ಸಿಯಾಚಿನ್ ನೀರ್ಗಲ್ಲು ಪ್ರದೇಶದ ಅತ್ಯಂತ ಎತ್ತರದ ಕಾವಲು ಠಾಣೆ ಸಮೀಪ ಕಳೆದ ವಾರ ಭಾರತದ ಹತ್ತು ಯೋಧರ ದುರಂತ ಸಾವು ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿಯನ್ನು ಸೇನಾ ಮುಕ್ತಗೊಳಿಸುವ ಚರ್ಚೆಗೆ ಮತ್ತೆ ಚಾಲನೆ ನೀಡಿದೆ. ಪ್ರತಿಕೂಲ ಹವಾಮಾನಕ್ಕೆ ಯೋಧರನ್ನು ಬಲಿ ಕೊಡುವುದು ಅರ್ಥಹೀನ ಎಂಬ ಕಾರಣಕ್ಕೆ ಈ ಚರ್ಚೆ ಮತ್ತೆ ಆರಂಭವಾಗಿದೆ.
ಸಿಯಾಚಿನ್‌ನಿಂದ ತಕ್ಷಣವೇ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೆಲವು ರಕ್ಷಣಾ ‘ವಿಶ್ಲೇಷಕರು’ ಕರೆ ನೀಡಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಖಡಾಖಂಡಿತವಾಗಿ ಹೇಳಿದ್ದಾರೆ. ಅಲ್ಲಿ ಸೇನೆಯನ್ನು ನಿಯೋಜಿಸುವ ನಿರ್ಧಾರವನ್ನು ರಾಷ್ಟ್ರೀಯ ಹಿತಾಸಕ್ತಿಯಿಂದ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಯೋಧರನ್ನು ಕಳೆದುಕೊಂಡಿದ್ದು ದುಃಖದ ವಿಚಾರವಾದರೂ ಭಾವನಾತ್ಮಕವಾಗಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿ ದುರಂತದ ನಂತರವೂ ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸುವ ಬೇಡಿಕೆ ಜೋರಾಗಿ ಕೇಳಿಬರುತ್ತದೆ. ‘ಪಾಕಿಸ್ತಾನದ ಪ್ರಗತಿ ಮತ್ತು ಹವಾಮಾನದ ಕಾರಣಗಳಿಗಾಗಿ’ ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸಬೇಕು ಎಂದು ಪಾಕಿಸ್ತಾನದ ಆಗಿನ ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಕಯಾನಿ ಅವರು 2012ರ ಏಪ್ರಿಲ್‌ನಲ್ಲಿ ಕರೆ ನೀಡಿದ್ದರು.
‘ಭಾರತ ಮತ್ತು ಪಾಕಿಸ್ತಾನ ಶಾಂತಿಯುತ ಸಹಬಾಳ್ವೆ ನಡೆಸಬೇಕು. ಅಭಿವೃದ್ಧಿರಹಿತ ರಕ್ಷಣೆ ಕಾರ್ಯಸಾಧ್ಯವೂ ಅಲ್ಲ, ಸ್ವೀಕಾರಾರ್ಹವೂ ಅಲ್ಲ’ ಎಂದು ಅವರು ಘೋಷಿಸಿದ್ದರು. ಇದು ಪಾಕಿಸ್ತಾನದ ಸ್ವಭಾವದಿಂದ ಸಂಪೂರ್ಣವಾಗಿ ಭಿನ್ನವಾದ ಹೇಳಿಕೆ, ಸಿಯಾಚಿನ್ ಬಗ್ಗೆ ಆ ದೇಶದ ಬದಲಾದ ನಿಲುವು.
ಈ ಬದಲಾವಣೆಗೆ ಏನು ಕಾರಣ?
2012ರ ಏಪ್ರಿಲ್ 7ರಂದು ಗಯರಿ ಪ್ರದೇಶದಲ್ಲಿ ಹಿಮಕುಸಿತಕ್ಕೆ ಸಿಕ್ಕಿ ಪಾಕಿಸ್ತಾನದ ನಾರ್ದರ್ನ್ ಲೈಟ್ ಇನ್‌ಫಂಟ್ರಿಯ 130 ಯೋಧರ ದುರಂತ ಸಾವು ಜನರಲ್ ಕಯಾನಿ ಅವರ ಹೊಸ ಚಿಂತನೆಗೆ ಕಾರಣವಾಗಿತ್ತು. ದುರಂತದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸ್ಕರದು ಎಂಬಲ್ಲಿ ಮಾತನಾಡಿದ ಜನರಲ್ ಕಯಾನಿ ಅವರು ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸುವ ಮಾತು ಆಡಿದ್ದರು. ಅಪಾಯಕಾರಿಯಾದ ಈ ಎತ್ತರ ಪ್ರದೇಶದಲ್ಲಿ ಸೇನೆಯ ನಿಯೋಜನೆ ಪಾಕಿಸ್ತಾನದ ಆಯ್ಕೆ ಅಲ್ಲ ಎಂದು ಅವರು ಹೇಳಿದ್ದರು. ‘ಪಾಕಿಸ್ತಾನದ ಸೇನೆ ಸಿಯಾಚಿನ್‌ನಲ್ಲಿ ಯಾಕೆ ಇದೆ ಎಂಬ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ’ ಎಂದ ಅವರು, 1984ರಲ್ಲಿ ಭಾರತವೇ ಈ ವಿವಾದವನ್ನು ಸೃಷ್ಟಿಸಿದೆ ಎಂಬ ಪಾಕಿಸ್ತಾನದ ನಿಲುವನ್ನು ಪುನರುಚ್ಚರಿಸಿದ್ದರು.
ಆದರೆ, ಸಿಯಾಚಿನ್ ಮತ್ತು ಸರ್ ಕ್ರೀಕ್ ಪ್ರದೇಶದಲ್ಲಿ ಭಾರತದೊಂದಿಗೆ ಶಾಂತಿಯಿಂದ ಇರುವ ಬಯಕೆಯನ್ನು ವ್ಯಕ್ತಪಡಿಸುವಾಗಲೂ ಜನರಲ್ ಕಯಾನಿ ಅವರು ಸತ್ಯ ಹೇಳುವ ವಿಚಾರದಲ್ಲಿ ಜಿಪುಣತನ ತೋರಿದ್ದರು. ವಾಸ್ತವ ಏನೆಂದರೆ, ಸಿಯಾಚಿನ್ ಪ್ರದೇಶದ ಹತ್ತಿರದಲ್ಲೆಲ್ಲೂ ಪಾಕಿಸ್ತಾನದ ಸೇನೆ ಇಲ್ಲ. ಪಾಕಿಸ್ತಾನ ಸೇನೆಯನ್ನು ನಿಯೋಜಿಸಿರುವುದು ಪಶ್ಚಿಮದ ಇಳಿಜಾರಿನಲ್ಲಿರುವ ಸಾಲ್ತೊರೊ ಪ್ರದೇಶದಲ್ಲಿ, ಇದು ಸಿಯಾಚಿನ್ ನೀರ್ಗಲ್ಲು ಪ್ರದೇಶದಿಂದ ಬಹಳ ದೂರದಲ್ಲಿದೆ ಮತ್ತು ಈ ಪ್ರದೇಶದ ಎತ್ತರವೂ ಕಡಿಮೆ.
ಸಾಲ್ತೊರೊ ಪ್ರದೇಶಕ್ಕೆ ಹೋಗುವ ಮುಖ್ಯ ಮಾರ್ಗಗಳನ್ನು ಹೊಂದಿರುವ ಸಿಯಾ ಲ ಮತ್ತು ಬಿಲಫೊಂಡ್ ಲ ಪ್ರದೇಶಗಳಲ್ಲಿ ಭಾರತ ಪ್ರಾಬಲ್ಯ ಹೊಂದಿದೆ. ಇದು ಸಮುದ್ರ ಮಟ್ಟದಿಂದ 16 ಸಾವಿರದಿಂದ 22 ಸಾವಿರ ಅಡಿ ಎತ್ತರದ ಪ್ರದೇಶ. ತನ್ನ ಸಂಪೂರ್ಣ ನಿಯಂತ್ರಣದಲ್ಲಿ ಇರುವ ಪ್ರದೇಶದಿಂದ ಹಿಂದಕ್ಕೆ ಸರಿಯುವ ಯಾವ ಅಗತ್ಯವೂ ಭಾರತದ ಸೇನೆಗೆ ಇಲ್ಲ. ಅದೂ ಅಲ್ಲದೆ, 1999ರ ಬೇಸಿಗೆಯಲ್ಲಿ ಕಾರ್ಗಿಲ್‌ನಲ್ಲಿ ಸಿಯಾಚಿನ್‌ಗೆ ಸಂಪರ್ಕ ಕಡಿತಗೊಳಿಸಲು ಪಾಕಿಸ್ತಾನದ ನಡೆಸಿದ ವಂಚನೆಯ ನೆನಪು ಭಾರತೀಯ ಸೇನೆಗೆ ಇನ್ನೂ ಮಾಸಿಲ್ಲ.
ಕಳೆದ ಮೂರು ದಶಕಗಳ ಅವಧಿಯಲ್ಲಿ ವಾಯುಪಡೆಯ ಸಮರ್ಥ ಬೆಂಬಲದ ಮೂಲಕ ಸೇನೆಯು ಇಡೀ ಜಗತ್ತಿಗೆ ಅಚ್ಚರಿ ಉಂಟು ಮಾಡುವ ರೀತಿಯಲ್ಲಿ ಅಪಾಯಕಾರಿ ಬೆಟ್ಟಗಳನ್ನು ಹೇಗೆ ನಿಭಾಯಿಸಬೇಕು ಎಂಬುದರಲ್ಲಿ ಪ್ರಾವೀಣ್ಯ ಪಡೆದಿದೆ. ಅಲ್ಲಿ ಭಾರತೀಯ ಸೇನೆಯ ರಕ್ತ ಹರಿದಿದೆ. ಸೇನೆಯು ಅಲ್ಲಿ ಅಪಾರವಾಗಿ ತ್ಯಾಗಗಳನ್ನು ಸಹಿಸಬೇಕಾಗಿ ಬಂದಿದೆ. ಪ್ರತಿಕೂಲ ಹವಾಮಾನಕ್ಕೆ ದೊಡ್ಡ ಬೆಲೆಯನ್ನು ತೆತ್ತಿದೆ. ಹಾಗಾಗಿಯೇ, ಸಾಲ್ತೊರೊ ಕೊರಕಲು ಮತ್ತು ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ಸೇನಾಮುಕ್ತಗೊಳಿಸುವುದಕ್ಕೆ ತನ್ನ ವಿರೋಧ ಇದೆ ಎಂದು ಸೇನಾ ನಾಯಕತ್ವವು ಮತ್ತೆ ಮತ್ತೆ ರಾಜಕೀಯ ನಾಯಕರಿಗೆ ಸ್ಪಷ್ಟಪಡಿಸಿದೆ.
ಎರಡೂ ದೇಶಗಳು 1949ರಲ್ಲಿ ಮಾಡಿಕೊಂಡ ಕರಾಚಿ ಒಪ್ಪಂದ ಮತ್ತು 1972ರಲ್ಲಿ ಮಾಡಿಕೊಂಡ ಶಿಮ್ಲಾ ಒಪ್ಪಂದದ ವ್ಯಾಖ್ಯಾನವೇ ಈ ಇಡೀ ಸಮಸ್ಯೆಯ ಕೇಂದ್ರ ಬಿಂದು. ಈ ಸಂಧಾನಗಳ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಎನ್‌ಜೆ 9842 ಎಂದು ಗುರುತಿಸಲಾಗುವ ಪ್ರದೇಶದ ವರೆಗೆ ಮಾತ್ರ ತಮ್ಮ ಗಡಿಗಳನ್ನು ಗುರುತಿಸಿಕೊಂಡಿವೆ. ಇದರಲ್ಲಿ 1949ರ ಒಪ್ಪಂದದಲ್ಲಿ ಒಪ್ಪಿಕೊಳ್ಳಲಾದ 772 ಕಿಲೊಮೀಟರ್ ಉದ್ದದ ಎಲ್‍ಒಸಿ ಅಥವಾ ನಿಯಂತ್ರಣ ರೇಖೆಯೂ (ಕದನ ವಿರಾಮ ರೇಖೆ) ಸೇರಿದೆ. ಎನ್‌ಜೆ 9842 ಪ್ರದೇಶದಿಂದ ಎರಡೂ ದೇಶಗಳ ಗಡಿ ಆರಂಭವಾಗುತ್ತದೆ ಎಂದು ಒಪ್ಪಂದದಲ್ಲಿ ಹೇಳಲಾಗಿದೆ.
ಕದನ ವಿರಾಮ ರೇಖೆಯನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ. ಇಪ್ಪತ್ತಮೂರು ವರ್ಷಗಳ ನಂತರ 1972ರ ಡಿಸೆಂಬರ್‌ನಲ್ಲಿ ಕದನ ವಿರಾಮ ರೇಖೆಯನ್ನು ನಿಯಂತ್ರಣ ರೇಖೆ ಎಂದು ದೃಢಪಡಿಸಿಕೊಳ್ಳಲಾಗಿದೆ. ಇದು ಆಗ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ ಮತ್ತು ಜುಲ್ಫೀಕರ್ ಅಲಿ ಭುಟ್ಟೊ ಅವರ ನಡುವೆ ನಡೆದ ಸುಚೇತಗಡ ಒಪ್ಪಂದ. ನಿಯಂತ್ರಣ ರೇಖೆ ಉತ್ತರ ದಿಕ್ಕಿಗೆ ಮುಂದುವರಿದು ಸಾಲ್ತೊರೊ ಪರ್ವತ ಪ್ರದೇಶದ ಶಿಖರದವರೆಗೆ ಸಾಗುತ್ತದೆ ಎಂದು ಭಾರತ ಒಪ್ಪಂದವನ್ನು ವ್ಯಾಖ್ಯಾನಿಸುತ್ತಿದೆ (ಇದು ಅಂತರರಾಷ್ಟ್ರೀಯ ಕರಾರು ಪ್ರಕಾರವೂ ಸರಿ). ಆದರೆ ಪಾಕಿಸ್ತಾನದ ವ್ಯಾಖ್ಯಾನ ಭಿನ್ನವಾಗಿದೆ. ಆ ದೇಶ ಹೇಳುವ ಪ್ರಕಾರ, ನಿಯಂತ್ರಣ ರೇಖೆ ಈಶಾನ್ಯಕ್ಕೆ ಮುಂದುವರಿದು ಟಿಬೆಟ್‌ಗೆ ಸಾಗುವ ಕಾರಾಕೋರಂ ಮಾರ್ಗ ಸೇರಬೇಕು.
ಸಿಯಾಚಿನ್ ನೀರ್ಗಲ್ಲು ಪ್ರದೇಶ ಮತ್ತು ಸಾಲ್ತೊರೊದ ಮೇಲೆ ಭಾರತೀಯ ಸೇನೆಯ ನಿಯಂತ್ರಣ ಲಡಾಖ್‌ಗೆ ರಕ್ಷಾ ಕವಚವಾಗಿದೆ. ಲಡಾಖ್ ಮತ್ತು ಕಾಶ್ಮೀರಕ್ಕೆ ಪ್ರವೇಶ ಒದಗಿಸುವ ಹಲವು ಪ್ರಮುಖ ಮಾರ್ಗಗಳ ಮೇಲೆ ಭಾರತಕ್ಕೆ ನಿಯಂತ್ರಣ ಒದಗಿಸುತ್ತದೆ ಎಂದು ಸಿಯಾಚಿನ್ ನೀರ್ಗಲ್ಲು ಪ್ರದೇಶ ಮತ್ತು ಉತ್ತರ ಕಮಾಂಡ್‌ನಲ್ಲಿ ಕೆಲಸ ಮಾಡಿದ ಹಲವು ಅಧಿಕಾರಿಗಳು ಬಹಳ ಸಲ ಹೇಳಿದ್ದಾರೆ.
ಆದರೆ ಸಾಲ್ತೊರೊ ಪರ್ವತ ಪ್ರದೇಶದಲ್ಲಿ ಕಾವಲು ಠಾಣೆಗಳನ್ನು ಹೊಂದಿರುವುದು ವ್ಯರ್ಥ ಸಾಹಸ ಎಂದು ಹಲವು ರಕ್ಷಣಾ ಪರಿಣತರು ಹೇಳುತ್ತಾರೆ. ಇದು ಯುದ್ಧ ತಂತ್ರದ ದೃಷ್ಟಿಯಿಂದ ಮಹತ್ವದ್ದಾದರೂ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಲ್ಲ ಎಂದು ಅವರು ವಾದಿಸುತ್ತಾರೆ. ‘ಸಿಯಾಚಿನ್‌ನ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ ಎಂಬುದು ಸ್ಪಷ್ಟ. ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಪ್ರಯೋಜನ ಒದಗಿಸಿದ ಪ್ರಮುಖ ಯುದ್ಧತಂತ್ರದಲ್ಲಿ ಇದು ಅತ್ಯಂತ ಮುಖ್ಯವಾದುದು’ ಎಂದು ಸೇನೆಯ ಅಧಿಕಾರಿಯೊಬ್ಬರು ಬರೆದಿದ್ದಾರೆ.
ಆವಿಷ್ಕಾರಗಳು, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲಾಗಿದ್ದು, ಭಾರತೀಯ ಸೇನೆ ಇಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ. ಮಾನಸಿಕವಾಗಿ ಮತ್ತು ಕಾರ್ಯನಿರ್ವಹಣೆಯ ಮಟ್ಟದಲ್ಲಿ ಮೇಲ್ಮೆಯನ್ನು ಸಂಪಾದಿಸಿದೆ. ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿ ಅಲ್ಲಿಂದ ಸೇನೆಯನ್ನು ಹಿಂದಕ್ಕೆ ಪಡೆಯುವುದು ಮೂರ್ಖತನವಾಗುತ್ತದೆ.
ಭಾರತೀಯ ಸೇನೆಯು ಮಾಡಬೇಕಿರುವ ಅಪಾರ ವೆಚ್ಚ ಮತ್ತು ಮಾನವ ಶ್ರಮವನ್ನು ಮುಂದಿಟ್ಟುಕೊಂಡು ಸ್ವಯಂ ಘೋಷಿತ ವಿಶ್ಲೇಷಕರು ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸಬೇಕು ಎಂದು ವಾದಿಸುತ್ತಿದ್ದಾರೆ. ಹಾಗಾಗಿ ಇಲ್ಲಿ ಆಗುತ್ತಿರುವ ನಷ್ಟವನ್ನು ವಿಶ್ಲೇಷಿಸೋಣ: 1984ರಿಂದ 2007ರ ನಡುವಣ ಅವಧಿಯಲ್ಲಿ ಸಿಯಾಚಿನ್‌ನಲ್ಲಿ 884 ಯೋಧರು ಸಾವನ್ನಪ್ಪಿದ್ದು, 13,022 ಯೋಧರು ಗಾಯಗೊಂಡಿದ್ದಾರೆ ಎಂದು ಸಂಸತ್ತಿಗೆ ತಿಳಿಸಲಾಗಿದೆ.
ಈ ಮಾಹಿತಿಯ ಪ್ರಕಾರ, ವರ್ಷಕ್ಕೆ ಸರಾಸರಿ 38 ಯೋಧರು ಮೃತಪಟ್ಟಿದ್ದಾರೆ ಮತ್ತು 550ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಯುದ್ಧದಿಂದ ಜೀವಹಾನಿ ಆಗಿಲ್ಲ. ಪ್ರತಿಕೂಲ ಹವಾಮಾನದಿಂದ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಜೀವಹಾನಿಯೂ ಬೆರಳೆಣಿಕೆಯ ಮಟ್ಟಕ್ಕೆ ಇಳಿದಿದೆ. ಸಂಘರ್ಷ ಆರಂಭಗೊಂಡ ಮೊದಲ ಎರಡು ದಶಕಗಳ ಅವಧಿಯಲ್ಲಿ ಪ್ರತಿಕೂಲ ಪರಿಸ್ಥಿತಿ, ಯುದ್ಧದಿಂದ ಭಾರಿ ನಷ್ಟ ಉಂಟಾಗಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ.
ಹಣಕಾಸಿನ ವಿಚಾರಕ್ಕೆ ಬಂದರೆ, 1984ರ ಆಪರೇಷನ್ ಮೇಘದೂತದ ಬಳಿಕ ₹6,400 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈಗ ಅಲ್ಲಿ ಆಗುತ್ತಿರುವ ವಾರ್ಷಿಕ ವೆಚ್ಚ ₹365 ಕೋಟಿ. ವರ್ಷಕ್ಕೆ ₹2.3 ಲಕ್ಷ ಕೋಟಿ ವೆಚ್ಚ ಮಾಡುತ್ತಿರುವ ಸೇನೆಗೆ ಇದೊಂದು ಹೊರೆಯೇ ಅಲ್ಲ.
ಕಳೆದ ವರ್ಷಗಳಲ್ಲಿ ಸಿಯಾಚಿನ್‌ನಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೀಮೆ ಎಣ್ಣೆ ಮತ್ತು ನೀರು ಸಾಗಿಸಲು ಕೊಳವೆ ಮಾರ್ಗಗಳನ್ನು ಹಾಕಲಾಗಿದೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆಯೂ ಸೌಲಭ್ಯಗಳು ಉತ್ತಮಗೊಂಡಿವೆ. ಹಾಗಾಗಿ ಈಗ ಅಲ್ಲಿ ಆಗುತ್ತಿರುವ ವೆಚ್ಚ ಮುಖ್ಯವಾಗಿ ನಿರ್ವಹಣೆ ಹಾಗೂ ಸೌಲಭ್ಯಗಳ ಇನ್ನಷ್ಟು ಸುಧಾರಣೆಗಷ್ಟೇ ಸೀಮಿತವಾಗಿದೆ.
ಜೀವನ ಮಟ್ಟ, ಆರೋಗ್ಯ ಸೌಲಭ್ಯಗಳು ಮತ್ತು ಸಂವಹನ ವ್ಯವಸ್ಥೆ ಉತ್ತಮಗೊಂಡಿವೆ. ಹಾಗಾಗಿ ನಷ್ಟದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹಾಗಿರುವಾಗ ಈಗ ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ಸೇನಾಮುಕ್ತಗೊಳಿಸುವ ಕೂಗು ಯಾಕೆ? ಅದಕ್ಕಿಂತಲೂ ಮುಖ್ಯವಾಗಿ ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸುವುದು ಸಾಧ್ಯವೇ? ಈ ವಿಚಾರದ ಬಗ್ಗೆ ಹಲವು ಪರಿಣತರು ವಿಶ್ಲೇಷಣೆ ನಡೆಸಿದ್ದಾರೆ. ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಇತರ ವಿಚಾರಗಳ ಹಾಗೆಯೇ ಈ ವಿಷಯದಲ್ಲಿಯೂ ಅಭಿಪ್ರಾಯ ಭೇದ ಇದೆ.
ಹಲವು ಶಾಂತಿವಾದಿಗಳು ಸಿಯಾಚಿನ್‌ನಿಂದ ಏಕಪಕ್ಷೀಯವಾಗಿ ಸೇನೆಯನ್ನು ಹಿಂದಕ್ಕೆ ಕರೆಸಬೇಕು ಎಂದು ಪ್ರತಿಪಾದಿಸುತ್ತಾರೆ. ಸೇವೆಯಲ್ಲಿದ್ದಾಗ ಗಿಡುಗಗಳಾಗಿದ್ದು, ನಿವೃತ್ತರಾದ ಬಳಿಕ ಪಾರಿವಾಳಗಳಾಗಿರುವ ಹಲವು ಸೇನಾಧಿಕಾರಿಗಳೂ ಈ ವರ್ಗದಲ್ಲಿ ಸೇರಿದ್ದಾರೆ. ಪಾಕಿಸ್ತಾನ ಎದುರಿಸುತ್ತಿರುವ ಒತ್ತಡಗಳನ್ನು ಭಾರತ ಪರಿಗಣನೆಗೆ ತೆಗೆದುಕೊಳ್ಳಬೇಕು; ಪಾಕಿಸ್ತಾನ ಸೇನೆ ಸೋತಿದೆ ಎಂಬ ಭಾವನೆ ಉಂಟಾಗದ ರೀತಿಯಲ್ಲಿ ಆ ದೇಶಕ್ಕೆ ಮುಖ ಉಳಿಸಿಕೊಳ್ಳುವುದು ಸಾಧ್ಯವಾಗುವ ರೀತಿಯ ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂದು ಹಲವು ರಾಜತಂತ್ರಜ್ಞರು ಮತ್ತು ವಿಶ್ಲೇಷಕರು ಹೇಳುತ್ತಾರೆ.
ಆದರೆ ಇದು ಅತ್ಯಂತ ಅಸಂಬದ್ಧ ನಿಲುವು. ಸಾಲ್ತೊರೊ–ಸಿಯಾಚಿನ್ ಪ್ರದೇಶವನ್ನು ಸೇನಾಮುಕ್ತಗೊಳಿಸುವ ಬಯಕೆ ಪಾಕಿಸ್ತಾನಕ್ಕೆ ಇದ್ದರೆ, ಮೊತ್ತ ಮೊದಲಿಗೆ, ಸಿಯಾಚಿನ್‌ನ ಹತ್ತಿರಕ್ಕೆ ಸುಳಿಯುವುದಕ್ಕೂ ತನಗೆ ಸಾಧ್ಯವಾಗಿಲ್ಲ ಎಂಬುದನ್ನು ಆ ದೇಶ ಒಪ್ಪಿಕೊಳ್ಳಬೇಕು. ಕಳೆದ ಮೂರು ದಶಕಗಳ ಅವಧಿಯಲ್ಲಿ ಭಾರತದ ಯೋಧರು ಮಾಡಿರುವ ತ್ಯಾಗ ಅಪಾರ. ಹಾಗಾಗಿ, ಅತ್ಯಂತ ನಿಖರವಾದ ಭರವಸೆ ಸಿಗದೆ ಸಂಪೂರ್ಣ ನಿಯಂತ್ರಣದಲ್ಲಿ ಇರುವ ಸಿಯಾಚಿನ್‌ನಿಂದ ಸೇನೆಯನ್ನು ವಾಪಸ್ ಕರೆಸುವುದು ಮೂರ್ಖತನ.
ಲೇಖಕ ರಕ್ಷಣಾ ವಿಶ್ಲೇಷಕ ಮತ್ತು
ಭಾರತ್‌ಶಕ್ತಿ ಡಾಟ್ ಇನ್‌ನ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.