* ಶಿವಕುಮಾರ ಜೋಳದ್
ನಮ್ಮ ಹಿರಿಯರ ಬಾಲ್ಯದ ಬಗ್ಗೆ ಕೇಳಿದರೆ, ಅವರು ಹಳ್ಳಿಯಲ್ಲಿ ದಿನನಿತ್ಯ ಶಾಲೆಗೆ ಹತ್ತಾರು ಕಿಲೋಮೀಟರು ನಡೆದು ಹೋಗುತ್ತಿದ್ದುದನ್ನು ನೆನಪಿಸಿಕೊಳ್ಳುವುದು ಸಹಜ. ಆದರೆ ಈಗ ಕಾಲ ತುಂಬಾ ಬದಲಾಗಿದೆ. ಪ್ರತಿ ಹಳ್ಳಿಯಲ್ಲೂ ಒಂದು ಸರ್ಕಾರಿ ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ ಶಾಲೆ ಇರುವುದು ಸರ್ವೇ ಸಾಮಾನ್ಯ. ಪ್ರೌಢಶಾಲೆ ಕೂಡ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದು ಕಂಡುಬರುತ್ತದೆ. ಆದರೆ ಇಂದಿನ ಸಮಸ್ಯೆ ಮನೆ ಹತ್ತಿರ ಶಾಲೆ ಇರೋದಲ್ಲ, ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇರುವುದು!
ನಮ್ಮ ದೇಶದಲ್ಲಿ ಸುಮಾರು 15 ಲಕ್ಷ ಶಾಲೆಗಳಿವೆ, ಅದರಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಸುಮಾರು 11 ಲಕ್ಷ. ಇದರಲ್ಲಿ 4.20 ಲಕ್ಷ ಶಾಲೆಗಳಲ್ಲಿ (33%), 50ಕ್ಕೂ ಕಡಿಮೆ ಮಕ್ಕಳು ನೋಂದಾವಣೆಯಾಗಿದ್ದಾರೆ (ಕೇಂದ್ರ ಸರ್ಕಾರದ District Information System for Education (DISE)- 2015-16 ರ ಅಂಕಿ ಅಂಶಗಳ ಪ್ರಕಾರ). ಸುಮಾರು ಒಂದು ಲಕ್ಷ ಸರ್ಕಾರಿ ಶಾಲೆಗಳಲ್ಲಿ, 20ಕ್ಕೂ ಕಡಿಮೆ ಮಕ್ಕಳು ಇದ್ದಾರೆ. ಅಂದರೆ ಒಂದು ತರಗತಿಯಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಮಕ್ಕಳು ಇದ್ದಹಾಗೆ.
ಕರ್ನಾಟಕದಲ್ಲಿ 49,430 ಸರ್ಕಾರಿ ಶಾಲೆಗಳ ಪೈಕಿ ಇಂತಹ ಸಣ್ಣ ಮತ್ತು ಅತಿ ಸಣ್ಣ (ಮಕ್ಕಳ ನೋಂದಣಿ ಪ್ರಕಾರ) ಶಾಲೆಗಳ ಸಂಖ್ಯೆ 10,420 (2015–16ರಲ್ಲಿ). ಇದಷ್ಟೇ ಅಲ್ಲ, ಪ್ರತಿ ವರ್ಷಕ್ಕೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಈಗಾಗಲೇ ಸುಮಾರು 5000 ಶಾಲೆಗಳಲ್ಲಿ ಮಕ್ಕಳೇ ಇಲ್ಲ! ಇದರಿಂದ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ.
ನಮ್ಮಲ್ಲಿ ಇಷ್ಟೊಂದು ಸಣ್ಣ ಶಾಲೆಗಳು ಹೇಗೆ ಬಂದವು ಎಂಬುದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ
1. ಶಾಲಾವಕಾಶ ನೀತಿ (Policy of access to schools): ದೇಶದ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಒದಗಿಸಬೇಕು ಮತ್ತು ಎಲ್ಲರಿಗೂ ಶಾಲಾವಕಾಶ ಇರಬೇಕು ಎಂಬ ಪ್ರಯತ್ನ ಸ್ವತಂತ್ರಪೂರ್ವದಿಂದ ನಡೆದಿದೆ. 1911ರಲ್ಲಿ ಗೋಖಲೆ ಅವರು ಇಂಪೀರಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ (Imperial Legislative Assembly), 6– 10 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ನೀತಿ ಜಾರಿಗೊಳಿಸಬೇಕು ಎಂಬ ಪ್ರಸ್ತಾಪ ಮಂಡಿಸಿದರು. ಅಂದಿನ ಬ್ರಿಟಿಷ್ ಇಂಡಿಯಾ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಅವರ ಕನಸು ನನಸಾಗಲು ಸುಮಾರು ನೂರು ವರ್ಷಗಳೇ ಬೇಕಾಯ್ತು! 1947 ರಲ್ಲಿ, ಬರೀ 33% ಮಕ್ಕಳು ಪ್ರಾಥಮಿಕ ಶಾಲೆಯಲ್ಲಿದ್ದರು. ಸ್ವಾತಂತ್ರ್ಯದ ನಂತರ ಇಂದಿನವರೆಗೆ, ಸರ್ಕಾರದ ಬಹುತೇಕ ಶೈಕ್ಷಣಿಕ ನೀತಿಗಳು ಎಲ್ಲ ಮಕ್ಕಳಿಗೆ ಶಾಲೆಯಲ್ಲಿ ಓದುವ ಅವಕಾಶ ನೀಡುವ ದಿಶೆಯಲ್ಲಿವೆ.
ಕಳೆದ 70 ವರ್ಷಗಳಲ್ಲಿ ಅನೇಕ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಪ್ರಾರಂಭವಾದವು. ಇವೆಲ್ಲದರ ಫಲವಾಗಿ, ಈಗ ಶೇಕಡ 98ರಷ್ಟು ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ಕಿಲೋಮೀಟರ್ ಮಿತಿಯಲ್ಲಿ ಕನಿಷ್ಠ ಒಂದು ಶಾಲೆ ಇದೆ ಹಾಗೂ 3 ಕಿ.ಮೀ. ಮಿತಿಯಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ ಕಂಡುಬರುತ್ತದೆ. ಹೀಗೆ ಎಲ್ಲರಿಗೂ ಶಾಲಾವಕಾಶ ದೊರೆತಿರುವುದು ಸಂತಸದ ಸುದ್ದಿಯೇ ಆದರೂ ಮಕ್ಕಳ ಸಂಖ್ಯೆಗೆ ತಕ್ಕಂತೆ ಶಾಲೆ ನಿರ್ಮಿಸದಿದ್ದರಿಂದ ಶಾಲೆಗಳ ಅತಿವೃಷ್ಟಿಯಿಂದಾಗಿ ಮಕ್ಕಳೇ ಇಲ್ಲದ ಪರಿಸ್ಥಿತಿ ಆಗಿದೆ! ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಿದ ನೀತಿಗಳು ಈಗ ಬದಲಾಯಿಸುವ ಅಗತ್ಯ ಇದೆ.
2. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು (Demographic decline of population): ಭಾರತದಲ್ಲಿ ಈಗ ಮಕ್ಕಳ ಜನ್ಮ ದರ (Fertility Rate) ಕಡಿಮೆ ಆಗುತ್ತಿದೆ. ಈಗಾಗಲೇ ಸಂಪೂರ್ಣ ಜನ್ಮ ದರ (Total Fertility Rate– TFR, ಜನಸಂಖ್ಯಾ ಸ್ಥಿರತೆಗೆ ಬೇಕಾದ 2.1ಕ್ಕಿಂತ ಕಡಿಮೆ ಆಗಿದೆ. ಇದರಿಂದ ನಮ್ಮ ದೇಶದ 6-14 ವಯಸ್ಸಿನ ಮಕ್ಕಳ ಸಂಖ್ಯೆ 20.7 ಕೋಟಿ (2011), 2031ರಲ್ಲಿ 17.5 ಕೋಟಿಗೆ ಇಳಿಯಲಿದೆ. ಕರ್ನಾಟಕದ TFR ಎಂದರೆ ಮಕ್ಕಳ ಜನ್ಮ ದರ 1.8 ಇದೆ (ರಾಷ್ಟ್ರೀಯ ಆರೋಗ್ಯ ಸಮೀಕ್ಷೆ- 4, 2015-16 ಪ್ರಕಾರ). ಇದರಿಂದ ಕರ್ನಾಟಕದ ಮಕ್ಕಳ ಸಂಖ್ಯೆ 2011ರ 88 ಲಕ್ಷದಿಂದ, 2031ರಲ್ಲಿ 76 ಲಕ್ಷಕ್ಕೆ ಇಳಿಯಲಿದೆ. ಹೀಗಾಗಿ ಮುಂದೆ ನಮ್ಮ ಶಾಲೆಗಳಲ್ಲಿ ಹೆಚ್ಚು ಮಕ್ಕಳಿರುವುದಿಲ್ಲ.
3. ಖಾಸಗಿ ಶಾಲೆಗಳ ವಿಸ್ತರಣೆ: ಕಳೆದ 10–15 ವರ್ಷಗಳಿಂದ ನಮ್ಮ ದೇಶದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವಿಪರೀತ ಏರಿದೆ. ಇದರಲ್ಲೂ ಅನೇಕ ಕಡಿಮೆ ವೆಚ್ಚದ ಶಾಲೆಗಳು ಕೂಡ ನಿಮಾರ್ಣವಾಗಿವೆ. ಹೀಗಾಗಿ ಈಗ ಖಾಸಗಿ ಶಾಲೆಗಳು ಸಮಾಜದ ಎಲ್ಲ ವರ್ಗಗಳಿಗೂ ಎಟುಕುವಂತಿವೆ. ಈಗ ಅತೀ ಬಡ ಕುಟುಂಬದವರು ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಬಹುತೇಕ ಜನರಲ್ಲಿ ಖಾಸಗಿ ಶಾಲೆಗಳ ಗುಣಮಟ್ಟ ಹೆಚ್ಚು ಎಂಬ ನಂಬಿಕೆ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ 2011ರಿಂದ 2015ರ ಒಳಗೆ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸುಮಾರು 1.7 ಕೋಟಿಯಷ್ಟು ಹೆಚ್ಚಾಯಿತು. ಇದೇ ಸಮಯದಲ್ಲಿ ಸರ್ಕಾರಿ ಶಾಲೆಗಳು 1.3 ಕೋಟಿ ಮಕ್ಕಳನ್ನು ಕಳೆದುಕೊಂಡವು! ಆದರೆ ಶೈಕ್ಷಣಿಕ ತಜ್ಞರ ಪ್ರಕಾರ ಅನೇಕ ಖಾಸಗಿ ಶಾಲೆಗಳ ಗುಣಮಟ್ಟ, ಮಕ್ಕಳ ಕಲಿಕೆ, ಸರ್ಕಾರಿ ಶಾಲೆಗಳಿಗಿಂತ ಹೆಚ್ಚೇನೂ ಇಲ್ಲ. ಖಾಸಗೀಕರಣ ಹೆಚ್ಚಾದಂತೆ ಸರ್ಕಾರಿ ಶಾಲೆಗಳು ಖಾಲಿ ಆಗೋದು ಖಂಡಿತ.
ಕರ್ನಾಟಕದಲ್ಲಿ ಇಂತಹ ಸಣ್ಣ ಹಾಗೂ ಕಿರು ಸರ್ಕಾರಿ ಶಾಲೆಗಳ ಅಂಕಿ ಅಂಶ ಏನು, ಆ ಶಾಲೆಗಳಲ್ಲಿ ಕುಂದು ಕೊರತೆಗಳೇನು, ಮಕ್ಕಳ ಕಲಿಕೆ ಹೇಗಿದೆ ಮತ್ತು ಇಂತಹ ಶಾಲೆಗಳ ಭವಿಷ್ಯದ ಬಗ್ಗೆ ನಾವು ಅಕ್ಷರ ಪ್ರತಿಷ್ಠಾನ ಸಂಸ್ಥೆಯ ಜೊತೆ ಅಧ್ಯಯನ ನಡೆಸಿದ್ದೇವೆ.
ಈ ಅಧ್ಯಯನದ ಸಂಕ್ಷಿಪ್ತ ವಿವರಣೆ ಕೆಳಗಿದೆ:
ಕರ್ನಾಟಕದಲ್ಲಿ ಶೇ 54ರಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 25ಕ್ಕೂ ಕಡಿಮೆ. ಇದರಲ್ಲಿ ಬಹುತೇಕ ಶಾಲೆಗಳಲ್ಲಿ ಬಹುಮುಖಿ (multi-grade classrooms) ತರಗತಿಗಳು ನಡೆಯುತ್ತಿವೆ. ಶೇಕಡ 50ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಇಬ್ಬರು ಅಥವಾ ಒಬ್ಬರು ಶಿಕ್ಷಕರು ನೇಮಕವಾಗಿರುತ್ತಾರೆ. ಹಿರಿಯ ಪ್ರಾಥಮಿಕ ಶಾಲೆಗಳ ಸ್ಥಿತಿ ಹೆಚ್ಚು ಕಮ್ಮಿ ಹೀಗೇ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸುಮಾರು ವರ್ಷದಿಂದ ನಲಿ-ಕಲಿ ಶಾಲೆಗಳು (1–3 ತರಗತಿ ಸೇರಿ ಕಲಿಕೆ ) ಜಾರಿಯಲ್ಲಿವೆ. ಈ ಸಣ್ಣ ಶಾಲೆಗಳ ವಿತರಣೆ (distribution), ರಾಜ್ಯದಲ್ಲಿ ವಿವಿಧ ರೀತಿಯಲ್ಲಿದೆ. ದಕ್ಷಿಣ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚು. ಮೈಸೂರು ಆಡಳಿತ ಪ್ರಾಂತ್ಯದಲ್ಲಿ 29% ಹಿರಿಯ ಪ್ರಾಥಮಿಕ ಶಾಲೆಗಳು ಸಣ್ಣ ಶಾಲೆಗಳು, ಆದರೆ ಕಲಬುರ್ಗಿ ಪ್ರಾಂತ್ಯದಲ್ಲಿ ಇದರ ಸಂಖ್ಯೆ ಬರೀ 4.6%. ಕಲಬುರ್ಗಿ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳು- ಇಲ್ಲಿ ಖಾಸಗಿ ಶಾಲೆಗಳ ಹಾವಳಿ ಕಡಿಮೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಮಕ್ಕಳಿದ್ದಾರೆ.
ಅಂಕಿ ಅಂಶಗಳ ಜೊತೆ, ನಿಜ ಜೀವನದಲ್ಲಿ ಇಂತಹ ಸಣ್ಣ ಮತ್ತು ಕಿರಿಯ ಸರ್ಕಾರಿ ಶಾಲೆಗಳು ಹೇಗೆ ನಡೆಯುತ್ತಿವೆ ಎಂದು ತಿಳಿಯಲು ನಾವು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಮತ್ತು ಚಾಮರಾಜ ನಗರದ ಅನೇಕ ಶಾಲೆಗಳಿಗೆ ಭೇಟಿ ನೀಡಿದೆವು. ಇದರಿಂದ ಕೆಲವೊಂದು ಅಚ್ಚರಿಯ ಸಂಗತಿಗಳು ಹೊರಬಂದವು. ಶಾಲೆಗಳಲ್ಲಿ DISEನಲ್ಲಿ ಕೊಡುವ ಅಂಕಿಗಳಿಗಿಂತ ಕಡಿಮೆ ಮಕ್ಕಳು ಇರುತ್ತಾರೆ. ದೈನಂದಿನ ಮಕ್ಕಳ ಹಾಜರಾತಿ ಇನ್ನೂ ಕಡಿಮೆ. ಇಂತಹ ಅನೇಕ ಶಾಲೆಗಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕ, ಶಿಕ್ಷಕಿಯರು ಇದ್ದರೆ ಹೆಚ್ಚು, ಅದರಲ್ಲೂ ಒಬ್ಬ ಶಿಕ್ಷಕರು ರಜೆ ಹಾಕಿದರೆ (ಅಧಿಕೃತ, ಅನಧಿಕೃತ ರಜ, ಪಠ್ಯೇತರ ವಿಷಯಕ್ಕೆ ಗೈರುಹಾಜರಿ), ಬೇರೆ ತರಗತಿಗಳನ್ನೂ ಇರುವ ಶಿಕ್ಷಕರು ನಿಭಾಯಿಸಬೇಕು. ಇದರಿಂದ ಒಮ್ಮೊಮ್ಮೆ ಒಬ್ಬ ಶಿಕ್ಷಕರು 4–5 ತರಗತಿಗಳನ್ನೂ, 20–30 ಪಠ್ಯವಿಷಯಗಳನ್ನು ನಿಭಾಯಿಸಬೇಕಾಗುತ್ತದೆ. ಇಂತಹ ಶಾಲೆಗಳಲ್ಲಿ ಮಕ್ಕಳು ಹೇಗೆ ಕಲಿಯುತ್ತಾರೆ ನೀವೇ ಯೋಚಿಸಿ? ಇಂತಹ ಸ್ಥಿತಿ ನೋಡಿ ಬಡ ಕುಟುಂಬಗಳವರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಕ್ಕೆ ಹಿಂಜರಿಯುತ್ತಾರೆ. ಹೀಗಾಗಿ ಎಷ್ಟೋ ಶಾಲೆಗಳಲ್ಲಿ ಎಷ್ಟು ಕಡಿಮೆ ಮಕ್ಕಳ ದಾಖಲಾತಿ ಇರುತ್ತೆ ಅಂದ್ರೆ, ಅವುಗಳನ್ನು ಮುಚ್ಚುವ ಸ್ಥಿತಿಯಲ್ಲಿವೆ.
ಇಂತಹ ಸಣ್ಣ ಹಾಗೂ ಕಿರಿ ಶಾಲೆಗಳ ಭವಿಷ್ಯ ಏನು? ಮಕ್ಕಳೇ ಇಲ್ಲದೆ ಶಾಲೆಗಳಿದ್ದು ಏನು ಉಪಯೋಗ? ನಮ್ಮಲ್ಲಿ ಇಷ್ಟೊಂದು ಶಾಲೆಗಳ ಅಗತ್ಯ ಇದೆಯೇ? ಗುಣಮಟ್ಟ ನೋಡಿಕೊಳ್ಳಲಾಗದಂತಹ ಶಾಲೆಗಳನ್ನೂ ಹೆಚ್ಚಿಸಿ ಏನು ಉಪಯೋಗ? ಹತ್ತು ನಿಷ್ಕ್ರಿಯ ಶಾಲೆಗಳನ್ನು ನಡೆಸುವ ಬದಲು ಒಂದು ಒಳ್ಳೆಯ ಶಾಲೆ ಇರುವುದು ಉತ್ತಮವಲ್ಲವೇ?
ಹಲವು ನೆರೆಹೊರೆಯ ಶಾಲೆಗಳನ್ನು ಒಟ್ಟುಗೂಡಿಸಿ, ಒಂದು ಒಳ್ಳೆ ಮಾದರಿ ಸರ್ಕಾರಿ ಶಾಲೆಯನ್ನು ಹೇಗೆ ಮಾಡಬಹುದು ಎಂದು ನಾವು ಅಧ್ಯಯನ ಮಾಡಿದ್ದೇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ಕಪಕ್ಕದ 5-10 ಶಾಲೆಗಳನ್ನು ಒಂದುಗೂಡಿಸಿದರೆ, ಪ್ರತಿದರ್ಜೆಯಲ್ಲೂ ಹೆಚ್ಚು ಮಕ್ಕಳು ಕಂಡು ಬರುತ್ತಾರೆ. ಎಲ್ಲ ಶಿಕ್ಷಕರನ್ನೂ ಒಟ್ಟುಗೂಡಿಸುವುದರಿಂದ, ಪ್ರತೀ ತರಗತಿಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಶಿಕ್ಷಕರನ್ನು ಹಾಗೂ ವಿಷಯ ಸಂಬಂಧಿತ ಶಿಕ್ಷಕರನ್ನು ನೇಮಿಸುವ ಸಾಧ್ಯತೆ ಇದೆ.
ಮಧ್ಯಾಹ್ನ ಭೋಜನ ನಡೆಸುವ ಕಾರ್ಯ ಹಾಗೂ ಗುಣಮಟ್ಟ ಮೇಲ್ವಿಚಾರಣೆ ಸುಲಭವಾಗುತ್ತದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಂದೇ ಜಾಗದಲ್ಲಿ ನಡೆಸುವ ಸಾಧ್ಯತೆ ಹೆಚ್ಚಿ, ಮಕ್ಕಳು 1-10ರ ತನಕ ಶಾಲೆ ಮುಗಿಸಬಹುದು. ಇವೆಲ್ಲದರಿಂದ ಶಾಲೆ ನಡೆಸುವ ವೆಚ್ಚ ಕಡಿಮೆಯಾಗಿ ಸರ್ಕಾರಕ್ಕೂ ಬಹಳ ಉಳಿತಾಯ ಆಗುತ್ತದೆ ಹಾಗೂ ದಕ್ಷ ಶಾಲಾ ಆಡಳಿತಕ್ಕೆ ಅವಕಾಶ ಕೊಡುತ್ತದೆ. ಇಂತಹ ಶಾಲಾ ಏಕೀಕರಣ ಗ್ರಾಮ ಪಂಚಾಯಿತಿಯಲ್ಲೂ ಮಾಡಬಹುದು. ಪಟ್ಟಣ ಪ್ರದೇಶದಲ್ಲಿ ಶಾಲೆಗಳು ಇನ್ನೂ ಸಮೀಪ ಇರುತ್ತವೆ. ಇದರಿಂದ ಶಾಲಾ ಏಕೀಕರಣ ಇನ್ನೂ ಸುಲಭ. ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಒಂದು ಗುಂಪು, ಕಾರ್ಪೊರೇಷನ್ (ಬಿಬಿಎಂಪಿ) ಶಾಲೆಗಳ ಇನ್ನೊಂದು ಗುಂಪಾಗಿ ಮಾಡಿ ಕೆಲವು ಮಾದರಿ ಏಕೀಕೃತ ಶಾಲೆಗಳನ್ನು ಮಾಡಬಹುದು.
ಈ ರೀತಿಯ ಶಾಲಾ ಏಕೀಕರಣವನ್ನು (school consolidation) ಕೆಲವು ರಾಜ್ಯಗಳು (ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾ), ಈಗಾಗಲೇ ಪ್ರಾರಂಭಿಸಿವೆ. ರಾಜಸ್ಥಾನದಲ್ಲಿ ಈಗಾಗಲೇ 17,000 ಸರ್ಕಾರಿ ಶಾಲೆಗಳ ಕೇಂದ್ರೀಕರಣ ಮಾಡಿ, ಅನೇಕ ‘ಆದರ್ಶ ವಿದ್ಯಾಲಯ’ಗಳನ್ನೂ (ಮಾಡೆಲ್ ಸ್ಕೂಲ್) ತೆರೆದಿದ್ದಾರೆ. ನಮ್ಮ ರಾಜ್ಯದಲ್ಲೂ ಹೀಗೆ ಮಾದರಿ ಸರ್ಕಾರಿ ಶಾಲೆಗಳನ್ನು ಮಾಡಿ, ನಮ್ಮ ಮಕ್ಕಳ ಭವಿಷ್ಯ ಉಜ್ವಲ ಮಾಡೋಣ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲಿ.
ಲೇಖಕ: ಗಾಂಧಿನಗರದ ಐಐಟಿಯಲ್ಲಿ ಸಹಾಯಕ ಪ್ರಾಧ್ಯಾಪಕ
(ಈ ಲೇಖನಕ್ಕೆ ವೈಜಯಂತಿ ಕೆ. ಮತ್ತು ವಿಕಾಸ್ ಅರ್ಗೋಡ್ ಅವರ ಸಲಹೆಗಳಿಗೆ ನಾನು ಆಭಾರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.