ADVERTISEMENT

ಟ್ರಂಪ್ ಆಡಳಿತದಲ್ಲಿ ‘ಸತ್ಯ’ ಜನವಿರೋಧಿ

ನಿರಂಕುಶಾಧಿಕಾರಿಗಳ ಜಾಡು ಹಿಡಿದು ಸಾಗುತ್ತಿರುವ ಅಮೆರಿಕದ ಹೊಸ ಅಧ್ಯಕ್ಷ

ಪಾಲ್‌ ಕ್ರುಗ್ಮನ್‌
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಟ್ರಂಪ್ ಆಡಳಿತದಲ್ಲಿ ‘ಸತ್ಯ’ ಜನವಿರೋಧಿ
ಟ್ರಂಪ್ ಆಡಳಿತದಲ್ಲಿ ‘ಸತ್ಯ’ ಜನವಿರೋಧಿ   

ಬರಾಕ್ ಒಬಾಮ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಮೆರಿಕದ ಅರ್ಥ ವ್ಯವಸ್ಥೆ 1.03 ಕೋಟಿ  ಉದ್ಯೋಗಗಳನ್ನು ಸೃಷ್ಟಿಸಿದೆ. ಅಂದರೆ ಪ್ರತಿ ತಿಂಗಳು 2.14 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ಇದರಿಂದಾಗಿ ಸರ್ಕಾರಿ ಲೆಕ್ಕದಲ್ಲಿ ನಿರುದ್ಯೋಗ ಪ್ರಮಾಣ ಶೇ 5ಕ್ಕಿಂತ ಕೆಳಗೆ ಬಂದಿದೆ.

ಹಲವು ಸೂಚಕಗಳ ಪ್ರಕಾರ, ಕಳೆದ ವರ್ಷದ ಕೊನೆಯ ಹೊತ್ತಿಗೆ ಎಲ್ಲರಿಗೂ ಉದ್ಯೋಗ ಎಂಬ ಸ್ಥಿತಿಗೆ ಅಮೆರಿಕ ತಲುಪಿತ್ತು. ಆದರೆ ಅಮೆರಿಕದ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ‘ಇದು ನಂಬಿಕೆಗೆ ಅರ್ಹವಲ್ಲದ ಸುದ್ದಿ’ ಎಂದು ಈ ಒಳ್ಳೆಯ ಸುದ್ದಿಯನ್ನು ತಳ್ಳಿ ಹಾಕಿದ್ದರು. ದೇಶದಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಇದೆ ಎಂದು ಪ್ರತಿಪಾದಿಸಿದ್ದರು.

ಈ ವರ್ಷದ ಆರಂಭದಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್ ಆಡಳಿತದ ಮೊದಲ ಉದ್ಯೋಗ ವರದಿ ಈಗ ಪ್ರಕಟವಾಗಿದೆ. ಅದರ ಪ್ರಕಾರ, 2.35 ಲಕ್ಷ ಉದ್ಯೋಗಗಳು ಸೇರ್ಪಡೆಯಾಗಿವೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಹಿಂದೆ ಇದ್ದ ಸ್ಥಿತಿಯೇ ಮುಂದುವರಿಯುತ್ತಿರುವುದನ್ನು ಇದು ಸೂಚಿಸಿದೆ. ಇದು ತನ್ನ ಸಾಧನೆ ಎಂದು ಹೊಸ ಸರ್ಕಾರ ಹೇಳಿಕೊಂಡಿದೆ. ಹಿಂದಿನ ಸರ್ಕಾರ ಪ್ರಕಟಿಸಿದ ಉದ್ಯೋಗ ಸೃಷ್ಟಿಯ ಸಂಖ್ಯೆಗಳು ಹುಸಿ, ಆದರೆ ಈಗಿನ ಸರ್ಕಾರ ಪ್ರಕಟಿಸಿದ ಸಂಖ್ಯೆಗಳು ಅಪ್ಪಟ ಸತ್ಯ ಎಂದು ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಸೇರಿದ್ದ ಮಾಧ್ಯಮ ಪ್ರತಿನಿಧಿಗಳು ನಕ್ಕರು- ಹೀಗೆ ನಗುವುದಕ್ಕೆ ಅವರಿಗೆ ನಾಚಿಕೆಯಾಗಬೇಕು. ಯಾಕೆಂದರೆ ಇದೊಂದು ಜೋಕ್ ಅಲ್ಲ. ಈಗ ಅಮೆರಿಕದ ಅಧ್ಯಕ್ಷರಾಗಿರುವ ವ್ಯಕ್ತಿ ಮತ್ತು ಅವರ ಪಕ್ಷ, ವಸ್ತುನಿಷ್ಠವಾದ ಸತ್ಯ ಎಂಬುದು ಇರುತ್ತದೆ ಎಂಬುದನ್ನು ಒಪ್ಪುವುದಿಲ್ಲ. ಬದಲಿಗೆ, ಸರ್ಕಾರ ಮತ್ತು ಅಧ್ಯಕ್ಷರು ಏನು ಹೇಳುತ್ತಾರೆಯೋ ಅದೇ ವಾಸ್ತವ ಎಂದು ಎಲ್ಲ ಜನರು ನಂಬಬೇಕು ಎಂದು ಅವರು ಬಯಸುತ್ತಾರೆ.

ಅಧ್ಯಕ್ಷರು ಏನು ಹೇಳುತ್ತಾರೋ ಅದನ್ನು ಜನರು ಒಪ್ಪಲೇಬೇಕು, ಅದು ಅಸತ್ಯವಾಗಿದ್ದರು ಕೂಡ. ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಸೇರಿದಷ್ಟು ಜನರು ಇಷ್ಟರವರೆಗೆ ಹಿಂದಿನ ಯಾವುದೇ ಅಧ್ಯಕ್ಷರ ಪ್ರಮಾಣವಚನಕ್ಕೆ ಸೇರಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ತಮ್ಮ ಪ್ರತಿಸ್ಪರ್ಧಿಗೆ ಲಕ್ಷಾಂತರ ಮತಗಳು ಕಾನೂನುಬಾಹಿರವಾಗಿ ಚಲಾವಣೆಯಾಗಿವೆ ಎಂದು ಟ್ರಂಪ್ ಅವರು ಹೇಳಿದರೆ ಅದು ಹಾಸ್ಯಾಸ್ಪದವಾಗಿದ್ದರೂ ಜನರು ನಂಬಬೇಕು.

ತಮ್ಮ ಪೂರ್ವಾಧಿಕಾರಿ ತಮ್ಮ ದೂರವಾಣಿಯನ್ನು ಕದ್ದಾಲಿಸಿದ್ದರು ಎಂದು ಯಾವುದೇ ಪುರಾವೆ ಇಲ್ಲದೆ ಟ್ರಂಪ್ ಹೇಳಿದರೆ ಅದನ್ನೂ ಒಪ್ಪಲೇಬೇಕು. ಇದು ಒಬ್ಬ ವ್ಯಕ್ತಿಯ ಒಣಜಂಬಕ್ಕೆ ಮಾತ್ರ ಸಂಬಂಧಿಸಿದ ವಿಚಾರ ಅಲ್ಲ. ಇದು  ಅಮೆರಿಕದ ಲಕ್ಷಾಂತರ ಜನರನ್ನು ಹೇಗೆ ಬಾಧಿಸಿದೆ ಎಂಬುದು ತಿಳಿಯಬೇಕಾದರೆ ಆರೋಗ್ಯ ಸುಧಾರಣೆ ವಿಚಾರದಲ್ಲಿ ಟ್ರಂಪ್ ಅವರ ನಿರ್ಧಾರಗಳನ್ನು ಗಮನಿಸಬೇಕು.

ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಜಾರಿಗೆ ತಂದಿದ್ದ ಒಬಾಮಕೇರ್ ಎಂಬ ಆರೋಗ್ಯ ವಿಮೆ ವ್ಯವಸ್ಥೆಯಿಂದಾಗಿ ಅಮೆರಿಕದಲ್ಲಿ ಆರೋಗ್ಯ ವಿಮೆ ಇಲ್ಲದ ಜನರ ಸಂಖ್ಯೆ ಬಹಳ ಕಡಿಮೆಯಾಗಿತ್ತು. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರೆ ಅಥವಾ ಮುಂದೆ ಸಂಕಷ್ಟ ಇದೆ ಎಂಬುದು ಜನರಿಗೆ ಅರಿವಾಗಿದ್ದರೆ ಇನ್ನಷ್ಟು ಜನರು ಒಬಾಮಕೇರ್‌ಗೆ ನೋಂದಣಿ ಮಾಡಿಕೊಳ್ಳುತ್ತಿದ್ದರು ಎಂದು ವಾದಿಸುವುದಕ್ಕೆ ಅವಕಾಶ ಇದೆ.

ಅದೇನೇ ಆದರೂ ಈ ಯೋಜನೆಯ ಯಶಸ್ಸಿನ ಬಗ್ಗೆ ಯಾವುದೇ ಅನುಮಾನ ಇಲ್ಲ. ಒಬಾಮಕೇರ್‌ಗೆ ಬದಲಾಗಿ ಟ್ರಂಪ್ ಅವರು ಜಾರಿಗೆ ತರಲು ಉದ್ದೇಶಿಸಿರುವ ಟ್ರಂಪ್‌ಕೇರ್ ಹಿಂದಿನ ಯೋಜನೆಯ ಹಲವು ಸೌಲಭ್ಯಗಳಿಗೆ ಕತ್ತರಿ ಹಾಕಲಿದೆ.

ಒಬಾಮಕೇರ್ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ ಎಂಬುದನ್ನು ರಿಪಬ್ಲಿಕನ್ ಪಕ್ಷ ಒಪ್ಪುವುದಿಲ್ಲ. ಒಬಾಮಕೇರ್ ಎಂದೇ ಹೆಸರಾಗಿರುವ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಎಂಬ ಕಾಯ್ದೆಯ ಸಕಾರಾತ್ಮಕ ಪರಿಣಾಮಗಳ ಬಗೆಗಿನ ವರದಿಗಳು ‘ಸುಳ್ಳು ಸುದ್ದಿ’ ಎಂದು ಹೆರಿಟೇಜ್ ಫೌಂಡೇಶನ್‌ನ ಅಧ್ಯಕ್ಷರು ಹೇಳುತ್ತಾರೆ.

‘ಕೆಂಟಕಿಯ ಜನರಿಗೆ ಒಬಾಮಕೇರ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ’ ಎಂದು ಇತ್ತೀಚೆಗೆ ಲೂಯಿಸ್‌ವಿಲ್ಲೆಯಲ್ಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.  ಆದರೆ ಈ ಕಾನೂನು ಜಾರಿಗೆ ಬಂದ ನಂತರ ಅಮೆರಿಕದಲ್ಲಿ ಆರೋಗ್ಯ ವಿಮೆ ಇಲ್ಲದವರ ಪ್ರಮಾಣ ಶೇಕಡ 16.6ರಿಂದ ಶೇ 7ಕ್ಕೆ ಇಳಿದಿತ್ತು ಎಂಬುದು ವಾಸ್ತವ.

ಟ್ರಂಪ್‌ಕೇರ್‌ನಿಂದ ಜನರಿಗೆ ಯಾವ ಪ್ರಯೋಜನಗಳು ದೊರೆಯಬಹುದು ಎಂಬ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ಸರ್ಕಾರಕ್ಕೆ ಆಸಕ್ತಿ ಇಲ್ಲ.
ಸಾಮಾನ್ಯವಾಗಿ ಮಹತ್ವದ ಕಾನೂನುಗಳನ್ನು ಜಾರಿಗೆ ತರುವುದಕ್ಕೆ ಮೊದಲು ಸಂಸತ್ತಿನ ಬಜೆಟ್ ಸಮಿತಿಯ ವಿಶ್ಲೇಷಣಾ ವರದಿಗಾಗಿ ಸಂಸತ್ತು ಕಾಯುತ್ತದೆ. ಹೊಸ ಕಾಯ್ದೆಯಿಂದ ಸರ್ಕಾರಕ್ಕೆ ದೊರೆಯುವ ವರಮಾನ ಏನು, ಸರ್ಕಾರ ಮಾಡಬೇಕಾದ ವೆಚ್ಚ ಎಷ್ಟು ಮತ್ತು ಯೋಜನೆ ಯಾರಿಗೆ ಅನುಕೂಲ ಮಾಡಿಕೊಡುತ್ತದೆ ಎಂಬ ಬಗ್ಗೆ ಬಜೆಟ್ ಸಮಿತಿಯು ವಿವರವಾದ ಅಧ್ಯಯನ ನಡೆಸುತ್ತದೆ.

ಬಜೆಟ್ ಸಮಿತಿಯ ವಿಶ್ಲೇಷಣೆ ಯಾವತ್ತೂ ಸರಿಯಾಗಿಯೇ ಇರಬೇಕು ಎಂದಿಲ್ಲ. ಆದರೆ ಇತರ ಅಧ್ಯಯನ ಸಮಿತಿಗಳಿಗೆ ಹೋಲಿಸಿದರೆ ಬಜೆಟ್ ಸಮಿತಿ ಉತ್ತಮ ಹಿನ್ನೆಲೆ ಹೊಂದಿದೆ. ಅದಕ್ಕಿಂತ ಮುಖ್ಯವಾಗಿ, ಯಾವುದೇ ಯೋಜನೆ ಪಕ್ಷಪಾತದಿಂದ ಕೂಡಿದೆಯೇ ಎಂಬುದನ್ನು ಬಜೆಟ್ ಸಮಿತಿ ಅತ್ಯಂತ ಕಟ್ಟುನಿಟ್ಟಾಗಿ ಪರಿಶೀಲಿಸುತ್ತದೆ. ಹಾಗಾಗಿ ಯಾವುದೇ ಯೋಜನೆ ರಾಜಕೀಯಪ್ರೇರಿತವಾದ ಮಹತ್ವಾಕಾಂಕ್ಷೆಯ ಚಿಂತನೆಯ ಫಲವಾಗಿ ಜಾರಿಗೆ ಬರುವುದನ್ನು ತಡೆಯುವ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಆದರೆ ರಿಪಬ್ಲಿಕನ್ ಪಕ್ಷದ ಸರ್ಕಾರ ಟ್ರಂಪ್‌ಕೇರ್‌ ಯೋಜನೆಯನ್ನು ಪ್ರಮುಖ ಸಮಿತಿಗಳಿಗೆ ಕಳುಹಿಸಲೇ ಇಲ್ಲ. ಬಜೆಟ್ ಸಮಿತಿಯ ವರದಿಗೂ ಕಾಯದೆ ಅಕ್ಷರಶಃ ರಾತ್ರಿ ವೇಳೆಯಲ್ಲಿ ಯೋಜನೆಯನ್ನು ಘೋಷಿಸಲಾಯಿತು. ಹೊಸ ಕಾಯ್ದೆಯಿಂದಾಗಿ ಲಕ್ಷಾಂತರ ಜನರು ಆರೋಗ್ಯ ರಕ್ಷಣೆ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಹೋಗಲಿದ್ದಾರೆ ಎಂದು ಬಜೆಟ್ ಸಮಿತಿ ಹೇಳಬಹುದು ಎಂಬುದನ್ನು ಮೊದಲೇ ಊಹಿಸಿದ್ದಂತೆ ಸರ್ಕಾರ, ಸಮಿತಿಯ ಸಲಹೆಗಳನ್ನು ಕೇಳಲೇ ಇಲ್ಲ.

ವಾಸ್ತವ ಏನೆಂದರೆ ಬಜೆಟ್ ಸಮಿತಿಯು ಯೋಜನೆಯ ಕೆಲವು ಅಂಶಗಳು ಸರಿ ಇಲ್ಲ ಎಂದು ಹೇಳಿತು; ಆದರೆ ಮಹತ್ವದ ಹೊಸ ಮಸೂದೆಯ ಪರಿಣಾಮಗಳು ಉತ್ತಮವಾಗಿಯೇ ಇರುತ್ತವೆ ಎಂದು ಸಮಿತಿ ಹೇಳಿದೆ. ಕಾಯ್ದೆಯು ದುರಂತಕ್ಕೆ ಕಾರಣವಾಗಬಹುದು ಎಂಬ ಕಾರಣ ಮುಂದೊಡ್ಡಿ ಅದನ್ನು ಒಂದು ವರ್ಗದ ಜನರು ವಿರೋಧಿಸುತ್ತಿದ್ದಾರೆ.

ಈ ಜನರು ಅಂದುಕೊಂಡದ್ದಕ್ಕಿಂತ ಉತ್ತಮವಾದ ವರದಿಯನ್ನು ಬಜೆಟ್ ಸಮಿತಿ ಕೊಡಲಿದೆ. ಬಜೆಟ್ ಸಮಿತಿ ಯಾವುದೇ ರೀತಿಯ ವರದಿಯನ್ನಾದರೂ ಕೊಡಲಿ. ಅದು ಆರೋಗ್ಯ ಮತ್ತು ಮಾನವ ಸಂಪನ್ಮೂಲ ಸೇವೆಗಳ ಕಾರ್ಯದರ್ಶಿ ಟಾಮ್ ಪ್ರೈಸ್ ಅವರ ಹಾಸ್ಯಾಸ್ಪದ ಹೇಳಿಕೆಗಿಂತ ಉತ್ತಮವಾಗಿರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಹಾಯಧನಗಳನ್ನು ಗಣನೀಯವಾಗಿ ಕಡಿತಗೊಳಿಸಿ, ಆರೋಗ್ಯ ವಿಮೆಯ ಕಂತಿನ ಮೊತ್ತವನ್ನು ಹೆಚ್ಚಿಸುವುದರಿಂದ ಆರ್ಥಿಕವಾಗಿ ಯಾರೂ ಸಂಕಷ್ಟಕ್ಕೆ ಒಳಗಾಗುವುದಿಲ್ಲ ಎಂದು ಪ್ರೈಸ್ ಇತ್ತೀಚೆಗೆ ಹೇಳಿದ್ದಾರೆ.

ADVERTISEMENT

ಆರೋಗ್ಯ ನೀತಿಗೆ ಸಂಬಂಧಿಸಿ ಯಾರ ವಿಶ್ಲೇಷಣೆ ಹೆಚ್ಚು ಸಮರ್ಪಕವಾಗಿರಲಿದೆ ಎಂಬುದು ಇಲ್ಲಿನ ಪ್ರಶ್ನೆ ಅಲ್ಲ. ಟ್ರಂಪ್ ಮತ್ತು ಅವರ ನೇತೃತ್ವದ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಕಾನೂನುಬದ್ಧ ಹಕ್ಕು ಜನರಿಗೆ ಇದೆ. ಆದರೆ ಹೀಗೆ ಪ್ರಶ್ನಿಸುವವರ ಮೇಲೆ ಟ್ರಂಪ್ ಮತ್ತು ಅವರ ಕೂಟ ಮುಗಿಬೀಳುತ್ತಿರುವುದೇ ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ.

ಸಂಸತ್ತಿನ ಬಜೆಟ್ ಸಮಿತಿ ಕೂಡ ಅಮೆರಿಕದ ಮಾಧ್ಯಮ ಎದುರಿಸುತ್ತಿರುವ ಅದೇ ಸಮಸ್ಯೆಯನ್ನು ಎದುರಿಸುತ್ತಿದೆ. ಮಾಧ್ಯಮವನ್ನು ‘ಜನವಿರೋಧಿ’ ಎಂದು ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಟ್ರಂಪ್ ಅವರು ಏನೇ ಹೇಳಲಿ, ಮಾಧ್ಯಮ ಅದನ್ನು ತಪ್ಪಾಗಿ ಗ್ರಹಿಸುತ್ತಿದೆ. ಮಾಧ್ಯಮ ಪ್ರತಿನಿಧಿಗಳು ಟ್ರಂಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಅವರು ಜನರ ವಿರೋಧಿಗಳಾಗಿದ್ದಾರೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಹಾಗೆಯೇ ಸಂಸತ್ತಿನ ಬಜೆಟ್ ಸಮಿತಿಯನ್ನೂ ಟ್ರಂಪ್ ಅವರು ‘ಜನವಿರೋಧಿ’ ಎಂದು ಕರೆಯುವ ಸಾಧ್ಯತೆ ಇದೆ.

‘ಜನರ ಶತ್ರುಗಳು’ ಎಂಬುದು ಚಾರಿತ್ರಿಕವಾಗಿ ಸ್ಟಾಲಿನ್ ಮತ್ತು ಇತರ ನಿರಂಕುಶಾಧಿಕಾರಿಗಳ ಜತೆಗೆ ತಳಕು ಹಾಕಿಕೊಂಡಿರುವ ಪದಗುಚ್ಛ. ಆದರೆ ಅದೇ ಪದಗುಚ್ಛವನ್ನು ಟ್ರಂಪ್ ಅವರು ಬಳಸುತ್ತಿರುವುದು ಆಕಸ್ಮಿಕ ಎಂದು ಹೇಳಲಾಗದು. ಹಾಗಿದ್ದರೂ ಟ್ರಂಪ್ ಅವರು ನಿರಂಕುಶಾಧಿಕಾರಿ ಅಲ್ಲ, ಕನಿಷ್ಠಪಕ್ಷ ಈವರೆಗೆ ಅವರು ಹಾಗೆ ಆಗಿಲ್ಲ. ಆದರೆ ಅವರಲ್ಲಿ ನಿರಂಕುಶಾಧಿಕಾರಿಗಳ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಟ್ರಂಪ್ ಅವರು ಮುಂದಿಡುತ್ತಿರುವ ಅತ್ಯಂತ ವಿಚಿತ್ರವಾದ ಪಿತೂರಿ ಸಿದ್ಧಾಂತಗಳನ್ನೂ ಸೇರಿಸಿ ಅವರು ಹೇಳುವ ಎಲ್ಲವನ್ನೂ ರಿಪಬ್ಲಿಕನ್ ಪಕ್ಷದ ಬಹುತೇಕ ಜನರು ಒಪ್ಪುವಂತೆ ಕಾಣಿಸುತ್ತಿದೆ. ಒಬಾಮ ಅವರು ಟ್ರಂಪ್ ಅವರ ದೂರವಾಣಿ ಕದ್ದಾಲಿಕೆ ನಡೆಸಿದ್ದರು ಎಂದು ಟ್ರಂಪ್ ಅವರು ಮಾಡುತ್ತಿರುವ ಹುಚ್ಚು ಆರೋಪವನ್ನು ರಿಪಬ್ಲಿಕನ್ ಪಕ್ಷದ ಹೆಚ್ಚಿನ ಜನರು ನಂಬುತ್ತಿದ್ದಾರೆ ಎಂಬುದು ಒಂದು ನಿದರ್ಶನ ಮಾತ್ರ.

ಸಂಸತ್ತಿನ ಬಜೆಟ್ ಸಮಿತಿಯ ಜತೆಗೆ ಟ್ರಂಪ್ ನೇತೃತ್ವದ ಸರ್ಕಾರ ತಾಂತ್ರಿಕವಾದ ವಿವಾದ ಹೊಂದಿದೆ ಎಂದು ತಳ್ಳಿಹಾಕುವ ಪ್ರಯತ್ನವನ್ನು ಯಾರೂ ಮಾಡಬಾರದು. ಇದು ಬಹಳ ದೊಡ್ಡ ಹೋರಾಟವೊಂದರ ಭಾಗ. ಅಜ್ಞಾನವೇ ಶಕ್ತಿ ಎಂಬುದು ಈ ಹೋರಾಟದಲ್ಲಿ ಪಣಕ್ಕೆ ಒಡ್ಡಲಾಗಿರುವ ಅಂಶ. ಶ್ವೇತಭವನದಲ್ಲಿ ಇರುವ ಟ್ರಂಪ್ ಅವರು ಯಾವುದು ಸತ್ಯ ಎಂಬುದನ್ನು ನಿರ್ಣಯಿಸುವ ಏಕೈಕ ವ್ಯಕ್ತಿಯೇ ಎಂಬುದು ಇಲ್ಲಿನ ಇನ್ನೊಂದು ಅಂಶ.


ಪಾಲ್‌ ಕ್ರುಗ್‌ಮನ್‌, ದಿ ನ್ಯೂಯಾರ್ಕ್‌ ಟೈಮ್ಸ್‌
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.