ADVERTISEMENT

ಡಾ. ಸಿ.ಎನ್‌ ಅಶ್ವತ್ಥನಾರಾಯಣ ಅಂಕಣ| ಕನಸುಗಳ ಬೆಳಗಿದ ನೇತಾರ ನರೇಂದ್ರ ಮೋದಿ

ಡಾ.ಸಿ.ಎನ್‌.ಅಶ್ವತ್ಥನಾರಾಯಣ
Published 16 ಸೆಪ್ಟೆಂಬರ್ 2021, 19:30 IST
Last Updated 16 ಸೆಪ್ಟೆಂಬರ್ 2021, 19:30 IST
   

ನರೇಂದ್ರ ದಾಮೋದರ ದಾಸ್ ಮೋದಿ- ನಮ್ಮ ಪ್ರಧಾನಿ ಹಾಗೂ ಅಗ್ರ ನೇತಾರರು. ಅಷ್ಟೇ ಅಲ್ಲ, ಕಳೆದ ಇಪ್ಪತ್ತು ವರ್ಷಗಳಲ್ಲಿ ದೇಶಕ್ಕೆ ಪ್ರಬಲ ನಾಯಕತ್ವ ಕೊಟ್ಟವರು ಹಾಗೂ ಜಡ್ಡುಗಟ್ಟಿದ ರಾಜಕೀಯದಲ್ಲಿ ಜನರ ಆತ್ಮಪ್ರಜ್ಞೆಯನ್ನು ಅರಳಿಸಿ ಅವರ ಅಮೂಲ್ಯ ಮತಕ್ಕೆ ಸಾರ್ಥಕತೆ, ಅನನ್ಯತೆ ತಂದುಕೊಟ್ಟವರು.

ಹಾಗಾದರೆ, ಮೋದಿ ಅವರಿಗೆ ಮುನ್ನ ಅಂಥ ನಾಯಕರೇ ಇರಲಿಲ್ಲವೇ? ಇದ್ದರು. ಆದರೆ, ಮೋದಿ ಅವರಷ್ಟು ವೇಗವಾಗಿ ನುಗ್ಗುವ, ಧೈರ್ಯದ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಸೂಜಿಗಲ್ಲಿನಂತೆ ಜನರನ್ನು ಆಕರ್ಷಿಸಬಲ್ಲ ಚೈತನ್ಯಯುತ ನಾಯಕತ್ವ ಇರಲಿಲ್ಲ.

ಅವರು ಸಂಘದ ಸೇವೆಯಲ್ಲಿದ್ದರು. ನಂತರ ಪಕ್ಷದ ಹಿರಿಯರ ಆಣತಿಯಂತೆ ಗುಜರಾತಿಗೆ ಹೋದರು. ಅಲ್ಲಿಂದ ದಿಲ್ಲಿಗೆ ಬಂದು ಪ್ರಧಾನಿಯೂ ಆದರು.

ADVERTISEMENT

ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ, ಆ ನಂತರ ಪ್ರಧಾನಿಯಾಗಿ ಸಾರ್ಥಕ ಇಪ್ಪತ್ತು ವರ್ಷಗಳ ಪಯಣ ಪೂರ್ಣಗೊಳಿಸಿ ತಮಗಿಂತ ಮೊದಲು ಮತ್ತು ತಮ್ಮ ನಂತರದ ಭಾರತ ಎಂಬ ಹೆಜ್ಜೆಗುರುತುಗಳನ್ನು ಸ್ಪಷ್ಟವಾಗಿ ಮೂಡಿಸಿದ್ದಾರೆ.

2014ರಿಂದ ಈವರೆಗೆ ಸವಾಲು- ಸಂಕಷ್ಟಗಳ ನಡುವೆ ಬೃಹತ್ ಶಕ್ತಿಯಾಗಿ ಅವತರಿಸಿದ ಭಾರತದ ಕಥೆಯನ್ನು ಕೂಲಂಕಶವಾಗಿ ಅರಿಯಬೇಕಾದರೆ ನರೇಂದ್ರ ಮೋದಿ ಅವರು ಶಿಕ್ಷಣ, ಕೌಶಲ, ಯುವಜನರಿಗಾಗಿ ಅವಕಾಶಗಳು, ಕೈಗಾರಿಕೆ, ಉದ್ಯೋಗ, ವಿಜ್ಞಾನ- ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ- ಜೈವಿಕ ತಂತ್ರಜ್ಞಾನ, ಉದ್ಯಮಶೀಲತೆ, ಉತ್ಪಾದನೆ, ಆರ್ಥಿಕತೆ, ಆವಿಷ್ಕಾರ ಇತ್ಯಾದಿ ಕ್ಷೇತ್ರಗಳಲ್ಲಿ ತಂದ ಸುಧಾರಣೆಗಳನ್ನು ಗುರುತಿಸಬೇಕಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020: 34 ವರ್ಷಗಳ ನಂತರ ಮೋದಿ ಅವರು ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಈ ನೀತಿಯನ್ನು ಭವಿಷ್ಯದ ಭಾರತ ಎದುರು ನೋಡುತ್ತಿತ್ತು. ರಾಷ್ಟ್ರ ನಿರ್ಮಾಣಕ್ಕೆ ಒಂದು ಸಮಗ್ರ ಪರಿಹಾರದ ಅವಶ್ಯಕತೆ ಇತ್ತು. ಅದು ಶಿಕ್ಷಣ ನೀತಿಯ ರೂಪದಲ್ಲಿ ನಮಗೆ ಸಿಕ್ಕಿದೆ.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎನ್ನುವ ಮೋದಿ ಅವರ ಪ್ರೇರಕ ಮಂತ್ರ ದೇಶದ ದಶದಿಕ್ಕುಗಳಲ್ಲಿಯೂ ಸ್ಫೂರ್ತಿಯ ಸೆಲೆಯಾಗಿ ತುಂಬಿಹೋಗಿದೆ. ಇದು ಶಿಕ್ಷಣ ನೀತಿಯಲ್ಲೂ ಆಳವಾಗಿ ತುಂಬಿದೆ.

ಈ ತಿಂಗಳು 5ರಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಅವರು ಭಾಗವಹಿಸಿ ಆಶಯ ಭಾಷಣ ಮಾಡಿದ್ದರು. ಮುಖ್ಯವಾಗಿ ಶಿಕ್ಷಣದ ಬಗ್ಗೆ ಮಾತನಾಡುತ್ತಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಹೀಗೆ ಹೇಳಿದ್ದರು: ‘ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶಕ್ಕೆ ಅಗತ್ಯವಾಗಿದೆ. ಎನ್ಇಪಿ ಎಂದರೆ ಭಾರತವನ್ನು ಭಾರತದ ಮೂಲಕವೇ ನೋಡಿಕೊಳ್ಳುವುದು ಹಾಗೂ ಭಾರತದ ಮೂಲಕವೇ ಭಾರತವನ್ನು ಮರು ರೂಪಿಸುವುದು. ಭಾರತವನ್ನು ಭಾರತೀಯ ಮೌಲ್ಯಗಳು, ಚಿಂತನೆಗಳಿಂದಲೇ ಉಳಿಸಿಕೊಳ್ಳಬೇಕು ಹಾಗೂ ಭಾರತೀಯ ಮೌಲ್ಯಗಳ ಮೂಲಕವೇ ಭಾರತವನ್ನು ಮರು ನಿರ್ಮಾಣ ಮಾಡಬೇಕು’.

ಕೌಶಲ ಭಾರತಕ್ಕೆ ಅಡಿಪಾಯ: ಪ್ರಧಾನಿ ಸ್ಥಾನಕ್ಕೆ ಮೋದಿ ಅವರು ಬರುವ ತನಕ ಕೌಶಲ ಎನ್ನುವುದು ಪಠ್ಯಕ್ಕೆ ಅಥವಾ ಮಾತಿಗೆ ಸೀಮಿತವಾಗಿತ್ತು. ಮೋದಿ ಅವರು ಕೌಶಲಕ್ಕೆ ನಿರ್ದಿಷ್ಟ ದಿಕ್ಕು ತೋರಿದರಲ್ಲದೆ, ಹಳ್ಳಿಹಳ್ಳಿಗೂ ಅದನ್ನು ವಿಸ್ತರಿಸಿ ‘ಕೌಶಲ ಭಾರತ’ ನಿರ್ಮಾಣಕ್ಕೆ ಗಟ್ಟಿ ಅಡಿಪಾಯ ಹಾಕಿದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಮೋದಿ ಅವರ ಈ ಒಂದು ಕನಸು ಅದೆಷ್ಟು ಪ್ರಭಾವ ಬೀರಿತು ಎಂದರೆ, ಚೀನಾದಂಥ ಕೆಲವೇ ದೇಶಗಳಲ್ಲಿ ತಯಾರಾಗುತ್ತಿದ್ದ ಮಾಸ್ಕುಗಳು ನಮ್ಮ ಸಂಜೀವಿನಿ ಸ್ವಸಹಾಯ ಗುಂಪುಗಳ ಮನೆಗಳಲ್ಲಿ ತಯಾರಾಗತೊಡಗಿದವು. ನಮ್ಮ ಕಲ್ಪನೆಯಲ್ಲೇ ಇಲ್ಲದ ಸ್ಯಾನಿಟೈಸರ್‌ ಅನ್ನು ಮೋದಿ ಅವರ ಪ್ರೇರಣೆಯಿಂದ ಇಲ್ಲಿನ ಮಹಿಳೆಯರೇ ತಯಾರಿಸಿದರು.

ಹೀಗೆ ಬದಲಾವಣೆಗಳನ್ನು ಆಮೂಲಾಗ್ರವಾಗಿ ತರಬೇಕು ಎನ್ನುವುದು ಮೋದಿ ಅವರ ದೂರದೃಷ್ಟಿ. ಸರ್ಕಾರವನ್ನು, ಅದನ್ನು ನಂಬಿಕೊಂಡ ಜನರನ್ನು ಜನಪ್ರಿಯ ಯೋಜನೆಗಳ ಮೇಲೆ ತೇಲಿಸಿ ಜನರ ನಿರೀಕ್ಷೆಗಳನ್ನು ಕಾಗದದ ದೋಣಿಗಳನ್ನಾಗಿ ಮಾಡಿ ಹಳ್ಳಕ್ಕೆ ಬಿಡುವುದಲ್ಲ. ಈ ಕಾರಣಕ್ಕೆ ಅವರ ನೇತೃತ್ವದಲ್ಲಿ ದೈತ್ಯ ರಾಜ್ಯವಾಗಿ ಬೆಳೆದ ಗುಜರಾತ್, ಇವತ್ತಿಗೂ ‘ಗುಜರಾತ್ ಮಾದರಿ’ ಎಂದೇ ಪ್ರಖ್ಯಾತಿಯಾಗಿದೆ. ಅದೇ ರೀತಿ ಪ್ರಧಾನಿಯಾದ ಮೇಲೆ ಅವರು ಜಾರಿಗೆ ತಂದ ದೀರ್ಘಕಾಲೀನ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಯೋಜನೆಗಳು, ‘ಮೋದಿನಾಮಿಕ್ಸ್’ ಎಂದೇ ಜಗತ್ತಿನ ಗಮನ ಸೆಳೆದಿವೆ.

ಯುವ ಜನರ ಮೂಲಕ ಭಾರತ ನಿರ್ಮಾಣ: ರಾಷ್ಟ್ರ ಸಬಲೀಕರಣ ಹಾಗೂ ರಾಷ್ಟ್ರದ ಮರು ನಿರ್ಮಾಣದ ಅಗತ್ಯವನ್ನು ಮೋದಿ ಅವರು ಕಂಡುಕೊಂಡ ಬಗೆಯೇ ಬಹಳ ವಿಭಿನ್ನ. ಏಕೆಂದರೆ, ಅವರು ದೇಶವನ್ನು ಜ್ಞಾನ ಮತ್ತು ಯುವತೆಯನ್ನು ಪರಸ್ಪರ ಅನುಸಂಧಾನಗೊಳಿಸಿ ಹೆಜ್ಜೆ ಇಡುತ್ತಿದ್ದಾರೆ.

ಏಕೆಂದರೆ, ಭಾರತಕ್ಕೆ ಜ್ಞಾನ ಎನ್ನುವುದು ಆದಿಯಿಂದಲೂ ಇದೆ. ಆದರೆ ಅದಕ್ಕೊಂದು ನಿರ್ದಿಷ್ಟ ದಿಕ್ಕು-ದೆಸೆ ಇರಲಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಹಳೆ ಬೇರಿನ ಅಡಿಪಾಯ ಇಟ್ಟುಕೊಂಡೇ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಈಗ ಆಗುತ್ತಿದೆ. ಅಲ್ಲದೆ, ಯುವಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಆವಿಷ್ಕಾರ ಮತ್ತು ಸಂಶೋಧನೆ ಕಡೆ ಹೊರಳುವ ಹಾಗೆ ಮೋದಿ ಮಾಡುತ್ತಿದ್ದಾರೆ.

ಮುಂದಿನ ಭಾರತ ಕೌಶಲ, ವಿಜ್ಞಾನ-ತಂತ್ರಜ್ಞಾನ, ಆವಿಷ್ಕಾರ ಮತ್ತು ಶಿಕ್ಷಣದ ಮೇಲೆಯೇ ನಿರ್ಮಾಣವಾಗಲಿದೆ. ಅದರ ಸಾರಥ್ಯವನ್ನು ವಹಿಸಿರುವ ಮೋದಿ ಅವರ ಪ್ರತಿಹೆಜ್ಜೆ ಜತೆ ನಾವೂ ನಡೆಯೋಣ. ಅವರ ಕಂಡ ಕನಸುಗಳನ್ನು ಸಾಕಾರಗೊಳಿಸಲು ಹೆಗಲುಕೊಟ್ಟು ಶ್ರಮಿಸೋಣ.

ಲೇಖಕ: ಕರ್ನಾಟಕ ಸರ್ಕಾರದಲ್ಲಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.