ADVERTISEMENT

‘ಮುತ್ತಿನಹಾರ’ದ ಮೊದಲನೆ ಅಧ್ಯಾಯ

​ಪ್ರಜಾವಾಣಿ ವಾರ್ತೆ
Published 9 ಮೇ 2015, 20:19 IST
Last Updated 9 ಮೇ 2015, 20:19 IST

ನಾನು, ವಿಷ್ಣು, ಸುಹಾಸಿನಿ ಸಜ್ಜಾದೆವು. ‘ಮುತ್ತಿನಹಾರ’ ಸಿನಿಮಾದ ಒಟ್ಟು ಚಿತ್ರೀಕರಣದ ದಿನಗಳು 120 ಎಂದು ನಿಗದಿಯಾಯಿತು. ಹಸಿರು, ಮರಳುಗಾಡು ಮತ್ತು ಮಂಜಿನ ಪ್ರದೇಶದ ಕಥೆಯನ್ನು ಸಾಂಕೇತಿಕವಾಗಿ ವಿಂಗಡಿಸಿಕೊಂಡೆವು. ಹಸಿರು-ಮಂಜು ಪ್ರೀತಿಯ ಸೂಚಕವಾದರೆ, ಮರಳುಗಾಡು ನೋವಿನ ಸಂಕೇತ. ಸಹಾಯಕ ನಿರ್ದೇಶಕರಾದ ರಾಮನಾಥ, ಶ್ರೀನಿವಾಸ್, ಟೇಶಿ ವೆಂಕಟೇಶ್ ರಾತ್ರಿ ಎಲ್ಲಾ ಕೆಲಸ ಮಾಡಿ, ಚಿತ್ರೀಕರಣಕ್ಕೆ ಅಗತ್ಯವಿದ್ದ ಸಣ್ಣ ಸಣ್ಣ ಪ್ರಾಪರ್ಟೀಸ್‌ನೆಲ್ಲಾ ಒಟ್ಟುಮಾಡಿದರು. ನಾನು ಆಗ ಇನ್ನೂ ಮೈಸೂರಿನಲ್ಲಿ ಬಣ್ಣದ ಗೆಜ್ಜೆ ಚಿತ್ರೀಕರಣದಲ್ಲಿ ತೊಡಗಿದ್ದೆ. ಬೆಳಿಗ್ಗೆ ಆ ಸಿನಿಮಾ ಕುರಿತು ಚಿಂತೆ ನಡೆಸಿದರೆ, ಸಂಜೆ ಮನಸ್ಸೆಲ್ಲಾ ಮುತ್ತಿನಹಾರದ ಸಿದ್ಧತೆಯಲ್ಲಿ ಮುಳುಗಿಹೋಗುತ್ತಿತ್ತು. ರಾತ್ರಿ ಒಂದಿಷ್ಟು ದಿನ ಕುಳಿತು ಮುತ್ತಿನಹಾರದ ಬಜೆಟ್ ಎಷ್ಟಾಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಸುಮಾರು ಒಂದೂವರೆ ಕೋಟಿ ರೂಪಾಯಿ ಇಲ್ಲದೆ ಆ ಸಿನಿಮಾ ಮಾಡಲು ಸಾಧ್ಯವಿರಲಿಲ್ಲ. ಆ ಮೊತ್ತವನ್ನು ಕಲ್ಪಿಸಿಕೊಂಡಾಗಲೆಲ್ಲಾ ಎದೆಬಡಿತ ಹೆಚ್ಚಾಗುತ್ತಿತ್ತು. ಕಥೆ ಓದಿದರೆ ಏನೋ ಹುಮ್ಮಸ್ಸು ಬಂದು, ದೇವರ ಮೇಲೆ ಭಾರ ಹಾಕಿ ಅದನ್ನು ಮಾಡಲೇಬೇಕು ಎನಿಸುತ್ತಿತ್ತು.

‘ಬಣ್ಣದ ಗೆಜ್ಜೆ’ ಸಿನಿಮಾವನ್ನು ಎರಡು ಭಾಷೆಗಳಲ್ಲಿ ಮಾಡಿದ್ದೆ. ಏಕಕಾಲದಲ್ಲಿ ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣ. ಅದೇ ಒಂದು ಸಾಹಸ. ಕನ್ನಡದಲ್ಲಿ ರವಿಚಂದ್ರನ್ ನಾಯಕ, ತೆಲುಗಿನಲ್ಲಿ ನಾಗಾರ್ಜುನ. ಅಷ್ಟು ಹೊತ್ತಿಗೆ ನಮ್ಮ ಕಲಾ ನಿರ್ದೇಶಕ ಜಾನ್ ದೇವರಾಜ್ ಮುತ್ತಿನಹಾರದ ಸಿದ್ಧತೆಯಲ್ಲಿ ಮುಳುಗಿದ್ದರು. ಕಥೆಯ ಆರಂಭ ಬರ್ಮಾದಿಂದ, ಮೊದಲನೆಯ ವಿಶ್ವಯುದ್ಧದಿಂದ. ಆವತ್ತಿನ ಬಟ್ಟೆ ಬರೆ ಮೊದಲಾದ ಎಲ್ಲಾ ಪ್ರಾಪರ್ಟಿಗಳನ್ನೂ ಹೊಂದಿಸಿದ್ದರು. ದೀಪ, ಊಟದ ತಟ್ಟೆ, ಸೋಫಾ ಹೀಗೆ ನೂರಾರು ಪ್ರಾಪರ್ಟಿಗಳನ್ನು ಹೊಂದಿಸಲೇ ಸುಮಾರು ಹಣ ಖರ್ಚಾಗಿತ್ತು. ಆ ಸಿದ್ಧತೆಗಳು ನಡೆಯುತ್ತಿದ್ದರೂ ನನಗೆ ಛಾಯಾಗ್ರಾಹಕರು ಇನ್ನೂ ಸಿಕ್ಕಿರಲಿಲ್ಲ. ಪಿ.ಎಸ್. ಪ್ರಕಾಶ್ ಆಗ ನನ್ನ ಬಹುತೇಕ ಚಿತ್ರಗಳ ಛಾಯಾಗ್ರಾಹಕರಾಗಿದ್ದರು. ಆದರೆ ನನಗೆ ಬೆಂಗಳೂರಿನ ಛಾಯಾಗ್ರಾಹಕರೇ ಬೇಕು ಎನ್ನಿಸಿತ್ತು. ಗೌರಿಶಂಕರ್ ಅವರನ್ನು ಸಂಪರ್ಕಿಸಿದೆ. ಅವರು ಅದ್ಭುತವಾದ ಛಾಯಾಗ್ರಾಹಕ. ರಾಜ್‌ಕುಮಾರ್ ಅವರ ಅನೇಕ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದರು. ಅವರ ಡೇಟ್ಸ್ ಆಗ ಹೊಂದಿಕೆಯಾಗಲಿಲ್ಲ. ಮುಂದೆ ನಾನು, ಅವರು ಐದಾರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆವು. ನನ್ನ ‘ಮುಂಗಾರಿನ ಮಿಂಚು’ ಸಿನಿಮಾ ಒಂದು ದೊಡ್ಡ ಪ್ರಯೋಗ. ಇಡೀ ಸಿನಿಮಾವನ್ನು ಮಳೆಯಲ್ಲಿಯೇ ಚಿತ್ರೀಕರಿಸಿದ್ದೆವು. ಆಗ ಆ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬರಬೇಕಿತ್ತು. ಕನ್ನಡದವರೇ ಒಬ್ಬ ಜ್ಯೂರಿ ಅದಕ್ಕೆ ಕಲ್ಲುಹಾಕಿದರು ಎಂದು ಯಾರಿಂದಲೋ ಗೊತ್ತಾಯಿತು. ಕೊನೆಗೆ ಡಿ.ವಿ.ರಾಜಾರಾಂ ಅವರನ್ನು ಛಾಯಾಗ್ರಹಣಕ್ಕೆ ಆರಿಸಿಕೊಂಡೆ. ‘ಬಂಧನ’ ಸಿನಿಮಾದಲ್ಲಿ ನಾನು, ಅವರು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರು ಅತ್ಯುತ್ತಮ ಛಾಯಾಗ್ರಾಹಕ. ಎಂ.ಜಿ.ಆರ್, ರಾಜ್‌ಕುಮಾರ್, ವಿಷ್ಣು, ಅಂಬಿ ಜೊತೆಯಲ್ಲಿ ಅವರು ಕೆಲಸ ಮಾಡಿದ್ದರು. ಶ್ರಮಜೀವಿ. ಮರಳುಗಾಡು, ಮಂಜು ಎರಡೂ ವಾತಾವರಣದಲ್ಲಿ ಕೆಲಸ ಮಾಡಬೇಕಿದ್ದುದರಿಂದ ಛಾಯಾಗ್ರಾಹಕರಿಗೆ ಅದೊಂದು ಸವಾಲು. ನನ್ನ ಸಿನಿಮಾ ಎಂದರೆ ಒಂದು ತರಹ ದೆವ್ವದಂಥ ಕೆಲಸ. ಅದನ್ನೆಲ್ಲಾ ಸಹಿಸಿಕೊಂಡ ರಾಜಾರಾಂ, ಮುತ್ತಿನಹಾರ ಸಿನಿಮಾವನ್ನು ಬಹಳ ಚೆನ್ನಾಗಿ ಚಿತ್ರಿಸಿಕೊಟ್ಟರು. ಅವರ ಕೆಲಸಕ್ಕೆ ರಾಜ್ಯ ಪ್ರಶಸ್ತಿ ಕೂಡ ಸಂದಿತು.

ಮುತ್ತಿನಹಾರ ಸಿನಿಮಾಗೆ ರಾಜಾರಾಂ ಅವರನ್ನು ಆಯ್ಕೆ ಮಾಡಿಕೊಂಡ ನಂತರವೂ ನನ್ನಲ್ಲಿ ಎರಡು ಪ್ರಶ್ನೆಗಳು ಉಳಿದಿದ್ದವು. ಒಂದು-

ಸೇನೆಯವರ ಅನುಮತಿ ಪಡೆಯುವುದು ಹೇಗೆ ಎನ್ನುವುದು. ಇನ್ನೊಂದು- ಬಜೆಟ್ ಹೊಂದಿಸುವುದು. ವಿಷ್ಣು ಹತ್ತಿರ ನನ್ನ ಕಷ್ಟವನ್ನೆಲ್ಲಾ ಹೇಳಿಕೊಂಡೆ. ನಾವು ಅಂದುಕೊಂಡಂತೆಯೇ ಇಡೀ ಸಿನಿಮಾ ಚಿತ್ರೀಕರಣ ಮುಗಿಸುವುದು ಕಷ್ಟ. ಸೇನೆಯವರ ಅನುಮತಿ, ಋತುಮಾನಗಳ ಜೊತೆಗಿನ ಹೋರಾಟ ಇವೆರಡನ್ನೂ ಎದುರಿಸುವ ಅನಿವಾರ್ಯ ನಮ್ಮ ಎದುರು ಇತ್ತು. ನೀನು ಸ್ವಲ್ಪ ಡೇಟ್ಸ್ ಹೊಂದಿಸಿಕೊಳ್ಳಬೇಕಾಗುತ್ತದೆ ಎಂದು ಸೂಕ್ಷ್ಮವಾಗಿ ವಿಷ್ಣುವಿಗೆ ಹೇಳಿದೆ. ಆಗ ಅವನ ಕೈಲಿ ಇನ್ನೂ ಎರಡು ಮೂರು ಚಿತ್ರಗಳಿದ್ದವು. ವಿಷ್ಣು ಒಂದೂ ಮಾತನಾಡಲಿಲ್ಲ. ನೀನು ಬೇರೆ ಕೆಲಸ ನೋಡು, ಯಾವಾಗ ಡೇಟ್ಸ್ ಕೇಳಿದರೂ ಕೊಡುತ್ತೀನಿ ಎಂದು ಹೇಳಿ ನನ್ನನ್ನು ದೆಹಲಿಗೆ ಕಳುಹಿಸಿ ಕೊಟ್ಟ. ಆ ವಿಚಾರದಲ್ಲಿ ವಿಷ್ಣು ಗ್ರೇಟ್. ಒಂದು ಒಳ್ಳೆಯ ಸಿನಿಮಾ ಆಗಬೇಕಾದರೆ ಅದರ ನಾಯಕ ನಟ ತುಂಬಾ ಮುಖ್ಯ. ಅವನಿಗೆ ಕಾಳಜಿ ಇರಬೇಕು. ಏನೋ ಕಾಟಾಚಾರಕ್ಕೆ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ನಾನು ವಿಷ್ಣುವನ್ನು ಮರೆಯಲು ಸಾಧ್ಯವಿಲ್ಲ. ಇವತ್ತು ‘ಮುತ್ತಿನಹಾರ’ ಕ್ಲಾಸಿಕ್ ಸಿನಿಮಾ ಆಗಿ ಉಳಿದಿರಲು ವಿಷ್ಣು ಆ ಸಿನಿಮಾಗೆ ಸರ್ವಸ್ವವನ್ನೂ ಧಾರೆ ಎರೆದುಕೊಟ್ಟಿದ್ದೂ ಕಾರಣ. ಅದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.

ನಾನು ದೆಹಲಿಗೆ ಹೋದೆ. ಸೇನಾ ಕಾರ್ಯದರ್ಶಿಯ ಬಳಿ ಹೋಗಿ, ಅವರು ಕಳುಹಿಸಿದ್ದ ಕಾಗದ ತೋರಿಸಿದೆ. ಹೇಮಾಮಾಲಿನಿ ನಿರ್ಮಾಣದ ಸಿನಿಮಾವನ್ನು ಆ ಲೊಕೇಷನ್‌ನಲ್ಲಿ ಚಿತ್ರೀಕರಿಸಿದ್ದನ್ನು ನೆನಪಿಸಿ, ಮತ್ತೆ ಯಾಕೆ ಅನುಮತಿ ಕೊಡುವುದಿಲ್ಲ ಎಂದು ಕೇಳಿದೆ. ‘ಸಾರ್‌, ಆ ಸಿನಿಮಾಗೆ ರಕ್ಷಣಾ ಸಚಿವರು ವಿಶೇಷ ಅನುಮತಿ ನೀಡಿದ್ದರು. ಈಗ ಅಲ್ಲಿ ಪರಿಸ್ಥಿತಿ ಶಾಂತವಾಗಿಲ್ಲ. ಉಗ್ರರ ಕಾಟ ಶುರುವಾಗಿದೆ. ಅದನ್ನು ಸೇನೆಯವರು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದು, ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡುವುದು ಸಾಧ್ಯವೇ ಇಲ್ಲ. ಬೇಕಾದರೆ ಬೇರೆ ಎಲ್ಲಾದರೂ ಚಿತ್ರೀಕರಣ ಮಾಡಿ’ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟರು. ಆಗಲೂ ಎದೆ ಒಡೆದುಹೋದಂತೆ ಆಯಿತು. ಈ ಸಿನಿಮಾ ಮಾಡುವಾಗ ಅದೆಷ್ಟು ಸಲ ಎದೆ ಒಡೆದುಹೋಗಿದೆಯೋ? ಒಬ್ಬ ನಿರ್ಮಾಪಕ–ನಿರ್ದೇಶಕ ಒಂದು ಸಿನಿಮಾ ಮುಗಿಸುವಷ್ಟರಲ್ಲಿ ನೂರಾರು ಸಲ ಇಂಥ ಆಘಾತಗಳು ಎದುರಾಗುತ್ತವೆ. ಅವೆಲ್ಲವನ್ನೂ ಸಹಿಸಿಕೊಳ್ಳಲು ಗುಂಡಿಗೆ ಗಟ್ಟಿಯಾಗಿ ಇರಬೇಕಷ್ಟೆ. ಮುತ್ತಿನಹಾರ ಸಿನಿಮಾ ಮಾಡುವ ಮಹತ್ವಾಕಾಂಕ್ಷೆಯೇ ಎಲ್ಲ ವನ್ನೂ ಸಹಿಸಿಕೊಳ್ಳುವ ಸ್ಥೈರ್ಯವನ್ನು ನನಗೆ ಕೊಟ್ಟಿದ್ದು.

ದೆಹಲಿಯಲ್ಲಿ ಆ ದಿನ ರಾತ್ರಿ ನಮ್ಮ ಅತ್ತೆಯವರ ಮನೆಗೆ ಹೋದೆ. ಅವರು ನಮ್ಮ ತಂದೆಯ ತಂಗಿ. ಮೈಸೂರಿನಲ್ಲಿ ಓದಿ, ದೆಹಲಿಯ ಜವಾಹರಲಾಲ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದರು. ದೇಶದ ಪ್ರಧಾನಿ ಆದರಲ್ಲ, ಡಾ. ಮನಮೋಹನ್‌ ಸಿಂಗ್‌; ಅವರ ಹಳೆಯ ವಿದ್ಯಾರ್ಥಿನಿಯರಲ್ಲಿ ನನ್ನ ಅತ್ತೆಯೂ ಒಬ್ಬರು. ಅವರಲ್ಲಿ ನನ್ನ ಅಳಲು ತೋಡಿಕೊಂಡೆ. ರಕ್ಷಣಾ ಸಚಿವರ ಕಾರ್ಯದರ್ಶಿಯ ಒಂದು ಅಪಾಯಿಂಟ್‌ಮೆಂಟ್‌ ಕೊಡಿಸಿದರು. ಅವರು ನನಗೆ ಬಹಳ ಸಹಾಯ ಮಾಡಿ, ಸೇನೆಯ ಅನುಮತಿ ಸಿಗುವಂತೆ ಮಾಡುವ ಭರವಸೆ ಕೊಟ್ಟರು. ಆದರೆ, ಹೆಚ್ಚು ಕಾಲ ಕಾಯುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಮಾರ್ಚ್‌ ಒಳಗೆ ಅಲ್ಲಿ ಚಿತ್ರೀಕರಣ ಮುಗಿಸದೇ ಹೋದರೆ ಮಂಜು ಕರಗಲು ಪ್ರಾರಂಭವಾಗುತ್ತದೆ. ಮಂಜು ಕರಗುವ ಸಮಯದಲ್ಲಿ ಪ್ರಕೃತಿಯೆಲ್ಲಾ ಕೆಂಪು ಕೆಂಪಾಗುತ್ತದೆ. ಫೋಟೊಗ್ರಫಿಯಲ್ಲಿ ಕೆಂಪು ಮಣ್ಣಿನ ಮಿಶ್ರ ಮಂಜು ನೋಡಲು ಬಹಳ ಕಷ್ಟ. ರಕ್ಷಣಾ ಸಚಿವರ ಕಾರ್ಯದರ್ಶಿ ಆದಷ್ಟೂ ಪ್ರಯತ್ನಪಡುವುದಾಗಿ ಹೇಳಿ ನನ್ನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟರು.

ಬೆಂಗಳೂರಿಗೆ ಬಂದು ಮುಹೂರ್ತದ ದಿನ ನಿಗದಿ ಮಾಡಿದೆ. ಅಶೋಕ ಹೋಟೆಲ್‌ ಮುಹೂರ್ತಕ್ಕೆ ನನ್ನ ಅದೃಷ್ಟದ ತಾಣ. ಅಲ್ಲಿ ನನ್ನ 25ಕ್ಕೂ ಹೆಚ್ಚಿನ ಸಿನಿಮಾಗಳ ಮುಹೂರ್ತ ನಡೆದಿದೆ.

‘ಮುತ್ತಿನಹಾರ’ ಸಿನಿಮಾ ಮುಹೂರ್ತಕ್ಕೆ ರಾಜಕುಮಾರ್‌ ಅವರಿಂದ ಕ್ಲಾಪ್‌ ಮಾಡಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅವರ ಆಶೀರ್ವಾದ ತೆಗೆದುಕೊಂಡು ಅಂಥ ಸಿನಿಮಾ ಪ್ರಾರಂಭಿಸಿದರೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೆ. ಅವರನ್ನು ಆಮಂತ್ರಿಸಲು ಹೋದಾಗ ಕಥೆಯ ಎಳೆಯನ್ನು ಹೇಳಿದೆ. ‘ವಿಷ್ಣು ಬಹಳ ಅದೃಷ್ಟ ಮಾಡಿದ್ದಾರೆ.  ಬಹಳ ಒಳ್ಳೆಯ ಕಥೆ ಇದು. ನನಗೂ ಈ ರೀತಿಯ ಒಂದು ಪಾತ್ರ ಮಾಡಬೇಕೆಂಬ ಆಸೆ ಇದೆ. ಆದರೆ ನಾನು ಆ ಸಮಯದಲ್ಲಿ ಊರಿನಲ್ಲಿ ಇರುವುದಿಲ್ಲ. ಪಾರ್ವತಿಯನ್ನು ಕಳುಹಿಸಿ ಕೊಡುತ್ತೇನೆ’ ಎಂದರು. ಅಷ್ಟೇ ಅಲ್ಲ, ನಮಗೆ ಒಳ್ಳೆಯ ಮಾಂಸಾಹಾರದ ಊಟಹಾಕಿ ಕಳುಹಿಸಿಕೊಟ್ಟರು.

ಮುಹೂರ್ತಕ್ಕೆ ಯಾರನ್ನು ಕರೆಯುವುದು ಎಂದು ಯೋಚಿಸುತ್ತಿರುವಾಗ ವಾಯುಸೇನೆಯ ಯೋಧರೊಬ್ಬರು ಮೃತಪಟ್ಟ ಸುದ್ದಿ ಗೊತ್ತಾಯಿತು. ಅವರ ಪತ್ನಿ ಬೆಂಗಳೂರಿನಲ್ಲಿಯೇ ಇದ್ದರು. ಅವರನ್ನು ಭೇಟಿ ಮಾಡಿದೆ. ಅವರಿಗೆ ಆಗ ಸುಮಾರು 21 ವರ್ಷ ವಯಸ್ಸು. ಮನೆಯಲ್ಲಿ ಎರಡು ತಿಂಗಳ ಮಗು ಬೇರೆ ಇತ್ತು. ಅವರ ಮನೆಯಲ್ಲಿನ ಆ ದೃಶ್ಯ ಕಂಡು ನನ್ನ ಮನಸ್ಸು ಕರಗಿಹೋಗಿತ್ತು. ಕೊಡಗಿನ ಕುಟುಂಬ ಅದು. ಆ ಸಂಸಾರ ನೋಡಿದ ಮೇಲೆ ಕೊಡಗಿನವರಿಗೆ ದೊಡ್ಡ ಸಲ್ಯೂಟ್‌ ಹೊಡೆಯಬೇಕು ಎನ್ನಿಸಿತು. ತಮ್ಮ ಪತಿಯನ್ನು ಕಳೆದುಕೊಂಡು ಒಂದು ತಿಂಗಳೂ ಆಗಿರಲಿಲ್ಲ. ಆ ಹೆಣ್ಣು ಮಗಳು ನನ್ನನ್ನು ಮಾತನಾಡಿಸುವಾಗ ಪದೇ ಪದೇ ಒಳಗೆ ಮಗುವಿನ ಅಳು ಕೇಳುತ್ತಿತ್ತು. ಅವರು ಹೋಗಿ, ಆ ಮಗುವನ್ನು ಸಮಾಧಾನಪಡಿಸಿ ಬರುತ್ತಿದ್ದರು. ತುಸು ಅಳುಕಿನಿಂದಲೇ ನಾನು ಮುತ್ತಿನಹಾರ ಸಿನಿಮಾದ ವಿಷಯ ಹೇಳಿ, ಅವರನ್ನು ಮೊದಲ ದೃಶ್ಯಕ್ಕೆ ಸ್ವಿಚ್‌ಆನ್‌ ಮಾಡಬೇಕೆಂದು ಆಮಂತ್ರಿಸಿದೆ. ಅವರು ತುಸುವೂ ಯೋಚಿಸದೆ ಒಪ್ಪಿಕೊಂಡರು. ಅವರ ತಂದೆ–ತಾಯಿ ಕೂಡ ಖುಷಿಯಿಂದ ನನ್ನನ್ನು ಕಳುಹಿಸಿಕೊಟ್ಟರು. ಅವರು ಆ ದಿನ ಕೊಟ್ಟ ಒಳ್ಳೆಯ ಕಾಫಿ, ಆ ಸೂತಕದ ಮನೆಯ ಭಾವುಕ ವಾತಾವರಣ ಯಾವುದನ್ನೂ ಮರೆಯಲಾರೆ.

ಚಿತ್ರೀಕರಣಕ್ಕೆ ಸಿದ್ಧತೆ ಆಯಿತು. ಕನ್ನಡ ಚಿತ್ರರಂಗದ ಅನೇಕ ಹಿರಿಯರು, ಸ್ನೇಹಿತರು ಮುಹೂರ್ತಕ್ಕೆ ಬಂದಿದ್ದರು. ಆಗ ನನ್ನ ಒಬ್ಬ ಸಹಾಯಕ ನಿರ್ದೇಶಕ ‘ಶಕುನ ಒಂದು ಸರಿ ಇಲ್ಲ ಸಾರ್‌’ ಎಂದು ರಾಗ ತೆಗೆದ. ‘ಒಬ್ಬ ವಿಧವೆಯ ಕೈಲಿ ಸಿನಿಮಾ ಸ್ವಿಚ್‌ ಆನ್‌ ಮಾಡಿಸುತ್ತಾ ಇದ್ದೀರಲ್ಲ’ ಎನ್ನುವುದು ಅವನ ತಗಾದೆ. ಅಲ್ಲೇ ಎರಡು ಕೊಟ್ಟು, ಅವನ ಹಲ್ಲು ಉದುರಿಸುವಷ್ಟು ಕೋಪ ಬಂತು. ಅಷ್ಟು ಹೊತ್ತಿಗೆ ಪಾರ್ವತಮ್ಮ ಬಂದರು. ಬಾಯಿಮುಚ್ಚಿಕೊಂಡು ಕೆಲಸ ನೋಡು ಎಂದು ಸಹಾಯಕ ನಿರ್ದೇಶಕನಿಗೆ ಹೇಳಿ ನಾನು ಕೆಲಸ ಮುಂದುವರಿಸಿದೆ. ‘ಬಂಧನ’ ಸಿನಿಮಾ ಮುಹೂರ್ತ ನಡೆದದ್ದೂ ಅದೇ ಜಾಗದಲ್ಲಿ. ಆಗ ಪುಟ್ಟಣ್ಣ ಮೊದಲ ದೃಶ್ಯ ನಿರ್ದೇಶಿಸಿದ್ದರು. ‘ಮುತ್ತಿನಹಾರ’ದ ಹೊತ್ತಿಗೆ ಅವರು ಇರಲಿಲ್ಲ. ವಿಷ್ಣು, ಸುಹಾಸಿನಿ ಅದೇ ಉತ್ಸಾಹದಲ್ಲಿ ಇದ್ದರು. ಐದು ವರ್ಷದ ನಂತರ ಮತ್ತೆ ನಮ್ಮ ಕಾಂಬಿನೇಷನ್‌. ಎಲ್ಲರಿಗೂ ಕುತೂಹಲ. ನನಗೆ ಬಜೆಟ್‌ ಹೇಗೆ ಹೊಂದಿಸುವುದೋ ಎಂಬ ಪ್ರಾಣಸಂಕಟ.

ಆ ದಿನ ಸುಮಾರು 100 ಪಾರಿವಾಳಗಳನ್ನು ತರಿಸಿದ್ದೆ. ಯೋಧನನ್ನು ಕಳೆದುಕೊಂಡ ಪತ್ನಿ ಒಂದು ಪಾರಿವಾಳವನ್ನು ಹಾರಿಸಿದರು. ನಾನು, ವಿಷ್ಣು, ಸುಹಾಸಿನಿ ಉಳಿದವನ್ನು ಹಾರಿಸಿದೆವು. ಪಟಪಟನೆ ಹಾರಿದ ಪಾರಿವಾಳಗಳನ್ನೇ ನೋಡುತ್ತಾ ನಿಂತೆ. ವಿಷ್ಣು, ಸುಹಾನಿಸಿ ‘ಏನು ಆಕಾಶ ನೋಡುತ್ತಾ ಇದೀಯ’ ಎಂದರು. ನನ್ನ ಮನಸ್ಸಿನಲ್ಲಿ ಒಂದೂವರೆ ಕೋಟಿ ರೂಪಾಯಿ ಬಜೆಟ್‌ ಹೇಗೆ ಹೊಂದಿಸುವುದೋ ಎಂಬ ಚಿಂತೆ.

ಮುಂದಿನ ವಾರ: ಉಡುಗೆ–ತೊಡುಗೆಯ ಸಾಹಸ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.