ಹದಿನೇಳನೇ ಲೋಕಸಭೆಯ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಂದರ್ಭವು ಸಂಸದೀಯ ನಡವಳಿಕೆಗೆ ವಿರುದ್ಧವಾದ ನಿದರ್ಶನವಾದದ್ದು ವಿಷಾದಕರ ಸಂಗತಿ. ‘ಜೈ ಶ್ರೀರಾಮ್’ ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಪ್ರಸಂಗಕ್ಕೆ ಪ್ರತಿಕ್ರಿಯೆಯಾಗಿ ಕಾಳಿ, ಅಲ್ಲಾಹು, ದುರ್ಗಾಗಳೆಲ್ಲಾ ಸೇರಿ ಸಂಸತ್ತನ್ನು ಅನುಚಿತ ಧರ್ಮಸ್ಪರ್ಧಾಕಣವನ್ನಾಗಿ ಮಾರ್ಪಡಿಸಿದವು. ಈ ಮೂಲಕ, ಮಾನ ಮತ್ತು ಸಂವಿಧಾನದ ಆಶಯಕ್ಕೆ ಧಕ್ಕೆ ತಂದು ಸಂಸದೀಯ ಇತಿಹಾಸಕ್ಕೆ ಅಪಹಾಸ್ಯದ ಕೊಡುಗೆ ನೀಡಲಾಯಿತು. ಆಸ್ತಿಕರು ತಮ್ಮ ದೈವವೆಂದು ನಂಬಿದ ಶ್ರೀರಾಮನ ಮಾನವನ್ನೂ ಕಳೆಯಲಾಯಿತು.
ದೇವರನ್ನು ನಂಬುವುದು ಬಿಡುವುದು ಅವರವರ ಅಭಿಪ್ರಾಯ ಮತ್ತು ನಂಬಿಕೆಗಳ ಪ್ರಶ್ನೆ. ಇಡೀ ಪ್ರಪಂಚದಲ್ಲಿ ಸಂಪೂರ್ಣ ನಾಸ್ತಿಕವಾಗಿರುವ ಒಂದು ದೇಶವೂ ಇಲ್ಲ. ಕಮ್ಯುನಿಸಂ ಇರುವ ದೇಶಗಳಲ್ಲೂ ಚರ್ಚುಗಳಿವೆ. ಅವು ವೈಯಕ್ತಿಕ ನಂಬಿಕೆಗೆ ಮಾತ್ರ ಸೀಮಿತವಾಗಿವೆ. ಈ ದೃಷ್ಟಿಯಿಂದ ನೋಡಿದರೆ, ದೇವರನ್ನು ಕುರಿತಂತೆ ಬುದ್ಧಗುರು ಅಭಿವ್ಯಕ್ತಿಸಿದ ‘ಮೌನ’ಕ್ಕೆ ಚಾರಿತ್ರಿಕ ಮಹತ್ವವಿದೆ. ಆದರೆ ನಮ್ಮ ನೇತಾರರು ಮಾಡುತ್ತಿರುವುದಾದರೂ ಏನು? ಇವರು ತಮ್ಮ ಘೋಷಣೆಗೆ ಬಳಸುವ ದೇವರಲ್ಲಿ ನಿಜವಾಗಿ ಭಕ್ತಿ ಉಳ್ಳವರಾಗಿದ್ದಾರೆಯೇ? ತಂತಮ್ಮ ನಂಬಿಕೆಯ ಧರ್ಮದ ಸಾರವನ್ನು ಅರ್ಥ ಮಾಡಿಕೊಂಡಿದ್ದಾರೆಯೇ? ಅಲ್ಲಾಹು, ಕಾಳಿ, ದುರ್ಗಾ ಮುಂತಾದ ದೇವರ ಹೆಸರುಗಳ ಬಳಕೆಗೆ ಹೋಲಿಸಿದರೆ ಶ್ರೀರಾಮನ ಹೆಸರೇ ಹೆಚ್ಚು ಕೇಳಿಬರುತ್ತಿದೆ. ಸಂಸತ್ತಿನಲ್ಲಷ್ಟೇ ಅಲ್ಲ, ರಾಮಮಂದಿರ ನಿರ್ಮಾಣ, ಪ್ರತಿಮೆ ಸ್ಥಾಪನೆಗಳಿಂದ ಹಿಡಿದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧವಾಗಿಯೂ ಶ್ರೀರಾಮ ಘೋಷದ ಬಳಕೆಯಾಗಿದೆ. ‘ಜೈ ಶ್ರೀರಾಮ್’ ಘೋಷಣೆಗೆ ಮಮತಾ ಬ್ಯಾನರ್ಜಿಯವರು ತೋರಿದ ಪ್ರತಿಕ್ರಿಯೆಯು ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕುದಲ್ಲ ಎಂದು ಒಪ್ಪಿದರೂ ಅವರನ್ನು ಅಣಕಿಸಲು ‘ಜೈ ಶ್ರೀರಾಮ್’ ಎನ್ನುವುದು ತಮ್ಮ ನಂಬುಗೆಯ ಶ್ರೀರಾಮ ದೇವರಿಗೆ ಮಾಡುವ ದೊಡ್ಡ ಅವಮಾನ ಎಂಬುದನ್ನು ಘೋಷಣಾಪ್ರಿಯರು ಅರಿಯಬೇಕು. ಹಾಗೆ ನೋಡಿದರೆ, ರಾಮಮಂದಿರ ನಿರ್ಮಾಣದಿಂದ ಹಿಡಿದು ಸಂಸತ್ತಿನಲ್ಲಿ ಅಬ್ಬರಿಸಿದ ‘ಜೈ ಶ್ರೀರಾಮ್’ ಘೋಷಣೆಯವರೆಗೂ ಭಕ್ತಿಯ ಬದಲು ವೋಟಿನ ಬಂಡವಾಳವೇ ಮುಖ್ಯವಾಗಿದೆ. ಶ್ರೀರಾಮನನ್ನು ವೋಟ್ ಬ್ಯಾಂಕಿನ ಇಡುಗಂಟಾಗಿ ಬಳಸಲಾಗಿದೆ.
ರಾಮಮಂದಿರದ ವಿಷಯ ನನೆಗುದಿಗೆ ಬಿದ್ದಾಗ ಶ್ರೀರಾಮನ ಬೃಹತ್ ಪ್ರತಿಮೆ ಸ್ಥಾಪನೆಯ ವಿಷಯ ಮುಂಚೂಣಿಗೆ ಬಂದಿತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕನಸಾಗಿ ಮೂಡಿದ ಪ್ರತಿಮೆಯಲ್ಲಿ, ಸದಾ ಶ್ರೀರಾಮನ ಜೊತೆಗಿರುವ ಸೀತೆಯೂ ಇಲ್ಲ, ಲಕ್ಷ್ಮಣನೂ ಇಲ್ಲ. ಶ್ರೀರಾಮ ಇರುವ ಯಾವುದೇ ಚಿತ್ರಪಟವನ್ನು ನೋಡಿದರೂ ಸೀತೆ, ಲಕ್ಷ್ಮಣ ಇದ್ದೇ ಇರುತ್ತಾರೆ. ಕೆಲವು ಚಿತ್ರಗಳಲ್ಲಿ ಆಂಜನೇಯ ಇರುವುದೂ ಉಂಟು. ಆದರೆ ಶ್ರೀರಾಮನ ಪ್ರತಿಮೆಯ ಜೊತೆ ಮಹಿಳಾ ಪ್ರಾತಿನಿಧ್ಯದ ಸೀತೆ, ಸೋದರತೆ ಸಂಕೇತದ ಲಕ್ಷ್ಮಣ ಇಲ್ಲವೆಂದಾದರೆ ಅದು ಸಂವಿಧಾನದ ಆಶಯಗಳಿಗಷ್ಟೇ ಅಲ್ಲ, ಶ್ರೀರಾಮ ಭಕ್ತರ ಕಲ್ಪನೆಗೂ ಧಕ್ಕೆ ತರುತ್ತದೆ.ಅಂಬೇಡ್ಕರ್ ಅವರು ತಮ್ಮ ‘ಸಾಮಾಜಿಕ ಪ್ರಜಾಪ್ರಭುತ್ವ’ದ ಪರಿಕಲ್ಪನೆಯಲ್ಲಿ ಪ್ರಸ್ತಾಪಿಸಿದ ಸ್ವಾತಂತ್ರ್ಯ, ಸಮಾನತೆ, ಸೋದರತೆಯ ಆಶಯವು ಶ್ರೀರಾಮ ಭಕ್ತಿಯ ರೂಪಕ ಪ್ರತಿಮೆಯಲ್ಲಿ ನಾಪತ್ತೆಯಾಗುತ್ತದೆ. ಸೀತೆಯಿಲ್ಲದೆ ಸಮಾನತೆಯಿಲ್ಲ, ಲಕ್ಷ್ಮಣನಿಲ್ಲದೆ ಸೋದರತೆಯಿಲ್ಲ. ಪ್ರತಿಮೆಯ ಸ್ಥಾಪಕರಿಗೆ ಸ್ತ್ರೀಸಮಾನತೆ, ಸೋದರತೆ ಬೇಕಿಲ್ಲ ಎಂದು ಅರ್ಥೈಸಬಹುದು.
ದೇವರು, ಧರ್ಮಗಳನ್ನು ಚುನಾವಣೆಗೆ ಬಳಸಿಕೊಳ್ಳುವವರಿಗೆ– ಮುಖ್ಯವಾಗಿ, ಸೀತೆ, ಲಕ್ಷ್ಮಣರಿಂದ ವೋಟು ಬರುವುದಿಲ್ಲ. ಶ್ರೀರಾಮನ ವಿಷಯದಲ್ಲಿ ಹಾಗಲ್ಲ. ಇಲ್ಲಿ ಶ್ರೀರಾಮ, ದೈವಭಕ್ತಿಯ ಪ್ರತೀಕವಾಗುವ ಬದಲು ಭಾವೋನ್ಮತ್ತ ಬಂಡವಾಳವಾದದ್ದೇ ಹೆಚ್ಚು ನಿಜ; ಶ್ರೀರಾಮ ಮತ್ತು ರಾಮಾಯಣವನ್ನು ವಿಭಿನ್ನ ದೃಷ್ಟಿಯಿಂದ ನೋಡುವವರಿದ್ದಾರೆ. ಆಸಕ್ತರು ಶ್ರೀರಾಮನನ್ನು ದೈವವೆಂದೂ ರಾಮಾಯಣವನ್ನು ‘ಧರ್ಮಗ್ರಂಥ’ವೆಂದೂ ಭಾವಿಸಿ ಗರ್ಭಗುಡಿ ಗೌರವ ನೀಡುತ್ತಿದ್ದರೆ, ನಾಸ್ತಿಕರು ಶ್ರೀರಾಮನು ದೈವ, ರಾಮಾಯಣವು ಧರ್ಮಗ್ರಂಥ ಎಂಬುದನ್ನು ಒಪ್ಪುವುದಿಲ್ಲ. ಆದರೆ ನಾಸ್ತಿಕರು ಕೂಡ ರಾಮಾಯಣವನ್ನು ಒಂದು ಪ್ರಸಿದ್ಧ ಪುರಾಣಕಾವ್ಯವೆಂದು ಒಪ್ಪಿ ಪರಿಶೀಲಿಸಬೇಕೆಂಬುದು ನನ್ನ ಅಭಿಪ್ರಾಯ. ದೈವ, ಧರ್ಮಗಳನ್ನು ಒಪ್ಪದೆ ಇದ್ದಾಗಲೂ ಪುರಾಣ ಸಾಹಿತ್ಯ ಕೃತಿಯ ವಿವಿಧ ಆಯಾಮಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಶ್ರೀರಾಮನನ್ನು ದೈವವೆಂದು ನಂಬಿದವರ ‘ಭಕ್ತಿಬದ್ಧತೆ’ ಎಷ್ಟರಮಟ್ಟಿಗೆ ಪ್ರಾಮಾಣಿಕ ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.
ಆಸ್ತಿಕವಾದಿ ಭಕ್ತರಿಂದ ಪುರುಷೋತ್ತಮ, ಮರ್ಯಾದಾಪುರುಷ ಎಂಬ ಪ್ರಶಂಸೆಗೆ ಒಳಗಾದ ಶ್ರೀರಾಮನ ಬಗ್ಗೆ ನಮ್ಮ ನೇತಾರರಲ್ಲಿ ನಿಜವಾದ ಭಕ್ತಿ ಇದೆಯೇ ಅಥವಾ ಆಸ್ತಿಕರ ಭಕ್ತಿಯನ್ನೇ ವೋಟಿನ ಆಸ್ತಿ ಮಾಡಿಕೊಳ್ಳುವ ಹುನ್ನಾರವಿದೆಯೇ ಎಂಬ ಪ್ರಶ್ನೆಯನ್ನು ನಿಜವಾದ ಆಸ್ತಿಕರು ಹಾಗೂ ಶ್ರೀರಾಮನ ಪ್ರಾಮಾಣಿಕ ಭಕ್ತರು ಎತ್ತಬೇಕಾಗಿದೆ. ಭಕ್ತಿಯನ್ನು ಬೀದಿಗೆ ತರುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಬೇಕಾಗಿದೆ. ನಿಜವಾದ ದೈವಭಕ್ತಿ ಖಾಸಗಿಯಾದುದು. ನಮ್ಮ ದೇಶದಲ್ಲಿ ಅವರವರ ದೈವಕ್ಕೆ ಭಕ್ತಿಬದ್ಧರಾಗುವ ಹಕ್ಕು ಇದೆ. ಆದರೆ ದೇವರ ದುರುಪಯೋಗ ಆಗುವುದನ್ನು ತಡೆಯದಿದ್ದರೆ ಹಕ್ಕು ಮುಕ್ಕಾಗುತ್ತದೆ. ಬಹುಶಃ ಭಾರತದಲ್ಲಿ ದಲಿತರು, ಮಹಿಳೆಯರು ಮತ್ತು ಬಡವರಂತೆ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಅವರವರ ನಂಬುಗೆಯ ದೇವರೇ ಎಂದು ಕಾಣುತ್ತದೆ. ಹೀಗೆ ಶೋಷಣೆಗೆ ಒಳಗಾಗುತ್ತಿರುವ ದೇವರನ್ನು ವೋಟ್ ಬ್ಯಾಂಕಿನ ವ್ಯವಸ್ಥಾಪಕರಿಂದ ರಕ್ಷಿಸುವುದು ಭಕ್ತರ ನೈತಿಕ ಜವಾಬ್ದಾರಿಯಾಗಿದೆ. ಅದರಲ್ಲೂ ಬೀದಿ ಬೀದಿಗಳಲ್ಲಿ ಮತ್ತು ಸಂಸತ್ತಿನಲ್ಲಿ ಅನ್ಯರನ್ನು ಅಣಕಿಸುವುದಕ್ಕಾಗಿ ಬಳಕೆಯಾಗುತ್ತಿರುವ ‘ಮರ್ಯಾದಾಪುರುಷ ಶ್ರೀರಾಮ ದೇವರ’ ಮರ್ಯಾದೆಯನ್ನು ಉಳಿಸಬೇಕಾಗಿದೆ. ಇಲ್ಲದಿದ್ದರೆ ಆಸ್ತಿಕರ ಬಗ್ಗೆಯೇ ಅನುಮಾನ ಮೂಡುತ್ತದೆ.
‘ಜೈ ಶ್ರೀರಾಮ್’ ಘೋಷಣೆಯ ಅಣಕಿನಿಂದ ಆರಂಭವಾಗಿ ಅಲ್ಲಾಹು ಅಕ್ಬರ್, ಜೈ ಕಾಳಿ ಮುಂತಾದ ಘೋಷಣೆಗಳು ಮೊಳಗಿದ ಸಂಸದರ ಪ್ರಮಾಣ ವಚನ ಸಂದರ್ಭವು ಈ ದೇಶ ಎತ್ತ ಸಾಗಬಹುದೆಂಬುದರ ಒಂದು ದಿಕ್ಸೂಚಿಯಾಗಿದೆ. ಸಂಸದೀಯ ಪರಿಭಾಷೆಯ ಬದಲಾಗಿ ದೈವಘೋಷ ಭಾಷೆಯ ಬಳಕೆಯ ಮೂಲಕ ಲೋಕಸಭೆಯು ತೋರಿಕೆಯ ‘ಧರ್ಮ ಸಂಸತ್’ ಆದರೂ ಆಶ್ಚರ್ಯವಿಲ್ಲ. ಆಗ ತಂತಮ್ಮ ನಂಬುಗೆಯ ದೇವರುಗಳ ನಡುವೆಯೇ ಸಂಘರ್ಷ ತಂದಿಟ್ಟು ಸಂಭ್ರಮಿಸುವ ಸಂಸತ್ತನ್ನು ಕಾಣಬೇಕಾಗಬಹುದು. ಆಗ ಸಂಸದೀಯ ನಡವಳಿಕೆಯ ಜೊತೆಗೆ ಧರ್ಮ, ದೇವರುಗಳೂ ಅಣಕು ಪ್ರದರ್ಶನದ ಸಾಧನವಾಗುತ್ತವೆ. ವಿಕಾರಗಳು ವಿಜೃಂಭಿಸುತ್ತವೆ.
ಈ ಹಿನ್ನೆಲೆಯಲ್ಲಿ ಸಂಸದೀಯ ನಡವಳಿಕೆಯ ನೈತಿಕತೆಯನ್ನು ಕಾಪಾಡಲು ತುರ್ತು ಚಿಂತನೆಗೆ ಮುಂದಾಗಬೇಕಾಗಿದೆ. ‘ಸಂಸದೀಯ ಧರ್ಮ’ಕ್ಕೆ ಧಕ್ಕೆ ತರುವ ನಕಲಿಗಳ ನಡವಳಿಕೆಯನ್ನು ನಿಯಂತ್ರಿಸಬೇಕಾಗಿದೆ. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ ಯಾವುದೇ ಪ್ರಮಾಣ ವಚನ ಸಂದರ್ಭದಲ್ಲಿ ಸಂವಿಧಾನ ಬದ್ಧತೆಯ ಮಾತು ಬಿಟ್ಟು ಬೇರೆ ಏನನ್ನೂ, ಯಾರ ಹೆಸರನ್ನೂ ಹೇಳದಂತೆ ಖಚಿತ ಕಾಯ್ದೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಪ್ರಮಾಣ ವಚನದಲ್ಲಿ ತಮ್ಮಿಚ್ಛೆಯ ವ್ಯಕ್ತಿ ಉಲ್ಲೇಖ, ದೈವಸ್ಮರಣೆ ಯಾವುದೂ ಇಲ್ಲದೆ ಸಂವಿಧಾನ ಸ್ಮರಣೆಯೊಂದೇ ಮುಖ್ಯವಾಗಬೇಕು. ತಮ್ಮಿಚ್ಛೆಯ ವ್ಯಕ್ತಿ ಮತ್ತು ದೈವಗಳಿಗೆ ಬದುಕಿನಲ್ಲಿ ಪ್ರಾಮಾಣಿಕ ಗೌರವ ತೋರಲಿ. ಪ್ರಮಾಣ ವಚನದಲ್ಲಿ ಸಂವಿಧಾನದ ಮಾನವನ್ನು ಹರಾಜು ಹಾಕದಿರಲಿ. ಪ್ರಜಾಪ್ರಭುತ್ವದ ಅವಕಾಶಗಳು ಅವಮಾನದ ಹತಾರಗಳಾಗದಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.