ADVERTISEMENT

ಈ ಯುದ್ಧ ಮುಗಿಯುವುದು ಹೇಗೆ?

ಥಾಮಸ್ ಎಲ್ ಫ್ರೀಡ್ಮನ್
Published 6 ಆಗಸ್ಟ್ 2014, 19:30 IST
Last Updated 6 ಆಗಸ್ಟ್ 2014, 19:30 IST

ಗಾಜಾದಲ್ಲಿನ ಪರಿಸ್ಥಿತಿ ತಿಳಿಗೊಳ್ಳ­ಬಹು­ದೆಂಬ ಆಶಾಭಾವ­ದೊಂದಿಗೆ ನಾನು ಇಸ್ರೇಲ್‌ಗೆ ಬರು­ವು­ದನ್ನು ತಡ ಮಾಡಿದ್ದೆ. ತಿಳಿ­ಗೊಳ್ಳುವುದು ಎಂದರೆ ಅಲ್ಲಿ ಏನು ನಡೆಯುತ್ತದೆ­ಯೋ ಅದು ಧುತ್ತನೆ ನಿಲ್ಲುತ್ತದೆಂಬ ಅರ್ಥದ­ಲ್ಲಲ್ಲ. ಆದರೆ ಅದು ಹೇಗೆ ತಾರ್ಕಿಕ ಅಂತ್ಯ ಕಾಣ­ಬಹು­ದೆಂಬ ಅರ್ಥ­ದಲ್ಲಿ. ಈಗ ಇಲ್ಲಿರುವ ನನಗೆ, ಈ ಕ್ರೂರ ಪುಟ್ಟ ಯುದ್ಧವನ್ನು ಕೊನೆಗೊಳಿಸು­ವುದು ಮಾತ್ರವಲ್ಲ, ಈ ಪ್ರದೇಶದಲ್ಲಿ ಹಿನ್ನಡೆ ಕಂಡಿ­ರುವ ಸೌಮ್ಯ­ವಾದಿಗಳ ಕೈ ಮೇಲಾಗುವ ರೀತಿಯಲ್ಲಿ ಅದನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ದಾರಿಯಿದೆ ಎಂಬುದು ಅರಿವಾಗಿದೆ.

ಆದರೆ ಈ ವಿಷಯದಲ್ಲಿ ಇಷ್ಟೊಂದು ಆಶಾ­ವಾದಿ­ಯಾಗಲು ವಾಸ್ತವವನ್ನು ಸ್ವಲ್ಪಮಟ್ಟಿಗೆ ಮರೆ­ಯಬೇಕಾಗುತ್ತದೆ. ಈವರೆಗೆ ನಡೆದಿರುವ ಯುದ್ಧದಿಂದ ಏನಾದರೂ ಯುಕ್ತವಾದದ್ದನ್ನು ಕಲಿ­ಯುವುದಾದರೆ ಅದಕ್ಕೆ ಕಾರಣವಾದ ಶಕ್ತಿ­ಗಳು ಒಂದು ಮಟ್ಟದ ನಾಯಕತ್ವವನ್ನು ಹೊಂದಿ­ರಬೇಕಾಗುತ್ತದೆ. ಆದರೆ ಗಾಜಾ ಬಿಕ್ಕಟ್ಟಿ­ನಲ್ಲಿ ಸಿಲುಕಿರುವ ಯಾವುದೇ ಶಕ್ತಿಯಾ­ಗಲೀ ಇಂತಹ ನಾಯಕತ್ವವನ್ನು ಪ್ರದರ್ಶಿಸಿಲ್ಲ.

ಸುರಂಗ ನಿರ್ಮಾಣ ಮತ್ತು ಗೋಡೆಗಳನ್ನು ಕಟ್ಟುವುದ­ರಲ್ಲಿ ನಿಸ್ಸೀಮ­ರಾದ ಅರಬ್ಬರು, ಪ್ಯಾಲೆಸ್ಟೀನೀ­ಯರು, ಇಸ್ರೇಲಿ ನಾಯಕರ ಪೀಳಿಗೆ ಇದಾಗಿದೆ. ಆದರೆ ಇವ­ರ್‍ಯಾರೂ ಸೇತುವೆ, ಗೇಟುಗಳನ್ನು (ಬಾಗಿಲು­ಗ­ಳನ್ನು) ನಿರ್ಮಿಸುವ ಗೋಜಿಗೆ ಹೋದವರೇ ಅಲ್ಲ.
ಇತ್ತೀಚಿನ ಒಂದು ಶುಕ್ರವಾರ ಹಮಾಸ್ ಉಗ್ರರು ನಗರದೆಡೆಗೆ ರಾಕೆಟ್‌ ಗುರಿಯಿಟ್ಟಿರುವ ಎಚ್ಚರಿಕೆ ನೀಡಲು ಸೈರನ್‌ಗಳ ಮೊರೆತ ಶುರುವಾ­ದಾಗ ನಾನು ಟೆಲ್‌ ಅವೀವ್‌ನ ಅಮೆರಿಕ ರಾಯ­ಭಾರ ಕಚೇರಿಯಲ್ಲಿ ಇದ್ದೆ. ರಾಯಭಾರ ಕಚೇರಿ­ಯಲ್ಲಿನ ನೆಲ ಮಹಡಿಯಲ್ಲಿದ್ದ ನಾನು ಹಾಗೇ ತಣ್ಣಗೆ, ಯುದ್ಧಕ್ಕಾಗಿ ಎಷ್ಟೆಲ್ಲಾ ಬುದ್ಧಿ ಖರ್ಚು ಮಾಡಲಾಗುತ್ತಿದೆ ಎಂದೂ, ಹಾಗೆಯೇ ಶಾಂತಿ ಸ್ಥಾಪನೆಗಾಗಿ ಎಷ್ಟು ಕಡಿಮೆ ಬುದ್ಧಿ ಖರ್ಚು ಮಾಡಲಾಗುತ್ತಿದೆ ಎಂಬ ಚಿಂತನೆಗೆ ಜಾರಿದೆ.

ಹಮಾಸ್ ಉಗ್ರರು ಗಾಜಾದಿಂದ ಉಡಾಯಿ­ಸಿದ ರಾಕೆಟ್‌ ತನ್ನ ಯಾವುದಾದರೂ ಕಟ್ಟಡಕ್ಕೆ ಏನಾದರೂ ಬಡಿಯಲಿದೆಯೇ, ಆ ರಾಕೆಟ್‌ ಅನ್ನು ಪ್ರತಿಬಂಧಿಸಬೇಕೇ, ಅಥವಾ ಅದು ಸಮುದ್ರಕ್ಕೆ ಬೀಳಲಿದೆಯೇ, ಕೃಷಿ  ಪ್ರದೇ­ಶದ ಮೇಲೆ ಬೀಳಲಿದೆಯೇ, ಮರಳುಗಾಡಿನ ಮೇಲೆ ಬೀಳಲಿದೆಯೇ, ಅಥವಾ ಅದನ್ನು ಉಪೇ­ಕ್ಷಿಸಬಹುದೇ ಎಂಬುದನ್ನೆಲ್ಲಾ ಕ್ಷಣಾರ್ಧದಲ್ಲಿ ಲೆಕ್ಕಹಾಕಬಲ್ಲ ರಾಕೆಟ್‌ ಪ್ರತಿಬಂಧಕ ವ್ಯವಸ್ಥೆ­ಯನ್ನು ಹಾಗೂ ಕಬ್ಬಿಣದ ಗುಮ್ಮಟವನ್ನು ಇಸ್ರೇಲ್‌ ಅಭಿವೃದ್ಧಿಪಡಿಸಿದೆ. ಅನಗತ್ಯ ಸಂದರ್ಭ­ದಲ್ಲಿ ರಾಕೆಟ್‌ ಪ್ರತಿಬಂಧಕ ದಾಳಿಯೊಂದನ್ನು ತಪ್ಪಿಸಿದರೆ ಅದರಿಂದ 50,000 ಡಾಲರ್‌ (ಸುಮಾರು ₨30 ಲಕ್ಷ) ಉಳಿ­ಯುತ್ತದೆಂದು ಇದನ್ನು ಅಭಿವೃದ್ಧಿಪಡಿಸಿ­ದವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದೊಂದು ಚಾಣಾಕ್ಷ ವ್ಯವಸ್ಥೆ ಮಾತ್ರವಲ್ಲ, ಮಿತವ್ಯಯಕಾರಿ ವ್ಯವಸ್ಥೆಯೆಂದೂ ಹೇಳಲಾಗುತ್ತದೆ. ಆದರೆ ಇಸ್ರೇಲ್‌ ಸರ್ಕಾರವು ಇದೇ ಬುದ್ಧಿವಂತಿಕೆಯನ್ನು ಪಶ್ಚಿಮ ದಂಡೆ­ಯಲ್ಲಿ­ರುವ ಸೌಮ್ಯವಾದಿ ಪ್ಯಾಲೆ­ಸ್ಟೀನ್‌ ಆಡಳಿತ­ದೊಂದಿಗೆ ಒಪ್ಪಂದ ಮಾಡಿಕೊ­ಳ್ಳು­ವುದಕ್ಕಾಗಿ ಬಳಸಿಕೊಂಡಿದ್ದೇ ಆಗಿದ್ದರೆ ಹಮಾಸ್‌ ಉಗ್ರ ಸಂಘಟನೆ ಜಾಗತಿಕವಾಗಿ ಇವತ್ತು ಒಬ್ಬಂಟಿ­ಯಾಗುತ್ತಿತ್ತೇ ವಿನಾ ಅದರಿಂದ ಇಸ್ರೇಲ್‌ಗೆ ಯಾವ ನಷ್ಟವೂ ಆಗುತ್ತಿರಲಿಲ್ಲ.

ಇದಕ್ಕೆ ಪ್ರತಿಯಾಗಿ ಹಮಾಸ್ ಉಗ್ರರೇನೂ ಬುದ್ಧಿವಂತಿಕೆಯಲ್ಲಿ ಕಡಿಮೆಯೇನಿಲ್ಲ. ಪಿಕಾಸಿ, ಸನಿಕೆ ಮತ್ತು ಪುಟ್ಟ ಡ್ರಿಲ್ಲಿಂಗ್‌ ಯಂತ್ರಗಳನ್ನೇ ಬಳಸಿ ಇಸ್ರೇಲ್‌ನ ವಿವಿಧೆಡೆಗಳಿಗೆ ಚಾಚುವ ಸುರಂಗ ಜಾಲವನ್ನು ನಿರ್ಮಿಸಿದ್ದಾರೆ. ಎಲ್ಲಾ ಶಾಂತವಾಗಿದ್ದ ಸಂದರ್ಭದಲ್ಲೂ ಗಾಜಾದ ಜನತೆಗೆ ಕೆಡುಕನ್ನೇ ತಂದಿತ್ತಿರುವ ಹಮಾಸ್‌ ಉಗ್ರರು ಇದೇ ಚಾಣಾಕ್ಷತೆಯನ್ನು ಭೂಮಿಯ ಮೇಲಿನ ರಚನಾತ್ಮಕ ನಿರ್ಮಾಣಕ್ಕಾಗಿ ಬಳಸಿ­ಕೊಂಡಿದ್ದರೆ ಆ ಸಂಘಟನೆ ಅರಬ್‌ ಜಗತ್ತಿ­ನಲ್ಲೇ ದೊಡ್ಡ ನಿರ್ಮಾಣ ಕಂಪೆನಿಯಾಗಿರುತ್ತಿತ್ತು.

ಪ್ರತಿಯೊಂದು ಯುದ್ಧಕ್ಕೂ ಕೊನೆ ಎಂಬುದು ಇದ್ದೇ ಇದೆ. ಆದರೂ ಯುದ್ಧ  ನಿಂತ ಮಾತ್ರಕ್ಕೆ ಹಿಂದೆ ಇದ್ದ ಪರಿಸ್ಥಿತಿಯೇ ಮತ್ತೆ ಮರಳುತ್ತ­ದೆಂದು ಹೇಳಲಾಗದು. ಸ್ಥಿರವಾದ ಕದನ ವಿರಾಮ ಜಾರಿಗೊಳ್ಳುವ ಮುನ್ನವೇ ಗಾಜಾಗೆ ಸಂಬಂಧಿಸಿದಂತೆ ದೀರ್ಘಾವಧಿ ಒಪ್ಪಂದದ ರೀತಿ ರಿವಾಜುಗಳ ಬಗೆಗೆ ಇಸ್ರೇಲ್‌ ಮತ್ತು ಪ್ಯಾಲೆ­ಸ್ಟೀನ್‌ ಆಡಳಿತಾಧಿಕಾರಿಗಳು ಚರ್ಚಾ ಮಗ್ನರಾಗಿ­ದ್ದಾರೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶ­ವೊಂದಿದೆ. ಮುಸ್ಲಿಮ್‌ ಬ್ರದರ್‌ಹುಡ್‌ ಜತೆಗಿನ ಸಖ್ಯ ಹೊಂದಿರುವ ಕಾರಣಕ್ಕಾಗಿ ಹಮಾಸ್‌ ಸಂಘಟನೆಯನ್ನು ಇಸ್ರೇಲ್‌ ಎಷ್ಟರಮಟ್ಟಿಗೆ ದ್ವೇಷಿ­ಸುತ್ತದೆಯೋ ಅಷ್ಟೇ ತೀವ್ರವಾಗಿ ಈಜಿಪ್ಟ್‌, ಜೋರ್ಡಾನ್‌, ಸೌದಿ ಅರೇಬಿಯಾ ಮತ್ತು ಅರಬ್‌ ಸಂಯುಕ್ತ ಸಂಸ್ಥಾನ ಕೂಡ ಅದನ್ನು ದ್ವೇಷಿಸುತ್ತವೆ. ಹೀಗಾಗಿ ಸೌಮ್ಯವಾದಿ ಅರಬ್ಬರು, ಪ್ಯಾಲೆಸ್ಟೀನೀಯರು ಮತ್ತು ಇಸ್ರೇಲ್‌ಗಳನ್ನು ಒಂದೆ­­ಡೆಗೆ ತರಬಲ್ಲ ಗಾಜಾ ಒಪ್ಪಂದಕ್ಕೆ ಅವಕಾಶ ಇದ್ದೇ ಇದೆ ಎಂದೇ ಹೇಳಬೇಕಾಗುತ್ತದೆ. ಆದರೆ ಇದು ಸುಲಭವಾಗಿ ಆಗುವಂಥದ್ದಲ್ಲ. ಇದಕ್ಕಾಗಿ ಇಸ್ರೇಲ್‌, ಹಮಾಸ್‌ ಸಂಘಟನೆ ಮತ್ತು ಅಮೆರಿಕ­ಗಳು ‘ಯಾರು ಯಾರೊಂದಿಗೆ ಮಾತನಾಡು­ವುದಿಲ್ಲ’ ಎಂಬ ತಮ್ಮ ಹಳೆಯ ನಿಯಮಗಳ­ನ್ನೆಲ್ಲಾ ಕಿತ್ತೆಸೆಯಬೇಕಾಗುತ್ತದೆ.

ಹಮಾಸ್‌ ಸಂಘಟನೆಯು ಇಸ್ರೇಲ್‌ನ ಪ್ರಬಲ ಎದುರಾಳಿಯಾಗಿದೆ. ಗಾಜಾ ಪ್ರವೇಶಕ್ಕೆ ಇಸ್ರೇಲ್‌ ಮತ್ತು ಈಜಿಪ್‌್ಟ ಭಾಗದಲ್ಲಿ ಹಾಕಲಾಗಿರುವ ದಿಗ್ಬಂಧನವನ್ನು ಕೊನೆಗೊಳಿಸುವ ಬಗ್ಗೆ ಒಪ್ಪಂದ­ವಾಗದೆ ಈ ಸಂಘಟನೆಯು ಯುದ್ಧವನ್ನು ನಿಲ್ಲಿ­ಸುವ ಸಾಧ್ಯತೆ ಇಲ್ಲ. ಹಾಗೆಯೇ ಇಸ್ರೇಲ್‌ ಕೂಡ ಹಮಾಸ್‌ ಉಗ್ರರು ನಿರ್ಮಿಸಿರುವ ಸುರಂಗ­ಗಳನ್ನು ನಾಶಗೊಳಿಸದೆ, ಗಾಜಾವನ್ನು ಸೇನಾ­ಮುಕ್ತ ವಲಯವಾಗಿಸದೆ ಹಾಗೂ ರಾಕೆಟ್‌ಗಳ ಆಮದಿಗೆ ಕಡಿವಾಣ ಹಾಕದೆ ಯುದ್ಧವನ್ನು ಕೈಬಿಡುವ ಸಾಧ್ಯತೆ ಇಲ್ಲ.

ಆದರೆ ಇಸ್ರೇಲ್‌ಗಾಗಲೀ ಅಥವಾ ಈಜಿಪ್ಟ್‌­ಗಾಗಲೀ ಗಾಜಾದಲ್ಲಿ ಆಡಳಿತ ನಡೆಸುವ ಬಯಕೆ­ಯೇನೂ ಇಲ್ಲ. ಹೀಗಾಗಿ, ರಾಮಲ್ಹಾದಲ್ಲಿನ ಮಹ­ಮೌದ್‌ ಅಬ್ಬಾಸ್‌ ಅಧ್ಯಕ್ಷತೆಯ ಸೌಮ್ಯ­ವಾದಿ ಪ್ಯಾಲೆಸ್ಟೀನ್‌ ಆಡಳಿತವನ್ನು ಗಾಜಾಗೆ ಮತ್ತೆ ಆಹ್ವಾನಿಸಿದರೆ ಮಾತ್ರ ಇಂತಹ ಒಪ್ಪಂದ ಏರ್ಪಡಲು ಸಾಧ್ಯ. (ಇಲ್ಲಿನ ಪ್ಯಾಲೆಸ್ಟೀನ್‌ ಆಡಳಿತವನ್ನು 2007ರಲ್ಲಿ ಹಮಾಸ್‌ ಉಗ್ರರು ಕಿತ್ತೆಸೆದಿದ್ದರು). ಆದರೆ ಇದು ಸಾಧ್ಯವಾಗ­ಬೇಕಾದರೆ ಪ್ಯಾಲೆ­ಸ್ಟೀ­ನೀ­ಯರು ಹಮಾಸ್‌ ಸಂಘ­ಟ­ನೆಯನ್ನೂ ಒಳ­ಗೊಂಡ ರಾಷ್ಟ್ರೀಯ ಸಂಯುಕ್ತ ಸರ್ಕಾ­ರವನ್ನು ರಚಿ­ಸುವುದು ಅನಿವಾರ್ಯ. ಜತೆಗೆ ಇಸ್ರೇಲ್‌, ಪಶ್ಚಿಮ ದಂಡೆಯಲ್ಲಿನ ತನ್ನ ಆಕ್ರಮಣವನ್ನು ಕೊನೆ­ಗೊಳಿಸುವ ಸಂಬಂಧ ಈ ಸಂಯುಕ್ತ ಸರ್ಕಾರದೊಂದಿಗೆ ಸಂಧಾನ ಪ್ರಕ್ರಿಯೆಗೆ ಒಪ್ಪಿಕೊಳ್ಳಬೇಕಾಗುತ್ತದೆ.

ಹಾಗೆಂದ ಮಾತ್ರಕ್ಕೆ ಪ್ಯಾಲೆಸ್ಟೀನ್‌ ಆಡಳಿತವು ಪಶ್ಚಿಮ ದಂಡೆ ಮತ್ತು ಗಾಜಾದಲ್ಲಿ ಇಸ್ರೇಲ್‌ ನಿಯೋಜಿತ ಪೊಲೀಸನ ರೀತಿಯಲ್ಲಿ ಇರುವ ಉದ್ದೇಶವನ್ನು ಹೊಂದಿದೆ ಎಂದು ಅರ್ಥವಲ್ಲ. ಒಪ್ಪಂದ ಏರ್ಪಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದೇ ಆದರೆ, ಇಸ್ರೇಲ್‌ ಜತೆಗಿನ ಸಂಧಾನದಲ್ಲಿ ಭಾಗಿಯಾಗುವ ಹಮಾಸ್‌ ಮತ್ತು ಇಸ್ಲಾಮ್‌ ಜಿಹಾದಿಗಳನ್ನೂ ಒಳಗೊಂಡ ಪ್ಯಾಲೆಸ್ಟೀನ್‌ ರಾಷ್ಟ್ರೀಯ ಸಂಯುಕ್ತ ಸರ್ಕಾರದ ನೇತೃತ್ವವನ್ನು ತಮಗೇ (ಪ್ಯಾಲೆಸ್ಟೀನ್‌ಗೇ) ವಹಿಸ­ಬೇಕು ಎಂದು ಅಬ್ಬಾಸ್‌ ಅವರ ಹಿರಿಯ ಸಲಹೆ­ಗಾರರಾದ ಯಾಸೆರ್‌ ಅಬೆದ್‌ ರಬ್ಬೊ ಸ್ಪಷ್ಟಪಡಿ­ಸಿ­ದ್ದಾರೆ. ‘‘ಹಮಾಸ್‌ ಅಥವಾ ಇಸ್ರೇಲ್‌ ಪರವಾಗಿ ಸಂಧಾನಕ್ಕೆ  ‘ನಾವು ಮೂರ್ಖರ ಹಾಗೆೆ’ ಅನುವು ಮಾಡಿಕೊಟ್ಟು ಅದರಿಂದ ಏನೂ ಉಪಯೋಗ ಪಡೆಯದಿದ್ದರೆ ಇಸ್ರೇಲ್‌ ಹೇಳಿದ್ದನ್ನೇ ಕೇಳುತ್ತಾ ಕೂರಬೇಕಾಗುತ್ತದೆ. ಮತ್ತೊಮ್ಮೆ ಇಂತಹ ತಪ್ಪನ್ನು ಮಾಡಿದ್ದೇ ಆದರೆ, ನನ್ನ ಮಕ್ಕಳು ನನ್ನನ್ನು ಮನೆಯೊಂದ ಆಚೆ ದಬ್ಬುತ್ತಾರೆ’’ ಎಂದೂ ಅವರು ಹೇಳಿದ್ದಾರೆ.

‍ಪ್ಯಾಲೆಸ್ಟೀನ್‌ ಸಂಧಾನದ ಬಗ್ಗೆ ಗಂಭೀರ­ವಾಗಿ ಚಿಂತಿಸಿ ನಂತರ, ‘‘ಪ್ಯಾಲೆಸ್ಟೀನ್‌ ಸಂಯಕ್ತ ಮೈತ್ರಿಕೂಟದ ನಾಯಕತ್ವದಲ್ಲಿ ಗಾಜಾವು ಶಾಂತಿ­ಯುತ ತಾಣವಾಗಲಿದೆ. ಈ ನಿಟ್ಟಿನಲ್ಲಿ ‘ಈಜಿಪ್ಟ­ನ್ನರೇ ನಿಮ್ಮ ಗೇಟುಗಳನ್ನು ತೆರೆಯಿರಿ, ಇಸ್ರೇಲೀ­ಯರೇ ನಿಮ್ಮ ಗೇಟುಗಳನ್ನು ತೆರೆಯಿರಿ’ ಎಂದು ಇಡೀ ಜಗತ್ತಿಗೆ ಗೊತ್ತಾಗು­ವಂತೆ ನಾವು ಪ್ರಕಟಿಸ­ಬೇಕಾಗುತ್ತದೆ’’ ಎಂದೂ ರಬ್ಬೊ ಹೇಳಿ­ದ್ದಾರೆ. ಹೀಗಾದಾಗ ಸೌಮ್ಯ­ವಾದಿ ಅರಬ್‌ ಸಂಸ್ಥಾ­ನ­ಗಳು ಪುನರ್‌­ನಿರ್ಮಾಣಕ್ಕಾಗಿ ದೇಣಿಗೆ ನೀಡಲು ಮುಂದಾ­ಗುತ್ತವೆ ಎಂಬುದು ಅವರ ತರ್ಕ.

ಹಮಾಸ್ ಸಂಘಟನೆಯಾಗಲೀ ಅಥವಾ ಇಸ್ರೇಲ್‌ ಆಗಲೀ ಮತ್ತೊಬ್ಬರನ್ನು ಸಂಪೂರ್ಣ­ವಾಗಿ ಸೋಲಿಸದ ಹೊರತು ಈ ಬಿಕ್ಕಟ್ಟಿಗೆ ಪರಿ­ಹಾರ ಕಾಣುತ್ತಿಲ್ಲ. ಇದೇ ವೇಳೆ, ಒಬ್ಬರು ಇನ್ನೊ­ಬ್ಬರನ್ನು ಸಂಪೂರ್ಣ ಸೋಲಿಸುವ ಸಾಧ್ಯತೆಯೂ ಕಾಣುತ್ತಿಲ್ಲ. ಇಂತಹ ಸನ್ನಿವೇಶ­ದಲ್ಲಿ, ಒಂದಷ್ಟು ರಾಜಕೀಯ ತ್ಯಾಗ ಮಾಡದೆ ಯಾರಿಗೇ ಆಗಲಿ ದೀರ್ಘಾವಧಿ ಫಲಶ್ರುತಿ­ಯನ್ನು ಪಡೆಯುವ ಸಾಧ್ಯತೆಯೂ ನನಗೆ ಕಂಡುಬರುತ್ತಿಲ್ಲ.

ಪಶ್ಚಿಮ ದಂಡೆಯಿಂದ ಕಾಲ್ತೆಗೆಯುವ ಬಗ್ಗೆ ಇಸ್ರೇಲ್‌ ನೈಜ ಕಾಳಜಿಯಿಂದ ಸಂಧಾನಕ್ಕೆ ಮುಂದಾಗಬೇಕಾಗುತ್ತದೆ; ಹಮಾಸ್‌ ಸಂಘಟ­ನೆಯು ಹಿಂಸಾಚಾರವನ್ನು ಬಿಟ್ಟು ಪ್ಯಾಲೆಸ್ಟೀನ್‌ ಸಂಯುಕ್ತ ಸರ್ಕಾರದಲ್ಲಿ ಭಾಗಿಯಾಗ­ಬೇಕಾ­ಗುತ್ತದೆ. ಆದರೆ ಇದ್ಯಾವುದೂ ಏಕೆ ಆಗುವುದಿಲ್ಲ ಎಂಬುದಕ್ಕೆ ನಾನು ಇಪ್ಪತ್ತೆಂಟು ಕಾರಣಗಳನ್ನು ನೀಡಬಲ್ಲೆ. ಇಷ್ಟಾದರೂ ಬಿಕ್ಕಟ್ಟಿನಿಂದ ಹೊರ­ಬರಲು ಇದನ್ನು ಬಿಟ್ಟು ಬೇರ್‍ಯಾವ ಮಾರ್ಗೋ­ಪಾಯದ ಬಗ್ಗೆಯೂ ನಾನು ಚಿಂತಿಸಲಾರೆ.
(ನ್ಯೂಯಾರ್ಕ್‌ ಟೈಮ್‌್ಸ)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.