ADVERTISEMENT

ವಿಶ್ಲೇಷಣೆ | ವ್ಯಸನ ಮತ್ತು ಮನುಷ್ಯನ ಸಂಕಲ್ಪಶಕ್ತಿ

ಮದ್ಯಪಾನಕ್ಕೆ ಹಂತ ಹಂತವಾಗಿ ಕಡಿವಾಣ ಹಾಕುವ ಮಾರ್ಗೋಪಾಯ ಶೋಧಿಸುವುದು ವಿಹಿತ

ಟಿ.ಎನ್‌.ವಾಸುದೇವಮೂರ್ತಿ
Published 4 ಮೇ 2020, 19:23 IST
Last Updated 4 ಮೇ 2020, 19:23 IST
   
""

ಕವಿ ಗೋಪಾಲಕೃಷ್ಣ ಅಡಿಗರು ವಿಪರೀತ ಸಿಗರೇಟು ಸೇದುತ್ತಿದ್ದರು. ಬುದ್ಧಿಜೀವಿಗಳ ವಲಯದಲ್ಲಿ ಸಿಗರೇಟಿಗೊಂದು ತಾರಾಮೌಲ್ಯ ದೊರೆತದ್ದೇ ಅಡಿಗರಿಂದ ಎಂಬ ಮಾತಿದೆ. ಸಿಗರೇಟು ಕುರಿತು ‘ಧೂಮಲೀಲೆ’ ಎಂಬ ಪದ್ಯವನ್ನೂ ಅವರು ಬರೆದಿದ್ದಾರೆ.

ಒಮ್ಮೆ ಅಡಿಗರು ಇಳಿವಯಸ್ಸಿನಲ್ಲಿ ಮುಂಜಾನೆಯ ವಾಯುವಿಹಾರದ ನೆವದಲ್ಲಿ ಸಿಗರೇಟು ಖರೀದಿಸಲು ಹೋದರು. ರಸ್ತೆಯ ಮೂಲೆಯಲ್ಲಿದ್ದ ಕಿರಾಣಿ ಅಂಗಡಿಯವನು ಇನ್ನೂ ಬೀಗ ತೆಗೆದಿರಲಿಲ್ಲ. ಹಾಗೆಯೇ ಅರ್ಧ ಗಂಟೆ ಅಡ್ಡಾಡಿಕೊಂಡು ಬಂದು ನೋಡಿದರೆ, ಇನ್ನೂ ಮುಚ್ಚಿಯೇ ಇತ್ತು. ಅವರು ಮತ್ತೆ ಒಂದೆರಡು ಸುತ್ತು ಹೋಗಿಬಂದರೂ ಅಂಗಡಿಯ ಬೀಗ ತೆಗೆದಿರಲಿಲ್ಲ. ಕೊನೆಗೆ ಹತಾಶೆಗೊಂಡು ‘ಒಂದು ಜುಜುಬಿ ಸಿಗರೇಟಿಗಾಗಿ ನಾನು ಇವನ ಅಂಗಡಿ ಬಾಗಿಲು ಕಾಯಬೇಕೇ?’ ಎನಿಸಿ ಸಿಗರೇಟಿನ ಮುಲಾಜೇ ಬೇಡ ಎಂದು ಹಾಗೆಯೇ ಮನೆಗೆ ಹೊರಟು ಹೋದರಂತೆ. ಅಲ್ಲಿಂದಾಚೆಗೆ ಅವರು ತಮ್ಮ ಜೀವಿತದಲ್ಲೇ ಮತ್ತೆ ಸಿಗರೇಟು ಮುಟ್ಟಲಿಲ್ಲವಂತೆ.

ಸಿಗರೇಟು ವ್ಯಸನದ ಮುಕ್ತಿಗೆ ಇದು ತೀರಾ ಕ್ಷುಲ್ಲಕ ಕಾರಣ ಎನಿಸಬಹುದು. ಆದರೆ ಮನುಷ್ಯನ ಅಹಂಪ್ರತ್ಯಯ ಮತ್ತು ಸಂಕಲ್ಪ ಶಕ್ತಿಯ ಎದುರು ಎಂಥ ವ್ಯಸನವೂ ಕ್ಷುಲ್ಲಕವಾಗಿಬಿಡುತ್ತದೆ.

ADVERTISEMENT

ಮನುಷ್ಯ ಸಂಕಲ್ಪದ ಈ ಬಲವನ್ನು ನಂಬಿಯೇ ಮಹಾತ್ಮ ಗಾಂಧಿ ‘ಪಾನಮುಕ್ತ ಭಾರತ’ದ ಕನಸು ಕಂಡಿದ್ದು. ಆ ಕನಸು ಇಂದಿಗೂ ಈಡೇರಿಲ್ಲ. ಅದನ್ನು ಈಡೇರಿಸಲೆಂದು ಗುಜರಾತ್‌ ಮದ್ಯನಿಷೇಧ ಕಾನೂನು ಜಾರಿಗೆ ತಂದಿತಾದರೂ ಅದರಿಂದ ಪ್ರಯೋಜನವಾಗಲಿಲ್ಲ. ಇಂತಹ ಪ್ರಯತ್ನ ನಡೆದಲ್ಲೆಲ್ಲ ಕಳ್ಳಬಟ್ಟಿ ದಂಧೆ ತಲೆಎತ್ತಿದೆ. ಅದನ್ನು ಕುಡಿದು ಜೀವಹಾನಿಯಂತಹ ಅನಾಹುತಗಳು ದೇಶದ ನಾನಾ ಭಾಗಗಳಲ್ಲಿ ನಡೆದಿವೆ. ಅಲ್ಲದೆ ಯಾವುದೋ ಒಂದು ರಾಜ್ಯದಲ್ಲಿ ಮದ್ಯನಿಷೇಧ ಜಾರಿಯಾದಾಗಲೆಲ್ಲ ಅಕ್ಕಪಕ್ಕದ ರಾಜ್ಯಗಳಲ್ಲಿ ಮದ್ಯ ಮಾರಾಟ ಪ್ರಮಾಣ ಗಮನಾರ್ಹವಾಗಿ ಏರಿರುವುದನ್ನು ಅಂಕಿಅಂಶಗಳು ತಿಳಿಸುತ್ತವೆ.

‘ಮದ್ಯದಿಂದಾಗಿ ಗಾಜು, ಟಿನ್‌, ಪ್ಲಾಸ್ಟಿಕ್‌, ಪೇಪರ್‌ ಮುಂತಾದ ಉದ್ಯಮಗಳು ಬೆಳೆಯುತ್ತವೆ, ಲಕ್ಷಾಂತರ ಮಂದಿಗೆ ಉದ್ಯೋಗ ಸಿಗುತ್ತದೆ, ಸರ್ಕಾರಕ್ಕೆ ಪ್ರತಿವರ್ಷ ಕೋಟಿಗಟ್ಟಲೆ ವರಮಾನ ಬರುತ್ತದೆ’ ಎಂದು ಮದ್ಯನಿಷೇಧ ವಿರೋಧಿಗಳು ವಾದಿಸುತ್ತಾರೆ. ಇದು ವ್ಯಕ್ತಿ ಸ್ವಾತಂತ್ರ್ಯದ ಹರಣವೆನ್ನುವ ಮಟ್ಟಕ್ಕೂ ಅವರು ಹೋಗುತ್ತಾರೆ. ಕೆಲವು ಸಲ ನಮ್ಮ ವ್ಯಕ್ತಿಗತ ಅಭಿರುಚಿ ನಮ್ಮ ಆಲೋಚನೆಯನ್ನು ನಿಯಂತ್ರಿಸುವುದುಂಟು. ಸಿಗರೇಟು, ಮದ್ಯ, ರೇಸು ಮುಂತಾದವುಗಳ ವ್ಯಸನಿಯಾದ ಒಬ್ಬ ಬರಹಗಾರ ಅವುಗಳ ಪರವಾಗಿ ಆಲೋಚಿಸಬಹುದು ಅಥವಾ ಲಾಭದಾಯಕ ಶಿಕ್ಷಣ ಸಂಸ್ಥೆ ನಡೆಸುವ ಒಬ್ಬ ರಾಜಕಾರಣಿಯು ಸಮಾನ ಶಿಕ್ಷಣ ನೀತಿಯಲ್ಲಿ ನಿರಾಸಕ್ತಿ ತಳೆಯಬಹುದು. ಆದರೆ ಸಾರ್ವಜನಿಕ ವಲಯದಲ್ಲಿರುವವರು ಯಾವಾಗಲೂ ತಮ್ಮ ವ್ಯಕ್ತಿಗತ ಅಭಿರುಚಿ- ಹಿತಾಸಕ್ತಿಗಳನ್ನು ಮೀರಿ ಯೋಚಿಸಬೇಕಾಗುತ್ತದೆ.

ಮದ್ಯಸೇವನೆಯ ಪರವಾಗಿ ಯೋಚಿಸುವವರು ‘ಒಂದು ಮಿತಿಯಲ್ಲಿ ಮದ್ಯ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು’ ಎಂದು ವಾದಿಸುವರಾದರೂ ನಮ್ಮ ದೇಶದಲ್ಲಿ ಆ ವಿವೇಕ ಎಷ್ಟು ಮಂದಿಗಿದೆ ಎಂದು ಅಂತಹವರು ಆಲೋಚಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, ಮದ್ಯಪಾನ ಮಾಡುವವರ ಪ್ರಮಾಣದಲ್ಲಿ ಶೇ 40ರಷ್ಟು ಏರಿಕೆಯಾಗಿದ್ದು, 2030ರ ಹೊತ್ತಿಗೆ ಭಾರತದ ಮುಕ್ಕಾಲುಪಾಲು ಯುವಜನ ಮದ್ಯಕ್ಕೆ ಮರುಳಾಗಬಹುದೆಂದು ಅಂದಾಜಿಸಲಾಗಿದೆ. ಮದ್ಯಸಂಬಂಧಿ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿವರ್ಷ 2.5 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೌಟುಂಬಿಕ ವಿಘಟನೆ, ವೈಮನಸ್ಸು, ಅಪರಾಧಗಳಿಗೂ ಮದ್ಯಸೇವನೆಗೂ ನಂಟು ಇರುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಗಾಂಧಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮಾತ್ರ ಇದಕ್ಕೆಲ್ಲ ಪರಿಹಾರ ಸಿಗಬಹುದು. ಆದರೆ ಸಂಪೂರ್ಣ ಪಾನನಿಷೇಧವಂತೂ ಖಂಡಿತವಾಗಿ ಪರಿಹಾರವಲ್ಲ. ಅದಕ್ಕೆ ಗಾಂಧಿ ಸಹ ಸಮ್ಮತಿಸಲಾರರು. ವ್ಯಸನಪೀಡಿತರಾಗಿದ್ದ ತಮ್ಮ ಮಗ ಹರಿಲಾಲ್‌ ಸರಿದಾರಿಗೆ ಬರಲು ಸ್ವತಃ ಗಾಂಧೀಜಿಯೇ ಅವನಿಗೆ ಸಮಯಾವಕಾಶ ಕೊಟ್ಟಿದ್ದರು. ಆಶ್ರಮದ ಒಂದು ನಿರ್ದಿಷ್ಟ ಜಾಗದಲ್ಲಿ ಸಿಗರೇಟು ಸೇದಲು ಅನುಮತಿ ನೀಡಿದ್ದಲ್ಲದೆ ಅವನಿಗಾಗಿ ಸಿಗರೇಟನ್ನೂ ಅವರೇ ತರಿಸುತ್ತಿದ್ದರು.

ಆದ್ದರಿಂದ ಸಂಪೂರ್ಣ ನಿಷೇಧವು ಕಾಳಸಂತೆ, ಕಲಬೆರಕೆ, ಭ್ರಷ್ಟಾಚಾರಗಳಿಗೆ ದಾರಿ ಮಾಡಿಕೊಡುತ್ತದೆ. ಮದ್ಯನಿಯಂತ್ರಣ ಒಂದು ದೊಡ್ಡ ಸುದ್ದಿಯಾಗದಂತೆ ಹಂತ ಹಂತವಾಗಿ ನಿಷೇಧದತ್ತ ಹೆಜ್ಜೆ ಹಾಕುವುದೇ ಜಾಣತನ ಎನಿಸುತ್ತದೆ.

ಕೊರೊನಾ ನೆವದಲ್ಲಿ ಒಂದೂವರೆ ತಿಂಗಳಿನಿಂದ ರಾಜ್ಯದ ಎಲ್ಲಾ ಮದ್ಯದಂಗಡಿಗಳು ಮುಚ್ಚಿದ್ದವು. ಮದ್ಯದ ಅಭಾವದಿಂದಾಗಿ ಕೆಲವು ಮದ್ಯವ್ಯಸನಿಗಳ ಆರೋಗ್ಯ ತಾತ್ಕಾಲಿಕವಾಗಿ ಏರುಪೇರಾದುದನ್ನುಬಿಟ್ಟರೆ ಅಂತಹ ಗಂಭೀರ ಪ್ರಕರಣಗಳಾವುವೂ ವರದಿಯಾಗಿಲ್ಲ. ರಾಜ್ಯದಲ್ಲಿ ಶೇ 70ರಷ್ಟು ಅಪರಾಧಗಳು ಮದ್ಯಸಂಬಂಧಿ ಅಪರಾಧ ಪ್ರಕರಣಗಳಾಗಿವೆ ಎಂದು ಪೊಲೀಸ್‌ ದಾಖಲೆಗಳು ಹೇಳುತ್ತವೆ. ಆದ್ದರಿಂದ ಮುಂದೆ ಲಾಕ್‌ಡೌನ್‌ ಪೂರ್ತಿ ತೆರವುಗೊಳಿಸುವಾಗ ಮದ್ಯದಂಗಡಿಗಳ ವಿಷಯದಲ್ಲಿ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಸರ್ಕಾರ ಯೋಚಿಸಬೇಕು.

ಮೊದಲಿಗೆ, ಈಗ ಸಿಗರೇಟಿನ ಮೇಲೆ ನಿರ್ಬಂಧ ಹೇರಿರುವಂತೆ ಹೋಟೆಲ್‌, ರೆಸ್ಟೊರೆಂಟ್‌, ಕ್ಲಬ್‌, ರೆಸಾರ್ಟ್‌ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆಯನ್ನು ನಿರ್ಬಂಧಿಸಬಹುದು. ಬಹುತೇಕರು ಕುಡಿತಕ್ಕಾಗಿ ಆಶ್ರಯಿಸುವುದೇ ಈ ತಾಣಗಳನ್ನು. ಮಾತ್ರವಲ್ಲ ಇವು ನಿರಂತರವಾಗಿ ಹೊಸ ಪೀಳಿಗೆಯ ಕುಡುಕರನ್ನು ತಯಾರು ಮಾಡುವ ಕಾರ್ಖಾನೆಗಳೂ ಹೌದು. ಮದ್ಯವ್ಯಾಪಾರದ ಸಂಪೂರ್ಣ ಏಕಸ್ವಾಮ್ಯವನ್ನು ಸರ್ಕಾರ ತನ್ನ ಕೈಯಲ್ಲಿಟ್ಟುಕೊಳ್ಳುವುದೇ ಕ್ಷೇಮ. ಅಗತ್ಯವಿದ್ದವರು ಸರ್ಕಾರಿ ಮಳಿಗೆಗೆ ಹೋಗಿ ಬೇಕಾದ ಮದ್ಯ ಖರೀದಿಸಿ ಮನೆಯಲ್ಲಿ ಕುಡಿಯಲಿ (ಕಡುಬಡವರಿಗೆ ಉಪಕಾರವಾಗುವುದಾದರೆ ಈ ಮಳಿಗೆಗಳಲ್ಲಿ ಸರ್ಕಾರವೇ ತಯಾರಿಸುವ ಪ್ಯಾಕೆಟ್‌ ಸಾರಾಯಿಯೂ ದೊರಕುವಂತಾಗಲಿ). ಮದ್ಯಪಾನ ನಿಯಂತ್ರಣಕ್ಕಾಗಿ ಧೂಮಪಾನ, ಮದ್ಯಪಾನದ ದೃಶ್ಯವಿರುವ ಸಿನಿಮಾಗಳಿಗೆ ಕಡ್ಡಾಯವಾಗಿ ‘ಎ’ ಪ್ರಮಾಣಪತ್ರ ನೀಡಿದರೂ ಅಡ್ಡಿಯಿಲ್ಲ.

‘1960ರ ದಶಕದ ಉತ್ತರಾರ್ಧದಲ್ಲಿ ನಮ್ಮ ರಾಜ್ಯದಲ್ಲಿ ಪಾನನಿಷೇಧವನ್ನು ತೆಗೆದುಹಾಕಿದ ಮೇಲೆ ಸಾಮಾಜಿಕ ಆರೋಗ್ಯ ಹೇಗೆಲ್ಲ ಹದಗೆಟ್ಟಿದೆ ಎಂಬುದರ ಒಂದು ಸಮಗ್ರ ಅಧ್ಯಯನ ಈತನಕ ನಡೆದೇ ಇಲ್ಲ. ಅಂತಹುದೊಂದು ಸಮೀಕ್ಷೆ ನಡೆಸದಂತೆ ವ್ಯವಸ್ಥಿತ ರಾಜಕೀಯ ಪಿತೂರಿ ನಡೆಯುತ್ತಿದೆ’ ಎಂದು ಕರ್ನಾಟಕ ಮದ್ಯಪಾನ ಸಂಯಮ ಮಂಡಲಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಅಭಿಪ್ರಾಯಪಡುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರವು ದಕ್ಷ ವೈದ್ಯರು, ಆರ್ಥಿಕ ತಜ್ಞರು, ಪೊಲೀಸರು ಮತ್ತು ವ್ಯಸನಿಗಳ ಕುಟುಂಬದ ಸಂತ್ರಸ್ತರನ್ನು ಒಳಗೊಂಡ ಒಂದು ಸಮಿತಿ ರಚಿಸಲಿ.

ಮದ್ಯನಿಷೇಧದಿಂದ ಎಲ್ಲವೂ ಪರಿಹಾರವಾಗುವುದಿಲ್ಲ ನಿಜ. ಆದರೆ ಸರಿದಾರಿಯಲ್ಲಿ ಒಂದು ಹೆಜ್ಜೆ ಇಟ್ಟರೂ ನೂರೊಂದು ಪರಿಹಾರಮಾರ್ಗಗಳು ತೆರೆದುಕೊಳ್ಳಬಲ್ಲವು. ಮದ್ಯಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹಣದ ಹೊಳೆ ಹರಿದು ಬರುತ್ತದೆ ಎಂಬುದು ಅಪಪ್ರಚಾರವಾಗಿದೆ. ಅಪರಾಧ ತನಿಖೆಯ ಖರ್ಚು, ನ್ಯಾಯಾಂಗ ಪ್ರಕ್ರಿಯೆ ಖರ್ಚು, ಸೆರೆಮನೆ ಶಿಕ್ಷೆಯ ಖರ್ಚು, ಆಸ್ಪತ್ರೆಯ ಶುಶ್ರೂಷೆ ಖರ್ಚು, ಸಂತ್ರಸ್ತರ ಬವಣೆ, ಕಾನೂನು ಸುವ್ಯವಸ್ಥೆ ಕಾಪಾಡಲು ತೊಡಗಿಸಬೇಕಾದ ಖರ್ಚು ಇವನ್ನೆಲ್ಲ ಲೆಕ್ಕ ಹಾಕಿದರೆ ಅಬಕಾರಿ ಮೂಲದಿಂದ ಬರುವ ವರಮಾನವು ಮತ್ತೊಂದು ಮೂಲಕ್ಕೆ ಹರಿದು ಹೋಗುತ್ತಿರುತ್ತದೆ. ಬರೀ ವರಮಾನದ ಆಸೆಗಾಗಿ ಪ್ರಜೆಗಳಿಗೆ ಮದ್ಯ ಕುಡಿಸುವ ಕೆಲಸ ಜಾಣತನವಲ್ಲ, ಅದು ಸ್ವಾರ್ಥಕ್ಕಾಗಿ ಕಂಡವರ ಮಕ್ಕಳನ್ನಲ್ಲ, ನಮ್ಮದೇ ಮಕ್ಕಳನ್ನು ಬಾವಿಗೆ ತಳ್ಳುವ ಧೂರ್ತತನವಾಗಿದೆ.

ಟಿ.ಎನ್‌.ವಾಸುದೇವಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.