ಶೈಕ್ಷಣಿಕವಾಗಿ ಗಣಿತ, ವಿಜ್ಞಾನ ಬಹಳ ಮುಖ್ಯ ಎಂಬ ಚಿಂತನೆಯೊಂದು ಬಹುಕಾಲದಿಂದಲೂ ಇದೆ. ಕೆಲವು ಅನುದಾನರಹಿತ ಕಾಲೇಜುಗಳಲ್ಲಿ ಸರ್ಕಾರದ ನೀತಿಯ ಕಾರಣಕ್ಕಾಗಿಯಷ್ಟೆ ಭಾಷಾ ಪಠ್ಯಗಳಿದ್ದು, ಶೈಕ್ಷಣಿಕ ವರ್ಷದ ಮೂರು ತಿಂಗಳಲ್ಲಿ ಭಾಷಾ ಪಠ್ಯಗಳನ್ನು ಮುಗಿಸಿ ಉಳಿದ ಅವಧಿಯನ್ನು ಗಣಿತ, ವಿಜ್ಞಾನಕ್ಕೆ ಹಂಚಿಕೆ ಮಾಡುವ ಪದ್ಧತಿ ಇದೆ.
ಇತ್ತೀಚಿನ ದಿನಗಳಲ್ಲಿ ಇತಿಹಾಸದ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿದ್ದರೂ, ಚರ್ಚೆಯ ಉದ್ದೇಶ ಇತಿಹಾಸ ಪಠ್ಯವಾಗಿರದೆ ವರ್ತಮಾನದ ರಾಜಕೀಯವೇ ಆಗಿದೆ ಎನ್ನುವುದು ಸ್ಪಷ್ಟ. ಏಕೆಂದರೆ ಇತಿಹಾಸದ ಬಗ್ಗೆ ಚರ್ಚೆ ಮಾಡುತ್ತಿರುವ ಬಹುತೇಕರು ಐ.ಟಿ, ಬಿ.ಟಿ, ವೈದ್ಯಕೀಯದಂತಹ ಕ್ಷೇತ್ರದವರು. ಅಂದರೆ ಇತಿಹಾಸವನ್ನೇ ತಮ್ಮ ಆದ್ಯತೆಯಾಗಿ ಕಲಿಯಲು ಮನಸ್ಸಿಲ್ಲದವರು ಇತಿಹಾಸ ಕುರಿತು ಚರ್ಚಿಸುವುದು! ಈಗಲೂ ಕಾಲೇಜುಗಳಲ್ಲಿನ ಇತಿಹಾಸ ವಿಭಾಗ ತುಂಬಿ ತುಳುಕುತ್ತಾ ಇರುವ, ಪ್ರವೇಶವೇ ಸಿಗದೆ ವಿದ್ಯಾರ್ಥಿಗಳು ಕಷ್ಟಪಡುತ್ತಿರುವ ವಿಭಾಗವಲ್ಲ. ಅಂದರೆ ಇತಿಹಾಸದ ಕುರಿತ ಚರ್ಚೆಗಳು ಕೃತಕ ಪ್ರಚೋದನೆಯಿಂದ ಆಗುತ್ತಿವೆ. ಮಿಕ್ಕುಳಿದ ಕಲಿಕಾ ವಿಷಯಗಳಿಗೆ ಮಹತ್ವ ಇಲ್ಲ. ಅದರಲ್ಲೂ ದೈಹಿಕ ಶಿಕ್ಷಣ ತರಗತಿಗಳೇ ಅಪ್ರಸ್ತುತ ಎನ್ನುವ ಸ್ಥಿತಿಯಿದೆ.
ಸರ್ಕಾರದ ಆದೇಶದ ಅನಿವಾರ್ಯಕ್ಕೆ ಅಥವಾ ನಿರಂತರವಾಗಿ ಬಹುಮಾನ ಪಡೆಯುವ ನಿರ್ದಿಷ್ಟ ಶಾಲೆ, ಕಾಲೇಜನ್ನು ಗೆಲ್ಲಿಸಲಿಕ್ಕಾಗಿಯೇ ಉಳಿದ ಶಾಲಾ ಕಾಲೇಜುಗಳು ಸ್ಪರ್ಧಿಸುತ್ತವೆಯೇನೋ ಎಂಬಂತೆ ನಡೆಯುವ ಕ್ರೀಡಾಕೂಟಗಳ ಸಂದರ್ಭದಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರು ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
ಕಲಿಕಾ ವಿಷಯಗಳಲ್ಲಿ ಯಾವುದು ಮುಖ್ಯ ಎಂಬ ಧೋರಣೆ ಹೊಸದೇನೂ ಅಲ್ಲ. ಈ ರೀತಿಯ ವಿಷಯವಾರು ಮಹತ್ವವು ಆಯಾ ವಿಷಯಗಳ ಆಧಾರದಲ್ಲಿ ಸೃಷ್ಟಿಯಾಗುವ ಔದ್ಯೋಗಿಕ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಏನನ್ನು ಕಲಿತರೆ ಜಾಸ್ತಿ ವೇತನದ, ಉನ್ನತ ಸ್ಥಾನದ ಉದ್ಯೋಗ ಸಿಗುತ್ತದೆ ಎನ್ನುವುದು ಕಲಿಕಾ ವಿಷಯದ ಮಹತ್ವದ ಪರಿಕಲ್ಪನೆಯನ್ನು ರೂಪಿಸುತ್ತದೆ. ವಿಜ್ಞಾನ, ಗಣಿತಕ್ಕೆ ಈ ಕಾರಣದಿಂದ ಮಹತ್ವ ಬಂದಿದೆ. ಆದರೆ ಅಲ್ಲಿಯೂ ಮೂಲ ವಿಜ್ಞಾನ ಅಥವಾ ಗಣಿತ ಶಾಸ್ತ್ರದ ಅಧ್ಯಯನಕ್ಕೆ ಮಹತ್ವವಿಲ್ಲ. ಬದಲು ಅವುಗಳನ್ನು ಆಧರಿಸಿದ ಮಾರುಕಟ್ಟೆಯ ಆಯಾಮಗಳಿಗೆ ಮಾತ್ರ ಮಹತ್ವ ಇರುತ್ತದೆ.
ನೂರಿನ್ನೂರು ವರ್ಷಗಳ ಹಿಂದೆ ಅಧ್ಯಯನ ಮಾಡಿದ ಮೂಲ ವಿಜ್ಞಾನದಲ್ಲಿ ನಡೆದ ಸಂಶೋಧನೆಗಳ ಫಲವಾಗಿ ಇಂದು ವಿಶಾಲ ವ್ಯಾಪ್ತಿಯ ಮಾರುಕಟ್ಟೆಯನ್ನು ಹೊಂದಿರುವ ತಂತ್ರಜ್ಞಾನಗಳ ಅಭಿವೃದ್ಧಿಯಾಗಿದೆ. ಮೂಲ ವಿಜ್ಞಾನದ ಅಧ್ಯಯನವಿಲ್ಲದೆ ವಿಜ್ಞಾನ ವಿಷಯದ ಮಾರುಕಟ್ಟೆ ಆಯಾಮಗಳನ್ನು ಮಾತ್ರ ಅಧ್ಯಯನ ಮಾಡುತ್ತಾ ಹೋದರೆ, ನೂರಿನ್ನೂರು ವರ್ಷಗಳ ನಂತರ ಮಾರುಕಟ್ಟೆಗೆ ಅಗತ್ಯವಾದದ್ದನ್ನು ಅಭಿವೃದ್ಧಿಪಡಿಸಲು ಬೇಕಾದ ಜ್ಞಾನವೇ ಲಭ್ಯವಿರಲಾರದು. ಆದ್ದರಿಂದ ಶಿಕ್ಷಣದ ಧ್ಯೇಯವನ್ನು ಸಾಧಿಸಬೇಕಾದರೆ ನಿರ್ದಿಷ್ಟ ಕಲಿಕಾಂಶಗಳು ಹೆಚ್ಚು ಮಹತ್ವದವು ಎಂಬ ಚಿಂತನೆ ಜನಮಾನಸದಲ್ಲಿ ಬದಲಾಗುವಂತೆ ಆಗಬೇಕು.
ಶೈಕ್ಷಣಿಕ ಕಲಿಕಾಂಶಗಳ ನಿರ್ಧಾರವು ಆಯಾ ಹಂತದಲ್ಲಿ ಸಾಮಾನ್ಯವಾಗಿ ಪರಿಚಯವಾಗಬೇಕಾದ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ. ಕಾಲೇಜು ಹಂತದಲ್ಲಿ ವಿಶೇಷ ಪರಿಣತಿಯ ಅಧ್ಯಯನಕ್ಕೆ ತೊಡಗಿದಾಗ ವಿದ್ಯಾರ್ಥಿಯ ದೃಷ್ಟಿಯಲ್ಲಿ ಮಹತ್ವದ್ದೆನಿಸಿದ ವಿಷಯವನ್ನು ಅಭ್ಯಾಸ ಮಾಡುತ್ತಾನೆ. ಆದರೆ ಅಲ್ಲಿಯತನಕದ ಅಧ್ಯಯನದಲ್ಲಿ ಎಲ್ಲ ವಿಷಯಗಳೂ ಮಹತ್ವದವೇ ಆಗಿವೆ. ಅಧ್ಯಯನ ಸಂದರ್ಭದಲ್ಲಿ ಸಮಾನ ಮಹತ್ವ ನೀಡದೆ ಇರುವುದು ಕೂಡ ಇವತ್ತು ನಾವು ಇತಿಹಾಸ ಓದುವಾಗ ಮೊಘಲರ ವಿನಾ ಬೇರೆ ಯಾರ ಇತಿಹಾಸವೂ ಇರಲಿಲ್ಲ ಎಂದು ಸಾರ್ವಜನಿಕವಾಗಿ ಹೇಳುವ ಮತ್ತು ಹೇಳಿದ್ದನ್ನು ನಂಬುವ ಧೈರ್ಯ ಬರಲು ಕಾರಣವಾಗಿದೆ!
ಕಲಿಕಾ ವಿಷಯಗಳ ಮಹತ್ವದ ಬಗ್ಗೆ ದೈಹಿಕ ಶಿಕ್ಷಣದಿಂದಲೇ ಅರಿತುಕೊಳ್ಳಬೇಕು. ಕಲಿಕೆಯು ದೇಹ ಮತ್ತು ಮನಸ್ಸುಗಳ ನಡುವೆ ಸಂಬಂಧವನ್ನು ಹೊಂದಿದೆ. ದೇಹದ ಸುಸ್ಥಿರತೆ ಕಲಿಕೆಗೆ ಪೂರಕವಾಗಿರುತ್ತದೆ. ಸಮರ್ಪಕವಾದ ದೈಹಿಕ ವಿಕಾಸವು ದೈಹಿಕ ಶಿಕ್ಷಣದ ಮೂಲಕವೇ ನಡೆಯಬೇಕು. ಕ್ರೀಡೆಯು ಕ್ರೀಡಾ ಸ್ಫೂರ್ತಿಯನ್ನು ಬೆಳೆಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಬದಲಿಗೆ ಜಿದ್ದಿನ ಮನಃಸ್ಥಿತಿಯನ್ನು ಬೆಳೆಸುವುದೂ ಇದೆ. ಇದು ಸರಿಯಾದದ್ದನ್ನು ತಪ್ಪಾದ ವಿಧಾನದಲ್ಲಿ ಕಲಿಸಿ ತಪ್ಪು ಫಲಿತಾಂಶವನ್ನು ಪಡೆಯುವ ವಿಧಾನವಾಗಿದೆ. ಆದರೂ ಇತ್ತೀಚಿನ ತಲೆಮಾರಿನ ಕೆಲವು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲದಿರುವುದೂ ಇದೆ. ಅಂಥದ್ದರಲ್ಲಿ ಜಿದ್ದಿನ ರೂಪದಲ್ಲಾದರೂ ಆಟೋಟಗಳನ್ನು ನಡೆಸುವುದು ಅಪೇಕ್ಷಣೀಯವಾಗುತ್ತದೆ.
ಉಳಿದ ಪಠ್ಯ ವಿಷಯಗಳ ಬೋಧನೆಯೂ ಬರೀ ವಿವರಗಳನ್ನು ನೆನಪಿರಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವುದಿಲ್ಲ. ಪರೀಕ್ಷೆಗಳು ಮುಗಿದ ನಂತರ ಕಲಿತ ವಿಷಯಗಳನ್ನು ನೆನಪಿರಿಸಿಕೊಳ್ಳುವುದು ಅನಿವಾರ್ಯವಾಗಿರುವುದಿಲ್ಲ. ಬದಲಿಗೆ ಕಲಿಕಾ ವಿವರಗಳ ಮುಖಾಂತರ ಗಳಿಸಿಕೊಂಡ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗುತ್ತದೆ. ಇದೊಂದು ರೀತಿ ಸಂಗೀತಗಾರ ‘ಸರಿಗಮಪ’ವನ್ನು ಬಳಸಿದ ಹಾಗೆ. ‘ಸರಿಗಮಪ’ದ ಮೂಲಕ ಆತ ಹೊರಡಿಸುವ ರಾಗ ಮುಖ್ಯವೇ ವಿನಾ ‘ಸರಿಗಮಪ’ ಎಂಬ ಪದಗಳಲ್ಲ. ಪಠ್ಯದ ಕಲಿಕೆಯೂ ಇದೇ ಮಾದರಿಯದ್ದು. ಗಣಿತದಲ್ಲಿ ಪೈಥಗೋರಸ್ ಪ್ರಮೇಯವನ್ನು ನೆನಪಿರಿಸಿಕೊಳ್ಳುವುದೇ ಮುಖ್ಯವಾಗುವುದಿಲ್ಲ. ಆ ಪ್ರಮೇಯದ ಮೂಲಕ ರೇಖಾ ವಿನ್ಯಾಸವನ್ನು ಅರ್ಥ ಮಾಡಿಕೊಂಡು ವಿವಿಧ ಸಂದರ್ಭಗಳಲ್ಲಿ ಅದನ್ನು ಅನ್ವಯಿಸಿಕೊಳ್ಳಬಲ್ಲ ಸಾಮರ್ಥ್ಯ ಮುಖ್ಯವಾಗುತ್ತದೆ. ಗಣಿತದ ಮೂಲಕ ವಿದ್ಯಾರ್ಥಿಗಳ ತಾರ್ಕಿಕ ಸಾಮರ್ಥ್ಯ ಹೆಚ್ಚಾಗಬೇಕು. ಅರ್ಥೈಸುವ ಸೂಕ್ಷ್ಮತೆ ಹೆಚ್ಚಾಗಬೇಕು. ಬದುಕಿನ ಯಾವುದೇ ಸಂಗತಿಯನ್ನು ತೀಕ್ಷ್ಣವಾಗಿ ಗ್ರಹಿಸುವ ಶಕ್ತಿ ಬೆಳೆಯಬೇಕು. ಗಣಿತದಲ್ಲಿ ಬೀಜಗಣಿತ ಎಂಬ ಭಾಗವಿದೆ. ಅಲ್ಲಿ ಬಳಕೆಯಾಗುವ a+b, x+yಯಂತಹ ಸಂಕೇತಗಳು ಮೂರ್ತ ರೂಪದಲ್ಲಿ ಎಲ್ಲೂ ಕಾಣುವುದಿಲ್ಲ. ಇವುಗಳನ್ನು ಅಭ್ಯಾಸ ಮಾಡುವ ಮೂಲಕ ಅಮೂರ್ತವಾದದ್ದನ್ನೂ ಗ್ರಹಿಸಿ ನಿರೂಪಿಸುವ ಶಕ್ತಿ ಮಕ್ಕಳಲ್ಲಿ ಬೆಳೆಯಬೇಕು. ಅಮೂರ್ತವಾದದ್ದೂ ಮನೋಚಿತ್ರವಾಗಿ ರೂಪುಗೊಳ್ಳಲು ಸಾಧ್ಯವಾಗಬೇಕು.
ವಿಜ್ಞಾನದಲ್ಲಿ ಕಲಿಯುವ ವಿವರಗಳ ಮೂಲಕ ಶೋಧಕ ಪ್ರವೃತ್ತಿ ಮಕ್ಕಳಲ್ಲಿ ಹೆಚ್ಚಾಗಬೇಕು. ಮೂಲತಃ ಪುಟ್ಟ ಮಗು ಬಹುದೊಡ್ಡ ಸಂಶೋಧಕ. ಮಗು ಅತೀವ ಕುತೂಹಲವನ್ನು ಹೊಂದಿರುತ್ತದೆ. ಇಂತಹ ಕುತೂಹಲಕ್ಕೆ ಸೂಕ್ತ ರೀತಿಯ ಅಧ್ಯಯನದ ರೂಪುರೇಷೆಗಳು ದೊರೆತಾಗ ಅದು ಸಂಶೋಧನೆಯ ಕಡೆಗೆ ವಿದ್ಯಾರ್ಥಿಯನ್ನು ಕೊಂಡೊಯ್ಯುತ್ತದೆ. ಪ್ರಕೃತಿಯ ನಿಗೂಢತೆಯ ಬಗ್ಗೆ ಆಸಕ್ತಿ, ಕುತೂಹಲ, ಪ್ರಶ್ನಿಸುವ ಮನೋಭಾವ, ತಿಳಿಯುವ ಹಂಬಲ, ತೊಡಗಿಕೊಳ್ಳುವ ಕ್ರಿಯಾತ್ಮಕತೆ, ಕಾರ್ಯನಿರ್ವಹಣೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ- ಈ ಎಲ್ಲ ಸಾಮರ್ಥ್ಯಗಳನ್ನು ವಿಜ್ಞಾನ ಕಲಿಕೆಯು ಬೆಳೆಸಬೇಕು.
ಸಮಾಜ ವಿಜ್ಞಾನ ಪಠ್ಯವು ಬರೀ ಇತಿಹಾಸಕ್ಕೆ ಸೀಮಿತವಲ್ಲ. ಇತಿಹಾಸದ ಅಧ್ಯಯನವು ಸಂಕುಚಿತ ಮನೋಭಾವದ ನಿವಾರಣೆ, ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ಕ್ರಮ, ಕಲೆ, ವಾಸ್ತುಶಿಲ್ಪಗಳ ಆಸಕ್ತಿ, ಸೌಂದರ್ಯ ಪ್ರಜ್ಞೆಯಂತಹ ಸಾಮರ್ಥ್ಯಗಳನ್ನು ಬೆಳೆಸಬೇಕು. ಇತ್ತೀಚೆಗೆ ಇತಿಹಾಸವನ್ನು ರಾಷ್ಟ್ರೀಯತೆಯ ಸಾಧನೆಗಾಗಿ ಬಳಸುವ ಪರಿಪಾಟ ಹುಟ್ಟಿಕೊಂಡಿದೆ. ಇದು ತಪ್ಪು.
ಇತಿಹಾಸದ ಆಧಾರದಲ್ಲಿ ರಾಷ್ಟ್ರೀಯತೆಯನ್ನು ಕಂಡುಕೊಳ್ಳಲು ಹೊರಟರೆ ದೇಶದ ಒಳಗೆ ಅದೆಷ್ಟೋ ರಾಜರ ಪ್ರಾಂತ್ಯಗಳಿದ್ದು ಪರಸ್ಪರ ಆಕ್ರಮಣಗಳು ನಿರಂತರವಾಗಿ ನಡೆಯುತ್ತಿದ್ದವು. ರಾಜರ ಸಾಮ್ರಾಜ್ಯಗಳನ್ನು ಚರ್ಚೆಯ ವಿಷಯವಾಗಿ ತೆಗೆದುಕೊಂಡು ರಾಷ್ಟ್ರೀಯತೆಯನ್ನು ಕಂಡುಕೊಳ್ಳಲು ಹೊರಟರೆ, ಬೇರೆ ಬೇರೆ ರಾಜರ ಅಧೀನದಲ್ಲಿದ್ದ ಪ್ರಾಂತ್ಯಗಳಿಗೆ ಸೇರಿದ ಇಂದಿನ ಜನರು ಪರಸ್ಪರ ಅಸಹನೆಯನ್ನು ತಳೆಯಲು ಬೇಕಾದಷ್ಟು ಕಾರಣಗಳಿವೆ. ಇತಿಹಾಸದ ಮೂಲಕ ನಡೆಸುವ ರಾಷ್ಟ್ರೀಯತೆಯ ಚರ್ಚೆಯು ರಾಷ್ಟ್ರೀಯತೆಯ ಇಂದಿನ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ರಾಷ್ಟ್ರೀಯತೆಯನ್ನು ರಾಜ್ಯಶಾಸ್ತ್ರದ ಮೂಲಕ ಕಂಡುಕೊಂಡು ಆ ನೆಲೆಯಲ್ಲಿ ಭಾರತೀಯ ಸಮಗ್ರತೆಯನ್ನು ಹೊಳೆಯಿಸಬೇಕು. ಆಗ ಅದು 1950ರ ನಂತರ ಸಂವಿಧಾನವು ರೂಪಿಸಿದ ಭಾರತೀಯ ಒಕ್ಕೂಟದ ರಾಷ್ಟ್ರೀಯತೆಯ ಪರಿಕಲ್ಪನೆಯಾಗಿ ಭಾರತೀಯರಲ್ಲಿ ಸದ್ಭಾವನೆಯನ್ನು ತರುತ್ತದೆ. ಆದ್ದರಿಂದ ರಾಷ್ಟ್ರೀಯತೆಯ ಸಾಮರ್ಥ್ಯ ರಾಜ್ಯಶಾಸ್ತ್ರದ ಮೂಲಕ ನಡೆಯಬೇಕು. ಅರ್ಥಶಾಸ್ತ್ರದ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಅಂತರರಾಷ್ಟ್ರೀಯ ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನೂ, ವೈಯಕ್ತಿಕ ಆರ್ಥಿಕತೆಯನ್ನು ನಿಭಾಯಿಸುವ ಶಕ್ತಿಯನ್ನೂ ಬೆಳೆಸಬೇಕು. ಭೂಗೋಳದ ಅಧ್ಯಯನವು ಎಲ್ಲ ಜ್ಞಾನಶಾಖೆಗಳ ಮೇಲೆಯೂ ಇರುವ ಭೌಗೋಳಿಕ ಸನ್ನಿವೇಶದ ತಿಳಿವಳಿಕೆಯನ್ನು ಬೆಳೆಸಬೇಕು.
ಭಾಷಾ ಪಠ್ಯಗಳು ಎಲ್ಲ ಜ್ಞಾನಶಿಸ್ತುಗಳನ್ನೂ ಅಂತರ್ಗತ ಮಾಡಿಕೊಂಡಿರುವಂತಹವು ಆಗಿವೆ. ಪ್ರತಿಯೊಂದು ಭಾಷೆಗೂ ಅದರದೇ ಜಾಯಮಾನ ಇರುತ್ತದೆ. ಉದಾಹರಣೆಗೆ, ಇಂಗ್ಲಿಷ್, ಸಂಸ್ಕೃತದ ಪದಗಳು ಭಾವಕೋಶದಲ್ಲಿ ಸ್ಥಿರವಾಗಿ ಉಳಿಯುತ್ತವೆ. ಕನ್ನಡ ಅಥವಾ ದ್ರಾವಿಡ ಭಾಷೆಗಳು ಹಾಗಲ್ಲ. ಪದಗಳು ಭಾವಕೋಶದಲ್ಲಿ ಜಾಸ್ತಿ ಚಲಿಸುತ್ತವೆ. ಆದ್ದರಿಂದ ಬಹಳ ಬೇಗ ದ್ವಂದ್ವಾರ್ಥಗಳು ಸೃಷ್ಟಿಯಾಗುತ್ತವೆ. ಹಿಂದಿ ಬಹಳಷ್ಟು ಸಂಗೀತಾತ್ಮಕ ಲಯವನ್ನು ಹೊಂದಿರುವ ಭಾಷೆಯಾಗಿದೆ. ಭಾಷೆಯ ಬಳಕೆಯ ವಿಧಾನವು ಆಯಾ ಕಾಲದ ಸಾಂಸ್ಕೃತಿಕ ಇತಿಹಾಸವನ್ನೂ ಹೇಳುತ್ತದೆ. ಭಾಷಾ ಪಠ್ಯಗಳ ಅಧ್ಯಯನದ ಮೂಲಕ ಇದೆಲ್ಲವನ್ನೂ ಗ್ರಹಿಸಲು ಸಾಧ್ಯವಾಗಬೇಕು.
ಪ್ರತಿ ವಿಷಯಕ್ಕೂ ಕಲಿಕಾ ಉದ್ದೇಶಗಳಿರುವ ಹಾಗೆಯೇ, ಆಯಾ ವಿಷಯದ ಉಪ ವಿಭಾಗಗಳಿಗೂ, ನಿರ್ದಿಷ್ಟ ಪಾಠಕ್ಕೂ ಬೋಧನೋದ್ದೇಶ ಇರುತ್ತದೆ. ಪಾಠದ ವಿವರವೇ ಪ್ರಧಾನ ಅಲ್ಲ. ಬೋಧನೋದ್ದೇಶದ ಈಡೇರಿಕೆಯಾಗಬೇಕು. ಆಗ ಸಾಮರ್ಥ್ಯವರ್ಧನೆ ಆಗುತ್ತದೆ. ಇದಾಗಬೇಕಾದರೆ ಎಲ್ಲ ಪಠ್ಯ ವಿಷಯಗಳಿಗೂ ಸಮಾನ ಮಹತ್ವವಿದೆ ಎಂಬ ಅರಿವು ಸಮಾಜದಲ್ಲಿ ಬೆಳೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.