ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ- ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ- ಕುವೆಂಪು.
ಕೇಂದ್ರ ಸರ್ಕಾರವು ತ್ರಿಭಾಷಾ ಸೂತ್ರದಲ್ಲಿ ಕಡ್ಡಾಯ ಹಿಂದಿ ಕಲಿಕೆಯ ಪ್ರಸ್ತಾವವನ್ನು ಕೈಬಿಟ್ಟಿದೆಯಾದರೂ ಪರಿಷ್ಕೃತ ಶಿಕ್ಷಣ ನೀತಿಯ ಕರಡು ಸಂಹಿತೆಯಲ್ಲಿ ಕೆಲವು ಮೂಲ ಸಮಸ್ಯೆಗಳು ಹಾಗೆಯೇ ಉಳಿದುಬಿಟ್ಟಿವೆ. ಮಾತ್ರವಲ್ಲ, ಕೆಲವು ಹೊಸ ಸಮಸ್ಯೆಗಳೂ ತಲೆದೋರಿವೆ. ಇಂದು, ಈ ತ್ರಿಭಾಷಾ ಸೂತ್ರದ ಔಚಿತ್ಯವನ್ನು ಮತ್ತೊಮ್ಮೆ ಮರುವಿವೇಚಿಸಬೇಕಾಗಿದೆ.
ನಾಡಿನ ಶಾಲಾ ಮಕ್ಕಳು ತ್ರಿಭಾಷಾ ಸೂತ್ರದ ಅಡಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಮತ್ತೊಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ‘ತನ್ನಿಚ್ಛೆಯ ಭಾಷೆ ಆಯ್ಕೆ ಮಾಡಿಕೊಳ್ಳಬಹುದು’ ಎಂಬ ಔದಾರ್ಯದ ಸಾಲು ಪರಿಷ್ಕೃತ ಕರಡು ಸಂಹಿತೆಯಲ್ಲಿ ಇದೆಯಾದರೂ ಅಂತಹ ‘ಇಚ್ಛೆಯ’ ಭಾಷೆಯನ್ನು ಕಲಿಸುವ ವ್ಯವಸ್ಥೆ ನಮ್ಮಲ್ಲೆಲ್ಲಿದೆ? ಗಡಿಭಾಗದ ಮಕ್ಕಳು ಮರಾಠಿಯನ್ನೋ, ತೆಲುಗನ್ನೋ, ತಮಿಳನ್ನೋ ಆಯ್ಕೆ ಮಾಡಿಕೊಳ್ಳಬಹುದಾದರೂ ರಾಜ್ಯದೊಳಗಿನ ಬಹುಸಂಖ್ಯಾತ ಮಕ್ಕಳು ಅನಿವಾರ್ಯವಾಗಿ ಹಿಂದಿಯನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ಹಿಂದಿ ಕಡ್ಡಾಯವೆಂದು ಪ್ರತ್ಯಕ್ಷವಾಗಿ ಹೇಳದಿದ್ದರೂ ಹಿಂದಿ ಕಲಿಕೆ ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಪರೋಕ್ಷವಾಗಿ ನಿರ್ಮಿಸುವ ಸರ್ಕಾರದ ಒಂದು ಹುನ್ನಾರವೇ ಎಂಬ ಸಂದೇಹ ಮೂಡಿಸುತ್ತದೆ.
ತ್ರಿಭಾಷಾ ಸೂತ್ರ ಮೊದಲ ಸಲ ಜಾರಿಯಾದಾಗ ಕುವೆಂಪು 1968ರಲ್ಲೇ ಅದರ ವಿರುದ್ಧ ಧ್ವನಿ ಎತ್ತಿದ್ದರು. ಮಾತ್ರವಲ್ಲ, ಆಗ ಮೈಸೂರು ವಿಶ್ವವಿದ್ಯಾಲಯ ತನ್ನ ಪಠ್ಯಕ್ರಮದಲ್ಲಿ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲು ಕುವೆಂಪು ಅವರೇ ಪ್ರೇರೇಪಣೆಯಾಗಿದ್ದರು (ಕುವೆಂಪು ಸಮಗ್ರ ಗದ್ಯ 2, ಪುಟ 397). ಆದಾಗ್ಯೂ ರಾಜಕೀಯ ಒತ್ತಡದಿಂದಲೋ ಅಥವಾ ನಮ್ಮ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಲೋ ಆನಂತರದ ದಿನಗಳಲ್ಲಿ ನಾವು ಈ ಸೂತ್ರವನ್ನು ಒಪ್ಪಿಕೊಂಡೆವು.
ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆಯಲ್ಲ ಎಂಬ ಒಂದೇ ಕಾರಣಕ್ಕಾಗಿ ಕುವೆಂಪು, ಅಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದರು. ಅಲ್ಲದೆ, ಕುವೆಂಪು ಕಾಲದಲ್ಲಿ ಮತ್ತು ಅವರಿಗೂ ಹಿಂದಿನ ಕಾಲದಲ್ಲಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು. ಶಾಲಾ ಕಾಲೇಜು ಮೆಟ್ಟಿಲು ಹತ್ತುವವರ ಸಂಖ್ಯೆಯೇ ಬಹಳ ಕಡಿಮೆ ಇದ್ದುದರಿಂದ, ಒಬ್ಬೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಕಾಳಜಿ ತೋರಿಸಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಇಂದು ಪ್ರೌಢಶಾಲಾ ಹಂತಕ್ಕೆ ಪದಾರ್ಪಣೆ ಮಾಡುವ ಮಕ್ಕಳ ಪೈಕಿ ಶೇಕಡ 70ರಷ್ಟು ಮಕ್ಕಳು ಒಂದೇ ಒಂದು ಭಾಷೆಯನ್ನೂ ತಪ್ಪಿಲ್ಲದೆ ಓದುವ, ಬರೆಯುವ, ಸಂವಹಿಸುವ ಕೌಶಲ ಸಿದ್ಧಿಸಿಕೊಂಡಿರುವುದಿಲ್ಲ ಎಂದು ಸಮೀಕ್ಷೆಗಳು ಹೇಳುತ್ತವೆ. ಒಂದು ಭಾಷೆಯನ್ನೂ ಸರಿಯಾಗಿ ಕಲಿಯಲಾಗದವರ ಮೇಲೆ ಮೂರು ಭಾಷೆಗಳನ್ನು ಹೇರಬೇಕೆಂಬ ಆಯೋಗದ ಸಲಹೆ ‘ನೀರಿಳಿಯದ ಗಂಟಲೊಳ್...’ ಎಂಬ ಮುದ್ದಣನ ಸಾಲನ್ನು ನೆನಪಿಸುತ್ತದೆ. ಮೂರು ಭಾಷೆಗಳನ್ನು ಕಲಿಯಲು ತೊಡಗಿಸುವ ಶ್ರಮವನ್ನು ಒಂದೇ ಭಾಷೆಯ ಕಲಿಕೆಗೆ ತೊಡಗಿಸುವುದು ಉಚಿತವಲ್ಲವೇ?
ಅಲ್ಲದೆ, ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ಮುನ್ನ ಹೊಸ ಭಾಷೆಯನ್ನು ವೈಜ್ಞಾನಿಕವಾಗಿ ಕಲಿಸುವ ಜ್ಞಾನಶಿಸ್ತನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದರ ನೆರವಿನಿಂದ ಹೊಸ ಭಾಷೆಗಳನ್ನು ಸಮರ್ಥವಾಗಿ ಕಲಿಸುವ ವೃತ್ತಿಪರ ಬೋಧಕ ವರ್ಗವನ್ನು ಸಜ್ಜುಗೊಳಿಸಬೇಕಾಗುತ್ತದೆ. ಹೀಗೆ ವ್ಯವಸ್ಥಿತವಾಗಿ ಮೂರನೆಯ ಭಾಷೆಯನ್ನು ಕಲಿತ ನಂತರ ಆ ಕಲಿಕೆಗೆ ಕಾಯಕಲ್ಪ ಹೇಗಾಗು
ತ್ತದೆ ಎಂಬ ಕುರಿತೂ ನಾವು ಆಲೋಚಿಸಬೇಕಾಗುತ್ತದೆ.
ಹಿಂದಿಯನ್ನೋ, ಸಂಸ್ಕೃತವನ್ನೋ ಮೂರನೆಯ ಭಾಷೆಯಾಗಿ ಕಲಿತ ಒಬ್ಬ ವಿದ್ಯಾರ್ಥಿಗೆ, ಮುಂದೆ ತನ್ನ ವೃತ್ತಿ ಜೀವನದಲ್ಲಿ ಆ ಭಾಷಾ ಕಲಿಕೆಯು ಪ್ರಯೋಜನಕ್ಕೆ ಬಾರದೆ ಹೋದಾಗ ಆ ಕಲಿಕೆಯೇ ವ್ಯರ್ಥವಾಗುತ್ತದೆ; ಆ ಕಲಿಕೆಗೆ ವ್ಯಯಿಸಿದ ಸಮಯ, ಶ್ರಮ, ಹಣ ಎಲ್ಲವೂ ಹಾಳಾಗುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ವಿದ್ಯೆಗೂ, ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳುವ ಕೌಶಲಗಳಿಗೂ ಅರ್ಥಾರ್ಥ ಸಂಬಂಧ ಇರುವುದಿಲ್ಲ. ಮ್ಯಾಕ್ ಕಿನ್‍ಸೇ ಸರ್ವೇಕ್ಷಣಾ ವರದಿಯ ಪ್ರಕಾರ, ಭಾರತದ ಶೇ 75ರಷ್ಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗಾರ್ಹತೆಗೆ (ಎಂಪ್ಲಾಯಬಿಲಿಟಿ) ಅನರ್ಹರಾಗಿದ್ದಾರೆ. ಅಂದರೆ ಶಾಲಾ ಕಾಲೇಜಿನಲ್ಲಿ ಅವರು ಕಲಿತ ಶಿಕ್ಷಣ ಅವರ ವೃತ್ತಿಬದುಕಿನಲ್ಲಿ ಅನುಪಯುಕ್ತವಾಗುತ್ತಿದೆ. ಶಿಕ್ಷಣ ತಜ್ಞರು ಎನಿಸಿಕೊಂಡವರು ಇಂತಹ ಅನುಪಯುಕ್ತ ಕಲಿಕೆಯ ಸಾಲಿನಲ್ಲಿ ಭಾಷಾ ಕಲಿಕೆಯನ್ನೂ ನಿಲ್ಲಿಸಬಾರದು.
ಆದರೆ ಅದಾವ ಕಾರಣಕ್ಕೋ ಮೂರನೆಯ ಭಾಷೆಯನ್ನು ಉಳಿಸಿಕೊಳ್ಳಲು (ಅಂದರೆ ಅಪಮಾರ್ಗದಲ್ಲಾದರೂ ಹಿಂದಿಯನ್ನು ತುರುಕಲು) ಕಾಣದ ಕೆಲವು ಹಿತಾಸಕ್ತಿಗಳು ಸರ್ವಪ್ರಯತ್ನ ಮಾಡುತ್ತಿವೆ. ಒಂದು ಭಾಷೆಗೆ ಅಪಮಾರ್ಗದ ಮೂಲಕ ರಾಷ್ಟ್ರಭಾಷೆಯ ಸ್ಥಾನಮಾನ ಗಿಟ್ಟಿಸಿಕೊಡುವ ಪ್ರಯತ್ನ ನಿಜಕ್ಕೂ ಶೋಚನೀಯ. 2ರಿಂದ 8ರ ಹರೆಯದವರೆಗಿನ ಮಕ್ಕಳು ಬಹು ಸುಲಭವಾಗಿ ಹಲವು ಭಾಷೆಗಳನ್ನು ಕಲಿಯುವ ಕಾರಣ, ಪ್ರಾರಂಭದಲ್ಲೇ ಹಲವು ಭಾಷೆಗಳನ್ನು ಕಲಿಸುವುದು ಉಪಯುಕ್ತ ಎಂದು ಸಮಿತಿಯ ವರದಿ ಅಭಿಪ್ರಾಯಪಡುತ್ತದೆ. ಸಮಿತಿಯ ಈ ಅಭಿಪ್ರಾಯದಲ್ಲೇ ಕೆಲವು ಗುರುತರವಾದ ದೋಷಗಳಿವೆ. ಅವರು ಚಾಮ್‍ಸ್ಕಿಯ ಭಾಷಾ ಗ್ರಹಿಕೆಯ ಸಿದ್ಧಾಂತವನ್ನು (ಲ್ಯಾಂಗ್ವೇಜ್ ಅಕ್ವಿಸಿಷನ್ ಥಿಯರಿ) ತಪ್ಪಾಗಿ ಅರ್ಥೈಸಿದಂತಿದೆ.
ಮೊದಲನೆಯದಾಗಿ, ಬಹುಭಾಷಿಕ ವಾತಾವರಣದಲ್ಲಿ ಸಹಜವಾಗಿ ಬೆಳೆಯುವ ಮಕ್ಕಳು ಆ ಹಲವು ಭಾಷೆಗಳನ್ನು ಏಕಕಾಲಕ್ಕೆ ಲೀಲಾಜಾಲವಾಗಿ ಮೈಗೂಡಿಸಿಕೊಳ್ಳುತ್ತವೆ ಎಂಬ ಮಾತನ್ನು ಭಾಷಾವಿಜ್ಞಾನಿಗಳು ಒಪ್ಪುತ್ತಾರೆ. ಆದರೆ ಅದೇ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಉಪಾಧ್ಯಾಯನ ಪಾಠ ಕೇಳಿ, ಪಠ್ಯಪುಸ್ತಕ ಓದಿ, ಅಜ್ಞಾತವಾದ ಹೆಚ್ಚುವರಿ ಭಾಷೆಗಳನ್ನು ಕಲಿಯಬಲ್ಲವು ಎಂಬ ವಾದವನ್ನು ಯಾವ ಭಾಷಾವಿಜ್ಞಾನಿಯೂ ಒಪ್ಪಲಾರ.
ಭಾಷಾ ಕಲಿಕೆ ಅತ್ಯಗತ್ಯ ಎನಿಸಿದರೆ ಯಾವ ವಯೋಮಾನದಲ್ಲೂ ಕಲಿಕೆ ಅಸಾಧ್ಯವಲ್ಲ. ಕನ್ನಡ ಕಾದಂಬರಿಗಳ ಪಿತಾಮಹರಾದ ಬಿ. ವೆಂಕಟಾಚಾರ್ಯರು ತಮ್ಮ ಮಧ್ಯವಯಸ್ಸಿನಲ್ಲಿ ಬರೀ ಆರೇ ತಿಂಗಳಲ್ಲಿ ಬಂಗಾಳಿ ಭಾಷೆ ಕಲಿತರು. ಜಿ.ಪಿ. ರಾಜರತ್ನಂ ಅವರು ಕಾಲೇಜು ಶಿಕ್ಷಣ ಮುಗಿದ ನಂತರ ಪಾಳೀ, ಪ್ರಾಕೃತಗಳನ್ನು ಕಲಿತರಲ್ಲದೆ ಆ ಭಾಷೆಗಳಲ್ಲಿ ಪ್ರಾವೀಣ್ಯವನ್ನೂ ಗಳಿಸಿದರು.
ಸಂಸ್ಕೃತವು ಭಾರತದ ಎಲ್ಲ ಭಾಷೆಗಳ ಮೇಲೂ ಪ್ರಭಾವ ಬೀರಿರುವ ಕಾರಣ ಆ ಭಾಷೆಯನ್ನು ಕಲಿಸುವ ಪ್ರಸ್ತಾಪವೂ ಕರಡು ಪ್ರತಿಯಲ್ಲಿದೆ. ಸಂಸ್ಕೃತವು ಭಾರತದ ಅಧಿಕೃತ ಭಾಷೆಯಾಗಬೇಕು ಎಂದು ಡಾ. ಅಂಬೇಡ್ಕರ್ ಬಹುಹಿಂದೆಯೇ ಅಭಿಪ್ರಾಯಪಟ್ಟಿದ್ದರು. ಸದ್ಯಕ್ಕೆ ಸಂಸ್ಕೃತ ಭಾಷೆಯನ್ನಲ್ಲದಿದ್ದರೂ ಕೊನೆಯ ಪಕ್ಷ ಸಂಸ್ಕೃತಸಾಹಿತ್ಯವನ್ನು ಸ್ಥಳೀಯ ಭಾಷೆಗಳ ಮೂಲಕ ಪರಿಚಯಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. ಈಗ ಸಂಸ್ಕೃತವನ್ನು ಭಾಷಾ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಅದನ್ನು ಇಂಗ್ಲಿಷ್ ಇಲ್ಲವೇ ಕನ್ನಡದ ಮೂಲಕ ಕಲಿಯುತ್ತಿದ್ದಾರಲ್ಲದೆ, ಸಂಸ್ಕೃತವನ್ನು ಸುಲಲಿತವಾಗಿ ಮಾತನಾಡುವ ಕೌಶಲ
ವನ್ನೇನೂ ಅವರು ಗಳಿಸುತ್ತಿಲ್ಲ. ಫ್ರಾನ್ಸ್, ಜರ್ಮನಿಗಳ ಹಾಗೆ ದೇಶಭಾಷೆಯ ಮೂಲಕವೇ ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂದು ಕುವೆಂಪು ಸಹ ಹಿಂದೆ ಸಲಹೆ ನೀಡಿದ್ದುಂಟು. ಸಂಸ್ಕೃತ ಕಾವ್ಯ-ನಾಟಕಗಳನ್ನು ಸ್ಥಳೀಯ ಭಾಷೆಯಲ್ಲಿ ಪರಿಚಯಿಸುವುದರಿಂದ ಮೂರನೆಯದಾಗಿ ಹೊಸದೊಂದು ಭಾಷೆಯನ್ನು ಕಲಿಯುವ ಹೊರೆ ನಮ್ಮ ಮಕ್ಕಳಿಗೆ ತಪ್ಪುತ್ತದೆ. ಸಂಸ್ಕೃತವನ್ನು ಒಂದು ನಿರ್ದಿಷ್ಟ ಜಾತಿಗೂ; ರಾಮಾಯಣ ಮಹಾಭಾರತ, ರಘುವಂಶ, ಶಾಕುಂತಲ, ಬುದ್ಧಚರಿತೆ ಮುಂತಾದ ಕಾವ್ಯಗಳನ್ನು ನಿರ್ದಿಷ್ಟ ಧರ್ಮಕ್ಕೂ ಸೀಮಿತಗೊಳಿಸುವ ನಮ್ಮ ಪೂರ್ವಗ್ರಹವನ್ನು ಬದಿಗಿರಿಸಿ ಈ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಸಬೇಕಿದೆ.
ಲೇಖಕ: ಸಹಾಯಕ ಪ್ರಾಧ್ಯಾಪಕ ಜ್ಯೋತಿನಿವಾಸ್ ಕಾಲೇಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.