ಸ್ಮಾರ್ಟ್ ಸಿಟಿ- ಇದು ಈಗ ಎಲ್ಲೆಡೆಯೂ ಅನುರಣಿಸುತ್ತಿರುವ ಪದಪುಂಜ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿಯಾಗಿ 100 ಸ್ಮಾರ್ಟ್ ಸಿಟಿಗಳ ಸ್ಥಾಪನೆಯ ಕನಸನ್ನು ಯಾವಾಗ ಹರಿಬಿಟ್ಟರೋ ಅಂದಿನಿಂದ ಭಾರತದಲ್ಲಿ ನಗರಾಭಿವೃದ್ಧಿಯ ಕುರಿತ ಚರ್ಚೆಗಳೆಲ್ಲವೂ ಸ್ಮಾರ್ಟ್ ಸಿಟಿ ಪರಿಕಲ್ಪನೆಯನ್ನೇ ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿವೆ. ಸ್ಮಾರ್ಟ್ ಸಿಟಿ ಎಂಬ ಮಾತು ಕಿವಿಗೆ ಬಿದ್ದಾಕ್ಷಣ ಆಕಾಶದೆತ್ತರಕ್ಕೆ ನಿಂತಿರುವ, ಸುತ್ತೆಲ್ಲಾ ಗಾಜಿನಿಂದ ಆವೃತ್ತವಾಗಿರುವ ಥಳುಕಿನ ಕಟ್ಟಡಗಳು ಮತ್ತು ಅತ್ಯಾಧುನಿಕ ತಾಂತ್ರಿಕ ಸವಲತ್ತುಗಳಿಂದ ತುಂಬಿರುವ ಆದರ್ಶ ನಗರವೊಂದರ ಚಿತ್ರಣವನ್ನು ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಈ ಬಗೆಯ ‘ಆದರ್ಶ’ ಚಿತ್ರಣಗಳ ಫಲವಾಗಿ ಈ ಪರಿಕಲ್ಪನೆಯ ಪರ ಮತ್ತು ವಿರೋಧದ ಚರ್ಚೆಗಳೆರಡೂ ಶಬ್ದಾಡಂಬರದಿಂದ ತುಂಬಿಕೊಂಡಿವೆ. ಈ ಹೊಸ ಪರಿಕಲ್ಪನೆಯ ಕುರಿತು ಏಕಾಏಕಿ ಒಂದು ನಿಲುವಿಗೆ ಬಂದು ಪ್ರತಿಕ್ರಿಯಿಸುವುದರ ಬದಲಿಗೆ ನಿಜಕ್ಕೂ ಸ್ಮಾರ್ಟ್ ಸಿಟಿ ಅಂದರೆ ಏನು ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತಿರುವ ನೀತಿ ನಿರೂಪಣೆಯ ಕ್ರಮವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿದೆ.
2014–15ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 100 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಕಟಿಸಿದರು. ದೊಡ್ಡ ನಗರಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾಗುವ ಉಪ ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಮಧ್ಯಮ ಗಾತ್ರದ ನಗರಗಳನ್ನು ಆಧುನೀಕರಿಸಿ ಸ್ಮಾರ್ಟ್ ಸಿಟಿಗಳನ್ನಾಗಿಸುವುದು ಅವರು ಬಜೆಟ್‌ನಲ್ಲಿ ಮುಂದಿಟ್ಟ ಸ್ಮಾರ್ಟ್ ಸಿಟಿ ಪ್ರಸ್ತಾಪದ ಸಾರ. ಇದರ ಹಿಂದೆಯೇ ನಗರಾಭಿವೃದ್ಧಿ ಸಚಿವಾಲಯ ಸ್ಮಾರ್ಟ್ ಸಿಟಿ ಕುರಿತಂತೆ ಒಂದು ‘ಪರಿಕಲ್ಪನಾತ್ಮಕ ಟಿಪ್ಪಣಿ’ಯನ್ನು ಪ್ರಕಟಿಸಿತು. ಘೋಷಣೆ ಮತ್ತು ಪರಿಕಲ್ಪನೆಯ ಮಟ್ಟದಲ್ಲಿದ್ದ ಈ ಉಪಕ್ರಮ ಸ್ಪಷ್ಟ ರೂಪ ಪಡೆದುಕೊಂಡದ್ದು 2015ರ ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ‘ಸ್ಮಾರ್ಟ್ ಸಿಟಿ ಮಿಷನ್’ನ ಮೂಲಕ. ಇದಕ್ಕೆ ಕೇಂದ್ರ ಸರ್ಕಾರ ₹ 48,000 ಕೋಟಿ ಮಂಜೂರು ಮಾಡಿದೆ.
ಸ್ಮಾರ್ಟ್ ಸಿಟಿ ಮಿಷನ್‌ನ ಧ್ಯೇಯ ಘೋಷಣೆ ಮತ್ತು ಮಾರ್ಗದರ್ಶಿ ಸೂತ್ರ ಸ್ಮಾರ್ಟ್ ಸಿಟಿಯ ವ್ಯಾಖ್ಯೆಯನ್ನು ಬಹಳ ವಿಶಾಲಾತ್ಮಕವಾಗಿಯೇ ಇಟ್ಟುಕೊಂಡಿದೆ. ಘೋಷಣಾ ಪತ್ರ ಹೇಳುವಂತೆ ‘ಸ್ಮಾರ್ಟ್ ಸಿಟಿ ಎಂಬುದು ಹಲವರಿಗೆ ಹಲವು ಅರ್ಥಗಳನ್ನು ಧ್ವನಿಸುವ ಪರಿಕಲ್ಪನೆ’. ಇದೇ ದಾಖಲೆ ಹೇಳುವಂತೆ ಇವು ಸಂಪೂರ್ಣ ಹೊಸ ನಗರಗಳಾಗಿರಬೇಕಿಲ್ಲ. ನಗರದ ಕೆಲವು ಪ್ರದೇಶಗಳನ್ನು ಮಾರ್ಪಡಿಸುವುದು ಮತ್ತು ಪುನರ್ ಅಭಿವೃದ್ಧಿಯ ಮೂಲಕ ಅಥವಾ ಹೊಸ ಉಪನಗರಗಳನ್ನು ರೂಪಿಸುವ ಮೂಲಕವೂ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಇವುಗಳ ಹೊರತಾಗಿ ಪ್ರತೀ ಸ್ಮಾರ್ಟ್ ಸಿಟಿಯೂ ಇಡೀ ನಗರಕ್ಕೆ ಅನ್ವಯಿಸುವ ಒಂದು ಸಾಮಾನ್ಯ ಉಪಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಹಾಗಿದ್ದರೆ ಒಂದು ನಗರ ಸ್ಮಾರ್ಟ್‌್ ಸಿಟಿ ಆಗುವುದು ಹೇಗೆ? ಇದಕ್ಕೆ ಎರಡು ಹಂತದ ಪ್ರಕ್ರಿಯೆ ಇದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಪ್ರತೀ ರಾಜ್ಯವೂ ತಮ್ಮಲ್ಲಿ ಸ್ಮಾರ್ಟ್ ಸಿಟಿಯಾಗಿ ಬೆಳೆಸುವ ಸಾಧ್ಯತೆ ಇರುವ ನಗರಗಳ ಪಟ್ಟಿಯೊಂದನ್ನು ತಯಾರಿಸಬೇಕು. ಎರಡನೇ ಹಂತದಲ್ಲಿ ‘ನಗರಗಳ ಆಯ್ಕೆ ಸವಾಲು’ ಅಥವಾ ಸಿಟಿ ಸೆಲೆಕ್ಷನ್ ಚಾಲೆಂಜ್ ಪ್ರಕ್ರಿಯೆ ನಡೆಯುತ್ತದೆ. ಈ ಹಂತದಲ್ಲಿ ಈಗಾಗಲೇ ನಾಮ ನಿರ್ದೇಶಿತಗೊಂಡಿರುವ ನಗರಗಳು ತಮ್ಮನ್ನು ‘ಸ್ಮಾರ್ಟ್’ ಆಗಿ ಪರಿವರ್ತಿಸಿಕೊಳ್ಳಲು ಅಗತ್ಯವಿರುವ ಯೋಜನೆಯನ್ನು ತಯಾರಿಸಿ ಸಲ್ಲಿಸಬೇಕು. ಒಂದು ಸಮಿತಿ ಇವುಗಳ ಮೌಲ್ಯಮಾಪನ ಮಾಡಿ ಯಾವ ನಗರಗಳು ಮೊದಲ ಹಂತದಲ್ಲಿ ಸ್ಮಾರ್ಟ್ ಆಗಬಹುದು ಎಂಬುದನ್ನು ನಿರ್ಧರಿಸುತ್ತದೆ. ಹೀಗೆ ಆಯ್ಕೆಯಾದ ನಗರಗಳು ಸ್ಮಾರ್ಟ್ ಸಿಟಿ ಮಿಷನ್ ನೀಡುವ ಅನುದಾನಕ್ಕೆ ಅರ್ಹವಾಗುತ್ತವೆ.
ಪ್ರಸ್ತಾವಿತ ನೂರು ಸ್ಮಾರ್ಟ್‌್ ಸಿಟಿಗಳನ್ನು ವಿವಿಧ ರಾಜ್ಯಗಳು ಹೊಂದಿರುವ ನಗರಗಳ ಸಂಖ್ಯೆ ಮತ್ತು ನಗರವಾಸಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಾಗಿದೆ. ಇದರಂತೆ ಕರ್ನಾಟಕ ರಾಜ್ಯ ಆರು ಸ್ಮಾರ್ಟ್ ಸಿಟಿಗಳಿಗೆ ಅರ್ಹವಾಗಿದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಶಿವಮೊಗ್ಗ, ತುಮಕೂರು, ದಾವಣಗೆರೆ ಮತ್ತು ಮಂಗಳೂರು ನಗರಗಳನ್ನು ರಾಜ್ಯ ಸರ್ಕಾರದ ಉನ್ನತಾಧಿಕಾರವುಳ್ಳ ಸಮಿತಿ ಪ್ರಸ್ತಾವಿತ ಸ್ಮಾರ್ಟ್ ಸಿಟಿಗಳನ್ನಾಗಿ ನಾಮನಿರ್ದೇಶನ ಮಾಡಿದೆ.
ಈ ಪಟ್ಟಿಯಲ್ಲಿ ಕಾಣಿಸದೇ ಇರುವ ಪ್ರಮುಖ ನಗರವೆಂದರೆ ಬೆಂಗಳೂರು. ದೇಶದ ಬೃಹತ್ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಹೈದರಾಬಾದ್‌ಗಳು ಈ ಪಟ್ಟಿಯಲ್ಲಿವೆ. ಆದರೆ ದೇಶದ ತಂತ್ರಜ್ಞಾನ ರಾಜಧಾನಿಯೇ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಇಲ್ಲದೇ ಇರುವುದು ವಿಪರ್ಯಾಸ. ಮೈಸೂರು ಮತ್ತು ಕಲಬುರ್ಗಿಗಳನ್ನೂ ಕರ್ನಾಟಕ ನಾಮನಿರ್ದೇಶನ ಮಾಡಿತ್ತು. ಆದರೆ ಇವುಗಳು ಅಂತಿಮ ಪಟ್ಟಿಯನ್ನು ಸೇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ರೂಪಿಸಿರುವ ಮೌಲ್ಯಮಾಪನ ಮಾರ್ಗದರ್ಶಿ ಸೂತ್ರಗಳು. ಸಾಂಸ್ಥಿಕ ಸಾಮರ್ಥ್ಯ, ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ತಮಗೆ ತಾವೇ ಒದಗಿಸಿಕೊಳ್ಳಲು ಇರುವ ಸಾಮರ್ಥ್ಯ, ಈಗ ನೀಡುತ್ತಿರುವ ಸೇವೆಗಳ ಗುಣಮಟ್ಟ, ಜೆ–ನರ್ಮ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ತೋರಿರುವ ದಕ್ಷತೆ ಇತ್ಯಾದಿಗಳನ್ನು ಮಾನದಂಡವಾಗಿ ಬಳಸಲಾಗಿತ್ತು.
ಬಿಬಿಎಂಪಿ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವಿತ 100 ಸ್ಮಾರ್ಟ್‌್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಇಲ್ಲದೇ ಇರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಆದರೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿ, ಕರ್ನಾಟಕ ಸರ್ಕಾರ ಬೆಂಗಳೂರು ನಗರವನ್ನು ಸ್ಮಾರ್ಟ್‌್ ಸಿಟಿ ಯೋಜನೆಗೆ ನಾಮನಿರ್ದೇಶನ ಮಾಡಿಯೇ ಇಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದರು. ಕರ್ನಾಟಕ ಸರ್ಕಾರದ ಈ ಸೋಮಾರಿತನ ಬೆಂಗಳೂರಿಗರಲ್ಲಿ ಬೇಸರವನ್ನುಂಟು ಮಾಡಿರಬಹುದು. ಆದರೆ ದೂರಗಾಮಿಯಾಗಿ ಆಲೋಚಿಸಿದಾಗ ಬೆಂಗಳೂರು ಈ ಪಟ್ಟಿಯಲ್ಲಿ ಇಲ್ಲದೇ ಇರುವುದೇ ಅನುಕೂಲಕರವೆಂಬಂತೆ ಕಾಣಿಸುತ್ತದೆ.
ಬಹಳ ಕಾಲದಿಂದ ಕರ್ನಾಟಕದ ನಗರಾಭಿವೃದ್ಧಿ ಎಂಬುದು ಬೆಂಗಳೂರು ಕೇಂದ್ರಿತವಾಗಿಬಿಟ್ಟಿದೆ. ಕೇಂದ್ರ ಸರ್ಕಾರದ ಜೆ–ನರ್ಮ್‌ನಂಥ ನಗರಾಭಿವೃದ್ಧಿ ಯೋಜನೆಗಳೂ ಬೆಂಗಳೂರನ್ನೇ ದೃಷ್ಟಿಯಲ್ಲಿಟ್ಟುಕೊಂಡಿವೆ. ಈ ಎಲ್ಲಾ ಕಾರಣಗಳಿಂದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬೆಂಗಳೂರು ಇಲ್ಲದೇ ಇರುವುದು ಕರ್ನಾಟಕದ ನಗರಾಭಿವೃದ್ಧಿಯನ್ನು ಬೆಂಗಳೂರಿನ ಆಚೆಗೆ ಕೊಂಡೊಯ್ಯುತ್ತದೆ. ಇದು ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ.
ಕರ್ನಾಟಕದ ಪ್ರಸ್ತಾವಿತ ಸ್ಮಾರ್ಟ್ ಸಿಟಿಗಳೆಲ್ಲವೂ ತಮ್ಮ ಯೋಜನೆಗಳನ್ನು ಡಿಸೆಂಬರ್ 15ರ ವೇಳೆಗೆ ಸಲ್ಲಿಸಬೇಕಾಗಿತ್ತು. ಕರ್ನಾಟಕ ನಗರ ಮೂಲಸೌಕರ್ಯ ಹಣಕಾಸು ನಿಗಮವು ಈ ಯೋಜನೆಗಳ ಮೇಲ್ವಿಚಾರಣೆಯನ್ನು ವಹಿಸಿಕೊಂಡಿತ್ತು. ಕರ್ನಾಟಕ ಸರ್ಕಾರ ಕೂಡಾ ಎಲ್ಲಾ ಸ್ಮಾರ್ಟ್ ಸಿಟಿ ಸಲಹಾ ಮಂಡಳಿಗಳಿಗೆ ತಲಾ ಒಬ್ಬೊಬ್ಬ ಐಎಎಸ್ ಅಧಿಕಾರಿಯನ್ನು ಸಲಹೆಗಾರರನ್ನಾಗಿ ನೇಮಿಸಿತ್ತು. ಸ್ಮಾರ್ಟ್ ಸಿಟಿ ಮಿಷನ್ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳಂತೆ ಸ್ಮಾರ್ಟ್ ಸಿಟಿಗಾಗಿ ನಾಮ ನಿರ್ದೇಶನಗೊಂಡಿರುವ ಪ್ರತಿಯೊಂದು ನಗರವೂ ತನ್ನ ಸ್ಮಾರ್ಟ್ ಸಿಟಿ ಪರಿಕಲ್ಪನೆಯನ್ನು ಮಂಡಿಸಬೇಕು. ಇದರಲ್ಲಿ ನಿರಂತರ ವಿದ್ಯುತ್ ಪೂರೈಕೆ, ಸಮರ್ಪಕ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ತಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹ, ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ಪಾದಚಾರಿ ಸ್ನೇಹಿಯಾದ ರಸ್ತೆಗಳು ಮತ್ತು ಸಮರ್ಪಕ ಸಂಚಾರ ನಿರ್ವಹಣೆಗಳು ಒಳಗೊಂಡಿರಬೇಕು ಎಂಬುದು ಸ್ಮಾರ್ಟ್ ಸಿಟಿ ಮಿಷನ್‌ನ ನಿರೀಕ್ಷೆ.
ಸ್ಮಾರ್ಟ್ ಸಿಟಿ ಯೋಜನೆ ಕರ್ನಾಟಕದ ನಗರಗಳ ಸಮಗ್ರ ಅಭಿವೃದ್ಧಿಗೆ ಬೇಕಿರುವ ವೇಗವನ್ನು ತಂದುಕೊಡುತ್ತದೆಯೇ ಎಂಬ ಪ್ರಶ್ನೆ ಇಲ್ಲಿದೆ. ಇದಕ್ಕೆ ನೇರ ಉತ್ತರ ಸಾಧ್ಯವಿಲ್ಲ. ಎಲ್ಲಾ ಉತ್ತರಗಳೂ ಚರ್ಚಾರ್ಹವೇ. ಸ್ಮಾರ್ಟ್ ಸಿಟಿ ಪರಿಕಲ್ಪನೆಯ ಬೆಂಬಲಿಗರು ಈ ಪರಿಕಲ್ಪನೆ ಪ್ರಗತಿಯ ಮಾರ್ಗವೆಂದುಕೊಳ್ಳುತ್ತಾರೆ. ಆದರೆ ಈ ಪರಿಕಲ್ಪನೆಯನ್ನು ಸಂಶಯದಿಂದ ಕಾಣುವವರು ಸ್ಮಾರ್ಟ್ ಸಿಟಿಗಳು ಎಲ್ಲರನ್ನೂ ಒಳಗೊಳ್ಳುತ್ತವೆಯೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಅಂದರೆ ಇಲ್ಲಿರುವ ಪ್ರಶ್ನೆ ಈ ಸಿಟಿಗಳು ಯಾರಿಗಾಗಿ?.
ಭಾರತೀಯ ನಗರಗಳು ಅವುಗಳಿರುವ ಸ್ವರೂಪದಲ್ಲಿ ಎಲ್ಲವನ್ನೂ ಒಳಗೊಳ್ಳುವ ಸ್ವಭಾವದವಲ್ಲ. ಆದರೆ ಈ ನಗರಗಳ ಒಟ್ಟು ಮನಃಸ್ಥಿತಿಯಲ್ಲಿರುವ ಮುಗ್ಧತೆಯ ಕಾರಣದಿಂದಾಗಿ ಇಲ್ಲಿ ಬಡವರಿಗೂ ಒಂದು ಸ್ಥಳವಿದೆ. ಆಸ್ತಿ ಹಕ್ಕಿಗೆ ಸಂಬಂಧಿಸಿದ ಕಠಿಣ ನಿಯಮಗಳಿಲ್ಲದೇ ಇರುವುದೂ ಒಂದು ಬಗೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ. ಉದಾಹರಣೆಗೆ ಖಾಲಿ ಇರುವ ಸ್ಥಳಗಳ ಮೇಲೆ ಬಡವರಿಗೆ ಹಕ್ಕು ಸ್ಥಾಪಿಸುವುದಕ್ಕೆ ಅನುಕೂಲವಾಗುವ ವಾತಾವರಣವೂ ಇಲ್ಲಿದೆ. ಕೊಳೆಗೇರಿಗಳು ಎಷ್ಟೇ ನಕಾರಾತ್ಮಕವಾಗಿ ಕಂಡರೂ ಬಡವರಿಗೆ ವಸತಿಯನ್ನು ಒದಗಿಸಿಕೊಟ್ಟಿವೆ ಎಂಬುದನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ಆದರೆ ಇದು ಆದರ್ಶ ನಗರ ಪರಿಕಲ್ಪನೆಗೆ ವಿರುದ್ಧವಾದುದು. ಹಾಗೆಯೇ ಭಾರತ ಕಾನೂನು ಮತ್ತು ಶಿಸ್ತುಪಾಲನೆಯನ್ನು ಖಾತರಿ ಪಡಿಸಿಕೊಂಡಿರುವ ಉದಾರವಾದಿ ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಗೆ ವಿರುದ್ಧವಾದುದು. ತಂತ್ರಜ್ಞಾನಾಧಾರಿತ ಆಡಳಿತವಿರುವ ಸ್ಮಾರ್ಟ್ ಸಿಟಿ ಬಡವರೂ ಬದುಕಬಹುದಾದ ಸಾಧ್ಯತೆಯನ್ನು ಕಸಿದುಕೊಳ್ಳುತ್ತದೆ.
ಸ್ಮಾರ್ಟ್ ಸಿಟಿ ಯೋಜನೆಯ ಮತ್ತೊಂದು ಆಯಾಮ ನಿಜಕ್ಕೂ ಕಾಳಜಿಯ ವಿಷಯವಾಗಬೇಕಿದೆ. ಇಡೀ ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯಲ್ಲಿ ಸ್ಥಳೀಯಾಡಳಿತದ ಪಾತ್ರವೇನು ಎಂಬುದು ಸ್ಪಷ್ಟವಿಲ್ಲ. ಸಂವಿಧಾನದ 74ನೇ ತಿದ್ದುಪಡಿ, ಚುನಾಯಿತ ಜನಪ್ರತಿನಿಧಿಗಳಿರುವ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ವಿಕೇಂದ್ರೀಕೃತ ಆಡಳಿತದ ಖಾತರಿಯನ್ನು ನೀಡುತ್ತಿದೆ. ಆದರೆ ಸ್ಮಾರ್ಟ್ ಸಿಟಿ ಪರಿಕಲ್ಪನೆಯ ಮಟ್ಟಿಗೆ ಪ್ರಜಾಸತ್ತಾತ್ಮಕ ಆಡಳಿತವೆಂಬುದು ಮುಖ್ಯ ವಿಚಾರವೇ ಆಗಿಲ್ಲ. ಕೇಂದ್ರ ಸರ್ಕಾರ ಆರಂಭದಲ್ಲಿ ಹೊರತಂದಿದ್ದ ಪರಿಕಲ್ಪನಾತ್ಮಕ ಟಿಪ್ಪಣಿಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಸ್ತಾಪವೇ ಇರಲಿಲ್ಲ. ಈಗ ಬಿಡುಗಡೆ ಮಾಡಿರುವ ಧ್ಯೇಯ ಘೋಷಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಾಧಾನ್ಯ ದೊರೆತಿದೆ. ಆದರೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಕಾರ್ಯಗತಗೊಳಿಸುವ ಹೊಣೆಗಾರಿಕೆ ಈ ಚುನಾಯಿತ ಸಂಸ್ಥೆಗಳಿಲ್ಲ. ಈ ಜವಾಬ್ದಾರಿಯನ್ನು ಮತ್ತೊಂದು ವಿಶೇಷ ವ್ಯವಸ್ಥೆ ಅಥವಾ ಸರ್ಕಾರದ ಭಾಷೆಯಲ್ಲೇ ಹೇಳುವುದಾದರೆ ‘ಸ್ಪೆಷಲ್ ಪರ್ಪಸ್ ವೆಹಿಕಲ್’ಗಳಿಗೆ (ಎಸ್‌ಪಿವಿ) ವಹಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಈ ಎಸ್‌ಪಿವಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದನ್ನು ಸ್ಮಾರ್ಟ್ ಸಿಟಿ ಮಿಷನ್ ಉತ್ತೇಜಿಸುತ್ತದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಹೊಸತನದಿಂದ ತುಂಬಿರುವ ಮತ್ತು ನಿರೀಕ್ಷೆಗಳನ್ನು ಹುಟ್ಟಿಸುವ ಒಂದು ಉಪಕ್ರಮ. ನಗರಗಳನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡುವ ತಂತ್ರಕ್ಕೆ ಸಕಾರಾತ್ಮಕ ಆಯಾಮವಿದೆ. ಇದು ರಾಜ್ಯಗಳ ನಡುವೆ ಸ್ಪರ್ಧೆಗೆ ಕಾರಣವಾಗಿ ಸೃಜನಶೀಲ ಯೋಜನೆಗಳಿಗೆ ಅವಕಾಶ ಒದಗಿಸುತ್ತದೆ. ಜೆ–ನರ್ಮ್‌ನಂಥ ಯೋಜನೆಗಳು ಒಂದೇ ಮಾದರಿಯನ್ನು ಎಲ್ಲಾ ನಗರಗಳ ಮೇಲೂ ಹೇರುತ್ತಿತ್ತು. ಈ ದೃಷ್ಟಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರತಿಯೊಂದು ನಗರವೂ ತನ್ನದೇ ಸ್ಮಾರ್ಟ್‌ತನವನ್ನು ಕಂಡುಕೊಳ್ಳಲು ಅವಕಾಶ ಒದಗಿಸುತ್ತದೆ. ಈ ಹೊಸ ತಂತ್ರ ಭಾರತದ ನೀತಿ ನಿರೂಪಣಾ ಕ್ಷೇತ್ರದಲ್ಲಿರುವ ಏಕತಾನತೆಯನ್ನು ಇಲ್ಲವಾಗಿಸುತ್ತದೆ.
ಅದೇನೇ ಇದ್ದರೂ ಸ್ಮಾರ್ಟ್ ಸಿಟಿ ಎಂಬುದು ಭಾರತದ ನಗರಗಳ ಸಮಸ್ಯೆಯನ್ನು ಪರಿಹರಿಸುವ ಮಂತ್ರದಂಡವಂತೂ ಅಲ್ಲ. ಈ ಯೋಜನೆ ಎಷ್ಟರಮಟ್ಟಿಗೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ಗೌರವಿಸುತ್ತದೆ ಮತ್ತು ಎಲ್ಲರೂ ಒಳಗೊಳ್ಳುವ ನಗರಗಳ ಸಹಜಗುಣವನ್ನು ಉಳಿಸಿಕೊಳ್ಳುತ್ತದೆ ಎಂಬ ಪ್ರಶ್ನೆಯಂತೂ ಇದ್ದೇ ಇದೆ. ಇದರ ಆಚೆಗೂ ಸ್ಮಾರ್ಟ್ ಸಿಟಿ ಎಂಬ ಪರಿಕಲ್ಪನೆಗೆ ಅನೇಕ ಮಿತಿಗಳಿವೆ. ಇದು ಮೂಲತಃ ನಿರ್ದಿಷ್ಟ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಅಭಿವೃದ್ಧಿ. ಅಂದರೆ ನಗರದ ನಿರ್ದಿಷ್ಟ ಭಾಗ, ಕೆಲ ಸಂದರ್ಭಗಳಲ್ಲಂತೂ ಇದು ಐವತ್ತು ಎಕರೆಯಷ್ಟು ಸಣ್ಣ ಸ್ಥಳವನ್ನಷ್ಟೇ ‘ಸ್ಮಾರ್ಟ್’ ಆಗಿಸುವ ಯೋಜನೆಯಿದು. ಇದು ನಗರಗಳ ಒಳಗೆ ಸಕಲ ಸವಲತ್ತುಗಳಿರುವ ಒಂದು ದ್ವೀಪವನ್ನು ಸೃಷ್ಟಿಸಿ, ನಗರದ ಬಹುಭಾಗವನ್ನು ಕಡೆಗಣಿಸುವ ಸಾಧ್ಯತೆ ಇದೆ. ಕೆಲವೇ ನಗರಗಳ ಕೆಲವು ಭಾಗಗಳನ್ನಷ್ಟೇ ಕೇಂದ್ರೀಕರಿಸಿ ನಡೆಯುವ ಅಭಿವೃದ್ಧಿಯಂತೂ ಭಾರತದ ನಗರಗಳ ಭವಿಷ್ಯವಾಗಲು ಸಾಧ್ಯವಿಲ್ಲ. ಇದರತ್ತ ನಾವು ತುಡಿಯುವುದೂ ಒಳ್ಳೆಯದಲ್ಲ.
(ಲೇಖಕ ಅಜೀಮ್ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.