ಸಮುದಾಯಗಳ ಅಸ್ತಿತ್ವ ಮತ್ತು ಪ್ರಜ್ಞೆಯ ವಿಭಿನ್ನ ಸ್ವರೂಪ ಮತ್ತು ವಿನ್ಯಾಸಗಳನ್ನು ಆಯಾ ಸಮುದಾಯಗಳ ನುಡಿ ಬಳಕೆಯಲ್ಲಿ ನಾವು ಕಾಣುತ್ತೇವೆ. ಆ ನುಡಿಯಲ್ಲಿಯೇ ಇಂತಹ ವಿನ್ಯಾಸಗಳು ಅಂತಸ್ಥವಾಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅವುಗಳು ಆಯಾ ಸಮುದಾಯದ ಚಹರೆಗಳಾಗಿ ಮಾತ್ರ ನೆಲೆಗೊಂಡಿರುತ್ತವೆ. ಇಲ್ಲಿ ನುಡಿ ಮತ್ತು ಸಮುದಾಯ ಎಂಬೀ ಎರಡು ಸಂಗತಿಗಳನ್ನು ಪ್ರಧಾನವಾಗಿ ಗುರುತಿಸುವ ಜರೂರಿದೆ. ಅಂದರೆ ನುಡಿಯ ಕುರಿತು ಮಾತನಾಡುವ ಬಹುತೇಕ ಸನ್ನಿವೇಶಗಳು, ಸಮುದಾಯವನ್ನು ನೆಲೆಯಾಗಿಸಿಕೊಂಡೇ ಮುಂಚೂಣಿಗೆ ಬರುತ್ತವೆ. ಆದರೆ, ಸಮುದಾಯ ಎನ್ನುವುದು ಜಿಯೋ-ಪೊಲಿಟಿಕಲ್ ನೆಲೆಯನ್ನು ಮಾತ್ರ ಪಡೆದುಕೊಂಡಿರುತ್ತದೆ.
ನಾಡು ನುಡಿಯ ಸಂಬಂಧಗಳನ್ನು ನಿರ್ವಚಿಸುವುದಕ್ಕೆ ಮಾತ್ರ ಈ ಆಯಾಮವು ಒತ್ತಾಸೆಯಾಗುತ್ತದೆಯೇ ಹೊರತು ಆಯಾ ನುಡಿ ಸಮುದಾಯದ ಬದುಕಿನ ಪ್ರಶ್ನೆಗಳನ್ನೇ ಗಂಭೀರವಾಗಿ ಪರಿಗಣಿಸುವ ನಿಲುವುಗಳು ಇಲ್ಲಿ ಮುಖ್ಯವಾಗುವುದಿಲ್ಲ. ತಾತ್ವಿಕವಾಗಿ ನುಡಿ ಬಗೆಗೆ ನಾವು ಹೊಂದಿರುವ ಧೋರಣೆಗಳು ಅಭಿಮಾನದ ಸೂಚಕಗಳಾಗಿರುತ್ತವೆ. ಬದುಕಿನ ಪ್ರಶ್ನೆಗಳನ್ನೇ ಎದುರಾಗುವ ಇರಾದೆಯಿಂದ ನುಡಿಯ ಪ್ರಶ್ನೆಗಳು ಮೈದಾಳುವುದಿಲ್ಲ. ನಮ್ಮ ನುಡಿಗೂ ನಡೆಗೂ ಇರುವ ಅಂತರಗಳ ಸ್ವರೂಪ ಎಂತಹದು ಎನ್ನುವುದನ್ನು ಗಮನಿಸುವುದಕ್ಕೆ ಇಲ್ಲಿ ಸಾಧ್ಯವಿದೆ. ಇದು ಸಾಧ್ಯತೆ ಮಾತ್ರವಲ್ಲ ಇದುವೇ ವಾಸ್ತವ. ಹಾಗಾಗಿ ಸಮುದಾಯದ ಚಹರೆಯನ್ನಾಗಿ ನುಡಿಯನ್ನು ಬಳಸುವ ನಮ್ಮ ಧೋರಣೆಗಳು ವಾಸ್ತವದಲ್ಲಿ ಆಯಾ ಸಮುದಾಯದ ಜನರ ಬದುಕಿನ ಏಳ್ಗೆಯನ್ನು ಆಧರಿಸಿರುವುದಿಲ್ಲ.
ಹೌದು, ಮೇಲ್ನೋಟಕ್ಕೆ, ನುಡಿ ಕುರಿತ ನಮ್ಮ ಚರ್ಚೆ, ಸಂವಾದ ಹಾಗೂ ಚಿಂತನೆಗಳು ಜನರ ಬದುಕಿನ ಆಶೋತ್ತರಗಳನ್ನು ಪ್ರತಿನಿಧಿಸುವ ಬಗೆಯಲ್ಲಿರುತ್ತವೆ. ದಿಟದಲ್ಲಿ ಯಾರ ಆಶೋತ್ತರಗಳನ್ನು ನಾವು ಬಿಂಬಿಸುತ್ತೇವೆ ಮತ್ತು ಯಾವ ಬಗೆಯ ನಿಲುವುಗಳನ್ನು ತಾಳುತ್ತೇವೆ ಎನ್ನುವ ಪ್ರಶ್ನೆ ಇಲ್ಲಿ ಎದುರಾದರೆ, ನುಡಿ ಮತ್ತು ಸಮುದಾಯಗಳ ನಡುವೆ ನಾವು ಕಲ್ಪಿಸಿಕೊಂಡಿರುವ ಗ್ರಹಿಕೆಗಳು ಎಂತಹ ತಪ್ಪು ಗ್ರಹಿಕೆಗಳು ಎನ್ನುವುದನ್ನು ಮನಗಾಣಬಹುದು. ಉದಾಹರಣೆಗೆ ಉದ್ಯೋಗ ಮತ್ತು ಅನ್ನದ ಭಾಷೆಯನ್ನಾಗಿ ನಾವು, ನಮ್ಮ ನಮ್ಮ ನುಡಿಗಳನ್ನು ಪರಿಭಾವಿಸುವಲ್ಲಿ ಯಾರ ಆಸಕ್ತಿಗಳು ನಮಗೆ ಮುಖ್ಯವಾಗುತ್ತವೆ ಎಂಬುದನ್ನು ನಾವು ಯೋಚಿಸುವ ಗೋಜಿಗೆ ಹೋಗುವುದಿಲ್ಲ.
ಅನ್ನ ಮತ್ತು ಉದ್ಯೋಗದ ಪ್ರಶ್ನೆ ಎದುರಾಗುವುದು ಶಿಕ್ಷಣವನ್ನು ಪಡೆದವರ ಪರವಾದ ನಿಲುವು ಮಾತ್ರ ಆಗಿರುತ್ತದೆ. ಆದರೆ, ದಲಿತ, ತಳಸಮುದಾಯ, ಅಲ್ಪಸಂಖ್ಯಾತ, ದಿನಗೂಲಿಗಳು, ಕೃಷಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಮೊದಲಾದವರ ಅನ್ನದ ಪ್ರಶ್ನೆಗಳನ್ನು ಎದುರಾಗುವ ಬಗೆ ಯಾವುದು? ಅಂದರೆ ಅನ್ನದ ಭಾಷೆ ಉದ್ಯೋಗದ ಭಾಷೆಯಾಗಿ ಕನ್ನಡ ಎಂದು ಹೋರಾಡುವವರ ಗಮನದಲ್ಲಿ ಈ ಮೇಲೆ ಉಲ್ಲೇಖಿಸಿದ ಯಾವ ಸಮೂಹವೂ ಇರುವುದಿಲ್ಲ. ಹಾಗಾದರೆ ನುಡಿ ಸಮುದಾಯ ಎಂದರೇನು? ಅಥವಾ ನುಡಿಗೂ ಸಮುದಾಯಕ್ಕೂ ಇರುವ ನಂಟಸ್ತಿಕೆ ಎಂತಹದು? ಈ ಪ್ರಶ್ನೆಗಳು ಬಹುತೇಕವಾಗಿ ಅಪ್ರಸ್ತುತವಾಗಿ ಕಾಣುತ್ತವೆ.
ನಾವು ಯಾವುದನ್ನು ಸಮುದಾಯ ಪ್ರಜ್ಞೆಯ ರೂಪಕವನ್ನಾಗಿಯೂ, ನಾಡಿನ ಚಹರೆಯನ್ನಾಗಿಯೂ ಹಾಗೂ ನಾಡಿಗರ ಅಸ್ಮಿತೆಯ ವಿನ್ಯಾಸವನ್ನಾಗಿ ಪರಿಭಾವಿಸುತ್ತೇವೆಯೋ ಅದು ದಿಟದಲ್ಲಿ ಹಾಗಿರುವುದಿಲ್ಲ. ಅದೊಂದು ಕಲ್ಪಿತ ನೆಲೆ ಮಾತ್ರ. ನುಡಿಯನ್ನು ನಾಡಿನ ಮಹತ್ವದ ಲಾಂಛನವನ್ನಾಗಿಸುವ ಬಗೆಯೇ ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ನಿಲುವು ಆಗಿರುತ್ತದೆ. ಆದ್ದರಿಂದ ನುಡಿಯನ್ನು ಸಮೂಹಗಳ ಏಳ್ಗೆಯ ಮಾಧ್ಯಮ ಇಲ್ಲವೇ ಅಸ್ತ್ರವನ್ನಾಗಿ ಭಾವಿಸುವುದೆಂದರೆ, ಅದು ಕೇವಲ ಊಳಿಗಮಾನ್ಯ ಮತ್ತು ಸಾಮ್ರಾಜ್ಯಶಾಹಿ ಚೌಕಟ್ಟಿನೊಳಗಿರುವವರ ಹಿತಾಸಕ್ತಿಯನ್ನು ಕಾಪಾಡುವ ವಿನ್ಯಾಸವಾಗಿರುತ್ತದೆ. ಇಲ್ಲಿ ಯಾವುದೇ ಸಬಾಲ್ಟ್ರನ್ ಸಮೂಹದ ಏಳ್ಗೆಯನ್ನು ಬಯಸುವ ಇರಾದೆ ಇರುವುದಿಲ್ಲ.
ಯಾವ ಅಸಂಘಟಿತ ಸಮೂಹದ ಬೆಳವಣಿಗೆಗೆ ನಮ್ಮೀ ನುಡಿ ಬಗೆಗಿನ ಚಿಂತನೆಗಳು ಉತ್ತರದಾಯಿ– ಯಾಗಿರುವುದಿಲ್ಲ. ಆದ್ದರಿಂದ ನುಡಿ ಸಮುದಾಯ ಇಲ್ಲವೇ ಸಮುದಾಯದ ನುಡಿ ಎನ್ನುವುದು ಅಖಂಡತೆಯ ಸಂಕೇತವಾಗಲಾರದು. ಸಂಸ್ಕೃತ, ಇಂಗ್ಲಿಷು ಹಾಗೂ ಇತರೆ ಪ್ರಬಲ ಭಾಷೆಗಳಂತೆ ಕನ್ನಡವೂ ಸಾಮ್ರಾಜ್ಯಶಾಹಿ ಭಾಷೆಯೇ ಆಗಿರುತ್ತದೆ. ಈ ಧೋರಣೆಯನ್ನು ಪ್ರತಿರೋಧಿಸುವ ನಿಲುವುಗಳೂ ಇದೇ ಭಾಷೆಯ ಸಾಹಿತ್ಯದಲ್ಲಿಯೇ ನೆಲೆ ಪಡೆದಿವೆ.
ಈ ಸಾಹಿತ್ಯಕ ನಿರೂಪಣೆಗಳು ಕೇವಲ ಮೀಮಾಂಸೆ ಹಾಗೂ ಏಸ್ಥೆಟಿಕ್ ಪ್ರಶ್ನೆಯನ್ನು ನಿಭಾಯಿಸುವ ಇಲ್ಲವೇ ಅನುಸಂಧಾನ ಮಾಡುವ ಬಗೆಗಳಾಗಿವೆ. ಸೃಜನಶೀಲತೆಗೆ ಸಂಬಂಧಿಸಿದ ಪ್ರಾಬಲ್ಯ ಮತ್ತು ಸವಾಲನ್ನು ಎದುರಾಗುವುದಕ್ಕೆ ಮಾತ್ರ ಸೀಮಿತವಾಗಿವೆ. ಅಂದರೆ ಸಮೂಹಗಳ ವಿಮೋಚನೆಗೆ ಪೂರಕವಾಗಿ ಮೈದಾಳಿದ ಈ ನಿಲುವುಗಳೂ ಸಾಹಿತ್ಯಕ ಹಿರಿಮೆಯನ್ನು ಕೊಂಡಾಡುವ ವಿಧಾನಗಳು ಆಗಿವೆ. ಅಂದರೆ ಕನ್ನಡದ ಯಾವ ಸಾಧ್ಯತೆಯೂ ನಮ್ಮ ಜನರ ಬದುಕಿನ ಏಳ್ಗೆಯ ನಿಲುವಾಗಿ ಪರಿವರ್ತನೆಗೊಂಡಿಲ್ಲ.
ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕಾರಣ, ವಿಜ್ಞಾನ, ತಂತ್ರಜ್ಞಾನ ಹಾಗೂ ಒಟ್ಟು ಭಾಷಿಕ ಪರಿಸರವು ಕೇವಲ ನಿರ್ದಿಷ್ಟ ಉದ್ದೇಶಗಳಿಗೆ ಸೀಮಿತಗೊಂಡಿವೆ. ಯಾರು ಕನ್ನಡದ ಹಕ್ಕುದಾರರು? ಯಾರು ಕನ್ನಡದ ವಾರಸುದಾರರು ಎಂಬೆಲ್ಲ ಪ್ರಶ್ನೆಗಳು ಎದುರಾದಾಗೆಲ್ಲ ನಾವು ವರ್ತಿಸುವ ಬಗೆಯೇ ಬೇರೆ. ಅಂದರೆ ಕನ್ನಡವನ್ನು ಉಳಿಸುವ ಬೆಳೆಸುವ ಸವಾಲುಗಳಿಗೆ ಮಾತ್ರ ಸಬಾಲ್ಟ್ರನ್ ಸಮೂಹಗಳನ್ನೇ ಹೊಣೆಗಾರರನ್ನಾಗಿಸುತ್ತೇವೆ. ಆ ಸಮೂಹಗಳ ಆರ್ಥಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಭಾಷೆಯ ಪಾತ್ರ ಎಂತಹದು ಎನ್ನುವುದನ್ನು ವಿಶ್ಲೇಷಿಸಿ ನೋಡುವ ಪ್ರಯತ್ನವನ್ನು ನಾವು ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಕನ್ನಡ ಅಥವಾ ಯಾವುದೇ ಭಾಷೆಯನ್ನು ಕೇವಲ ಅಭಿಮಾನದ ನೆಲೆಯನ್ನಾಗಿ ಬಿಂಬಿಸುತ್ತೇವೆ. ತಾಯ್ನುಡಿ ಬಗೆಗಿನ ಚರ್ಚೆಗಳನ್ನು ಬೆಳೆಸುತ್ತಿರುವ ಈ ಸನ್ನಿವೇಶದಲ್ಲಿ ಭಾಷೆ, ಆರ್ಥಿಕತೆ ಹಾಗೂ ಸಮೂಹಗಳ ನಡುವಿನ ನಂಟಸ್ತಿಕೆ ಕುರಿತು ಈಗಲಾದರೂ ಚರ್ಚಿಸುವ ಇರಾದೆಯನ್ನು ನಾವು ಹೊಂದುವ ಅವಶ್ಯಕತೆ ಇದೆ.
ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾಷಾ ಸಿದ್ಧಾಂತವು ಒಂದು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹಲವು ವಿದ್ವಾಂಸರು ಈಗಾಗಲೇ ವಾದಿಸಿದ್ದಾರೆ. ಭಾಷಿಕತೆ, ಸಾಮಾಜಿಕತೆ ಹಾಗೂ ಆರ್ಥಿಕತೆಗಳ ನಡುವಣ ವಾಸ್ತವ ಸಂಬಂಧ ಎಂತಹದು ಎನ್ನುವ ಸಂಗತಿಯನ್ನು ಅತ್ಯಂತ ನಿಚ್ಚಳವಾಗಿ ಗ್ರಹಿಸಲು ನಮಗೆ ಸಾಧ್ಯವಾಗಿಲ್ಲ ಎಂಬುದು ದಿಟ. ಅಂದರೆ ಯಾವುದೇ ಸಮುದಾಯದ ಸಂಪೂರ್ಣ ಏಳ್ಗೆ ಎನ್ನುವುದು ಭಾಷೆ ಹಾಗೂ ಭಾಷಿಕ ಸಂಪನ್ಮೂಲಗಳ ಮೂಲಕ ನೆರವೇರುವುದು ಅನ್ನುವ ಆಯಾಮವನ್ನು ನಾವು ತಾತ್ವಿಕ ಇಲ್ಲವೇ ಪ್ರಾಯೋಗಿಕ ನೆಲೆಗಳಿಂದಲೂ ವಿಶ್ಲೇಷಿಸಿ ನೋಡಲು ಸಾಧ್ಯವಾಗಿಲ್ಲ.
ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಳ ಪ್ರಕ್ರಿಯೆಯಲ್ಲಿ ಭಾರತದಂತಹ ದೇಶದಲ್ಲಿ ಬಹುಭಾಷಿಕತೆ ಎಂಬ ವಿದ್ಯಮಾನವು ಹೇಗೆಲ್ಲ ಒತ್ತಾಸೆಯಾಗಬಲ್ಲದು ಎಂಬುದನ್ನು ಇವತ್ತು ಅರ್ಥೈಸುವ ಜರೂರಿದೆ. ಅಷ್ಟೇ ಅಲ್ಲದೆ ಭಾಷೆ ಮತ್ತು ಸಮಾಜಗಳ ನಡುವಿನ ನಂಟಸ್ತಿಕೆಯನ್ನು ಸ್ಪಷ್ಟವಾಗಿ ವಿವರಿಸುವಲ್ಲಿ ನಾವೇಕೆ ಸೋತಿದ್ದೇವೆ? ಇಂತಹ ಸೋಲಿಗೆ ಕಾರಣವಾಗಿರುವ ಸಂಗತಿಗಳಾವುವು? ನಮ್ಮ ಶಿಕ್ಷಣ ಪ್ರಕ್ರಿಯೆಯಲ್ಲಿ ಅನುಸರಿಸುವ ಭಾಷಾ ಯೋಜನೆ ಮತ್ತು ನೀತಿಗಳ ಸ್ವರೂಪ ಯಾವುದು ಎಂಬೆಲ್ಲ ಪ್ರಶ್ನೆಗಳನ್ನು ಎದುರಾಗಬೇಕಿದೆ. ಈ ಪ್ರಶ್ನೆಗಳು ಕೇವಲ ಭಾಷಾಶಾಸ್ತ್ರೀಯ ತಾತ್ವಿಕ ಜಿಜ್ಞಾಸೆಯಿಂದ ಮೂಡಿದಂತಹವಲ್ಲ. ಬದಲಾಗಿ ನಮ್ಮ ಸಮುದಾಯಗಳು ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳ ಪರಿಣಾಮವಾಗಿ ಮೂಡಿದಂತಹ ಪ್ರಶ್ನೆಗಳಾಗಿವೆ.
ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಭಾಷೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಈ ಹೊತ್ತಿನ ಹಲವು ಅಧ್ಯಯನಗಳು ಹೇಳುತ್ತವೆ. ವ್ಯಕ್ತಿಯೊಬ್ಬನ ಬೆಳವಣಿಗೆ ಹಾಗೂ ಸಮುದಾಯಗಳ ಆರ್ಥಿಕ ಬೆಳವಣಿಗೆಯಲ್ಲಿ ಭಾಷೆಗಳ ಪಾತ್ರವನ್ನು ಯಾವುದೇ ಬಗೆಯಲ್ಲಿ ಕಡೆಗಣಿಸಲು ಆಗುವುದಿಲ್ಲ. ಅಂದರೆ ಸಮೂಹಗಳ ಸುಸ್ಥಿರ ಬೆಳವಣಿಗೆಯಲ್ಲಿ ಭಾಷಿಕತೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಹವಾಮಾನ, ಮತ್ತು ಪರಿಸರ ವಿಜ್ಞಾನ ಇತ್ಯಾದಿ ಜನಾಂಗೀಯ ವಿದ್ಯಮಾನಗಳು ನಿರ್ಣಾಯಕ ವಿನ್ಯಾಸಗಳಾಗಿವೆ ಎಂದೂ ವಾದಿಸಲಾಗುತ್ತಿದೆ.
ಸಮಾಜ ಮತ್ತು ವ್ಯಕ್ತಿಗಳ ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಮೇಲೆ ಈ ಭಾಷಿಕತೆಯು ಹೇಗೆ ಪರಿಣಾಮ ಬೀರಬಲ್ಲದು ಎನ್ನುವ ಚರ್ಚೆಗಳು ಕೂಡ ಅರವತ್ತರ ದಶಕದಿಂದಲೇ ಚಾಲ್ತಿಯಲ್ಲಿವೆ. ಈ ಇಡೀ ಪ್ರಕ್ರಿಯೆಯನ್ನು ಭಾಷಾ ಅರ್ಥಶಾಸ್ತ್ರ (ಇಕಾನಮಿಕ್ಸ್ ಆಫ್ ಲ್ಯಾಂಗ್ವೇಜ್) ಎನ್ನಲಾಗುತ್ತಿದೆ. ಸಮುದಾಯಗಳ ಒಟ್ಟು ಆರ್ಥಿಕ ಬೆಳವಣಿಗೆಗಾಗಿ ರೂಪಿಸುವ ಭಾಷಾ ಯೋಜನೆಗಳ ಸ್ವರೂಪ, ಯೋಜನಾ ವಿನ್ಯಾಸಗಳನ್ನು ಕೈಗೊಳ್ಳುವಲ್ಲಿ ಈ ಭಾಷಾ ಅರ್ಥಶಾಸ್ತ್ರವು ಪ್ರಮುಖ ಚಿಂತನೆಯ ನೆಲೆಯಾಗಿ ಒದಗಿ ಬರುತ್ತದೆ ಎನ್ನುವುದು ಗಮನಾರ್ಹ. ಹಾಗಾಗಿ ಸಮೂಹಗಳ ಏಳ್ಗೆಗೂ ಭಾಷೆಗಳ ಬೆಳವಣಿಗೆಗೂ ಸಂಬಂಧವಿದೆ ಎನ್ನುವ ವಾಸ್ತವವನ್ನು ಮರೆಯುವಂತಿಲ್ಲ.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.