ADVERTISEMENT

ಒಕ್ಕೂಟ ವ್ಯವಸ್ಥೆಗೆ ಆಗಲಿದೆಯೇ ಧಕ್ಕೆ?

15ನೇ ಹಣಕಾಸು ಆಯೋಗದ ಕಾರ್ಯ ವ್ಯಾಪ್ತಿ ಕುರಿತ ವಿವಾದ...

ಬಿ.ಎಸ್.ಸೂರ್ಯಪ್ರಕಾಶ್
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST
ಒಕ್ಕೂಟ ವ್ಯವಸ್ಥೆಗೆ ಆಗಲಿದೆಯೇ ಧಕ್ಕೆ?
ಒಕ್ಕೂಟ ವ್ಯವಸ್ಥೆಗೆ ಆಗಲಿದೆಯೇ ಧಕ್ಕೆ?   

* ಹಣಕಾಸು ಆಯೋಗವೆಂದರೆ ಏನು? ಅದರ ಕಾರ್ಯವ್ಯಾಪ್ತಿ ಎಂಥದ್ದು?
ಸಂವಿಧಾನದ 280ನೇ ವಿಧಿಯ ಅಡಿ ರಾಷ್ಟ್ರಪತಿಯವರು ಸುಮಾರು ಐದು ವರ್ಷಗಳಿಗೊಮ್ಮೆ ರಚಿಸುವ ಸಾಂವಿಧಾನಿಕ ಸಂಸ್ಥೆ (constitutional body) ಇದು. ಆರ್ಥಿಕ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರು ಇದರ ಸದಸ್ಯರಾಗಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತೆರಿಗೆಗಳ ಮೂಲಕ ಸಂಗ್ರಹಿಸುವ ಆದಾಯವನ್ನು ಹಂಚಿಕೊಳ್ಳುವ ವಿಧಾನ ಹೇಗಿರಬೇಕು ಎಂದು ಹೇಳುವುದು ಈ ಆಯೋಗದ ಮುಖ್ಯ ಉದ್ದೇಶ.

* ಇದು ಏಕೆ ಈಗ ಸುದ್ದಿಯಲ್ಲಿದೆ?
15ನೇ ಹಣಕಾಸು ಆಯೋಗವನ್ನು ಕೆಲವು ದಿನಗಳ ಹಿಂದೆಯಷ್ಟೇ ರಚಿಸಲಾಗಿದ್ದು ಅದರ ಕಾರ್ಯ ಷರತ್ತುಗಳನ್ನು (Terms of Reference- ToR) ಸೂಚಿಸಲಾಗಿದೆ. ಈ ಆಯೋಗವು ರಾಜ್ಯ ಸರ್ಕಾರಗಳ ಮತ್ತು ತಜ್ಞರ ಸಲಹೆ ಪಡೆದು ತನ್ನ ವರದಿಯನ್ನು ಇನ್ನೆರಡು ವರ್ಷಗಳೊಳಗೆ ನೀಡಬೇಕು.

* ಜನಸಾಮಾನ್ಯರಿಗೆ ಇದು ಹೇಗೆ ಪ್ರಸ್ತುತ?
ಸರ್ಕಾರವು ನಾಗರಿಕರ ಹಿತಕ್ಕಾಗಿ ಕೆಲಸ ಮಾಡುವುದು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ, ಸೌಲಭ್ಯಗಳನ್ನು ಕಲ್ಪಿಸುವ ಮೂಲಕ. ಇದಕ್ಕೆ ಅಗತ್ಯವಿರುವ ಹಣಕಾಸಿಗಾಗಿ ಸರ್ಕಾರವು ತೆರಿಗೆ ಸಂಗ್ರಹ ಮಾಡುತ್ತದೆ. ಆದರೆ, ನಾಗರಿಕರಿಗೆ ಹಣ ಖರ್ಚು ಮಾಡುವ ಸರ್ಕಾರ ಒಂದಾಗಿದ್ದು, ತೆರಿಗೆ ಸಂಗ್ರಹಿಸುವ ಸರ್ಕಾರ ಇನ್ನೊಂದಾಗಿದ್ದರೆ ಸಮಸ್ಯೆಗಳನ್ನು ನಿಭಾಯಿಸುವುದು ಜಟಿಲವಾಗುತ್ತದೆ. ನಾಗರಿಕರಿಗೆ ಅತ್ಯಂತ ಸಮೀಪದಲ್ಲಿರುವ ಸರ್ಕಾರದ ಬಳಿ ಸಾಕಷ್ಟು ಹಣ ಇಲ್ಲದಿದ್ದರೆ, ಅದು ಒದಗಿಸುವ ಸೌಲಭ್ಯಗಳಲ್ಲಿ ಕೊರತೆ ಉಂಟಾಗುವುದು ಸಹಜ.

ADVERTISEMENT

* ಯಾವ ಬಗೆಯ ಅನುದಾನಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ?
ಸಂವಿಧಾನವು ಎರಡು ಬಗೆಯ ಅನುದಾನಗಳಿಗೆ ಅವಕಾಶ ಕಲ್ಪಿಸಿದೆ. ಅವು, ಸಾರ್ವತ್ರಿಕ (general) ಮತ್ತು ವಿಶೇಷ (special) ಅನುದಾನಗಳು. ಸಾರ್ವತ್ರಿಕ ಅನುದಾನಗಳಿಗೆ ಯಾವುದೇ ಷರತ್ತುಗಳಿರುವುದಿಲ್ಲ. ಇಂತಹ ಅನುದಾನಗಳನ್ನು ರಾಜ್ಯ ಸರ್ಕಾರಗಳು ಯಾವ ಉದ್ದೇಶಕ್ಕಾದರೂ ಬಳಸಬಹುದು.

ವಿಶೇಷ ಅನುದಾನವನ್ನು ಕೆಲವು ರಾಜ್ಯಗಳಿಗೆ, ಕೆಲವು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಬಳಸಲು ನೀಡಲಾಗುತ್ತದೆ. ಇಂತಹ ಅನುದಾನವನ್ನು ಹಣಕಾಸು ಆಯೋಗದ ಶಿಫಾರಸಿನ ಆಧಾರದ ಮೇಲೆ ನೀಡಬಹುದು. ಅಥವಾ ಕೇಂದ್ರ ಸರ್ಕಾರದ ಯೋಜನೆಗಳ ಅಡಿ (ಉದಾಹರಣೆಗೆ: ಸ್ವಚ್ಛ ಭಾರತ್, ನರೆಗಾ) ಆಯಾ ಸಚಿವಾಲಯಗಳು ನೀಡಬಹುದು.

* 15ನೇ ಹಣಕಾಸು ಆಯೋಗದ ToR ಏನು? ಅದು ಹಿಂದಿನ ಆಯೋಗಗಳ ToRಗಳಿಗಿಂತ ಹೇಗೆ ಭಿನ್ನ? ಅದು ಏಕೆ ವಿವಾದಾಸ್ಪದ?
ಆಯೋಗಕ್ಕೆ ಸಂಬಂಧಿಸಿದ ಗೆಜೆಟ್ ವರದಿಯನ್ನು ಈ ವೆಬ್ ಕೊಂಡಿ (https://goo.gl/9uvF4H) ಬಳಸಿ ಪಡೆಯಬಹುದು. ಮೇಲ್ನೋಟಕ್ಕೆ ಇದು, ಹಿಂದಿನ ಆಯೋಗಕ್ಕೆ ವಿಧಿಸಲಾಗಿದ್ದ ToRಗಳಂತೆಯೇ, ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಆದಾಯ ಹಂಚಿಕೆಯ ಬಗ್ಗೆ ಇರುವಂತೆ ಕಾಣುತ್ತದೆ. ಆದರೆ, ಆರನೆಯ ಪ್ಯಾರಾವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದರಲ್ಲಿ ಈ ಆಯೋಗದ ToRಗಳನ್ನು ಹೀಗೆ ಹೇಳಲಾಗಿದೆ: ‘ರಾಜ್ಯಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಎಷ್ಟು ಸಫಲವಾಗಿವೆ, ರಾಜ್ಯಗಳು ತಮ್ಮ ಹಣಕಾಸು ನಿರ್ವಹಣೆ ಮಾಡುವ ವಿಧಾನ ಹೇಗಿದೆ, ಅವು ದುಂದುವೆಚ್ಚ ಮಾಡುವ ಪ್ರವೃತ್ತಿಯುಳ್ಳವೇ?’

ರಾಜ್ಯಗಳಿಗೆ ಅನುದಾನ ನೀಡುವುದಕ್ಕೆ ಪ್ರತಿಯಾಗಿ ಅವುಗಳ ಕಾರ್ಯಕ್ಷಮತೆಯ ಮಟ್ಟ ಅಳೆಯುವುದು ಎಷ್ಟರಮಟ್ಟಿಗೆ ಸೂಕ್ತ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ಕೇಂದ್ರ ಸರ್ಕಾರದ ತೆರಿಗೆಗಳಲ್ಲಿ ರಾಜ್ಯಗಳು ಪಾಲು ಪಡೆಯುವುದು ರಾಜ್ಯಗಳ ಸಾಂವಿಧಾನಿಕ ಹಕ್ಕು. ಇದನ್ನು ನೀಡಲು ಆಯೋಗವು ಮೌಲ್ಯಮಾಪನ ಮಾಡುವುದರ ಔಚಿತ್ಯ ಏನು ಎಂಬ ಬಗ್ಗೆಯೇ ಚರ್ಚೆ ನಡೆಯಬೇಕಾಗಿದೆ.

* ಈ ToRನಿಂದ ಆಗಬಹುದಾದ ಪರಿಣಾಮಗಳೇನು?
ಹದಿನೈದನೆಯ ಹಣಕಾಸು ಆಯೋಗದ ಕಾರ್ಯ ಷರತ್ತುಗಳಲ್ಲಿ ಹೇಳಿರುವ ಎರಡು ಅಂಶಗಳು ಸಂವಿಧಾನ ಹೇಳುವ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುವಂತೆ ಇವೆ. ಈ ಅಂಶಗಳನ್ನು ಹಣಕಾಸು ಆಯೋಗವು ಪ್ರಬಲವಾಗಿ ಪ್ರತಿಪಾದಿಸಿದರೆ, ರಾಜ್ಯ ಸರ್ಕಾರಗಳ ಹಣಕಾಸು ವ್ಯವಸ್ಥೆ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ, ನೀತಿಗಳನ್ನು ರೂಪಿಸುವಲ್ಲಿನ ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಧಕ್ಕೆ ಬರುತ್ತದೆ.

ಆದಾಯ ಕೊರತೆ ಅನುದಾನದಲ್ಲಿ ರಾಜ್ಯಗಳು ₹ 1.9 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳಬೇಕಾಗಬಹುದು. ಆದಾಯ ಕೊರತೆ ಅನುದಾನವನ್ನು ಕೊಡಬೇಕಾಗಿಯೇ ಇಲ್ಲ ಎನ್ನುವ ಮೂಲಕ ಈ ಹಣಕಾಸು ಆಯೋಗವವನ್ನು, ಸಂವಿಧಾನದ 275(1) ಮತ್ತು 280(3ಬಿ) ವಿಧಿಗಳಲ್ಲಿ ಹೇಳಿರುವುದನ್ನೇ ಉಲ್ಲಂಘಿಸುವತ್ತ ಒಯ್ಯಲಾಗಿದೆ. ಹನ್ನೊಂದು ರಾಜ್ಯಗಳಿಗೆ ಆದಾಯ ಕೊರತೆ ಅನುದಾನದ ರೂಪದಲ್ಲಿ ಒಟ್ಟು ₹ 1.94 ಲಕ್ಷ ಕೋಟಿ ಹಣ ನೀಡಬೇಕು ಎಂದು ಹದಿನಾಲ್ಕನೆಯ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಸಾರ್ವಜನಿಕ ವೆಚ್ಚದ ಶೇಕಡ 60ರಷ್ಟು ಹಣವನ್ನು ಪಡೆದರೂ, ಆದಾಯದ ಶೇಕಡ 37ರಷ್ಟನ್ನು ಮಾತ್ರ ಸಂಗ್ರಹಿಸುವ ಈ ರಾಜ್ಯಗಳಲ್ಲಿನ ಅಸಮಾನತೆಯನ್ನು ಸರಿದೂಗಿಸಲು ಈ ಶಿಫಾರಸು ಮಾಡಲಾಗಿತ್ತು.

ರಾಜ್ಯಗಳು ನೀತಿ ನಿರೂಪಣೆ ವಿಚಾರದಲ್ಲಿ ತಮ್ಮ ಸ್ವಾಯತ್ತತೆ ಕಳೆದುಕೊಂಡು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಕೆಲಸಕ್ಕೇ ಸೀಮಿತಗೊಳ್ಳಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ.

ಹದಿನಾಲ್ಕನೆಯ ಹಣಕಾಸು ಆಯೋಗದ ಶಿಫಾರಸಿನಲ್ಲಿ ಇದ್ದ, ರಾಜ್ಯಗಳಿಗೆ ಹೆಚ್ಚಿನ ಅನುದಾನ ವರ್ಗಾವಣೆ ಮಾಡುವ ಅಂಶವನ್ನು ಪುನರ್‌ ಪರಿಶೀಲನೆ ಮಾಡಲು ಸೂಚಿಸುವ ಮೂಲಕ, ರಾಜ್ಯಗಳಿಗೆ ಸಂದಾಯ ಆಗುತ್ತಿದ್ದ ತೆರಿಗೆ ಪಾಲನ್ನು ಕಡಿಮೆ ಮಾಡುವ ಕೆಲಸಕ್ಕೆ ಈ ಆಯೋಗವನ್ನು ಮುಂದು ಮಾಡಲಾಗುತ್ತಿದೆ. ಅಂದರೆ, ತಮ್ಮ ಆದ್ಯತೆಯ ಅಭಿವೃದ್ಧಿ ಕಾರ್ಯಗಳು ಯಾವುವು ಎಂಬುದನ್ನು ತೀರ್ಮಾನಿಸಲು ಅವಕಾಶ ಸಿಗುವಷ್ಟು ಹಣ ರಾಜ್ಯಗಳಿಗೆ ದೊರೆಯದೇ ಇರಬಹುದು.

* ಆಯೋಗದ ಶಿಫಾರಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳುವುದು ಅನಿವಾರ್ಯವೇ?
ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳುವುದು ಕಡ್ಡಾಯವಲ್ಲ. ಆದರೆ ಇದುವರೆಗೆ, ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿ ಜಾರಿಗೆ ತರಲಾಗಿದೆ.

* ಮುಂದಿನ ಕ್ರಮ ಏನಿರಬೇಕು?
ಆಯೋಗದ ಕಾರ್ಯ ಷರತ್ತುಗಳು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವ ಕಾರಣ, ರಾಜ್ಯ ಸರ್ಕಾರಗಳು ಮತ್ತು ನಾಗರಿಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಕಳವಳವನ್ನು ಆಯೋಗ ಮತ್ತು ಕೇಂದ್ರದ ಎದುರು ವ್ಯಕ್ತಪಡಿಸಬೇಕು.

* ರಾಜ್ಯ ಮಟ್ಟದಲ್ಲಿಯೂ ಹಣಕಾಸು ಆಯೋಗ ಸ್ಥಾಪಿಸಬೇಕೆ?  ಕರ್ನಾಟಕದಲ್ಲಿನ ಸ್ಥಿತಿ ಏನು?
ನಗರಾಡಳಿತ ಮತ್ತು ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುವ ಉದ್ದೇಶಕ್ಕೆ ರಾಜ್ಯ ಮಟ್ಟದಲ್ಲಿ ಕೂಡ ಆಯೋಗ ಸ್ಥಾಪಿಸುವ ಅಗತ್ಯ ಇದೆ. ಆದರೆ ಕರ್ನಾಟಕ (ಇತರ ಹಲವು ರಾಜ್ಯಗಳಂತೆ ) ಈ ವಿಚಾರದಲ್ಲಿ ಹಿಂದೆ ಉಳಿದಿದೆ. ಇದಕ್ಕೆ ಹಲವಾರು ಕಾರಣಗಳಿವೆ. ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಮುಖ್ಯವಾದುದು ಎಂದು ಅನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.