ADVERTISEMENT

ಬೆಂಗಳೂರಲ್ಲಿ ಆಗದ್ದು ಬೇರೆಡೆ ಆದೀತೆ?

ನಗರ ಸ್ಥಳೀಯ ಸಂಸ್ಥೆಗಳ ಸಬಲೀಕರಣವನ್ನು ಮರೆತದ್ದು ಯಾರು ಮತ್ತು ಏಕೆ?

ಮತ್ತಿಹಳ್ಳಿ ಮದನ ಮೋಹನ
Published 6 ಸೆಪ್ಟೆಂಬರ್ 2015, 19:30 IST
Last Updated 6 ಸೆಪ್ಟೆಂಬರ್ 2015, 19:30 IST

ಚುನಾವಣೆಗಳು ಆಗುತ್ತವೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿ ತೂಗಾಡುತ್ತಿದ್ದ ಬೆಂಗಳೂರು ಮಹಾನಗರ ಪಾಲಿಕೆ  ಚುನಾವಣೆ ಮುಗಿದಿದೆ. ತಮ್ಮ ಸರ್ಕಾರವಿದ್ದರೂ ಚುನಾವಣೆಯಲ್ಲಿ  ಬೆಂಗಳೂರು ನಾಗರಿಕರ  ವಿಶ್ವಾಸವನ್ನು ಗಳಿಸಲಾಗದ ಕಾಂಗ್ರೆಸ್‌ ಮತ್ತು ಹೋದ ಬಾರಿಗಿಂತ ಕಡಿಮೆ ಸ್ಥಾನ ಬಂದರೂ ಸರಳ ಬಹುಮತದ ಸನಿಹಕ್ಕೆ ಬರಲು ಶಕ್ತವಾದ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಕಚ್ಚಾಡುತ್ತಿರುವ ಕಾಯಕದಲ್ಲಿ ಉದ್ಯುಕ್ತವಾಗಿವೆ.

ಪಕ್ಷೇತರ ಸದಸ್ಯರು, ಪದನಿಮಿತ್ತ ಸದಸ್ಯರಾದ ಶಾಸಕರು, ಸಂಸದರು  ಮತ್ತು ಜೆಡಿಎಸ್‌ ಬೆಂಬಲದಿಂದ  ಕಾಂಗ್ರೆಸ್‌ ಕಡೆಗೆ ಸಂಖ್ಯಾಬಲವಿದೆ. ಬಿಜೆಪಿಗೆ ಅದಿಲ್ಲದೇ ಕೈಕೈ ಹಿಚುಕಿಕೊಳ್ಳುತ್ತ ಬೇರೆ ತಂತ್ರ ರೂಪಿಸಲು ಯತ್ನಿಸುತ್ತಿದೆ. ಹಿತ್ತಲ ಬಾಗಿಲಿಂದ ಅಧಿಕಾರಕ್ಕೆ ಬರುವುದು ಕಾಂಗ್ರೆಸ್ಸಿಗೇನೂ  ಹೊಸದಲ್ಲ ಮತ್ತು ಅಪಥ್ಯವೂ ಅಲ್ಲ. 2004ರ ವಿಧಾನಸಭೆ ಚುನಾವಣೆಯಲ್ಲಿ ಹೀಗೇ  ಮಾಡಿ ಅಧಿಕಾರಕ್ಕೆ ಕಾಂಗ್ರೆಸ್‌ ಬಂದಿತ್ತು. ಆಗಲೂ ಅವರನ್ನು ಮೇಲೆತ್ತಿ (ನಂತರ ಕೆಡವಿದವರು)  ಅಧಿಕಾರದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದವರು ಜೆಡಿಎಸ್‌ನವರೇ. ‘ಆಪರೇಷನ್ ಕಮಲ’ದ ಮೂಲಕ ಬಹುಮತ ಗಳಿಸುವಲ್ಲಿ ಬಿಜೆಪಿಯೂ ಪರಿಣತವೇ.

ತಮಗೆ ಸಂಖ್ಯಾಬಲ ಇಲ್ಲದಿರಬಹುದು, ಆದರೆ ರಾಷ್ಟ್ರೀಯ ಪಕ್ಷಗಳೆರಡನ್ನು ತಮ್ಮ ಕಿರುಬೆರಳ ಸುತ್ತ ತಿರುಗುವಂತೆ ಮಾಡುವ ಚಾಕಚಕ್ಯತೆ ತಮಗಿದೆ ಎಂದು ಎಚ್‌.ಡಿ. ದೇವೇಗೌಡರು ಬೀಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಕೇಳುವವರು ಯಾರು?  ಪ್ರತಿ ಬಾರಿ ಆಗುವಂತೆ  ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ಮತದಾರರನ್ನು ಓಲೈಸಿ, ನಂತರದ ದಿನಗಳಲ್ಲಿ ಬಾಳೆಹಣ್ಣಿನ ಸಿಪ್ಪೆಯಂತೆ ಎಸೆಯುವ ಕೆಲಸ ಈಗಲೂ ನಡೆದಿದೆ. ಮತದಾರರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ನಡೆಯುವುದಕ್ಕೆ ಸಂಕೋಚವೂ ಅವರಿಗೆ ಅಗುತ್ತಿಲ್ಲ. ಚುನಾವಣೆಗೆ ಮುನ್ನ ಮತದಾರರು, ನಂತರ ಎಲ್ಲವೂ  ನಮ್ಮದೇ ಎಂಬ ಭಾವನೆ ಅವರದು.

ಅಭಿವೃದ್ಧಿಯ ವಿಷಯದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಎಡವಿದ್ದೆಲ್ಲಿ? ಉದ್ಯಾನ ನಗರವೆಂದು ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದ ಬೆಂಗಳೂರು ತ್ಯಾಜ್ಯ ನಗರವಾಗಿ ಪರಿರ್ತನೆಯಾದುದು ಹೇಗೆ, ದಿನೇ ದಿನೇ ನಾಗರಿಕ ಸೌಲಭ್ಯಗಳು ನಶಿಸುತ್ತಿವೆ ಮತ್ತು  ಮಹಾನಗರಪಾಲಿಕೆಯಲ್ಲಿ  ಭ್ರಷ್ಟಾಚಾರ ಹೇಗೆ ವ್ಯಾಪಿಸುತ್ತಿದೆ ಎನ್ನುವುದು  ವಿವಿಧ ಆಯಾಮಗಳಲ್ಲಿ  ವಿಸ್ತೃತ ಚರ್ಚೆಯಾದುದು ಹಸಿರಾಗಿ ಉಳಿದಿದೆ. ತನ್ನ ಐದು ವರ್ಷದ ಆಡಳಿತದಲ್ಲಿ ಬಿಜೆಪಿ ಮಾಡಿದ ಸಾಧನೆಯೆಂದರೆ ಭ್ರಷ್ಟಾಚಾರವನ್ನು ವ್ಯಾಪಕವಾಗಿ ಬೆಳೆಸಿದ್ದು  ಎಂದು ಕಾಂಗ್ರೆಸ್ಸಿಗರು ಹೇಳಿದ್ದರೆ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಂದ ನಂತರ  ಬೆಂಗಳೂರನ್ನು ಅಲಕ್ಷಿಸಲಾಗಿದೆ ಎಂದು ಬಿಜೆಪಿ ಎದುರೇಟು ಕೊಟ್ಟಿತ್ತು.

ರಾಜಕೀಯ ವಲಯದ ಹೊರಗೆ ನಡೆದ ಮತದಾರರ ಚರ್ಚೆಯಲ್ಲಿ,  ಬೆಂಗಳೂರಿಗೆ ಒದಗಿರುವ ಸದ್ಯದ ದುಃಸ್ಥಿತಿಯ ಬಗ್ಗೆ ಬಹಿರಂಗವಾಗಿ ಚಿಂತನೆ ನಡೆದಿತ್ತು. ಅಲ್ಲದೆ,  ಕಾಂಗ್ರೆಸ್‌  ಮತ್ತು ಬಿಜೆಪಿ ತಮ್ಮ ಅಧಿಕಾರದ ಆಸೆಗಾಗಿ  ಬೆಂಗಳೂರಿಗರ ಹಿತವನ್ನು ಬಲಿಕೊಟ್ಟ ಕಥೆ ಮತ್ತು ವ್ಯಥೆಗಳ ಮಾರ್ಮಿಕ ಚಿತ್ರಣ ಅದರಲ್ಲಿ ಹೊರಹೊಮ್ಮಿತು.  ಮಾಯವಾಗುತ್ತಿರುವ ನಾಗರಿಕ ಸೌಲಭ್ಯಗಳು,  ಕೆಟ್ಟದಾದ ರಸ್ತೆಗಳು,  ನೀರಿನ ಅಸಮರ್ಪಕ  ವ್ಯವಸ್ಥೆ, ನಾಗರಿಕರ ನಿದ್ದೆ ಕೆಡಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಮೊದಲಾದವುಗಳ ಪಟ್ಟಿ ತಯಾರಾದುದಲ್ಲದೆ ನಗರ ಪಿತೃಗಳು, ಕರ್ತವ್ಯ ನಿರ್ವಹಣೆಯಲ್ಲಿ ಹೇಗೆ ವಿಮುಖರಾಗಿದ್ದಾರೆ  ಎಂಬುದರ ಬಗ್ಗೆಯೂ ಚರ್ಚೆಯಾಗಿತ್ತು.

ಚರ್ಚೆಯ ಮತಿತಾರ್ಥವಿಷ್ಟೇ; ಚುನಾವಣೆಯಾದ ನಂತರದ ದಿವಸಗಳಲ್ಲಿ ಮಹಾನಗರರ ಪಾಲಿಕೆಯ ಆಡಳಿತದಲ್ಲಿ ಮತ್ತು ಮಹಾನಗರ ಪಾಲಿಕೆ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ  ನಾಗರಿಕರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ. ಕೆಲಸ ಏನು ಆಗುತ್ತಿದೆಯೋ,  ಅದರ ಗುಣಮಟ್ಟ ಹೇಗಿದೆಯೋ, ಒದಗಿಸಿದ ಹಣ ಸರಿಯಾಗಿ ವಿನಿಯೋಗವಾಗುತ್ತಿದೆಯೋ ಇಲ್ಲವೋ ಎನ್ನುವುದರ ಕುರಿತು ಪ್ರಾಥಮಿಕ ಮಾಹಿತಿಯೂ ಲಭ್ಯವಾಗುತ್ತಿಲ್ಲ. ‌ ಅಭಿವೃದ್ಧಿ ಕಾರ್ಯದಲ್ಲಿ ಜನರಿಗೆ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಅವಕಾಶ ಇದೆಯೇ?  ಪಾಲಿಕೆ ಅಧಿಕಾರಿಗಳ ಹಾಗೂ ಪಾಲಿಕೆ ಚುನಾಯಿತ ಸದಸ್ಯರ  ವರ್ತನೆಗೆ  ಅಂಕುಶ ಹಾಕಲು ಸಾಧ್ಯವೇ  ಎನ್ನುವ ಆತ್ಮಾವಲೋಕನ ಎಲ್ಲಿಯೂ ನಡೆಯಲಿಲ್ಲ.

ಪಾಲಿಕೆ ಆಡಳಿತದಲ್ಲಿ ಜನರು ಸಹಭಾಗಿಯಾಗಲು  ಯಾರ ಮುಲಾಜೂ ಬೇಕಾಗಿಲ್ಲ. ಜನರಿಗೆ ಅದು ಸಂವಿಧಾನ ಕೊಟ್ಟಿರುವ ಹಕ್ಕು. ಸಂವಿಧಾನ ಇದನ್ನು ಎರಡೂವರೆ ದಶಕಗಳ ಹಿಂದೆಯೇ ಜನರಿಗೆ  ನೀಡಿದೆ.  ಇದರ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಿಸಿ, ಅವುಗಳ ಆಡಳಿತವನ್ನು ವಿಕೇಂದ್ರೀಕರಿಸಿ, ಜನರ ಸಹಭಾಗಿತ್ವದೊಂದಿಗೆ ಆಡಳಿತ ನಡೆಸಿದರೆ ಜನರ  ಆಶೋತ್ತರಗಳನ್ನು ಈಡೇರಿಸಲು ಸಾಧ್ಯ.  ಸಬಲೀಕರಣ ಬರೀ ಮಾತಿನಿಂದ ಆಗುವುದಿಲ್ಲ.

ರಾಜ್ಯ ಸರ್ಕಾರ ಈ ಸಂಸ್ಥೆಗಳಿಗೆ ಸೂಕ್ತ ಆರ್ಥಿಕ ಭದ್ರತೆ ಒದಗಿಸಬೇಕು. ಇದಕ್ಕಾಗಿ, ತನ್ನಲ್ಲಿಯೇ ಕೇಂದ್ರೀಕೃತವಾದ ಕೆಲವು ಅಧಿಕಾರಗಳನ್ನು ಮತ್ತು ಸಂಪನ್ಮೂಲಗಳನ್ನು ಈ ಸಂಸ್ಥೆಗಳಿಗೆ ವಹಿಸಿಕೊಡಬೇಕು. ದುರ್ದೈವದ ಸಂಗತಿಯೆಂದರೆ  ಇಲ್ಲಿಯತನಕ ರಾಜ್ಯವಾಳಿದ  ಸರ್ಕಾರಗಳು ಇದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ ತೋರಿಸಿಲ್ಲ.  ಹೆಚ್ಚಿನ ಜನರಿಗೆ ಈ ಬಗ್ಗೆ ಅರಿವಿಲ್ಲ. ಹಾಗಾಗಿ ಅವರು ಈ ಕುರಿತು ಮಾತನಾಡುತ್ತಿಲ್ಲ. ಜನರೇ ಕೇಳದಿದ್ದಾಗ ಸರ್ಕಾರ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟೀತೇ?

ಸ್ಥಳೀಯ ಸಂಸ್ಥೆಗಳ ಸಬಲೀಕರಣದ ಅದರಲ್ಲಿಯೂ ನಗರ ಸಂಸ್ಥೆಗಳ ಸಬಲೀಕರಣದ ಮಾತು ಇತ್ತೀಚಿನದು. ಈಗಿನ ಕೇಂದ್ರೀಕೃತ ವ್ಯವಸ್ಥೆಯಲ್ಲಿ  ಸ್ಥಳೀಯ ಸಂಸ್ಥೆಗಳು  ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಆಗದಿರುವುದರಿಂದ, ಅವುಗಳ ಆಡಳಿತ ವಿಕೇಂದ್ರೀಕೃತಗೊಳಿಸಿ, ಜನರ ಸಹಭಾಗಿತ್ವದೊಡನೆ ಕಾರ್ಯದಕ್ಷತೆ ಹೆಚ್ಚಿಸಬೇಕು.

ಈ ಸಿದ್ಧಾಂತವನ್ನು  ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಪಂಚಾಯಿತಿಗಳ ಮಟ್ಟಿಗೆ ಅನ್ವಯ ಮಾಡಿ ಇಡೀ ದೇಶದಲ್ಲಿ ಮೊದಲ ಬಾರಿ  ಅಧಿಕಾರ ವಿಕೇಂದ್ರೀಕರಣವನ್ನು  1987ರಲ್ಲಿ ಜಾರಿಗೊಳಿಸಿದ ಕೀರ್ತಿ ಕರ್ನಾಟಕ ಮತ್ತು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲಬೇಕು.

ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಇನ್ನೂ ಒಂದು  ಹೆಜ್ಜೆ ಮುಂದೆ ಹೋದರು. ತಮ್ಮ ಸಹೋದ್ಯೋಗಿ ಮತ್ತು ಸಹಚರ ಮಣಿಶಂಕರ್‌ ಅಯ್ಯರ್‌ ಮೊದಲಾದವರೊಡನೆ ವ್ಯಾಪಕ ಚರ್ಚೆ ನಡೆಸಿ ಕರ್ನಾಟಕದ ಪ್ರಯೋಗದಲ್ಲಿದ್ದ ಕೆಲವು ದೌರ್ಬಲ್ಯಗಳನ್ನು ಸರಿ ಮಾಡಿದ್ದಲ್ಲದೇ  ಈ ಪ್ರಯೋಗವನ್ನು ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯಿಸುವ  ಕ್ರಮ ತೆಗೆದುಕೊಂಡರು. ಅವರ ಅವಿರತ ಪ್ರಯತ್ನಗಳಿಂದಾಗಿಯೇ ಸಂವಿಧಾನದ 73ನೇ (ಪಂಚಾಯಿತಿಗಳಿಗೆ)  ಮತ್ತು 74ನೇ (ನಗರ ಸಂಸ್ಥೆಗಳಿಗಾಗಿ)  ತಿದ್ದುಪಡಿಗಳ ಮೂಲಕ ಈ ಸಂಸ್ಥೆಗಳಿಗೆ ಸಂವಿಧಾನದಲ್ಲಿ ಸ್ಥಾನಮಾನ, ರಕ್ಷಣೆಗಳನ್ನು ಕಲ್ಪಿಸಿಕೊಟ್ಟರು.

ಇದರಿಂದಾದ ಒಂದು ಲಾಭವೆಂದರೆ  ಸ್ಥಳೀಯ ಸಂಸ್ಥೆಗಳಿಗೆ ಒಂದು ರೀತಿಯಿಂದ ಸ್ಥಿರತೆ  ಬಂದಿತು. ಅಷ್ಟರತನಕ  ಈ ಸಂಸ್ಥೆಗಳು ಆಯಾ ರಾಜ್ಯ ಸರ್ಕಾರಗಳ ಬೇಕು–ಬೇಡಗಳನ್ನು ಅವಲಂಬಿಸಿ ಕೆಲಸ ಮಾಡಬೇಕಾಗಿತ್ತು. ಸರ್ಕಾರ ಬೇಕೆನಿಸಿದಾಗ ಇವುಗಳನ್ನು ಅಮಾನತುಗೊಳಿಸಬಹುದಿತ್ತು. ಹೊಸ ಚುನಾವಣೆಗಳನ್ನು ಮಾಡಬಹುದಿತ್ತು. ಮಾಡದೆ  ವರ್ಷಗಳ ತನಕ ಮುಂದೂಡಬಹುದಿತ್ತು.

ಸಂವಿಧಾನದ ತಿದ್ದುಪಡಿ ಬಂದ ಬಳಿಕ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ 5 ವರ್ಷದ ಕಾಯಂ ಅವಧಿ  ಮತ್ತು ಅವಧಿ ಮುಗಿದ ನಂತರ ಶೀಘ್ರವೇ ಚುನಾವಣೆ ನಡೆಸಬೇಕು ಎಂದಾಯಿತು.  ಇದರಲ್ಲಿ ರಾಜ್ಯ ಸರ್ಕಾರದ ಬೇಕು–ಬೇಡಗಳ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಕೇಂದ್ರ ಸರ್ಕಾರಕ್ಕೆ ಇದ್ದ ಅಧಿಕಾರಕ್ಕೆ ಸುಪ್ರೀಂಕೋರ್ಟ್‌ ಕಡಿವಾಣ ಹಾಕಿತಲ್ಲ, (ಎಸ್‌.ಆರ್‌. ಬೊಮ್ಮಾಯಿ ಪ್ರಕರಣ)ಅಂತಹುದೇ ಬಗೆ ಇದು.

ಈ ಕಲಮಿನಿಂದಾಗುವ ಲಾಭವನ್ನು ಬೆಂಗಳೂರಿಗರು ಅನುಭವಿಸಿದ್ದಾರೆ.  ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆಯನ್ನು ರಾಜಕೀಯ ಕಾರಣಕ್ಕಾಗಿ ನಡೆಸುವುದು   ಬೇಕಾಗಿರಲಿಲ್ಲ. ಒಂದೊಂದೇ ನೆವ ಹೇಳಿ ಚುನಾವಣೆ ಮುಂದೂಡುವ ಪ್ರಯತ್ನವನ್ನು ಮಾಡಿತು. ಸುಪ್ರೀಂಕೋರ್ಟ್‌ ಮತ್ತು ರಾಜ್ಯದ ಹೈಕೋರ್ಟ್‌ ಮಧ್ಯ ಪ್ರವೇಶಿಸಿ, ಸೂಕ್ತ ನಿರ್ದೇಶನಗಳನ್ನು ಕೊಡದಿದ್ದರೆ ಮಹಾನಗರ ಪಾಲಿಕೆಯ ಚುನಾವಣೆ ಆಗುತ್ತಿರಲಿಲ್ಲ. ಇಂತಹ ಪ್ರಯತ್ನವನ್ನು 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಸರ್ಕಾರ ಪಂಚಾಯತ್‌ ರಾಜ್‌ ಸಂಸ್ಥೆಗಳ ವಿಷಯದಲ್ಲಿ ಮಾಡಿ ಮುಖಭಂಗ ಅನುಭವಿಸಿತ್ತು.

ಸಂವಿಧಾನ ತಿದ್ದುಪಡಿ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡು ಮಜಲಿನ ಅಂದರೆ ನಗರಸಭೆ ಮತ್ತು ವಾರ್ಡ್‌ ಸಭೆಗಳನ್ನು; ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಪಂಚಾಯಿತಿಗಳಿಗೆ ಮೂರು ಮಜಲಿನ ಅಂದರೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿರುವ ವ್ಯವಸ್ಥೆಯ ವಿಕೇಂದ್ರೀಕರಣವನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಅಲ್ಲದೆ  ತಮ್ಮ ತಮ್ಮ ಕರ್ತವ್ಯಗಳನ್ನು  ನಿರ್ವಹಿಸುವ ಸಲುವಾಗಿ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲದ ವ್ಯವಸ್ಥೆಯನ್ನು  ಮಾಡಬೇಕೆಂದು ಸಂವಿಧಾನ ಹೇಳಿದೆ. ಇದನ್ನು ಜಾರಿಗೆ ತರುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು.

ದುರದೃಷ್ಟದ ವಿಚಾರವೆಂದರೆ  ನಮ್ಮ  ರಾಜ್ಯ ಸರ್ಕಾರ ಪಂಚಾಯಿತಿಗಳ ವಿಷಯದಲ್ಲಿ ಸಂವಿಧಾನದ ಕಲಮುಗಳನ್ನು ಜಾರಿಗೊಳಿಸಲು ತೆಗೆದುಕೊಂಡ ಆಸಕ್ತಿಯನ್ನು ನಗರ ಸ್ಥಳೀಯ ಸಂಸ್ಥೆಗಳ ವಿಷಯದಲ್ಲಿ ತೆಗೆದುಕೊಳ್ಳಲಿಲ್ಲ. ಆದಕಾರಣ   ನಗರವಾಸಿಗಳಿಗೆ  ಸಂವಿಧಾನದ ಕಲಮುಗಳ ಲಾಭ ತಲುಪುತ್ತಿಲ್ಲ.

ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ (ಕಲಮು 243 ಎಸ್) ನಗರ ಪ್ರದೇಶಗಳಲ್ಲಿ ಕೆಳ ಮಟ್ಟದಲ್ಲಿ, ವಾರ್ಡಿಗೊಂದಾಗಲಿ ಅಥವಾ ಹಲವು ವಾರ್ಡುಗಳಿಗೊಂದಾಗಲಿ ವಾರ್ಡ್‌ ಸಭೆಗಳನ್ನು ರಚಿಸಬೇಕು. ಸಂಬಂಧಿತ ನಗರಸಭೆ/ಪಾಲಿಕೆ ಸದಸ್ಯ, ಅಧ್ಯಕ್ಷ, ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿರುವ ವ್ಯವಸ್ಥೆಯ ಪ್ರಕಾರ  ಈ ಸಮಿತಿಗಳ ಅಭಿಪ್ರಾಯದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.  ಅಭಿವೃದ್ಧಿ ಕಾರ್ಯಗಳ ಪ್ರಗತಿಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿರಬೇಕು.  ಅವುಗಳಿಗೆ ಅನುಮತಿಯನ್ನು ಪಡೆಯಲೇಬೇಕು. ಇದನ್ನು ಕರ್ನಾಟಕದಲ್ಲಿ ರಚಿಸಿಯೇ ಇಲ್ಲ. ವಿಶೇಷ ಅನುಭವ ಇರುವವರ ಸೇವೆ ಪಡೆಯುವುದಕ್ಕಾಗಿ ಇರುವ ನಾಮಕರಣದ ಅಧಿಕಾರವನ್ನು ರಾಜಕೀಯವಾಗಿ ದುರುಪಯೋಗ ಮಾಡಲಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸಂವಿಧಾನದಲ್ಲಿ ನಮೂದಿಸಿದಂತೆ ನಗರಸಭೆ– ಪಾಲಿಕೆಗಳು ಕಾರ್ಯ ನಡೆಸಬೇಕಾದರೆ ನಗರಾಭಿವೃದ್ಧಿಯೂ ನಗರಸಭೆಗಳ ಸುಪರ್ದಿಗೆ ಬರುತ್ತದೆ. ಇದನ್ನು ಜಾರಿಗೊಳಿಸಿದರೆ ರಾಜ್ಯದಲ್ಲಿರುವ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಬೆಂಗಳೂರು ಮತ್ತು ಮೈಸೂರನ್ನು ಬಿಟ್ಟರೆ ಉಳಿದೆಲ್ಲವೂ ಸರ್ಕಾರಿ ಆಜ್ಞೆಯ ಮೂಲಕ ಶುರುವಾದವುಗಳೇ ಹೊರತು ಪ್ರತ್ಯೇಕ ಕಾನೂನಿನ ಮೂಲಕವಲ್ಲ. ಇವೆಲ್ಲವೂU ರಾಜಕೀಯ ಅನುಗ್ರಹಗಳನ್ನು ವಿತರಿಸುವ ಸಂಸ್ಥೆಗಳಾಗಿರುವುದರಿಂದ, ಸಂವಿಧಾನದ ಉಲ್ಲಂಘನೆಯನ್ನು ಲೆಕ್ಕಿಸದೆ ಅವುಗಳನ್ನು ಎಲ್ಲ ಸರ್ಕಾರಗಳೂ ಮುಂದುವರಿಸಿವೆ.

ನಗರಾಭಿವೃದ್ಧಿ ಜವಾಬ್ದಾರಿಯನ್ನು  ನಗರಸಭೆಗಳಿಗೆ ಕೊಟ್ಟರೆ, ಆಕ್ಟ್ರಾಯ್‌ ತೆಗೆದುದರ ಫಲವಾಗಿ ಅರ್ಥಿಕ ದುಃಸ್ಥಿತಿ ಅನುಭವಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದು ತರಹದ ಆರ್ಥಿಕ ಚೈತನ್ಯ  ಬರಬಹುದು. ಬೆಂಗಳೂರಿನ ಉದಾಹರಣೆಯನ್ನು ತೆಗೆದಕೊಂಡರೆ, ಸಾಲ ಮಾಡಿ, ಅಸ್ತಿಯನ್ನು ಒತ್ತೆಯಿಟ್ಟು  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ದುರ್ಧರ ಪರಿಸ್ಥಿತಿ ಬರುತ್ತಿರಲಿಲ್ಲ. ಏಕೆಂದರೆ ಬಿ.ಡಿ.ಎ. ರೊಕ್ಕದಿಂದ ತುಂಬಿ ತುಳುಕುತ್ತಿದೆ. ಆಕ್ಟ್ರಾಯ್‌ ರದ್ದುಗೊಳ್ಳದೆ ಇದ್ದಿದ್ದರೆ, ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಾಲ ಕೊಡುವ ಸ್ಥಿತಿಯಲ್ಲಿ ಇರುತ್ತಿತ್ತು. ಆದರೆ ಇಂದು ಅದು ಭಿಕ್ಷಾಪಾತ್ರೆ ಹಿಡಿದು ಪದೇ ಪದೇ ಸರ್ಕಾರದ ಮುಂದೆ ಕೈ ಒಡ್ಡುವ ದಯನೀಯ ಸ್ಥಿತಿಗೆ ಇಳಿದಿದೆ.

ಬೆಂಗಳೂರು ಬುದ್ಧಿಜೀವಿಗಳು, ಪ್ರಜ್ಞಾವಂತರಿಂದ  ತುಂಬಿದೆ. ಇಲ್ಲಿನ ಜನ ತಮ್ಮ ಹಕ್ಕನ್ನು ಚಲಾಯಿಸದೆ, ತಮಗಾಗಿರುವ ಅಸಮಾಧಾನವನ್ನು ಮತದಾನದಿಂದ ದೂರ ಉಳಿಯುವ ಮೂಲಕ ತೋರಿದರೆ ಪರಿಸ್ಥಿತಿ  ಸುಧಾರಿಸುವುದು ಯಾವಾಗ ಮತ್ತು ಹೇಗೆ ಅನ್ನುವುದಕ್ಕೆ ಜನರೇ  ಉತ್ತರ ಕೊಡಬೇಕು. ಬೆಂಗಳೂರಿನಲ್ಲೇ ಆಗದಿದ್ದರೆ ಬೇರೆ ನಗರಸಭೆಗಳಲ್ಲಿ ಆಗುವುದಾದರೂ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.