ಬೀಳು ಬಿಟ್ಟಿರುವ ಕೃಷಿ ಭೂಮಿಯನ್ನು ‘ಸಾಗುವಳಿ ಮಾಡಿ, ಇಲ್ಲದಿದ್ದರೆ ಗುತ್ತಿಗೆಗೆ ಕೊಡಿ’ ಎಂಬ ಸರ್ಕಾರಿ ಆದೇಶ ಕೆಲ ಸಮಯದಿಂದ ರೈತರನ್ನು ಕಂಗೆಡಿಸುತ್ತಿದೆ.
ನೀತಿ ಆಯೋಗ ಹೊರತಂದ ‘ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ– 2016’ ಬಗ್ಗೆ ರೈತರಿಗೆ ಅಷ್ಟಾಗಿ ಮಾಹಿತಿ ಇಲ್ಲದಿರುವುದು ಮತ್ತು ಈ ಬಗ್ಗೆ ಅಂತೆಕಂತೆಗಳು ಹರಿದಾಡುತ್ತಿರುವುದು ಇದಕ್ಕೆ ಕಾರಣ. ದೇಶದಲ್ಲಿ 2.6 ಕೋಟಿ ಹೆಕ್ಟೇರ್ ಸಾಗುವಳಿ ಭೂಮಿ ಬೀಳು ಬಿದ್ದಿದ್ದು, ಇದರಿಂದ ರೈತರಿಗೆ ಮಾತ್ರವಲ್ಲ, ದೇಶಕ್ಕೂ ಅಪಾರ ನಷ್ಟವಾಗುತ್ತಿದೆ. ಪ್ರತಿವರ್ಷ ರೈತರು ಕೃಷಿ ಭೂಮಿ ಬೀಳು ಬಿಡುವುದು ಹೆಚ್ಚುತ್ತಲೇ ಇದೆ. ಇಂತಹ ಬೀಳುಭೂಮಿಯನ್ನು ಗುತ್ತಿಗೆಗೆ ಕೊಡುವ ಮೂಲಕ ಸದ್ಬಳಕೆ ಮಾಡಿದರೆ ಈ ನಷ್ಟ ತಡೆಯಬಹುದು ಎಂಬ ಉದ್ದೇಶದ ಈ ಕಾಯ್ದೆ, ಭೂಮಾಲೀಕ ಮತ್ತು ಗುತ್ತಿಗೆದಾರ ಇಬ್ಬರಿಗೂ ಅನುಕೂಲವಾಗುವ ಅಂಶಗಳನ್ನು ಹೊಂದಿದೆ ಎಂದು ನೀತಿ ಆಯೋಗ ಹೇಳಿಕೊಂಡಿದೆ.
ಕರ್ನಾಟಕ ಕೃಷಿ ಬೆಲೆ ಆಯೋಗ ನಡೆಸಿದ ಅಧ್ಯಯನದ ಪ್ರಕಾರ, ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಅಥವಾ ಸಾಗುವಳಿ ಭೂಮಿಯ ಶೇ 16ರಷ್ಟು ಬೀಳು ಬಿದ್ದಿದೆ. ಜಮೀನು ಉತ್ಪಾದನಾಶೀಲತೆ ಕಳೆದುಕೊಂಡಿರುವುದು, ತೀವ್ರ ನೀರಿನ ಕೊರತೆ, ಕೆಲಸಗಾರರ ಅಭಾವ, ಕುಟುಂಬದ ಜಮೀನುಗಳು ತುಂಡಾಗುತ್ತಿರುವುದು, ಗುತ್ತಿಗೆ ಕೊಟ್ಟರೆ ಜಮೀನು ಕೈಬಿಟ್ಟುಹೋಗುತ್ತದೆ ಎಂಬ ಭಯ ಇವೆಲ್ಲಾ ಬೀಳು ಬಿಡಲು ಕಾರಣವೆನ್ನುತ್ತದೆ ಅಧ್ಯಯನ.
ಆದರೆ, ಕೃಷಿ ಭೂಮಿ ಬರಡಾಗಲು ಕಾರಣವಾಗಿರುವ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ಧೋರಣೆಗಳು; ಕೈಗಾರಿಕೆಗಳ ತ್ಯಾಜ್ಯ, ಹಾರುಬೂದಿ, ಭೂಜಲ ಶೋಷಣೆ ಇತ್ಯಾದಿಗಳನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಬೀಳುಬಿಟ್ಟ ಹಿಡುವಳಿಗಳಲ್ಲಿ ಜಲಾಶಯಗಳ ಅಚ್ಚುಕಟ್ಟಿನ ನೀರಾವರಿ ಜಮೀನುಗಳು, ಮಳೆಯನ್ನೇ ಆಶ್ರಯಿಸಿರುವ ಒಣಜಮೀನುಗಳೆರಡೂ ಸೇರಿವೆ. ರಾಜ್ಯದಲ್ಲಿ ಸಾಗುವಳಿ ಭೂಮಿ ಬೀಳು ಬಿಟ್ಟಿರುವವರಲ್ಲಿ ಶೇ 61ರಷ್ಟು ಮಂದಿ ಒಂದು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ, ಅತಿಸಣ್ಣ ರೈತರೇ. ಇವರಲ್ಲಿ ಶೇ 76ರಷ್ಟು ಮಂದಿ ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು. ಸಣ್ಣ ರೈತರ ಪ್ರಮಾಣ ಶೇ 78ರಷ್ಟಿದೆ. ಹೀಗೆ ವಿವಿಧ ರೀತಿಯ ಜಮೀನುಗಳನ್ನು, ವಿವಿಧ ರೀತಿಯ ರೈತರು, ವಿವಿಧ ಕಾರಣಗಳಿಗೆ ಬೀಳು ಬಿಡುತ್ತಿರುವ ಸನ್ನಿವೇಶದಲ್ಲಿ ಸರ್ಕಾರ ‘ಮಾದರಿ ಗುತ್ತಿಗೆ ಕಾಯ್ದೆ ತಂದಿದ್ದೇವೆ, ಬೀಳುಭೂಮಿ ಗುತ್ತಿಗೆಗೆ ಕೊಡಿ’ ಎನ್ನುವಷ್ಟು ಪರಿಸ್ಥಿತಿ ಸರಳವಾಗಿಲ್ಲ.
ರಾಜ್ಯದಲ್ಲಿ ಗೇಣಿ ಪದ್ಧತಿ ನಿಷೇಧವಾಗಿದ್ದಾಗ್ಯೂ, ಕೃಷಿ ಭೂಮಿ ಗುತ್ತಿಗೆ ಕೊಡುವುದು ಮಾತ್ರ ನಡೆದೇ ಇದೆ. ಗುತ್ತಿಗೆ, ವಾರ, ಕೋರು, ಭೋಗ್ಯ, ಆಧಾರ ಹೀಗೆ ಬೇರೆ ಬೇರೆ ರೀತಿಯಲ್ಲಿ ಯಾವ ಕಾನೂನಿನ ಹಂಗೂ ಇಲ್ಲದೆ, ಸರ್ಕಾರದ ಒತ್ತಾಸೆಯಾಗಲೀ, ಅಧಿಕಾರಿಗಳ ದಬ್ಬಾಳಿಕೆಯಾಗಲೀ ಇಲ್ಲದೆ ರೈತರು ನಿರಾಯಾಸವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾಮಾನ್ಯ ರೈತರು ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿರುವ ಈ ಪದ್ಧತಿಯನ್ನು ಹೊಸ ಕಾಯ್ದೆ ಹದಗೆಡಿಸದಿದ್ದರೆ ಅದೇ ದೊಡ್ಡ ಸಹಾಯ. ಅಷ್ಟಕ್ಕೂ ಗುತ್ತಿಗೆ ಕಾಯ್ದೆಯ ಅಗತ್ಯವಿರುವುದು ದೊಡ್ಡ ಜಮೀನುದಾರರು, ಧಾರ್ಮಿಕ ಸಂಸ್ಥೆಗಳು ಇಟ್ಟುಕೊಂಡಿರುವ ಅಗಾಧ ಪ್ರಮಾಣದ ಜಮೀನುಗಳಿಗೆ. ಇಂತಹ ಹೆಚ್ಚುವರಿ ಜಮೀನುಗಳನ್ನು ಭೂರಹಿತ ಕುಟುಂಬಗಳಿಗೆ ಮಹಿಳೆಯರ ಹೆಸರಿನಲ್ಲಿ ಗುತ್ತಿಗೆ ಕೊಡಲು ನಿರ್ದೇಶಿಸುವಂತಹ ಕಾಯ್ದೆ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ಷಿಪ್ರ ಕ್ರಮ ಕೈಗೊಳ್ಳಬೇಕಿದೆ.
ಹಾಗಾದರೆ ಸಣ್ಣ ರೈತರು ಬೀಳು ಬಿಟ್ಟಿರುವ ಜಮೀನುಗಳಿಗೇನು ಪರಿಹಾರ? ಹೇಳಬೇಕೆಂದರೆ, ಬರಡಾದ ತಮ್ಮ ಜಮೀನುಗಳನ್ನು ಉತ್ಪಾದನಾಶೀಲಗೊಳಿಸುವ ಮಾರ್ಗವೇನಾದರೂ ಇದ್ದರೆ, ರೈತರು ಅನಿವಾರ್ಯವಾಗಿ ಬೀಳು ಬಿಡುತ್ತಿರುವ ಜಮೀನುಗಳೇ ಅವರ ಜೀವನಾಧಾರ ಆಗುವುದರಲ್ಲಿ ಸಂದೇಹವೇ ಇಲ್ಲ. ಅದನ್ನು ಸಾಧಿಸಿ ತೋರಿಸಿದ ಸಹಸ್ರಾರು ರೈತರು ಎಲ್ಲೆಡೆ ಇದ್ದಾರೆ. ಅಂತಹದ್ದೊಂದನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇವರು ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳ ಮಳೆಯಾಶ್ರಿತ ಸಣ್ಣ ರೈತರು. ಕೆಲವರಿಗಂತೂ ಒಂದು ಎಕರೆಯಷ್ಟು ಸಣ್ಣ ಹಿಡುವಳಿ. ಮಳೆ ಬಿದ್ದಾಗ ಅಂಗಡಿಯಿಂದ ಬೀಜ, ರಸಗೊಬ್ಬರ ತಂದು ಹಾಕಿ, ಮಳೆ ಹೋದಾಗ ಬೆಳೆ ಸುಟ್ಟೇ ಹೋಗುವುದನ್ನು ಕಂಡು ಕಂಗಾಲಾದವರನ್ನು ಪಕ್ಕದ ಸಂಡೂರಿನ ಗಣಿಗಳು, ಗಂಗಾವತಿಯ ಕಬ್ಬಿನ ಗದ್ದೆಗಳು, ಮಲೆನಾಡಿನ ಪ್ಲಾಂಟೇಷನ್‍ಗಳು ಕೈಬೀಸಿ ಕರೆಯುತ್ತಿದ್ದವು. ಇತ್ತ ಅನಾಥವಾದ ಇವರ ಜಮೀನುಗಳಲ್ಲಿ ಬಳ್ಳಾರಿ ಜಾಲಿ ಸುಖವಾಗಿ ಬೆಳೆದು ಭೂಮಿಯ ಬತ್ತಲನ್ನು ಮುಚ್ಚುತ್ತಿತ್ತು. ಒಟ್ಟಿನಲ್ಲಿ ಕೂಲಿಯೇ ಆಧಾರ.
ಇಂತಹ ಇವರು ದಶಕದ ಹಿಂದೆ ಸಂಘಟಿತರಾಗತೊಡಗಿದರು. ಮಹಿಳೆಯರದ್ದೇ ಮುಂದಾಳತ್ವ. ಸಂಘಗಳಿಂದ ಸಾಲ ಪಡೆದು ಹೊಲ ಉಳುಮೆ ಮಾಡಿದರು. ರಸಗೊಬ್ಬರ ಹಾಕಿ ಬೆಳೆ ಸುಟ್ಟುಹೋದ ಅನುಭವವಿದ್ದರಿಂದ ಸಾವಯವ ಗೊಬ್ಬರ ಅಗತ್ಯವಾಯಿತು. ಆದರೆ ಜಾನುವಾರು ಕೊರತೆ. ಸುತ್ತಮುತ್ತ ಸಿಗುವ ದ್ರವ್ಯ ಪದಾರ್ಥಗಳನ್ನು ಹೊಂದಿಸಿಕೊಂಡು ಸಾವಯವ ಗೊಬ್ಬರ, ದ್ರಾವಣ
ಗಳನ್ನು ಸಾಮೂಹಿಕವಾಗಿ ತಯಾರಿಸಿ ಹಂಚಿಕೊಂಡು ಬಳಸತೊಡಗಿದರು. ಮಣ್ಣಿನ ಫಲವತ್ತತೆ ಹೆಚ್ಚಿಸುವ, ರೋಗ-ಕೀಟ ಬಾಧೆ ನಿರ್ವಹಣೆಯ, ಬಿದ್ದ ನೀರು ಮತ್ತು ಮಣ್ಣಿನ ಕಣಗಳನ್ನು ಹಿಡಿದಿಡುವ ಹಲವು ಹತ್ತು ವಿಧಾನಗಳನ್ನು ಕಲಿತು ಅಳವಡಿಸಿ
ಕೊಂಡರು.
ಇದಕ್ಕೆ ಸರ್ಕಾರದ ಸ್ಕೀಮುಗಳನ್ನು, ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡರು. ಕೆಲವರಲ್ಲೇ ಸೇರಿಕೊಂಡಿದ್ದ ಹತ್ತಾರು ಬಗೆಯ ಏಕದಳ, ದ್ವಿದಳ, ಎಣ್ಣೆಕಾಳು, ಸಾಂಬಾರು ಪದಾರ್ಥಗಳು, ತರಕಾರಿ ಬೀಜಗಳನ್ನು ಹುಡುಕಿ ಕಲೆಹಾಕಿದರು. ನಿಯಮಿತವಾಗಿ ಸಭೆ ಸೇರುತ್ತಾ ತಮ್ಮ ಅನುಭವ- ಜ್ಞಾನ ವಿನಿಮಯ ಮಾಡಿಕೊಳ್ಳತೊಡಗಿದರು. ಒಂದೆರಡು ಬೆಳೆ ಹಾಕುತ್ತಿದ್ದಲ್ಲಿ 15-20 ಥರದ ಬೆಳೆಗಳನ್ನು ಹಾಕುವುದು, ಒಂದು ಹಂಗಾಮನ್ನು ಎರಡಕ್ಕೆ ವಿಸ್ತರಿಸುವುದು ಮುಂತಾಗಿ ಮಾಡುತ್ತಾ, ನಾಲ್ಕು ಬೆಳೆ ನಷ್ಟವಾದರೂ ಹತ್ತು ಬೆಳೆಗಳನ್ನು ಕೈಗೆ ತೆಗೆದುಕೊಳ್ಳತೊಡಗಿದರು.
ಈಗ ವರ್ಷವಿಡೀ ಆಹಾರ ಭದ್ರತೆಯಾಗುವುದರ ಜೊತೆಗೆ ಹೆಚ್ಚುವರಿಯ ಮಾರಾಟದಿಂದ ಹಣವೂ ಕೈಸೇರ ತೊಡಗಿತು. ಜೊತೆಗೆ ಕುರಿ-ಮೇಕೆ, ಕೋಳಿ, ಜಾನುವಾರು ಸಾಕಾಣಿಕೆಯಂಥ ಒಂದಿಲ್ಲೊಂದು ಚಟುವಟಿಕೆಯಿಂದ ಆದಾಯ ಖಾತರಿಪಡಿಸಿಕೊಂಡಿದ್ದಾರೆ. ಇವರಿಗೆ ಒಳಸುರಿಗಳ ಖರ್ಚಿಲ್ಲ. ಮನೆಮಂದಿಯದ್ದೇ ಶ್ರಮ, ಅಗತ್ಯಬಿದ್ದಲ್ಲಿ ಸಂಘದ ಸದಸ್ಯರಲ್ಲೇ ಮುಯ್ಯಾಳು ಪದ್ಧತಿಯಲ್ಲಿ ಶ್ರಮ ವಿನಿಮಯ. ಒಟ್ಟಿನಲ್ಲಿ ಬೀಳು ಬಿದ್ದಿದ್ದ ಜಮೀನುಗಳು ಮಹಿಳೆಯರ ಪರಿಶ್ರಮ, ಸಂಘಟಿತ ಬಲ, ದಕ್ಷ ನಿರ್ವಹಣೆ, ಸರಿಯಾದ ತಾಂತ್ರಿಕತೆಗಳಿಂದ ಇಂದು ಕುಟುಂಬಗಳನ್ನು ಸಾಕಿ ಸಲಹುತ್ತಿವೆ. ಇದು ಕೇವಲ ಬೆರಳೆಣಿಕೆಯಷ್ಟು ರೈತರ ‘ಯಶೋಗಾಥೆ’ಯಲ್ಲ. ಮಳೆಯಾಶ್ರಿತ ಸಾವಿರಾರು ಸಣ್ಣ ರೈತ ಕುಟುಂಬಗಳ ಸಂಘಟನಾತ್ಮಕ ಪ್ರಯತ್ನ.
ಇಂತಹ ಚೇತೋಹಾರಿ ಮಾದರಿಗಳು ನಮ್ಮಲ್ಲಿರುವಾಗ, ಸಣ್ಣ ರೈತರ ಬೀಳುಜಮೀನುಗಳನ್ನು ಎತ್ತಿ ತೋರಿಸಿ, ಕೃಷಿಯನ್ನೇ ಒಂದು ಶಾಪವೆಂಬಂತೆ ವರ್ಣಿಸುವುದನ್ನು ಬಿಟ್ಟು, ಈ ಕಡೆ ಕಣ್ಣೆತ್ತಿ ನೋಡಬಾರದೇಕೆ? ಸಣ್ಣ ಹಿಡುವಳಿಗಳನ್ನುಉತ್ಪಾದನಾಶೀಲವಾಗಿಸುವಲ್ಲಿ ಮನಸ್ಸು ಕೊಟ್ಟು ಕೊಂಚ ಬಡಗಲ ದಿಕ್ಕಿನತ್ತ ಮುಖ ಮಾಡಿದರೆ ಕೆಂಚಮ್ಮ, ಚೌಡಮ್ಮಂದಿರ ದಂಡೇ ಬಂದು, ಬರಡಾಗಿ ಬಸವಳಿದ ಭೂಮಿಯನ್ನು ಪೋಷಿಸುವ ವಿದ್ಯೆ ಹೇಳಿಕೊಟ್ಟೀತು. ತೆಂಕಣ ದಿಕ್ಕಿನತ್ತ ತಿರುಗಿದರೆ ಸಾಕು, ಪುಟ್ಟೀರಮ್ಮನ ಪಟಾಲಂ ಕೈಬೀಸಿ ಕರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.