ADVERTISEMENT

ಐತಿಹಾಸಿಕ ಪಲ್ಲಟದತ್ತ ಕ್ಯೂಬಾ

ಅಮೆರಿಕದ ಜೊತೆಗಿನ ಶೀತಲ ಸಮರ ಕಾಲದ ಹಗೆತನದ ಅವಶೇಷ ಕಳಚಿ ಬಿದ್ದಿದೆ

ಸುಧೀಂದ್ರ ಕುಲಕರ್ಣಿ
Published 22 ಜುಲೈ 2015, 19:30 IST
Last Updated 22 ಜುಲೈ 2015, 19:30 IST

ಫಿಡೆಲ್ ಕ್ಯಾಸ್ಟ್ರೊ ಮತ್ತು ಚೆ ಗುವೇರ ನೇತೃತ್ವದ ಯುವ ಕ್ರಾಂತಿಕಾರಿಗಳ ಗುಂಪು 1959ರಲ್ಲಿ ಕ್ಯೂಬಾದ ಅಮೆರಿಕ ಬೆಂಬಲಿತ ನಿರಂಕುಶಾಧಿಪತ್ಯವನ್ನು ಪದಚ್ಯುತಗೊಳಿಸಿ, ಅಮೆರಿಕ ಖಂಡದ ಮೊದಲ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿತು. ಆಗಿನಿಂದಲೂ ಕರ್ನಾಟಕದ ಪ್ರಗತಿಪರ ಜನರೂ ಸೇರಿದಂತೆ ಭಾರತೀಯರು ಕ್ಯೂಬಾ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ದೊಡ್ಡ ಗೌರವ ಹೊಂದಿರುವ ಈ ಸಣ್ಣ ದ್ವೀಪರಾಷ್ಟ್ರ ಈಗ ತೀವ್ರವಾದ ಪಲ್ಲಟಕ್ಕೆ ಒಳಗಾಗುತ್ತಿದೆ. ಉತ್ತರ ಭಾಗದಲ್ಲಿರುವ ಬಲಶಾಲಿ ನೆರೆ ರಾಷ್ಟ್ರ ಅಮೆರಿಕ, ಕ್ಯೂಬಾವನ್ನು ಮೂಲೆಗುಂಪು ಮಾಡಿ ಮಣಿಸುವ ವ್ಯರ್ಥ ಪ್ರಯತ್ನದ ನಂತರ ಆ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪನೆ ಮಾಡಿದೆ.

ಜುಲೈ 20ರಂದು ಎರಡೂ ದೇಶಗಳು ರಾಯಭಾರ ಕಚೇರಿಗಳನ್ನು ಮತ್ತೆ ತೆರೆದಿವೆ. ಇದರೊಂದಿಗೆ ಶೀತಲ ಸಮರ ಕಾಲದ ಹಗೆತನದ ಕೊನೆಯ ಅವಶೇಷವೂ ಕಳಚಿ ಬಿದ್ದಿದೆ. ಕಳೆದ ಮಾರ್ಚ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ಅಧ್ಯಕ್ಷ ರಾಲ್ ಕ್ಯಾಸ್ಟ್ರೊ ಪನಾಮಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ದಶಕದ ಹಿಂದೆ ಯೋಚಿಸಲೂ ಸಾಧ್ಯವಿಲ್ಲದ ವಿದ್ಯಮಾನ ಈಗ ವಾಸ್ತವವಾಗಿದೆ. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಭರವಸೆ ಮೂಡಿಸುವ ಈ ಬೆಳವಣಿಗೆಯನ್ನು ಜಗತ್ತು ಶ್ಲಾಘಿಸಬೇಕು.

ಈ ಭಾರಿ ಬದಲಾವಣೆ ಸಾಧ್ಯವಾದದ್ದು ಹೇಗೆ? ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸುವುದಕ್ಕಾಗಿ ಕಳೆದ ತಿಂಗಳು ನಾನು ಕ್ಯೂಬಾಕ್ಕೆ ಹೋಗಿದ್ದೆ. ಈ ಚಾರಿತ್ರಿಕ ಸಂಬಂಧ ವೃದ್ಧಿಗಾಗಿ ಅಸಂಭವನೀಯ ವ್ಯಕ್ತಿಯೊಬ್ಬರಿಗೆ ಕ್ಯೂಬಾದ ಹಲವರು  ಕೃತಜ್ಞತೆ ಸಲ್ಲಿಸುವುದನ್ನು ನಾನು ಕೇಳಿಸಿಕೊಂಡೆ: ಆ ವ್ಯಕ್ತಿ ಪೋಪ್ ಫ್ರಾನ್ಸಿಸ್. ಹವಾನಾದಲ್ಲಿದ್ದ ಐದು ದಿನಗಳ ಕಾಲ ನನಗೆ ಮಾರ್ಗದರ್ಶಿ ಮತ್ತು ಚಾಲಕರಾಗಿದ್ದವರು ಕ್ಯೂಬಾದ ಕಪ್ಪು ವರ್ಣೀಯ ವ್ಯಕ್ತಿ ಮಾರ್ಸೆಲಿನೊ.

ಈ ಬಗ್ಗೆ ಅವರ ಅಭಿಪ್ರಾಯ ಆಸಕ್ತಿಕರವಾಗಿದೆ: ‘ಶ್ವೇತಭವನದಲ್ಲಿ ಕಪ್ಪು ವರ್ಣೀಯ ಅಧ್ಯಕ್ಷ ಮತ್ತು ವ್ಯಾಟಿಕನ್‌ನಲ್ಲಿ ಲ್ಯಾಟಿನ್ ಅಮೆರಿಕ ಪ್ರದೇಶದಿಂದ ಬಂದ ಪೋಪ್ ಇದ್ದಾಗ ಕ್ಯೂಬಾ ಮತ್ತು ಅಮೆರಿಕ ನಡುವಣ ಸಂಬಂಧ ಸಹಜ ಸ್ಥಿತಿಗೆ ಬರುತ್ತದೆ ಎಂದು 1970ರ ದಶಕದಲ್ಲಿಯೇ ಫಿಡೆಲ್ ಭವಿಷ್ಯ ನುಡಿದಿದ್ದರು’ ಎಂದು ಮಾರ್ಸೆಲಿನೊ ಹೇಳಿದರು. ಈ ‘ಭವಿಷ್ಯ’ ಸತ್ಯವಲ್ಲದೇ ಇರುವ ಸಾಧ್ಯತೆಯೇ ಹೆಚ್ಚು. ಹಾಗಿದ್ದರೂ ಇದು ಬರಾಕ್ ಒಬಾಮ, ಪೋಪ್ ಫ್ರಾನ್ಸಿಸ್ ಮತ್ತು ಕ್ಯಾಸ್ಟ್ರೊ ಸಹೋದರರಾದ ಫಿಡೆಲ್ ಮತ್ತು ರಾಲ್‌ಗೆ ಕ್ಯೂಬಾದ ಜನರು ನೀಡುತ್ತಿರುವ ಗೌರವ.

ಕ್ಯೂಬಾದ ಹೆಚ್ಚು ಜನಪ್ರಿಯ ನಾಯಕನಾಗಿದ್ದ ಫಿಡೆಲ್ ಕೈಯಿಂದ 2008ರಲ್ಲಿ ಸಹೋದರ ರಾಲ್ ಅಧಿಕಾರ ವಹಿಸಿಕೊಂಡರು. ರಾಲ್ ಮೇ ತಿಂಗಳಿನಲ್ಲಿ ವ್ಯಾಟಿಕನ್‌ಗೆ ಹೋಗಿ ಪೋಪ್ ಫ್ರಾನ್ಸಿಸ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು. ರಾಲ್ ಅವರು ಪೋಪ್ ಫ್ರಾನ್ಸಿಸ್‌ರಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ಕಮ್ಯುನಿಸ್ಟರಾಗಿರುವ ತಾವು ಮತ್ತೆ ಕ್ಯಾಥೊಲಿಕ್ ಚರ್ಚ್‌ಗೆ ಹಿಂದಿರುಗುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದರು.

ಅಮೆರಿಕ ಮತ್ತು ಕ್ಯೂಬಾ ನಡುವಣ ಶತ್ರುತ್ವಕ್ಕೆ ಅಹಿಂಸಾತ್ಮಕ ಕೊನೆ ಕಾಣಿಸಲು ಕೊಡುಗೆ ನೀಡುವ ಮೂಲಕ ಒಬಾಮ ಅವರು 2009ರಲ್ಲಿ ಪಡೆದುಕೊಂಡ ನೊಬೆಲ್ ಶಾಂತಿ ಪ್ರಶಸ್ತಿಗೆ  ಸ್ವಲ್ಪಮಟ್ಟಿಗೆ ಸಮರ್ಥನೆ ಸಿಕ್ಕಂತಾಗಿದೆ. ಈ ವರ್ಷ ಒಬಾಮ ಅವರು ಕ್ಯೂಬಾಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ಕ್ಯೂಬಾದೊಂದಿಗಿನ ಸಂಬಂಧದಲ್ಲಿ ಅಮೆರಿಕ, ಕಳೆದುಹೋದ ಇತಿಹಾಸದ ಬಂದಿಯಾಗಿಯೇ ಇರಬಾರದು ಎಂದು ಅವರು ನೇರವಾಗಿ ಹೇಳಿದ್ದಾರೆ. ಕ್ಯೂಬಾವನ್ನು ಮೂಲೆಗುಂಪು ಮಾಡುವ ಪ್ರಯತ್ನದಲ್ಲಿ ಅಂತರರಾಷ್ಟ್ರೀಯ ಸಮುದಾಯದಲ್ಲಿ, ಅದರಲ್ಲೂ ವಿಶೇಷವಾಗಿ ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ ಅಮೆರಿಕವೇ ಏಕಾಂಗಿಯಾಗಿಬಿಟ್ಟಿತ್ತು. ಇಲ್ಲಿನ ಬಹುತೇಕ ದೇಶಗಳು ಅಮೆರಿಕದ ಕ್ಯೂಬಾ ವಿರೋಧಿ ನೀತಿಗೆ ವಿರುದ್ಧವೇ ಇವೆ.

ಸ್ನೇಹ ಸಂಧಾನದ ಹಾದಿಯಲ್ಲಿ ಅರ್ಧ ಹಾದಿ ಸಾಗಿ ರಾಲ್ ಕ್ಯಾಸ್ಟ್ರೊ ಅವರು ಒಬಾಮ ಅವರನ್ನು ಭೇಟಿಯಾದರು. ಪೋಪ್ ಫ್ರಾನ್ಸಿಸ್ ಮತ್ತು ಅವರ ದೂತರು ಎರಡೂ ದೇಶಗಳ ನಡುವೆ ವಿಶ್ವಾಸ ವೃದ್ಧಿ ಮಾತುಕತೆಯಲ್ಲಿ ದೊಡ್ಡ ಪಾತ್ರ ವಹಿಸಿದರು. ವಿದೇಶಾಂಗ ನೀತಿಯ ಜೊತೆಗೆ ದೇಶವನ್ನು ಬಡತನದಲ್ಲಿಯೇ ಉಳಿಸಿದ ಸೋವಿಯತ್ ಶೈಲಿಯ ಅತ್ಯಂತ ಅದಕ್ಷ ಮತ್ತು ಪಳೆಯುಳಿಕೆ ರೀತಿಯ ಅರ್ಥ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಂಡ ರಾಲ್ ಬಗ್ಗೆ ಕ್ಯೂಬಾದಲ್ಲಿ ನಾನು ಮಾತನಾಡಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಥ ವ್ಯವಸ್ಥೆಯ ಸಂಕಷ್ಟದಿಂದಾಗಿ ‘ತೊಟ್ಟಿಲಿನಿಂದ ಸಮಾಧಿ’ವರೆಗಿನ ಪ್ರಸಿದ್ಧ ಸಾಮಾಜಿಕ ಭದ್ರತೆಯ ವ್ಯವಸ್ಥೆಯನ್ನು ನಿರ್ವಹಿಸುವುದು ಕ್ಯೂಬಾಕ್ಕೆ ಕಷ್ಟವಾಗುತ್ತಿದೆ. ‘ಫಿಡೆಲ್ ಜಗತ್ತನ್ನೇ ಸರಿ ಮಾಡಲು ಹೊರಟಿದ್ದರು. ಆದರೆ ರಾಲ್ ಕ್ಯೂಬಾವನ್ನು ಸರಿ ಮಾಡಲು ಹೊರಟಿದ್ದಾರೆ’ ಎಂದು ನನ್ನೊಂದಿಗೆ ಮಾತನಾಡುತ್ತಾ ಮಾರ್ಕ್ ಫ್ರಾಂಕ್ ಹೇಳಿದರು. ರಾಯಿಟರ್ಸ್‌ಗೆ ದೀರ್ಘ ಕಾಲದಿಂದ ಹವಾನಾದ ವರದಿಗಾರನಾಗಿ ಫ್ರಾಂಕ್ ಕೆಲಸ ಮಾಡುತ್ತಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರುವ ‘ಕ್ಯೂಬನ್ ರಿವಿಲೇಷನ್ಸ್-ಬಿಹೈಂಡ್ ದ ಸೀನ್ಸ್ ಇನ್ ಹವಾನಾ’ ಎಂಬ ಕೃತಿಯನ್ನು ರಚಿಸಿದ್ದಾರೆ.

ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಆದ ಹಾಗೆಯೇ, ಕ್ಯೂಬಾದಲ್ಲಿಯೂ ಕೆಲಸದ ಸಂಸ್ಕೃತಿ ಕುಸಿಯುತ್ತಲೇ ಹೋಗಿತ್ತು. ಯಾಕೆಂದರೆ ದಕ್ಷ ಕಾರ್ಯನಿರ್ವಹಣೆಗೆ ಇದ್ದ ಪ್ರೋತ್ಸಾಹ ಅತ್ಯಲ್ಪವಾಗಿತ್ತು. ಇದರಿಂದಾಗಿಯೇ ನೇರ ಮಾತಿನ ರಾಲ್ ತಮ್ಮ ದೇಶದ ಜನರನ್ನು ಉದ್ದೇಶಿಸಿ ಹೀಗೆ ಹೇಳಿದ್ದಾರೆ: ‘ಕೆಲಸ ಮಾಡದೆ ಜನರು ಜೀವಿಸುವುದಕ್ಕೆ ಸಾಧ್ಯ ಇರುವ ಜಗತ್ತಿನ ಏಕೈಕ ದೇಶ ಕ್ಯೂಬಾ ಎಂಬ ಭಾವನೆಯನ್ನು ನಾವು ಶಾಶ್ವತವಾಗಿ ಅಳಿಸಿ ಹಾಕಬೇಕಿದೆ’.

ಸರ್ಕಾರದ ನೇರ ಉದ್ಯೋಗದ ಅಡಿಯಲ್ಲಿ ಕೆಲಸ ಮಾಡುವ ಭಾರಿ ಪ್ರಮಾಣದ ಕಾರ್ಮಿಕ ಪಡೆಯ ಸಂಖ್ಯೆಯನ್ನು ರಾಲ್ ಗಣನೀಯವಾಗಿ ಕಡಿತ ಮಾಡಿದ್ದಾರೆ. ಇಲ್ಲಿ ಕ್ಷೌರಿಕರು ಕೂಡ ಸರ್ಕಾರಿ ನೌಕರರು. ಹೆಚ್ಚು ಕೆಲಸ ಮಾಡುವ ಮೂಲಕ ಜನರು ತಮ್ಮದೇ ಆದ ರೀತಿಯಲ್ಲಿ ಹೆಚ್ಚು ಗಳಿಸುವುದಕ್ಕೆ ಈಗ ಅವಕಾಶ ನೀಡಲಾಗಿದೆ.

ಕಮ್ಯುನಿಸ್ಟ್ ಸಿದ್ಧಾಂತಗಳಿಂದ ದೂರ ಸರಿಯುತ್ತಿರುವ ರಾಲ್, ಪ್ರವಾಸೋದ್ಯಮವೂ ಸೇರಿದಂತೆ ಹೆಚ್ಚು ಹೆಚ್ಚು ವಲಯಗಳಲ್ಲಿ ಖಾಸಗಿ ಮತ್ತು ಸಹಕಾರಿ ರಂಗದ ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ರಮಣೀಯ ಕಡಲ ಕಿನಾರೆಗಳಿಂದಾಗಿ ಕ್ಯೂಬಾಕ್ಕೆ ಜಗತ್ತಿನ ವಿವಿಧ ಭಾಗಗಳಿಂದ ಮತ್ತು ವಿಶೇಷವಾಗಿ ಅಮೆರಿಕದಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಇದೆ.

ಕ್ಯೂಬಾ ವಿರುದ್ಧ ಅಮೆರಿಕ ಹೇರಿರುವ ಸಮರ್ಥನೀಯವಲ್ಲದ ಆರ್ಥಿಕ ನಿರ್ಬಂಧಗಳನ್ನು ಇನ್ನೂ  ಹಿಂತೆಗೆಯಲಾಗಿಲ್ಲ. ಆದರೆ ಅದು ಸದ್ಯವೇ ಆಗಲಿದೆ. ನಿಜವಾದ ಪ್ರಶ್ನೆ ಏನೆಂದರೆ, ಅಮೆರಿಕದೊಂದಿಗಿನ ಸಂಬಂಧ ಸಹಜಗೊಳ್ಳುವುದರಿಂದ ಉಂಟಾಗುವ ಪರಿಣಾಮಗಳು ಏನು? ಖಂಡಿತವಾಗಿಯೂ ಕ್ಯೂಬಾ ಹೆಚ್ಚು ಸಮೃದ್ಧಗೊಳ್ಳಲಿದೆ.

ಆದರೆ ಈ ಪ್ರಕ್ರಿಯೆಯಲ್ಲಿ ಕ್ಯೂಬಾ ‘ಅಮೆರಿಕೀಕರಣ’ಗೊಳ್ಳಲಿದೆಯೇ? ರಾಲ್ 2018ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕ್ಯೂಬಾದ ಬಗ್ಗೆ ಅಭಿಮಾನ ಇರಿಸಿಕೊಂಡಿರುವ ಹಲವರಲ್ಲಿ ಕಾಡುವ ಪ್ರಶ್ನೆ ಹೀಗಿದೆ: ಫಿಡೆಲ್ ನಡೆಸಿದ ಕ್ರಾಂತಿ ತಂದು ಕೊಟ್ಟ ಅಮೂಲ್ಯವಾದ ಲಾಭಗಳಾದ ಅಂತರರಾಷ್ಟ್ರೀಯ ಸ್ಫೂರ್ತಿ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯ ಪರ್ಯಾಯ ಮಾದರಿಗಳನ್ನು ಉಳಿಸಿಕೊಳ್ಳಲು ಕ್ಯೂಬಾಕ್ಕೆ ಸಾಧ್ಯವಾಗಲಿದೆಯೇ?

ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಕ್ಯೂಬಾ ಮಾಡಿರುವ ಸಾಧನೆಗಳ ಕೆಲವು ಅಚ್ಚರಿದಾಯಕ ನಿದರ್ಶನಗಳು ಇಲ್ಲಿವೆ. ಕ್ಯೂಬಾದಲ್ಲಿ ಎಲ್ಲ ಪ್ರಜೆಗಳಿಗೆ ಎಲ್ಲ ಹಂತಗಳಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಉಚಿತವಾಗಿದೆ. ಬಡ ಕ್ಯೂಬಾದ ಆರೋಗ್ಯ ರಕ್ಷಣೆ ವ್ಯವಸ್ಥೆ ಶ್ರೀಮಂತ ಅಮೆರಿಕಕ್ಕಿಂತ ಉತ್ತಮವಾಗಿದೆ. ಶಿಶು ಮರಣ ಪ್ರಮಾಣ ಇಲ್ಲಿ ಸಾವಿರಕ್ಕೆ 4.2 (ಭಾರತದಲ್ಲಿ ಇದು 41). ಕ್ಯೂಬಾದಲ್ಲಿ ವೈದ್ಯರಿಗೆ ನೀಡುವ ತರಬೇತಿ ದೇಶದೊಳಗಿನ ಸೇವೆಗಾಗಿ ಮಾತ್ರ ಅಲ್ಲ, ಅಭಿವೃದ್ಧಿ ಹೊಂದುತ್ತಿರುವ ಇತರ ದೇಶಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿಯೂ ತರಬೇತಿ ನೀಡಲಾಗುತ್ತದೆ.

ಜಗತ್ತಿನ 103 ದೇಶಗಳಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಕ್ಯೂಬಾ 60 ಸಾವಿರ ವೈದ್ಯರನ್ನು ಕಳುಹಿಸಿಕೊಟ್ಟಿದೆ. ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ 2014ರಲ್ಲಿ ಮರು ಆಯ್ಕೆಗೊಳ್ಳಲು ಮುಖ್ಯ ಕಾರಣ ಕ್ಯೂಬಾದ ವೈದ್ಯರು. ಬ್ರೆಜಿಲ್‌ನ ವೈದ್ಯರು ಸೇವೆ ಸಲ್ಲಿಸಲು ನಿರಾಕರಿಸಿದ (ಭಾರತದಲ್ಲಿಯೂ ಇಂತಹುದೇ ಪರಿಸ್ಥಿತಿ ಇದೆ) ದೂರದ ಕುಗ್ರಾಮಗಳು ಮತ್ತು ಕೊಳೆಗೇರಿಗಳಿಗೆ ಹೋಗಿ ಕ್ಯೂಬಾದ 11 ಸಾವಿರ ವೈದ್ಯರು ಸೇವೆ ಸಲ್ಲಿಸಿದ್ದಾರೆ.

‘ಇದು ಇರುವೆಯೊಂದು ಆನೆಗೆ ರಕ್ತದಾನ ಮಾಡಿದಂತೆ’ ಎಂದು ಕ್ಯೂಬಾದಲ್ಲಿರುವ ಭಾರತದ ರಾಯಭಾರಿ ಸಿ. ರಾಜಶೇಖರ್ ಹೇಳಿದರು. ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಎಬೋಲಾ ಸೋಂಕಿನ ವಿರುದ್ಧ ಹೋರಾಡಲು ಕ್ಯೂಬಾ 500 ವೈದ್ಯರನ್ನು ಕಳುಹಿಸಿದೆ. ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಂಡು ಸಲ್ಲಿಸಿದ ಸೇವೆಗಾಗಿ ಅವರನ್ನು ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸಲು ಚಿಂತನೆ ನಡೆದಿದೆ.

ತಾಯಿಯಿಂದ ಮಗುವಿಗೆ ಎಚ್‍ಐವಿ ಸೋಂಕು ಹರಡುವಿಕೆಯನ್ನು ಸಂಪೂರ್ಣವಾಗಿ ತಡೆದ ಜಗತ್ತಿನ ಮೊದಲ ದೇಶ ಕ್ಯೂಬಾ ಎಂದು ಜೂನ್ 29ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ. ‘ವೈರಸ್‌ ಹರಡುವಿಕೆಯನ್ನು ತಡೆದಿರುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತ್ಯಂತ ದೊಡ್ಡ ಸಾಧನೆ’ ಎಂದು ಡಬ್ಲ್ಯುಎಚ್‌ಒ ಪ್ರಧಾನ ಕಾರ್ಯದರ್ಶಿ ಡಾ. ಮಾರ್ಗರೆಟ್‌ ಚಾನ್‌ ಹೇಳಿದ್ದಾರೆ. ‘ಇದು ಎಚ್‌ಐವಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧದ ಹೋರಾಟದಲ್ಲಿ ದೊರೆತ ದೊಡ್ಡ ಜಯ ಮತ್ತು ಏಡ್ಸ್‌ ಮುಕ್ತ  ತಲೆಮಾರು ಸೃಷ್ಟಿಯತ್ತ ಇಡಲಾದ ಅತ್ಯಂತ ದೊಡ್ಡ ಹೆಜ್ಜೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ 1.2 ಕೋಟಿ ಜನಸಂಖ್ಯೆ ಹೊಂದಿರುವ ಕಮ್ಯುನಿಸ್ಟ್‌ ಕ್ಯೂಬಾ ಕ್ರೀಡೆಯಲ್ಲಿಯೂ ಅಪ್ರತಿಮ ಸಾಧನೆ ಮೆರೆದಿದೆ. 1959ರ ಕ್ರಾಂತಿಗೆ ಮೊದಲು ಕ್ಯೂಬಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೇವಲ 13 ಪದಕಗಳನ್ನು (ನಾಲ್ಕು ಚಿನ್ನ) ಗೆದ್ದಿತ್ತು. ಆದರೆ ನಂತರ 221 ಪದಕಗಳನ್ನು ಗೆದ್ದಿದೆ. ಅದರಲ್ಲಿ 67 ಚಿನ್ನ. ಇದಕ್ಕೆ ಭಾರತವನ್ನು ಹೋಲಿಸಿದರೆ ನಾವು ಈವರೆಗೆ ಒಲಿಂಪಿಕ್ಸ್‌ನಲ್ಲಿ ಗೆದ್ದಿರುವುದು 26 ಪದಕಗಳನ್ನು ಮಾತ್ರ. ಅದರಲ್ಲಿ 9 ಮಾತ್ರ ಚಿನ್ನ.

ಕಮ್ಯುನಿಸ್ಟ್‌ ಆಡಳಿತದಲ್ಲಿ ಕ್ಯೂಬಾ ದೇಶವು ಸಾಮಾಜಿಕ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಈ ಸಾಧನೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಬಹುದೊಡ್ಡ ಪಾಠವಾಗಬಹುದು. ಹೀಗಿದ್ದರೂ ಹಲವು ವಿಷಯಗಳಲ್ಲಿ ಕ್ಯೂಬಾ ಬಹಳ ಬಡವಾಗಿಯೇ ಉಳಿದಿದೆ. ಇದರ ಪರಿಣಾಮವಾಗಿ ಸುಮಾರು 20 ಲಕ್ಷದಷ್ಟು ಕ್ಯೂಬನ್ನರು ಒಳ್ಳೆಯ ಅವಕಾಶಗಳನ್ನು ಹುಡುಕಿಕೊಂಡು ಹವಾನಾದಿಂದ ಕೇವಲ 145 ಕಿಲೊ ಮೀಟರ್‌ ದೂರದಲ್ಲಿರುವ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ.

ಕ್ಯಾಸ್ಟ್ರೋತ್ತರ ಮತ್ತು ಬಹುಶಃ ಕಮ್ಯುನಿಸ್ಟೋತ್ತರ ಯುಗದೆಡೆಗಿನ ಕ್ಯೂಬಾದ ಸಂಕೀರ್ಣ ಪಲ್ಲಟ-ಅಮೆರಿಕದೊಂದಿಗೆ ಮುರಿದು ಹೋಗಿದ್ದ ಸಂಬಂಧದ ಮರುಸ್ಥಾಪನೆ ತ್ವರಿತಗೊಳಿಸುವುದರಲ್ಲಿ ಅನುಮಾನ ಇಲ್ಲ. ಆಂತರಿಕವಾಗಿ ಮತ್ತು ಬಾಹ್ಯವಾಗಿ ಮಹತ್ವದ ಪರಿವರ್ತನೆಗೆ ಒಳಗಾಗುತ್ತಿರುವ ಕ್ಯೂಬಾಕ್ಕೆ ನಾವೆಲ್ಲರೂ ಶುಭ ಹಾರೈಸಬೇಕು. ಈ ದೇಶ ಅತ್ಯುತ್ತಮ ಭವಿಷ್ಯದತ್ತ ಪ್ರಗತಿ ಹೊಂದಲಿ, ತನ್ನ ಹಿಂದಿನ ಅತ್ಯುತ್ತಮ ಸಾಧನೆಗಳನ್ನು ಹಾಗೆಯೇ ಸಂರಕ್ಷಿಸಿಕೊಂಡು ಹೋಗಲಿ.

ಲೇಖಕ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆಪ್ತರಾಗಿದ್ದವರು
editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.