ಇಪ್ಪತ್ತೊಂದು ಅಧಿಕೃತ ಭಾಷೆಗಳಿರುವ ಭಾರತ ದೇಶದಲ್ಲಿ ಪ್ರತಿ ಭಾಷೆಯೂ ಅದನ್ನಾಡುವ ಜನರಿಗೆ ಅವರ ರಾಷ್ಟ್ರ ಭಾಷೆಯೆಂದರೆ ತಪ್ಪಾಗಲಾರದು. ಯಾಕೆಂದರೆ, ಯಾವ ಭಾಷೆಯನ್ನು ಜನರು ಆಡುತ್ತಾರೋ ಅದು ಅವರ ಸಂವಹನದ ಭಾಷೆಯೂ ಹೌದು, ಅವರ ಸಂಸ್ಕೃತಿಯ ಭಾಷೆಯೂ ಹೌದು.
ಯಾವುದೋ ಒಂದು ಭಾಷೆಯನ್ನಾಡುವ ಜನರ ಸಂಖ್ಯೆ ಇನ್ನೊಂದು ಭಾಷೆಯನ್ನಾಡುವ ಜನರ ಸಂಖ್ಯೆಗಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅದು ಮುಖ್ಯವೆಂದೂ, ಇನ್ನೊಂದು ಭಾಷೆಯನ್ನಾಡುವ ಜನರ ಭಾಷೆ ಅದಕ್ಕಿಂತ ಕಡಿಮೆ ಎಂಬ ಕಾರಣಕ್ಕೆ ಅದು ಅಮುಖ್ಯವೆಂದೂ ಪರಿಗಣಿಸಲಾಗದು. ಇದು ‘ನಿನ್ನ ತಾಯಿಗಿಂತ ನನ್ನ ತಾಯಿ ಶ್ರೇಷ್ಠ’ ಎಂದಂತೆ ಆಗುತ್ತದೆ. ಪ್ರತಿ ಭಾಷೆಯೂ ಅನನ್ಯವಾಗಿರುವಂತೆ, ಆ ಭಾಷೆಯನ್ನಾಡುವ ಜನರ ಪ್ರತಿ ಸಂಸ್ಕೃತಿಯೂ ಅನನ್ಯವೇ ಆಗಿದೆ. ಆ ಸಂಸ್ಕೃತಿ ಮೇಲು ಈ ಸಂಸ್ಕೃತಿ ಕೀಳು ಎಂದು ಸಂಸ್ಕೃತಿಗಳನ್ನು ಹೋಲಿಸಲಾಗದು.
ಹಿಂದಿ ಭಾಷೆಯನ್ನು ಜನಪ್ರಿಯಗೊಳಿಸಲು ಪ್ರಯತ್ನ ನಡೆಸುವುದಾದರೆ ಅದಕ್ಕೆ ಯಾರೂ ಆಕ್ಷೇಪ ಎತ್ತಲಾರರು. ಅದೇ ರೀತಿ ಕನ್ನಡಿಗರು ಕನ್ನಡವನ್ನು, ತಮಿಳರು ತಮಿಳನ್ನು, ತೆಲುಗರು ತೆಲುಗನ್ನು ಹೀಗೆ ಎಲ್ಲ 21 ಭಾಷೆಯವರೂ ತಂತಮ್ಮ ಭಾಷೆಯನ್ನು ಆಡುವವರ, ಓದುವವರ ಮತ್ತು ಬರೆಯುವವರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುವುದಾದರೆ ಅದರಿಂದ ಒಳ್ಳೆಯದೇ ಆಗಬಹುದು.
ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಆಡುವ, ಓದುವ ಆಸಕ್ತಿ ಅನೇಕರಿಗಿರುತ್ತದೆ.
ಎಷ್ಟೋ ಮಂದಿಗೆ ಎರಡು ಮೂರು ಭಾಷೆಗಳಲ್ಲಿ ವ್ಯವಹರಿಸಬೇಕಾದ ಅಗತ್ಯವೂ ಇರುತ್ತದೆ. ‘ನಿನ್ನ ಭಾಷೆಯ ಜೊತೆಗೆ ನನ್ನ ಭಾಷೆಯನ್ನೂ ಕಲಿ’ ಎಂದು ಯಾರನ್ನೂ ಒತ್ತಾಯಿಸುವ ಅಗತ್ಯ ಇಲ್ಲ. ಯಾಕೆಂದರೆ, ತನ್ನ ಮಾತೃಭಾಷೆಯಾದ ಒಂದು ಭಾಷೆಯನ್ನು ಮಾತ್ರ ಬಲ್ಲ, ಸಕಲ ವ್ಯವಹಾರವನ್ನೂ ಅದರಲ್ಲಿ ನಡೆಸುವ ಜನರೇ ಹೆಚ್ಚು. ‘ಹಿಂದಿ ಭಾರತದ ರಾಷ್ಟ್ರ ಭಾಷೆ. ಭಾರತೀಯರೆಲ್ಲರಿಗೂ ಅದನ್ನು ಆಡಲು ಮತ್ತು ಓದಲು ತಿಳಿದಿರಬೇಕು’ ಎಂಬ ಹಿಂದಿ ಭಾಷಿಕರ ಮತ್ತು ಹಿಂದಿ ಪ್ರಿಯ ಇತರ ಭಾಷಿಕರ ವಾದ ಉದ್ಧಟತನದ್ದು.
ಈ ಬಲವಂತದ ಕಾರಣದಿಂದಲೇ ಹಿಂದಿ ಭಾಷೆಯನ್ನು ಕಲಿತುಕೊಳ್ಳುವ ಆಸಕ್ತಿಯಿರುವ ಎಷ್ಟೋ ಮಂದಿ ‘ನಮಗೆ ಹಿಂದಿಯ ಅಗತ್ಯ ಇಲ್ಲ’ ಎಂದು ತೀರ್ಮಾನಿಸಬಹುದು. ‘ಹಿಂದಿ ಬಹಳ ಸರಳವಾದ ಭಾಷೆ, ಸುಂದರವಾದ ಭಾಷೆ’ ಎಂದು ವಾದಿಸುವವರನ್ನು ಅವರ ಪಾಡಿಗೆ ಬಿಡೋಣ. ‘ನಿನ್ನ ತಾಯಿಗಿಂತ ನನ್ನ ತಾಯಿ ಸುಂದರ’ ಎಂಬ ಅರ್ಥದ ಈ ವಾದವನ್ನು ಯಾರೂ ಒಪ್ಪಿಕೊಳ್ಳಲಾರರು.
ರವೀಂದ್ರನಾಥ ಟ್ಯಾಗೋರ್ ‘ಭಾರತದ ಎಲ್ಲ ಭಾಷೆಗಳನ್ನೂ ನದಿಗಳು, ಹಿಂದಿಯನ್ನು ಸಮುದ್ರ ಎಂದು ಹೇಳಿದ್ದರು’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹೇಳಿರುವುದನ್ನು ಯಾವ ಅರ್ಥದಲ್ಲಿ ಪರಿಭಾವಿಸಬೇಕೋ ಅದನ್ನು ‘ಅಧಿಕೃತ’ ಕವಿಗಳು ಮತ್ತು ‘ಅಧಿಕೃತ’ ರಾಜಕಾರಣಿಗಳೇ ಹೇಳಬೇಕು. ಯಾರೇ ಹೇಳಿದರೂ ಇಂಥ ಆಲಂಕಾರಿಕ ಮಾತುಗಳು, ಇರುವುದನ್ನು ಇರುವಂತೆ ಹೇಳಲಾರವು.
ಕನ್ನಡ, ತಮಿಳು, ತೆಲುಗು, ಒರಿಯಾ, ಮರಾಠಿ, ಗುಜರಾತಿ ಇತ್ಯಾದಿ ಸಂವಿಧಾನ ಹೆಸರಿಸುವ ಒಟ್ಟು 21 ಭಾಷೆಗಳಂತೆ ಹಿಂದಿ ಕೂಡ ಈ ದೇಶದ ಒಂದು ಭಾಷೆ. ದೇಶದಲ್ಲಿ ಈ ಭಾಷೆಗಳಲ್ಲದೆ ಇತರ 780 ಜೀವಂತ ಭಾಷೆಗಳಿವೆ.
ಯಾವುದೇ ದೇಶವನ್ನು ಏಕಭಾಷೀಯವಾಗಿಸಿದರೆ ಅಥವಾ ಇತರ ಭಾಷೆಗಳನ್ನು ಹತ್ತಿಕ್ಕಿ ಯಾವುದೇ ಒಂದು ಭಾಷೆಯನ್ನು ಬೆಳೆಸಿದರೆ ಅದು ಏಕ ಧರ್ಮೀಯ ದೇಶಗಳಂತೆ ಸಾಂಸ್ಕೃತಿಕವಾಗಿ ಸೊರಗುತ್ತದೆ. ಏಕ ಭಾಷೀಯತೆ ಮತ್ತು ಏಕ ಧರ್ಮೀಯತೆ ಒಂದು ದೇಶದ ಶಕ್ತಿಯಲ್ಲ, ಆ ಕಾರಣದಿಂದ ಆ ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯ ನೆಲೆಗೊಳ್ಳುವುದಿಲ್ಲ ಎನ್ನುವುದಕ್ಕೆ ಬಹಳ ದೇಶಗಳನ್ನು ಉದಾಹರಿಸಬಹುದು. ಹೆಚ್ಚಿನ ದೇಶಗಳಲ್ಲಿ ಹಲವು ಹತ್ತು ಭಾಷೆಗಳನ್ನಾಡುವ ಜನರಿದ್ದಾರೆ. ಅವರವರ ಬದುಕಿಗೆ ಮತ್ತು ಸಂಸ್ಕೃತಿಗೆ ಅವರವರ ಭಾಷೆ ಸಾಕು. ಆ ಭಾಷೆಯಲ್ಲೇ ಹಾಡುಗಳಿವೆ, ಅದನ್ನೇ ಹಾಡಿ ಅವರು ಕುಣಿಯುತ್ತಾರೆ.
ಅದು ಅವರ ಬದುಕು, ಅವರ ಸಂಸ್ಕೃತಿ. ಅವರ ಭಾಷೆಗಿಂತ ಯಾವುದೋ ಇನ್ನೊಂದು ಭಾಷೆ ಶ್ರೇಷ್ಠ ಎನ್ನುವುದು ಮೂರ್ಖತನದ ಪರಮಾವಧಿಯಾದೀತು. ಭಾಷೆ ಮತ್ತು ಸಂಸ್ಕೃತಿಗೆ ಮೇರೆ ಇಲ್ಲ. ಇವತ್ತು ನಮ್ಮ ನಡುವೆ ಎಷ್ಟೋ ಜನ ಇಂಗ್ಲಿಷ್ ಸಂಸ್ಕೃತಿಯವರಲ್ಲದಿದ್ದರೂ ತಮ್ಮ ಮಾತೃಭಾಷೆಯಂತೆಯೇ ಇಂಗ್ಲಿಷ್ ಭಾಷೆಯನ್ನು ಬಳಸುವ ವರಿದ್ದಾರೆ. ತಮ್ಮ ಮಾತೃಭಾಷೆಯ ಸ್ಥಾನಕ್ಕೆ ಇಂಗ್ಲಿಷನ್ನು ತಂದುಕೊಂಡವರೂ ಇದ್ದಾರೆ.
ಅವರಿಗೆ ಇಂಗ್ಲಿಷಿನ ಹೊರತು ಇನ್ನೊಂದು ಭಾಷೆಯೇ ಬೇಡ. ದೆಹಲಿ, ಮುಂಬೈನ ನಾಗರಿಕರಾಗಿ ಕನ್ನಡದಂತೆಯೇ ಹಿಂದಿ ಮಾತಾಡುವ ಕನ್ನಡಿಗರಿಲ್ಲವೆ? ಬೆಂಗಳೂರಿನ ನಿವಾಸಿಗಳಾಗಿ ಕನ್ನಡದಲ್ಲಿ ಮಾತಾಡುವ, ಓದುವ, ಬರೆಯುವ, ಸಾಹಿತಿಗಳಾಗಿರುವ ಅನ್ಯ ಭಾಷೆಯವರಿಲ್ಲವೆ? ಭಾಷೆಯ ಬಳಕೆ ಅವರವರ ಇಷ್ಟ, ಅವರವರ ಆಯ್ಕೆ. ಬಂಗಾಳಿ ಭಾಷೆಯವರಾದ ರವೀಂದ್ರನಾಥ ಟ್ಯಾಗೋರ್ ಬಂಗಾಳಿಯಲ್ಲೂ ಬರೆದರು, ಇಂಗ್ಲಿಷಿನಲ್ಲಿಯೂ ಬರೆದರು.
ತಮಿಳು ಭಾಷೆಯವರಾದ ಸರ್ವಪಳ್ಳಿ ರಾಧಾಕೃಷ್ಣನ್ ಮುಖ್ಯವಾಗಿ ಇಂಗ್ಲಿಷಿನಲ್ಲಿಯೇ ಮಾತಾಡಿದರು, ಇಂಗ್ಲಿಷಿನಲ್ಲಿಯೇ ಬರೆದರು. ಅಂಥ ಸಾವಿರಾರು ಮಂದಿ ಭಾರತದಲ್ಲಿ ಇದ್ದರು, ಈಗ ಲಕ್ಷಾಂತರ ಜನ ಇದ್ದಾರೆ. ಅವರಿಗೆ ‘ಇಂಗ್ಲಿಷ್ ಬಿಡಿ, ಹಿಂದಿ ಕಲಿಯಿರಿ, ಹಿಂದಿಯಲ್ಲಿ ಮಾತಾಡಿ’ ಎಂದು ಆಜ್ಞಾಪಿಸಲು ಸಾಧ್ಯವಿದೆಯೆ? ಇಡೀ ಭಾರತದಲ್ಲಿ ಒಂದೇ ಭಾಷೆ ಇರಬೇಕು ಎನ್ನುವ ವಾದ ಭಾಷಾವಾರು ಪ್ರಾಂತ್ಯ ರಚನೆಯಾಗುವ ಸಂದರ್ಭದಲ್ಲಿ ಇರಲಿಲ್ಲ. ಈಗ ಯಾಕೆ ಹುಟ್ಟಿಕೊಂಡಿದೆ?
ಭಾಷಾ ಸಾಮರಸ್ಯಕ್ಕೆ, ರಾಷ್ಟ್ರೀಯ ಭಾವೈಕ್ಯಕ್ಕೆ ಈ ವಾದ ಮಾರಕವಲ್ಲವೆ? ದೇಶದ ಎಲ್ಲ ಭಾಷೆಗಳು, ಎಲ್ಲ ಸಂಸ್ಕೃತಿಗಳು ಉನ್ನತಿ ಹೊಂದಬೇಕು ಎಂಬ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ‘ನೆಹರೂ ಆಶಯ’ ಅದೃಶ್ಯವಾದದ್ದು ಹೇಗೆ? ಯಾವುದೇ ಒಂದು ಭಾಷೆಯನ್ನು ಕಲಿಯುವ ಇಚ್ಛೆ ವ್ಯಕ್ತಿಯದು. ಯಾವ ಭಾಷೆಯನ್ನು ಕಲಿಯಬೇಕು ಎಂಬ ನಿರ್ಧಾರವನ್ನು ಮಾಡುವುದು ಆ ವ್ಯಕ್ತಿಯ ಹಕ್ಕು. ರೈಲ್ವೆ ಟಿಕೆಟ್, ಊರು, ದಾರಿ ತೋರಿಸುವ ಬೋರ್ಡುಗಳು, ಔದ್ಯೋಗಿಕ ಸಂದರ್ಶನ ಪತ್ರಗಳು ಇತ್ಯಾದಿಗಳ ಮೂಲಕ ಹಿಂದಿಯನ್ನು ಬಳಸಿದರೆ ಕೋಟ್ಯಂತರ ಜನರಿಗೆ ತೊಂದರೆಯಾದೀತೇ ವಿನಾ ಅವರಿಗೆ ಹಿಂದಿಯ ಮೇಲೆ ಪ್ರೀತಿ ಉಂಟಾಗಲಾರದು.
ದೃಶ್ಯ ಮಾಧ್ಯಮಗಳ ಮೂಲಕ, ಸರ್ಕಾರಿ ಕಾಗದ ಪತ್ರಗಳ ಮೂಲಕ ಇಡೀ ದೇಶದ ಸಾಮಾನ್ಯ ಪ್ರಜೆಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಶುದ್ಧ ಅಜ್ಞಾನ ಮೂಲದ್ದೆಂದೇ ಹೇಳಬೇಕಾಗುತ್ತದೆ. ಭಾರತದಲ್ಲಿ ಶೇಕಡ 55 ಜನ ಹಿಂದಿ ಮಾತಾಡುತ್ತಾರೆ ಎಂಬ ಕೇಂದ್ರ ರಾಜಕಾರಣಿಗಳ ಹೇಳಿಕೆಯಲ್ಲಿ ಏನು ತಥ್ಯವಿದೆ ಎಂದು ಪರಿಶೀಲಿಸಬೇಕಾದ ಅಗತ್ಯ ಇದೆ. ವಾಸ್ತವದಲ್ಲಿ ಹಿಂದಿ ಮಾತಾಡುವವರ ಸಂಖ್ಯೆ ಸುಮಾರು 43 ಕೋಟಿ ಮಾತ್ರ. ಇವರಲ್ಲಿ ಶುದ್ಧ ಹಿಂದಿ ಮಾತಾಡುವವರು ಕೇವಲ 25.79 ಕೋಟಿ.
ಕನ್ನಡಿಗರೆಲ್ಲ ಕನ್ನಡ ಮಾತಾಡುವವರಲ್ಲ. ಅದರಿಂದ ಕರ್ನಾಟಕಕ್ಕೆ ಏನು ಕಷ್ಟವುಂಟಾಗಿದೆ? ಐದೂ ಮುಕ್ಕಾಲು ಕೋಟಿ ಬ್ರಿಟನಿಗರಲ್ಲಿ ಮಾತೃಭಾಷೆಯಾಗಿ ಇಂಗ್ಲಿಷ್ ಮಾತಾಡುವವರು 3.59 ಕೋಟಿ ಮಾತ್ರ. ಕೆಲವು ಲಕ್ಷ ಜನರಿಗೆ ಇಂಗ್ಲಿಷಿನ ಗಂಧಗಾಳಿ ಇಲ್ಲ. ಇದಕ್ಕೆ ಚೂರುಪಾರು ಮಾತಾಡುವವರನ್ನು ಸೇರಿಸಿದರೆ ಈ ಸಂಖ್ಯೆ ಸುಮಾರು 8 ಲಕ್ಷ. ಇಂಗ್ಲೆಂಡಿಗೆ ಇದರಿಂದ ಏನು ನಷ್ಟವಾಗಿದೆ? ಭಾರತೀಯರೆಲ್ಲರೂ ಹಿಂದಿ ಮಾತಾಡುವವರಾದರೆ ಭಾರತಕ್ಕೆ ಏನು ಲಾಭವಿದೆ?
ಬದುಕಿಗೆ ಯಾವ ಭಾಷೆಯ ಅಗತ್ಯವಿದೆಯೋ ಅದನ್ನು ವ್ಯಕ್ತಿ ಕಲಿತುಕೊಳ್ಳುತ್ತಾನೆ, ಮಾತಿನಲ್ಲಿ, ಬರಹದಲ್ಲಿ ಬಳಸುತ್ತಾನೆ. ಈ ಮಾತು ವ್ಯಕ್ತಿಯ ಸ್ವಂತ ಭಾಷೆಗೂ ಅನ್ವಯಿಸುತ್ತದೆ, ಅವನ ಪರಿಸರದ ಭಾಷೆಗೂ ಅನ್ವಯಿಸುತ್ತದೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಂದಿ ದಿನದಲ್ಲಿ ಹೆಚ್ಚೆಂದರೆ ಐದುನೂರು ವಾಕ್ಯಗಳನ್ನು ಆಡಬಹುದು. ಅವುಗಳಲ್ಲಿ ಹೆಚ್ಚಿನವು ಮರಳಿ ಮರಳಿ ಆಡುವ ವಾಕ್ಯಗಳು. ಭಾರತ ಹಿಂದಿ ಮಾತಾಡುವ ಏಕಭಾಷೀಯ ರಾಷ್ಟ್ರ ಎಂದೆನಿಸಿಕೊಂಡರೆ ಈ ದೇಶಕ್ಕೆ, ಅರ್ಥಾತ್ ಅಪಾರ ಸಂಖ್ಯೆಯ ಇಲ್ಲಿನ ಜನಸಮೂಹಕ್ಕೆ, ಅವರ ಬದುಕಿಗೆ, ಅವರ ಸಂಸ್ಕೃತಿಗೆ ಏನು ಪ್ರಯೋಜನವಾಗುತ್ತದೆ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.