ADVERTISEMENT

ಇನ್ನಷ್ಟು ಎಐಐಎಂಎಸ್‌: ಆರೋಗ್ಯಕರವೇ?

ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕುಗ್ಗುತ್ತಿರುವ ಹೊತ್ತಿನಲ್ಲಿ ಸೂಪರ್‌ ಸ್ಪೆಷಾಲಿಟಿ ಸಂಸ್ಥೆಗಳ ಮೇಲೆ ಹೆಚ್ಚು ಹೂಡಿಕೆ...

ಶ್ರೀಲತಾ ರಾವ್ ಶೇಷಾದ್ರಿ
Published 14 ಅಕ್ಟೋಬರ್ 2015, 19:32 IST
Last Updated 14 ಅಕ್ಟೋಬರ್ 2015, 19:32 IST

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿನ ಆರು ಹೆಚ್ಚುವರಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಎಐಐಎಂಎಸ್) ಸ್ಥಾಪನೆಯ ಪ್ರಕಟಣೆ  ಕಾವೇರಿದ ಚರ್ಚೆಯೊಂದಕ್ಕೆ ಕಾರಣವಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಒದಗಿಸುತ್ತಿರುವ ಒಟ್ಟಾರೆ ಸಂಪನ್ಮೂಲದ ಪ್ರಮಾಣ ಕುಗ್ಗುತ್ತಿರುವ ಈ ಹೊತ್ತಿನಲ್ಲಿ ಈ ಸೂಪರ್‌ ಸ್ಪೆಷಾಲಿಟಿ ಸಂಸ್ಥೆಗಳ ಮೇಲೆ ಹೂಡಿಕೆ ಮಾಡುವ ವಿವೇಚನೆಯ ಕುರಿತು ಎದ್ದಿರುವ ಪ್ರಶ್ನೆ ಇವುಗಳಲ್ಲಿ ಒಂದು. ಈ ಸಂಸ್ಥೆಗಳು ಇದುವರೆಗೆ ನಿರ್ವಹಿಸಿಕೊಂಡು ಬಂದ ಕಾರ್ಯಕ್ಷಮತೆಯನ್ನು ಹೊಸ ಎಐಐಎಂಎಸ್‌ಗಳು ನೀಡಬಲ್ಲವೇ? ಅಂತಹ ಹೆಚ್ಚು ಸಂಸ್ಥೆಗಳ ಅಗತ್ಯವಿದೆಯೇ ಎಂಬುದು ಮತ್ತೊಂದು ಪ್ರಶ್ನೆ. ಈ ಚರ್ಚೆಯನ್ನು ಅರ್ಥೈಸಿಕೊಳ್ಳಲು, ನಾವು ಎಐಐಎಂಎಸ್ ಏತಕ್ಕೆ ಸ್ಥಾಪನೆಯಾಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಎಐಐಎಂಎಸ್‌ಗಳು  ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳೆಂದು ಕಾಯ್ದೆಯೊಂದರ ಮೂಲಕ  ಘೋಷಿಸಲಾಗಿರುವ ಸಾರ್ವಜನಿಕ ವೈದ್ಯಕೀಯ ಕಾಲೇಜುಗಳು. ಮೊದಲ ಎಐಐಎಂಎಸ್ 1956ರಲ್ಲಿ ನವದೆಹಲಿಯಲ್ಲಿ ಆರಂಭವಾಯಿತು. ಇದು ಉನ್ನತ ಶಿಕ್ಷಣದೆಡೆಗಿನ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂರ ಒಲವಿನ ಪ್ರತೀಕ. ಐಐಟಿ, ಐಐಎಂ ಮತ್ತು ಎನ್‌ಐಟಿಗಳೂ  ಇದರ ಫಲವಾಗಿಯೇ ಸೃಷ್ಟಿಯಾದವು. ಏಷ್ಯಾ ಮತ್ತು ಅದರಾಚೆಗೂ ಮುಂಚೂಣಿ ವೈದ್ಯಕೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಾಗಿ ಎಐಐಎಂಎಸ್ ಬೆಳೆಯಬೇಕು ಎಂಬುದು ಅವರ ಗುರಿಯಾಗಿತ್ತು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾಯ್ದೆ,1956ರ (2012ರಲ್ಲಿ ತಿದ್ದುಪಡಿ) ಪ್ರಕಾರ ಈ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಹಲವು. ವೈದ್ಯಕೀಯ ಮತ್ತು  ಸಂಬಂಧಿತ ವಿಜ್ಞಾನಗಳ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ನಡೆಸುವುದು. ಸಂಶೋಧನೆಗೆ  ಸೌಕರ್ಯಗಳನ್ನು ಒದಗಿಸುವುದು. ಪ್ರಯೋಗಗಳನ್ನು ನಡೆ ಸುವುದು. ಕನಿಷ್ಠ ಒಂದು ಪರಿಪೂರ್ಣ ವೈದ್ಯಕೀಯ ಕಾಲೇಜು; ಉತ್ತಮ ಸೌಲಭ್ಯವುಳ್ಳ ಆಸ್ಪತ್ರೆ; ದಂತ ವೈದ್ಯ ಕೀಯ ಕಾಲೇಜು; ನರ್ಸಿಂಗ್‌ ಕಾಲೇಜುಗಳ ಸ್ಥಾಪನೆ– ನಿರ್ವಹಣೆ; ವೈದ್ಯವಿಜ್ಞಾನದ ವಿವಿಧ ಅಂಗಗಳಿಗೆ ಬೇಕಿರುವ ತಂತ್ರಜ್ಞರನ್ನು ರೂಪಿಸುವುದು ಈ ಸಂಸ್ಥೆಗಳ ಮುಖ್ಯ ಉದ್ದೇಶಗಳಾಗಿದ್ದವು.

1956ರಿಂದ 2009ರವರೆಗೂ ರಾಷ್ಟ್ರದ ರಾಜಧಾನಿಯಲ್ಲಿನ ಎಐಐಎಂಎಸ್ ವೈದ್ಯಕೀಯ, ನರ್ಸಿಂಗ್ ಮತ್ತು ದಂತ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಒದಗಿಸುವ ಹಾಗೂ ವೈದ್ಯಕೀಯ ಮತ್ತು ಸಂಬಂಧಿ ವಿಜ್ಞಾನಗಳಲ್ಲಿ ಸಂಶೋಧನೆಗಳನ್ನು  ನಡೆಸಲು ಇರುವ ಏಕೈಕ ಕೇಂದ್ರವಾಗಿತ್ತು. ನವದೆಹಲಿಯಲ್ಲಿರುವ ಎಐಐಎಂಎಸ್‌ನಲ್ಲಿ ಎಂಬಿಬಿಎಸ್‌ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕ: ಪ್ರತಿ ವರ್ಷ 80 ಸಾವಿರ ಆಕಾಂಕ್ಷಿಗಳಲ್ಲಿ 72 ಮಂದಿ ಮಾತ್ರ ಪ್ರವೇಶ ಪಡೆಯುತ್ತಾರೆ. ‘ಇಂಡಿಯಾ ಟುಡೆ’ ನಡೆಸಿದ ಸಮೀಕ್ಷೆಯಲ್ಲಿ, 12 ವರ್ಷಗಳಲ್ಲಿ 11 ಬಾರಿ ಸತತವಾಗಿ ವೈದ್ಯಕೀಯ ಕಾಲೇಜುಗಳ ಪೈಕಿ ಇದು ಮೊದಲನೆ ಸ್ಥಾನ ಪಡೆದಿದೆ. ಅಲ್ಲದೆ ಈ ಸಂಸ್ಥೆಯು ದೇಶದ  ಬಡವರಿಗೆ ಕಡಿಮೆ ವೆಚ್ಚದ,  ಗುಣಮಟ್ಟದ ಆರೋಗ್ಯ ಸೇವೆಯನ್ನೂ ಒದಗಿಸುವ ಸಾಮರ್ಥ್ಯವುಳ್ಳ ಹೆಮ್ಮೆ ಹೊಂದಿದೆ.

2009ರಲ್ಲಿ ರಾಯ್‌ಬರೇಲಿ (ಉತ್ತರ ಪ್ರದೇಶ) ಮತ್ತು ರಾಯ್‌ಗಂಜ್‌ಗಳಲ್ಲಿ (ಪಶ್ಚಿಮ ಬಂಗಾಳ) ಇನ್ನೆರಡು ಎಐಐಎಂಎಸ್ ಮಾದರಿಯ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿತು. 2012ರಲ್ಲಿ ಇದೇ ಮಾದರಿಯ ಹೆಚ್ಚುವರಿ ಆರು ಸಂಸ್ಥೆಗಳನ್ನು ಭೋಪಾಲ್‌ (ಮಧ್ಯಪ್ರದೇಶ), ಭುವನೇಶ್ವರ (ಒಡಿಶಾ), ಜೋಧಪುರ (ರಾಜಸ್ತಾನ), ಪಟ್ನಾ (ಬಿಹಾರ), ರಾಯಪುರ (ಛತ್ತೀಸಗಡ) ಮತ್ತು ಋಷಿಕೇಶಗಳಲ್ಲಿ (ಉತ್ತರಾಖಂಡ) ಸ್ಥಾಪಿಸುವ ಉದ್ದೇಶ ಪ್ರಕಟಿಸಿತು. 2014ರ ಜುಲೈನಲ್ಲಿ ಹೈದರಾಬಾದ್‌ (ತೆಲಂಗಾಣ), ನಾಗಪುರ (ಮಹಾರಾಷ್ಟ್ರ), ಗೋರಖ್‌ಪುರ (ಉತ್ತರಪ್ರದೇಶ), ಗುಂಟೂರು (ಆಂಧ್ರಪ್ರದೇಶ) ಮತ್ತು ಕಲ್ಯಾಣಿಯಲ್ಲಿ (ಪಶ್ಚಿಮ ಬಂಗಾಳ) ಐದು ಹೊಸ ಸಂಸ್ಥೆಗಳಿಗೆ ಸರ್ಕಾರ ಅನುಮೋದನೆ ನೀಡಿತು. 2015ರ ಫೆಬ್ರುವರಿಯಲ್ಲಿ ಪಂಜಾಬ್, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಬಿಹಾರಗಳಲ್ಲಿ ಮತ್ತೆ ಆರು ಸಂಸ್ಥೆಗಳ ಸ್ಥಾಪನೆಯ ಘೋಷಣೆ ಹೊರಡಿಸಿತು. ಎಐಐಎಂಎಸ್ ಮಾದರಿಯ ಸಂಸ್ಥೆಯೊಂದನ್ನು ಪ್ರತಿ ರಾಜ್ಯಕ್ಕೆ ಒಂದರಂತೆ ಸ್ಥಾಪಿಸುವ ಗುರಿ ಸರ್ಕಾರಕ್ಕೆ ಇರುವಂತೆ ಕಾಣಿಸುತ್ತದೆ.

‘ಉತ್ಕೃಷ್ಟತೆಯ ಕೇಂದ್ರ’ಗಳ ಜಾಲವನ್ನು ದೇಶದೆಲ್ಲೆಡೆ ವಿಸ್ತರಿಸಲು ಸರ್ಕಾರ ತುಡಿಯುತ್ತಿರುವುದಂತೂ ಸ್ಪಷ್ಟ. ಮೊದಲನೆಯದಾಗಿ, ಭಾರತದ ಆರೋಗ್ಯ ಕ್ಷೇತ್ರದ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಲು ಉತ್ತಮ ತರಬೇತಿ ಮತ್ತು ಅತ್ಯುನ್ನತ ಗುಣಮಟ್ಟದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವೈದ್ಯಕೀಯ ವೃತ್ತಿಪರರು ಮತ್ತು ಸಂಶೋಧಕರನ್ನು ಸೃಷ್ಟಿಸಬೇಕಿದೆ. ಎರಡನೆಯದಾಗಿ, ಅತ್ಯುನ್ನತ ಗುಣಮಟ್ಟದ ಶುಶ್ರೂಷೆಯನ್ನು ಜನರ ಸಾಮರ್ಥ್ಯದ ಮಿತಿಯೊಳಗೇ ಒದಗಿಸಬೇಕಿದೆ. ಈ ಸೇವೆಗಳು ಪಡೆದುಕೊಳ್ಳುವುದೇ ಕಷ್ಟ ಎಂಬಷ್ಟು ದುಬಾರಿಯಾಗಿರುವ ಸ್ಥಿತಿ ಈಗ ಭಾರತದಲ್ಲಿದೆ.

ಸಾಂಕ್ರಾಮಿಕವಲ್ಲದ ಆದರೆ ಮಾರಣಾಂತಿಕವಾದ ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್‌ ಮತ್ತು ಮಧುಮೇಹ ಮುಂತಾದವುಗಳು ದೇಶದೆಲ್ಲೆಡೆ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ. ಅನೇಕ ರಾಜ್ಯಗಳಲ್ಲಿ ಇಂತಹ ರೋಗಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡುವ ಸೂಪರ್‌ ಸ್ಪೆಷಾಲಿಟಿ ಸೌಲಭ್ಯಗಳು ಅಲಭ್ಯ ಎನ್ನುವಷ್ಟು ಕಡಿಮೆ. ಸೌಲಭ್ಯಗಳು ದೊರೆಯುತ್ತಿದ್ದರೂ ಅವುಗಳನ್ನು ಪಡೆಯಲು ಅಸಾಧ್ಯವೆನಿಸುವಷ್ಟು ತುಟ್ಟಿ. ಪರಿಣಾಮವಾಗಿ ನವದೆಹಲಿಯಲ್ಲಿನ ಎಐಐಎಂಎಸ್‌ಗೆ ಉತ್ತರ ಪ್ರದೇಶ ಮತ್ತು ಬಿಹಾರಗಳಂತಹ ರಾಜ್ಯಗಳಿಂದ ಬರುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ರೋಗಿಗಳಿಗೆ ಇರುವುದು ಆಯ್ಕೆ ಇದೊಂದೇ. ಏಕೆಂದರೆ ಅವರು ವಾಸಿಸುವ ರಾಜ್ಯಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುವುದಿಲ್ಲ. ದೊರೆತರೂ ಅದರ ವೆಚ್ಚ ಭರಿಸುವುದು ಅವರಿಂದ ಸಾಧ್ಯವಿಲ್ಲ.

ಹೀಗಾಗಿ ಅವರು ಈ ನೋವಿನ ಪಯಣವನ್ನು ಮಾಡಲೇಬೇಕು. ನವದೆಹಲಿಯಲ್ಲಿರುವ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಬಯಸಿದವರು ವೆಚ್ಚ ದುಬಾರಿಯಲ್ಲದಿದ್ದರೂ ಬೇರೆಯೇ ರೀತಿಯಲ್ಲಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ರೋಗಿಗಳು ಮತ್ತು ಅವರ ಸಹಾಯಕರ ಪ್ರಯಾಣ, ವಸತಿ ಮತ್ತು ಊಟಕ್ಕಾಗಿ ಭಾರಿ ವೆಚ್ಚವೇ ತಗುಲುತ್ತದೆ. ಹೀಗಾಗಿ ಅವರಿಗೆ ಅವರಿರುವ ಪ್ರದೇಶಗಳಲ್ಲಿಯೇ ಎಐಐಎಂಎಸ್‌ನಂಥ ಸಂಸ್ಥೆಯೊಂದಿದ್ದರೆ ಅದನ್ನು ದೇವರೇ ಒದಗಿಸಿದ್ದೆಂದು ಅವರಿಗೆ ಅನ್ನಿಸಿಬಿಡಬಹುದು.

ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲು ಅನೇಕ ಸವಾಲುಗಳೂ ಇವೆ. ಈ ಯೋಜನೆ ಪೂರ್ಣ  ಕಾರ್ಯರೂಪಕ್ಕೆ ಬರುವ ಮುನ್ನವೇ ಅದರೊಳಗೆ ಬಿರುಕುಗಳು ಕಾಣಿಸಲಾರಂಭಿಸಿವೆ. ರಾಯ್‌ಬರೇಲಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಈ ಯೋಜನೆಗೆ ನೀಡುವುದಾಗಿ ಭರವಸೆ ಕೊಟ್ಟಿದ್ದ ಭೂಮಿಯನ್ನು ಇನ್ನೂ ಹಸ್ತಾಂತರಿಸಿಲ್ಲ. ರಾಯಗಂಜ್‌ ಕೋಲ್ಕತ್ತದಿಂದ ತುಂಬಾ ದೂರ ಇದೆ (400 ಕಿ.ಮೀ.) ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಪ್ರತಿಭಟಿಸಿ ಅಲ್ಲಿನ ಎಐಐಎಂಎಸ್ ಯೋಜನೆ ನಿಂತುಹೋಗಿತ್ತು.

ತರುವಾಯ 50 ಕಿ.ಮೀ. ದೂರದಲ್ಲಿರುವ ಕಲ್ಯಾಣಿಗೆ ಯೋಜನೆಯನ್ನು ಸ್ಥಳಾಂತರಿಸದ ಮೇಲೆ ಸಮಸ್ಯೆ ಪರಿಹಾರವಾಯಿತು. ನಿರ್ಮಾಣ ಕಾಮಗಾರಿ ಮತ್ತು ಉಪಕರಣ ಖರೀದಿಯಲ್ಲಿನ ವಿಳಂಬದಿಂದ ಯೋಜನೆಗಳು ತಡವಾಗುತ್ತಿವೆ. ಇದು ಅತಿಯಾದ ವೆಚ್ಚಕ್ಕೆ ಎಡೆಮಾಡಿಕೊಡುತ್ತಿದೆ. ವರದಿಯ ಪ್ರಕಾರ, ಭೋಪಾಲ್‌ ಎಐಐಎಂಎಸ್ ನಿರ್ಮಾಣ ಕಾಮಗಾರಿಯ ವಿಳಂಬದಿಂದ ₹682 ಕೋಟಿಯ ಪ್ರಾಥಮಿಕ ಅಂದಾಜು ವೆಚ್ಚವು ದ್ವಿಗುಣಗೊಂಡಿದೆ. ಕಟ್ಟಡಗಳ ನಿರ್ಮಾಣ ಇನ್ನೂ ಅಪೂರ್ಣವಾಗಿರುವಾಗ ₹70 ಕೋಟಿ ಮೌಲ್ಯದ ಉಪಕರಣಗಳು ಬಳಕೆಯಾಗದೆಯೇ, ಅವುಗಳ ಅಳವಡಿಕೆಯ ದಿನಕ್ಕಾಗಿ ಕಾಯುತ್ತಿವೆ  ಎಂದು ಪತ್ರಿಕಾ ವರದಿ ತಿಳಿಸಿದೆ.

ಭೋಪಾಲ್‌ನ ಎಐಐಎಂಎಸ್‌ ಇನ್ನೂ ಹಲವು ಸಮಸ್ಯೆಗಳನ್ನೂ ಎದುರಿಸುತ್ತಿದೆ. ಇತ್ತೀಚೆಗೆ ಕೆಲವರ ರಾಜೀನಾಮೆಯಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ಇದರ ಪರಿಣಾಮವಾಗಿ ಕೆಲವು ವಿಭಾಗಗಳೇ ಮುಚ್ಚುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಸಂಸ್ಥೆಗಳಿಗೆ ಇರುವ ಅತಿ ದೊಡ್ಡ ಸಮಸ್ಯೆ ಎಂದರೆ ಎಲ್ಲಾ ಹಂತಗಳಲ್ಲಿಯೂ ಅಗತ್ಯವಿರುವ ಮಾನವ ಸಂಪನ್ಮೂಲದ ತೀವ್ರ ಕೊರತೆ. ನವದೆಹಲಿಯ ಎಐಐಎಂಎಸ್‌ಗೆ ಸರಿಸಮನಾದ ವೇತನದ ಭರವಸೆ ನೀಡಿದ್ದರೂ ಶೇ 75ರಷ್ಟು ಸಿಬ್ಬಂದಿ ಹುದ್ದೆಗಳು ಖಾಲಿ ಉಳಿದಿವೆ. ರಾಯಪುರದಲ್ಲಿನ ಎಐಐಎಂಎಸ್‌ನಲ್ಲಿ ಒಟ್ಟು 305 ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಿದ್ದರೂ ಅಲ್ಲಿರುವುದು 64 ಸಿಬ್ಬಂದಿ ಮಾತ್ರ ಎನ್ನುತ್ತದೆ ಒಂದು ವರದಿ.

2012ರಲ್ಲಿ ಆರು ಹೊಸ ಸಂಸ್ಥೆಗಳ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರಗಳೊಂದಿಗೆ ಮಾಡಿಕೊಂಡ ಹಣಕಾಸು ಒಪ್ಪಂದದಂತೆ ಅವುಗಳ ಒಟ್ಟು ಅಂದಾಜು ವೆಚ್ಚ ₹4,920 ಕೋಟಿ, ಪ್ರತಿ ಎಐಐಎಂಎಸ್‌ಗೆ ₹820 ಕೋಟಿಯಂತೆ ಅನುಮೋದನೆ ದೊರಕಿತ್ತು. ಅದಕ್ಕೆ ಹೋಲಿಸಿದರೆ 2015ರ ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ಹಂಚಿಕೆ ಮಾಡಲಾದ ₹33,150 ಕೋಟಿಯಲ್ಲಿ ಕೇವಲ ಆರು ಸಂಸ್ಥೆಗಳಿಗೆ ₹4,920 ಕೋಟಿ ನೀಡಲಾಗಿದೆ. ಇದು ಎಲ್ಲಾ ಕೇಂದ್ರ ಪ್ರಾಯೋಜಿತ ಸಾರ್ವಜನಿಕ ಆರೋಗ್ಯ ಯೋಜನೆಗಳಿಗಾಗಿ ಮೀಸಲಿಡುವ ಮೊತ್ತದ ಏಳು ಪಟ್ಟು ಹೆಚ್ಚು ಎಂದು ವರದಿಗಳು ತಿಳಿಸಿವೆ.

ಈ ಭಾರಿ ಹೂಡಿಕೆಯ ನಡುವೆಯೂ, ಹೊಸ ಎಐಐಎಂಎಸ್‌ಗಳು ನಿರೀಕ್ಷಿತ ಮಟ್ಟಕ್ಕೆ ಏರುತ್ತಿಲ್ಲ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಕಳೆದ ವರ್ಷ 15 ಲಕ್ಷ ಹೊರ ರೋಗಿಗಳು ಮತ್ತು 80 ಸಾವಿರ ಒಳ ರೋಗಿಗಳು ನವದೆಹಲಿಯ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಜನರು ಇಲ್ಲಿಗೇ ಬರಲು ಬಯಸುತ್ತಾರೆಯೇ ಹೊರತು ಸ್ಥಳೀಯ ಎಐಐಎಂಎಸ್‌ಗಳಿಗೆ ಹೋಗುವುದಿಲ್ಲ. ಏಕೆಂದರೆ 1956ರಿಂದಲೂ ಎಐಐಎಂಎಸ್‌, ಸ್ಥಿರವಾಗಿ ಉತ್ಕೃಷ್ಟ ಗುಣಮಟ್ಟದ ಸೇವೆಯ ಮೂಲಕ ವಿಶ್ವಾಸಾರ್ಹತೆ ಬೆಳೆಸಿಕೊಂಡಿದೆ ಮತ್ತು ಜನರು ಕುಂದದ ನಂಬಿಕೆಯೊಂದಿಗೆ ಅದಕ್ಕೆ ಪ್ರತಿಸ್ಪಂದಿಸುತ್ತಿದ್ದಾರೆ. ಮೂಲ ಎಐಐಎಂಎಸ್‌ನ ಗುಣಮಟ್ಟವನ್ನು ತಲುಪಲು ಹೊಸ ಸಂಸ್ಥೆಗಳು  ಒಂದಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂದು ಲೆಕ್ಕಾಚಾರ ಹಾಕಿಕೊಳ್ಳುವುದು ಕ್ಷೇಮ.

ಶ್ರೇಣೀಕೃತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಬೋಧನಾ ಸಂಸ್ಥೆಗಳಲ್ಲಿ ಅಧಿಕ ಪ್ರಮಾಣದ ಹಣ ಹೂಡಿಕೆ ಮಾಡುವ ಸರ್ಕಾರದ ನಿರ್ಧಾರ ವ್ಯಾಪಕ ಟೀಕೆಗೊಳಗಾಗಿದೆ. ಅದರಲ್ಲಿಯೂ ಅನೇಕ ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸೇವೆ ಶಿಥಿಲವಾಗುತ್ತಿರುವುದು ಕಳವಳಕಾರಿ ಸಂಗತಿ. ಭಾರತದಲ್ಲಿ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಯ ಅಗತ್ಯವನ್ನು ಬಹಳ ಹಿಂದೆಯೇ ಮನಗಾಣಲಾಗಿತ್ತು. ಸರ್ ಜೋಸೆಫ್‌ ಭೋರ್ ನೇತೃತ್ವದ ಆರೋಗ್ಯ ಸಮೀಕ್ಷೆ ಮತ್ತು ಅಭಿವೃದ್ಧಿ ಸಮಿತಿಯು, ಪ್ರಾಥಮಿಕ ಆರೋಗ್ಯ ಸೇವೆಯ ಜಾಲವನ್ನು ಬಲಪಡಿಸಬೇಕು. ಚಿಕಿತ್ಸೆ ಮತ್ತು ರೋಗಪ್ರತಿಬಂಧಕ ಕ್ರಮಗಳನ್ನು ಏಕೀಕರಿಸಿ ಕಾರ್ಯನಿರ್ವಹಿಸಬೇಕು ಎಂದು 1943ರಲ್ಲಿಯೇ ಶಿಫಾರಸು ಮಾಡಿತ್ತು.

ಇದು ವಿಶ್ವ ಆರೋಗ್ಯ ಸಂಸ್ಥೆಯ ಅಲ್ಮಾ ಅಟಾ ಘೋಷಣೆ (1978) ವೇಳೆ ಪ್ರತಿಧ್ವನಿಸಿತು. ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಯ ಮೂಲಕ ‘ಸರ್ವರಿಗೂ ಆರೋಗ್ಯ’  ಲಭಿಸುವಂತೆ ಮಾಡಬೇಕು ಎಂದು ಕರೆ ನೀಡಿತ್ತು. ಅದನ್ನು 2005ರಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಕಾರ್ಯಕ್ರಮ– ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ (ಪ್ರಸ್ತುತ ರಾಷ್ಟ್ರೀಯ ಆರೋಗ್ಯ ಯೋಜನೆ) ಅಳವಡಿಸಿಕೊಳ್ಳಲಾಯಿತು. ಪ್ರಾಥಮಿಕ  ಮತ್ತು ದ್ವಿತೀಯ ಮಟ್ಟಗಳನ್ನು ಬಲಪಡಿಸಿ ಗುಣಮಟ್ಟದ ಮೂಲ ಆರೋಗ್ಯ ಸೇವೆ ಒದಗಿಸುವ ರಾಷ್ಟ್ರೀಯ ಆರೋಗ್ಯ ಯೋಜನೆಯ ಉದ್ದೇಶವನ್ನೇ ಅನಿಶ್ಚಿತತೆಗೆ ದೂಡುವಂತೆ ಮೂರನೇ ಹಂತದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಯೋಜನೆ ಇದೆ.

ದೇಶದಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಮತ್ತು ಶಿಶುಗಳ ಸಾವಿನ ಪ್ರಮಾಣ ನಂಬಲಾರದಷ್ಟು ಅಧಿಕ ಪ್ರಮಾಣದಲ್ಲಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿನ ತೀವ್ರ ಅಪೌಷ್ಟಿಕತೆ, ಕ್ಷಯ ಮತ್ತು ಮಲೇರಿಯಾದಂತಹ ರೋಗಗಳು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುವಂಥ ಸ್ಥಿತಿ  ಮುಂದುವರಿದಿರುವ ಸಂದರ್ಭದಲ್ಲಿ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ. ಬಡವರಿಗೆ ಒಳ್ಳೆಯ ಚಿಕಿತ್ಸೆಯನ್ನು ಒದಗಿಸಲು ಇನ್ನೂ ಹೆಚ್ಚು ಪರಿಣಾಮಕಾರಿ ಮಾದರಿಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಲೇಖಕಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.