‘ಗಾಂಧೀಜಿ ಹುಟ್ಟಿದ ದಿನಾಂಕ ಯಾವುದು?’ ‘ವಿವೇಕಾನಂದರು ಜನಿಸಿದ್ದು ಯಾವಾಗ?’
ಈ ಪ್ರಶ್ನೆಗಳನ್ನು ಕೇಳಿದಾಕ್ಷಣ ಉತ್ತರ ಹೇಳಲು ಯಾರಿಗೂ ಮಾಹಿತಿ ಇರಲೇಬೇಕೆಂದಿಲ್ಲ ಬಿಡಿ. ಆದರೆ ಶಿಕ್ಷಕರಿಗಾದರೂ ತಿಳಿದಿರಬೇಕೆಂಬುದು ಶಿಕ್ಷಣ ಮಂತ್ರಿಗಳ ನಿರೀಕ್ಷೆ. ಉತ್ತರ ಗೊತ್ತಿಲ್ಲದೆ ತಬ್ಬಿಬ್ಬಾದ ಶಿಕ್ಷಕರು ಮಾಧ್ಯಮಗಳ ಮುಂದೆ ತತ್ತರಿಸಿದ್ದು ಇತ್ತೀಚಿನ ಸುದ್ದಿ. ಇದರಿಂದ ಏನಾಯಿತು? ಸಚಿವರು ಜಾಣರಿದ್ದಾರೆ, ಆದರೆ ಶಿಕ್ಷಕರು ಪ್ರಯೋಜನಕ್ಕಿಲ್ಲ ಎಂಬ ಸಂದೇಶ ಹರಿದಾಡಿತು.
ಪರಿಣಾಮದಲ್ಲಿ ಏನೂ ಸುಧಾರಣೆಯಾಗಿಲ್ಲ. ಬದಲಾಗಿ ಮಂತ್ರಿಗಳು ಶಿಕ್ಷಕರನ್ನು ಗಟ್ಟಿಯಾಗಿ ಬೈದದ್ದು ಹಾಗೂ ಶಿಕ್ಷಕರು ತಮ್ಮ ತಮ್ಮೊಳಗೆ ಮಂತ್ರಿಗಳನ್ನು ಗುಟ್ಟಾಗಿ ಬೈದದ್ದಷ್ಟೇ ನಡೆಯಿತು. ಆದರೆ ಎಲ್ಲಿಯಾದರೂ ಶಿಕ್ಷಕರು ಕಲಿಯುವುದಕ್ಕೆ ಹೊರಟಿದ್ದಾರಾದರೆ ನಿಜಕ್ಕೂ ಅದು ಗುಣಾತ್ಮಕ ಬೆಳವಣಿಗೆ. ಹಾಗೆಂದು ಎಲ್ಲರ ಬಗ್ಗೆ ಅಂತಹ ನಿರೀಕ್ಷೆ ಇರಿಸಿಕೊಳ್ಳುವುದು ಅತಿಯೆನಿಸೀತು.
ಇಲ್ಲಿ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಗಾಂಧೀಜಿಗೂ ವಿವೇಕಾನಂದರಿಗೂ ಕನ್ನಡಕ್ಕೂ ಏನು ಸಂಬಂಧ? ತಾವು ಮೊದಲು ಕೇಳಿದ ಪ್ರಶ್ನೆಯನ್ನೇ ಸಚಿವರು ಒಂದಿಷ್ಟು ಮುಂದುವರಿಸುತ್ತಿದ್ದರೆ ಅದೊಂದು ಪಾಠವಾಗುತ್ತಿತ್ತು. ಏಕೆಂದರೆ ಬಹಳ ಮುಖ್ಯವಾದ ಸಂಬಂಧ ಇದೆ. ವಿವೇಕಾನಂದರು ಹೇಳಿದರು: ಅಜ್ಞಾನ ಮತ್ತು ಮೂಢನಂಬಿಕೆಗಳೇ ನಮ್ಮ ಹಿಂದುಳಿದಿರುವಿಕೆಗೆ ಕಾರಣ. ಅವನ್ನು ಹೋಗಲಾಡಿಸಲು ಪ್ರತಿಯೊಬ್ಬರಲ್ಲೂ ಹುದುಗಿರುವ ಚೈತನ್ಯವನ್ನು ಹೊರಗೆಳೆಯುವ ಶಿಕ್ಷಣದ ಪ್ರಕ್ರಿಯೆ ದೇಶವ್ಯಾಪಿಯಾಗಿ ಆಗಬೇಕು.
ಗಾಂಧೀಜಿಯವರು ಮೂಲ ಶಿಕ್ಷಣದ ಪ್ರತಿಪಾದಕರು. ಅದು ಪ್ರಾದೇಶಿಕ ಭಾಷೆಗಳಲ್ಲೇ ಆಗಬೇಕು. ನಮ್ಮ ನಮ್ಮ ಭಾಷೆಯಲ್ಲಿ ಜ್ಞಾನ ಸಂಪಾ-ದನೆ ಆಗುವುದಿಲ್ಲ ಎನ್ನುತ್ತ ಅದು ಇಂಗ್ಲಿಷ್ ನಿಂದ ಆಗಬೇಕೆಂಬುದು ದಾಸ್ಯದ ಸಂಕೇತ. ಈ ಮಾನಸಿಕ ದೌರ್ಬಲ್ಯದಿಂದ ಹೊರಗೆ ಬನ್ನಿ ಎಂದರು. ಈ ಸಂಗತಿ ಶಿಕ್ಷಕರಿಗೆ ಗೊತ್ತಿದೆಯೇ ಎಂಬುದು ಮುಖ್ಯ. ಅವರಿಗೆ ಗೊತ್ತು ಮಾಡಬೇಕಾದ ಶಿಕ್ಷಣ ಇಲಾಖೆಗಾದರೂ ಗೊತ್ತಿದೆಯೆ? ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲೇ ಕಲಿಸಿ ಉತ್ತಮವಾಗಿ ಇಂಗ್ಲಿಷನ್ನೂ ಕಲಿಸಿದರೆ ನಮ್ಮ ಮಕ್ಕಳು ಬದುಕಿನಲ್ಲಿ ಸೋಲುವುದಿಲ್ಲ ಎಂದು ಹೇಳಲು ವಿವೇಕಾನಂದರ ಮತ್ತು ಗಾಂಧೀಜಿಯವರ ಸಂದೇಶ ಸಾಕು.
ಈ ಸಂದೇಶದ ಬಗ್ಗೆ ತಿಳಿಯದೆ ಹುಟ್ಟಿದ ದಿನಾಂಕದ ಬಗ್ಗೆ ಕೇಳಿ ಏನು ಸುಖ?
ಜ್ಞಾನದ ಬೆಳಕನ್ನು ಪಡೆಯಲು ಭಾಷೆಯೇ ಮೂಲ. ಪ್ರತಿಯೊಂದು ಸಮಾಜದಲ್ಲಿ ಪ್ರಾದೇಶಿಕ ಭಾಷೆಯು ಅನೇಕ ಸ್ತರಗಳಲ್ಲಿ ಕಾರ್ಯಾತ್ಮಕವಾಗಿರುತ್ತದೆ. ನಮ್ಮ ಕನ್ನಡವೂ ಹಾಗೇ. ಅದು ಜನರ ಆಡುಮಾತಿನಲ್ಲಿರುತ್ತದೆ, ವ್ಯವಹಾರದಲ್ಲಿರುತ್ತದೆ, ಸಮಾಚಾರದ ಸಂಭಾಷಣೆಯಲ್ಲಿರುತ್ತದೆ, ಪತ್ರೋತ್ತರಗಳಲ್ಲಿರುತ್ತದೆ, ಪ್ರೇಮಿಗಳ ಸಲ್ಲಾಪದಲ್ಲಿರುತ್ತದೆ, ಹೃದಯದ ಭಾವನೆಗಳನ್ನು ಪ್ರಕಟಿಸುವುದರಲ್ಲಿರುತ್ತದೆ, ಗಂಟೆಗಟ್ಟಲೆ ಮೊಬೈಲಿನಲ್ಲಿ ಮಾತಾಡುವ ಪ್ರೇಮಿಗಳ ಸಂಭಾಷಣೆಯಲ್ಲಿ ಹರಿದಾಡುತ್ತದೆ, ಬಸ್ಸು-–ರೈಲು ಪ್ರಯಾಣದಲ್ಲಿ ಮತ್ತು ಪಾರ್ಕ್‌ಗಳಲ್ಲಿರುತ್ತದೆ, ಕಲಾ ಕಾರ್ಯಕ್ರಮಗಳಲ್ಲಿರುತ್ತದೆ, ಸಮ್ಮೇಳನಗಳ ಪ್ರಶ್ನೋತ್ತರಗಳಲ್ಲಿರುತ್ತದೆ, ಸಾಹಿತ್ಯದ ಪ್ರಬಂಧ ಮಂಡನೆಯಲ್ಲಿರುತ್ತದೆ, ನಮಗೆ ಅಹಿತ ಮಾಡಿದವರನ್ನು ಬೈಯುವುದರಲ್ಲಿರುತ್ತದೆ, ಹಾಳು ಹರಟೆಯಲ್ಲಿರುತ್ತದೆ, ಸುಮ್ಮಸುಮ್ಮನೆ ಹೊಗಳುವುದರಲ್ಲಿರುತ್ತದೆ, ಲೇಖನ ಕತೆ ಕವನ ಕಾವ್ಯ ಪ್ರಬಂಧ ಕಾದಂಬರಿಗಳಲ್ಲಿರುತ್ತದೆ, ನಾಟಕ-ಯಕ್ಷಗಾನಗಳಲ್ಲಿರುತ್ತದೆ.
ಅಂತೂ ಅದು ಪುನರ್ ಸೃಷ್ಟಿಯಾಗುತ್ತ ತನ್ನ ಕಸುವನ್ನು ಬೆಳೆಸಿಕೊಂಡು ಹೋಗಬೇಕಾಗುತ್ತದೆ. ಆದರೆ ಕನ್ನಡದ ಮಟ್ಟಿಗೆ ಅದು ಆಗುತ್ತದೆಯಾ? ಅಥವಾ ಅದು ಕೆಲವೇ ಸರಳ ಸ್ತರಗಳಲ್ಲಿ ಮಾತ್ರ ಬಳಕೆಯಲ್ಲಿ ಉಳಿದು ಸಾಹಿತ್ಯ ನಿರ್ಮಾಣದಂತಹ ಸಾಂದ್ರ ಸ್ತರಗಳಲ್ಲಿ ಆರಿ ಹೋಗುತ್ತಿದೆಯೇ? ಇಂದಿನ ಶಿಕ್ಷಣ ವ್ಯವಸ್ಥೆಯು ಭಾಷೆಯ ಪೋಷಣೆಗೆ ಪೂರಕವಾಗಿದೆಯೇ? ಇದು ಪ್ರಶ್ನೆ. ಒಂದು ವಿಪರ್ಯಾಸ ಹೀಗಿದೆ. ಪ್ರಾಥಮಿಕ ಹಂತದಲ್ಲಿ ಹೆತ್ತವರ ಇಚ್ಛೆಯಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳೂ ಕಾಲೇಜು ಹಂತದ ಕಲಾ ವಿಭಾಗಕ್ಕೆ ಸೇರಿದಾಗ ಕನ್ನಡ ಮಾಧ್ಯಮಕ್ಕೆ ಒಲವು ತೋರಿಸುತ್ತಾರೆ.
ಏಕೆಂದರೆ ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಪಠ್ಯಗಳು ಕನ್ನಡದಲ್ಲಿ ಚೆನ್ನಾಗಿ ಅರ್ಥವಾಗುತ್ತವೆ. ವಿಷಯಗಳ ಚರ್ಚೆಗೆ ಕನ್ನಡವೇ ಸುಲಭವಾಗುತ್ತದೆ. ಅವರಿಗೆ ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳು ಬೇಕು. ಪರೀಕ್ಷೆಯಲ್ಲಿ ಉತ್ತರಗಳನ್ನು ಕನ್ನಡದಲ್ಲೇ ಬರೆಯುತ್ತಾರೆ. ಆದರೆ ಇವರ ಬರವಣಿಗೆ ಸುಲಭದಲ್ಲಿ ಅರ್ಥವಾಗುವ ಮಟ್ಟದಲ್ಲಿರುವುದಿಲ್ಲ. ಅವರು ಕನ್ನಡದಲ್ಲಿ ಸರಿಯಾಗಿ ಒತ್ತಕ್ಷರಗಳನ್ನು ಬಳಸಿ ಬರೆಯಲಾರರು. ಇನ್ನೂ ವಿಷಾದನೀಯ ಸಂಗತಿಯೆಂದರೆ ಇವರು ಯಾವುದಾದರೊಂದು ಸಿದ್ಧ ಪಠ್ಯದ ಹೊರಗೆ ಹೋಗಲಾರರು. ಅವರಿಗೆ ಪಠ್ಯ ಪೂರಕವಾಗಿ ಸಾಹಿತ್ಯಿಕ ಓದಿನಲ್ಲಿ ಆಸಕ್ತಿ ಇಲ್ಲ.
ಕನ್ನಡದ ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಲೇಖನಗಳತ್ತ ಕಣ್ಣು ಹಾಯಿಸುವುದೂ ಇಲ್ಲ. ‘ಅದು ಪರೀಕ್ಷೆಗೆ ಇದೆಯಾ ಹಾಗಿದ್ದರೆ ಓದುತ್ತೇನೆ’ ಎಂಬಷ್ಟು ಚೌಕಾಸಿ. ಪರೀಕ್ಷೆಯಲ್ಲಿ ಬರೆದ ಉತ್ತರಗಳನ್ನು ನೋಡಿದರೆ ಏನು ಹೇಳಲು ಬಯಸಿದ್ದಾರೆ ಎಂಬುದೇ ತಿಳಿಯದಂತಹ ವಾಕ್ಯಗಳ ರಚನೆ. ಅಂಕಗಳನ್ನು ನೀಡಲು ತಿಣುಕಾಡುವ ಮೌಲ್ಯಮಾಪಕರು ಕೊನೆಗೂ ತೇರ್ಗಡೆಯಾಗುವಷ್ಟು ಅಂಕ ನೀಡಿ ಕೈತೊಳೆದುಕೊಳ್ಳುತ್ತಾರೆ. ಹೀಗೆ ತೇರ್ಗಡೆಯಾದ ವಿದ್ಯಾರ್ಥಿಗಳು ಬಿ.ಎ., ಬಿ.ಎಡ್., ಎಂ.ಎ., ಎಂ.ಎಸ್.ಡಬ್ಲ್ಯೂ. ಎಂ.ಬಿ.ಎ. ಇತ್ಯಾದಿ ಕಲಿತು ಉದ್ಯೋಗಕ್ಕೆ ಸೇರುತ್ತಾರೆ.
ಕಚೇರಿ ಕೆಲಸಗಳನ್ನು ಹೇಗಾದರೂ ನಿಭಾಯಿಸಬಲ್ಲ ಇವರು ಶಿಕ್ಷಕರಾದಾಗ ಪಾಠವನ್ನು ವಿವರಿಸುವುದಕ್ಕಿಂತ ನೋಟ್ಸ್ ಕೊಡುವುದೇ ಹೆಚ್ಚಾಗುತ್ತದೆ. ಏಕೆಂದರೆ ಇವರು ಮಕ್ಕಳ ತಪ್ಪುಗಳನ್ನು ತಿದ್ದಲಾಗದ ಅಸಮರ್ಥರಾಗಿರುತ್ತಾರೆ. ಅದರಿಂದಾಗಿ ಅಂಕಗಳನ್ನು ಕೊಡುವುದರಲ್ಲಿ ಉದಾರವಾಗಿರುತ್ತಾರೆ. ಪರಿಶ್ರಮ ಇಲ್ಲದೆ ಸಿಗುವ ಅಂಕಗಳಿಗೆ ವಿದ್ಯಾರ್ಥಿಗಳೂ ಮಾರುಹೋಗುತ್ತಾರೆ. ಇದರಿಂದ ಶಿಕ್ಷಣವೂ ಭಾಷೆಯೂ ಸೊರಗುತ್ತದೆ. ಹೀಗೆ ಉಂಟಾಗುವ ಭಾಷಾ ಪ್ರೌಢಿಮೆಯ ಕೊರತೆಯು ಶಿಕ್ಷಣದ ಗುಣಮಟ್ಟವನ್ನೇ ಇಳಿಸುತ್ತದೆ.
ಇನ್ನೊಂದು ವಿಪರ್ಯಾಸ ಹೀಗಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಹೆಜ್ಜೆಯಾಗಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಯಿತು. ಅದನ್ನು ಮಾಡುವಾಗ ಅದು ಸಿ.ಬಿ.ಎಸ್.ಇ. ಮಾದರಿಯಲ್ಲಿ ರೂಪಿಸಿರುವುದಾಗಿ ಗುಲ್ಲು ಹಬ್ಬಿತ್ತು. ಅವುಗಳಲ್ಲಿ ಸಾಕಷ್ಟು ತಪ್ಪುಗಳು ನುಸುಳಿದ್ದವೆಂಬುದನ್ನು ಸದ್ಯ ಬದಿಗಿಡೋಣ. ಅವುಗಳ ಬಗ್ಗೆ ಬಂದ ಪತ್ರಗಳನ್ನು ಕಾರಣಾಂತರಗಳಿಂದ ನಿರ್ಲಕ್ಷಿಸಲಾಯಿತು. ಅದು ಬಿಡಿ, ಕನ್ನಡದ ಕತೆ ಏನು? ಹೊಸ ಪಠ್ಯದ ತರಬೇತಿ ಕಾರ್ಯಕ್ರಮದ ಸಂಗತಿ ಹೀಗಿದೆ. ಒಬ್ಬ ಸ್ನಾತಕೋತ್ತರ ಪದವೀಧರ ಸಂಪನ್ಮೂಲ ವ್ಯಕ್ತಿಯಾಗಿ ಎಂಟನೇ ತರಗತಿಯ ಪಠ್ಯದ ಪಾಠಗಳ ಬಗ್ಗೆ ತರಬೇತಿ ನೀಡಿದರು. ಶಿಕ್ಷಕರಿಗೆ ಆರಂಭದಲ್ಲಿದ್ದ ಉತ್ಸಾಹ ಮತ್ತು ಕುತೂಹಲಗಳು ಇಳಿಯುತ್ತ ಹೋದುವು.
ಕೊನೆಗೆ ಒಬ್ಬ ಶಿಕ್ಷಕಿ ಕೇಳಿದರು: ‘ವ್ಯಾಕರಣ ಕಲಿಸುವುದು ಹೇಗೆ ಸರ್?’ ಅವರು ನೀಡಿದ ಉತ್ತರ ಚೆನ್ನಾಗಿತ್ತಂತೆ. ‘ನಿಮಗೆ ಗೊತ್ತಿದ್ದರೆ ಕಲಿಸಬಹುದು. ನನಗೆ ವ್ಯಾಕರಣದಲ್ಲಿ ಆಸಕ್ತಿ ಇಲ್ಲ. ಭಾಷೆ ಸರಿ ಇದ್ದರೆ ಮತ್ತೆ ವ್ಯಾಕರಣ ಯಾಕೆ?’ ‘ಸರ್, ಆದರೆ ಅದು ಪರೀಕ್ಷೆಗೆ ಉಂಟಲ್ಲಾ?’ ‘ಅದಕ್ಕೇ ನಾನು ಹೇಳುವುದು ಕಲಿಸುವುದು ಒಳ್ಳೆಯದು’. ‘ಸರ್, ತಾವು ಅದರ ತರಬೇತಿ ನೀಡುವುದಿಲ್ಲವೇ?’ ‘ವ್ಯಾಕರಣಕ್ಕೆ ತರಬೇತಿ ಯಾಕೆ? ಅದು ಒಂದು ರೀತಿಯಲ್ಲಿ ನೋಡಿದರೆ ಶಾಸ್ತ್ರ. ಅದನ್ನು ನಿಮ್ಮಷ್ಟಕ್ಕೇ ಮಾಡಿಕೊಳ್ಳಬಹುದು.
ನನ್ನದು ಪಠ್ಯಗಳಲ್ಲಿರುವ ಸೃಜನಶೀಲತೆಯ ಚಿಂತನೆ ಅಷ್ಟೆ’. ಮುಂದೆ ಈ ಪ್ರಶ್ನೆ ಕೇಳಿದ ಶಿಕ್ಷಕಿಯೇ ವ್ಯಾಕರಣ ಭಾಗದ ವಿವರಣೆ ನೀಡಿದರು. ಆದರೆ ಇಲ್ಲಿಯ ವಿರೋಧಾಭಾಸದ ಸಂಗತಿ ಏನೆಂದರೆ ಕನ್ನಡ ವ್ಯಾಕರಣವನ್ನು ಉಳಿದವರು ನಿರ್ಲಕ್ಷಿಸಿದರೆ ಏನೂ ಮಾಡಲಾಗದು. ಆದರೆ ಕನ್ನಡದವರೇ ಅಲಕ್ಷಿಸಿದರೆ ಹೇಗೆ? ಇನ್ನು ಒಂದು ತಲೆಮಾರಿನಲ್ಲಿ ಶಾಸ್ತ್ರವೆಂಬ ಲೇವಡಿಯೊಂದಿಗೆ ಕನ್ನಡ ವ್ಯಾಕರಣದ ಕಲಿಕೆಯ ಪಾಡೇನು?
ಈಗ ನಮ್ಮ ಶಿಕ್ಷಣ ಒಂದೆಡೆ ಸ್ಥಗಿತಗೊಂಡಿದೆ. ಮಹಾತ್ಮರ ಜನ್ಮ ದಿನಾಂಕ ತಿಳಿದಿರುವುದೇ ಜ್ಞಾನವಾಗಿದೆ. ಅವರು ಯಾವುದಕ್ಕಾಗಿ ಮಹಾತ್ಮರು? ಅವರ ಕೊಡುಗೆಗಳೇನು? ಈ ಕುರಿತಾದ ವಿಶ್ಲೇಷಣಾತ್ಮಕ ಅರಿವು ಮುಖ್ಯವಾಗಿ ಉಳಿದಿಲ್ಲ. ಏಕೆಂದರೆ ಭಾಷೆಯ ಮೂಲಕ ಮಾತಾಡುವುದಕ್ಕೆ ಗೊತ್ತಿಲ್ಲ. ಇದು ಶಿಕ್ಷಣ ಇಲಾಖೆಗೂ ಬೇಕಾಗಿಲ್ಲ. ಅದು ಶಿಕ್ಷಕರ ಸಂಬಳ ಬಟವಾಡೆ ಮಾಡುವ, ನಿವೃತ್ತಿಗೆ ಹತ್ತಿರವಾದವರ ದಾಖಲೆಗಳನ್ನು ಹೊಂದಿಸುವ, ಸರ್ಕಾರಿ ಅನುದಾನಗಳನ್ನು ವಿತರಿಸುವ ಹಾಗೂ ಸರ್ಕಾರೇತರ ಶಾಲೆಗಳ ಮಾನ್ಯತೆಯನ್ನು ನಿರ್ಧರಿಸುವ ಒಂದು ಅಧಿಕಾರಶಾಹಿ ಕಚೇರಿ.
ಶಾಲೆಗಳ ಶಿಕ್ಷಣದ ಗುಣಮಟ್ಟದ ಹೊಣೆ ಶಿಕ್ಷಣ ಇಲಾಖೆಗೆ ಇಲ್ಲ. ಇದೆಯೆಂದು ಯಾರಾದರೂ ತಿಳಿದಿದ್ದರೆ ಅದು ತಾತ್ವಿಕವಾಗಿ ಮಾತ್ರ ಸರಿ, ಪ್ರಾಯೋಗಿಕವಾಗಿ ಸರಿಯಲ್ಲ. ಏಕೆಂದರೆ ಶಿಕ್ಷಣ ಇಲಾಖೆಯು ವಿವೇಕಾನಂದರಿಗೂ ಬದ್ಧವಾಗಿಲ್ಲ, ಗಾಂಧೀಜಿಗೂ ನಿಷ್ಠವಾಗಿಲ್ಲ. ಈ ನಿಷ್ಠೆ ಮತ್ತು ಕಾಳಜಿ ಇರುವವರಿಗೆ ಅಲ್ಲಿ ಬೆಲೆ ಇಲ್ಲ. ಹಾಗಾಗಿಯೇ ಶಿಕ್ಷಣ ಇಲಾಖೆಯ ಮೂಗಿನ ಕೆಳಗೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತೇವೆಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟ ಶಾಲೆಗಳೂ ಆಂಗ್ಲಮಾಧ್ಯಮದಲ್ಲಿ ರಾಜಾರೋಷವಾಗಿ ತರಗತಿಗಳನ್ನು ನಡೆಸುತ್ತವೆ.
ಕಾರಣವೇನೆಂದರೆ ಇಂತಹ ಶಾಲೆಗಳಿಗೇ ಮಂತ್ರಿಗಳೂ, ಶಾಸಕರೂ, ಸರ್ಕಾರಿ ಅಧಿಕಾರಿಗಳೂ, ಕನ್ನಡ ಪರ ಹೋರಾಟದ ಸಂಘಟನೆಗಳ ಪದಾಧಿಕಾರಿಗಳೂ, ಸಾಹಿತಿಗಳೂ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಹಾಗಾಗಿ ಅಂತಹ ಶಾಲೆಗಳಿಗೆ ಸಾಮಾಜಿಕ ಪ್ರತಿಷ್ಠೆಯೂ ದೊರೆಯುತ್ತದೆ. ಅವುಗಳಿಗೆ ಮಾನ್ಯತೆಯನ್ನೂ ಸುಲಭದಲ್ಲಿ ಎಲ್ಲಾ ಕಾನೂನುಗಳನ್ನು ಬದಿಗೊತ್ತಿ ನೀಡಲಾಗುತ್ತದೆ. ಅಂದ ಮೇಲೆ ಅವರನ್ನು ತಡೆ ಹಿಡಿಯುವವರು ಯಾರು? ಇನ್ನು ಗಾಂಧೀಜಿ ಮತ್ತು ವಿವೇಕಾನಂದರ ಜನ್ಮ ದಿನಾಂಕವು ಶಿಕ್ಷಕರಿಗೆ ಗೊತ್ತಿದ್ದೂ ಪ್ರಯೋಜನವೇನು?
ಅಷ್ಟೂ ಗೊತ್ತಿಲ್ಲವೆಂದು ಶಿಕ್ಷಕರ ಕೈ ಕಾಲು ಕಂಪಿಸುವಂತೆ ಮಾಡಿದರೂ ಅದು ಶಿಕ್ಷಣ ಇಲಾಖೆಯ ಜವಾಬ್ದಾರಿಯೂ ಆಗಿದೆಯೆಂಬುದನ್ನು ಶಿಕ್ಷಣ ಸಚಿವರು ಸೂಚಿಸುವುದಿಲ್ಲ! ಹಾಗಾಗಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ತಾವು ಜನರಿಗೆ ಯಾವುದೇ ಉತ್ತರದಾಯಿತ್ವ ಹೊಂದಿಲ್ಲವೆಂದು ತೋರುವ ದಾರ್ಷ್ಟ್ಯ ತೋರುತ್ತಿದ್ದಾರೆ. ಸರ್ಕಾರದಲ್ಲಿ ಅಧಿಕಾರಕ್ಕೆ ಬಂದ ಪಕ್ಷದವರಿಗೆ ಎದುರಿನಿಂದ ನಿಷ್ಠರಾಗಿದ್ದಲ್ಲಿಗೆ ಅವರ ಸ್ಥಾನ ಭದ್ರವಾಗುತ್ತದೆ. ಹಾಗಾಗಿ ಕನ್ನಡ ಮಾಧ್ಯಮದ ಅನುಮತಿ ಇರುವ ಶಾಲೆಗಳು ಇಂಗ್ಲಿಷ್‌ನಲ್ಲಿ ತರಗತಿ ನಡೆಸಿದರೆ ಇಲಾಖೆ ಪ್ರಶ್ನಿಸುವುದಿಲ್ಲ. ಅದನ್ನು ಶಿಕ್ಷಣ ಸಚಿವರೂ ವಿಚಾರಿಸುವುದಿಲ್ಲ. ಅಂದಮೇಲೆ ಇದು ಕನ್ನಡಕ್ಕೆ ಕಾಲವಲ್ಲ. ಛೇ!
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.