ADVERTISEMENT

ಜನತಾವಾಣಿ ಜನಾರ್ದನನ ವಾಣಿಯಲ್ಲ

ಪ್ರಜಾವಾಣಿ ವಿಶೇಷ
Published 22 ಮೇ 2018, 19:10 IST
Last Updated 22 ಮೇ 2018, 19:10 IST
ಜನತಾವಾಣಿ ಜನಾರ್ದನನ ವಾಣಿಯಲ್ಲ
ಜನತಾವಾಣಿ ಜನಾರ್ದನನ ವಾಣಿಯಲ್ಲ   

ಜನಾದೇಶದ ಕುರಿತು ವಿಭಿನ್ನ ದೃಷ್ಟಿಕೋನಗಳನ್ನು ಪ್ರತಿನಿಧಿಸುವ ಎರಡು ಸುಪ್ರಸಿದ್ಧ ಹೇಳಿಕೆಗಳಿಂದ ಈ ಲೇಖನ ಪ್ರಾರಂಭಿಸುತ್ತೇವೆ. ಮೊದಲನೆಯ ಹೇಳಿಕೆ, 19ನೆಯ ಶತಮಾನದ ಪ್ರಖ್ಯಾತ ರಾಜಕೀಯ ಚಿಂತಕನಾದ ಜಾನ್ ಸ್ಟುವರ್ಟ್ ಮಿಲ್‍ನದ್ದು. ಅವನು ಹೇಳುತ್ತಾನೆ: ‘ಜನತಾವಾಣಿಯೇ ಜನಾರ್ದನನ ವಾಣಿ’. ಇನ್ನೊಂದು ಹೇಳಿಕೆ ಪ್ರಸಿದ್ಧ ಅನುಭಾವಿ ಕವಿ ಅಲೆಗ್ಸಾಂಡರ್ ಪೋಪ್‌ನದ್ದು. ಆತ ಹೇಳುತ್ತಾನೆ: ‘ಜನತಾವಾಣಿ ವಿಚಿತ್ರವಾದದ್ದು. ಅದು ದೈವವಾಣಿಯಂತೂ ಖಂಡಿತಾ ಅಲ್ಲ’.

ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದ ಈ ಸಂದರ್ಭ; ಪ್ರಜಾತಂತ್ರದ ಒಂದು ಆಯಾಮವಾದ ಚುನಾವಣೆಯೂ ಸೇರಿದಂತೆ ಪ್ರಜಾತಂತ್ರದ ಅನೇಕ ಆಯಾಮಗಳನ್ನು ಹಾಗೂ ಮಜಲುಗಳನ್ನು ಮರುಪರಿಶೀಲನೆಗೆ ಒಳಪಡಿಸಲು ಸೂಕ್ತವಾದ ಪರಿಪ್ರೇಕ್ಷ್ಯವನ್ನು ಒದಗಿಸಿದೆ. ಈ ಹಿನ್ನೆಲೆಯಲ್ಲಿ ಜೆ.ಎಸ್. ಮಿಲ್ ಮತ್ತು ಅಲೆಗ್ಸಾಂಡರ್ ಪೋಪ್ ಅವರ ಪರಸ್ಪರ ತದ್ವಿರುದ್ಧವಾದ ಎರಡು ಹೇಳಿಕೆಗಳು ಬಹಳ ಮುಖ್ಯ. ಜನರ ಮಾತೇ ದೇವರ ಮಾತು ಎಂದು ಹೇಳುವ ಮಿಲ್ ಓರ್ವ ರಾಜಕೀಯ ಚಿಂತಕನಾಗಿರುವುದು ಮತ್ತು ಜನರ ಮಾತು ದೇವರ ಮಾತು ಅಲ್ಲ ಎಂದು ಹೇಳುವ ಪೋಪ್ ಓರ್ವ ಕವಿಯಾಗಿರುವುದು ಕುತೂಹಲಕಾರಿಯಾದ ಸಂಗತಿ.

ಈ ಹಿನ್ನೆಲೆಯಲ್ಲಿ ಇಂದು ನಮ್ಮ ಮುಂದಿರುವ ಕರ್ನಾಟಕದ ಚುನಾವಣೋತ್ತರ ಸನ್ನಿವೇಶವು ಚುನಾವಣೆಯ ಬಗ್ಗೆ ಮತ್ತು ಪ್ರಧಾನವಾಗಿ ಪ್ರಜಾತಂತ್ರದ ಬಗ್ಗೆ ಚಿಂತನೆ ನಡೆಸುವುದಕ್ಕೆ ಹದವಾಗಿದೆ.

ADVERTISEMENT

ಚುನಾವಣೆಗಳು ಯಾವುದೇ ಪ್ರಜಾತಾಂತ್ರಿಕ ವ್ಯವಸ್ಥೆಯ ಅವಿಚ್ಛಿನ್ನ ಭಾಗ. ಆದರೆ ಚುನಾವಣೆಗಳು ಪ್ರಜಾತಂತ್ರವನ್ನು ಸಾಕ್ಷಾತ್ಕಾರಗೊಳಿಸುವ ಒಂದು ಕ್ರಿಯಾಚರಣೆಯೇ ಹೊರತು ಅದೇ ಪ್ರಜಾತಂತ್ರವಲ್ಲ. ಪ್ರಜಾತಂತ್ರವೆನ್ನುವ ಅತ್ಯಂತ ಸಂಕೀರ್ಣವಾದ ಚಿಂತನೆ ಹಾಗೂ ಕ್ರಿಯಾಚರಣೆಗಳ ಸರಮಾಲೆಯಲ್ಲಿ ಚುನಾವಣೆಯ ನಿರ್ದಿಷ್ಟತೆಯನ್ನು ಮತ್ತು ಅದರ ಮಿತಿಗಳನ್ನು ಗುರುತಿಸಬೇಕಾಗಿರುವುದು ಬಹಳ ಮುಖ್ಯವಾದ ಸಂಗತಿ. ಜೊತೆಗೆ ಪ್ರಜಾತಂತ್ರದ ಕುರಿತಾದ ಜಿಜ್ಞಾಸೆಯಲ್ಲಿ ಚುನಾವಣೆಯ ಪಾತ್ರವನ್ನು ವಿಶ್ಲೇಷಣಾತ್ಮಕವಾಗಿ ಪ್ರತ್ಯೇಕಿಸುವುದು ಪ್ರಜಾತಂತ್ರದ ಹಿಂದಿರುವ ತತ್ವಜ್ಞಾನವನ್ನು ಅರಿತುಕೊಳ್ಳುವ ದೃಷ್ಟಿಯಿಂದಲೂ ಬಹಳ ಮುಖ್ಯವಾದುದಾಗಿದೆ.

ಹಾಗೆ ಮಾಡದಿದ್ದ ಪಕ್ಷದಲ್ಲಿ, ಪ್ರಜಾಪ್ರಭುತ್ವವೆಂದರೆ ಚುನಾವಣೆ ಮತ್ತು ಚುನಾವಣೆ ಎಂದರೆ ಪ್ರಜಾಪ್ರಭುತ್ವ ಎನ್ನುವ ಅತ್ಯಂತ ಸರಳೀಕೃತವಾದ ಮತ್ತು ಗಂಡಾಂತರಕಾರಿಯಾದ ತೀರ್ಮಾನಕ್ಕೆ ನಾವು ಬಂದುಬಿಡುತ್ತೇವೆ.

ಪ್ರಜಾತಂತ್ರ ಮತ್ತು ಚುನಾವಣೆಯ ನಡುವಿನ ಈ ವಿಶ್ಲೇಷಣಾತ್ಮಕ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ಗಮನಿಸಿದಾಗ ಅನೇಕ ವಿಸಂಗತಿಗಳು ಹಾಗೂ ವಿರೂಪಗಳು ನಮಗೆ ಕಾಣಿಸುತ್ತವೆ. ಬಹುಶಃ 2018ರ ಕರ್ನಾಟಕದ ಈ ವಿಧಾನಸಭಾ ಚುನಾವಣೆಯು ಪ್ರಜಾತಂತ್ರದಲ್ಲಿ ನಿಹಿತವಾದ ಸಭ್ಯತೆಯ, ಸಂಯಮದ ಹಾಗೂ ಸದಾಚಾರದ ಎಲ್ಲಾ ಗಡಿರೇಖೆಗಳನ್ನು ನಿರ್ಲಜ್ಜೆಯಿಂದ ಉಲ್ಲಂಘಿಸಿದೆ ಎನ್ನಬಹುದು. ಕರ್ನಾಟಕದಲ್ಲಿ ನಡೆದ ಈ ಚುನಾವಣೆ ಎನ್ನುವ ಪ್ರಜಾತಾಂತ್ರಿಕ ನಾಟಕರಂಗದಲ್ಲಿ ತಮ್ಮ ತಮ್ಮ ಪ್ರದರ್ಶನಗಳನ್ನು ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳ ಧುರೀಣರು ಮತ್ತು ಕಾರ್ಯಕರ್ತರು ಪರಸ್ಪರರನ್ನು ದೂಷಿಸುವ, ಸತ್ವವಿಲ್ಲದ ಟೊಳ್ಳು ಮಾತುಗಳನ್ನಾಡುವ ಹಾಗೂ ಜನರಿಗೆ ಲಂಗು-ಲಗಾಮಿಲ್ಲದ ಪೊಳ್ಳು ಆಮಿಷಗಳನ್ನು, ಭರಪೂರ ಕೊಡುಗೆಗಳ ಭರವಸೆ ನೀಡುವ ಕೆಲಸವನ್ನೂ ಮಾಡಿದ್ದಾರೆ.

ಪ್ರಜಾತಂತ್ರಕ್ಕೆ ಅನಿವಾರ್ಯವಾದ ಚುನಾವಣೆಯ ಸ್ಪರ್ಧಾತ್ಮಕತೆಯನ್ನು ನಮ್ಮ ಮಾಧ್ಯಮಗಳು ರಣರಂಗವೆಂದು ಬಣ್ಣಿಸಿ ಪ್ರಜಾತಂತ್ರದ ಮೂಲ ಆಶಯಕ್ಕೆ ಕುಂದು ಬರುವಂತೆಯೂ ನಡೆದುಕೊಂಡಿವೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಚೇರಿಗಳಲ್ಲಿ ‘ವಾರ್ ರೂಮ್’ ಎಂಬ ಹೆಸರಿನಲ್ಲಿ ಉಪಕಚೇರಿಗಳನ್ನು ತೆರೆದಿರುವುದು ಮತ್ತು ಚುನಾವಣೆಯಲ್ಲಿ ಗೆದ್ದವರನ್ನು ವಿಜೃಂಭಿಸಿ, ಸೋತವರನ್ನು ಹಂಗಿಸುವ ನಮ್ಮ ನಡೆ-ನುಡಿ ಪ್ರಜಾತಂತ್ರದ ಅಸ್ತಿತ್ವಕ್ಕೆ ಮಾರಕವಾದದ್ದೂ ಆಗಿದೆ.

ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಆದರೆ ಈ ಪ್ರಣಾಳಿಕೆಗಳು ವಿಭಿನ್ನ ರಾಜಕೀಯ ಪಕ್ಷಗಳ ಸೈದ್ಧಾಂತಿಕ ದೃಷ್ಟಿಕೋನವನ್ನು ಪ್ರತಿನಿಧಿಸುವ ಅಥವಾ ಅವುಗಳು ಕೈಗೊಳ್ಳಲಿರುವ ರಚನಾತ್ಮಕ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿಲ್ಲ.

ಬದಲಿಗೆ ಜನರಿಗೆ ಭಾಗ್ಯಗಳ ಅಥವಾ ಉದಾರ ಕೊಡುಗೆಗಳ ಆಮಿಷವನ್ನು ಒಡ್ಡುವ ಅಫೀಮಿನ ತರಹ ಕಾಣಿಸಿಕೊಂಡಿವೆ. ಈ ಭರಪೂರ ಕೊಡುಗೆಗಳ ಅಬ್ಬರ ಮತ್ತು ಪರಸ್ಪರ ವೈಯಕ್ತಿಕ ದೂಷಣೆಗಳಲ್ಲಿ ಹಾಗೂ ಸ್ವ-ಪ್ರತಾಪದ ಹೊಗಳಿಕೆಯಲ್ಲಿ ನಿರತರಾಗಿರುವ ರಾಜಕಾರಣಿಗಳ ಈ ಊಳಿಗಮಾನ್ಯ ಧೋರಣೆಗಳ ನಡುವೆ ಪ್ರಜಾತಾಂತ್ರಿಕ ಆಶೋತ್ತರಗಳು ಚೆಲ್ಲಾಪಿಲ್ಲಿಗೊಂಡಿವೆ.

ಇವುಗಳನ್ನು ಮರುಸಂಘಟಿಸುವ ಅಗತ್ಯವಿದೆ. ಅಲ್ಲದೆ, ಬಹುಬೇಗನೆ ಮತ್ತು ಅತಿ ಸುಲಭದಲ್ಲಿ ವಿರೂಪಗೊಳ್ಳಬಹುದಾದ ಪ್ರಜಾತಾಂತ್ರಿಕತೆಯ ತಾತ್ವಿಕ ಕ್ರಿಯಾಚರಣೆಯಲ್ಲಿರುವ ಮಿತಿಗಳನ್ನು ಗುರುತಿಸಿಕೊಳ್ಳಬೇಕಾದ ಜರೂರಿನಲ್ಲಿ ನಾವಿದ್ದೇವೆ.

ಪ್ರಜಾತಂತ್ರ ಮೂಲತಃ ಒಂದು ತತ್ವಜ್ಞಾನ. ಅದು, ಎಲ್ಲರ ಒಳಿತನ್ನು ಸಾಮುದಾಯಿಕ ನಿಷ್ಕರ್ಷೆ, ಸಮಾಲೋಚನೆ ಹಾಗೂ ಸಹಮತಗಳ ಮೂಲಕ ಗಳಿಸಿಕೊಳ್ಳಬೇಕೆಂದು ಪ್ರತಿಪಾದಿಸುವ ಒಂದು ರಾಜಕೀಯ ತತ್ವಜ್ಞಾನ. ಎಲ್ಲರನ್ನೂ ಒಳಗೊಳ್ಳಲು ಮತ್ತು ಸಾಮುದಾಯಿಕ ಒಳಿತನ್ನು ಸಾಧಿಸಲು ಪ್ರಜಾತಂತ್ರ ಅನೇಕ ಸಂಘ-ಸಂಸ್ಥೆಗಳನ್ನು ಹಾಗೂ ಸಂಪ್ರದಾಯಗಳನ್ನು ಹುಟ್ಟುಹಾಕಿದೆ.

ಅಂತೆಯೇ, ಈ ಸಂಘ ಸಂಸ್ಥೆಗಳು ಮತ್ತು ಸಂಪ್ರದಾಯಗಳ ಮೂಲಕ ಅದು ಸ್ವಾತಂತ್ರ್ಯ, ಸಮಾನತೆ, ಸಹ-ಬಂಧುತ್ವ, ನಾಗರಿಕ ಹಕ್ಕುಗಳು ಮೊದಲಾದ ಅನೇಕ ಆಶೋತ್ತರಗಳನ್ನು ಸಾಧಿಸುವ ಹಂಬಲವನ್ನೂ ಇರಿಸಿಕೊಂಡಿದೆ. ಸುದೀರ್ಘವಾದ, ಸಂಕೀರ್ಣವಾದ ಹಾಗೂ ಕಷ್ಟಕರವಾದ ಸ್ವಾತಂತ್ರ್ಯ ಹೋರಾಟದ ಮೂಲಕ ಭಾರತವು ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ.

ತಾತ್ವಿಕತೆಯ ನೆಲೆಯಲ್ಲಿ ಸಂಕೀರ್ಣವಾದ, ಸಂಘಟನೆಯ ನೆಲೆಯಲ್ಲಿ ಜಟಿಲವಾದ ಹಾಗೂ ಕ್ರಿಯಾಚರಣೆಯ ನೆಲೆಯಲ್ಲಿ ಕಷ್ಟಕರವಾದ ಈ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ನಾವು ಕಳೆದ ಏಳು ದಶಕಗಳಲ್ಲಿ ಎಲ್ಲಾ ವಿಸಂಗತಿಗಳ, ಹಲವು ವೈಪರೀತ್ಯಗಳ ಹಾಗೂ ಅನೇಕ ಅಪರಿಪೂರ್ಣತೆಗಳ ನಡುವೆ ನಿರ್ವಹಿಸಿಕೊಂಡು ಬಂದಿದ್ದೇವೆ. ಪ್ರಜಾತಂತ್ರದ ನಮ್ಮ ಈ ನಿರ್ವಹಣೆ ನಾವು ಎದುರಿಸುತ್ತಿರುವ ಅಸಮಾನತೆ ಮತ್ತು ಅಸಮತೋಲನಗಳ ಸಮಕ್ಷಮದಲ್ಲಿ ತೃಪ್ತಿಕರವಾಗಿಯೇನೂ ಇಲ್ಲ. ಹಾಗಾಗಿ, ಪ್ರಜಾತಂತ್ರದ ತಾತ್ವಿಕ ಕ್ರಿಯಾಚರಣೆಯ ಕೆಲವು ಸಾಮಾನ್ಯ ದೌರ್ಬಲ್ಯಗಳನ್ನು ಹಾಗೂ ಅದರ ನಿರ್ದಿಷ್ಟ ಇತಿಮಿತಿಗಳನ್ನು ನಾವು ಸ್ಪಷ್ಟವಾಗಿ ಕಂಡುಕೊಳ್ಳಬೇಕಾಗಿದೆ.

ಮೊದಲಿಗೆ ಪ್ರಜಾತಂತ್ರದ ಅತ್ಯಂತ ಮುಖ್ಯವಾದ ಪ್ರತಿಪಾದನೆಯೊಂದರ ಕುರಿತು ಗಮನವನ್ನು ಹರಿಸೋಣ. ಪ್ರಜಾತಂತ್ರ ನಿರಂತರವಾಗಿ ಮುಂದಿಡುವ ಜನಾಧಿಪತ್ಯದ ಕಲ್ಪನೆ ಅಮೂರ್ತವಾದದ್ದು ಮಾತ್ರವಲ್ಲ, ಅದು ಅಲೌಕಿಕವಾದದ್ದು ಕೂಡಾ ಆಗಿದೆ. ಜನಮತ, ಜನಾಭಿಪ್ರಾಯ, ಜನಾದೇಶ, ಜನರ ತೀರ್ಪು ಎಂಬಿತ್ಯಾದಿ ಮಾತುಗಳನ್ನು ನಾವು ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಮತ್ತೆ ಮತ್ತೆ ಉಚ್ಚರಿಸುತ್ತಿರುತ್ತೇವೆ.

ಆದರೆ ಈ ಜನರು ಯಾರು, ಅವರು ಎಂದಾದರೂ ಒಟ್ಟಾಗಿ ಒಂದು ತೀರ್ಮಾನಕ್ಕೆ ಬರುತ್ತಾರೆಯೇ, ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನೂ ಪ್ರತಿನಿಧಿಸುವ ಒಂದು ಜನಾದೇಶವೆಂಬುದು ಇರಲು ಸಾಧ್ಯವೋ, ಪ್ರಜೆಗಳು ಏಕತ್ರಗೊಂಡು ಎಲ್ಲರಿಗೂ ಒಳಿತಾಗುವ ಒಂದು ಆದೇಶವನ್ನು ಕೊಡಬಲ್ಲರೋ... ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ.

ಜಾತಿ, ವರ್ಗ, ಮತ ಹಾಗೂ ಪಂಥಗಳಲ್ಲಿ ಹರಿದು ಹಂಚಿಹೋಗಿರುವ ಈ ದೇಶದ ಪ್ರಜೆಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ದಾಟಿ ಫ್ರೆಂಚ್ ಚಿಂತಕನಾದ ರೂಸೊ ಹೇಳುವಂತೆ ‘ಸಾರ್ವಜನಿಕ ಸದಿಚ್ಛೆ’ಯನ್ನು ಪ್ರಕಟಿಸಬಲ್ಲರು ಎಂದು ಪ್ರಜಾತಂತ್ರ ತಿಳಿಯುತ್ತದೆ. ಅದನ್ನು ಸಾಧಿಸಲು ಮತ್ತು ಪ್ರಕಟಿಸಲು ಪ್ರಜಾತಂತ್ರ ತನ್ನದೇ ಆದ ಸಂಘ-ಸಂಸ್ಥೆಗಳನ್ನು ಹಾಗೂ ನೀತಿ-ನಿಯಮಗಳನ್ನು ರೂಪಿಸುತ್ತದೆ. ಆದರೆ ಪ್ರಜಾತಂತ್ರ ಪರಿಕಲ್ಪಿಸುವ ಈ ಸಂಘ-ಸಂಸ್ಥೆಗಳು ಹಾಗೂ ನೀತಿ-ನಿಯಮಗಳು ಅತ್ಯಂತ ಪ್ರಬುದ್ಧವಾದ ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿಯೂ ವಿರೂಪಗೊಂಡು ಈ ಸಾರ್ವಜನಿಕ ಸದಿಚ್ಛೆ ಎನ್ನುವ ಪ್ರಜಾತಂತ್ರದ ಆಧ್ಯಾತ್ಮಿಕ ಶ್ರದ್ಧೆ ಇಂದು ಅಪಮೌಲ್ಯಗೊಂಡಿದೆ.

ವಸ್ತುಸ್ಥಿತಿ ಹೀಗಿರುವಾಗ ಭಾರತದಂತಹ ಅಸಮ ಸಮಾಜದಲ್ಲಿ ಪ್ರಜಾತಂತ್ರದ ಮೌಲ್ಯಗಳು, ಸಂಘ-ಸಂಸ್ಥೆಗಳು ಹಾಗೂ ಅವುಗಳ ನೀತಿ-ನಿಯಮಗಳು ಪರಿಹಾಸ್ಯಕ್ಕೊಳಗಾದ ನಿದರ್ಶನಗಳು ಹೇರಳವಾಗಿವೆ. ಚುನಾವಣೆಯ ಸಂದರ್ಭದಲ್ಲಂತೂ ಪ್ರಜಾತಂತ್ರದ ಎಲ್ಲಾ ಮೌಲ್ಯಗಳನ್ನೂ  ರೀತಿ-ನೀತಿಗಳನ್ನೂ ನಾವು ಗಾಳಿಗೆ ತೂರಿದ್ದೇವೆ. ಪ್ರಜಾತಂತ್ರದಲ್ಲಿ ನಿಯತವಾದ ಈ ಸಾರ್ವಜನಿಕ ಸದಿಚ್ಛೆಯ ಆಧ್ಯಾತ್ಮಿಕ ಕಲ್ಪನೆ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಆದರೂ ಆ ಪ್ರಯತ್ನಗಳು ಅಷ್ಟೇನೂ ಫಲಕಾರಿಯಾಗಿಲ್ಲ. ಇನ್ನೂ ಅನಭಿವೃದ್ಧಿಯ ಕಂಟಕಗಳಿಂದ ಹೊರ ಬಂದಿರದ ಭಾರತದಂತಹ ಪ್ರಜಾತಂತ್ರದಲ್ಲಿ ಸಾರ್ವಜನಿಕ ಸದಿಚ್ಛೆಯ ಸಾಕ್ಷಾತ್ಕಾರಕ್ಕೆ ಎದುರಾಗಿರುವ ಸಮಸ್ಯೆಗಳೂ ಅಸಂಖ್ಯವೆನ್ನಬಹುದು. ಈ ನಿಟ್ಟಿನಲ್ಲಿ ಪ್ರಜಾತಂತ್ರದ ಚಿಂತಕರು ಮತ್ತು ಪ್ರತಿಪಾದಕರು ತಪೋ ಸದೃಶವಾದ ಚಿಂತನೆಯನ್ನು ನಡೆಸಬೇಕಾದ ಅವಶ್ಯಕತೆ ಇದೆ.

ಯಾಕೆಂದರೆ ಒಂದು ವಿಧಾಯಕವಾದ ವಿದ್ಯಮಾನದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಪ್ರಥಮವಾಗಿ ನಡೆಸಬೇಕಾದುದು ಚಿಂತನೆಯನ್ನೇ ಅಲ್ಲವೇ?

ಪ್ರಜಾತಂತ್ರ ಕಲ್ಪಿಸುವ ಈ ಸಾರ್ವಜನಿಕ ಸದಿಚ್ಛೆ ವಾಸ್ತವದಲ್ಲಿ ಒಡಕುಗಳಿಂದ ಕೂಡಿದ, ಅಸ್ಪಷ್ಟವಾದ ಹಾಗೂ ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸಬಹುದಾದ ವಿದ್ಯಮಾನವಾಗಿರುವುದರಿಂದ ಜನರ ತೀರ್ಮಾನವನ್ನು ಅಥವಾ ಜನಾದೇಶವನ್ನು ಸಾರ್ವಜನಿಕ ಒಳಿತಿನ ಪ್ರತಿಬಿಂಬವೆನ್ನುವಂತಿಲ್ಲ. ಅನೇಕ ಬಾರಿ ಪ್ರಜಾತಂತ್ರದಲ್ಲಿ ಪ್ರಜೆಗಳು ತಮ್ಮ ಮೂಗಿನ ನೇರದ ವಾಸ್ತವವನ್ನೇ ಸತ್ಯವೆಂದು ಭಾವಿಸುವ, ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನೇ ಸಾರ್ವಜನಿಕ ಹಿತಾಸಕ್ತಿ ಎಂದು ತಿಳಿಯುವ, ಸಂಕುಚಿತ ಧೋರಣೆಗಳನ್ನು ಹೊಂದಿರುವ ಮತ್ತು ಆಮಿಷಗಳಿಗೆ ತುತ್ತಾಗಿ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹೇರಳವಾಗಿವೆ. ಆದ್ದರಿಂದ ಜನಾದೇಶಕ್ಕೆ ಮಣಿಯಬೇಕು, ಪ್ರಜೆಗಳ ತೀರ್ಮಾನವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕು, ಪ್ರಜಾತಂತ್ರದಲ್ಲಿ ಪ್ರಜೆಯೇ ಪ್ರಭು ಎಂದು ನಾವಾಡುವ ಸಲೀಸಾದ ಮಾತುಗಳನ್ನು ಚರ್ಚೆಗೆ ಒಳಪಡಿಸುವ ಅವಶ್ಯಕತೆ ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಬಹಳ ಮುಖ್ಯ.

ಪ್ರಜಾತಂತ್ರದಲ್ಲಿ ಪ್ರಜೆಗಳ ಪ್ರಭುತ್ವ, ಅಧಿಕಾರ ಗ್ರಹಣದ ನೆಲೆಯಲ್ಲಿ ಅಥವಾ ಸರ್ಕಾರವನ್ನು ಚಲಾಯಿಸುವ ನಿಟ್ಟಿನಲ್ಲಿ ಮಾತ್ರ ಒಪ್ಪಿಕೊಳ್ಳಬೇಕಾದ ಇತಿಮಿತಿಯ ಸತ್ಯ. ಪ್ರಜೆಗಳ ಈ ಅಧಿಕಾರವು ಸರ್ಕಾರವನ್ನು ಯಾರು ಚಲಾಯಿಸಬೇಕು ಎನ್ನುವ ಆಯ್ಕೆಯ ಸಂದರ್ಭದಲ್ಲಿ ಮಾತ್ರ ಚುರುಕುಗೊಳ್ಳುವ ಮಿತಾಧಿಕಾರ. ಇದು ಪ್ರಜಾಪ್ರಭುತ್ವವನ್ನು ಪ್ರಜಾತಂತ್ರದ ಸಂಘ– ಸಂಸ್ಥೆಗಳ ಹಾಗೂ ರೀತಿ–ನೀತಿಗಳ ಆಚೆಗೆ ಅತಿರೇಕಕ್ಕೆ ತೆಗೆದುಕೊಂಡು ಹೋದಾಗ; ಆಗ ಅದು ಬಹುಸಂಖ್ಯಾಕತೆಯಾಗುತ್ತದೆ. ಬಹುಸಂಖ್ಯಾಕತೆ ಪ್ರಜಾತಂತ್ರದ ಬಹು ದೊಡ್ಡ ಆಂತರಿಕ ಶತ್ರು.

ಈ ಬಹುಸಂಖ್ಯಾಕತೆಯೇ ಒಂದು ಕಾಲದಲ್ಲಿ ಫ್ಯಾಸೀವಾದವಾಗಿ ಪರಿವರ್ತನೆ ಹೊಂದಿ ಪ್ರಜಾತಂತ್ರ ಬಹುಕಷ್ಟದಲ್ಲಿ ರೂಪಿಸಿಕೊಂಡ ಸಂಘ-ಸಂಸ್ಥೆಗಳ ಸಂಕೀರ್ಣ ವಿನ್ಯಾಸವನ್ನು, ರೀತಿ-ನೀತಿಗಳ ನಾಜೂಕಿನ ರಚನೆಗಳನ್ನು ಹಾಗೂ ಪ್ರಜಾತಂತ್ರದ ಮೌಲಿಕ ತಳಹದಿಯನ್ನು ಧ್ವಂಸಗೊಳಿಸುತ್ತದೆ. ಆದ್ದರಿಂದಲೇ ಪ್ರಜಾತಂತ್ರದ ಸದುದ್ದೇಶವನ್ನು ತೀವ್ರವಾಗಿ ಗಮನಿಸಿದ ರಾಜಕೀಯ ವಿಮರ್ಶಕರು ಅದನ್ನು ಅತ್ಯಂತ ದುರ್ಬಲವಾದ ಹಾಗೂ ಕಷ್ಟಕರವಾದ ವ್ಯವಸ್ಥೆಯೆಂದು ಬಣ್ಣಿಸಿದ್ದಾರೆ.

ಅದು ದುರ್ಬಲ ಏಕೆಂದರೆ ಅದಕ್ಕೆ ಹೊರಗಿನ ವೈರಿಗಳಿಗಿಂತ ಒಳಗಿನ ವೈರಿಗಳೇ ಜಾಸ್ತಿ. ಅಷ್ಟು ಮಾತ್ರವಲ್ಲದೆ ಪ್ರಜಾತಂತ್ರ ತನ್ನನ್ನು ನಿರ್ವಹಿಸಿಕೊಳ್ಳುವುದಕ್ಕೆ ರೂಪಿಸಿಕೊಂಡ ಸಂಘ-ಸಂಸ್ಥೆಗಳು ಮತ್ತು ನೀತಿ-ನಿಯಮಗಳು ತಮ್ಮ ಭಾರಕ್ಕೆ ತಾವೇ ಕುಸಿದು ಬೀಳುವ ಅನೇಕ ನಿದರ್ಶನಗಳನ್ನೂ ನಾವು ಕಂಡಿದ್ದೇವೆ. ಅತ್ಯಂತ ನವಿರಾದ ಆಶೋತ್ತರಗಳನ್ನು, ಸಂಕೀರ್ಣವಾದ ಸಂಘ-ಸಂಸ್ಥೆಗಳನ್ನು ತ್ರಾಸದಾಯಕವಾಗಿ ಪಾಲಿಸಲೇಬೇಕಾದ ಕಟ್ಟು-ನಿಟ್ಟುಗಳನ್ನು ಒಳಗೊಂಡಿರುವ ಪ್ರಜಾತಂತ್ರವನ್ನು ಅದರ ಎಲ್ಲಾ ವರ್ಚಸ್ಸುಗಳೊಂದಿಗೆ ಕಾಯ್ದಕೊಳ್ಳುವುದೆಂದರೆ ಅದು ಭಗೀರಥ ಸಾಹಸವೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.