ADVERTISEMENT

ಗಾಂಧಿಗೆ ಎದುರಾದ ಹಿಂಸೆ, ಅಹಿಂಸೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಜನವರಿ 30– ಗಾಂಧೀಜಿಯವರು ನಾಥುರಾಂ ಗೋಡ್ಸೆಯ ಗುಂಡಿಗೆ ಬಲಿ­ಯಾದ ದಿನ. ಅದು ಕ್ರೌರ್ಯದ ದಿನ. ಆದರೆ ಕೆಲವು ಹಿಂದೂ ಮತಾಂಧ ಸಂಘಟನೆಗಳು ‘ಶೌರ್ಯದಿನ’ ಎಂದು ಆಚರಿಸಲು ಹೊರಟಿವೆ. ಇದೂ ಒಂದು ಕ್ರೌರ್ಯವೇ ಆಗಿದೆ. ಈ ಕ್ರೌರ್ಯ ಕೆಲವರ ಒಳಗೆ ಹೂತು ಹಳಹಳಿ­ಸುತ್ತಿದ್ದು, ಇದೀಗ ಮೋದಿ ನೇತೃತ್ವದ ಸರ್ಕಾರದ ಅಬ್ಬರದಲ್ಲಿ ಆತ್ಮವಿಶ್ವಾಸ ಪಡೆದು ಹೂಳೆತ್ತಿ­ಕೊಂಡು ಹೊರಬಂದಿದೆ. ಸಂಕೋಚವನ್ನು ಕಳಚಿಕೊಂಡು ಬೀದಿ ಬಾಯಾಗುತ್ತಿದೆ. ನಿಜ; ಹಿಂದೂ­ಗಳೆಲ್ಲ ಮತಾಂಧರಲ್ಲ. ಉತ್ತಮ ಹಿಂದೂಗೆ ಗಾಂಧೀಜಿ ಮತ್ತು ವಿವೇಕಾನಂದ­ರಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಅಂತೆಯೇ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ; ಭಯೋ­ತ್ಪಾದಕ­ರೆಲ್ಲರೂ ಮುಸ್ಲಿಮರಲ್ಲ. ಭಯೋ­ತ್ಪಾ­ದನೆಯು ಇಂದು ಅಂತರರಾಷ್ಟ್ರೀಯ ವ್ಯಾಪ್ತಿ ಪಡೆ­ದಿದೆ. ಜಗತ್ತು ಶಾಂತಿಯನ್ನು ಬಯಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಿಂದೂಗಳೆಂದು ಹೇಳಿ­ಕೊಂಡು ಗಾಂಧಿ ಹತ್ಯೆ ದಿನವನ್ನು ‘ಶೌರ್ಯ­ದಿನ’­ವೆಂದು ಆಚರಿಸುವವರು ಹಿಂಸೆಯ ಸಮರ್ಥ­ಕ­ರಾಗುತ್ತಾರೆ. ಹತ್ಯೆಯ ಬೆಂಬಲಿಗ­ರಾಗುತ್ತಾರೆ. ಸ್ವತಃ ನಾಥೂರಾಂ ಗೋಡ್ಸೆ ಗಾಂಧೀಜಿ ಹತ್ಯೆ­ಯನ್ನು ಸಮರ್ಥಿಸಿಕೊಂಡು ನ್ಯಾಯಾಲಯದಲ್ಲಿ ಕೊಟ್ಟ ಹೇಳಿಕೆ ಇಲ್ಲಿ ಉಲ್ಲೇಖನೀಯ:

‘ನಾನು ಹುಟ್ಟಿನಿಂದ ಬ್ರಾಹ್ಮಣನಾಗಿ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಬಗೆಗೆ ಸಹಜ ಗೌರವ ಭಾವ ಹೊಂದಿದ್ದೆ. ಹಿಂದೂ ಸಮಾನತೆಯಲ್ಲಿ ಆಸಕ್ತಿಯುಳ್ಳ ನಾನು ಜಾತಿ ವಿರೋಧಿ ಭೋಜನ ಕೂಟಗಳಲ್ಲಿ ಭಾಗವಹಿಸಿದ್ದೆ. ಈ ಭೋಜನ ಕೂಟಗಳಲ್ಲಿ ಭಂಗಿಯಿಂದ ಹಿಡಿದು ಬ್ರಾಹ್ಮಣರ­ವರೆಗೆ ಭಾಗವಹಿಸುತ್ತಿದ್ದರು. ಆನಂತರ ಗಾಂಧೀಜಿ ಮತ್ತು ಸಾವರ್ಕರ್‌ ಅವರ ಕೃತಿಗ­ಳನ್ನು ಓದಿದೆ; ಪ್ರಭಾವಿತನಾದೆ. ಆದರೆ ಗಾಂಧೀಜಿ­ಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತ ಹೊಸದೇನೂ ಅಲ್ಲ ಎಂದು ಭಾವಿಸಿದೆ. ಅಷ್ಟೇ ಅಲ್ಲ ಅಹಿಂಸಾ ತತ್ವವು ನಮ್ಮ ಕ್ಷಾತ್ರವನ್ನು ನಾಶಮಾಡುತ್ತದೆಯೆಂದು ತಿಳಿದೆ. ಶ್ರೀಕೃಷ್ಣ ಕಂಸನನ್ನು ಕೊಂದ; ಅರ್ಜುನನು ಭೀಷ್ಮರನ್ನೂ ಬಿಡದೆ ಎಲ್ಲ ಆಕ್ರಮಣಕಾರರ ವಿರುದ್ಧ ಹೋರಾಡಿದ. ಇದ್ಯಾವುದನ್ನೂ ಪರಿಗಣಿಸದೆ, ಗಾಂಧೀಜಿಯವರು ಮಾನವ ಕ್ರಿಯಾ ಚೈತನ್ಯ­ವನ್ನೇ ನಿರ್ಲಕ್ಷಿಸಿದರು. ಆಕ್ರಮಣಕಾರ­ರಾದ ಮುಸ್ಲಿಮರ ಪರವಾದರು. ಛತ್ರಪತಿ ಶಿವಾಜಿ, ಮುಸ್ಲಿಮರನ್ನು ನಾಶಮಾಡಿದ. ಇಂಥವರ ದೇಶಪ್ರೇಮ­ವನ್ನು ಗಾಂಧಿ ಗೌರವಿಸಲಿಲ್ಲ. ಮುಸ್ಲಿ­ಮರ ಪರವಾಗಿ ಗಾಂಧಿ ಕೈಗೊಂಡ ಕೊನೆಯ ಉಪವಾಸ ಸತ್ಯಾಗ್ರಹವು, ಇನ್ನು ಅವರನ್ನು ಉಳಿಸ­ಬಾರದು ಎಂಬ ನನ್ನ ಸಂಕಲ್ಪಕ್ಕೆ ಇಂಬು­ಕೊಟ್ಟಿತು. ಗಾಂಧಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆಯುತ್ತಾರೆ. ಆದರೆ ಆತ ಪಾಕಿಸ್ತಾನದ ರಾಷ್ಟ್ರಪಿತ ಎಂದು ನನ್ನ ಭಾವನೆ. ಹೀಗಾಗಿ ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಯೋಚಿ­ಸಿಯೇ ನಾನು ಗಾಂಧಿಯನ್ನು ಕೊಂದಿದ್ದೇನೆ’

–ಇದು ಗೋಡ್ಸೆ ಹೇಳಿಕೆಯ ಸಂಕ್ಷಿಪ್ತ ಸಾರಾಂಶ. ಗಾಂಧೀಜಿಯವರನ್ನು ಕೊಲ್ಲಲು ಗೋಡ್ಸೆಗಿದ್ದ ಕಾರಣಗಳು ಈ ಹೇಳಿಕೆಯಲ್ಲಿ

ಸ್ಪಷ್ಟವಾಗಿವೆ. ಮತಾಂಧತೆ ಮತ್ತು ಅಸಹನೆಗಳು ಹೇಗೆ ಹಿಂಸೆಯನ್ನು ಪ್ರಚೋದಿಸುತ್ತವೆ ಮತ್ತು ಆಚರಣೆಗೆ ತರುತ್ತವೆ ಎಂಬುದಕ್ಕೆ ಗೋಡ್ಸೆ ಒಂದು ರೂಪಕ; ಹಿಂಸೆಯ ರೂಪಕ. ಹಿಂದೂ­ವಾಗಲಿ, ಮುಸ್ಲಿಮರಾಗಲಿ, ಯಾವುದೇ ಧರ್ಮ­ದವ­ರಾಗಲಿ ಹತ್ಯೆಯೇ ಅಂತಿಮ ಎಂದು ಭಾವಿಸಿ­ದರೆ ಅವರೆಲ್ಲ ಹಿಂಸೆಯ ರೂಪಕಗಳೇ ಆಗು­ತ್ತಾರೆ. ಹೀಗಾಗಿ ಭಯೋತ್ಪಾದನೆಯಲ್ಲಿ ತೊಡ­ಗಿದ ಕೆಲ ಮುಸ್ಲಿಂ ಸಂಘಟನೆಗಳು, ನೈತಿಕ ಪೊಲೀಸ್‌­ಗಿರಿ ಮಾಡುವ ಕೆಲ ಹಿಂದೂ ಸಂಘಟನೆ­ಗಳು, ಗಾಂಧಿ ಹತ್ಯೆಯನ್ನು ‘ಶೌರ್ಯ’ ಎಂದು ಭಾವಿಸುವ ಮತ್ತು ಗೋಡ್ಸೆ ಪ್ರಶಸ್ತಿ­ಯನ್ನು ಸ್ಥಾಪಿಸುವ ಸಂಸ್ಥೆಗಳು ಹಿಂಸೆಯ ವ್ಯಾಪ್ತಿಗೆ ಬರುತ್ತವೆ; ಪ್ರಜಾಪ್ರಭುತ್ವ ವಿರೋಧಿ­ಯಾಗು­ತ್ತವೆ. ಆದ್ದರಿಂದ, ಕ್ರೌರ್ಯವನ್ನು ‘ಶೌರ್ಯ’ ಎನ್ನುವ ವಿಕೃತಿಯು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುತ್ತಿರುವುದನ್ನು ಮನಗಾಣ­ಬೇಕಾಗಿದೆ.

ಗಾಂಧೀಜಿಯವರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದು ಗೋಡ್ಸೆ ಮಾತ್ರವಲ್ಲ. ಡಾ. ಅಂಬೇಡ್ಕರ್‌ ಅವರು ಗಾಂಧೀಜಿಯವರ ಜಾತಿ, ವರ್ಣ, ಧರ್ಮ ಕುರಿತ ಅಭಿಪ್ರಾಯಗಳ ಪ್ರಬಲ ವಿರೋಧಿಯಾಗಿದ್ದರು. ದಲಿತರಿಗೆ ದಲಿತರೇ ಮತ ನೀಡುವ ಚುನಾವಣಾ ಕ್ಷೇತ್ರಗಳಿಗೆ ವಿರುದ್ಧ­ವಾದ ಗಾಂಧಿ, ಮುಸ್ಲಿಮರಿಗೆ ಈ ಸೌಲಭ್ಯವಿರಲಿ ಎಂದು ಅಭಿಪ್ರಾಯಿಸಿದ್ದನ್ನು ಕಟುವಾಗಿ ಖಂಡಿಸಿ­ದರು. ಪ್ರತಿರೋಧ ಒಡ್ಡಿದರು.
ದಲಿತರು ಹಿಂದೂ­ಗಳೇ ಆಗಿರುವುದರಿಂದ ಪ್ರತ್ಯೇಕ ಮತ­ಕ್ಷೇತ್ರ ಬೇಕಾಗಿಲ್ಲವೆಂದೂ ಮುಸ್ಲಿಮರು ಬೇರೆ ಧರ್ಮೀಯರಾದ್ದರಿಂದ ಅವರಿಗೆ ಅಂಥ ಸೌಲಭ್ಯ ಒದಗಿಸಿದರೆ ತಪ್ಪಿಲ್ಲವೆಂದೂ ಅಭಿಪ್ರಾಯಪಟ್ಟಿದ್ದ ಗಾಂಧೀಜಿ ಆಮರಣಾಂತ ಉಪವಾಸ ಕೂತಾಗ ಅವರ ಜೀವ ಉಳಿಸಲು ಅಂಬೇಡ್ಕರ್‌ ಅವರು ಹೊಂದಾಣಿಕೆ ಮಾಡಿಕೊಂಡರು. ಗಾಂಧೀಜಿ ಮುಸ್ಲಿಮರ ಪರ ಎಂಬ ಮುಖ್ಯ ಕಾರಣಕ್ಕೆ ಗೋಡ್ಸೆ ಅವರ ಜೀವ ತೆಗೆದರೆ ಅಂಬೇಡ್ಕರ್‌ ಅವರ ಜೀವ ಉಳಿಸಿದರು. ಈ ಮೂಲಕ ಅಂಬೇಡ್ಕರ್‌ ನೈಜ ಅಹಿಂಸಾವಾದಿಯಾದರು.
ಭಿನ್ನಾಭಿಪ್ರಾಯಗಳು ಹಿಂಸೆಯಲ್ಲಿ ಕೊನೆಗಾಣ­ಬಾರದೆಂಬ ಮೌಲ್ಯಕ್ಕೆ ಬದ್ಧವಾಗಿ ಪ್ರಜಾ­ಪ್ರಭುತ್ವಕ್ಕೆ ಒಂದು ಮಾದರಿಯಾದ ಅಂಬೇ­ಡ್ಕರ್‌ ಅವರಿಂದ ಹಿಂಸಾವಾದಿಗಳು ಪಾಠ ಕಲಿ­ಯ­ಬೇಕಾಗಿದೆ. ಅಂತೆಯೇ ಗಾಂಧೀಜಿ­ಯವರು ಜಾತಿ–ವರ್ಣಗಳ ಬಗೆಗೆ ತಮಗಿದ್ದ ತಪ್ಪು ತಿಳಿ­ವಳಿಕೆಗಳನ್ನು ಆನಂತರ ತಿದ್ದಿಕೊಂಡದ್ದನ್ನೂ ಗಮನಿಸಬೇಕಾಗಿದೆ.

ಜಾತಿಯನ್ನು ಹಿಂದೂ ಧರ್ಮದ ಅಡಿಪಾಯ ಎಂದು ಭಾವಿಸಿದ್ದ ಗಾಂಧೀಜಿ– ‘ಜಾತಿ ಪದ್ಧತಿಯು ಇಂದಿನ ದುಃಸ್ಥಿತಿಗೆ ಕಾರಣವಲ್ಲ’ ಎಂದು ಪ್ರತಿಪಾದಿಸಿದ್ದರು. ಅಸ್ಪೃಶ್ಯತೆಯ ಕಟ್ಟಾ ವಿರೋಧಿಯಾಗಿದ್ದರೂ ಜಾತಿ ಮತ್ತು ವರ್ಣ ವ್ಯವಸ್ಥೆಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಮಾಡಿ ಸಮರ್ಥಿಸಿದ್ದರು. ಆನಂತರದ ದಿನಗಳಲ್ಲಿ ಬದಲಾದರು. ‘ಜಾತಿಯು ಅಂತಸ್ತಿನ ಭೇದ­ವನ್ನು ಕಲ್ಪಿಸುವುದಾದರೆ ಅದು ಪಾಪ ವ್ಯವಸ್ಥೆ (1931)’ ಎಂದರು. ‘ತನ್ನ ಎಲ್ಲ ಭಯಾನಕತೆ­ಯಿಂದ ಇಂದು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರ­ಗಳು ಪುರಸ್ಕರಿಸುವುದಾದರೆ ನಾನು ನನ್ನನ್ನು ಹಿಂದೂ ಎಂದು ಕರೆದುಕೊಂಡು ಅದರಲ್ಲಿ ಉಳಿಯಲಾರೆ (1936)’ ಎಂದು ಘೋಷಿ­ಸಿದರು. ಮೊದಲು ಅಂತರ್‌ಜಾತಿ ವಿವಾಹ ಮತ್ತು ಅಂತರ್‌ಜಾತಿ ಭೋಜನ ಪದ್ಧತಿ­ಯನ್ನು ಒಪ್ಪದಿದ್ದ ಗಾಂಧಿ ಆನಂತರ ‘ಅಂತರ್‌ ಜಾತಿ ವಿವಾಹ ಮತ್ತು ಭೋಜನದ ಬಗ್ಗೆ ನನ್ನ ವಿರೋಧವಿಲ್ಲ (1936)’ ಎಂದು ಹೇಳಿದ್ದಷ್ಟೇ ಅಲ್ಲ ‘ಈ ಜಾತಿ–ಉಪಜಾತಿಗಳು ಅಳಿಯಬೇಕು. ಸವರ್ಣೀಯರು ಮತ್ತು ಅತಿಶೂದ್ರರ ನಡುವಿನ ಮದುವೆ­ಗಳಿಗೆ ಮಹತ್ವ ಕೊಡಬೇಕು. ವರ ಅಥವಾ ವಧು ಇಬ್ಬರಲ್ಲಿ ಒಬ್ಬರು ಹರಿಜನ­ರಾಗಿ­ದ್ದರೆ ಮಾತ್ರ ಆಶ್ರಮದಲ್ಲಿ ಮದುವೆಗೆ ಅವಕಾಶ (1946)’ ಎಂದು ಘೋಷಿಸಿ ಅದರಂತೆ ನಡೆದು­ಕೊಂಡರು. ‘ವರ್ಗರಹಿತ ಮತ್ತು ಜಾತಿರಹಿತ ಇಂಡಿಯಾ ನಿರ್ಮಾಣಕ್ಕೆ ನನ್ನ ಪ್ರಯತ್ನ (1946)’ ಎಂದು ಪ್ರತಿಪಾದಿಸಿದರು. ಜೊತೆಗೆ ‘ಅಸಮಾನತೆಯಿಂದ ಹಿಂಸೆ, ಸಮಾನತೆಯಿಂದ ಅಹಿಂಸೆ ಹುಟ್ಟಿಕೊಳ್ಳುತ್ತದೆ’ ಎಂಬ ತಾತ್ವಿಕತೆ­ಯನ್ನು ಪ್ರಚುರಪಡಿಸಿದರು.

ಹೀಗೆ ಬದಲಾದ ಗಾಂಧೀಜಿಯನ್ನು ಗ್ರಹಿಸದೆ, ಅನೇಕರು ಅಂಬೇಡ್ಕರ್‌ ಮತ್ತು ಗಾಂಧೀಜಿ­ಯ­ವರಲ್ಲಿ ಒಬ್ಬರನ್ನು ನಾಯಕನನ್ನಾಗಿ ಇನ್ನೊಬ್ಬ­ರನ್ನು ಖಳನಾಯಕರನ್ನಾಗಿ ನೋಡಿದ್ದು ನೋವಿನ ಸಂಗತಿ. ನಮ್ಮ ಚರಿತ್ರೆಯ ಚಲನೆಗೆ ಇವರಿಬ್ಬರೂ ತಮ್ಮದೇ ರೀತಿಯ ಅಪೂರ್ವ ಕೊಡುಗೆ ಕೊಟ್ಟಿ­ದ್ದಾರೆ. ಭಿನ್ನಾಭಿಪ್ರಾಯಗಳ ನಡುವೆಯೂ ಅಹಿಂಸೆ­­ಯನ್ನು ಆಚರಣೆಗೆ ತಂದಿದ್ದಾರೆ. ಗಾಂಧೀಜಿಯವರ ಕೆಲ ವಿಚಾರಗಳಿಗೆ ಪ್ರತಿ­ರೋಧಿ­­ಯಾಗಿದ್ದ ಅಂಬೇಡ್ಕರ್‌ ಯಾವತ್ತೂ ‘ಒದೆ­ಯಿರಿ, ಹೊಡೆಯಿರಿ’ ಎಂದು ಹೇಳಲಿಲ್ಲ. ಹಿಂಸಾ­ತ್ಮಕ ಭಾಷೆಯನ್ನು ಬಳಸಲಿಲ್ಲ. ಗಾಂಧೀಜಿ­ಯವರ ಅಹಿಂಸೆಯ ಆಲೋಚನೆ, ಅಂಬೇಡ್ಕರ್‌ ಅವರಲ್ಲಿ ಆಚರಣೆಯಾಗಿ ಅನಾವರಣ­ಗೊಂ­ಡಿದ್ದು ಮಹತ್ವದ ಸಂಗತಿ. ಹಾಗೆ ನೋಡಿ­ದರೆ ಸಶಸ್ತ್ರ ಹೋರಾಟವನ್ನು ನಂಬಿದ್ದ ಭಗತ್‌­ಸಿಂಗ್‌ ಮತ್ತು ಬೋಸ್‌ ಅವರು ಎಂದೂ ವೈಯಕ್ತಿಕ ಹತ್ಯೆಯ ಹಿಂಸೆಯನ್ನು ಪ್ರತಿಪಾದಿಸ­ಲಿಲ್ಲ.

ಆದರೆ ಗಾಂಧೀಜಿಯೊಂದಿಗೆ ಗೋಡ್ಸೆ ಹೊಂದಿದ ಭಿನ್ನಾಭಿಪ್ರಾಯ ಹೀಗಾಗಲಿಲ್ಲ. ಹಿಂಸೆ­ಯಾಗಿ ಪರಿಣಮಿಸಿತು. ಈ ಹಿಂಸೆಯು ಇಂದು ಕೆಲವರಲ್ಲಿ ಭಾಷಿಕವಾಗಿ, ಇನ್ನು  ಕೆಲವರಲ್ಲಿ ದೈಹಿಕವಾಗಿ ಪ್ರಕಟವಾಗುತ್ತಿದೆ. ಪ್ರಜಾ­ಪ್ರಭು­ತ್ವದ ಅಡಿಪಾಯವನ್ನು ಅಲುಗಾಡಿ­ಸುತ್ತಿದೆ. ಹಿಂದೂ ಧರ್ಮದ ರಕ್ಷಕರೆಂದು ಬಿಂಬಿಸಿ­ಕೊಳ್ಳು­ತ್ತಿರುವ ಈ ಕೆಲವರು ಬಹು­ಸಂಖ್ಯಾತ ಶಾಂತಿ­ಪ್ರಿಯ ಹಿಂದೂಗಳಿಗೆ ಅವಮಾನ ಮಾಡುತ್ತಿ­ದ್ದಾರೆ; ಜೊತೆಗೆ ಸಂವಿಧಾನಾತ್ಮಕ ಜಾತ್ಯತೀತ ತತ್ವಕ್ಕೆ ತಿಲಾಂಜಲಿ ನೀಡುತ್ತಿದ್ದಾರೆ. ಗಾಂಧೀಜಿ­ಯವರ ನೈಜ ಜಾತ್ಯತೀತ ಕ್ರಿಯೆಯನ್ನು ಅರ್ಥ-­ಮಾಡಿಕೊಳ್ಳದೆ ಅನಾಹುತ ಮಾಡುತ್ತಿದ್ದಾರೆ.

ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಪ್ರಧಾನವಾಗಿ ಪರಿಗಣಿಸಿದ ಪ್ರತೀಕಗಳು ಮೂರು: ಚರಕ, ಖಾದಿ ಮತ್ತು ಉಪ್ಪು. ಈ ಮೂರು ಯಾವ ಜಾತಿಗೂ ಸೇರಿಲ್ಲ; ಯಾವ ಧರ್ಮಕ್ಕೂ ಸೇರಿಲ್ಲ. ಗುಡಿ ಕೈಗಾರಿಕೆಯ ಒಂದು ಪ್ರತೀಕವಾಗಿ ಚರಕ, ಸ್ವದೇಶಿ ಪ್ರತೀಕವಾಗಿ ಖಾದಿ ಮತ್ತು ಸರ್ವರ ಬಳಕೆಯ ಉಪ್ಪು– ಇವು ನಿಜ ಅರ್ಥದಲ್ಲಿ ಜಾತ್ಯತೀತ ಪ್ರತೀಕಗಳು. ಗಾಂಧೀಜಿ ಹಿಂದೂ ಧರ್ಮ ಮತ್ತು ದೇವರುಗಳನ್ನು ನಂಬಿ­ದ್ದರು ಮತ್ತು ಮುಸ್ಲಿಮರ ಬಗ್ಗೆ ಸಹಾನುಭೂತಿ­ಯುಳ್ಳವರಾಗಿದ್ದರೂ ಅವರ ಹೋರಾಟದ ಪ್ರತೀಕ­ಗಳು ಜಾತಿ–ಧರ್ಮಗಳನ್ನು ಮೀರಿದ್ದವು ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಹಿಂಸೆಯೂ ಅರ್ಥವಾಗುವುದಿಲ್ಲ; ಅಂಬೇ­ಡ್ಕರ್‌ ನೇತೃತ್ವದ ನಮ್ಮ ಸಂವಿಧಾನವೂ ಅರ್ಥ­ವಾಗುವುದಿಲ್ಲ.

ಅಪ್ಪಟ ಆಸ್ತಿಕವಾದಿಯಾದ ಗಾಂಧೀಜಿ ಮತ್ತು ಅಪ್ಪಟ ನಾಸ್ತಿಕವಾದಿಯಾದ ಗೋರಾ ಅವರ ಸಂಬಂಧ ಮತ್ತು ಸಂವಾದದ ಪರಿ­ಯನ್ನೂ ಅಹಿಂಸೆಯ ಒಂದು ರೂಪಕವಾಗಿ ಪರಿಶೀಲಿ­ಸಬಹುದು. ನಾಸ್ತಿಕವಾದವೇ ಉಸಿ­ರಾಗಿದ್ದ ಗೋರಾ, ಯಾವತ್ತೂ ಗಾಂಧೀಜಿಯ ವಿರುದ್ಧ ಹಿಂಸಾತ್ಮಕ ಭಾಷೆಯನ್ನು ಬಳಸಲಿಲ್ಲ. ಬದಲಾಗಿ ಭೇಟಿಯಾದರು; ಗಾಂಧೀಜಿಯವರ ಸಮಯಕ್ಕೆ ಕಾದು ಚರ್ಚಿಸಿದರು. ತಮ್ಮ ವಿಚಾರ­ಗಳನ್ನು ಬಿಟ್ಟುಕೊಡದೆ ಸಂಯಮದಿಂದ ಸಂವಾದಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ­ಹಿಡಿದರು. ‘ನಾಸ್ತಿಕವಾದ ವ್ಯಕ್ತಿಯ ಆತ್ಮ­ವಿಶ್ವಾಸ­ವನ್ನು ಹೆಚ್ಚಿಸಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಅಹಿಂಸಾತ್ಮಕವಾಗಿ ನೆಲೆ­ಗೊ­ಳಿ­ಸಬೇಕೆಂದು ನಾನು ನಂಬಿದ್ದೇನೆ’ ಎಂದು ಗೋರಾ ಅವರು ಹೊಸ ವ್ಯಾಖ್ಯಾನವನ್ನೇ ನೀಡಿದರು. ಕಡೆಗೆ ಗಾಂಧೀಜಿ ‘‘ನಾನು ಮೊದಲು ‘ದೇವರು ಸತ್ಯ’ ಎಂದು ಹೇಳುತ್ತಿದ್ದೆ. ಅದು ನನಗೆ ತೃಪ್ತಿ­ಯಾಗಲಿಲ್ಲ. ಈಗ ನಾನು ‘ಸತ್ಯವೇ ದೇವರು’ ಎಂದು ಹೇಳುತ್ತೇನೆ’’ ಎಂದರು. ಇದು ಗಾಂಧೀಜಿಯ ನಡೆ.
ಇಂತಹ ಗಾಂಧಿಗೆ ಎದುರಾದ ಮೂವರಲ್ಲಿ ಗೋಡ್ಸೆ ಹಿಂಸೆಯ ರೂಪಕವಾದರೆ ಅಂಬೇಡ್ಕರ್‌ ಮತ್ತು ಗೋರಾ ಅಹಿಂಸೆಯ ರೂಪಕವಾದರು.

ಈಗ ನಾವು ಅರ್ಥ ಮಾಡಿಕೊಳ್ಳಬೇಕು: ಭಿನ್ನಾಭಿಪ್ರಾಯಗಳು ಭಾಷಿಕ ಹಿಂಸೆಯೂ ಆಗಬಾರದು; ಭೌತಿಕ ಹಿಂಸೆಯೂ ಆಗ­ಬಾರದು. ಬಹುಭಾಷಿಕ, ಬಹುಧಾರ್ಮಿಕ ಮತ್ತು ಬಹು ಸಾಂಸ್ಕೃತಿಕವಾಗಿರುವ ನಮ್ಮ ದೇಶದ ಬಹುತ್ವ ನಾಶವಾಗಬಾರದು. ನಮ್ಮದು ಯಾವುದೇ ಒಂದು ಧರ್ಮದ ದೇಶವಾಗ­ಬಾರದು. ಈ ತತ್ವವನ್ನು ಗಾಂಧೀಜಿ ಸ್ಪಷ್ಟವಾಗಿ ಹೇಳಿದ್ದಾರೆ: ‘ನನ್ನ ಕನಸಿನ ಭಾರತ ಹಿಂದೂತ್ವ ಒಂದೇ ಬೆಳೆಯುವ ಅಥವಾ ಇಸ್ಲಾಂ ಒಂದೇ ಬೆಳೆಯುವ ಭಾರತವಲ್ಲ. ಎಲ್ಲ ಮತಧರ್ಮ­ಗಳೂ ಸೌಹಾರ್ದಯುತವಾಗಿ ಬೆಳೆಯುವಂತಹ ಭಾರತ’.

ಇಂತಹ ಭಾರತದಲ್ಲಿ– ಭಿನ್ನಾಭಿಪ್ರಾಯಕ್ಕೆ ಹಿಂಸೆಯ ರೂಪ ಕೊಡದೆ ಪ್ರತಿರೋಧದ ಪ್ರತೀಕ­ವಾದ ಅಂಬೇಡ್ಕರ್‌, ನಾಸ್ತಿಕತೆಗೆ ಸಾಮಾಜಿಕ ಸಮಾನತೆಯ ನೆಲೆ ಒದಗಿಸಿದ ಗೋರಾ, ಸಂವಾದಿಸಲು ಸದಾ ಸಿದ್ಧವಾದ ಗಾಂಧೀಜಿ– ಯಾವತ್ತೂ ಜೀವಶಕ್ತಿಯಾಗಿರಲಿ. ಬಹುತ್ವದಲ್ಲಿ ಭಾರತ ಬೆಳೆಯಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.