ADVERTISEMENT

ನನ್ನ ಫೇಸ್‌ಬುಕ್ ಖಾತೆ ಎಷ್ಟು ಸೇಫ್?

ಘನಶ್ಯಾಮ ಡಿ.ಎಂ.
Published 24 ಮಾರ್ಚ್ 2018, 5:26 IST
Last Updated 24 ಮಾರ್ಚ್ 2018, 5:26 IST
ಫೇಸ್‍ಬುಕ್
ಫೇಸ್‍ಬುಕ್   

‘ಕೇಂಬ್ರಿಜ್ ಅನಲಿಟಿಕಾ’ ಎನ್ನುವ ದತ್ತಾಂಶ ವಿಶ್ಲೇಷಣೆ ಕಂಪನಿಯು ವ್ಯಕ್ತಿತ್ವ ಚಿತ್ರಣ (ಪರ್ಸನಾಲಿಟಿ ಪ್ರೊಫೈಲಿಂಗ್) ಆ್ಯಪ್ ಮೂಲಕ 2.70 ಲಕ್ಷ ಫೇಸ್‌ಬುಕ್
ಬಳಕೆದಾರರ ಖಾತೆಗಳಿಗೆ ಪ್ರವೇಶ ಪಡೆದುಕೊಂಡಿತು. ಈ ಖಾತೆಗಳಿಗೆ ಗೆಳೆಯರಾಗಿದ್ದ 5 ಕೋಟಿ ಬಳಕೆದಾರರ ಮಾಹಿತಿಯನ್ನು ಅವರ ಅನುಮತಿ ಪಡೆಯದೇ ಪಡೆದುಕೊಂಡಿತು. ಈ ದತ್ತಾಂಶವನ್ನು ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಪರ ಪ್ರಚಾರಾಂದೋಲನಕ್ಕೆ ಬಳಸಿಕೊಳ್ಳಲಾಯಿತು. ಭಾರತದ ಜೆಡಿಯು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಕಂಪನಿಯ ಗ್ರಾಹಕರು. ಇದೀಗ ಈ ವಿಷಯವು ಫೇಸ್‌ಬುಕ್‌ನಲ್ಲಿ ಬಳಕೆದಾರರು ಪೋಸ್ಟ್ ಮಾಡುವ ಮಾಹಿತಿಯ ಭದ್ರತೆಯ ಪ್ರಶ್ನೆ ಹುಟ್ಟುಹಾಕಿದೆ.

ಕೇಂಬ್ರಿಜ್ ಅನಲಿಟಿಕಾ (ಸಿಎ) ಎಂದರೇನು?

ಇದು ದತ್ತಾಂಶ ವಿಶ್ಲೇಷಣೆ ಮತ್ತು ರಾಜಕಾರಣಿಗಳಿಗೆ ಪರಿಣತ ಸಲಹೆ ಕೊಡುವ ಕಂಪನಿ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮುಖ್ಯ ನೀತಿನಿರೂಪಕರಾಗಿದ್ದ ಸ್ಟೀವ್ ಬನ್ನೋನ್ ಇದನ್ನು 2014ರಲ್ಲಿ ಆರಂಭಿಸಿದರು. ರಿಪಬ್ಲಿಕನ್ ಪಕ್ಷದ ಬೆಂಬಲಿಗರಾದ ಅಮೆರಿಕದ ಕೋಟ್ಯಧಿಪತಿ ರಾಬರ್ಟ್‌ ಮರ್ಸರ್ ಈ ಕಂಪನಿಯ ಮುಖ್ಯ ಹೂಡಿಕೆದಾರ.

ADVERTISEMENT

ಏನಿದು ವಿವಾದ?

ಕಂಪನಿಯ ಕಾರ್ಯನಿರ್ವಹಣೆ ಕುರಿತು ಬ್ರಿಟನ್‌ನ ‘ದಿ ಅಬ್ಸರ್ವರ್’ ಪತ್ರಿಕೆಗೆ ‘... ಅನಲಿಟಿಕಾ’ದ ಮಾಜಿ ಉದ್ಯೋಗಿ ಕ್ರಿಸ್ ವೈಲಿ ಮಾಹಿತಿ ನೀಡಿದ್ದರು. ಕೇಂಬ್ರಿಜ್ ವಿಶ್ವವಿದ್ಯಾಲಯದ ಮನಶಾಸ್ತ್ರಜ್ಞ ಮತ್ತು ದತ್ತಾಂಶ ವಿಶ್ಲೇಷಕ ಅಲೆಕ್ಸಾಂಡರ್ ಕೊಗಾನ್ ರೂಪಿಸಿದ ‘thisisyourdigitallife’ (ದಿಸ್ ಈಸ್ ಯುವರ್ ಡಿಜಿಟಲ್ ಲೈಫ್‌) ಹೆಸರಿನ ಆ್ಯಪ್ ಮೂಲಕ 2.70 ಲಕ್ಷ ಫೇಸ್‌ಬುಕ್ ಬಳಕೆದಾರರಿಗೆ ಕೇಂಬ್ರಿಜ್ ಅನಲಿಟಿಕಾ, ಪ್ರಶ್ನೋತ್ತರ ರವಾನಿಸಿತ್ತು. ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡವರ ಗೆಳೆಯರ ಪಟ್ಟಿಯಲ್ಲಿದ್ದ 5 ಕೋಟಿ ಫೇಸ್‌ಬುಕ್ ಬಳಕೆದಾರರಿಂದ ಅವರ ಅನುಮತಿ
ಯನ್ನೇ ಪಡೆಯದೆ ಪ್ರೊಫೈಲ್ ಮಾಹಿತಿ ಸಂಗ್ರಹಿಸಿತ್ತು. ಈ ದತ್ತಾಂಶವನ್ನು ವಿಶ್ಲೇಷಿಸಿ, ಮತದಾರರ ಅಭಿಪ್ರಾಯವನ್ನು ಟ್ರಂಪ್ ಪರ ರೂಪಿಸಲು ಬಳಸಿಕೊಳ್ಳಲಾಯಿತು. ಭಾರತದ ರಾಜಕೀಯ ಪಕ್ಷಗಳೂ ಈ ಕಂಪನಿಯ ಸೇವೆಯನ್ನು ಬಳಸಿಕೊಂಡಿವೆ.

ಫೇಸ್‌ಬುಕ್ ಪಾತ್ರವೇನು?

ಈ ಹಗರಣದಲ್ಲಿ ತನ್ನ ಪಾತ್ರವಿದೆ ಎನ್ನುವುದನ್ನು ಫೇಸ್‌ಬುಕ್ ಪ್ರತ್ಯಕ್ಷವಾಗಿ ಒಪ್ಪಿಕೊಂಡಿಲ್ಲ. 2015ರಲ್ಲಿ ಕೇಂಬ್ರಿಜ್ ಅನಲಿಟಿಕಾಗೆ ಮಾಹಿತಿ ರವಾನಿಸಿದಾಗ ಫೇಸ್‌ಬುಕ್ ನಿಯಮಗಳಿಗೆ ಕೊಗಾನ್ ಬದ್ಧರಾಗಿಲ್ಲ ಎಂದು ಫೇಸ್‌ಬುಕ್‌ ಹೇಳಿಕೆ ಹೊರಡಿಸಿತ್ತು. ನಂತರದ ದಿನಗಳಲ್ಲಿ ಫೇಸ್‌ಬುಕ್ ‘thisisyourdigitallife’ ಆ್ಯಪ್ ಡಿಲಿಟ್ ಮಾಡಿ, ಸಂಗ್ರಹಿಸಿದ ಮಾಹಿತಿ ನಾಶಪಡಿಸಲು ಸೂಚಿಸಿತ್ತು. ಆದರೂ ಈ ಆ್ಯಪ್‌ ಮೂಲಕ ಸಂಗ್ರಹಿಸಿದ ದತ್ತಾಂಶ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ಇದೀಗ ಬಹಿರಂಗವಾಗಿದೆ.

ಕೇಂಬ್ರಿಜ್ ಅನಲಿಟಿಕಾ ಮತ್ತು ಫೇಸ್‌ಬುಕ್‌ ಮೇಲೆ ಸರ್ಕಾರಗಳು ಕ್ರಮ ಜರುಗಿಸಬಹುದೇ?

ಬ್ರಿಟನ್‌ ಮತ್ತು ಅಮೆರಿಕದಲ್ಲಿ ಈ ಸಂಬಂಧ ತನಿಖೆಗಳು ಆರಂಭವಾಗಿವೆ. ಅಮೆರಿಕದಲ್ಲಿ ಟ್ರಂಪ್ ಪರ ನಡೆದ ಪ್ರಚಾರದಲ್ಲಿ ರಷ್ಯನ್ನರ ಹಸ್ತಕ್ಷೇಪದ ಬಗ್ಗೆ ನಡೆಯುತ್ತಿರುವ ತನಿಖೆಯು ಇದೀಗ ಫೇಸ್‌ಬುಕ್ ಪ್ರಭಾವದ ಆಯಾಮವನ್ನೂ ಪಡೆದುಕೊಂಡಿದೆ. ಅಮೆರಿಕದ ಹೌಸ್ ಆಫ್ ಕಾಮನ್ಸ್ (ಕೆಳಮನೆ) ಸಂಸದೀಯ ಸಮಿತಿಯು ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಅವರಿಗೆ ತನ್ನೆದುರು ಹಾಜರಾಗಿ, ಕೇಂಬ್ರಿಜ್ ಅನಲಿಟಿಕಾ ಅನಾಹುತಗಳ ಬಗ್ಗೆ ತಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸೂಚಿಸಿದೆ.

ನಮ್ಮ ದೇಶದಲ್ಲಿ ಜನರ ಖಾಸಗಿತನ ರಕ್ಷಿಸುವ ನಿರ್ದಿಷ್ಟ ಕಾಯ್ದೆ ಇಲ್ಲ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಜನರ ಮಾಹಿತಿ ಕದಿಯುವವರನ್ನು ಶಿಕ್ಷಿಸುವ ಮಾತುಗಳನ್ನು ಆಡಿದ್ದಾರೆ. ಆದರೆ ‘ಕಾಯ್ದೆಯ ಬಲವಿಲ್ಲದ ಮಾತುಗಳಿಂದ ಹೆಚ್ಚು ಪ್ರಯೋಜನವಿಲ್ಲ’ ಎಂದು ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ ನಿರ್ದೇಶಕ ಪ್ರಾಣೇಶ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ಫೇಸ್‌ಬುಕ್ ಯಾವ್ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ?

ನಿಮಗೆ ಇದು ಅರ್ಥವಾಗಬೇಕಾದರೆ ನಿಮ್ಮ ಪ್ರೊಫೈಲ್‌ನ ಆರ್ಕೈವ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ (Facebook > settings > general > download a copy of your Facebook data) ನಿಮ್ಮ ಆರ್ಕೈವ್‌ನ ಜಿಪ್ ಫೈಲ್ ಪಡೆದುಕೊಳ್ಳಬಹುದು. ಇದರಲ್ಲಿ ಸ್ಟೇಟಸ್ ಅಪ್‌ಡೇಟ್ ಜೊತೆಗೆ ಮೆಸೆಂಜರ್ ಮೂಲಕ ಕಳುಹಿಸಿದ, ಸ್ವೀಕರಿಸಿದ ಸಂದೇಶಗಳೂ ಸಿಗುತ್ತವೆ. ನೀವು ಅಳಿಸಿ ಹಾಕಿದ ಮಾಹಿತಿಗಳು, ಇ–ಮೇಲ್ ವಿಳಾಸಗಳು ಅಲ್ಲಿವೆಯೇ? ನೀವೇ ನೋಡಿ. ಫೇಸ್‌ಬುಕ್ ವ್ಯವಹಾರದ ಬಗ್ಗೆ ಅರ್ಥಮಾಡಿಕೊಳ್ಳಿ. ಈ ಆಯ್ಕೆ ಬ್ರೌಸರ್ ಮೂಲಕ ಮಾತ್ರ ಕೆಲಸ ಮಾಡುತ್ತದೆ.

‘ಥರ್ಡ್‌ ಪಾರ್ಟಿ ಆ್ಯಪ್’ಗಳಿಂದ ಅಪಾಯವಿದೆಯೇ?

ಮಾಹಿತಿ ಕದಿಯುವ ವಿಚಾರದಲ್ಲಿ ‘ಥರ್ಡ್‌ ಪಾರ್ಟಿ ಆ್ಯಪ್‌’ಗಳ ಪಾತ್ರ ದೊಡ್ಡದು. ಫೇಸ್‌ಬುಕ್ ತನ್ನ ನೀತಿಯಲ್ಲಿ ಘೋಷಿಸಿರುವಂತೆ ನಿಮ್ಮ ಹೆಸರು, ಪ್ರೊಫೈಲ್ ಚಿತ್ರ, ಕವರ್ ಚಿತ್ರ, ಲಿಂಗ, ನೆಟ್‌ವರ್ಕ್‌ಗಳು, ಯೂಸರ್‌ನೇಮ್‌, ಯೂಸರ್ ಐ.ಡಿ ಸೇರಿದಂತೆ ಹಲವು ಮಾಹಿತಿಗಳು ಸಾರ್ವಜನಿಕವಾಗಿ ಎಲ್ಲರಿಗೂ ಕಾಣಿಸುತ್ತವೆ. ಆದರೆ ‘ಥರ್ಡ್‌ ಪಾರ್ಟಿ ಆ್ಯಪ್‌’ಗಳು ನಿಮ್ಮ ಮೂಲಕ ನಿಮ್ಮ ಗೆಳೆಯರ ಪಟ್ಟಿಗೂ ಲಗ್ಗೆ ಇಡುತ್ತವೆ. ನೀವು ಯಾವೆಲ್ಲ ಮಾಹಿತಿಯನ್ನು public (ಪಬ್ಲಿಕ್) ಎಂದು ಘೋಷಿಸುತ್ತೀರೋ ಆ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಈ ಆ್ಯಪ್‌ಗಳು ಫೇಸ್‌ಬುಕ್ ಜೊತೆಗೆ ಪರೋಕ್ಷ ಸಂಬಂಧ ಹೊಂದಿರುತ್ತವೆ.

ಗೋಪ್ಯತೆ ಕಾಪಾಡಿಕೊಳ್ಳುವುದು ಹೇಗೆ?

ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ ಫೇಸ್‌ಬುಕ್ ಸೆಟ್ಟಿಂಗ್ಸ್‌ಗೆ ಹೋಗಿ (Facebook > settings > apps). ಅಲ್ಲಿ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಪರಿಶೀಲಿಸಿ. ನೀವು ಯಾವೆಲ್ಲಾ ಮಾಹಿತಿ ಹಂಚಿಕೊಳ್ಳಲು ಅನುಮತಿಸಿದ್ದೀರಿ ಎಂಬ ಉಲ್ಲೇಖ ಅಲ್ಲಿರುತ್ತದೆ. ಆ್ಯಪ್ ಚಿಹ್ನೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ‘ಮಾಹಿತಿ ಹಂಚಿಕೆ’ ಅನುಮತಿಯನ್ನು ಹಿಂಪಡೆಯಬಹುದು ಅಥವಾ ಬದಲಿಸಬಹುದು. ಆದರೆ ಹೀಗೆ ಮಾಡುವ ಮೂಲಕ ನೀವು ಈಗಾಗಲೇ ಹಂಚಿಕೊಂಡಿರುವ ಮಾಹಿತಿಯನ್ನು ಅಳಿಸಲು ಸಾಧ್ಯವಿಲ್ಲ. ಒಂದೊಮ್ಮೆ ನಿಮಗೆ ಅಂಥ ಅಗತ್ಯವಿದೆ ಎಂದಾದರೆ ಪ್ರತಿ ಆ್ಯಪ್‌ ಅನ್ನೂ ಪ್ರತ್ಯೇಕವಾಗಿ ಸಂಪರ್ಕಿಸಿ, ಅವರ ನಿಬಂಧನೆಗಳನ್ನು ಪೂರ್ಣಗೊಳಿಸಬೇಕು.

ಇತರ ಆ್ಯಪ್ ಅಥವಾ ವೆಬ್‌ಸೈಟ್‌ಗಳಿಗೆ ನನ್ನ ಫೇಸ್‌ಬುಕ್ ಮಾಹಿತಿ ಹೇಗೆ ಸಿಗುತ್ತದೆ?

ನೀವು ಸೌಂಡ್‌ಕ್ಲೌಡ್, ಕ್ಯಾಂಡಿಕ್ರಶ್ ಸಾಗಾ ಅಥವಾ ಕ್ರಿಕ್‌ಇನ್‌ಫೋದಂಥ ವೆಬ್‌ಸೈಟ್‌ಗೆ ಲಾಗಿನ್ ಆಗುವಾಗ ‘Log in with Facebook’ (ಲಾಗಿನ್ ವಿತ್ ಫೇಸ್‌ಬುಕ್) ಆಪ್ಷನ್ ಬಳಸಿಕೊಂಡಿರುವ ಸಾಧ್ಯತೆ ಇರುತ್ತದೆ. ನೀವು ಒಂದು ವೇಳೆ ಈ ಆಯ್ಕೆಯನ್ನು ಒಪ್ಪಿಕೊಂಡಿದ್ದರೆ ಆ ಆ್ಯಪ್ ಮತ್ತು ವೆಬ್‌ಸೈಟ್‌ಗಳು ನಿಮ್ಮ ಆಸಕ್ತಿಗಳನ್ನು ಅರಿಯಲು ನೀವು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಯನ್ನು ಬಳಸಿಕೊಳ್ಳುತ್ತವೆ. ಫೇಸ್‌ಬುಕ್‌ ಸೆಟ್ಟಿಂಗ್ಸ್‌ನಲ್ಲಿ ಸೂಕ್ತ ಮಾರ್ಪಾಡು ಮಾಡುವ ಮೂಲಕ ಗೋಪ್ಯತೆ ಕಾಪಾಡಿಕೊಳ್ಳಬಹುದು (Facebook > settings > apps and websites > logged in with facebook). ನೀವು ಹೀಗೆ ಮಾಡಿದಾಗ ನಿರ್ದಿಷ್ಟ ವೆಬ್‌ಸೈಟ್‌ಗೆ ಲಾಗಿನ್‌ ವಿವರವನ್ನು ಮತ್ತೊಮ್ಮೆ ನೀಡಿ, ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಪಡೆದುಕೊಳ್ಳಬೇಕಾಗಬಹುದು ಎಂಬುದು ನೆನಪಿರಲಿ.

ಆ್ಯಪ್ಸ್‌ ಅದರ್ಸ್ ಯೂಸ್‌ ವಿಭಾಗದಲ್ಲಿ ಸೂಕ್ತ ಮಾರ್ಪಾಡು ಮಾಡುವ ಮೂಲಕ ನೀವು ಯಾವೆಲ್ಲಾ ಮಾಹಿತಿ ಹಂಚಿಕೊಳ್ಳಬಾರದು ಎಂದು ನಿರ್ಬಂಧಿಸಬಹುದು (Facebook > settings > apps others use). ನಿಮ್ಮ ಹುಟ್ಟುಹಬ್ಬದ ಮಾಹಿತಿಯನ್ನು ಗೋಪ್ಯವಾಗಿ ಇರಿಸಿಕೊಳ್ಳುವ ಆಯ್ಕೆಯೂ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.