ADVERTISEMENT

ಬಂದೂಕಿನ ಸದ್ದಲ್ಲಿ ಭಯದ ಗೆಲುವು

ಗುಂಡು ಹಾರಾಟ ಮಾಮೂಲು ಎನಿಸಿಬಿಟ್ಟಿರುವಂತಹ ಸಮಾಜ ಬೇಕೇ ಎಂದು ಅಮೆರಿಕನ್ನರು ತಮ್ಮನ್ನು ತಾವು ಕೇಳಿಕೊಳ್ಳಬೇಕಾಗಿದೆ

ಚಾರ್ಲ್ಸ್‌ ಎಂ.ಬ್ಲೋ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಅಮೆರಿಕದ ಒರೆಗಾನ್‌ನಲ್ಲಿ ಕಳೆದ ವಾರ ನಡೆದ ಬಂದೂಕು ನರಮೇಧದ ವಿಷಯ ತಿಳಿದು ಅಧ್ಯಕ್ಷ ಬರಾಕ್‌ ಒಬಾಮ ಕೆಂಡಾಮಂಡಲವಾಗಿದ್ದರು. ಜತೆಗೆ ಹತಾಶರೂ ಆಗಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ‘ಇದು ಒಂದು ಅರ್ಥದಲ್ಲಿ ಮಾಮೂಲು ಆಗಿಬಿಟ್ಟಿದೆ. ಇದರ ವರದಿ ಮಾಡುವುದೂ ಮಾಮೂಲಾಗಿದೆ. ಇಲ್ಲಿ ಈ ವೇದಿಕೆಯಲ್ಲಿ ನಾನು ಅದೇ ವಿಷಯದೊಂದಿಗೆ ಭಾಷಣ ಕೊನೆಗೊಳಿಸುವುದೂ ಮಾಮೂಲು ಎನಿಸಿಬಿಟ್ಟಿದೆ’ ಎಂದು ಹೇಳಿದರು.

‘ಈ ವಿದ್ಯಮಾನದಿಂದ ಕೆಲವರು ಕೆಲವೆಡೆ ಈ ವಿಷಯವನ್ನು ಒಬಾಮ ರಾಜಕೀಯಗೊಳಿಸುತ್ತಿದ್ದಾರೆ ಎಂದು ಹೇಳುವುದು ಸಹ ಸಾಮಾನ್ಯವಾದ ಸಂಗತಿಯಾಗಿದೆ. ಹೌದು, ಇದು ನಾವು ರಾಜಕೀಯಕರಣಗೊಳಿಸಬೇಕಾದ ವಿಷಯ. ಇದು ನಮ್ಮೆಲ್ಲರ ಜೀವನಕ್ಕೆ ಸಂಬಂಧಪಟ್ಟ ವಿಷಯ. ಇದು ನಮ್ಮ ದೇಹ ರಾಜಕೀಯಕ್ಕೆ ಸಂಬಂಧಿಸಿದ್ದು...’ ಎಂಬಂತಹ ಮಾತುಗಳನ್ನು ಹೇಳಿದ್ದಾರೆ ಒಬಾಮ, ಅವರ ಈ ಮಾತುಗಳ ಬೆನ್ನಲ್ಲೇ ಪ್ರಮುಖ ರಿಪಬ್ಲಿಕನ್‌ ಅಭ್ಯರ್ಥಿಗಳು ಬಂದೂಕು ಬಳಕೆಗೆ ಇನ್ನಷ್ಟು ನಿರ್ಬಂಧಗಳನ್ನು ಹೇರುವುದರ ವಿರುದ್ಧ ಮಾತನಾಡಿದ್ದಾರೆ.

ಸೌತ್‌ ಕರೊಲಿನಾದಲ್ಲಿ ಇತ್ತೀಚೆಗೆ ಮಾತನಾಡಿದ ಜೆಬ್‌ ಬುಷ್, ಬಂದೂಕು ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸಬೇಕೆಂಬ ಕರೆಯನ್ನು ವಿರೋಧಿಸಿದರು. ‘ನಮ್ಮ ದೇಶದಲ್ಲಿ ನಾವೀಗ ಕಷ್ಟಕಾಲವನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಸರ್ಕಾರದ ಬಳಿ ಉತ್ತರವಿದೆ ಎಂದು ನನಗೆ ಅನಿಸುವುದಿಲ್ಲ. ನಾವೆಲ್ಲ ಪರಸ್ಪರ ಪುನರ್‌ ಸಂಪರ್ಕ ಕಲ್ಪಿಸಿಕೊಳ್ಳಬೇಕಾಗಿದೆ. ಇಂತಹದ್ದೊಂದು ಪರಿಸ್ಥಿತಿ ಉದ್ಭವವಾಗಿರುವುದು ನಿಜಕ್ಕೂ ದುಃಖಕರ’.

‘ಬಂದೂಕಿಗೆ ನಿರ್ಬಂಧ ಹೇರುವುದು ಒಂದು ಸವಾಲು. ಇದರ ಅನುಭವ ಗವರ್ನರ್‌ ಆಗಿ ನನಗೆ ಗೊತ್ತಿದೆ. ಕೆಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಆಗೆಲ್ಲ ಕೆಲವು ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಪ್ರಚೋದನೆ ಉಂಟಾಗುತ್ತದೆ. ಆದರೆ ಅದು ಸರಿಯಾದ ಕ್ರಮವಲ್ಲ’ ಎಂದು ಅವರು ಪ್ರತಿಪಾದಿಸಿದರು. ಹಾಗಿದ್ದರೆ ಬುಷ್‌ ಅವರು ಹೇಳಿದಂತೆ ನಿಜವಾಗಿಯೂ ಅದು ಸಣ್ಣ ಘಟನೆಯೇ? ಅಮೆರಿಕದವರೇ ಅಮೆರಿಕನ್ನರನ್ನು ಬರ್ಬರವಾಗಿ ಹತ್ಯೆ ಮಾಡುವುದು ಸಣ್ಣ ವಿಚಾರವಲ್ಲ. ನಿಜಕ್ಕೂ ಇದೊಂದು ಉಪದ್ರವ.

ಒಬಾಮ ಮಾತ್ರ ಸರಿಯಾಗಿಯೇ ಹೇಳಿದ್ದಾರೆ. ಇಂತಹ ಉಪದ್ರವಗಳ ವಿಷಯದಲ್ಲೂ ನಾವು ಸಂವೇದನೆಯನ್ನೇ ಕಳೆದುಕೊಂಡು ಜಡವಾಗಿಹೋಗಿದ್ದೇವೆ. ರಾಜಕಾರಣಿಗಳು ಬಂದೂಕಿನಿಂದ ನಡೆಯುವ ಹಿಂಸಾಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಾಗಲೂ  ಮೂಕರಾಗಿದ್ದೇವೆ. ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಬಂದೂಕು ಕಾನೂನುಗಳಿಗೆ (ಫೆಡರಲ್ ಗನ್‌ ಲಾ) ಕೆಲವು ಸಣ್ಣ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಯತ್ನವನ್ನೂ ವಾಷಿಂಗ್ಟನ್‌ ಮಾಡುವಂತೆ ಕಾಣುತ್ತಿಲ್ಲ.

ಈ ವ್ಯವಸ್ಥೆ ಬದಲಾಗಲೇಬೇಕು. ಬಂದೂಕು ಸಂಸ್ಕೃತಿಯನ್ನು ಮೊಟಕುಗೊಳಿಸುವ ಪ್ರಕ್ರಿಯೆಗಳನ್ನು ನಾವು ಆರಂಭಿಸಲೇಬೇಕು. ಆದರೆ ನಾನು ಈ ಮಾತನ್ನು ಬಂದೂಕನ್ನು ಸಂಪೂರ್ಣವಾಗಿ ನಿವಾರಿಸಬೇಕೆಂಬ ವ್ಯಕ್ತಿಯ ನೆಲೆಯಲ್ಲಿ ನಿಂತು ಹೇಳುತ್ತಿಲ್ಲ. ನಾನು ಬಂದೂಕುಗಳ ನಡುವೆಯೇ ಬೆಳೆದವನು. ನನ್ನ ಬಳಿಯೂ ಒಂದು ಬಂದೂಕಿದೆ. ಅಮೆರಿಕದ ದಕ್ಷಿಣ ಭಾಗದ ಗ್ರಾಮೀಣ ಪ್ರದೇಶವೊಂದರಲ್ಲಿ ನಾನು ಬೆಳೆಯುತ್ತಿದ್ದಾಗ ಬಾಲಕರ ಕೈಯಲ್ಲೂ ರೈಫಲ್‌ಗಳಿರುತ್ತಿದ್ದವು. ಇದೇನೂ ಅಚ್ಚರಿದಾಯಕವಾದ ಸಂಗತಿಯಾಗಿರಲಿಲ್ಲ. ಪ್ರತಿ ಬಾಲಕನೂ ಮರದ ಅಂಗಡಿಯಲ್ಲಿ ಬಂದೂಕು ತಯಾರಿಗೆ ಆದೇಶ ನೀಡಿರುತ್ತಿದ್ದ.

ರೈಫಲ್‌ ಎಂಬುದು ಇಲ್ಲಿ ಶಸ್ತ್ರವಲ್ಲ, ಬದಲಿಗೆ ಅದೊಂದು ಸಾಧನವಾಗಿತ್ತು. ಜನ  ಬೇಟೆಯಾಡುವ ಮನೋಭಾವವನ್ನು ಬಿಟ್ಟಿರಲಿಲ್ಲ. ಆಹಾರಕ್ಕಾಗಿ ತಾವು ಸಾಕಿ ಬೆಳೆಸಿದ ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಹುಲ್ಲಿನಿಂದ ಹಾವನ್ನು ಓಡಿಸುವುದಕ್ಕಾಗಿ, ತೋಟದಿಂದ ಎರೆಹುಳುವನ್ನು ದೂರ ಸಾಗಿಸಲಿಕ್ಕಾಗಿ ಬಂದೂಕುಗಳನ್ನು ಬಳಸುತ್ತಿದ್ದರು (ಅಂತಹ ಕೆಲಸಗಳಿಗಾಗಿ ಸಾಕಷ್ಟು ಅನ್ಯ ಸಾಧನಗಳಿದ್ದರೂ ಸಹ).   ಇಂತಹ ಅಸ್ತ್ರಗಳು ಗ್ರಾಮೀಣ ಪ್ರದೇಶದಲ್ಲಿ ಹೊಸ ವರ್ಷದಂತಹ ವಿಶೇಷ ಸಂದರ್ಭಗಳಲ್ಲಿ ಬಡಜನರ ‘ಸುಡುಮದ್ದು’ಗಳಾಗಿರುತ್ತಿದ್ದವು.

ಬಂದೂಕುಗಳು ಅಕ್ರಮವಾಗಿ ಪ್ರವೇಶ ಮಾಡುವವರನ್ನು ಬೆದರಿಸಲು ಇದ್ದಂತಹ ಅಸ್ತ್ರವಾಗಿದ್ದವು. ವಾಸ್ತವವಾಗಿ ಅಲ್ಲಿ ಜೀವ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಬಹುದಾದಂತಹ ಶಕ್ತಿಗಳು ಇರಲಿಲ್ಲ. ಬಂದೂಕಿನ ಮಾಲೀಕತ್ವದ ವಿಚಾರ ಬಂದಾಗ ಆಗೆಲ್ಲ ಈಗಿನಂತೆ ಭಯವಾಗಲಿ, ಆತಂಕವಾಗಲಿ ಇರಲಿಲ್ಲ. ಕಾನೂನು ಜಾರಿ ಅಧಿಕಾರಿಗಳ ಸಂಖ್ಯೆಯೂ ಕಡಿಮೆಯಿತ್ತು. ಮಿಲಿಟರಿ ಮಾದರಿಯ ಶಸ್ತ್ರಾಸ್ತ್ರಗಳಾಗಲಿ, ಭಾರಿ ಮದ್ದುಗುಂಡು ಸಂಗ್ರಹವಾಗಲಿ ಇರಲಿಲ್ಲ.

ನನ್ನ ಹಿರಿಯಣ್ಣ ಬಂದೂಕು ಸಂಗ್ರಹಕಾರ. ಪ್ರತಿ ಬಂದೂಕು ಪ್ರದರ್ಶನದಲ್ಲೂ ಅವರೊಬ್ಬ ಕಾಯಂ ಪ್ರತಿನಿಧಿ. ಬಂದೂಕುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದೇ ಅವರ ಕಾಯಕ. ಆದರೆ ಆ ಸಂದರ್ಭದಲ್ಲೆಲ್ಲ, ಜನರಲ್ಲಿ ಒಂದು ರೀತಿಯ ಭಯ ಮತ್ತು ಆತಂಕದಿಂದ ಕೂಡಿದ ಶಸ್ತ್ರಾಸ್ತ್ರ ಖರೀದಿ ಹಾಗೂ ಮದ್ದುಗುಂಡುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಧಾವಂತ ಕಂಡುಬರುವುದು ಅವರ ಅನುಭವಕ್ಕೆ ಬಂದಿದೆ.

ಜನ ಇಂದು ನಿಜಕ್ಕೂ ಭೀತರಾಗಿದ್ದಾರೆ. ಅಸ್ತ್ರಗಳ ಮಾರಾಟದ ವಿಚಾರಕ್ಕೆ ಬಂದಾಗ ಕಾಲಕಾಲಕ್ಕೆ ಹುಟ್ಟಿಕೊಳ್ಳುವ ಸುದ್ದಿಗಳ ನೆಲೆಯಲ್ಲಿ ಜನರಲ್ಲಿ ಭಯ ಹುಟ್ಟಿಸಲು  ಬಂದೂಕು ಉದ್ಯಮ ಸಫಲವಾಗಿದೆ. ಕೆಲವು ಬಗೆಯ ಅಸ್ತ್ರಗಳು ನಿರ್ಬಂಧಗೊಳ್ಳಲಿವೆ ಅಥವಾ ಅವುಗಳನ್ನು ಹತ್ತಿಕ್ಕಲಾಗುತ್ತದೆ ಎಂದು ಬಿಂಬಿಸುವ ಕೆಲಸ ನಡೆದಿದೆ. ತಮಗೆ ವಿಶ್ವಾಸಾರ್ಹತೆ ಇಲ್ಲದವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಜನ ಭೀತರಾಗಿದ್ದಾರೆ. ಸರ್ಕಾರದ ವಿರುದ್ಧವೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದಂತಹ ಕಾಲ ಬರಬಹುದು ಎಂದು ಸಹ ಕೆಲವರು ಆತಂಕಗೊಂಡಿದ್ದಾರೆ.

ದುರದೃಷ್ಟದ ಸಂಗತಿಯೆಂದರೆ, ಇಂತಹ ಭಯವೇ ಗೆಲುವು ಸಾಧಿಸುತ್ತಿದೆ. ವಾಸ್ತವದಲ್ಲಿ ಅಪರಾಧ ಪ್ರಕರಣಗಳು ದೇಶದಲ್ಲಿ ಕಡಿಮೆಯಾಗಿದ್ದರೂ, ಈ ಬಗೆಯ  ಕೃತ್ಯಗಳು ಹೆಚ್ಚಿವೆ ಎಂದೇ ಬಹುತೇಕರು ಭಾವಿಸಿದ್ದಾರೆ. ಹತ್ಯಾಕಾಂಡಗಳು ಮತ್ತು ಬಂದೂಕಿನಿಂದ ಆಗುವ ಹಿಂಸಾಚಾರಗಳ ಬಗ್ಗೆ ನಡೆಯುವ ಚರ್ಚೆಯಿಂದಾಗಿ ಭಯವೇ ಗೆಲ್ಲುತ್ತಿದೆ. ಹೀಗಾಗಿ ಈ ಬೆಳವಣಿಗೆಯು ಬಂದೂಕು ಮಾರಾಟ ಕಡಿಮೆಯಾಗಲು ಅವಕಾಶವನ್ನೇ ನೀಡುತ್ತಿಲ್ಲ. ಬದಲಿಗೆ ಹೆಚ್ಚೆಚ್ಚು ಮಾರಾಟವಾಗಲು ಆಸ್ಪದವಾಗುತ್ತಿದೆ. ಸರ್ಕಾರಿ ವಿರೋಧಿ ಬಂಡುಕೋರರೂ ಈ ಭಯದ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ.

ಭಯ ಎಷ್ಟರಮಟ್ಟಿಗೆ ಗೆಲುವು ಸಾಧಿಸತೊಡಗಿದೆ ಎಂದರೆ, ಜನಸಂಖ್ಯೆಯಷ್ಟೇ ಪ್ರಮಾಣದ ಬಂದೂಕುಗಳು ದೇಶದಲ್ಲಿವೆ. ಬಂದೂಕು ಉದ್ಯಮ ಪ್ರತಿವರ್ಷ ಲಕ್ಷಾಂತರ ಬಂದೂಕುಗಳನ್ನು ಉತ್ಪಾದಿಸುತ್ತಿದೆ. ಸಾಂಸ್ಕೃತಿಕವಾಗಿ ಹೇಳುವುದಾದರೆ ನಾವು ಇಂದು ಗರಿಷ್ಠ ಮಿತಿಯನ್ನು ತಲುಪಿ ಬಿಟ್ಟಿದ್ದೇವೆ. ಬಂದೂಕುಗಳು ದೊಡ್ಡ ಪ್ರಮಾಣದಲ್ಲಿ ಇಂದು ಕೈಯಿಂದ ಕೈಗೆ ವರ್ಗಾವಣೆಯಾಗುತ್ತಾ ಹೋಗುತ್ತಿವೆ. ಇಂತಹ ಸ್ಥಿತಿಯಲ್ಲಿ ಹಲವು ಕೆಟ್ಟ ಉದ್ದೇಶದ ವ್ಯಕ್ತಿಗಳಿಗೂ ಬಂದೂಕು ಸಿಕ್ಕಿಬಿಟ್ಟಿರುತ್ತದೆ.

ಆದರೆ ನಾವಿಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ ದೊಡ್ಡದಿದೆ. ಕಾರಣವೇ ಇಲ್ಲದೆ ಭಯಪಡುವ ಮತ್ತು ಈ ಭಯವೇ ಮೇಲುಗೈ ಸಾಧಿಸುವುದನ್ನು ನಾವು ಇನ್ನೆಷ್ಟು ದಿನ ಸಹಿಸಿಕೊಂಡು ಇರಬೇಕು? ಬಂದೂಕು ಸಂಸ್ಕೃತಿಯ ರಚನಾತ್ಮಕ ಅಂಶಗಳು ಅದರ ನಕಾರಾತ್ಮಕ ಅಂಶಗಳಿಗಿಂತ ಹೆಚ್ಚು ತೂಕದ್ದಾಗಿರುವ ನಿಟ್ಟಿನಲ್ಲಿ ನಾವು ಯೋಚಿಸಲೇಬೇಕು. ದೇಶದಲ್ಲಿ ಪ್ರತಿ ವರ್ಷ ಬಂದೂಕಿನಿಂದ ನಡೆಯುವ ಹಿಂಸಾಚಾರಗಳಲ್ಲಿ 33 ಸಾವಿರ ಅಮೆರಿಕನ್ನರು ಸಾಯುವ ಮತ್ತು ಅದರ ದುಪ್ಪಟ್ಟು ಮಂದಿ ಗಾಯಗೊಳ್ಳುವಂತಹ,  ಸಾಮೂಹಿಕ ಗುಂಡು ಹಾರಾಟ ಮಾಮೂಲು ಎನಿಸಿಬಿಟ್ಟಿರುವಂತಹ ಸಮಾಜ ನಮಗೆ ಬೇಕೇ?

ಹೌದು, ಅದು ಬೇಕು ಎಂದಾದರೆ ಈಗಾಗಲೇ ಅದು ನಮ್ಮಲ್ಲಿ ಇದೆ. ಆದರೆ ಬಹುತೇಕರಿಗೆ ಇಂತಹ ಸ್ಥಿತಿ ಬೇಡವಾಗಿದೆ ಎಂದೇ ನಾನು ಭಾವಿಸಿದ್ದೇನೆ. ಹಾಗೇನಾದರೂ ಬಂದೂಕು ಸಂಸ್ಕೃತಿ ಬೇಡ ಎಂದು ಬಯಸುವುದೇ ಆದರೆ, ಕೆಟ್ಟ ಕೈಗಳಿಂದ ಬಂದೂಕುಗಳನ್ನು ದೂರ ಇರಿಸುವುದಷ್ಟೇ ಅಲ್ಲ, ಬಂದೂಕುಗಳ ಉತ್ಪಾದನೆ ಅಥವಾ ಮಾರಾಟವನ್ನು ತಗ್ಗಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಲೇಬೇಕಾಗುತ್ತದೆ. 

ನನ್ನ ಸಹೋದರನ ಬಂದೂಕುಗಳ ಸಂಗ್ರಹಾಗಾರವನ್ನು ನೋಡಿದಾಗ, ಈ ಬಂದೂಕುಗಳು ತಮ್ಮ ಮಾಲೀಕರಿಗಿಂತಲೂ ಹೆಚ್ಚು ಕಾಲ ಬದುಕುತ್ತವೆ ಎಂಬ  ಮುಖ್ಯವಾದ ಸಂಗತಿಯನ್ನು ನಾನು ಕಂಡುಕೊಂಡೆ. ಇವುಗಳ ವಿಚಾರದಲ್ಲಿ ಎಂತಹ ಕಾನೂನುಗಳನ್ನು ನಾವೀಗ ಅಂಗೀಕರಿಸುತ್ತೇವೆ ಎಂಬುದನ್ನೂ ಲೆಕ್ಕಿಸದೆ, ಈ ಲಕ್ಷಾಂತರ ಬಂದೂಕುಗಳು ಬಹುಶಃ ದಶಕಗಳ ಕಾಲ, ಕೆಲವಂತೂ ಶತಮಾನಗಳವರೆಗೂ ನಮ್ಮ ಸಮಾಜದ ಭಾಗವಾಗಿಯೇ ಉಳಿದುಕೊಂಡು ಬರುತ್ತವೆ. ಈ ಕಾರಣಕ್ಕಾಗಿ ನಾವು ಹೆಚ್ಚು ಭಯಪಡಬೇಕಾಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.