ಬೆಂಗಳೂರು: ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರುವರಿ 21ರಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇಡೀ ವಿಶ್ವದ ಎಲ್ಲಾ ಜನರು ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶ ಎಂದು ವಿಶ್ವಸಂಸ್ಥೆ ಹೇಳಿದೆ.
ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಮಾತೃಭಾಷಾ ದಿನದ ಶುಭಾಶಯ ಹಂಚಿಕೊಳ್ಳುತ್ತಿದ್ದಾರೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) 1999ರಲ್ಲಿ ಈ ದಿನವನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲು ಆರಂಭಿಸಿತು. ಅಂದಿನಿಂದ ಮಾತೃಭಾಷಾ ದಿನವನ್ನು ಆಚರಣೆ ಮಾಡಲಾಗುತ್ತಿದ್ದು ವಿಶ್ವಸಂಸ್ಥೆಯು ಇದಕ್ಕೆ ಮಾನ್ಯತೆ ನೀಡಿದೆ. ಮಾತೃಭಾಷಾ ದಿನವನ್ನು ಆಚರಣೆ ಮಾಡುವ ಬಗ್ಗೆ ಬಾಂಗ್ಲಾದೇಶ ಯುನೆಸ್ಕೋ ಹಾಗೂ ವಿಶ್ವಸಂಸ್ಥೆಗೆ ಸೂಚನೆ ನೀಡಿತ್ತು.
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನರು ಭಾಷಾ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರ ಅಭಿವೃದ್ಧಿಗೆ ಭಾಷಾ ಸಮಸ್ಯೆ ಅಡ್ಡಿಯಾಗಿದೆ. ಆದ್ದರಿಂದ ಪ್ರಪಂಚದ ಸಣ್ಣ ಸಣ್ಣ ಭಾಷೆಗಳು ಅಭಿವೃದ್ಧಿಯಾದರೆ, ಆ ಜನರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಾರೆ. ಆ ಮೂಲಕ ವಿವಿಧ ದೇಶಗಳ ವೈಜ್ಞಾನಿಕ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಯುನೆಸ್ಕೋ ಹೇಳಿದೆ.
ಪ್ರಪಂಚದ ಎಲ್ಲ ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬೇಕು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.