ADVERTISEMENT

ಚಂದ್ರಯಾನ– 3 ಏಕೆ ಮುಖ್ಯ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ

ಇಸ್ರೊದ ಮುಂದಿನ ಅಂತರ್‌ಗ್ರಹ ಯೋಜನೆಗಳಿಗೆ ಸತ್ವ, ನೆಲೆ ಎರಡನ್ನೂ ಒದಗಿಸುವ ಉದ್ದೇಶ ಈ ಯೋಜನೆಯದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 19:46 IST
Last Updated 13 ಜುಲೈ 2023, 19:46 IST
ಚಂದ್ರಯಾನ– 3
ಚಂದ್ರಯಾನ– 3   

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ– 3ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಜುಲೈ 14) ಮಧ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ನೆಲೆಯಿಂದ ದೇಸಿ ಪ್ರೊಪಲ್ಶನ್ ಮಾಡ್ಯೂಲ್ (ಪಿಎಂ), ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಮತ್ತು ರೋವರ್‌ಗಳನ್ನು (ಚಂದ್ರನೆಲದ ಮೇಲೆ ಸಂಚರಿಸುವ ರೊಬಾಟು ವಾಹನ) ಹೊತ್ತ ನಮ್ಮ ಅತ್ಯಂತ ಭಾರದ, ದೊಡ್ಡದಾದ ಶಕ್ತಿಶಾಲಿ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್‌ III (ಜಿಯೊಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 3) ಚಂದ್ರನ ದಕ್ಷಿಣ ಧ್ರುವಕ್ಕೆ ಪಯಣಿಸಲಿದೆ. ಆಗಸ್ಟ್ 23ರಂದು ಚಂದ್ರನ ನೆಲದ ಮೇಲೆ ಇಳಿದು, ಸೂರ್ಯನ ಬೆಳಕು ದೊರಕುವ 14 ದಿನಗಳ ಕಾಲ ಪ್ರಯೋಗ ಕೈಗೊಳ್ಳಲಿದೆ.

ಜಗತ್ತಿನ ಎಲ್ಲ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು, ಸಂಶೋಧಕರು ಮತ್ತು ಖಗೋಳ ಆಸಕ್ತಿ ಇರುವ ಜನಸಾಮಾನ್ಯರಿಗೆ ಇದು ಅತ್ಯಂತ ಮಹತ್ವದ ಘಟನೆಯಾಗಲಿದೆ. ಅಂದುಕೊಂಡಂತೆ ನಡೆದರೆ ಇದುವರೆಗೂ ಯಾವ ದೇಶವೂ ಸಾಧಿಸದ ಸಾಧನೆ ನಮ್ಮ ದೇಶದ್ದಾಗಲಿದೆ.

ನಾಲ್ಕು ವರ್ಷಗಳ ಹಿಂದೆ ಕೈಗೊಂಡ ಚಂದ್ರಯಾನ– 2 ಯೋಜನೆ ಕೂದಲೆಳೆಯಲ್ಲಿ ಅಪಯಶಸ್ಸು ಕಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ವ್ಯೋಮ ನೌಕೆಯನ್ನಿಳಿಸಿದ ಪ್ರಥಮ ದೇಶ ಭಾರತ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿತ್ತು. ಸದಾ ನಮ್ಮಿಂದ ಮರೆಯಾಗಿಯೇ ಇರುವ ಚಂದ್ರನ ದಕ್ಷಿಣ ಭಾಗದ ನೆಲದ ಮೇಲೆ ಮೃದುವಾಗಿ ಪ್ರಯೋಗ ನೌಕೆಯನ್ನಿಳಿಸುವ ಮೊದಲ ಪ್ರಯತ್ನ ಅಂದು ಕೈಗೂಡಿರಲಿಲ್ಲ. ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಅಪರೂಪದ ಪ್ರಯತ್ನ ಸಫಲವಾಗಲಿ ಎಂದು ಬಯಸಿದ್ದ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿತ್ತು. ವೈಫ್ಯಲ್ಯದ ನೆನಪು ಹಸಿಯಾಗಿರುವಾಗಲೇ ಇಸ್ರೊ ಮತ್ತೊಂದು ಚಂದ್ರಯಾನಕ್ಕೆ ಸಜ್ಜುಗೊಂಡಿದೆ.

ADVERTISEMENT

ಅಲ್ಲಿನ ‘ಚಂದ್ರಹಿಮ’ದಲ್ಲಿ ಅಪಾರ ನೀರಿದೆ ಎಂಬ ನಿರೀಕ್ಷೆ ವಿಶ್ವ ವಿಜ್ಞಾನಿಗಳದ್ದು. ಅಲ್ಲದೆ ಅಲ್ಲಿರುವ ದೈತ್ಯ ಕುಳಿಗಳಲ್ಲಿ ಸೌರವ್ಯೂಹದ ಉಗಮದ ಮಾಹಿತಿ ಸಿಗಬಹುದೆಂಬ ಆಸೆ ಹೊತ್ತು ಅಲ್ಲಿಗೆ ಪಯಣ ಕೈಗೊಳ್ಳುತ್ತಿರುವ ಭಾರತದ ಎರಡನೆಯ ಪ್ರಯತ್ನವಿದು. ಅಮೆರಿಕ ತನ್ನ ಆರ್ಟೆಮಿಸ್– 3 ಯೋಜನೆಯಲ್ಲಿ ಮನುಷ್ಯನನ್ನೇ ಅಲ್ಲಿಗೆ ಕಳುಹಿಸುವ ನೀಲನಕ್ಷೆ ತಯಾರು ಮಾಡಿಕೊಂಡಿದೆ.

ಇದುವರೆಗೆ ಚಂದ್ರನ ಅಧ್ಯಯನಕ್ಕೆ ವಿಶೇಷವಾಗಿ ನೆರವಾಗಿರುವ ಅಮೆರಿಕದ ಅಪೋಲೊ, ಚೀನಾದ ಚಾಂಗಿ ಮತ್ತು ಇತರ ದೇಶಗಳ ಪ್ರಯತ್ನಗಳು ಚಂದ್ರಗ್ರಹದ ಮಧ್ಯರೇಖೆಯ ಬಳಿಯಿರುವ ವಾತಾವರಣದ ಬಗ್ಗೆ ರಾಶಿ ಮಾಹಿತಿ ಹೊತ್ತು ತಂದಿವೆಯಾದರೂ ದಕ್ಷಿಣ ಭಾಗದ ಅಧ್ಯಯನ ನಡೆದೇ ಇಲ್ಲ. ಈಗ ಭಾರತ ಕೈಗೊಂಡಿರುವ ಚಂದ್ರಯಾನ– 3 ಯೋಜನೆಯಿಂದ ಚಂದ್ರಗ್ರಹದಲ್ಲಿನ ನಮಗೆ ಕಾಣಿಸದ ಭಾಗದ ಕುರಿತು ವಿಶೇಷ ಮಾಹಿತಿ ದೊರಕಲಿದೆ ಎಂದಿರುವ ಕ್ಯಾನ್‍ಬೆರಾ ಯೂನಿವರ್ಸಿಟಿಯ ಜಿಯೊಕೆಮಿಸ್ಟ್ ಮಾರ್ಕ್‍ನಾರ್ಮನ್, ‘ನಾವೆಲ್ಲ ಚಂದ್ರಯಾನ– 3 ಹೊತ್ತು ತರುವ ಮಾಹಿತಿಯ ಅಧ್ಯಯನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಚಂದ್ರಯಾನ– 3 ಮೂರು ಮುಖ್ಯ ಉದ್ದೇಶಗಳನ್ನು ಸಾಧಿಸುವ ತವಕದಲ್ಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ನ್‌ ಅನ್ನು ಮೃದುವಾಗಿ ಯಶಸ್ವಿಯಾಗಿ ಇಳಿಸುವುದು, ಲ್ಯಾಂಡರ್ನ್‌ನಿಂದ ರೋವರ್‌ ಅನ್ನು ರ್‍ಯಾಂಪ್ ಬಳಸಿ ಚಂದ್ರನ ನೆಲಕ್ಕಿಳಿಸಿ ಓಡಾಡಿಸುವುದು ಮತ್ತು ಸಂಗ್ರಹಿಸಿದ ಮಾದರಿಗಳನ್ನು ಅಲ್ಲಿಯೇ ಪ್ರಯೋಗಕ್ಕೆ ಒಳಪಡಿಸುವುದು.

ಚಂದ್ರಯಾನ– 2ರ ಮುಂದುವರಿದ ಭಾಗವಾಗಿರುವ ಈ ಯೋಜನೆಯಲ್ಲಿ ಹಲವು ಬದಲಾವಣೆಗಳಿವೆ. ಹಿಂದಿನ ಸಲ ನಾವು ಹಾರಿಸಿದ ನೌಕೆಯು ಚಂದ್ರನನ್ನು ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಿತ್ತು. ಈ ನೌಕೆಯು ಚಂದ್ರನ ಗುರುತ್ವಾಕರ್ಷಣೆಗೆ ಒಳಗಾದ ನಂತರ ನೆಲದಿಂದ ನೂರು ಕಿ.ಮೀ. ದೂರದ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತಿ ದಕ್ಷಿಣ ಧ್ರುವಕ್ಕೆ ಇಳಿಯುತ್ತದೆ. ಚಂದ್ರಯಾನ– 2ರಲ್ಲಿ ಆರ್ಬಿಟರ್ (ಕಕ್ಷಾಕೋಶ), ಲ್ಯಾಂಡರ್ (ಇಳಿಯುವ ಕೋಶ) ಮತ್ತು ರೋವರ್ (ಚಲಿಸುವ ರೊಬಾಟು) ಎಂಬ ಮೂರು ಭಾಗಗಳಿದ್ದವು. ಪ್ರಸಕ್ತ ಯೋಜನೆಯಲ್ಲಿ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್‌ಗಳು ನೇರವಾಗಿ ಚಂದ್ರನ ದಕ್ಷಿಣ ಭಾಗಕ್ಕೆ ತೆರಳಿ ಕೆಲಸ ಶುರುಮಾಡುತ್ತವೆ. ಚಂದ್ರಯಾನ– 2ರಲ್ಲಿ ಕಳಿಸಲಾಗಿದ್ದ ಆರ್ಬಿಟರ್ ಈಗಲೂ ಚಂದ್ರನ ಸುತ್ತ ಸುತ್ತುತ್ತಿದೆ.

2008ರಲ್ಲಿ ಕೈಗೊಂಡ ಮೊದಲ ಚಂದ್ರಯಾನ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿತ್ತು. ಆಗ ನೌಕೆಯಲ್ಲಿದ್ದ ಇಂಪ್ಯಾಕ್ಟರ್‌ ಅನ್ನು ಅಲ್ಲಿ ನಿಧಾನವಾಗಿ ಇಳಿಸದೆ, ವೇಗವಾಗಿ ಡಿಕ್ಕಿ ಹೊಡೆಸಲಾಗಿತ್ತು. 29 ಕಿಲೊ ತೂಕದ ಇಂಪ್ಯಾಕ್ಟರ್‌ ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಜೋರಾಗಿ ಗುದ್ದುವಂತೆ ಮಾಡಿದಾಗ, ಹಿಮಯುಕ್ತ ನೀರಿನ ಕಣ ಪತ್ತೆಯಾಗಿತ್ತು. ಇದನ್ನು ನಮ್ಮ ನೌಕೆಗೆ ಅಂಟಿಸಲಾಗಿದ್ದ ನಾಸಾದ ‘ಮೂನ್ ಮಿನರಾಲಜಿ ಮ್ಯಾಪರ್’ ಯಂತ್ರವು ಪತ್ತೆಮಾಡಿತ್ತು. ಖಗೋಳ ವಿಜ್ಞಾನಿಗಳ ಊಹೆ ನಿಜವಾಗಿತ್ತು. ಇದನ್ನು ರಿಮೋಟ್ ಸೆನ್ಸಿಂಗ್ ವಿಧಾನದಲ್ಲಿ ಪತ್ತೆ ಹಚ್ಚಲಾಗಿತ್ತು.

ದೂರಸಂವೇದಿ ಅಧ್ಯಯನಗಳ ಪ್ರಕಾರ, ಚಂದ್ರನ ದಕ್ಷಿಣದ ಕೆಲವು ಪ್ರದೇಶಗಳ ಮೇಲೆ ಕೋಟ್ಯಂತರ ವರ್ಷಗಳಿಂದ ಸೂರ್ಯನ ಬೆಳಕೇ ಬಿದ್ದಿಲ್ಲ. ಗಾಢ ಕತ್ತಲೆ- ತಂಪಿನ (-200°ಸೆಂ) ಈ ಜಾಗದಲ್ಲಿ ಬೃಹತ್ ಪ್ರಮಾಣದ ನೀರು ಇರಬಹುದೆಂಬ ಅಭೀಪ್ಸೆ ಎಲ್ಲರದ್ದು. ಚಂದ್ರನ ಮೇಲ್ಮೈ ಪರೀಕ್ಷೆಗಳಿಂದ ಅಲ್ಲಿನ ನೆಲದಲ್ಲಿ ಜಲಜನಕ, ಅಮೋನಿಯ, ಮೀಥೇನ್, ಸೋಡಿಯಂ, ಪಾದರಸ ಮತ್ತು ಬೆಳ್ಳಿ ಇದೆಯೆಂದು ಗೊತ್ತಾಗಿದೆ. ಅದರ ಪ್ರಮಾಣವೇನು ಎಂಬುದು ಇನ್ನೂ ಪೂರ್ತಿ ತಿಳಿದಿಲ್ಲ.

ಚಂದ್ರಯಾನ– 2ರಲ್ಲಿ ಚಂದ್ರನ ನೆಲಕ್ಕಿಳಿಯಲು ನಿಯೋಜಿಸಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ನೆಲ ಇನ್ನೂ 2 ಕಿ.ಮೀ. ದೂರವಿದ್ದಾಗ ಭೂಮಿಯ ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿತ್ತು. ಮೂರು ಲಕ್ಷದ ಎಂಬತ್ನಾಲ್ಕು ಸಾವಿರ ಕಿ.ಮೀ. ದೂರ ಕ್ರಮಿಸಿದ್ದ ಲ್ಯಾಂಡರ್‌ನ ಎಂಜಿನ್‍ಗಳು ಚಾಲನೆಗೊಂಡು ನಿಧಾನವಾಗಿ ವಿಕ್ರಂ ಅನ್ನು ಚಂದ್ರನ ನೆಲದ ಮೇಲೆ ಇಳಿಸಬೇಕಿತ್ತು. ಇದಾದ ಎರಡು ತಾಸುಗಳ ನಂತರ ಲ್ಯಾಂಡರ್‌ನ ಬಾಗಿಲು ತೆರೆದುಕೊಂಡು ಹೊರಬರುವ ‘ಪ್ರಜ್ಞಾನ್’ ಅಲ್ಲಿ 14 ದಿನಗಳ ಕಾಲ ಓಡಾಡಿ ಮಾಹಿತಿ ಸಂಗ್ರಹಿಸಬೇಕಿತ್ತು. ಆದರೆ ಯೋಜನೆಯ ಕೊನೆಯ ಭಾಗದಲ್ಲಿ ನಿಧಾನವಾಗಿ ಇಳಿಯಬೇಕಿದ್ದ ಲ್ಯಾಂಡರ್ ವೇಗವಾಗಿ ಬಿದ್ದು ಧ್ವಂಸಗೊಂಡಿತ್ತು. ಅದನ್ನು ಕ್ರಿಯಾಶೀಲಗೊಳಿಸಲು ಭೂಮಿಯ ನಿಯಂತ್ರಣ ಕೇಂದ್ರದಿಂದ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದವು.

ಇಸ್ರೊದ ಮುಂದಿನ ಅಂತರ್‌ಗ್ರಹ ಯೋಜನೆಗಳಿಗೆ ಸತ್ವ, ನೆಲೆ ಎರಡನ್ನೂ ಒದಗಿಸುವ ಉದ್ದೇಶದ ಈ ಯೋಜನೆಯಲ್ಲಿ ಅಲ್ಲಿಯೇ ಪ್ರಯೋಗ ಕೈಗೊಳ್ಳುವ ವ್ಯವಸ್ಥೆ ಇದೆ. ಲ್ಯಾಂಡರ್‌ನಲ್ಲಿ ಮೂರು, ರೋವರ್‌ನಲ್ಲಿ ಎರಡು ಮತ್ತು ಪ್ರೊಪಲ್ಶನ್ ಮಾಡ್ಯೂಲ್‌ನಲ್ಲಿ ಒಂದು, ಒಟ್ಟು ಆರು ಉಪಕರಣಗಳನ್ನು ಪ್ರಯೋಗಾಧ್ಯಯನಕ್ಕಾಗಿ ನಿಯೋಜಿಸಲಾಗಿದೆ. ಚಂದ್ರನೆಲದ ಪ್ಲಾಸ್ಮಾ ಸಾಂದ್ರತೆ (ಇಲೆಕ್ಟ್ರಾನ್ ಮತ್ತು ಅಯಾನು) ಅಳೆಯಲು ರಂಭ ಎಲ್‍ಪಿ, (ಲ್ಯಾಂಗ್‌ಮ್ಯೂರ್‌ ಪ್ರೋಬ್‌), ಧ್ರುವಪ್ರದೇಶದ ಚಂದ್ರನ ಮೇಲ್ಮೈನ ಕಣಗಳ ಶಾಖಗ್ರಹಣ ಮತ್ತು ಪ್ರಸರಣ ಪರಿಮಾಣ ಅಳೆಯಲು ಛಾಸ್ಟ್ (ಚಂದ್ರಾಸ್‌ ಸರ್ಫೇಸ್‌ ಥರ್ಮೊ ಫಿಸಿಕಲ್‌ ಎಕ್ಸ್‌ಪೆರಿಮೆಂಟ್‌), ಲ್ಯಾಂಡರ್ ಇಳಿಯುವ ಜಾಗದ ಕಂಪನದ ಕಂಪನಾಂಕ ಅಳೆಯಲು ಇಲ್ಸ (ಇನ್‌ಸ್ಟ್ರುಮೆಂಟ್‌ ಫಾರ್‌ ಲೂನಾರ್‌ ಸೈಸ್ಮಿಕ್‌ ಆ್ಯಕ್ಟಿವಿಟಿ), ಅಲ್ಲಿನ ಮಣ್ಣು ಮತ್ತು ಬಂಡೆಗಳನ್ನು ಛಿದ್ರಿಸಿ ಅವುಗಳಲ್ಲಿರುವ ವಿವಿಧ ಲೋಹಗಳನ್ನು ಪತ್ತೆ ಮಾಡಲು ಲಿಬ್ಸ್ (ಲೇಸರ್‌ ಇಂಡ್ಯೂಸ್ಡ್‌ ಬ್ರೇಕ್‌ಡೌನ್‌ ಸ್ಪೆಕ್ಟ್ರೊಸ್ಕೋಪ್‌), ಚಂದ್ರನ ನೆಲದಲ್ಲಿರಬಹುದಾದ ಅದಿರು ನಿಕ್ಷೇಪ ಹಾಗೂ ರಸಾಯನಿಕ ಸಂರಚನೆ ಪತ್ತೆಮಾಡಲು ಎಪಿಎಕ್ಸ್‌ಎಸ್‌ (ಆಲ್ಫಾ ಪಾರ್ಟಿಕಲ್‌ ಎಕ್ಸ್‌ರೇ ಸ್ಪೆಕ್ಟ್ರೊಮೀಟರ್‌) ಮತ್ತು ಇನ್‌ಫ್ರಾರೆಡ್ ಕಿರಣಗಳ ತರಂಗದೂರ ವ್ಯಾಪ್ತಿಯಲ್ಲಿ ಭೂಮಿಯು ಹೊಮ್ಮಿಸುವ ಬೆಳಕನ್ನು ಅಳೆಯುವ ಶೇಪ್ (ಸ್ಪೆಕ್ಟ್ರೊ ಪೋಲಾರಿಮೆಟ್ರಿ ಆಫ್‌ ಹ್ಯಾಬಿಟಬಲ್‌ ಪ್ಲ್ಯಾನೆಟ್‌ ಅರ್ಥ್‌) ಎಂಬ ಉಪಕರಣಗಳು ಅಗಾಧ ಮಾಹಿತಿಯ ಕಣಜವನ್ನೇ ಭೂಮಿಗೆ ರವಾನಿಸಲಿವೆ. ನಂತರದ ಕೆಲಸ ವಿಜ್ಞಾನಿಗಳದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.