ಭಾರತೀಯ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಹಲವು ಬದಲಾವಣೆಗಳಾಗುತ್ತಿವೆ. ಅತ್ತ ಉನ್ನತ ಶಿಕ್ಷಣವನ್ನು ನಿರ್ವಹಿಸುವ ಯುಜಿಸಿ, ಎ.ಐ.ಸಿ.ಟಿ.ಇ ನಂತಹ ಸಂಸ್ಥೆಗಳ ಪುನರ್‌ರಚನೆಯಾಗುತ್ತಿದ್ದರೆ, ಇತ್ತ ಕರ್ನಾಟಕ ಸರ್ಕಾರವು ತನ್ನ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ-2017ನ್ನು ಮಂಡಿಸಿದೆ. ಈ ಮಾರ್ಪಾಡುಗಳ ಒಳಿತು ಕೆಡುಕುಗಳ ಮೌಲ್ಯಮಾಪನ ಮಾಡುವುದು ಬೇರೆ ವಿಷಯ. ವಿಶ್ವವಿದ್ಯಾಲಯಗಳ ಕಾರ್ಯವೈಖರಿಯಲ್ಲಿ ಬದಲಾವಣೆ ತರಬಯಸುವ ಇಂತಹ ಹೆಜ್ಜೆಗಳು ನಾವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಗುರುತಿಸುತ್ತಿದ್ದೇವೆ ಎಂಬ ಸೂಕ್ಷ್ಮತೆಯನ್ನಂತೂ ಸೂಚಿಸುತ್ತಿರುವ ಸಂಗತಿಗಳಾಗಿವೆ.
ಆದರೆ ಈ ಎಲ್ಲ ವಿದ್ಯಮಾನಗಳು ಹೇಳಿಕೊಳ್ಳುವಂತಹ ಬದಲಾವಣೆಗಳನ್ನು ತರಲಾರವು. ಏಕೆಂದರೆ ವಿಶ್ವವಿದ್ಯಾಲಯ ಎಂಬ ಸಂಸ್ಥೆಯ ಅಂತಃಸತ್ವ, ಉನ್ನತ ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಗ್ರಹಿಸದ ಈ ಬದಲಾವಣೆಗಳು, ಸಮಸ್ಯೆಗಳ ಕೇಂದ್ರಗಳನ್ನು ಬದಲಾಯಿಸುತ್ತವೆಯೇ ಹೊರತು, ನಾವು ಬಯಸುವ ಸುಧಾರಣೆಗಳನ್ನು ತರುವುದು ಕಷ್ಟಸಾಧ್ಯ. ಸಮಾಜವನ್ನು ರೂಪಿಬೇಕಾದ ಸಂಸ್ಥೆಗಳನ್ನು ಬದಲಾಯಿಸಿ, ಉಳಿಸಿ ಬೆಳೆಸಬೇಕಾದರೆ, ಅವುಗಳ ಪಾತ್ರ, ಉದ್ದೇಶ ಮತ್ತು ತಾತ್ವಿಕ ಹಿನ್ನೆಲೆಗಳ ಕುರಿತು ಯೋಚನೆ ಮಾಡಬೇಕಾಗುತ್ತದೆ. ಆದ್ದರಿಂದ ಭಾರತೀಯ ವಿಶ್ವವಿದ್ಯಾಲಯಗಳಿಗೆ ತಾತ್ವಿಕ ಗೊತ್ತು ಗುರಿಗಳನ್ನು ಕಲ್ಪಿಸಿಕೊಡುವ ಜರೂರತ್ತು ಇಂದು ಹೆಚ್ಚು ಇದೆ.
1857ರಲ್ಲಿ ಸ್ಥಾಪನೆಗೊಂಡ ಮದ್ರಾಸ್, ಕಲ್ಕತ್ತಾ ಹಾಗೂ ಬಾಂಬೆ ವಿಶ್ವವಿದ್ಯಾಲಯಗಳಿಂದ ಭಾರತದ ಆಧುನಿಕ ವಿಶ್ವವಿದ್ಯಾಲಯಗಳ ಇತಿಹಾಸ ಪ್ರಾರಂಭವಾಗುತ್ತದೆ. ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಇಲ್ಲಿ ಶಿಕ್ಷಣವನ್ನು ತನ್ನ ಸ್ವಾರ್ಥಕ್ಕಾಗಿ ಬಳಸುವ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪಿತೂರಿ ಏನೇ ಇದ್ದರೂ, ಆಧುನಿಕ ಭಾರತದ ನಿರ್ಮಾಣದಲ್ಲಿ ವಿಶ್ವವಿದ್ಯಾಲಯದ ಶಿಕ್ಷಣ ಮಹತ್ವದ ಪಾತ್ರವಹಿಸಿದೆ. ಈ ಶಿಕ್ಷಣ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಎಷ್ಟರ ಮಟ್ಟಿಗೆ ಸುಧಾರಿಸಿದೆಯೊ ಗೊತ್ತಿಲ್ಲ. ಆದರೆ ನಮ್ಮಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಮೂಡಿಸಿ, ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಉದಾಹರಣೆಗೆ ಕಳೆದ ಶತಮಾನದ 70–80ರ ದಶಕಗಳ ಸಾಮಾಜಿಕ ಚಳವಳಿಗಳು ಹುಟ್ಟಿಕೊಂಡು ಪೋಷಣೆ ಪಡೆದಿದ್ದು ವಿಶ್ವವಿದ್ಯಾಲಯಗಳ ಆವರಣಗಳಲ್ಲಿ. ನಮ್ಮ ಆಧುನಿಕ ಪ್ರಜ್ಞೆ ರೂಪುಗೊಂಡಿದ್ದು ವಿಶ್ವವಿದ್ಯಾಲಯದ ಶಿಕ್ಷಣದಿಂದಲೇ ಎನ್ನಬಹುದು. ಆದರೆ ಭಾರತೀಯ ವಿಶ್ವವಿದ್ಯಾಲಯಗಳು ಇನ್ನೊಂದು ಅರ್ಥದಲ್ಲಿ ಸೋಲನ್ನು ಕಂಡಿವೆ.
ಸದ್ಯದ ವಿದ್ಯಮಾನಗಳನ್ನು ಅವಲೋಕಿಸಿದರೆ, ನಮ್ಮ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಕ್ಷೇತ್ರಕ್ಕೆ ಎಳ್ಳಷ್ಟೂ ಸಂಬಂಧವಿರದ, ಬೇರೆ ಕಾರಣಗಳಿಗಾಗಿ ಜೀವ ಹಿಡಿದು ನಿಂತಂತೆ ಕಾಣಿಸುತ್ತವೆ. ರಾಜ್ಯ ಮತ್ತು ರಾಜಕೀಯದ ಹಸ್ತಕ್ಷೇಪಗಳು ಬೇರೆ. ಅಂದರೆ ಒಂದು ಶೈಕ್ಷಣಿಕ ಸಂಸ್ಥೆ (ಭಾರತೀಯ ವಿಶ್ವವಿದ್ಯಾಲಯ) ಶೈಕ್ಷಣಿಕೇತರ ಅಂಶಗಳಿಂದ ರೂಪುಗೊಳ್ಳುತ್ತಿದೆ ಎಂಬುದು ವಿಷಾದನೀಯ.
ವಿಶ್ವವಿದ್ಯಾಲಯಗಳನ್ನು ಕಟ್ಟುವ ನಮ್ಮ ಕೆಲಸ ಪ್ರಾರಂಭವಾಗಬೇಕಾದುದು ನಾವು ತಾತ್ವಿಕವಾಗಿ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಮರು ರಚಿಸಿಕೊಳ್ಳುವುದರ ಮೂಲಕ. ಇಲ್ಲಿ ಮರು-ಪರಿಕಲ್ಪನೆ ಮಾಡಿಕೊಳ್ಳುವುದು ಎಂದರೆ ವಿಶ್ವವಿದ್ಯಾಲಯವೆಂಬ ಸಂಸ್ಥೆಯ ಮೂಲ ಕಲ್ಪನೆಯನ್ನು ಮನದಟ್ಟು ಮಾಡಿಕೊಳ್ಳುವುದು, ಅದರ ತಾತ್ವಿಕ ಹಿನ್ನೆಲೆಯನ್ನು ನೆನಪಿಗೆ ತಂದುಕೊಳ್ಳುವುದು. ಇದೆಲ್ಲ ಆದರ್ಶದ ಮಾತು, ಶುಷ್ಕ ಫಿಲಾಸಫಿ, ವಾಸ್ತವಿಕವಾಗಿ ರೂಢಿಯಲ್ಲಿ ತರುವುದು ಅಸಾಧ್ಯವೆಂದು ಕೈಬಿಡುವಂತಿಲ್ಲ. ವಾಸ್ತವ ರೂಪುಗೊಳ್ಳುವುದೇ ಆದರ್ಶವೆಂಬ ಚಾವಡಿಯಲ್ಲಿ. ಇದನ್ನು ನಾವು ಎಷ್ಟು ಅರ್ಥಮಾಡಿಕೊಳ್ಳುತ್ತೇವೆಯೋ ಅಷ್ಟು ವಾಸ್ತವ ಹಸನಾಗುತ್ತದೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯದ ಪರಿಕಲ್ಪನೆ ಕುರಿತ ಕೆಲವು ಮುಖ್ಯ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ಪಶ್ಚಿಮ ಸಂಸ್ಕೃತಿಯಲ್ಲಿ ಚರ್ಚ್ ನಂತರದ ಪ್ರಾಚೀನ ಸಂಸ್ಥೆಯೆಂದರೆ ವಿಶ್ವವಿದ್ಯಾಲಯ. ಇಮಾನ್ಯುಯಲ್ ಕಾಂಟ್‌ನಂತಹ ಜರ್ಮನಿಯ ಚಿಂತಕರಿಂದ ಹಿಡಿದು, ಇತ್ತೀಚಿನ ಜಾಕ್ ಡೆರಿಡಾರಂತಹ ಪ್ರಮುಖ ದಾರ್ಶನಿಕರೆಲ್ಲರೂ ಈ ಪರಿಕಲ್ಪನೆ ಕುರಿತು ಚಿಂತನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಶಿಕ್ಷಣ ಕುರಿತು ಯೋಚಿಸುವುದೆಂದರೆ ಶಿಕ್ಷಣದ ಗುರಿ, ಪಾಠ-ಪ್ರವಚನದ ಕ್ರಮಾನುಕ್ರಮ, ಕಲಿಕೆ, ಜ್ಞಾನ ಸೃಷ್ಟಿ, ಸಂಶೋಧನೆ ಇತ್ಯಾದಿಗಳ ಸ್ವರೂಪ ಕುರಿತಂತಹ ಆಲೋಚನೆಗಳು ಎಂಬುದು ಈ ದಾರ್ಶನಿಕರ ಚರ್ಚೆಯ ಸಾರದಲ್ಲಿ ವ್ಯಕ್ತವಾಗುತ್ತವೆ. ಆದರೆ ಭಾರತದಲ್ಲಿ ವಿಶ್ವವಿದ್ಯಾಲಯಗಳ ಕುರಿತು ಯೋಚಿಸುವಾಗ, ಈ ಯಾವ ಅಂಶಗಳೂ ಪ್ರಮುಖವಾಗಿ ಚರ್ಚೆಗೊಳಗಾಗುವುದೇ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳು ಯಾವ ಯಾವ ಕಾರಣಕ್ಕಾಗಿ ಇಂದು ಸುದ್ದಿಯಲ್ಲಿವೆಯೆಂದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ!
ಇಡೀ ಜಗತ್ತಿಗೆ ಸರ್ವವ್ಯಾಪಕವಾಗಿ ಮಾದರಿಯಾಗಿರುವ ಆಧುನಿಕ ಜರ್ಮನ್ ವಿಶ್ವವಿದ್ಯಾಲಯ ರೂಪುಗೊಂಡಿದ್ದು 19ನೆಯ ಶತಮಾನದಲ್ಲಿ. ಆಧುನಿಕ ವಿಶ್ವವಿದ್ಯಾಲಯಕ್ಕೆ ತಾತ್ವಿಕ ಗೊತ್ತುಗುರಿಗಳನ್ನು ಕೊಟ್ಟವರು ಜರ್ಮನರು. ಶಿಕ್ಷಣ ತಜ್ಞ ಹುಂಬೊಲ್ಟ್ ಎನ್ನುವವನು 1811ರಲ್ಲಿ ಯೂನಿವರ್ಸಿಟಿ ಆಫ್ ಬರ್ಲಿನ್ ಸ್ಥಾಪಿಸಿದ. ವೃತ್ತಿಪರ ಶಿಕ್ಷಣದ ವಿರುದ್ಧವಾಗಿ, ಉದಾರ ಶಿಕ್ಷಣವನ್ನು (ಲಿಬರಲ್ ಎಜುಕೇಶನ್) ನೀಡುವುದು ಅದರ ಮೂಲ ಉದ್ದೇಶವಾಗಿತ್ತು. ಇಲ್ಲಿ ಕಲಿಕೆಗಾಗಿ ಕಲಿಕೆ, ಜ್ಞಾನಕ್ಕಾಗಿ ಜ್ಞಾನಾರ್ಜನೆ ಮೂಲ ಮಂತ್ರ. ಅಧ್ಯಯನ ಮಾಡುವ ವಿಷಯ ಏನೇ ಆಗಿರಲಿ ಸ್ವತಂತ್ರವಾಗಿ, ಮುಕ್ತವಾಗಿ ಆಲೋಚನೆ ಮಾಡುವ ಮನಸ್ಸುಗಳನ್ನು ಕೃಷಿಮಾಡುವುದು ಈ ವಿಶ್ವವಿದ್ಯಾಲಯ ಶಿಕ್ಷಣದ ಗುರಿ.
ಆದರೆ ಇಂದು ನಾವು ವಿಶ್ವವಿದ್ಯಾಲಯಗಳಿಂದ ಬೇಡುತ್ತಿರುವುದು ವೃತ್ತಿ ಪಡೆಯಲು ಸಹಾಯಕವಾಗುವ (ಅ) ಶಿಕ್ಷಣ. ‘ಇಂಡಸ್ಟ್ರಿ-ಅಕ್ಯಾಡಮಿಯಾ ಪಾರ್ಟ್‌ನರ್‌ಶಿಪ್’ ಎಂಬ ಘೋಷಣೆಯಡಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಹೊಂದುವ ಪಠ್ಯಕ್ರಮಗಳನ್ನು ರಚಿಸುವುದು, ಅದಕ್ಕೆ ಬೇಕಾಗಿರುವ ಭಾಷಾ ಕೌಶಲಗಳನ್ನು ಕಲಿಸುವುದು ಇತ್ಯಾದಿ ಆದ್ಯತೆಗಳು ವಿಶ್ವವಿದ್ಯಾಲಯದ ಶಿಕ್ಷಣದ ಸ್ವರೂಪಕ್ಕೆ ಅಸಮಂಜಸವೆನಿಸುತ್ತವೆ. ಹಾಗಂತ ವಿಶ್ವವಿದ್ಯಾಲಯದ ಶಿಕ್ಷಣ ಪಡೆದವರು ವೃತ್ತಿಗಳನ್ನು ಅರಸಬಾರದೆಂದು ಹೇಳುತ್ತಿಲ್ಲ. ಆದರೆ ಉದ್ಯೋಗದ ಉದ್ದೇಶಕ್ಕಾಗಿಯೆ ಇಲ್ಲಿ ದೊರಕುವ ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಮಾರ್ಪಾಡು ಮಾಡುವುದು ಉಚಿತವಲ್ಲ. ನಮ್ಮ ಎಲ್ಲ ಒಡನಾಟಗಳ ‘ಲಾಭ’ವೇನು ಎಂದು ಕೇಳುವ ಕಾಲದಲ್ಲಿರುವ ನಮಗೆ ಈ ಉದಾರ ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸುವುದು ಒಂದು ಸವಾಲೇ ಸರಿ!
ವಿಶ್ವವಿದ್ಯಾಲಯವೆನ್ನುವುದು ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕೆನ್ನುವುದು ಹುಂಬೊಲ್ಟ್ ಸೂಚಿತ ವಿಶ್ವವಿದ್ಯಾಲಯ ಮಾದರಿಯ ಹಂಬಲ. ಇಲ್ಲಿ ಸಂಸ್ಕೃತಿಯೆಂದರೆ ನಮ್ಮ ‘ಭವ್ಯ ಸಂಸ್ಕೃತಿ’ ಎಂದು ನಾವು ಬಳಸುವ ನುಡಿಗಟ್ಟಿನ ಸಂಕುಚಿತ ಅರ್ಥದಲ್ಲಿ ಅಲ್ಲ. ವೈಜ್ಞಾನಿಕ ಮತ್ತು ಪಾಂಡಿತ್ಯಪೂರ್ಣ ಜೀವನ ಸಾಗಿಸುವ ಸಂಸ್ಕೃತಿ. ಇನ್ನೊಂದು ಅರ್ಥದಲ್ಲಿ ಜ್ಞಾನಶಿಸ್ತುಗಳ ಜೊತೆ ನಮ್ಮನ್ನು ನಾವು ತೊಡಗಿಸಿಕೊಂಡು, ಅನ್ವೇಷಣೆಯ ಸಂಸ್ಕೃತಿಯನ್ನು ಸಾಕಾರಗೊಳಿಸುವುದು.
ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿಯನ್ನು ಬೆಳೆಸುವುದೆಂದರೆ ವಿದ್ವತ್ಪೂರ್ಣ ಬದುಕನ್ನು (ಸ್ಕಾಲರ್ಲಿ ಲೈಫ್) ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದು; ವಿನಯದಿಂದ ಕೂಡಿದ ವಿದ್ವಾಂಸರಾಗುವ ಸಂಸ್ಕೃತಿಯನ್ನು ನಿರ್ಮಿಸುವುದು. ವಿದ್ವತ್ ಎಂದರೆ ಓದಿನಿಂದ ಬರುವ ಒಣ ಪಾಂಡಿತ್ಯವನ್ನು ಗಳಿಸುವುದಲ್ಲ. ಕೇವಲ ವಯಸ್ಸಿನ ಅನುಭವದಿಂದ ಈ ಲೋಕದ ಬಗ್ಗೆ ತಿಳಿವಳಿಕೆಯನ್ನು ಹೊಂದುವುದು ಕಷ್ಟ. ಅನುಭವದ ಜೊತೆ ಅಧ್ಯಯನ ಮತ್ತು ಆಲೋಚನೆಯಿಂದ ಈ ಜಗತ್ತನ್ನು ಆಳವಾಗಿ ಗ್ರಹಿಸುವುದು ಪಾಂಡಿತ್ಯಪೂರ್ಣ ಬದುಕು. ಅದು ಈ ಜಗತ್ತನ್ನು ಅರಿಯಲು ಬೇಕಾಗುವ ವೈಚಾರಿಕ ಸಂಪನ್ಮೂಲ. ಈ ಸಾಮರ್ಥ್ಯ ಬೆಳೆಸುವ ತಾಣವೇ ‘ವಿಶ್ವವಿದ್ಯಾಲಯ’.
ಹುಂಬೊಲ್ಟ್‌ಕ್ಕಿಂತಲೂ ಮೊದಲು ಜರ್ಮನಿಯ ಇನ್ನೋರ್ವ ತತ್ವಜ್ಞಾನಿ ಇಮಾನ್ಯುಯಲ್ ಕಾಂಟ್ ವಿಶ್ವವಿದ್ಯಾಲಯದ ಕುರಿತು ತನ್ನದೇ ಸಿದ್ಧಾಂತ ಮಂಡಿಸಿದ್ದ. ಅವನ ಪ್ರಕಾರ ವಿಶ್ವವಿದ್ಯಾಲಯದ ಕೇಂದ್ರ ತಳಹದಿಯೆಂದರೆ ವಿವೇಕ. ತರ್ಕಬದ್ಧ ಆಲೋಚನೆ, ತಾರ್ಕಿಕ ಚಿಂತನ-ಮಂಥನ, ಪ್ರಶ್ನಿಸುವ ಮನೋಧರ್ಮ ಮುಂತಾದ ವೈಚಾರಿಕ ಕ್ರಿಯೆ-ಪ್ರಕ್ರಿಯೆಗಳು ನಡೆಯುವ ತಾಣ. ವೈಚಾರಿಕ ಅನ್ವೇಷಣೆಯನ್ನು ಕೈಗೊಳ್ಳುವುದು ಎಲ್ಲ ಜ್ಞಾನಶಿಸ್ತುಗಳ ಕಲಿಕೆಯ ಕೇಂದ್ರ ಬಿಂದು ಎಂದು ಕಾಂಟ್ ಹೇಳುತ್ತಾನೆ.
ಈ ಜಗತ್ತನ್ನು ಗ್ರಹಿಸುವಾಗ ಕೆಲವೊಮ್ಮೆ ಅನುಭವಗಳು ನಮ್ಮ ದಿಕ್ಕನ್ನು ತಪ್ಪಿಸುತ್ತವೆ. ಆಗ ನಮ್ಮ ಗ್ರಹಿಕೆಗಳನ್ನು ಕ್ರಮಬದ್ಧವಾಗಿ ಆಲೋಚನೆ ಮಾಡುವುದರ ಮೂಲಕ ಹದಗೊಳಿಸಿ ಸಮಂಜಸವಾದ ಲೋಕಜ್ಞಾನವನ್ನು ಪಡೆಯಬೇಕಾಗುತ್ತದೆ. ಹೀಗೆ, ನಮ್ಮ ಅರಿವನ್ನು ತರಬೇತುಗೊಳಿಸುವುದು ವಿಶ್ವವಿದ್ಯಾಲಯ ಶಿಕ್ಷಣದ ಗುರಿ. ಆಗ ಇಲ್ಲಿ ಅರಿವೇ ಗುರು. ವಿಶಾಲವಾದ ಅರ್ಥದಲ್ಲಿ ಇದೇ ವಿಜ್ಞಾನ. ಆಲೋಚನೆಗೆ ಅನುವು ಮಾಡಿಕೊಡದ ಮಾಧ್ಯಮಗಳ ಭರಾಟೆಯ ಸಮಕಾಲೀನ ಬದುಕಿನಲ್ಲಿ, ಆಲೋಚನೆಗೆ ಅನುವು ಮಾಡಿಕೊಡುವ ಅಗತ್ಯ ಪರಿಸ್ಥಿತಿಗಳನ್ನು ಸೃಷ್ಟಿಸುವುದು ಹೇಗೆಂದು ವಿಚಾರ ಮಾಡುವುದು ವಿಶ್ವವಿದ್ಯಾಲಯ ಪರಿಕಲ್ಪನೆಯಲ್ಲಿ ಮುಖ್ಯವಾದುದು. ಹಾಗಾಗಿ ಸೆಮೆಸ್ಟರ್ ಪದ್ಧತಿಯಲ್ಲಿ ನರಳುತ್ತಿರುವ ವಿಶ್ವವಿದ್ಯಾಲಯದ ಕೊಠಡಿಗಳನ್ನು ಆಲೋಚನೆಗೆ ಅನುವು ಮಾಡಿಕೊಡುವ ಸ್ಥಳಗಳನ್ನಾಗಿಸಬೇಕಾಗಿದೆ. ಇದಕ್ಕಾಗಿ, ವಿಶ್ವವಿದ್ಯಾಲಯವನ್ನು ಕಟ್ಟುವ ಪರಿಕಲ್ಪನೆ ಈಗ ನಮಗೆ ಅಗತ್ಯ. ಇದು ವಿಶ್ವವಿದ್ಯಾಲಯದ ಕಟ್ಟಡಗಳನ್ನು ಕಟ್ಟುವ ಪರಿಕಲ್ಪನೆ ಅಲ್ಲ! ಹಾಗಾದರೆ, ಭಾರತದಲ್ಲಿ ವಿಶ್ವವಿದ್ಯಾಲಯಗಳನ್ನು ಮರುರೂಪಿಸುವುದು ಹೇಗೆ?
ವಿಶ್ವವಿದ್ಯಾಲಯವೆಂಬ ಸಂಸ್ಥೆ ಅನ್ಯ ಸಂಸ್ಕೃತಿಯಿಂದ ಬಂದುದರಿಂದ ಇದರ ಪರಿಕಲ್ಪನೆ ಅರ್ಥ ಮಾಡಿಕೊಂಡು ಇಂದಿನ ನಮ್ಮ ವಿಶ್ವವಿದ್ಯಾಲಯಗಳನ್ನು ಕಟ್ಟಬೇಕಾಗಿದೆ ಎಂಬುದನ್ನ ವಿಶ್ವವಿದ್ಯಾಲಯ ಶಿಕ್ಷಣದ ಪಾಲುದಾರರೆಲ್ಲರೂ ಅರಿತುಕೊಳ್ಳಬೇಕಾಗಿದೆ. ವಿಶ್ವವಿದ್ಯಾಲಯ ಶಿಕ್ಷಣದ ಅಂತಃಸತ್ವವನ್ನು ಅರಿಯದೇ, ಅದರ ರಾಚನಿಕ ಬದಲಾವಣೆ ತರುವುದು ಕಷ್ಟ. ವಿಶ್ವವಿದ್ಯಾಲಯವೆಂದರೆ ತಾಲ್ಲೂಕು ಕಚೇರಿಯಂತೆ ಅಲ್ಲ, ಸಂಸ್ಕೃತಿಯನ್ನು ಮತ್ತು ವಿವೇಕವನ್ನು ರೂಢಿಸಿಕೊಳ್ಳುವ ತಾಣ. ಇದರ ಪಾಲುದಾರರಾದ ನಾವೆಲ್ಲರೂ ಈ ತಾತ್ವಿಕ ಪರಿಕಲ್ಪನೆಯನ್ನು ಜಾರಿಗೊಳಿಸುವಲ್ಲಿ ಸಹಾಯ ಮಾಡಬೇಕು. ಇಲ್ಲಿಯ ಅಧ್ಯಾಪಕರನ್ನು ಕೇವಲ ಸರ್ಕಾರಿ ನೌಕರರಂತೆ ನೋಡದೇ, ಅವರನ್ನು ಅನ್ವೇಷಕರನ್ನಾಗಿ, ಜ್ಞಾನ ಪ್ರಸರಣದ ಮಾಧ್ಯಮಗಳನ್ನಾಗಿ, ಸಂಸ್ಕೃತಿ ಬೆಳೆಸುವ, ತರ್ಕಬದ್ಧ ಆಲೋಚನೆ ಮತ್ತು ಶೋಧನೆಯನ್ನು ಕಲಿಸುವ ವಿಷಯ ತಜ್ಞರೆಂದು ನಾವು ಗುರುತಿಸುವುದು ಒಳಿತು. ಇಲ್ಲಿಯ ವಿದ್ಯಾರ್ಥಿಗಳು ನಾವು ವಿಶ್ವವಿದ್ಯಾಲಯಕ್ಕೆ ಹೋಗುವುದೆಂದರೆ ಕೇವಲ ನೌಕರಿಗೆ ಬೇಕಾಗಿರುವ ಅಂಕಗಳನ್ನು ಪಡೆಯಲೋಸ್ಕರ ಅಲ್ಲ, ಅಧ್ಯಯನ ಮತ್ತು ಅನ್ವೇಷಣೆಗಳ ಸಂಸ್ಕೃತಿಯನ್ನು ರೂಢಿಸಿಕೊಂಡು, ವಿವೇಕವನ್ನು ಬೆಳೆಸಿಕೊಳ್ಳಲು, ಶೋಧನೆ ಮಾಡುವುದನ್ನು ಕಲಿಯಲು ಬಂದಿದ್ದೇವೆ ಎಂಬ ಮನೋಭಾವ ಹೊಂದಬೇಕಾಗಿದೆ. ಅಷ್ಟಾಗಿಯೂ ನೌಕರಿಗಳು ಸಿಕ್ಕೇ ಸಿಗುತ್ತವೆ!
ಜಗತ್ತಿನಾದ್ಯಂತ ಶ್ರೇಷ್ಠಮಟ್ಟದ ವಿಶ್ವವಿದ್ಯಾಲಯದ ವ್ಯವಸ್ಥೆ ರೂಪುಗೊಂಡಿರುವ ಇತಿಹಾಸವೂ ನಮ್ಮ ಮುಂದಿದೆ. ಜರ್ಮನ್ ದೇಶವನ್ನು ಕಟ್ಟುವುದಾದರೆ ಗ್ರೀಕರ ವೈಚಾರಿಕ ಕೇಂದ್ರವಾದ ಅಥೆನ್ಸ್ ಹಾಗೆ ಕಟ್ಟಬೇಕೆಂದು ಒಬ್ಬ ಕಲಾಕಾರ ಅಥೆನ್ಸ್ ಪಟ್ಟಣದ ವರ್ಣಚಿತ್ರವನ್ನು ಸಾಂಕೇತಿಕವಾಗಿ ಜರ್ಮನ್ ರಾಜನಿಗೆ ಕೊಟ್ಟಿದ್ದನಂತೆ. ಅಂತೆಯೇ ಜರ್ಮನ್‌ರ ವಿಶ್ವವಿದ್ಯಾಲಯದ ಪರಿಕಲ್ಪನೆಗಳಾದ ‘ಸಂಸ್ಕೃತಿ’ ಮತ್ತು ‘ವಿವೇಕ’ಗಳು ಗ್ರೀಕ್ ವಿಚಾರಧಾರೆಯಿಂದ ಸ್ಫೂರ್ತಿಯನ್ನು ಪಡೆದುಕೊಂಡಿದ್ದವು. ವಿಶ್ವವಿದ್ಯಾಲಯದ ಆದರ್ಶ ಪರಿಕಲ್ಪನೆಯ ತಳಪಾಯಗಳಿರುವುದು ಪ್ಲೇಟೋನ ‘ಅಕ್ಯಾಡಮಿ’ ಹಾಗೂ ಅರಿಸ್ಟಾಟಲ್‌ನ ‘ಲೈಸಿಯಮ್’ನಲ್ಲಿ. ಕಾಂಟ್‌ನ ತಾರ್ಕಿಕ ಅನ್ವೇಷಣೆಯ ಮೂಲ ಸೆಲೆ ಇರುವುದು ಸಾಕ್ರೆಟಿಸ್‌ನ ಶಿಕ್ಷಣಶಾಸ್ತ್ರದಲ್ಲಿ. ಅಶೋಧಿತ ಜೀವನ ಜೀವನವೇ ಅಲ್ಲ ಎಂದು ಸಾಕ್ರೆಟಿಸ್ ಸಾರುತ್ತಿದ್ದ. ಜಗತ್ತನ್ನು ಪ್ರಶ್ನಿಸಿ, ಶೋಧಿಸಿ, ಲೋಕಜ್ಞಾನವನ್ನು ಪಡೆಯುವ ಸಾಕ್ರೆಟಿಸ್ ಮಾದರಿ ಆದರ್ಶ ವಿಶ್ವವಿದ್ಯಾಲಯದ ಮಾದರಿ. ಲೋಕರೂಢಿಯ ಅಭಿಪ್ರಾಯಗಳನ್ನು ಒರೆಗೆ ಹಚ್ಚುವ ಮನೋವೃತ್ತಿ ಇದಾಗಿದೆ. ಈಗ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯದ ವ್ಯವಸ್ಥೆ ಹೊಂದಿದ ಅಮೆರಿಕ ಕೂಡಾ ತನ್ನ ವಿಶ್ವವಿದ್ಯಾಲಯಗಳನ್ನು ಕಟ್ಟಿಕೊಂಡಿದ್ದು ಜರ್ಮನ್ ಮಾದರಿ ಮೇಲೆಯೇ. ಈ ಐತಿಹಾಸಿಕ ಅನುಸಂಧಾನದಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ.
(ಲೇಖಕ ಪ್ರಾಧ್ಯಾಪಕ, ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗ, ತುಮಕೂರು ವಿಶ್ವವಿದ್ಯಾಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.