ಬೆಂಗಳೂರಿನ ಸನಿಹದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿರುವುದು ಸ್ವಾಗತಾರ್ಹ. ಬೆಂಗಳೂರಿನ ಸನಿಹದಲ್ಲಿ ಇನ್ನೊಂದು ವಿಮಾನ ನಿಲ್ದಾಣದ ಅಗತ್ಯವಿದೆ ಎನ್ನುವುದಕ್ಕೆ ಹೆಚ್ಚಿನ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ವಿಮಾನಯಾನ ಕಂಪನಿಗಳು ಪರಸ್ಪರ ಸ್ಪರ್ಧೆಯಲ್ಲಿ ಇರುವ ಮಾದರಿಯಲ್ಲೇ, ವಿಮಾನ ನಿಲ್ದಾಣಗಳ ನಡುವೆ ಕೂಡ ಸ್ಪರ್ಧೆ ಇರಬೇಕು. ಲಂಡನ್, ನ್ಯೂಯಾರ್ಕ್, ಪ್ಯಾರಿಸ್ ಮಹಾನಗರಗಳಲ್ಲಿ ಈ ರೀತಿಯ ಸ್ಪರ್ಧೆ ಇದೆ. ಬೆಂಗಳೂರು ಕೂಡ ಒಂದು ಕಾಸ್ಮೊಪಾಲಿಟನ್ ಮಹಾನಗರ, ಇದು ಅತ್ಯುತ್ತಮ ಪ್ರತಿಭೆಗಳನ್ನು, ಉದ್ಯಮಿಗಳನ್ನು ಆಕರ್ಷಿಸುತ್ತಿದೆ.
ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗುವುದೆಂದರೆ, ಆರೋಗ್ಯಕರ ಸ್ಪರ್ಧೆ ಸೃಷ್ಟಿಯಾದಂತೆ. ಇದರಿಂದ ಉತ್ತಮ ಗುಣಮಟ್ಟದ, ಕಡಿಮೆ ವೆಚ್ಚದ ಸೇವೆಗಳು ಲಭ್ಯವಾಗುತ್ತವೆ. ವಿಮಾನಯಾನ ಹೆಚ್ಚುತ್ತದೆ. ಬೆಂಗಳೂರಿಗರು ಇದರ ಪ್ರಯೋಜನ ಪಡೆಯುತ್ತಾರೆ. ಮಹಾನಗರಗಳು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿವೆ. ದೇಶದ ಬೇರೆ ಬೇರೆ ಪ್ರದೇಶಗಳ ಜನ ಬೆಂಗಳೂರಿಗೆ ಪ್ರತಿದಿನ ಬಂದಿಳಿಯುತ್ತಿದ್ದಾರೆ. ಲಕ್ಷಾಂತರ ಮಂದಿ ಯುವಕರು ಉದ್ಯೋಗ ಅರಸುತ್ತ, ಹೂಡಿಕೆದಾರರು ಹಣ ತೊಡಗಿಸಲು ಅವಕಾಶ ಅರಸುತ್ತ ಇಲ್ಲಿಗೆ ಬರುತ್ತಿದ್ದಾರೆ. ಈ ಜನಪ್ರವಾಹವು ಮುಂದಿನ ದಿನಗಳಲ್ಲಿಯೂ ಮುಂದುವರಿಯುತ್ತದೆ.
ಈ ನಗರವು ಎರಡು ವಿಮಾನ ನಿಲ್ದಾಣಗಳನ್ನು ಮಾತ್ರವೇ ಅಲ್ಲ, ಮುಂದಿನ ವರ್ಷಗಳಲ್ಲಿ ಮೂರು ಅಥವಾ ನಾಲ್ಕು ವಿಮಾನ ನಿಲ್ದಾಣಗಳನ್ನು ಹೊಂದುವ ಅಗತ್ಯ ಇದೆ. ಉದಾಹರಣೆಗೆ ಹೇಳುವುದಾದರೆ, ಲಂಡನ್ ಮಹಾನಗರವು ನಾಲ್ಕೂ ದಿಕ್ಕುಗಳಲ್ಲಿ ಒಟ್ಟು ಆರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚಿದ್ದು ಒಳ್ಳೆಯ ನಿರ್ಧಾರವಾಗಿರಲಿಲ್ಲ. ಈ ವಿಮಾನ ನಿಲ್ದಾಣವು ನಗರಕ್ಕೆ 60 ವರ್ಷಕ್ಕೂ ಹೆಚ್ಚಿನ ಅವಧಿಗೆ ಸೇವೆ ಒದಗಿಸಿತ್ತು. ಆದರೆ ರಕ್ಷಣಾ ಉದ್ದೇಶದ ಈ ವಿಮಾನ ನಿಲ್ದಾಣದಲ್ಲಿ ಇರುವ ನಾಗರಿಕ ಉದ್ದೇಶದ ನಿಲ್ದಾಣ ಪ್ರದೇಶವನ್ನು ಖಾಸಗಿಯವರಿಗೆ ಒಪ್ಪಿಸಬಹುದಿತ್ತು. ಅದು ಹೊಸದಾಗಿ ನಿರ್ಮಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ಸ್ಪರ್ಧಿಸುವಂತಾಗಬೇಕಿತ್ತು. ಪ್ರತಿ ಬೆಂಗಳೂರಿಗನೂ ಹೆಮ್ಮೆಪಡುವಂತಹ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಿಯಾಗಿದೆ. ಹೀಗಿದ್ದರೂ, ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮತ್ತೆ ಆರಂಭಿಸಿ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಈಗ ಗಂಭೀರವಾಗಿ ಪ್ರಸ್ತಾವಿಸಿರುವಂತೆ ಹೊಸದಾಗಿ ಇನ್ನೂ ಒಂದು ವಿಮಾನ ನಿಲ್ದಾಣ ಹೊಂದುವುದು ಬಹಳ ಒಳ್ಳೆಯ ಆಲೋಚನೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ಸುತ್ತಳತೆಯಲ್ಲಿ ಇನ್ನೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಬಾರದು ಎಂಬ ಒಪ್ಪಂದವು 2033ರವರೆಗೆ ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗ ಆಲೋಚನೆ ಶುರುಮಾಡಬೇಕು.
ಹೊಸೂರಿನಲ್ಲಿ ಹೊಸದೊಂದು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ ಹೊಂದಿದೆ. ಹೊಸೂರು ಕೈಗಾರಿಕಾ ಚಟುವಟಿಕೆಗಳ ಕೇಂದ್ರ. ಅಲ್ಲಿ ಟಿವಿಎಸ್, ಟೈಟನ್, ಅಶೋಕ್ ಲೇಲ್ಯಾಂಡ್‌ನಂತಹ ದೈತ್ಯ ಕಂಪನಿಗಳ ಜಾಲ ಇದೆ. ಅದಕ್ಕೆ ಸನಿಹದಲ್ಲೇ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಜಿಗಣಿ ಕೈಗಾರಿಕಾ ಪ್ರದೇಶ ಇವೆ. ಈ ಎರಡು ಪ್ರದೇಶಗಳು ಹೊಸೂರಿಗೆ ಪೂರಕವಾಗಿವೆ, ಈ ಮೂರೂ ಪ್ರದೇಶಗಳಿಂದಾಗಿ ಎರಡೂ ರಾಜ್ಯಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ. ಹೊಸೂರು ವಿಮಾನ ನಿಲ್ದಾಣ ಯೋಜನೆಯನ್ನು ಕರ್ನಾಟಕವು ಸ್ವಾಗತಿಸಬೇಕು.
ನಗರಗಳು ಎಲ್ಲ ದಿಕ್ಕುಗಳಲ್ಲಿಯೂ ಬೆಳೆಯಬೇಕು. ಈಗ ಎಲೆಕ್ಟ್ರಾನಿಕ್ ಸಿಟಿ ಅಥವಾ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯು ವಿಮಾನದಲ್ಲಿ ಪ್ರಯಾಣಿಸಬೇಕು ಎಂದಾದರೆ, ಮೂರು ತಾಸು ಪ್ರಯಾಣಿಸಿ ಕೆಐಎಎಲ್ ತಲುಪಬೇಕು. ಅದು ಇರುವುದು ಬೆಂಗಳೂರಿನ ಉತ್ತರದಲ್ಲಿ. ವಿಮಾನ ನಿಲ್ದಾಣ ತಲುಪಲು ಬೇಕಿರುವ ಸಮಯ ಹಾಗೂ ವಿಮಾನಯಾನದ ವೆಚ್ಚವು ಸಾಮಾನ್ಯ ಜನರಿಗೆ ಕೈಗೆಟುಕದಂತೆ ಇವೆ. ನಗರವು ಎಲ್ಲ ದಿಕ್ಕುಗಳಲ್ಲಿಯೂ ಬೆಳವಣಿಗೆ ಕಂಡಾಗ ಆರ್ಥಿಕ ಬೆಳವಣಿಗೆಯೂ ಸಮಾನವಾಗಿರುತ್ತದೆ. ಒಂದಕ್ಕಿಂತ ಹೆಚ್ಚಿನ ವಿಮಾನ ನಿಲ್ದಾಣಗಳು ಇದ್ದಾಗ, ನಗರದ ಹತ್ತಿರವಿರುವ ಸಣ್ಣ ಉಪನಗರಗಳ ಜನ ಕೂಡ ವಿಮಾನಯಾನಕ್ಕೆ ಮುಂದಾಗುತ್ತಾರೆ. ಆಗ ಉಪನಗರಗಳಲ್ಲಿಯೂ ಹೂಡಿಕೆ ಆಗುತ್ತದೆ, ಆರ್ಥಿಕ ಬೆಳವಣಿಗೆ ಸಮತೋಲನದಲ್ಲಿ ಇರುತ್ತದೆ.
ಅಮೃತಶಿಲೆಯಲ್ಲಿ ನಿರ್ಮಿಸಿದ ಅರಮನೆಯನ್ನು ಹೋಲುವಂತಹ ವಿಮಾನ ನಿಲ್ದಾಣಗಳು ಬೇಕು. ಆದರೆ, ಕಡಿಮೆ ವೆಚ್ಚದ ವಿಮಾನ ನಿಲ್ದಾಣಗಳೂ ನಮಗೆ ಬೇಕು. ಆಗ ಜನರು ತಿಂಡಿ–ತಿನಿಸುಗಳಿಗೆ ಅಥವಾ ಇತರ ಅಗತ್ಯ ವಸ್ತುಗಳಿಗೆ ಭಾರಿ ಮೊತ್ತ ಪಾವತಿಸದೆಯೇ ವಿಮಾನಯಾನ ಮಾಡಬಹುದು. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೇವೆ ಒದಗಿಸುವ ಕಂಪನಿಗಳಿಗೆ ಕಡಿಮೆ ಶುಲ್ಕದ, ಸ್ವಚ್ಛವಾಗಿರುವ, ದಕ್ಷವಾಗಿರುವ ಟರ್ಮಿನಲ್‌ಗಳ ಅಗತ್ಯ ಇರುತ್ತದೆ. ಆಗ ವಿದೇಶಗಳಲ್ಲಿ ಇರುವಂತೆಯೇ ನಮ್ಮಲ್ಲಿಯೂ ಹೆಚ್ಚಿನ ಜನ ಕಡಿಮೆ ವೆಚ್ಚಕ್ಕೆ ವಿಮಾನಯಾನ ಸೇವೆ ಪಡೆಯಬಹುದು. ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಗಳಲ್ಲಿ 500 ಕಿ.ಮೀ.ಗಿಂತ ಹೆಚ್ಚಿನ ದೂರ ಪ್ರಯಾಣಿಸುವುದಿದ್ದರೆ, ವಿಮಾನದ ಮೂಲಕ ಪ್ರಯಾಣಿಸುವುದು ರೈಲು ಅಥವಾ ಕಾರು ಬಳಸಿ ಪ್ರಯಾಣಿಸುವುದಕ್ಕಿಂತ ಕಡಿಮೆ ವೆಚ್ಚದ್ದಾಗಿರುತ್ತದೆ. ಭಾರತವೂ ಮುಂದೊಂದು ದಿನ ಆ ಹಂತ ತಲುಪಬೇಕು. ಇಂದು ಭಾರತದಲ್ಲಿ ವಿಮಾನಯಾನ ಕೈಗೊಳ್ಳುವ ಸಾಮರ್ಥ್ಯ ಇರುವವರ ಪ್ರಮಾಣ ಶೇ 5ಕ್ಕಿಂತ ಕಡಿಮೆ.
ಹಿಂದೆ ಒಮ್ಮೆ ಏರ್ ಡೆಕ್ಕನ್ ಕಂಪನಿಯು ಬೆಂಗಳೂರಿನಿಂದ ಬೀದರ್‌ಗೆ ವಿಮಾನಯಾನ ಸೇವೆ ಆರಂಭಿಸಲು ಬಯಸಿತ್ತು. ಅಂದಿನ ಮುಖ್ಯಮಂತ್ರಿಯವರ ಕೋರಿಕೆ ಆಧರಿಸಿ ಈ ತೀರ್ಮಾನಕ್ಕೆ ಕಂಪನಿ ಬಂದಿತ್ತು. ಭಾರತೀಯ ವಾಯುಪಡೆಯು ಬೀದರ್‌ನಲ್ಲಿ ಒಂದೆಡೆ, ನಾಗರಿಕ ವಿಮಾನಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿತ್ತು. ಆದರೆ, ಹೈದರಾಬಾದ್‌ನ ವಿಮಾನ ನಿಲ್ದಾಣದ ನಿರ್ವಹಣೆ ಹೊತ್ತಿದ್ದ ಕಂಪನಿಯು ಹೈದರಾಬಾದ್‌ನಿಂದ 150 ಕಿ.ಮೀ. ಸುತ್ತಳತೆಯಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಯಾವ ಕಂಪನಿಯೂ ವಿಮಾನಯಾನ ಸೇವೆ ಒದಗಿಸುವಂತಿಲ್ಲ ಎಂದು ತಕರಾರು ತೆಗೆಯಿತು. ಏರ್ ಡೆಕ್ಕನ್ ಕಂಪನಿಗೆ ಬೀದರ್‌ಗೆ ವಿಮಾನಯಾನ ಸೇವೆ ಒದಗಿಸಲು ಸಾಧ್ಯವಾಗಲಿಲ್ಲ.
ಬೃಹತ್ ಪ್ರಮಾಣದ ಖಾಸಗಿ ವಿಮಾನ ನಿಲ್ದಾಣಗಳು ಬೋಯಿಂಗ್, ಏರ್‌ಬಸ್‌ನಂತಹ ಕಂಪನಿಗಳು ತಯಾರಿಸಿದ ಅಗಲ ದೇಹದ ವಿಮಾನಗಳನ್ನು ಖುಷಿಯಿಂದ ಸ್ವಾಗತಿಸುತ್ತವೆ. ಗರಿಷ್ಠ 450 ಪ್ರಯಾಣಿಕರನ್ನು ಹೊತ್ತೊಯ್ಯುವ ಇಂತಹ ವಿಮಾನಗಳು ವಿಮಾನ ನಿಲ್ದಾಣಗಳಿಗೆ ಭಾರಿ ವರಮಾನ ತಂದುಕೊಡುತ್ತವೆ. ಈ ನಿಲ್ದಾಣಗಳು 20 ಅಥವಾ 75 ಪ್ರಯಾಣಿಕರನ್ನು ಕರೆದೊಯ್ಯುವ ಪ್ರಾದೇಶಿಕ ವಿಮಾನಯಾನ ಕಂಪನಿಗಳಿಗೆ ಆದ್ಯತೆ ಕೊಡುವುದಿಲ್ಲ. ಸರ್ಕಾರಗಳ ಒತ್ತಡಕ್ಕೆ ಮಣಿದು, ಅವುಗಳಿಗೆ ಅವಕಾಶ ನೀಡಿದರೂ, ಅವು ಪ್ರಾದೇಶಿಕ ವಿಮಾನಯಾನ ಕಂಪನಿಗಳಿಗೆ ಭಾರಿ ಶುಲ್ಕ ವಿಧಿಸುತ್ತವೆ. ಹೀಗಾಗಿ, ಕಡಿಮೆ ವೆಚ್ಚಕ್ಕೆ ಟರ್ಮಿನಲ್ ಸೇವೆಗಳನ್ನು ಒದಗಿಸುವ ಒಂದಕ್ಕಿಂತ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಹೊಂದಬೇಕಿರುವುದು ರಾಜ್ಯದ ಅರ್ಥ ವ್ಯವಸ್ಥೆಗೆ ಮಹತ್ವದ್ದು. ಇಂತಹ ವಿಮಾನ ನಿಲ್ದಾಣಗಳು ಕಡಿಮೆ ವೆಚ್ಚದಲ್ಲಿ ಪ್ರಾದೇಶಿಕವಾಗಿ ವಿಮಾನ ಸಂಪರ್ಕ ಕಲ್ಪಿಸಲು ನೆರವಾಗುತ್ತವೆ.
ದೆಹಲಿಯು ಒಂದು ಉತ್ತಮ ಉದಾಹರಣೆಯನ್ನು ಒದಗಿಸಿದೆ. ಅಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆಯ ಹೊಣೆಯನ್ನು ಬೇರೆ ಬೇರೆ ಖಾಸಗಿ ಕಂಪನಿಗಳು ಹೊತ್ತಿವೆ. ಇದರಿಂದಾಗಿ ಪರಸ್ಪರರ ನಡುವೆ ಉತ್ತಮ ಸ್ಪರ್ಧೆ ಏರ್ಪಡುತ್ತದೆ. ನೊಯಿಡಾದಲ್ಲಿ ವಿಮಾನ ನಿಲ್ದಾಣವನ್ನು ಜ್ಯೂರಿಕ್ ವಿಮಾನ ನಿಲ್ದಾಣವು ಅಭಿವೃದ್ಧಿಪಡಿಸುತ್ತಿದೆ. ದೆಹಲಿ ಪಾಲಮ್ ಪ್ರದೇಶದಲ್ಲಿನ ವಿಮಾನ ನಿಲ್ದಾಣವನ್ನು ಜಿಎಂಆರ್ ಕಂಪನಿಯು ನಿರ್ವಹಿಸುತ್ತಿದೆ. ಇಂತಹ ವ್ಯವಸ್ಥೆಯು ಬೆಳೆಯುತ್ತಿರುವ ಮಹಾನಗರಗಳಿಗೆ ಪ್ರಯೋಜನಕಾರಿ ಆಗಿರುತ್ತದೆ.
ನಾವು ರಾಜಕಾರಣಿಗಳನ್ನು ದೂಷಿಸುವುದಕ್ಕೂ ಮೊದಲು ಆಳವಾದ ನೆಲೆ ಕಂಡುಕೊಂಡಿರುವ ಕೆಲವು ಉದ್ದಿಮೆಗಳನ್ನು ದೂಷಿಸಬೇಕಾಗುತ್ತದೆ. ಹೊಸ ಉದ್ದಿಮೆಗಳಿಗೆ ತಮಗೆ ಸ್ಪರ್ಧೆ ಒಡ್ಡುವುದನ್ನು ತಡೆಯುವ ಕೆಲಸವನ್ನು ಅಥವಾ ಹೊಸ ಉದ್ದಿಮೆಗಳಿಗೆ ಅಡ್ಡಿ ಸೃಷ್ಟಿಸುವ ಕೆಲಸವನ್ನು ಮಾಡುವುದು ಇಂತಹ ಉದ್ದಿಮೆಗಳೇ. ನಮಗೆ ಬಹಳ ಚೈತನ್ಯಶಾಲಿಯಾದ ಖಾಸಗಿ ವಲಯದ ಅಗತ್ಯ ಇದೆ. ಆದರೆ ಇಲ್ಲಿ ಏಕಸ್ವಾಮ್ಯವಾಗಲಿ, ಹಿತಾಸಕ್ತಿಗಳನ್ನು ಮಾತ್ರ ಪೋಷಿಸುವ ಗುಂಪುಗಳಾಗಲೀ ಇರಕೂಡದು. ಹಲವು ವಿಮಾನ ನಿಲ್ದಾಣಗಳು ಹುಟ್ಟು ಪಡೆಯಲಿ. ಆಗ ಇನ್ನಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಅದರಿಂದ ಸಂಪತ್ತು ಹೆಚ್ಚುತ್ತದೆ. ಲಕ್ಷಾಂತರ ಮಂದಿ ವಿಮಾನಯಾನ ಮಾಡಲು ಸಾಧ್ಯವಾಗುತ್ತದೆ.
ಲೇಖಕ: ‘ಏರ್ ಡೆಕ್ಕನ್’ ವಿಮಾನಯಾನ ಕಂಪನಿಯ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.