ ತೆಗೆದು ಮುಗಿಸುತ್ತಿದ್ದೇವೆ. ಇದರಿಂದ ಬೆಳೆಯುವ ಬೆಳೆಗಳನ್ನು ಪ್ರಾಣಿಗಳಿಗೆ ತಿನ್ನಿಸಿ, ನಾವೂ ಅಂಥ ಬೆಳೆಗಳನ್ನು, ಪ್ರಾಣಿಗಳನ್ನು ಅಗಾಧವಾಗಿ ಭಕ್ಷಿಸುತ್ತಿದ್ದೇವೆ. ಸಾಲದ್ದಕ್ಕೆ ಅದರ ಜೊತೆಗೆ ಇನ್ನೇನೇನೋ ಮಿಶ್ರಣ ಮಾಡಿ ನಮ್ಮ ದೇಹದ ವ್ಯವಸ್ಥೆಯನ್ನೇ ನಿಸರ್ಗದಿಂದ ಪ್ರತ್ಯೇಕಿಸಿಕೊಳ್ಳುತ್ತಿದ್ದೇವೆ. ಲಕ್ಷಾಂತರ ವರ್ಷಗಳಿಂದ ನಿಸರ್ಗದಲ್ಲಿ ಬೆಳೆದು ಬಂದ ಪರಿಸರದ ಕೊಂಡಿಗಳನ್ನೇ ಛಿದ್ರಛಿದ್ರವಾಗಿಸುತ್ತಿದ್ದೇವೆ. ಪ್ರಾಣಿ ಸಮೂಹದ ಅಳಿವಿಗೆ ಇದೊಂದು ಮುಖ್ಯ ಕಾರಣ ಎನ್ನಲಾಗಿದೆ. 

ಸೃಷ್ಟಿಯ ಒಂದು ಕಣವಾಗಿರುವ ಅಲ್ಪ ಮಾನವ ಪ್ರಸ್ತುತ ಜೀವವಿಕಾಸವನ್ನೇ ನಿರ್ದೇಶಿಸಲು ಪ್ರಾರಂಭಿಸಿಬಿಟ್ಟಿದ್ದಾನೆ. ಹೊಸಹೊಸ ತಳಿಗಳನ್ನು ಸೃಷ್ಟಿಸುತ್ತಾ ಜೆನೆಟಿಕ್ ಎಂಜಿನಿಯರಿಂಗ್ ನಕ್ಷೆ ಬದಲಿಸಲು ಹೊರಟಿದ್ದಾನೆ. ದ್ಯುತಿಸಂಶ್ಲೇಷಣೆಯಿಂದ ನಮಗೀಗ ಕಡಿಮೆ ಶಕ್ತಿ ದೊರಕುತ್ತಿದ್ದು, ಭೂಮಿಯಲ್ಲಿ ಹುದುಗಿರುವ ಹೈಡ್ರೊಕಾರ್ಬನ್‌ನ್ನು ಮೊಗೆದು ಯಂತ್ರಗಳಿಗೆ ತುಂಬಿಸಿ ಓಡಿಸುತ್ತಿದ್ದೇವೆ. ಇದು ಆಂತರಿಕ ಕ್ರಿಯಾಶೀಲತೆಯಿಂದ ಹೊರಹೊಮ್ಮುವ ತಂತ್ರಾಂಶವಾಗಿದೆ (ಮನುಷ್ಯ ಪ್ರಸ್ತುತ ಚಾಲನೆ ಮಾಡುತ್ತಿದ್ದರೂ, ನಿಜವಾಗಿಯೂ ಅದು ಅವನ ಹಿಡಿತದಲ್ಲಿಲ್ಲ). ಏನೇ ಆಗಲಿ ಅದು ಬೆಳಕಿನ ವೇಗದಲ್ಲಿ ನಾಶದ ಕಡೆಗೆ ಸಾಗುತ್ತಿದೆ.

ಆದರೆ ಕೆಲವು ಅಂಶಗಳು ಜಾಗತಿಕ ತಾಪಮಾನದ ಕೆಟ್ಟ ಪರಿಣಾಮಗಳನ್ನು ತಾನೇ ಸರಿಪಡಿಸಲೂಬಹುದು! ಉದಾಹರಣೆಗೆ: ಮನುಷ್ಯರು ಅಗಾಧ ಪ್ರಾಣಿ ಸಮೂಹವನ್ನು ಇತಿಹಾಸದಲ್ಲಿ ಬೇರೆ ಕಡೆಗೆ ವಲಸೆ ಹೋಗುವಂತೆ ಮಾಡಿದ್ದಾರೆ. ಇವುಗಳಲ್ಲಿ ಕೆಲವು ಬೇರೆಯದೇ ಆದ ಅಧಿಕ ತಾಪಮಾನಕ್ಕೆ ಒಗ್ಗಿಕೊಂಡು ನೆಲೆಯೂರಿವೆ. ಹಾಗೆ ಶಕ್ತಿ ಮತ್ತು ವಸ್ತುಗಳನ್ನು ಪರಿಸರದ ವ್ಯವಸ್ಥೆಗೆ ತಕ್ಕಂತೆ ಸದ್ಬಳಕೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಲೂಬಹುದು. ಈಗಲೂ ಈ ಸಾಮೂಹಿಕ ಅಳಿವನ್ನು ತುರ್ತಾಗಿ ಹಿಂದಕ್ಕೆ ತಿರುಗಿಸಬಹುದು. ಆದರೆ ಸಮಯ ತೀರಾ ಕಡಿಮೆ ಉಳಿದಿದೆ ಎನ್ನುವುದು ವಿಜ್ಞಾನಿಗಳ ಸಾಮೂಹಿಕ ಅಳಲು.

18ನೇ ಶತಮಾನದ ಕೊನೆಯಲ್ಲಿ ಪಶ್ಚಿಮದ ದೇಶಗಳು ಕೈಗಾರಿಕಾ ಕ್ರಾಂತಿ ಎಂಬ ಬೆಂಕಿ ಹಚ್ಚಿದವು. ಆನಂತರ ಬಂದ ಜಾಗತೀಕರಣ, ಖಾಸಗೀಕರಣ, ಉದಾರೀಕರಣ, ಇತ್ತೀಚೆಗೆ ಬಂದ ಐ.ಟಿ, ಬಿ.ಟಿ– ಕೊಳ್ಳುಬಾಕುತನ, ಆಧುನಿಕ ವಿಜ್ಞಾನ, ಕೊನೆಗೆ ಯಾವುದೇ ನಿಯಂತ್ರಣವಿಲ್ಲದ ಐಷಾರಾಮಿ ಬದುಕು ನಮ್ಮ ಅಳಿವಿಗೆ ಮುಖ್ಯ ಕಾರಣಗಳಲ್ಲವೇ?
ಲೇಖಕ ಭೂವಿಜ್ಞಾನಿ
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.