ಡಬ್ಬಿಂಗ್ ಪರ ಮತ್ತು ವಿರೋಧದ ವಾಗ್ವಾದಗಳಲ್ಲಿ ಕೆಲವರು ಎಲ್ಲೆ ಮೀರಿ ಮಾತನಾಡಿರುವುದನ್ನು ವಿರೋಧಿಸುತ್ತಲೇ ಡಬ್ಬಿಂಗ್ ವಿರೋಧದ ಕೆಲವು ತಾತ್ವಿಕ ಅಂಶಗಳನ್ನು ಮಂಡಿಸಬಯಸುತ್ತೇನೆ. ಸಿನಿಮಾ ಒಂದು ಒಕ್ಕೂಟ ಕಲೆ. ಕತೆ, ಗೀತೆ, ಚಿತ್ರಕತೆ, ಸಂಭಾಷಣೆಗಳ ಸಾಹಿತ್ಯ, ಸಂಗೀತ, ಛಾಯಾಗ್ರಹಣ, ಗಾಯನ, ಸಂಕಲನ, ನಿರ್ದೇಶನ– ಹೀಗೆ ವಿವಿಧ ಸ್ವತಂತ್ರ ಕಲೆಗಳು ಸಿನಿಮಾದ ಕೇಂದ್ರ ಪ್ರಜ್ಞೆಯಲ್ಲಿ ಒಂದಾಗುವ ಕಲೆಯಾಗಿ ತನ್ನ ಸೃಜನಶೀಲತೆಯನ್ನು ಸಾದರಪಡಿಸುವ ಸಿನಿಮಾದ ಯಾವ ಸ್ವತಂತ್ರ ಅಂಶಗಳೂ ಡಬ್ಬಿಂಗ್‌ನಲ್ಲಿ ಇರುವುದಿಲ್ಲ; ಮೂಲ ಸಿನಿಮಾದಲ್ಲಿ ಇರುತ್ತವೆ. ಹೀಗಾಗಿ ಡಬ್ಬಿಂಗ್, ಸೃಜನಶೀಲ ಸ್ವಾತಂತ್ರ್ಯದ ಕಲೆಯಲ್ಲ ಎನ್ನುವ ತಾತ್ವಿಕ ಕಾರಣಕ್ಕೆ ನನ್ನ ವಿರೋಧವಿದೆ.
ಹಾಗಾದರೆ, ಈಗ ಬರುತ್ತಿರುವ ಸ್ವತಂತ್ರ ಕನ್ನಡ ಸಿನಿಮಾಗಳೆಲ್ಲ ಸೃಜನಶೀಲವಾಗಿ ಶ್ರೇಷ್ಠವೆ ಎಂಬ ಪ್ರಶ್ನೆ ಎದುರಾಗುತ್ತದೆ. ಇಡಿಯಾಗಿ ಎಲ್ಲ ಕನ್ನಡ ಚಿತ್ರಗಳೂ ಶ್ರೇಷ್ಠವಲ್ಲ; ಆದರೆ, ಕೆಟ್ಟ ಕನ್ನಡ ಚಿತ್ರಗಳಿಗೆ ಡಬ್ಬಿಂಗ್ ಉತ್ತರವೂ ಅಲ್ಲ; ಪರಿ
ಹಾರವೂ ಅಲ್ಲ. ಇಷ್ಟಕ್ಕೂ ಶ್ರೇಷ್ಠ–ಕನಿಷ್ಠಗಳ ಮಾನದಂಡಗಳ ಬಗ್ಗೆಯೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ ಕೆಟ್ಟ ಕನ್ನಡ ಸಿನಿಮಾಗಳನ್ನು ಮುಂದು ಮಾಡಿ, ಡಬ್ಬಿಂಗ್ ಸಮರ್ಥನೆ ಮಾಡುವ ಬದಲು ಉತ್ತಮ ಕನ್ನಡ ಚಿತ್ರಗಳಿಗಾಗಿ ಒತ್ತಾಯಿಸೋಣ. ‘ಕೇವಲ ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸಿದರೆ ಸಾಲದು; ಅದರ ಜೊತೆಗೆ ಕಡೇಪಕ್ಷ ಸದಭಿರುಚಿಯ ಚಿತ್ರ ಕೊಡಿ’ ಎಂದು ತಾಕೀತು ಮಾಡೋಣ; ಮಾಡಬೇಕು.
‘ಇದು ಜಾಗತೀಕರಣದ ಸ್ಪರ್ಧಾಯುಗ. ಡಬ್ಬಿಂಗ್ ಮೂಲಕ ಸ್ಪರ್ಧೆ ಇರಲಿ ಬಿಡಿ’ ಎಂಬ ಒಂದು ವಾದವೂ ಇದೆ. ಸ್ಪರ್ಧೆ ಎನ್ನುವುದು ಎಲ್ಲ ಕಾಲದಲ್ಲೂ ವಿವಿಧ ಪ್ರಮಾಣಗಳಲ್ಲಿ ಇದ್ದ, ಇರುವ ಒಂದು ವಾಸ್ತವ. ಜಾಗತೀಕರಣದ ಸನ್ನಿವೇಶದಲ್ಲಿ ಸ್ಪರ್ಧೆ ಎನ್ನುವುದು ಮಾರುಕಟ್ಟೆ ಕೇಂದ್ರಿತ ಮನೋಧರ್ಮವನ್ನು ಬೆಳೆಸುತ್ತಿದೆ. ಆದ್ದರಿಂದ ಮಾರುಕಟ್ಟೆ ಮನೋಧರ್ಮದ ಸ್ಪರ್ಧಾ ಸವಾಲಿಗೆ ಸೃಜನಶೀಲ ಕಲೆಗಳು ಸೋಲಬೇಕೊ, ಎದುರಾಗಬೇಕೊ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಸ್ಪರ್ಧೆಯ ಹೆಸರಿನಲ್ಲಿ ಡಬ್ಬಿಂಗ್ ಚಿತ್ರ ಮತ್ತು ಕೆಟ್ಟ ಕನ್ನಡ ಚಿತ್ರಗಳನ್ನು ಎದುರುಬದುರು ಮಾಡಿ ಡಬ್ಬಿಂಗ್ ಚಿತ್ರಗಳ ಸಮರ್ಥನೆ ಮಾಡುವ ಬದಲು ಕೆಟ್ಟ ಮತ್ತು ಒಳ್ಳೆಯ ಕನ್ನಡ ಚಿತ್ರಗಳನ್ನು ಎದುರುಬದುರು ಸ್ಪರ್ಧೆಗಿಳಿಸುವುದು ಸರಿಯಾದ ತಾತ್ವಿಕತೆಯಾಗುತ್ತದೆ. ಇದು ಉತ್ತಮ ಕನ್ನಡ ಚಿತ್ರಗಳು ಬರಬೇಕೆಂಬ ಆಶಯಕ್ಕೆ ಪೂರಕವೂ ಅಲ್ಲ. ಡಬ್ಬಿಂಗ್ ಚಿತ್ರಗಳು ಹಾವಳಿಯ ಹಂತ ತಲುಪಿದರೆ, ಉತ್ತಮ ಕನ್ನಡ ಚಿತ್ರಗಳಿಗೆ ಮಾರಕವಾದರೂ ಆಶ್ಚರ್ಯವಿಲ್ಲ.
ಕನ್ನಡ ಚಿತ್ರೋದ್ಯಮವು ಅರವತ್ತರ ದಶಕಕ್ಕಿಂತ ಸಾಕಷ್ಟು ಬೆಳೆದಿರುವುದರಿಂದ ಡಬ್ಬಿಂಗ್‌ನಿಂದ ತೊಂದರೆಯಿಲ್ಲವೆಂದು ವಾದ ಮಾಡುವವರು ಗಮನಿಸಲೇಬೇಕಾದ ಕಟು ವಾಸ್ತವವೆಂದರೆ ಅರವತ್ತರ ದಶಕಕ್ಕಿಂತ ಅರವತ್ತು ಪಟ್ಟು ಕೆಲಸಗಾರರು ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವುದು. ಡಬ್ಬಿಂಗ್ ಚಿತ್ರಗಳ ಎದುರು ಸ್ವತಂತ್ರ ಚಿತ್ರ ನಿರ್ಮಾಣ ಕುಂಠಿತವಾದಾಗ ಸೃಜನಶೀಲ ಕ್ರಿಯೆಯ ಸಾಧ್ಯತೆಗಳ ಜೊತೆಗೆ, ಸೃಜನಶೀಲ ನೆಲೆಯ ನಿರ್ದೇಶಕರಾದಿಯಾಗಿ ತಂತ್ರಜ್ಞರೂ ಕಲಾವಿದರೂ ಕಾರ್ಮಿಕರೂ ಕೆಲಸದಿಂದ ವಂಚಿತರಾಗುತ್ತಾರೆ. ಹೀಗಾಗಿ ಡಬ್ಬಿಂಗ್ ಚಿತ್ರಗಳು ಏಕಕಾಲಕ್ಕೆ ಸೃಜನಶೀಲರಿಗೂ ಕಾರ್ಮಿಕರಿಗೂ ವಿರೋಧಿಯಾಗುತ್ತದೆ. ಅನೇಕರ ಬದುಕುವ ಹಕ್ಕಿಗೆ ಧಕ್ಕೆ ತರುತ್ತದೆ.
ಸಾಹಿತ್ಯ ಕೃತಿಗಳ ಭಾಷಾಂತರವನ್ನು ಒಪ್ಪುವುದಾದರೆ ಸಿನಿಮಾ ಡಬ್ಬಿಂಗ್ ಯಾಕೆ ಒಪ್ಪಬಾರದು ಎಂಬ ವಾದವೊಂದಿದೆ. ವಾಸ್ತವವಾಗಿ ಈ ಎರಡೂ ಒಂದೇ ಮಾದರಿಯಲ್ಲ. ಭಾಷಾಂತರದಲ್ಲಿ ಕನ್ನಡ ಭಾಷೆಯ ವಿವಿಧ ಜಾಯಮಾನಕ್ಕೆ ಒಗ್ಗಿಸಿಕೊಳ್ಳುವ ಅವಕಾಶವಿರುತ್ತದೆ. ಡಬ್ಬಿಂಗ್‌ನಲ್ಲಿ ತುಟಿ ಚಲನೆಗಾಗಿ ಭಾಷೆ; ಭಾಷೆಗಾಗಿ ತುಟಿ ಚಲನೆಯಲ್ಲ. ಹೀಗಾಗಿ ‘ಭಾಷಾ ಸ್ವಾತಂತ್ರ್ಯ’ವೂ ಇರುವುದಿಲ್ಲ; ಸಾಹಿತ್ಯ ಕೃತಿಯ ಭಾಷಾಂತರಕ್ಕೆ ಸಮಾನವೂ ಅಲ್ಲ.
ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವುದರಿಂದ ಕನ್ನಡ ಭಾಷೆಯನ್ನು ಬೆಳೆಸಿದಂತಾಗುತ್ತದೆಯೆಂದು ಕೆಲವರು ವಾದಿಸುತ್ತಿದ್ದು, ಇದು ವಿಚಿತ್ರವೆನ್ನಿಸುತ್ತದೆ. ಕನ್ನಡ ಭಾಷೆಯ ಬೆಳವಣಿಗೆಗೆ ಸಿನಿಮಾಕ್ಕೆ ಹೊರತಾದ ಹತ್ತಾರು ಮಾರ್ಗಗಳಿವೆ. ಜೊತೆಗೆ ಮೊದಲೇ ಹೇಳಿದಂತೆ ಡಬ್ಬಿಂಗ್‌ನಲ್ಲಿ ಭಾಷಾ ಸ್ವಾತಂತ್ರ್ಯವೇ ಕಡಿಮೆ.
ಇನ್ನು ಕನ್ನಡಿಗರು ಡಬ್ಬಿಂಗ್ ಮೂಲಕ ಕನ್ನಡ ಬೆಳೆಸಬೇಕೆಂಬ ವಾದವೇ ಅತಾರ್ಕಿಕ. ಸ್ವತಂತ್ರ ಕನ್ನಡ ಸಿನಿಮಾಗಳು ಕರ್ನಾಟಕದ ಭಾಷಾ ವೈವಿಧ್ಯಕ್ಕೆ ಮುಕ್ತವಾಗಿರುತ್ತವೆಯೆಂಬುದನ್ನೂ ಇಲ್ಲಿ ಗಮನಿಸಬೇಕು. ನಿರ್ದೇಶಕರು ಕಥಾಹಂದರದ ಪ್ರಾದೇಶಿಕತೆಗೆ ಅನುಗುಣವಾಗಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ, ಬಯಲುಸೀಮೆ– ಇವೇ ಮುಂತಾದ ಪ್ರಾದೇಶಿಕ ಭಾಷಾ ವೈವಿಧ್ಯವನ್ನು ಅಳವಡಿಸಲು ಸ್ವತಂತ್ರ ಕನ್ನಡ ಸಿನಿಮಾದಲ್ಲಿ ಅವಕಾಶ ವಿರುತ್ತದೆ. ಡಬ್ಬಿಂಗ್‌ನಲ್ಲಿ ಇದು ಸಾಧ್ಯವಿಲ್ಲ. ಆದ್ದರಿಂದ ಡಬ್ಬಿಂಗ್ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಲ್ಲ.
ಡಬ್ಬಿಂಗ್ ಸಿನಿಮಾಗಳಿಂದ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗುತ್ತದೆಯೆಂದು ಡಬ್ಬಿಂಗ್ ವಿರೋಧಿಗಳಾದ ಕೆಲವರು ವಾದಿಸುತ್ತಾರೆ. ಇದು ಪೂರ್ಣ ಸತ್ಯವಲ್ಲ. ಸಂಸ್ಕೃತಿಗೆ ಧಕ್ಕೆ ತರಲು ಡಬ್ಬಿಂಗ್ ಸಿನಿಮಾಗಳೇಕೆ, ಕೆಲವು ಸ್ವತಂತ್ರ ಕನ್ನಡ ಸಿನಿಮಾಗಳೂ ಆ ಕೆಲಸವನ್ನು ಮಾಡುತ್ತವೆ. ಹಾಗೆಂದು ಡಬ್ಬಿಂಗ್‌ನ ಸಮರ್ಥನೆ ಮಾಡಬೇಕಾಗಿಲ್ಲ. ಯಾಕೆಂದರೆ ಡಬ್ಬಿಂಗ್ ಚಿತ್ರಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ ತೋರಿಸುವ ಅವಕಾಶವೇ ಇರುವುದಿಲ್ಲ.
ಸ್ವತಂತ್ರ ಕನ್ನಡ ಸಿನಿಮಾಗಳು ಸಾಂಸ್ಕೃತಿಕ ವೈವಿಧ್ಯ ಅಳವಡಿಸಿಕೊಳ್ಳುವ ಅವಕಾಶ ಪಡೆದಿರುತ್ತವೆ. ಮಾರುಕಟ್ಟೆ ಮಾದರಿಗಳ ಮೂಲಕ ಇವತ್ತು ಸ್ವತಂತ್ರ ಕನ್ನಡ ಚಿತ್ರಗಳು ಸಾಂಸ್ಕೃತಿಕವಾಗಿ ಸೊರಗುತ್ತಿದ್ದರೆ ಉತ್ತಮಿಕೆಗೆ ಒತ್ತಾಯಿಸಬೇಕೇ ಹೊರತು ಡಬ್ಬಿಂಗ್‌ನಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿಲ್ಲ; ಡಬ್ಬಿಂಗ್ ಸಾಂಸ್ಕೃತಿಕ ಉತ್ತರವೂ ಅಲ್ಲ. ಜಾಗತೀಕರಣದ ಏಕೀಕೃತ ಮಾರುಕಟ್ಟೆಯ ಮಾದರಿಗಳೇ ಸ್ಪರ್ಧೆಯ ರೂಪದಲ್ಲಿ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಧಕ್ಕೆ ತರುತ್ತಿವೆಯೆಂಬುದನ್ನೂ ನಾವು ಮನಗಾಣಬೇಕು.
ಡಬ್ಬಿಂಗ್ ಪರವಾಗಿರುವ ಕೆಲವರು ‘ಸಿನಿಮಾ ಮತ್ತು ಕಿರುತೆರೆಗಳು ಕೆಲವರ ‘ಮನಾಪಲಿ’ಯಾಗಿವೆ; ಸಿನಿಮಾ ಹೀರೊಗಳಿಗೆ ಕೋಟಿಗಟ್ಟಲೆ ಕೊಡಬೇಕಾಗಿದೆ. ಈ ಮನಾಪಲಿಯನ್ನು (ಏಕಸ್ವಾಮ್ಯ) ಮುರಿಯಲು ಡಬ್ಬಿಂಗ್ ಬೇಕು’ ಎಂಬ ಅರ್ಥದ ಮಾತುಗಳನ್ನಾಡುತ್ತಿದ್ದಾರೆ. ನಿಜ, ಸಿನಿಮಾ ನಟರಲ್ಲಿ ಕೆಲವರು ಕೋಟಿಗಳ ಹೀರೊಗಳು; ಕಿರುತೆರೆಯಲ್ಲಿ ಕೆಲ ಪ್ರತಿಷ್ಠಿತರಿಗೆ ವಿಶೇಷ ಆದ್ಯತೆ! ಆದರೆ ಇದಕ್ಕೆ ಡಬ್ಬಿಂಗ್ ಉತ್ತರವೆ? ಅಲ್ಲ ಎನ್ನುವುದಕ್ಕೆ ಸಾಕಷ್ಟು ಸಮರ್ಥನೆಯಿದೆ.
ಸಿನಿಮಾ ಹೋರೊಗಳಿಗೆ ಕೋಟಿಗಟ್ಟಲೆ ಕೊಡುವವರು ಆ ಹಣವನ್ನು ಟಿ.ವಿ. ಹಕ್ಕು ಮಾರಾಟದಲ್ಲೇ ಪಡೆಯುತ್ತಾರೆ; ಜೊತೆಗೆ ಮುಂದೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಲಾಭ ಬರುತ್ತದೆಯೆಂದು ನಿರೀಕ್ಷಿಸುತ್ತಾರೆ. ಹೀಗಾಗಿ ತಾವಾಗಿಯೇ ಕೋಟಿ ಕಿರೀಟದ ಹೀರೊಗಳಿಗೆ ಮಣಿಯುತ್ತಾರೆ. ಇದರ ಬದಲು ಬೇರೆಯವರಿಗೆ, ಹೊಸಬರಿಗೆ ಅವಕಾಶ ಕೊಟ್ಟು ಕಡಿಮೆ ಬಜೆಟ್ನಲ್ಲೂ ಸಿನಿಮಾ ಮಾಡಬಹುದಲ್ಲ? ಯಶಸ್ವಿ ಉದಾಹರಣೆಗಳೂ ಇವೆಯಲ್ಲ? ಒಂದು ವೇಳೆ ಡಬ್ಬಿಂಗ್ ಬಂದರೆ ‘ಮನಾಪಲಿ’ ತಪ್ಪುತ್ತದೆಯೆ? ಖಂಡಿತ ಇಲ್ಲ. ಕೋಟಿಗಳ ಹೀರೊಗಳು ಅಬಾಧಿತರಾಗಿಯೇ ಇರುತ್ತಾರೆ.
ಹೊಸ ಪ್ರಯತ್ನಗಳಿಗೆ ಹೊಡೆತ ಬೀಳುತ್ತದೆ. ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುವ ವಾಹಿನಿಗಳು ಒಗ್ಗರಣೆಗೆಂದು ಒಂದೆರಡು ಸ್ವತಂತ್ರ ಧಾರಾವಾಹಿಗಳನ್ನೂ ನಿರ್ಮಿಸುತ್ತವೆ. ಈ ಸ್ವತಂತ್ರ ಧಾರಾವಾಹಿಗಳನ್ನು ಹೊಸಬರ ಬದಲು ‘ಪ್ರತಿಷ್ಠಿತ’ರಿಗೇ ಕೊಡುತ್ತವೆ. ಯಾಕೆಂದರೆ ವಾಹಿನಿಗಳಿಗೆ ಟಿ.ಆರ್.ಪಿ. ಮುಖ್ಯ. ಹೀಗಾಗಿ ಡಬ್ಬಿಂಗ್ ಹೆಚ್ಚಾದಂತೆ ಸಿನಿಮಾ ಮತ್ತು ಕಿರು ತೆರೆಯ ಪ್ರತಿಷ್ಠಿತ ವರ್ಗ ಅದೇ ಸ್ಥಾನದಲ್ಲಿ ಉಳಿಯುತ್ತದೆ. ಆದ್ದರಿಂದ ಡಬ್ಬಿಂಗ್, ಮನಾಪಲಿಗೂ ಸೂಕ್ತ ಉತ್ತರವಾಗುವುದಿಲ್ಲ.
ಕಡೆಯದಾಗಿ, ಕಾನೂನು, ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಅವಕಾಶಗಳ ಪ್ರಸ್ತಾಪಕ್ಕೆ ಬರುತ್ತೇನೆ. ಡಬ್ಬಿಂಗ್ ಪರವಾಗಿರುವ ಕೆಲವರ ತಾತ್ವಿಕ ಪ್ರತಿಪಾದನೆ ಹೀಗಿದೆ: ‘ಡಬ್ಬಿಂಗ್ ವಿರೋಧಿಗಳು ಸಂವಿಧಾನದತ್ತವಾದ ಭಾಷಾ ಸ್ವಾತಂತ್ರ್ಯ, ಆಯ್ಕೆಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳ ಜೊತೆಗೆ ವ್ಯಾಪಾರ ವಹಿವಾಟಿನ ಹಕ್ಕನ್ನು ಹತ್ತಿಕ್ಕುತ್ತಿದ್ದಾರೆ. ಆದ್ದರಿಂದ ಡಬ್ಬಿಂಗ್ ವಿರೋಧವು ಪ್ರಜಾಪ್ರಭುತ್ವ ವಿರೋಧಿ; ಕಾನೂನು ವಿರೋಧಿ’.
ಡಬ್ಬಿಂಗ್ ಸಿನಿಮಾಗಳು ಭಾಷಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರು-ವುದೇ ಇಲ್ಲ. ಯಾಕೆಂದರೆ, ಈ ಸ್ವಾತಂತ್ರ್ಯಗಳನ್ನು ಮೂಲಭಾಷೆಯ ಚಿತ್ರ ಪಡೆದಿರುತ್ತದೆ. ಡಬ್ಬಿಂಗ್‌ಗೆ ಸ್ವತಂತ್ರ ಭಾಷೆಯೂ ಇಲ್ಲ; ಸ್ವತಂತ್ರ ಅಭಿವ್ಯಕ್ತಿಯೂ ಇಲ್ಲ. ಇನ್ನು ಆಯ್ಕೆ ಮತ್ತು ವ್ಯಾಪಾರ ವಹಿವಾಟಿನ ಹಕ್ಕಿನ ಪ್ರಶ್ನೆ. ಸಂವಿಧಾನದ 19(1) ಜಿ–ಪರಿಚ್ಛೇದದ ಪ್ರಕಾರ ‘ಪ್ರತಿ ನಾಗರಿಕನೂ ತನಗಿಷ್ಟವಾದ ಉದ್ಯೋಗ, ವೃತ್ತಿ, ವ್ಯಾಪಾರ ವಹಿವಾಟುಗಳನ್ನು ಮಾಡಬಹುದು. ಈ ಹಕ್ಕಿನಂತೆ ಡಬ್ಬಿಂಗ್ ಅನ್ನೂ ಮಾಡಬಹುದು.
ಆದರೆ ಸಂವಿಧಾನವು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. 19(6)ರ ಪ್ರಕಾರ ‘ನ್ಯಾಯೋಚಿತ ನಿಯಂತ್ರಣ’ಕ್ಕೆ (Reasonable ristriction) ಅವಕಾಶ ಮಾಡಿಕೊಟ್ಟಿದೆ. ಈ ಪರಿಚ್ಛೇದದ ಪ್ರಕಾರ ‘ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ ವಹಿವಾಟುಗಳನ್ನು ಸರ್ಕಾರ ನಿರ್ಬಂಧಿಸಬಹುದು’. ಸ್ಪಷ್ಟನೆಗಾಗಿ ಸಾರಾಯಿ ನಿಷೇಧದ ಉದಾಹರಣೆ ಕೊಡಬಹುದು. ನನಗೆ ಗೊತ್ತು–ಸಾರಾಯಿ, ಸಿನಿಮಾ ಒಂದೇ ಮಾದರಿಯಲ್ಲ. ಆದರೆ ವೃತ್ತಿ, ವ್ಯಾಪಾರಗಳ ವ್ಯಾಪ್ತಿಗೆ ಸೇರಿಸಿ ಡಬ್ಬಿಂಗ್ ಹಕ್ಕನ್ನು ಪ್ರತಿಪಾದಿಸುವುದರಿಂದ ತರ್ಕಕ್ಕಾಗಿ ಸಾರಾಯಿ ನಿಷೇಧದ ಕಾನೂನನ್ನು ಉದಾಹರಿಸುತ್ತಿದ್ದೇನೆ.
ಬ್ರಾಂದಿ, ಬೀರು, ವಿಸ್ಕಿ, ಸಾರಾಯಿ–ಎಲ್ಲವೂ ಮಾದಕ ಪಾನೀಯಗಳೇ ಆಗಿದ್ದರೂ ಸಾರಾಯಿಯನ್ನು ಮಾತ್ರ ನಿಷೇಧಿಸಲಾಯಿತು. ತಮ್ಮ ಹಕ್ಕಿಗೆ ಚ್ಯುತಿಯಾಯಿತೆಂದು ಕೆಲವರು ಹೈಕೋರ್ಟ್‌ಗೆ ಹೋದಾಗ ನ್ಯಾಯಾಲಯವು ಸರ್ಕಾರದ ಸಾರಾಯಿ ನಿಷೇಧ ಕಾನೂನನ್ನು ಸಮರ್ಥಿಸಿ ತೀರ್ಪು ನೀಡಿತು. ಅಂದರೆ ಸಂವಿಧಾನದತ್ತವಾದ ‘ನ್ಯಾಯೋಚಿತ ನಿಯಂತ್ರಣ’ ಪರಿಚ್ಛೇದದ ಪ್ರಕಾರ ಡಬ್ಬಿಂಗ್ ಚಿತ್ರ ನಿರ್ಮಾಣವನ್ನು ನಿಯಂತ್ರಿಸಬಹುದು ಎಂದಾಯಿತಲ್ಲವೆ? ಡಬ್ಬಿಂಗ್ ಬೇಕು ಎನ್ನುವುದಷ್ಟೇ ಅಲ್ಲ ‘ಬೇಡ’ ಎನ್ನುವುದೂ ಸಂವಿಧಾನಬದ್ಧವಲ್ಲವೆ? ಇನ್ನು ಸಂವಿಧಾನದ 21ನೇ ಪರಿಚ್ಛೇದವೂ ಡಬ್ಬಿಂಗ್ ವಿರೋಧಕ್ಕೆ ಪೂರಕವಾಗಿದೆ. 21ನೇ ಪರಿಚ್ಛೇದವು ನಾಗರಿಕರಿಗೆ ಜೀವಿಸುವ ಹಕ್ಕನ್ನು ನೀಡುತ್ತದೆ. ಜೀವ ಎಂದರೆ ‘ಪ್ರಾಣ’ ಮಾತ್ರವಲ್ಲ, ಅದು ‘ಜೀವನೋಪಾಯ ಅಥವಾ ಜೀವನಾಧಾರವೂ ಆಗಿದೆ’ ಎಂದು 1983ರಲ್ಲಿ ಮಹಾರಾಷ್ಟ್ರದ ಹೈಕೋರ್ಟ್ ತೀರ್ಪು ನೀಡಿದೆ. ಡಬ್ಬಿಂಗ್ ಚಿತ್ರಗಳು ಸಾವಿರಾರು ಜನರ ಜೀವನಾಧಾರವನ್ನು ಕಿತ್ತುಕೊಳ್ಳುವುದರಿಂದ ಸಂವಿಧಾನದ 21ನೇ ಪರಿಚ್ಛೇದವನ್ನು ಉಲ್ಲಂಘಿಸಿದಂತಾಗುತ್ತದೆ.
ಸಂವಿಧಾನದ 23 ಮತ್ತು 24ನೇ ಪರಿಚ್ಛೇದಗಳು ಶೋಷಣೆಯ ವಿರುದ್ಧದ ಹಕ್ಕುಗಳನ್ನು ನೀಡುತ್ತವೆ. ಸಾಮಾಜಿಕ ಪಿಡುಗುಗಳನ್ನೂ ಒಳಗೊಂಡಂತೆ ಈ ಪರಿಚ್ಛೇದಗಳು, ಮನುಷ್ಯನ ಮೇಲೆ ಹೇರಲಾಗುವ ಎಲ್ಲ ರೀತಿಯ ಹಿಂಸೆ, ಬಲಾತ್ಕಾರಗಳನ್ನು ವಿರೋಧಿಸುತ್ತವೆ. 1982ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಒಂದು ತೀರ್ಪು ‘ಆರ್ಥಿಕ ಮುಗ್ಗಟ್ಟಿನಿಂದ ಉಂಟಾಗುವ ಪರಿಸ್ಥಿತಿಯೂ ಹಿಂಸೆ ಮತ್ತು ಬಲಾತ್ಕಾರವಾಗುತ್ತದೆ’ ಎಂದು ವ್ಯಾಖ್ಯಾನಿಸಿ ಇಂಥ ಕ್ರಮಗಳನ್ನು ವಿರೋಧಿಸುತ್ತದೆ. ದೌರ್ಜನ್ಯದ ವ್ಯಾಪ್ತಿಗೆ ತರುತ್ತದೆ. ಇದು ‘ಏಷಿಯಾಡ್’ ಕೆಲಸಗಾರರಿಗೆ ಸಂಬಂಧಿಸಿದ ಕೇಸು. ಸುಪ್ರೀಂಕೋರ್ಟ್‌ನ ವ್ಯಾಖ್ಯಾ-ನವನ್ನು ಡಬ್ಬಿಂಗ್‌ನಿಂದ ಕೆಲಸ ಕಳೆದುಕೊಳ್ಳುವವರ ವಿಷಯಕ್ಕೂ ಅನ್ವಯಿಸಬಹುದಾಗಿದೆ.
ಹೀಗಾಗಿ, ಸಂವಿಧಾನದ 19(6), 21, 23, ಮತ್ತು 24ನೇ ಪರಿಚ್ಛೇದಗಳ ಪ್ರಕಾರ ಡಬ್ಬಿಂಗ್ ವಿರೋಧವನ್ನು ಸಮರ್ಥಿಸಲು ಸಾಧ್ಯ. ಕಾನೂನು ಮಾಡಲೂ ಸಾಧ್ಯ. ಈಗ ಡಬ್ಬಿಂಗ್ ಸಿನಿಮಾ ವಿಷಯವು ಭಾರತೀಯ ಸ್ಪರ್ಧಾ ಆಯೋಗದಲ್ಲಿ ಕಾನೂನು ಪ್ರಶ್ನೆಯಾಗಿ ಮಾರ್ಪಟ್ಟಿದೆ. ಈ ಆಯೋಗವು ಪ್ರಧಾನವಾಗಿ ಸರಕು ಮತ್ತು ಗ್ರಾಹಕರ ಹಕ್ಕುಗಳಿಗೆ ಸಂಬಂಧಿಸಿದ್ದು. ಸಿನಿಮಾ, ಮೂಲತಃ ಕಲೆಯಾಗಿ, ಆನಂತರ ಉದ್ಯಮವಾಗಿರುವುದರಿಂದ ‘ಸರಕು ಮತ್ತು ಗ್ರಾಹಕ’ ಎಂಬ ವ್ಯಾಪ್ತಿಗೆ ತರುವುದು ಸರಿಯೆ ಎಂಬ ತಾತ್ವಿಕ ಪ್ರಶ್ನೆಯೂ ಮುಖ್ಯವಾಗುತ್ತದೆ. ಅಷ್ಟೇ ಅಲ್ಲ, ಈ ಆಯೋಗದ 54ನೇ ಪರಿಚ್ಛೇದದ ಪ್ರಕಾರ, ಕೇಂದ್ರ ಸರ್ಕಾರವು ಯಾವುದೇ ಕ್ಷೇತ್ರವನ್ನು ಹೊರಗಿಡುವ ಅಧಿಕಾರ ಹೊಂದಿದೆ.
ಅಂದರೆ ಕೇಂದ್ರ ಮನಸ್ಸು ಮಾಡಿದರೆ ಕಾನೂನಾತ್ಮಕವಾಗಿಯೇ ಸಿನಿಮಾ ಕ್ಷೇತ್ರವನ್ನು ಈ ಆಯೋಗದ ವ್ಯಾಪ್ತಿಯಿಂದ ಹೊರಗಿಡಬಹುದು. ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಗಳ ಡಬ್ಬಿಂಗ್‌ಗೆ ವಿರೋಧ ವ್ಯಕ್ತಪಡಿಸುವ ನಾನು ಜ್ಞಾನಪ್ರಧಾನ ಸಾಕ್ಷ್ಯಚಿತ್ರಗಳನ್ನು ವಿರೋಧದ ವ್ಯಾಪ್ತಿಗೆ ತರಬಾರದೆಂದು ಭಾವಿಸುತ್ತೇನೆ. ಇದೇ ಸಂದರ್ಭದಲ್ಲಿ ಡಬ್ಬಿಂಗ್ ಪರ ಮತ್ತು ವಿರೋಧಿ ವಲಯಗಳು ಸಂಯಮ ಮತ್ತು ಸೌಜನ್ಯಗಳ ನೆಲೆಯಲ್ಲಿ ಸಂವಾದಿಸಬೇಕೆಂದೂ ನಿಂದನೆಗೆ ಬದಲು ಚಿಂತನೆಗೆ ಪ್ರಾಶಸ್ತ್ಯ ಕೊಡಬೇಕೆಂದು ವಿನಂತಿಸುತ್ತೇನೆ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.