ADVERTISEMENT

ಪೊಲೀಸ್ ವ್ಯವಸ್ಥೆಯಲ್ಲಿ ಪರಿವರ್ತನೆಯ ಪರ್ವ?

ಪೊಲೀಸ್‌ ಪಡೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುವುದು ಎಂದು?

ಎಂ.ಸಿ ಮಂಜುನಾಥ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಪೊಲೀಸ್ ವ್ಯವಸ್ಥೆಯಲ್ಲಿ ಪರಿವರ್ತನೆಯ ಪರ್ವ?
ಪೊಲೀಸ್ ವ್ಯವಸ್ಥೆಯಲ್ಲಿ ಪರಿವರ್ತನೆಯ ಪರ್ವ?   

ರಾಜ್ಯದಲ್ಲಿ ಪ್ರತಿವರ್ಷ ದಾಖಲಾಗುತ್ತಿರುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಶೇ 42ರಷ್ಟು ಮಹಿಳೆಯರಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ಇಂಥ ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಮಾರ್ಗ ಯಾವುದು, ಮಹಿಳಾ ಠಾಣೆಗಳನ್ನು ಹೆಚ್ಚಿಸಿದರೆ ಸುಧಾರಣೆ ಆಗಬಹುದೇ, ಪೊಲೀಸ್ ಪಡೆಯಲ್ಲಿ ಮಹಿಳೆಯರೇ ಹೆಚ್ಚಾದರೆ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗಬಹುದೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಬಹಳ ಕಾಲದಿಂದಲೂ ಚರ್ಚೆಗಳು ನಡೆಯುತ್ತಿವೆ. ಆದರೆ, ನಿರೀಕ್ಷೆಯಷ್ಟು ಬದಲಾವಣೆ ಆಗಿಲ್ಲ.

‘ಪೊಲೀಸ್’ ಅಂದರೆ ಪುರುಷರ ಕೆಲಸ ಎಂಬ ಭಾವನೆ ಈಗಲೂ ಇದೆ. ಆದರೆ ನಮ್ಮ ರಾಜ್ಯದಲ್ಲಿ ಈಗ ಇಲಾಖೆಯ ಸಾರಥಿಯಾಗಿ (ಡಿಜಿ–ಐಜಿಪಿ) ಮಹಿಳೆಯೊಬ್ಬರು ಅಧಿಕಾರಕ್ಕೆ ಏರಿರುವುದು ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯ ಪರ್ವ ಎಂದೇ ಕರೆಯಬಹುದು.

ನೀಲಮಣಿ ಎನ್‌. ರಾಜು

ADVERTISEMENT

ರಾಜ್ಯದ ಮೊದಲ ಮಹಿಳಾ ಡಿಜಿ-ಐಜಿಪಿ ಆಗಿ ಅ.31ರಂದು ಅಧಿಕಾರ ವಹಿಸಿಕೊಂಡ ನೀಲಮಣಿ ಎನ್‌. ರಾಜು ಅವರು ಕೂಡ ಲಿಂಗ ತಾರತಮ್ಯದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು. 'ನನ್ನನ್ನು ನಾನು ಮಹಿಳಾ ಅಧಿಕಾರಿ ಎಂದು ಕರೆದುಕೊಳ್ಳುವುದಿಲ್ಲ. ನಾನು ಒಬ್ಬ ಸಮರ್ಥ ಅಧಿಕಾರಿ ಅಷ್ಟೆ. ಆಡಳಿತ ನಿಭಾಯಿಸುವ ವಿಚಾರದಲ್ಲಿ ಲಿಂಗಭೇದ ಮಾಡುವುದು ಸರಿಯಲ್ಲ' ಎಂದಿದ್ದರು. ಆದರೆ, ವಸ್ತುಸ್ಥಿತಿ ಹೀಗಿಲ್ಲ. ಇನ್‌ಸ್ಪೆಕ್ಟರ್‌ಗಿಂತ ಕೆಳಗಿನ ಹುದ್ದೆಗಳಲ್ಲಿರುವ ಮಹಿಳಾ ಪೊಲೀಸರಲ್ಲಿ ಹೆಚ್ಚಿನವರಿಗೆ ಸಾಮರ್ಥ್ಯ, ದಕ್ಷತೆ ತೋರಿಸುವ ಅವಕಾಶ ಸಿಗುವುದಿಲ್ಲ.

* ಪೊಲೀಸ್ ಇಲಾಖೆ ಪ್ರವೇಶದ ಹಂತದಲ್ಲಿ ಮಹಿಳೆಗೆ ಇರುವ ಅಡ್ಡಿಗಳೇನು?
ದೇಶದಲ್ಲಿ ‘ಪೊಲೀಸ್’ ವ್ಯವಸ್ಥೆ ಆಂಗ್ಲರ ಆಡಳಿತದಿಂದ ಬಂದ ಬಳುವಳಿ. ಆಗಿನಿಂದಲೂ ಇಲ್ಲಿ ಮಹಿಳೆಗೆ ಸಮಾನ ಅವಕಾಶ ಸಿಕ್ಕಿಲ್ಲ. ‘ಪೊಲೀಸಿಂಗ್’ ಎಂದರೆ ಕಮಾಂಡಿಂಗ್ ಹುದ್ದೆ ಎಂಬ ಭಾವನೆ ಮಹಿಳೆಯರಲ್ಲಿ ಆಗಿನಿಂದಲೂ ಇತ್ತು. ಹೀಗಾಗಿ, ತಾವೇ ಅದರಿಂದ ಹಿಂದೆ ಸರಿದಿದ್ದರು.

1933ರಲ್ಲಿ ಕೇರಳದಲ್ಲಿ  ತಿರುವಾಂಕೂರು ಮಹಾರಾಜರ ಆಡಳಿತವಿದ್ದಾಗ ಮೊದಲ ಬಾರಿಗೆ ವಿಶೇಷ ಕಾನ್‌ಸ್ಟೆಬಲ್‌ಗಳಾಗಿ ಮಹಿಳೆಯರನ್ನು ನೇಮಕ ಮಾಡಲಾಯಿತು. ಆದರೆ, ನಂತರದ ವರ್ಷಗಳಲ್ಲಿ ಈ ವಿಚಾರದಲ್ಲಿ ಆದ ಬದಲಾವಣೆ ಮಂದಗತಿಯದ್ದು. ಸ್ವಾತಂತ್ರ್ಯಾನಂತರ ಮಹಿಳೆಯರು ಪೊಲೀಸ್ ವ್ಯವಸ್ಥೆಗೆ ಧುಮುಕಿದರಾದರೂ ಭದ್ರವಾಗಿ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ.

* ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ಎಷ್ಟು?
ದೇಶದ ಒಟ್ಟು ಪೊಲೀಸರಲ್ಲಿ ಶೇ 7.1ರಷ್ಟು ಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ. ಈ ಪ್ರಮಾಣವನ್ನು ಶೇ 33ಕ್ಕೆ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಪ್ರತಿವರ್ಷ ಘೋಷಣೆ ಮಾಡುತ್ತಲೇ ಬಂದಿದೆ. ರಾಜ್ಯದಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. 70,934 ಪೊಲೀಸ್ ಬಲದಲ್ಲಿ ಮಹಿಳೆಯರು ಇರುವುದು ಕೇವಲ 4,354 (ಶೇ 6.14).

ಪೊಲೀಸ್ ಇಲಾಖೆಗಳ ವೆಬ್‌ಸೈಟ್ ಅಂಕಿ ಅಂಶಗಳ ಪ್ರಕಾರ ತಮಿಳುನಾಡಿನಲ್ಲಿ 11,590 ಮಹಿಳಾ ಸಿಬ್ಬಂದಿ ಇದ್ದರೆ, ದೆಹಲಿಯಂತಹ ಪುಟ್ಟ ರಾಜ್ಯದಲ್ಲಿ 5,685 ಹಾಗೂ ಮಹಾರಾಷ್ಟ್ರದಲ್ಲಿ 10,809 ಮಹಿಳಾ ಪೊಲೀಸರಿದ್ದಾರೆ. ಹೀಗಾಗಿ, ರಾಜ್ಯದಲ್ಲೂ ಮಹಿಳಾ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಉತ್ತರ ಭಾಗದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಿಳಾ ಪೊಲೀಸ್ ಬಲ ಹೆಚ್ಚಿದೆ. ಬೆಂಗಳೂರಿನಲ್ಲಿ 606 ಮಹಿಳಾ ಪೊಲೀಸರಿದ್ದರೆ, ಅವರಲ್ಲಿ ಕಾನ್‌ಸ್ಟೆಬಲ್‌ಗಳೇ 502 ಮಂದಿ ಇದ್ದಾರೆ.‌

* ಇರುವ ಮಹಿಳಾ ಸಿಬ್ಬಂದಿ ಏನು ಮಾಡುತ್ತಿದ್ದಾರೆ?
ತನಿಖೆ ನಡೆಸುವ ಕೆಲಸವೇನಿದ್ದರೂ ಪುರುಷ ಸಿಬ್ಬಂದಿಯದ್ದು. ಅವರಿಗೆ ಸಹಾಯಕರಾಗಿ ಮಹಿಳಾ ಸಿಬ್ಬಂದಿ ಇರುತ್ತಾರೆ. ಠಾಣೆಯ ಅಪರಾಧ ತಂಡದಲ್ಲಿ (ಕ್ರೈಂ ಟೀಂ) ಮಹಿಳಾ ಸಿಬ್ಬಂದಿ ಇರುವುದಿಲ್ಲ. ಠಾಣೆಯಲ್ಲಿ ಕುಳಿತು ದೂರವಾಣಿ ಕರೆಗಳನ್ನು ಸ್ವೀಕರಿಸುವುದು, ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಪ್ರತಿಭಟನೆಗಳು ನಡೆಯುವಾಗ ಮಹಿಳೆಯರನ್ನು ನಿಯಂತ್ರಿಸುವುದಕ್ಕಷ್ಟೇ ಇವರ ಕೆಲಸ ಸೀಮಿತವಾಗಿದೆ.

‘ಎಲ್ಲ ಕ್ಷೇತ್ರಗಳಲ್ಲಿ ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ದುಡಿಯುತ್ತಿದ್ದಾರೆ. ಆದರೆ, ಈ ವ್ಯವಸ್ಥೆಯಲ್ಲಿ ಮಾತ್ರ ಇಂಥ ಪರಿಸ್ಥಿತಿ ಇದೆ. ಗಸ್ತು, ಬಂದೋಬಸ್ತ್, ರಾತ್ರಿ ಪಾಳಿ ಕೆಲಸ, ಬೆಂಗಾವಲು... ಹೀಗೆ, ಎಲ್ಲ ಕೆಲಸಗಳನ್ನೂ ಸಲೀಸಾಗಿ ಮಾಡಲು ನಾವೂ ಸಿದ್ಧರಿದ್ದೇವೆ. ಆದರೆ, ಅವಕಾಶ ಕೊಡುವುದಿಲ್ಲ. ಹೋಟೆಲ್‌ಗಳಲ್ಲಿ ಸ್ವಾಗತಕಾರಿಣಿಯರು ಇರುವ ಹಾಗೆ ನಾವು ಠಾಣೆಗಳಲ್ಲಿದ್ದೇವೆ. ಅವರಿಗೂ ನಮಗೂ ವ್ಯತ್ಯಾಸವಿಲ್ಲ’ ಎಂದು ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

* ಮಹಿಳಾ ಠಾಣೆಗಳ ಕಾರ್ಯವೈಖರಿ ಯಾವ ರೀತಿ ಇದೆ?
ಅತಿಹೆಚ್ಚು ಮಹಿಳಾ ಠಾಣೆಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲೂ ತಮಿಳುನಾಡು (200) ಮುಂದಿದೆ. ನಂತರದ ಸಾಲಿನಲ್ಲಿ ಉತ್ತರಪ್ರದೇಶ (71), ಬಿಹಾರ (40) ಹಾಗೂ ರಾಜಸ್ಥಾನ (40) ರಾಜ್ಯಗಳಿವೆ. 30 ಜಿಲ್ಲೆಗಳಿರುವ ಕರ್ನಾಟಕ ರಾಜ್ಯದಲ್ಲಿರುವ ಮಹಿಳಾ ಠಾಣೆಗಳ ಸಂಖ್ಯೆ ಕೇವಲ 20.

ಬೆಂಗಳೂರಿನ ಪೊಲೀಸ್‌ ಠಾಣೆಗಳಲ್ಲಿ ಪ್ರತಿವರ್ಷ ಸರಾಸರಿ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ಆದರೆ, ಇಲ್ಲಿರುವ ಎರಡು ಮಹಿಳಾ ಠಾಣೆಗಳಲ್ಲಿ (ಬಸವನಗುಡಿ, ಹಲಸೂರು ಗೇಟ್) ವರ್ಷಕ್ಕೆ 50 ಪ್ರಕರಣಗಳೂ ದಾಖಲಾಗುತ್ತಿಲ್ಲ. ಶೋಷಣೆಗೆ ಒಳಗಾದ ಮಹಿಳೆಯರು ಸಹ ದೂರು ಕೊಡಲು ಈ ಠಾಣೆಗಳತ್ತ ಸುಳಿಯುತ್ತಿಲ್ಲ. ಮಹಿಳಾ ಪೊಲೀಸರು ಯಾವ ರೀತಿ ತನಿಖೆ ಮಾಡಿಯಾರು ಎಂಬ ಅಸಡ್ಡೆಯ ಭಾವನೆಯೇ ಇದಕ್ಕೆ ಕಾರಣ ಎನ್ನುವುದು ಕೆಲಸ ಮಹಿಳಾ ಕಾನ್‌ಸ್ಟೆಬಲ್‌ಗಳ ಅಳಲು.

* ಸುಧಾರಣಾ ಸಮಿತಿ ವರದಿ ಏನಾಯಿತು?
2012ರಲ್ಲಿ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ವಿಚಾರದ ಬಗ್ಗೆ  ರಾಜ್ಯದಲ್ಲೂ ಗಂಭೀರ ಚರ್ಚೆ ನಡೆಯಿತು. ಪೊಲೀಸ್ ಮಹಿಳಾ ಸಿಬ್ಬಂದಿಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶವನ್ನೂ ನೀಡಿತು. ಮಹಿಳಾ ಪೊಲೀಸ್ ಸುಧಾರಣೆ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡುವಂತೆ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಮಿತಿಯನ್ನು ಸಹ ರಚಿಸಲಾಗಿತ್ತು.

ಮೂರು ತಿಂಗಳ ಅಧ್ಯಯನದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿದ ಸಮಿತಿ, ಪ್ರತ್ಯೇಕ ಮಹಿಳಾ ಠಾಣೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿತು. ‘ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಲ್ಲೇ ಮಹಿಳೆಯರಿಗೆ ಪ್ರಾಧಾನ್ಯ ಸಿಗಬೇಕು. ಅವರಿಗೂ ತನಿಖೆಯ ಹೊಣೆಗಾರಿಕೆ ನೀಡಬೇಕು’ ಎಂದು ಹೇಳಿತು. ಆದರೆ, ಆ ಶಿಫಾರಸುಗಳು ಇಂದಿಗೂ ಜಾರಿಗೆ ಬಂದಿಲ್ಲ.

* ಶೇ 10ರಷ್ಟು ಮೀಸಲಾತಿ ಈಡೇರುವುದು ಯಾವಾಗ?
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ವಿವಿಧ ಹುದ್ದೆಗಳಿಗೆ ಮಹಿಳಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಸಹ ಪ್ರಾರಂಭವಾಗಿದೆ. ತರಬೇತಿ ಹಾಗೂ ನೇಮಕಾತಿ ವಿಭಾಗದ ಅಧಿಕಾರಿಗಳು ಹೇಳುವ ಪ್ರಕಾರ, ಬರುವ ಜೂನ್‌ನೊಳಗೆ ಇಲಾಖೆಯಲ್ಲಿ 7 ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರು ಇರಲಿದ್ದಾರೆ.

ಅಂಕಿ ಅಂಶ

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.