ADVERTISEMENT

ವಿಶ್ಲೇಷಣೆ‌ | ಜೀವ ಇಷ್ಟೊಂದು ಅಗ್ಗ ಆಗಬಾರದು!

ದ್ವಿಚಕ್ರ ವಾಹನ ಅಪಘಾತಗಳಿಗೆ ಮೂರು ಪ್ರಮುಖ ಕಾರಣಗಳನ್ನು ಗುರುತಿಸಬಹುದು

ಚಂದ್ರಕಾಂತ ವಡ್ಡು
Published 10 ಜುಲೈ 2024, 0:28 IST
Last Updated 10 ಜುಲೈ 2024, 0:28 IST
   

ರಸ್ತೆ ಅಪಘಾತದಿಂದಾಗುವ ಸಾವಿನ ಸುದ್ದಿಯಿರದ ದಿನಪತ್ರಿಕೆಯನ್ನು ಈಗ ಹುಡುಕುವುದು ಸಾವಿಲ್ಲದ ಮನೆಯ ಸಾಸಿವೆ ಹುಡುಕಿದಷ್ಟೇ ಪ್ರಯಾಸದಾಯಕ ಅಥವಾ ವ್ಯರ್ಥ. ಜೀವ ಕಸಿದುಕೊಳ್ಳುವ ಅಪಘಾತದ ಘಟನೆಗಳು ‘ಅಯ್ಯೋ…’ ಎಂಬ ಉದ್ಗಾರಕ್ಕೂ ಸಲ್ಲದಷ್ಟು ಸಾಮಾನ್ಯವಾಗಿರುವುದು ಖಂಡಿತ ಒಳ್ಳೆಯ ಲಕ್ಷಣವಲ್ಲ. ಇಂತಹ ಸುದ್ದಿಗಳು ‘ದಿನಾ ಸಾಯುವವರಿಗೆ ಅಳುವವರಾರು’ ಎಂಬ ತಣ್ಣನೆಯ ಕ್ರೌರ್ಯದ ಸೆಲೆಗೂ ಕಾರಣವಾಗುವ ಮೊದಲು ನಾಗರಿಕ ಸಮಾಜ ಮತ್ತು ಆಡಳಿತ ವ್ಯವಸ್ಥೆ ಎಚ್ಚರಗೊಳ್ಳಬೇಕಿದೆ.

ಪುಣೆಯ ಕಲ್ಯಾಣಿ ನಗರದಲ್ಲಿ ಮದ್ಯಪಾನ ಮಾಡಿದ 17 ವರ್ಷ ವಯಸ್ಸಿನ ಬಾಲಕನೊಬ್ಬ ಐಷಾರಾಮಿ ಪೋಶೆ ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಘಟನೆಗೆ ವ್ಯಕ್ತವಾದ ಆಕ್ರೋಶವಿನ್ನೂ ಶಮನವಾಗಿಲ್ಲ. ಅಷ್ಟರಲ್ಲೇ ಮಹಾರಾಷ್ಟ್ರದ ಶಿವಸೇನಾ ನಾಯಕ (ಶಿಂದೆ ಬಣ) ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಚಲಾಯಿಸಿದ ಬಿಎಂಡಬ್ಲ್ಯೂ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆ
ಯೊಬ್ಬರನ್ನು ಬಲಿ ತೆಗೆದುಕೊಂಡ ದಾರುಣ ಸಮಾಚಾರ ಬಂದಿದೆ. ಬಹಳಷ್ಟು ಸಾಮ್ಯ ಹೊಂದಿರುವ ಈ ಎರಡೂ ಪ್ರಕರಣಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳಲ್ಲಿ ಕಾಣುವ ದುಬಾರಿ ಹವ್ಯಾಸ ಮತ್ತು ದುರಹಂಕಾರದ ವರ್ತನೆಯನ್ನು ಗಮನಿಸಬಹುದು.

ಹೀಗೆ ವಿಶಿಷ್ಟ ಕಾರಣಗಳಿಂದ ವಿಶೇಷ ಪ್ರಕರಣಗಳಾಗಿ ಇವು ದೇಶಾವ್ಯಾಪಿ ಸುದ್ದಿಗಳಾಗಿ ಗಮನ ಸೆಳೆದಿವೆ. ಆದರೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ದುರಸ್ತಿ ಕಾಣದ ರಸ್ತೆಯ ಕುಣಿ ತಪ್ಪಿಸಲು ಹೋಗಿ, ಸೇತುವೆಯ ತಡೆಗೋಡೆಗೆ ತಾಗಿ, ಬೃಹದಾಕಾರದ ಲಾರಿ-ಬಸ್ಸುಗಳ ಚಕ್ರದ ಅಡಿ ತಲೆ ಸಿಲುಕಿ… ದ್ವಿಚಕ್ರ ವಾಹನ ಸವಾರರು ಹೀಗೆ ಜೀವ ಕಳೆದುಕೊಳ್ಳುವುದು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಮರೆಯಾಗುತ್ತವೆ.

ADVERTISEMENT

ಇವೆಲ್ಲಾ ಓದುಗರಿಗೆ ಮತ್ತು ಪತ್ರಿಕೆಗಳಿಗೆ ಅಂತಿಮವಾಗಿ ಕೇವಲ ಸುದ್ದಿ ಅಷ್ಟೇ. ಪೊಲೀಸರಿಗೆ, ವಕೀಲರಿಗೆ ಒಂದು ಪ್ರಕರಣ ಮಾತ್ರ. ಆದರೆ ಜೀವತೆತ್ತವರ ಹತ್ತಿರದವರಿಗೆ, ಮನೆಯವರಿಗೆ...? ದೇಶದಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ ರಸ್ತೆ ಅಪಘಾತಗಳ ಪಾಲು ಶೇಕಡ 13ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕ ರಾಜ್ಯವು ಗಣನೀಯ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಸಂಗ್ರಹಿಸಿರುವ ದಾಖಲೆಗಳ ಪ್ರಕಾರ, 2023ರಲ್ಲಿ ಕರ್ನಾಟಕ 43,440 ರಸ್ತೆ ಅಪಘಾತಗಳನ್ನು ಕಂಡಿದೆ. ಅದರಲ್ಲಿ ದ್ವಿಚಕ್ರ ವಾಹನಗಳ ಪಾಲು ಸರಿಸುಮಾರು ಶೇ 40ರಷ್ಟಿದೆ. ಈ ರಸ್ತೆ ಅಪಘಾತಗಳಿಂದ ಆಗುವ ಸಾವು-ನೋವುಗಳೇನೂ ಕಡಿಮೆ ಪ್ರಮಾಣ
ದಲ್ಲಿಲ್ಲ. 2023ರಲ್ಲಿ, ರಸ್ತೆ ಅಪಘಾತಗಳಿಂದ 12,321 ಮಂದಿ ಸಾವನ್ನಪ್ಪಿದ್ದಾರೆ.

ಈ ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರು ಸರಿಸುಮಾರು ಶೇ 45ರಷ್ಟಿದ್ದಾರೆ. ದ್ವಿಚಕ್ರ ವಾಹನ ಅಪಘಾತದಲ್ಲಿ ಪೆಟ್ಟುತಿಂದು ಹೇಗೋ ಜೀವ ಉಳಿಸಿಕೊಂಡವರು ಅನುಭವಿಸುವ ಯಾತನೆ ಸಣ್ಣದೇನಲ್ಲ. ದ್ವಿಚಕ್ರ ವಾಹನ ಅಪಘಾತಗಳಲ್ಲಿ ಯುವಕರ ಪಾಲೇ ಹೆಚ್ಚಾಗಿರುವುದು ಮತ್ತೊಂದು ಆತಂಕಕಾರಿ ಸಂಗತಿ. ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ನಗರ ಪ್ರದೇಶ ಸಹಜವಾಗಿಯೇ ಹೆಚ್ಚಿನ ಪಾಲು ಹೊಂದಿದೆ. ಇದಕ್ಕೆ ನಗರ, ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ರಸ್ತೆಗಿಳಿಯುವ ವಾಹನಗಳ ಬಾಹುಳ್ಯವೇ ಮುಖ್ಯ ಕಾರಣ. ಹಾಗೆಂದು ಗ್ರಾಮೀಣ ಪ್ರದೇಶಗಳೇನೂ ಅಪಘಾತಗಳ ವಿಷಯದಲ್ಲಿ ತೀರಾ ಹಿಂದೆ ಬಿದ್ದಿಲ್ಲ. ಮಳೆಗಾಲದಲ್ಲಿ ಅಪಘಾತಗಳ ಪ್ರಮಾಣ ಏರಿಕೆಯಾಗುವುದನ್ನೂ ಕಾಣಬಹುದು.

ದ್ವಿಚಕ್ರ ವಾಹನ ಅಪಘಾತಗಳಿಗೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಮೂರು ಸಾಧ್ಯತೆಗಳ ಸುತ್ತಲೇ ಸುತ್ತು ಹೊಡೆಯಬೇಕಾಗುತ್ತದೆ. ಮೊದಲನೆಯದು ವಾಹನ ಚಾಲಕರು ಎಸಗುವ ತಪ್ಪುಗಳು, ಎರಡನೆಯದು ರಸ್ತೆ ಕಳಪೆಯಾಗಿರುವುದು ಹಾಗೂ ಮೂರನೆಯದು ವಾಹನದ ದೋಷ. ಬಹುಶಃ ಬಹಳಷ್ಟು ರಸ್ತೆ ಅವಘಡಗಳಿಗೆ ವಾಹನ ಸವಾರರ, ಅದರಲ್ಲೂ ಯುವ ಚಾಲಕರ ಸ್ವಯಂಕೃತ ಪ್ರಮಾದಗಳೇ ಕಾರಣ
ವಾಗುವುದನ್ನು ಗಮನಿಸಬೇಕಾಗುತ್ತದೆ.

ಮಿತಿಮೀರಿದ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಹೆಲ್ಮೆಟ್‌ರಹಿತ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆಯಂಥವು ಪ್ರಾಣಾಂತಕವಾಗಿ ಪರಿಣಮಿಸುತ್ತವೆ. ರಸ್ತೆ ಗುಂಡಿಗಳು, ಅವೈಜ್ಞಾನಿಕ ವೇಗತಡೆಗಳು, ರಸ್ತೆಗಳ ಕಳಪೆ ನಿರ್ವಹಣೆ, ಅಸಮರ್ಪಕ ಸೂಚನಾ ಫಲಕಗಳು… ದ್ವಿಚಕ್ರ ವಾಹನ ಅಪಘಾತಗಳಿಗೆ ಪ್ರಮುಖ ಕೊಡುಗೆ ನೀಡುತ್ತವೆ. ಇಲ್ಲಿ ರಸ್ತೆ ನಿರ್ವಹಿಸಲು ಎಂಜಿನಿಯರಿಂಗ್ ವಿಭಾಗಗಳಿವೆ, ನಿಯಮಗಳನ್ನು ಜಾರಿಗೊಳಿಸಲು ಸಂಚಾರ ಪೊಲೀಸರು ಇದ್ದಾರೆ, ವಾಹನ-ಚಾಲನೆ ತಪಾಸಣೆಗೆ ಸಾರಿಗೆ ಅಧಿಕಾರಿಗಳಿದ್ದಾರೆ, ಉತ್ಸಾಹಿ ಯುವಜನರಿಗೆ ತಿಳಿಹೇಳಲು ಮನೆಯಲ್ಲಿ ಹಿರಿಯರಿದ್ದಾರೆ, ಏನಾದರೂ ಏರುಪೇರಾದರೆ ಮಧ್ಯಪ್ರವೇಶಿಸಲು ಜನಪ್ರತಿನಿಧಿಗಳು ಇದ್ದಾರೆ, ಬೆಂಗಾವಲಿಗೆ ನಾಗರಿಕ ಸಮಾಜವೂ ಇದೆ… ಆದರೂ ಎಡವಟ್ಟು ನಡೆಯುತ್ತಲೇ ಇದೆ ಎಂದರೆ ಇಡೀ ವ್ಯವಸ್ಥೆಯ ಪುನರ್ ಪರಿಶೀಲನೆಯ ಸಮಯ ಬಂದಿದೆ ಎಂದರ್ಥ.

ರಸ್ತೆ ಅಪಘಾತಗಳಲ್ಲಿ ಸಾವಿಗೆ ಈಡಾಗುವುದಕ್ಕೆ ಮುಖ್ಯ ಕಾರಣ ದ್ವಿಚಕ್ರ ವಾಹನ ಚಾಲಕರ ತಲೆಭಾಗಕ್ಕೆ ಬೀಳುವ ಬಲವಾದ ಪೆಟ್ಟು ಎಂಬುದು ನಿರ್ವಿವಾದ. ಇದಕ್ಕಿರುವ ಏಕೈಕ ಸುರಕ್ಷಾ ಕ್ರಮವೆಂದರೆ ಹೆಲ್ಮೆಟ್ ಧರಿಸುವುದು. ಹೆಲ್ಮೆಟ್ ವಿಷಯದಲ್ಲಿ ಆಗುತ್ತಿರುವ ಲೋಪದ ಮೂಲಕ್ಕೆ ಹೋದರೆ ಸವಾರರು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಾಲಾಗಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಐ.ಎಸ್.ಐ ಗುರುತಿನ ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಧರಿಸಬೇಕೆಂದು ಸರ್ಕಾರ ನಿಯಮ ಮಾಡಿದೆ. ಆದರೆ ಕಳಪೆ ಹೆಲ್ಮೆಟ್‌ಗಳ ಉತ್ಪಾದನೆ ಮತ್ತು ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ.

ಹೆಲ್ಮೆಟ್ ಧರಿಸುವುದರಲ್ಲಿ ತಮ್ಮ ಸುರಕ್ಷತೆ ಇದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಉಪೇಕ್ಷಿಸುವ ವಾಹನ ಚಾಲಕರು ಈ ನಿಯಮವನ್ನು ಪೊಲೀಸರಿಂದ ಬಚಾವಾಗಲಷ್ಟೇ ಪಾಲಿಸಿದಂತೆ ನಟಿಸುತ್ತಾರೆ. ಸಂಚಾರ ಪೊಲೀಸರಿಗೆ ಕೂಡ ವಾಹನ ಚಾಲಕರ ಸುರಕ್ಷತೆ ಅಥವಾ ನಿಯಮ ಪಾಲನೆಗಿಂತ ನಿಗದಿತ ದಂಡದ ಗುರಿ ಮುಟ್ಟುವುದೇ ಮುಖ್ಯವಾಗುತ್ತದೆ. ಹಾಗಾಗಿ ಕಬ್ಬಿಣದ ಟೋಪಿಗಳಂತಹ ಕಾಟಾಚಾರದ ಹೆಲ್ಮೆಟ್‌ಗಳನ್ನು, ಅದೂ ಪೊಲೀಸರೆದುರು ಮಾತ್ರ ಧರಿಸುವುದನ್ನು ಕಾಣಬಹುದು. ನಾಲ್ಕೈದು ಲಕ್ಷ ರೂಪಾಯಿ ಮೌಲ್ಯದ ಅತಿವೇಗದ ಬೈಕುಗಳ ಆಕರ್ಷಣೆ ಈಗಿನ ಯುವಕರಲ್ಲಿ ವಿಪರೀತವಾಗಿ ಬೆಳೆಯುತ್ತಿದೆ. ವಿದೇಶಗಳಲ್ಲಿನ ಸುಸ್ಥಿತಿಯ ರಸ್ತೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಚಲಾಯಿಸುವಂತೆ ವಿನ್ಯಾಸಗೊಳಿಸಿದ ಇಂತಹ ದ್ವಿಚಕ್ರ ವಾಹನಗಳನ್ನು ಭಾರತದಲ್ಲಿ ಹುಚ್ಚಾಪಟ್ಟೆ ಚಲಾಯಿಸುವ ಮೂಲಕ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಂಡವರ ದೊಡ್ಡ ಪಟ್ಟಿಯೇ ಸಿಗುತ್ತದೆ.

ಸಂಚಾರ ಸುರಕ್ಷತೆ ವಿಷಯದಲ್ಲಿ ಸರ್ಕಾರ, ಸಮಾಜ ಮತ್ತು ವ್ಯಕ್ತಿಗಳು ಸಮಾನವಾಗಿ ನಿರ್ಲಕ್ಷ್ಯ ತಾಳಿರುವುದು ಸಮಂಜಸವಲ್ಲ. ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ನೀಡುವುದರಿಂದ ಹಿಡಿದು ಸಂಚಾರ ನಿಯಮಗಳ ಪಾಲನೆ, ಜಾರಿ ಸಂದರ್ಭದಲ್ಲಿ ನಾವು ಒಂದು ವ್ಯವಸ್ಥೆಯಾಗಿ ಹೇಗೆ, ಎಷ್ಟೊಂದು ಸೋಲು ಕಂಡಿದ್ದೇವೆ ಎಂದು ನೆನೆದರೆ ತೀರಾ ಹತಾಶೆಯಾಗುತ್ತದೆ.

ಜರ್ಮನಿಯಲ್ಲಿ ನೆಲೆಸಿರುವ ಬೆಂಗಳೂರಿನ ಯುವಕ ಶ್ರೇಯಸ್ ಕಾರ್ತಿಕ್ ಆ ದೇಶದ ಸಂಚಾರ ಸುರಕ್ಷತೆ ವ್ಯವಸ್ಥೆ ಕುರಿತು ಹಂಚಿಕೊಂಡ ಸ್ವ ಅನುಭವ ಈ ಲೇಖಕನನ್ನು ಅಚ್ಚರಿಗೊಳಪಡಿಸಿತು. ಮೆಕಾನಿಕಲ್ ಎಂಜಿನಿಯರ್ ಆದ ಅವರು ಕೆಲಸ ಮಾಡುವುದು ಮರ್ಸಿಡೀಸ್ ಬೆಂಜ್ ವಾಹನ ತಯಾರಿಕಾ ಕಂಪನಿಯಲ್ಲಿ. ಆ ದೇಶದಲ್ಲಿ ವಾಹನ ಚಾಲನಾ ಪರವಾನಗಿ ಪಡೆಯಲು ಈ ಯುವಕ ತಾನು ಎಂಜಿನಿಯರಿಂಗ್ ಪದವಿ ಪಡೆಯಲು ಹಾಕಿದ್ದಕ್ಕಿಂತ ಹೆಚ್ಚಿನ ಶ್ರಮ ಹಾಕಬೇಕಾಯಿತಂತೆ. ಶುಲ್ಕವಾಗಿ ಪಾವತಿಸಿದ ಮೊತ್ತ ಒಂದೂವರೆ ಲಕ್ಷ ರೂಪಾಯಿ. ವಾಹನ ಚಾಲನೆ ತರಬೇತಿಗೆ ಸೇರಿದಾಗ ಅಲ್ಲಿನ ಸಿಬ್ಬಂದಿ, ‘ಇನ್ ಇಂಡಿಯಾ, ಯು ಡು ನಾಟ್ ಕ್ಲಿಯರ್ ಡ್ರೈವಿಂಗ್ ಟೆಸ್ಟ್… ಯು ಆರ್ ಬೈಯಿಂಗ್ ಲೈಸೆನ್ಸ್’ (ಭಾರತದಲ್ಲಿ ನೀವು ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ನೀವು ಪರವಾನಗಿಯನ್ನು ಖರೀದಿಸುತ್ತೀರಿ) ಎಂದಿದ್ದರಂತೆ! ಸಂಚಾರ ಸುರಕ್ಷತೆಯ ವಿಚಾರದಲ್ಲಿ ನಮ್ಮ ನಿರ್ಲಕ್ಷ್ಯ ಧೋರಣೆಯನ್ನು ತಿಳಿಸುವ ಈ ಹೇಳಿಕೆಯನ್ನು ಸುಳ್ಳಾಗಿಸುವ ಕಾಲಕ್ಕೆ ಹಂಬಲಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.