ADVERTISEMENT

ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಸಂಬಳಕ್ಕೂ ಸಾಕಾಗದು

ಬಿ.ಶ್ರೀಪಾದ ಭಟ್ಟ
Published 15 ಮಾರ್ಚ್ 2017, 20:04 IST
Last Updated 15 ಮಾರ್ಚ್ 2017, 20:04 IST
ಬಿ. ಶ್ರೀಪಾದ್ ಭಟ್‌ , ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಚಾಲಕ
ಬಿ. ಶ್ರೀಪಾದ್ ಭಟ್‌ , ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಚಾಲಕ   

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ₹1.86 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರಕ್ಕೆ ₹ 18,266 ಕೋಟಿ ಮೀಸಲಿಟ್ಟಿದ್ದಾರೆ. ಇದು ಬಜೆಟ್‌ನ ಶೇ. 9.76ರಷ್ಟಾಗುತ್ತದೆ. ಕಳೆದ ವರ್ಷ 1.63 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಅವರು ಇದೇ ಕ್ಷೇತ್ರಕ್ಕೆ ₹17,373 ಕೋಟಿ ಒದಗಿಸಿದ್ದರು. ಅದು ಬಜೆಟ್‌ ಗಾತ್ರದಲ್ಲಿ ಶೇ10.07ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನ ಹೆಚ್ಚಾಗಬೇಕು. ಆದರೆ, ಶೇ.0.86ರಷ್ಟು  ಕಡಿತ ಮಾಡಿರುವುದು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಮಾಡಿದ ಅನ್ಯಾಯ.

ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಸೇರಿ 60,913 ಶಾಲೆಗಳಿದ್ದು, ಪ್ರತಿ ಶಾಲೆಗೆ ಸರಾಸರಿ ಮೂವರು ಶಿಕ್ಷಕರು ಇದ್ದಾರೆ. ಇನ್ನೂ 37,575 ಹುದ್ದೆಗಳು ಖಾಲಿ ಇವೆ. ಹೀಗಿದ್ದರೂ ಕೇವಲ 10 ಸಾವಿರ ಶಿಕ್ಷಕರನ್ನು ಮಾತ್ರ ನೇಮಿಸಲಾಗುವುದು ಎಂದು ಘೋಷಿಸಲಾಗಿದೆ. ಹೊಸದಾಗಿ ನೇಮಕ ಆಗಿ ಬರುವ ಶಿಕ್ಷಕರ ವೇತನವನ್ನೂ ಲೆಕ್ಕಹಾಕಿದರೆ ಇಲಾಖೆಯ ಬಹುತೇಕ ಹಣ ವೇತನಕ್ಕೆ ಖಾಲಿಯಾಗುತ್ತದೆ.
ಪ್ರೌಢಶಾಲೆಗಳಲ್ಲೂ 5,700 ಶಿಕ್ಷಕರ ಕೊರತೆ ಇದ್ದರೂ 1,626 ಶಿಕ್ಷಕರ ನೇಮಕ ಮಾಡಿಕೊಳ್ಳುವುದಾಗಿ ಮಾತ್ರ ಹೇಳಿದ್ದಾರೆ. ಶಿಕ್ಷಣ ಇಲಾಖೆಗೆ ಸುಮಾರು ₹ 24 ಸಾವಿರ ಕೋಟಿ ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸೆ ಮೂಡಿಸಿದ್ದಾರೆ.

ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಮುಖ್ಯವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು. ಈಗಿನ ಪೋಷಕರು ನೇರವಾಗಿ ಒಂದನೇ ತರಗತಿಗೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛಿಸುವುದಿಲ್ಲ. ಎಲ್‌ಕೆಜಿ, ಯುಕೆಜಿಯಿಂದಲೇ ಮಕ್ಕಳನ್ನು ಆಕರ್ಷಿಸಿ ಸರ್ಕಾರಿ ಶಾಲೆಗಳಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು. ಆದರೆ, ಬಜೆಟ್‌ನಲ್ಲಿ ಇದರ ಪ್ರಸ್ತಾಪವೇ ಇಲ್ಲ.

ADVERTISEMENT

ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ₹ 50 ಸಾವಿರ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ₹ 1 ಲಕ್ಷ ನೀಡಬೇಕು ಎಂಬ ಬೇಡಿಕೆ ಇದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಅಗತ್ಯ ಸೌಲಭ್ಯಗಳೂ ಶಾಲೆಯಲ್ಲಿ ಇರಬೇಕು. ಶಾಲೆಗಳ ಮೂಲಸೌಲಭ್ಯಕ್ಕೆ ಹಣ  ಒದಗಿಸಿದ್ದು ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ.  1ನೇ ತರಗತಿಯಿಂದಲೇ ಇಂಗ್ಲಿಷ್‌ ಭಾಷೆಯಾಗಿ ಕಲಿಸುವುದು, ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಸಮವಸ್ತ್ರ ನೀಡುವುದು ಸ್ವಾಗತಾರ್ಹ ನಿರ್ಧಾರ. ಆದರೆ, ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸರ್ಕಾರಕ್ಕೆ ವಿಶೇಷ ಆಸಕ್ತಿ ಇಲ್ಲದಿರುವುದು ಬೇಸರ ಮೂಡಿಸಿದೆ.

ಇನ್ನು ಉನ್ನತ ಶಿಕ್ಷಣಕ್ಕೆ ಬಂದಾಗ ಹೆಚ್ಚಿನ ಆದ್ಯತೆ ತಾಂತ್ರಿಕ ಶಿಕ್ಷಣಕ್ಕೆ ನೀಡಿರುವುದು ಕಂಡುಬರುತ್ತದೆ. ಮೂಲವಿಜ್ಞಾನ, ಇತಿಹಾಸ, ಸಮಾಜ ವಿಜ್ಞಾನದಂತಹ ವಿಷಯಗಳನ್ನು ಸರ್ಕಾರ ಮರೆತಂತಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಸರ್ಕಾರದ ಹೇಗೆ ಒತ್ತು ನೀಡುತ್ತದೋ, ಸಾಂಪ್ರದಾಯಿಕ ಶಿಕ್ಷಣಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಬೇಕು.

ರಾಯಚೂರಿಗೆ ಹೊಸದಾಗಿ ವಿಶ್ವವಿದ್ಯಾಲಯ ಘೋಷಣೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಾಪನೆಯಾದ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಎಷ್ಟು ಹಣ ಒದಗಿಸಲಾಗುತ್ತಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು. ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ಅಲ್ಲಿನ ಜನರಿಗೆ ಒಳ್ಳೆಯದೇ.

ಆದರೆ, ಈಗಾಗಲೇ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಕೊರತೆ ಇದೆ, ಬೋಧಕ ಸಿಬ್ಬಂದಿಯೂ ಇಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸಲು, ಅಲ್ಲಿನ ಬಡವರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರ ವಿಶೇಷ ಕಾಳಜಿ ವಹಿಸಬೇಕಿದೆ.

ಖಾಸಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುತ್ತಿದ್ದು, ಸರ್ಕಾರದಿಂದ ಕಠಿಣ ಕ್ರಮಗಳನ್ನು ಘೋಷಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.