ADVERTISEMENT

ಜನಾಭಿಪ್ರಾಯದ ವರದಿ ಜಾರಿಗೊಳಿಸಿ

ಭೂಮಿ ಬಿಸಿಯಾಗುವುದನ್ನು ತಪ್ಪಿಸುವ ಜನಪರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು

ಬೇಳೂರು ಸುದರ್ಶನ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ಕಲಬುರ್ಗಿ, ಬೆಳಗಾವಿ, ವಿಜಯಪುರದಂಥ ಉತ್ತರದ ನಗರಗಳಿಂದ ಹಿಡಿದು ಮೈಸೂರು, ಮಡಿಕೇರಿ, ಬೆಂಗಳೂರಿನವರೆಗೆ ಒಟ್ಟು 21 ಸಭೆಗಳು, ಸಮಾಜದ ಹಲವು ರಂಗಗಳ ಅನುಭವೀ ಸಾಮಾಜಿಕ ಕಾರ್ಯಕರ್ತರು, ತಜ್ಞರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಉದ್ಯಮಿಗಳು, ವಕೀಲರು, ವೈದ್ಯರು, ಅಧ್ಯಾಪಕರು- ಹೀಗೆ 6೦೦ಕ್ಕೂ ಹೆಚ್ಚು ಸಾರ್ವಜನಿಕರ ಭಾಗಿತ್ವ ಮತ್ತು ವಿಚಾರಗಳ ಮಂಡನೆ: ಇಂಥ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಹವಾಗುಣ ಬದಲಾವಣೆ ಮತ್ತು ವೈಪರೀತ್ಯದ ಕುರಿತು ಸಲ್ಲಿಸಿದ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿದ ಶಿಫಾರಸುಗಳ ಸಂಕಲನವನ್ನು  ವಿದ್ಯುತ್ ತಜ್ಞ ಶಂಕರ ಶರ್ಮ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ್ದಾರೆ. ಜೂನ್ 5ರ ವಿಶ್ವ ಪರಿಸರ ದಿನವೇ ಈ ವರದಿಯು ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಕೈ ಸೇರಿದೆ. ಆಗಲೇ ಸಾರ್ವಜನಿಕವಾಗಿ ಬಿಡುಗಡೆಯೂ ಆಗಿದೆ (ನೋಡಿ:http://wp.me/p34Lf5-jH)

ಬಹುಶಃ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಂಸ್ಥೆಯೊಂದು ರೂಪಿಸಿದ ಹವಾಗುಣ ಬದಲಾವಣೆ ಕುರಿತ ಸಾರ್ವಜನಿಕ ಅಭಿಪ್ರಾಯಗಳ ದಾಖಲೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ದೇಶದಾದ್ಯಂತ ಸುರಿದ ಅಕಾಲಿಕ ಮಳೆಯೂ ಹವಾಗುಣದ ಏರಿಳಿತದ ಪರಿಣಾಮವೇ ಎಂದು ವಿಜ್ಞಾನಿಗಳು ಲೆಕ್ಕ ಮಾಡುತ್ತಿರುವ ಸಂದರ್ಭದಲ್ಲಿ ಈ ವರದಿಯನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಹವಾಗುಣ ವೈಪರೀತ್ಯ ಎದುರಿಸಲು ಈಗಾಗಲೇ ರಾಷ್ಟ್ರೀಯ ಮತ್ತು ರಾಜ್ಯ ಕ್ರಿಯಾ ಯೋಜನೆಗಳು ಸಿದ್ಧವಾಗಿವೆ. 

ದುರದೃಷ್ಟವಶಾತ್ ರಾಜ್ಯದ ಕ್ರಿಯಾಯೋಜನೆಯು  (ನೋಡಿ: http://bit.ly/1Fem3Uo) ಕೇವಲ ಸರ್ಕಾರಿ ಇಲಾಖಾ ಮಟ್ಟದ ಚರ್ಚೆ ಮತ್ತು ಶಿಫಾರಸುಗಳಿಗೆ ಸೀಮಿತವಾಗಿದೆ. ಪ್ರತಿಷ್ಠಿತ ‘ಟೆರಿ’ ಮತ್ತು ‘ಎಂಪ್ರಿ’ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದ ಈ ವರದಿಯಲ್ಲಿ ಸಾರ್ವಜನಿಕರ ಅಭಿಪ್ರಾಯಗಳೇ ಇರಲಿಲ್ಲ; ಎಲ್ಲವೂ ಇಲಾಖಾ ಅಧಿಕಾರಿಗಳ ಮಟ್ಟದ  ಚರ್ಚೆಗಳೇ! ಈ ಗಂಭೀರ ಕೊರತೆಯನ್ನು ಮನಗಂಡೇ ಮಂಡಳಿಯು ಇಂಥದ್ದೊಂದು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಯಿತು. 

ಮಾಲಿನ್ಯ ನಿಯಂತ್ರಣ ಮಂಡಳಿಯು ಸಂಘಟಿಸಿದ್ದ ಈ ಏಳೆಂಟು ಸಭೆಗಳಲ್ಲಿ ನಾನೂ ಭಾಗವಹಿಸಿದ್ದೆ. ಸರ್ಕಾರಕ್ಕೆ ಸಲಹೆ ನೀಡಲು ಅತ್ಯಂತ ಉತ್ಸಾಹದಿಂದ ಮುಂದಾದ ಸಾರ್ವಜನಿಕರು, ಮಹಿಳೆಯರನ್ನು ಗಮನಿಸಿದೆ. ಸಾರ್ವಜನಿಕರ ಕಟುಟೀಕೆಗಳನ್ನೂ ಮಂಡಳಿಯ ಅಧಿಕಾರಿಗಳು ಟಿಪ್ಪಣಿ ಮಾಡಿಕೊಂಡಿದ್ದನ್ನು ಗಮನಿಸಿದೆ. ಕೆಲವು ಸಭೆಗಳಂತೂ ದಿನವಿಡೀ ನಡೆದವು. ಹೀಗಾಗಿಯೇ ಈ ವರದಿಯು ಸರ್ಕಾರದ ಮೂಗು ತೂರಿಸುವಿಕೆ, ಸೆನ್ಸಾರ್‌ಶಿಪ್ ಯಾವುದೂ ಇಲ್ಲದೆಯೇ, ಸಾರ್ವಜನಿಕರ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದೆ.

ಜಲ ಮತ್ತು ನೈರ್ಮಲ್ಯ, ಭೂಮಿಯ ಬಳಕೆ ಮತ್ತು ಯೋಜನೆಗಳು, ಅರಣ್ಯ, ಜೀವ ವೈವಿಧ್ಯ ಮತ್ತು ಪಶ್ಚಿಮಘಟ್ಟ, ಕರಾವಳಿ ಜೀವಿಪರಿಸ್ಥಿತಿ, ಶಕ್ತಿ, ವ್ಯವಸಾಯ, ತೋಟಗಾರಿಕೆ, ಪಶುಸಂಗೋಪನೆ, ಆಹಾರ ಮತ್ತು ಮನುಷ್ಯನ ಆರೋಗ್ಯ, ತ್ಯಾಜ್ಯವಸ್ತು ನಿರ್ವಹಣೆ, ವಾಯು ಗುಣಮಟ್ಟ, ಸಾರಿಗೆ, ನಗರೀಕರಣ, ಕೈಗಾರಿಕೆಗಳು, ಶಿಕ್ಷಣ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು, ಗ್ರಾಮೀಣ ಕರ್ನಾಟಕ, ಜಿಲ್ಲಾ ಮಟ್ಟದ ಕ್ರಿಯಾ ಯೋಜನೆಗಳು, ಮಹಿಳಾ ದೃಷ್ಟಿಕೋನ, ಸಾಂಪ್ರದಾಯಿಕ ಜ್ಞಾನ, ಜೀವನಶೈಲಿ, ಮಾಲಿನ್ಯ ನಿಯಂತ್ರಣ ಮಂಡಳಿ- ಹೀಗೆ ವಿಷಯವೈವಿಧ್ಯದಲ್ಲಿ ಹರವಾಗಿರುವ ಈ ವರದಿಯನ್ನು ಶಂಕರ ಶರ್ಮ ಅಚ್ಚುಕಟ್ಟಾಗಿ ರೂಪಿಸಿದ್ದಾರೆ.

ಒಂಬತ್ತು ಅಧ್ಯಾಯಗಳಲ್ಲಿ ಹರಡಿರುವ ಹವಾಗುಣ ಸಂಬಂಧಿತ ಮಾಹಿತಿಗಳನ್ನು ಅವಲೋಕಿಸಿದಾಗ, ಸಾರ್ವಜನಿಕ ಜನಾಭಿಪ್ರಾಯದ ಮಾದರಿ ವರದಿ ಇದೆಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ. ಹವಾಗುಣ ವೈಪರೀತ್ಯಕ್ಕೆ ಕಾಯ್ದೆಗಳಿಂದ ಹಿಡಿದು, ವ್ಯಕ್ತಿಗಳ ವರ್ತನೆವರೆಗೆ  ವಿಭಿನ್ನ ಕಾರಣಗಳಿವೆ; ಆದ್ದರಿಂದ ಎಲ್ಲ ರಂಗಗಳ ನಡುವಣ ಕೊಂಡಿಗಳನ್ನು ಅರಿತೇ ಪರಿಹಾರ ಹುಡುಕಬೇಕಿದೆ.
ಜಾಗತಿಕ ಮಟ್ಟದಲ್ಲಿ ಹವಾಗುಣ ಬದಲಾವಣೆಯ ಬಗ್ಗೆ ಎದ್ದಿರುವ ಚಂಡಮಾರುತರೂಪಿ ಚರ್ಚೆಗಳು, ಭಾರತದ ಸನ್ನಿವೇಶದಲ್ಲಿ ಉಂಟಾಗುತ್ತಿರುವ ಕ್ಷಿಪ್ರ ಬದಲಾವಣೆಗಳು, ಇಂಧನದ ದುರ್ಬಳಕೆಯ ಅಪಾಯಗಳು, ನೆಲ-ಜಲ-ಗಾಳಿಯನ್ನು ಕಲುಷಿತಗೊಳಿಸುವ ಮುಖ್ಯ ಅಂಶಗಳನ್ನು ಅಂಕಿ ಅಂಶಗಳು ಮತ್ತು ಅಧಿಕೃತ ವರದಿಗಳ ಮೂಲಕ ವಿವರಿಸಿರುವುದು ಹವಾಗುಣ ಚರ್ಚೆಯ ಕೈಪಿಡಿಯಂತಿದೆ.

ನಾಲ್ಕನೇ ಅಧ್ಯಾಯದಲ್ಲಿ ಇರುವ 40 ಪುಟಗಳ ಸಾರ್ವಜನಿಕ ಅಭಿಪ್ರಾಯಗಳೇ ಈ ವರದಿಯ ಜೀವಾಂಶ. ಇಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಸುಮಾರು 700 ಸಲಹೆಗಳು ಮತ್ತು ಮಹಿಳೆಯರ ದೃಷ್ಟಿಕೋನದಿಂದ ಬಂದ 400 ಸಲಹೆಗಳು- ಹೀಗೆ 1,100ಕ್ಕೂ ಹೆಚ್ಚು ಸಲಹೆಗಳಿವೆ. ಇವೆಲ್ಲವನ್ನೂ ವಿಷಯಶಃ ವರ್ಗೀಕರಿಸಿರುವುದರಿಂದ ಸರ್ಕಾರವು ಯಾವುದೇ ಗೊಂದಲವಿಲ್ಲದೆ ಪರಿಶೀಲನೆ ನಡೆಸಬಹುದು. ತತ್‌ಕ್ಷಣವೇ ಪರಿಣಾಮ ಬೀರುವ  ಮತ್ತು ಮಧ್ಯ - ದೀರ್ಘಕಾಲೀನ ಯೋಜನೆಯ ಅಗತ್ಯವಿರುವ    ಸಲಹೆಗಳನ್ನು ಬೇರ್ಪಡಿಸಿರುವುದರಿಂದ ಅಭ್ಯುದಯದ ಹೊಸ ನೀಲನಕಾಶೆ, ವೇಳಾಪಟ್ಟಿ ರೂಪಿಸಲು ಅನುಕೂಲ.ಈ ಸಲಹೆಗಳನ್ನು ಕ್ರೋಡೀಕರಿಸುವುದು ಕಷ್ಟದ ಕೆಲಸವಾ ದರೂ, ವಿಶೇಷ ಎನ್ನಿಸಿದ ಕೆಲವು ಸಲಹೆಗಳು ಹೀಗಿವೆ:

ನೀರು-ನೈರ್ಮಲ್ಯ: ಅಣೆಕಟ್ಟುಗಳ ಹೂಳೆತ್ತುವುದು, ನೀರಿನ ಲೆಕ್ಕಪರಿಶೋಧನೆ, ನದಿ ಮರಳಿಗೆ ಪರ್ಯಾಯ, ಉದ್ಯಮಗಳಿಗೆ ನೀರಿನ ಶೇ 100 ಮರುಬಳಕೆ ಕಡ್ಡಾಯ, ಸರ್ಕಾರಿ ಕಟ್ಟಡಗಳಲ್ಲಿ ನೀರಿನ ಸಂರಕ್ಷಣೆಯ ಕ್ರಮಗಳು, ಕೃಷಿ - ಉದ್ಯಮಕ್ಕೆ ನೀರಿನ ಹಂಚಿಕೆ ವ್ಯವಸ್ಥೆ, ಎತ್ತಿನಹೊಳೆಯಂಥ ಯೋಜನೆ ಬದಲಿಗೆ ಕೆರೆಗಳ, ಬಾವಿಗಳ ಪುನಶ್ಚೇತನ.

ಭೂಬಳಕೆ: ರಾಜ್ಯದಲ್ಲಿ ಕಾಡಿನ ಪ್ರಮಾಣವನ್ನು ಶೇ 33ಕ್ಕೆ ಹೆಚ್ಚಿಸುವವರೆಗೂ ಅರಣ್ಯ ಭೂಮಿ ಪರಿವರ್ತನೆಗೆ ನಿಷೇಧ; ಈಗಿರುವ ಕಾನೂನುಗಳ ಬಿಗಿಯಾದ ಜಾರಿ; ಮನೆ-ಉದ್ಯ ಮಗಳ ಬಳಕೆಗೆ ವೈಜ್ಞಾನಿಕವಾಗಿ ಭೂಮಿ ನಿಗದಿ; ಮುಂಬ ರುವ ಎಲ್ಲ ಯೋಜನೆಗಳಲ್ಲಿ ಅಗಲ ರಸ್ತೆಗಳು, ಸಾಲು ಮರಗಳು ಇರುವಂತೆ ಯೋಜನೆ; ಸರ್ಕಾರಿ ಇಲಾಖೆಗಳ ಪಾಳುಭೂಮಿಯ ಸಮರ್ಥ ನಿರ್ವಹಣೆ, ಹಸಿರು ಹೆಚ್ಚಳ; ಹುಲ್ಲುಹಾಸಿನ ಬದಲು ದೇಸಿ ಜೈವಿಕ ಇಂಧನದ, ಹಣ್ಣಿನ ಮರಗಳು;  ಸೊಪ್ಪಿನ ಬೆಟ್ಟಗಳ ಸಂರಕ್ಷಣೆ; ಯಾವುದೇ ಯೋಜನೆ ರೂಪಿಸುವಾಗ ಪರಿಸರದ ಖರ್ಚು-ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುವ ವಿಧಾನ ಜಾರಿ.

ಪಶ್ಚಿಮ ಘಟ್ಟಗಳು: ಸಣ್ಣ ಮತ್ತು ದೊಡ್ಡ ವಿದ್ಯುತ್ ಯೋಜನೆಗಳಿಗೆ ನಿಷೇಧ; ಗಣಿಗಾರಿಕೆ, ಮರಳುಗಣಿಗಾರಿಕೆಗೆ ನಿಷೇಧ; ಸ್ಥಳೀಯ ಜನರನ್ನು ವಿಶ್ವಾಸಕ್ಕೆ  ತೆಗೆದುಕೊಂಡು ಘಟ್ಟದ ಸಂರಕ್ಷಣೆ; ಪವಿತ್ರವನಗಳ ಸಂರಕ್ಷಣೆ.

ಕರಾವಳಿ: ಮೀನು ಕೃಷಿಗೆ ಉತ್ತೇಜನ; ಕಾಂಡ್ಲ ವನಗಳ ರಕ್ಷಣೆ; ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಕೆಂಪು ಪ್ರವರ್ಗದ ಉದ್ಯಮಗಳ ಕ್ರಮೇಣ ಮುಚ್ಚುಗಡೆ; ಕಗ್ಗದಂಥ ದೇಸಿ ಭತ್ತದ ತಳಿಗಳ ಪ್ರೋತ್ಸಾಹ; ಕರಾವಳಿ ಪ್ರದೇಶದ ಧಾರಣಾ ಸಾಮರ್ಥ್ಯದ ಅಧ್ಯಯನ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ: ಬೆಳೆ ಋತುಗಳ ಪರಾಮರ್ಶೆ ಮತ್ತು ಬೀಜ ಬಿತ್ತನೆ ಕಾಲದ ಮರುನಿರ್ಣಯ; ಸಾವಯವ ಮತ್ತು ಸಹಜ ಕೃಷಿಗೆ ಉತ್ತೇಜನ; ಕೃಷಿಗೆ ಅಗತ್ಯವಾದ ಸಬ್ಸಿಡಿ ಹೆಚ್ಚಳ; ರಾಸಾಯನಿಕಗಳ ಮೇಲೆ ಹೆಚ್ಚಿನ ತೆರಿಗೆ; ಹಣ್ಣು-ಬೀಜದ ಮರಗಳ ಕೃಷಿಗೆ ಉತ್ತೇಜನ; ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ; ಅಧಿಕ ನೀರು ಬಳಸುವ ಕೃಷಿ ಇಳಿಕೆಗೆ ಯತ್ನ; ರೈತರಿಗೆ ಖಚಿತ ಮತ್ತು ಕ್ಷಿಪ್ರ ಹವಾಮಾನ ವರದಿ; ಎಂಡೊಸಲ್ಫಾನ್‌ಗೆ ಕಾಯಂ ನಿಷೇಧ; ಸ್ಥಳೀಯ ಉತ್ಪಾದನೆ - ಮಾರಾಟಕ್ಕೆ ಉತ್ತೇಜನ; ಜೈವಿಕ ಇಂಧನ ಸಸ್ಯಕೃಷಿಗೆ ಬೆಂಬಲ; ಕಿರುಧಾನ್ಯಗಳಿಗೆ ಪ್ರೋತ್ಸಾಹ; ಸೋಲಾರ್ ಪಂಪ್‌ಸೆಟ್ ಅಳವಡಿಕೆ; ಸುಸ್ಥಿರ,  ಸಾಂಪ್ರದಾಯಿಕ ಕೃಷಿ ವಿಧಾನಗಳಿಗೂ ಕಾರ್ಬನ್ ಕ್ರೆಡಿಟ್.

ಆಹಾರ, ಆರೋಗ್ಯ: ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿ ಮತ್ತು ಆರೋಗ್ಯ ಇಲಾಖೆಯ ಹೆಚ್ಚಿನ ಕ್ರಮಗಳು; ರಿಫೈನ್ ಆದ ಹಿಟ್ಟುಗಳ (ಮೈದಾ, ಪಾಲಿಷ್‌ ಅಕ್ಕಿ ಇತ್ಯಾದಿ) ಬಳಕೆಗೆ ನಿರುತ್ತೇಜನ; ಸ್ಥಳೀಯ ಆಹಾರ ಬಳಕೆಗೆ ಪ್ರೋತ್ಸಾಹ; ಮಾರಾಟಕ್ಕಾಗಿ ಸಾಗಾಟ ಕಡಿಮೆ ಮಾಡುವುದು; ರೆಡಿಮೇಡ್ ಆಹಾರದ ಅಪಾಯಗಳ ವಿರುದ್ಧ  ಜನಜಾಗೃತಿ.

ತ್ಯಾಜ್ಯ ನಿರ್ವಹಣೆ: ರಾಜ್ಯ ಬಜೆಟ್‌ನಲ್ಲಿ ಶೇ 1ರಷ್ಟನ್ನು ತ್ಯಾಜ್ಯ ನಿರ್ವಹಣೆಗೆ ಮೀಸಲಿಡುವುದು; ತ್ಯಾಜ್ಯದ ವಿಂಗಡಣೆ, ಸಾಗಾಟ, ಮರುಬಳಕೆ- ಎಲ್ಲದರ ಕುರಿತು ವ್ಯವಸ್ಥಿತ ಯತ್ನಗಳು; ದೊಡ್ಡ ಹೋಟೆಲ್ - ಹಾಸ್ಟೆಲ್‌ಗಳಲ್ಲಿ ತ್ಯಾಜ್ಯ ಆಹಾರದಿಂದ ಬಯೊಗ್ಯಾಸ್ ಉತ್ಪಾದನೆ ಕಡ್ಡಾಯ;  ಘನತ್ಯಾಜ್ಯ ನಿರ್ವಹಣೆಗೆ  ಏಕೈಕ ಸಂಸ್ಥೆ.

ಇತರೆ ಸಲಹೆಗಳು: ಪ್ರತೀ ತಾಲ್ಲೂಕಿನಲ್ಲೂ ಮಾಲಿನ್ಯ ನಿಗಾ ವ್ಯವಸ್ಥೆ; ವಾಹನ ಇಂಧನಕ್ಕೂ ಪಡಿತರ ವ್ಯವಸ್ಥೆ;  ರೈಲು - ರಾಜ್ಯ ಸಾರಿಗೆ ನಡುವೆ ಸಮನ್ವಯ;   ಉದ್ಯಮಗಳಿಂದ ಕನಿಷ್ಠ ಶೇ 20–30ರಷ್ಟು ನವೀಕರಿಸಬಹುದಾದ ಇಂಧನದ ಬಳಕೆ; ಪ್ರತಿಯೊಂದೂ ಉದ್ಯಮದಲ್ಲೂ ಇಂಗಾಲದ ಹೆಜ್ಜೆಗಳ ಮಾಪನ; ಇಂಧನ ಉತ್ಪಾದಿಸುವ ಸಂಸ್ಥೆಗಳ ಮೇಲೆ ಕಾರ್ಬನ್ ಸಿಂಕ್ ಹೊಣೆಗಾರಿಕೆ; 5 ವರ್ಷಗಳಲ್ಲಿ ರಾಜ್ಯದೆಲ್ಲೆಡೆ ಸೌರಶಕ್ತಿ ಬೀದಿ ದೀಪಗಳು;  ಬೃಹತ್ ಹೋಟೆಲ್, ಮಾಲ್, ಕಲ್ಯಾಣ ಮಂಟಪಗಳಲ್ಲಿ ಸ್ವತಂತ್ರ ಹಸಿರು ಇಂಧನ ಘಟಕಗಳು; ಕಲ್ಲಿದ್ದಲು ಮತ್ತು ಡೀಸೆಲ್ ಆಧಾರಿತ ವಿದ್ಯುತ್ ಉತ್ಪಾದನೆಗೆ 2040ರ ಹೊತ್ತಿಗೆ ವಿದಾಯ; ಹೊಸ ಕಲ್ಲಿದ್ದಲು ಮತ್ತು ಜಲವಿದ್ಯುತ್ ಯೋಜನೆ ಬೇಡ; ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಕಡ್ಡಾಯ; ಸಮುದಾಯ ಬಯೊಗ್ಯಾಸ್‌ಗೆ ಪ್ರೋತ್ಸಾಹ;  ದೂರದ ಊರಿಂದ ಬಂದ ಉತ್ಪನ್ನಗಳ ಪೊಟ್ಟಣಗಳ ಮೇಲೆ ಕಾರ್ಬನ್ ಬಳಕೆ ಮಾಹಿತಿ; ಇಂಧನ ನೀತಿಗಾಗಿ ಕಾರ್ಯಪಡೆ ಸ್ಥಾಪನೆ;  ಕಟ್ಟಡ ನಿರ್ಮಾಣಕ್ಕೆ ಪರ್ಯಾಯ ವಸ್ತುಗಳ ಉತ್ತೇಜನ; ಸೈಕಲ್ ಬಳಕೆಗೆ ಪ್ರೋತ್ಸಾಹ ಮತ್ತು ಪ್ರತ್ಯೇಕ ರಸ್ತೆಗಳು; ಮಂಡಳಿಯ ಪರಿಸರ ಮಿತ್ರ ಶಾಲೆ ಕಾರ್ಯಕ್ರಮದ ರಾಜ್ಯವ್ಯಾಪ್ತಿ ವಿಸ್ತರಣೆ - ಕಾಲೇಜುಗಳಿಗೂ ಸ್ಪರ್ಧೆ; ಪರಿಸರ ಜಾಗೃತಿಗೆ ಪ್ರತ್ಯೇಕ ಟಿ.ವಿ. ಚಾನೆಲ್; ಕೃಷಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ; ರಂಜಕ ಆಧಾರಿತ ಡಿಟರ್ಜೆಂಟ್ ನಿಷೇಧ; ಕೆರೆಗಳಿಗೆ ಅಪಾರ್ಟ್‌ಮೆಂಟ್‌ಗಳ ಕೊಳೆನೀರು ನಿಷೇಧ; ಕೆರೆಗಳ ಸಂಪೂರ್ಣ ರಕ್ಷಣೆ, ಒತ್ತುವರಿ ತೆರವು; ಶೂನ್ಯ ತ್ಯಾಜ್ಯ ಅಡುಗೆಮನೆಗಳ ಕುರಿತು ಪ್ರಚಾರ; ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ; ಸಾಂಪ್ರದಾಯಿಕ ಜ್ಞಾನಗಳಾದ ಆಯುರ್ವೇದ, ಬೀಜ ಸಂಗ್ರಹ, ನೀರಿನ ಬಳಕೆ- ಇವುಗಳ ಸಮರ್ಥ ಬಳಕೆ.

ನಿಜ, ಜನರಿಂದ ಬಂದ ಈ ಸಲಹೆಗಳನ್ನು ಜಾರಿ ಮಾಡುವ ಬಗ್ಗೆ ಅಧಿಕಾರಶಾಹಿಯಲ್ಲಿ ಅನುಮಾನಗಳು ಮೂಡಿವೆ ಎಂಬರ್ಥದ  ವರದಿಗಳು ಪ್ರಕಟವಾಗಿವೆ. 68 ವರ್ಷಗಳಲ್ಲಿ ನಮ್ಮ ಅಧಿಕಾರಿಗಳು ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಂಭೀರ ಗಮನ ಕೊಟ್ಟಿದ್ದರೆ ಈ ವರದಿಯೇ ಬೇಕಾಗಿರಲಿಲ್ಲ! ಹಸಿರುಕ್ರಾಂತಿಯ ಘೋಷಣೆಯಲ್ಲಿ, ಅಬ್ಬರದ ಉದ್ಯಮೀಕರಣದಲ್ಲಿ, ನೂರಾರು ಕೆರೆಗಳನ್ನು ನುಂಗಿ ನೀರು ಕುಡಿದ ನಗರೀಕರಣದಲ್ಲಿ, ಅಗಾಧ ಪ್ರಮಾಣದ ಇಂಧನ  ಸೋರಿಕೆಯಲ್ಲಿ ನಮ್ಮ ಭೂಮಿಯ ಶಕ್ತಿ ಕುಂಠಿತವಾಗಿದ್ದರೆ ಅದರಲ್ಲಿ ಅಧಿಕಾರಿಗಳ ಪಾತ್ರವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈಗಲಾದರೂ ರಾಜ್ಯ ಸರ್ಕಾರವು ರೂಢಿಗತ ಮಾಹಿತಿ ವ್ಯವಸ್ಥೆಯನ್ನು ಬದಿಗಿರಿಸಿ, ಈ ಜನಾಭಿಪ್ರಾಯದ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವರದಿಯನ್ನು ಅಧ್ಯಯನಕ್ಕೆ ಸರ್ಕಾರ ಕೂಡಲೇ ಒಂದು ಸಾರ್ವಜನಿಕ ನಾಯಕತ್ವದ ಪ್ರಜ್ಞಾವಂತ ಸಮುದಾಯದ ಪ್ರಾತಿನಿಧ್ಯ ಇರುವ ಸಮಿತಿಯನ್ನು ರಚಿಸಿ, ತಕ್ಷಣದ ಮತ್ತು ದೀರ್ಘ ಕಾಲೀನ ಕ್ರಮಗಳನ್ನು ಕ್ರೋಡೀಕರಿಸಲಿ.

ಒಂದು ಮಾಧ್ಯಮ ಸಂಸ್ಥೆಯಾಗಿ ‘ದಿ ಗಾರ್ಡಿಯನ್’ ಪತ್ರಿಕೆಯು ಶೆಲ್‌ನಂಥ ದೈತ್ಯ ಪೆಟ್ರೋಲಿಯಂ ಸಂಸ್ಥೆಗಳು ಹೂಡಿಕೆ ಹಿಂದೆಗೆತ ಮಾಡಿ ಹವಾಗುಣ ರಕ್ಷಣೆಗೆ ಮುಂದಾ ಗಬೇಕೆಂದು ಜಾಗತಿಕ ಜನಾಂದೋಳನವನ್ನೇ ಆರಂಭಿಸಿದೆ.  ಹೀಗಿರುವಾಗ ರಾಜ್ಯಸರ್ಕಾರವು ಕೈಯಲ್ಲಿ ವರದಿ ಇಟ್ಟು ಕೊಂಡೂ ಹಿಂದೆ ಬೀಳಬೇಕೆ? ಅದೀಗ ಭೂಮಿ ಬಿಸಿಯಾ ಗುವುದನ್ನು ತಪ್ಪಿಸುವ ಜನಪರ ಕ್ರಮಗಳಿಗೆ ಮುಂದಾಗ ಬೇಕಿದೆ. ಏಕೆಂದರೆ ರಚನಾತ್ಮಕ ಬದಲಾವಣೆಯನ್ನು ಅನುಸರಿಸುವುದಕ್ಕಿಂತ ಬದಲಾವಣೆಯ ನಾಯಕತ್ವ  ವಹಿಸುವುದರಲ್ಲಿ, ದೇಶಕ್ಕೇ ಮಾದರಿ  ಆಗುವುದರಲ್ಲಿ ಲೋಕಹಿತವಿದೆ.  

ಲೇಖಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸಲಹೆಗಾರ
editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.