ADVERTISEMENT

ರೈತ ಆದಾಯ ವೃದ್ಧಿಗೆ ಸಮರ್ಪಕ ನೀತಿ ಅಗತ್ಯ

ಡಾ.ಟಿ.ಎನ್.ಪ್ರಕಾಶ ಕಮ್ಮರಡಿ
Published 12 ಅಕ್ಟೋಬರ್ 2016, 19:30 IST
Last Updated 12 ಅಕ್ಟೋಬರ್ 2016, 19:30 IST
ರೈತ ಆದಾಯ ವೃದ್ಧಿಗೆ ಸಮರ್ಪಕ ನೀತಿ ಅಗತ್ಯ
ರೈತ ಆದಾಯ ವೃದ್ಧಿಗೆ ಸಮರ್ಪಕ ನೀತಿ ಅಗತ್ಯ   

ಸ್ವಾತಂತ್ರ್ಯ ಪಡೆದು ಏಳು ದಶಕಗಳು ಪೂರ್ಣಗೊಳ್ಳುತ್ತಿರುವಾಗ, ದೇಶದ ಅತಿ ದೊಡ್ಡ ಸಾಮಾಜಿಕ ಗುಂಪಾದ ರೈತಾಪಿ ವರ್ಗದ ‘ಕಲ್ಯಾಣ’ ಮತ್ತು ‘ಆದಾಯ’ದ ಪ್ರಸ್ತಾವ ಕೇಳಿ ಬರುತ್ತಿದೆ. ಕೇಂದ್ರ ಅರ್ಥ ಸಚಿವ ಅರುಣ್ ಜೇಟ್ಲಿಯವರು 2016– 17ನೇ ಸಾಲಿನ ಆಯವ್ಯಯ ಭಾಷಣದಲ್ಲಿ, ರೈತರ ಆದಾಯವನ್ನು ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವ ವಿಚಾರ ಎತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಹಲವೆಡೆ ಪುನರುಚ್ಚರಿಸಿದ್ದಾರೆ.

ಇದಕ್ಕೆ ಪೂರಕವಾಗಿ ಕೇಂದ್ರದ ಕೃಷಿ ಸಚಿವಾಲಯವನ್ನು ‘ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಸಚಿವಾಲಯ’ ಎಂದು ಪುನರ್ ನಾಮಕರಣ ಮಾಡಲಾಗಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಕೃಷಿ ಕ್ಷೇತ್ರ ಬಿಕ್ಕಟ್ಟನ್ನೆದುರಿಸುತ್ತಿದ್ದು, ಕಂಗೆಟ್ಟಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿದಿರುವಾಗ, ಈ ರೀತಿ ಆದಾಯ ಮತ್ತು ಕಲ್ಯಾಣದ ವಿಷಯ ಪ್ರಸ್ತಾಪ ಅತ್ಯಂತ ಸ್ವಾಗತಾರ್ಹವಾಗಿದ್ದರೂ, ಇದು ಕಾರ್ಯರೂಪಕ್ಕೆ ಬರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚಿಂತನೆ ಅತ್ಯಗತ್ಯವಾಗಿದೆ.

ಕೇಂದ್ರದ ಕೃಷಿ ರಾಜ್ಯ ಸಚಿವ ಪುರುಷೋತ್ತಮ ರುಪಾಲಾ, ಕೃಷಿ ಪರಿಕರಗಳನ್ನು ಸಮರ್ಪಕವಾಗಿ ಬಳಸಿ, ಎಕರೆವಾರು ಉತ್ಪಾದಕತೆ ಅಧಿಕಗೊಳಿಸುವುದರ ಜೊತೆಗೆ, ಉತ್ಪಾದನಾ ವೆಚ್ಚ ಇಳಿಸಿ ಲಾಭದಾಯಕ ಬೆಲೆ ಸಿಗುವಂತೆ ಮಾಡುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಗಳನ್ನು ರಾಜ್ಯಸಭೆಗೆ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಧಾನಿ ತಮ್ಮ ನೆಚ್ಚಿನ ಯೋಜನೆಗಳಾದ ಮಣ್ಣಿನ ಫಲವತ್ತತೆ ಹೆಚ್ಚಳ, ಬೇವು ಲೇಪನೆ ಮೂಲಕ ಯೂರಿಯಾ ಗೊಬ್ಬರದ ಸಮರ್ಥ ಬಳಕೆ, ಸಾವಯವ ಕೃಷಿಗೆ ಉತ್ತೇಜನ, ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ’ ಇತ್ಯಾದಿಗಳನ್ನು ಎಲ್ಲೆಡೆ ಪ್ರಸ್ತಾಪಿಸುತ್ತಿದ್ದಾರೆ.

ADVERTISEMENT

ಕೃಷಿ ಮಾರಾಟ ವ್ಯವಸ್ಥೆಯನ್ನು ಸ್ಪರ್ಧಾತ್ಮಕಗೊಳಿಸಿ ರೈತರಿಗೆ ನ್ಯಾಯಯುತ ಬೆಲೆ ಒದಗಿಸುವಲ್ಲಿ ಕರ್ನಾಟಕದ ಆನ್‌ಲೈನ್ ಮಾರಾಟವನ್ನು ಪ್ರಶಂಸಿಸಿರುವ ಕೇಂದ್ರ ಸರ್ಕಾರ, ಇದೇ ಮಾದರಿಯಲ್ಲಿ ರಾಷ್ಟ್ರದಾದ್ಯಂತ ‘ಏಕೀಕೃತ ಇ- ಮಾರಾಟ’ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಹಾಗೇ, ವರ್ಷಗಳಿಂದ ಚಾಲನೆಯಲ್ಲಿರುವ ‘ಕನಿಷ್ಠ ಬೆಂಬಲ ಬೆಲೆ’ ಯೋಜನೆಯ ಯಶಸ್ವಿ ಅನುಷ್ಠಾನದ ಮೂಲಕ, ಬೇಕಾಬಿಟ್ಟಿ ಬೆಲೆ ಸಿಗುವ ‘ಯಾತನಾಮಯ ಮಾರಾಟ’ದಿಂದ ರೈತರನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಆಹಾರ ಭದ್ರತೆ, ತೋಟಗಾರಿಕೆ ಅಭಿವೃದ್ಧಿ, ಸುಸ್ಥಿರ ಕೃಷಿ, ಕೃಷಿ ವಿಸ್ತರಣೆ ಇತ್ಯಾದಿ ಬಗೆಗಿನ ಅಭಿಯಾನಗಳು, ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ ಮುಂತಾದವನ್ನು ಸಮರ್ಪಕವಾಗಿ ಜಾರಿಗೊಳಿಸಿ, ರೈತರ ಆದಾಯ ವೃದ್ಧಿಪಡಿಸುವುದಾಗಿ ಹೇಳಿದೆ. ಇವೆಲ್ಲವುಗಳ ಸಮನ್ವಯಕ್ಕಾಗಿ ಕನ್ನಡಿಗರೇ ಆಗಿರುವ ಕೇಂದ್ರದ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ  ಅಶೋಕ್ ದಳವಾಯಿ ಅವರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿರುವುದು ವರದಿಯಾಗಿದೆ.

ಇವುಗಳ ಜೊತೆಗೆ, ನೀತಿ ಆಯೋಗದ ಕೃಷಿ ಆರ್ಥಿಕ ತಜ್ಞ ರಮೇಶ್‌ ಚಂದ್ ಅವರು, ಕೃಷಿ ಮಾರಾಟ ವಲಯಕ್ಕೆ ವಿದೇಶಿ ನೇರ ಬಂಡವಾಳ ಹಾಗೂ ಕೃಷಿ ಭೂಮಿಯನ್ನು ಬಾಡಿಗೆಗೆ ಪಡೆದು ಹಿಡುವಳಿ ವಿಸ್ತೀರ್ಣ ಹೆಚ್ಚಳಕ್ಕೆ ಈಗಿನ ಭೂಸುಧಾರಣೆಗೆ ಮಾರ್ಪಾಡು ತಂದು, ಗೇಣಿಗಾರಿಕೆ ಪುನರ್‌ಸ್ಥಾಪಿಸುವ ವಿಚಾರಗಳನ್ನು  ಪ್ರಸ್ತಾಪಿಸಿದ್ದಾರೆ. ಇವೆಲ್ಲವುಗಳ ಯಶಸ್ವಿ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯ ಸರ್ಕಾರದತ್ತ ತಳ್ಳಿ, ಕೇಂದ್ರ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವಂತೆಯೂ ಮಾಡಿದ್ದಾರೆ.

ರೈತರ ಕಲ್ಯಾಣ ಮತ್ತು ಆದಾಯದ ಬಗೆಗಿನ ಈ ಎಲ್ಲಾ ಕಾರ್ಯ ಯೋಜನೆಗಳು ಆ ನಿಟ್ಟಿನಲ್ಲಿನ ಗುರಿ ಸಾಧಿಸುವಷ್ಟು ಸಮರ್ಪಕ ಹಾಗೂ ಶಕ್ತಿಯುತವಾಗಿವೆಯೇ ಎಂಬ ಸಂಶಯ ಏಳುತ್ತಿದೆ. ಇವುಗಳಲ್ಲಿ ಹೊಸತೇನೂ ಇಲ್ಲ ಮತ್ತು ಇವು ಈಗಾಗಲೇ ಬೇರೆ ಬೇರೆ ರೂಪದಲ್ಲಿ ಜಾರಿಯಲ್ಲಿರುವ ಹಳೆ ಕ್ರಮಗಳೇ ಆಗಿವೆ. ಅಲ್ಲದೆ ಈ ಎಲ್ಲಾ ಕ್ರಮಗಳು ಕೃಷಿ ಮೂಲದ ಆದಾಯಕ್ಕೆ ಮಾತ್ರ ಸಂಬಂಧಿಸಿರುವಂತಹವು. ಈ ಮೂಲದಿಂದ ಆದಾಯದ ಹೆಚ್ಚಳ ಎಷ್ಟು ಸಾಧ್ಯ ಎಂಬ ಪ್ರಶ್ನೆಗೆ ತಕ್ಷಣ ಉತ್ತರ ಹುಡುಕಬೇಕಾಗಿದೆ.

ರೈತರ ಆದಾಯದ ಲೆಕ್ಕಾಚಾರವಿರಲಿ, ಈ ಬಗ್ಗೆ ಇದುವರೆಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ರಾಷ್ಟ್ರೀಯ ಮಾದರಿ ಗಣತಿ ಕಚೇರಿ (National Sample Survey Office-NSSO) ಮೂಲದಿಂದ ರೈತರ ಆದಾಯದ ಬಗ್ಗೆ ಈವರೆಗೆ 2003 ಮತ್ತು 2013ರಲ್ಲಿ   ಮಾತ್ರ ಲೆಕ್ಕಾಚಾರ ನಡೆದಿದೆ. 2013ರ ಗಣತಿ ಪ್ರಕಾರ, ಗ್ರಾಮೀಣ ಪ್ರದೇಶದ ಶೇ 64ರಷ್ಟು ಕುಟುಂಬಗಳು ಕೃಷಿ ಮೂಲದ ಆದಾಯವನ್ನು ಅವಲಂಬಿಸಿವೆ.  ಇವುಗಳಲ್ಲಿ ಬೇರಾವುದೇ ಮೂಲದ ಆದಾಯವಿರದೆ ಬರಿದೇ ಬೇಸಾಯದಿಂದ ಬದುಕುತ್ತಿರುವ ಶುದ್ಧ ಕೃಷಿ ಕುಟುಂಬಗಳು ಕೇವಲ ಶೇ 12 ಎನ್ನಲಾಗಿದೆ. ಇನ್ನುಳಿದ ಕುಟುಂಬಗಳು ಕೃಷಿ ಜೊತೆಗೆ ಪಶುಪಾಲನೆ (ಶೇ 34), ಕೂಲಿ ಮತ್ತು ನೌಕರಿ (ಶೇ 17), ಇನ್ನಿತರ ಮೂಲ, ಉದಾಹರಣೆಗೆ ಹೊರಗಿನಿಂದ ಪಾವತಿ, ಪಿಂಚಣಿ ಇತ್ಯಾದಿ (ಶೇ 29) ಹೀಗೆ ಬಹು ಮೂಲದಿಂದ ಆದಾಯ ಪಡೆಯುತ್ತಿವೆ ಎಂದಾಯಿತು.

ಹೀಗೆ ದೇಶದಲ್ಲಿ ರೈತ ಕುಟುಂಬವೊಂದು ಬಹುಮೂಲದಿಂದ ಪಡೆಯುತ್ತಿರುವ ಸರಾಸರಿ ತಿಂಗಳ ಆದಾಯ ಕೇವಲ ₹ 6,653ರಷ್ಟು. ಇದರಲ್ಲಿ ಶೇ 48 ಭಾಗ ಮಾತ್ರ ಕೃಷಿ ಮೂಲದಿಂದ ಬಂದಿದ್ದರೆ, ಶೇ 32 ಭಾಗ ದಿನಗೂಲಿ, ನೌಕರಿ ಇತ್ಯಾದಿ ಮೂಲಕ, ಶೇ 12  ಪಶುಪಾಲನೆ, ಇನ್ನುಳಿದ ಶೇ 8ರಷ್ಟು ವ್ಯಾಪಾರ ಇತ್ಯಾದಿ ಕೃಷಿಯೇತರ ಮೂಲದಿಂದ ಬಂದಿರುತ್ತದೆ. ನಮ್ಮ ರೈತರಲ್ಲಿ ಸಣ್ಣ, ಮಧ್ಯಮ, ದೊಡ್ಡ ಹಿಡುವಳಿಯ ವಿವಿಧ ವರ್ಗಗಳಿದ್ದು, ಆದಾಯದ ಪ್ರಮಾಣ ಮತ್ತು ಮೂಲಗಳೂ ಬೇರೆಯಾಗಿರುತ್ತವೆ. ದೇಶದಲ್ಲಿ ಶೇ 70ರಷ್ಟು ರೈತರು ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದು, ಇವರಿಗೆ ಕೃಷಿ ಮೂಲದಿಂದ ದೊರೆಯುವ ಆದಾಯ ಅತ್ಯಲ್ಪ (ತಿಂಗಳಿಗೆ ₹ 973), ಮಾತ್ರವಲ್ಲ ಈ ರೈತರ ಒಟ್ಟು ಆದಾಯದಲ್ಲಿ ಕೃಷಿಯ ಕೊಡುಗೆ ಶೇ 20 ರಷ್ಟು ಕೂಡ ಇರುವುದಿಲ್ಲ.

ರಾಷ್ಟ್ರೀಯ ಮಾದರಿ ಗಣತಿ ಲೆಕ್ಕಾಚಾರದ ಪ್ರಕಾರ, 2003ರಿಂದ 2013ರವರೆಗಿನ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕೃಷಿ ಮೂಲದ ಆದಾಯ ಶೇ 32ರಷ್ಟು ಮಾತ್ರ ವೃದ್ಧಿಯಾಗಿದ್ದರೆ, ಒಟ್ಟು ಆದಾಯದ ಹೆಚ್ಚಳ ಶೇ 34ರಷ್ಟಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಸಾಧನೆ ಸ್ವಲ್ಪ ಅಧಿಕವಾಗಿದ್ದು, ಎರಡೂ ಮೂಲದ ಆದಾಯಗಳ ಹೆಚ್ಚಳ ಕ್ರಮವಾಗಿ ಶೇ 66 ಹಾಗೂ ಶೇ 52ರಷ್ಟಿರುತ್ತದೆ. ಆದರೆ, ಬಹುತೇಕ ಬಡ ರೈತರ ಕೃಷಿ ಮೂಲದ ಆದಾಯ ಈ ಅವಧಿಯಲ್ಲಿ ಅಧಿಕವಾಗುವುದಿರಲಿ, ಶೇ 6ರಷ್ಟು ಕುಂಠಿತವಾಗಿರುವುದು ತಿಳಿದು ಬಂದಿದೆ. ಅಂದಮೇಲೆ, ಇದುವರೆಗೂ ಅಷ್ಟೇನೂ ಪರಿಣಾಮಕಾರಿಯಾಗದ ಕೇಂದ್ರ ಸರ್ಕಾರದ ಈ ಎಲ್ಲಾ ಕಾರ್ಯಕ್ರಮಗಳು ಅಲ್ಪಸ್ವಲ್ಪ ಮೇಲ್ಮೈ ಬದಲಾವಣೆ ತಂದೊಡನೆ ಕೃಷಿ ಆದಾಯವನ್ನು ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವಷ್ಟು ಸಮರ್ಪಕವಾಗಿವೆ ಎಂಬುದು ವಾಸ್ತವಕ್ಕೆ ದೂರವಾದ ವಿಚಾರವಾಗಿದೆ.

ಕೇಂದ್ರ ಸರ್ಕಾರ ಬರಿದೇ ರೈತ ಆದಾಯವಲ್ಲ, ಕಲ್ಯಾಣದ ವಿಚಾರವನ್ನೂ ಪ್ರಸ್ತಾಪಿಸಿದೆ. ಕಲ್ಯಾಣವೆನ್ನುವುದು ಗುಣಾತ್ಮಕ ವಿಚಾರವಾಗಿದ್ದರೂ ಆದಾಯದೊಡನೆ ತಳಕು ಹಾಕಿ ಇದರ ಅರ್ಥ ವ್ಯಾಪ್ತಿಯನ್ನು ಹುಡುಕಿದರೆ ಪ್ರತಿ ವ್ಯಕ್ತಿಗೂ ಅನ್ನ, ವಸ್ತ್ರಾದಿಯಂಥ ಕನಿಷ್ಠ ಅಗತ್ಯಗಳಾದರೂ ಸಿಗುವಂತಿರಬೇಕು. ಇದಾವುದೂ ಲಭಿಸದೆ ಆತ ಬಡತನದಲ್ಲಿ ಸಿಲುಕಿದಲ್ಲಿ ಕಲ್ಯಾಣದ ವಿಚಾರ ಬಹುದೂರ ಉಳಿಯುತ್ತದೆ. ಎಷ್ಟೇ ಅಪರಿಪೂರ್ಣವಾಗಿದ್ದರೂ ಬಡತನ ಅಳೆಯುವ ಅಳತೆಗೋಲೊಂದು ನಮ್ಮ ಮುಂದಿದೆ.

ವ್ಯಕ್ತಿಯೊಬ್ಬನಿಗೆ ವಾರ್ಷಿಕವಾಗಿ ಕನಿಷ್ಠ ₹ 12 ಸಾವಿರ ಆದಾಯ ಸಿಗದಿದ್ದಲ್ಲಿ ಆತ ಬಡತನ ರೇಖೆಗಿಂತ ಕೆಳಗೇ ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಕಟು ವಾಸ್ತವ ಎಂದರೆ, ಈ ಲೆಕ್ಕಾಚಾರದ ಪ್ರಕಾರ ಕೃಷಿ ಮೂಲದ ಆದಾಯವೊಂದನ್ನೇ ಪರಿಗಣಿಸಿದರೆ ನಮ್ಮ ಬಹುಪಾಲು ರೈತರು ಬಡತನ ರೇಖೆಗಿಂತ ಕೆಳಗಿರುವುದು ಮಾತ್ರವಲ್ಲ ಅವರ ಕೃಷಿ ಆದಾಯ ದ್ವಿಗುಣಗೊಂಡರೂ ಬಡತನ ರೇಖೆಗಿಂತ ಮೇಲೇಳಲು ಸಾಧ್ಯವಾಗದು ಎನ್ನುವುದು. ಬಹುತೇಕ ಸಣ್ಣ ರೈತರ ಕೃಷಿ ಮೂಲದ ವಾರ್ಷಿಕ ತಲಾ ಆದಾಯ ಕೇವಲ ₹ 2,919 ಆಗಿದ್ದು, ಇದನ್ನು ದ್ವಿಗುಣಗೊಳಿಸಿದರೂ ಬಡತನ ರೇಖೆ ಆಸುಪಾಸಿಗೂ ಬರುವುದು ಅಸಾಧ್ಯ. ಹೀಗಿರುವಾಗ ರೈತ ಕಲ್ಯಾಣದ ಪ್ರಸ್ತಾವವೇ ಅರ್ಥಹೀನ ವಿಚಾರವಾಗುತ್ತದೆ.

ಭಾರತದಂತಹ ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಮಹತ್ವ ಅಪಾರವಾಗಿದ್ದರೂ ಹಲವು ವರ್ಷಗಳವರೆಗೆ ಕೃಷಿ ಬಗ್ಗೆ ಸಮಗ್ರ ನೀತಿ ಇಲ್ಲವಾಗಿತ್ತು. ಪ್ರಥಮ ಬಾರಿಗೆ 2001ರಲ್ಲಿ ರಾಷ್ಟ್ರ ಮಟ್ಟದಲ್ಲಿ ಕೃಷಿಗೆ ಒಂದು ಪ್ರತ್ಯೇಕ ನೀತಿ ಹೊರತರಲಾಯಿತು, ಅದೂ ಕರ್ನಾಟಕ ಈ ಬಗ್ಗೆ 1995ರಲ್ಲೇ ದಿಟ್ಟಹೆಜ್ಜೆ ಇಟ್ಟಿತ್ತು. ರಾಷ್ಟ್ರಮಟ್ಟದಲ್ಲಿ ಆನಂತರ ಹಲವಾರು ಯೋಜನೆಗಳು ಬಂದರೂ, 2006ರಲ್ಲಿ ಕೃಷಿ ವಿಜ್ಞಾನಿ ಡಾ. ಸ್ವಾಮಿನಾಥನ್ ಅವರ ನೇತೃತ್ವದಲ್ಲಿ ಪ್ರತ್ಯೇಕ ‘ರಾಷ್ಟ್ರೀಯ ರೈತ ಆಯೋಗ’ ರಚನೆವರೆಗೂ ರೈತ ಕಲ್ಯಾಣದ ಬಗ್ಗೆ ಕೇಂದ್ರ ಮಟ್ಟದಲ್ಲಿ ಪ್ರಸ್ತಾವವೇ ಇಲ್ಲವಾಗಿತ್ತು.

ಈ ಎಲ್ಲಾ ನೀತಿ, ವರದಿಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಳ, ನೀರಾವರಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಹಣಕಾಸು ಇತ್ಯಾದಿಗಳಿಗೆ ಒತ್ತು ಕೊಡಲಾಗಿದೆಯೇ ಹೊರತು ರೈತರ ಆದಾಯದ ಬಗ್ಗೆ ಚಕಾರವೆತ್ತಿಲ್ಲ. ಈ ವಿಚಾರದಲ್ಲಿ ಕೃಷಿ ಬೆಲೆಗಳ ಬಗೆಗಿನ ನೀತಿಗಳು ನೇರವಾದ ಪರಿಣಾಮ ಬೀರುವಂತಿದ್ದು, ಕನಿಷ್ಠ ಬೆಂಬಲ ಬೆಲೆ, ಖರೀದಿ, ವಿತರಣೆ ಇತ್ಯಾದಿ ಕಾರ್ಯಕ್ರಮಗಳು ದೇಶದಲ್ಲಿ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಭತ್ತ, ಗೋಧಿಯಂತಹ ಕೆಲ ಬೆಳೆಗಳಲ್ಲಿ ಬೆಂಬಲ ಬೆಲೆ ನೀತಿ ಸ್ವಲ್ಪ ಪರಿಣಾಮಕಾರಿಯಾಗಿದೆ.

ಆದರೆ ಪಟ್ಟಣಿಗರು, ನೌಕರರು ಸೇರಿದಂತೆ ಒಟ್ಟಾರೆ ಧ್ವನಿ ಇರುವ ಪ್ರಬಲ ಗ್ರಾಹಕ ವರ್ಗದ ಓಲೈಕೆಗಾಗಿ ಹಣದುಬ್ಬರಗಳ ನಿಯಂತ್ರಣಕ್ಕೆ ನೀಡುವಷ್ಟು ಆದ್ಯತೆಯನ್ನು ಕೇಂದ್ರ ಸರ್ಕಾರ ರೈತರಿಗೆ ಲಾಭದಾಯಕ ಬೆಲೆಯ ವಿಚಾರದಲ್ಲಿ ನೀಡದಿರುವುದು ಕಟುವಾಸ್ತವ. ರೈತರ ಆದಾಯ ದ್ವಿಗುಣಗೊಳಿಸುವ ಘೋಷಣೆಯ ಸುರಿಮಳೆ ಸುರಿಸುತ್ತಿರುವ ಕೇಂದ್ರ, ಕಳೆದ ಮೂರು ವರ್ಷಗಳಲ್ಲಿ ಪ್ರಮುಖ ಕೃಷಿ ಬೆಳೆಗಳ ಬೆಂಬಲ ಬೆಲೆಯಲ್ಲಿ ಮಾಡಿರುವ ವಾರ್ಷಿಕ ಹೆಚ್ಚಳ ಶೇ 3 ರಷ್ಟು ಮಾತ್ರ!

ಕರ್ನಾಟಕ ಕೃಷಿ ಬೆಲೆ ಆಯೋಗದ ವರದಿ ಅನ್ವಯ, 2014- 15ನೇ ಸಾಲಿನಲ್ಲಿ ರಾಜ್ಯದ ಪ್ರಮುಖ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಕೈಗೊಂಡ ರೈತರಿಗೆ ಬರಿದೇ ಬೀಜ, ಗೊಬ್ಬರ, ಕೂಲಿ ಇತ್ಯಾದಿ ಬಾಬ್ತಿನ ನೇರವಾಗಿ ಭರಿಸುವ ವೆಚ್ಚವನ್ನು ಪರಿಗಣಿಸಿದರೆ ಅಲ್ಪಸ್ವಲ್ಪ ಲಾಭ ದೊರಕಿದರೂ, ಕುಟುಂಬದ ಸದಸ್ಯರ ಶ್ರಮದ ಮೌಲ್ಯ, ಭೂಮಿಯ ಗೇಣಿ, ನಿರ್ವಹಣೆ ಇತ್ಯಾದಿ ಅಗೋಚರ ವೆಚ್ಚಗಳನ್ನು ಪರಿಗಣಿಸಿದರೆ ಈರುಳ್ಳಿ ಹೊರತಾಗಿ ಮತ್ಯಾವ ಬೆಳೆಯೂ ಲಾಭದಾಯಕವಾಗಿಲ್ಲ.

ರೈತರ ಆದಾಯ ಹೆಚ್ಚಿಸಲು ಲಾಭದಾಯಕ ಬೆಲೆ ಮಾತ್ರವಲ್ಲ ಇದರ ಜೊತೆಗೆ ಇಳುವರಿ ಹೆಚ್ಚಿಸಿ, ಉತ್ಪಾದನಾ ವೆಚ್ಚ ಇಳಿಸುವುದು ಅತ್ಯಗತ್ಯ. ಸುಧಾರಿತ ತಳಿ ಬಳಸಿ ನೀರಾವರಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಕೈಗೊಂಡಲ್ಲಿ ಬಹುತೇಕ ಬೆಳೆಗಳ ಇಳುವರಿ ದ್ವಿಗುಣಗೊಳಿಸಬಹುದಾಗಿದೆ. ಆದರೆ, ನಮ್ಮ ಬಹುಪಾಲು ಭೂಮಿ ಮಳೆ ಆಶ್ರಯದಲ್ಲಿದ್ದು, ಮುಂಗಾರಿನ ಕಣ್ಣಾಮುಚ್ಚಾಲೆಯಡಿ ಉತ್ಪಾದಕತೆ ಹೆಚ್ಚಳಕ್ಕೆ ತೀವ್ರ ಇತಿಮಿತಿಯಿರುತ್ತದೆ. ಸಮಗ್ರ ಯಾಂತ್ರೀಕರಣದಿಂದ ಉತ್ಪಾದನಾ ವೆಚ್ಚವನ್ನು ಗಮನಾರ್ಹವಾಗಿ ಇಳಿಸಬಹುದಾಗಿದೆ. ಆದರೆ, ನಮ್ಮ ಬಹುಪಾಲು ರೈತರ ಹಿಡುವಳಿ ಪ್ರಮಾಣ ಒಂದು ಹೆಕ್ಟೇರ್‌ಗಿಂತ ಕಡಿಮೆಯಿದ್ದು, ಅದು ಒಡೆದು ಅಲ್ಲಲ್ಲಿ ಚದುರುವಾಗ ಯಾಂತ್ರೀಕರಣಕ್ಕೂ ತೀವ್ರ ಅಡಚಣೆಯಿರುತ್ತದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೃಷಿ ಯಂತ್ರಧಾರ ಯೋಜನೆಯಡಿ ಬಾಡಿಗೆ ಆಧಾರದಲ್ಲಿ ರೈತರಿಗೆ ಯಂತ್ರಗಳ ಸೇವೆ ನೀಡುವ ಮಹತ್ವದ ಕಾರ್ಯ ಕೈಗೊಂಡಿದ್ದು, ರೈತ ಆದಾಯ ವೃದ್ಧಿಯ ಮೇಲಿನ ಇದರ ಪರಿಣಾಮ ಕಾದು ನೋಡಬೇಕಾಗಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಬಹುತೇಕ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಗ್ರಾಹಕ ನೀಡುವ ಬೆಲೆಯಲ್ಲಿ ಶೇ 30ರಷ್ಟು ಪ್ರಮಾಣವೂ ರೈತರಿಗೆ ಸಿಗುತ್ತಿಲ್ಲ. ಈ ಅಂತರವನ್ನು ತಗ್ಗಿಸಿದರೆ ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ. ನಮ್ಮ ಕೃಷಿ ಅರ್ಥವ್ಯವಸ್ಥೆಯ ಅತಿದೊಡ್ಡ ಸಮಸ್ಯೆ ಎಂದರೆ ಉತ್ಪಾದನೆ ಮತ್ತು ಬೆಲೆಗಳ ತೀವ್ರ ಏರಿಳಿಕೆ ಹಾಗೂ ಅನಿಶ್ಚಿತತೆ. ಸದಾ ಮಳೆ ಮತ್ತು ಮಾರುಕಟ್ಟೆಯಲ್ಲಿ ಜೂಜಾಡುತ್ತಿರುವ ರೈತಾಪಿ ವರ್ಗಕ್ಕೆ ನಿಶ್ಚಿತ ಆದಾಯ, ಅದರ ಊಹೆ ಹಾಗೂ ಮುನ್ನಂದಾಜು ಅಸಾಧ್ಯವಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟ ನೀತಿ-ನಿಲುವುಗಳು, ದಿಟ್ಟ ಕಾರ್ಯ ಯೋಜನೆಗಳು ಇಲ್ಲದಾಗಿರುವಾಗ, ರೈತ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಮಾತು ಬರಿದೇ ಘೋಷಣೆಯಾಗಿಯೇ ಉಳಿಯುವ ಸಾಧ್ಯತೆ ಅಧಿಕವಾಗಿದೆ.

-ಲೇಖಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ
(ಮೇಲಿನ ವಿಚಾರಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.