ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ, ಹಾಸನ ಸಮೀಪದ ಅರಣ್ಯದಲ್ಲಿ ಇತ್ತೀಚೆಗೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟಿದೆ. ಇದಕ್ಕೆ ಎರಡು ದಿನಗಳ ಮೊದಲು, ಮೂಡಿಗೆರೆ ತಾಲ್ಲೂಕಿನ ಕೆಳಮೇಕನಗದ್ದೆ ಗ್ರಾಮದ ಸಮೀಪದಲ್ಲಿ, ಸಾಕಿದ ಹೆಣ್ಣಾನೆಯನ್ನು ಬಳಸಿಕೊಂಡು ಕಾಡು ಸಲಗವನ್ನು ಹಿಡಿಯುವ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಾನೆಯೊಂದು ಸಾವಿಗೀಡಾಗಿತ್ತು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಕಾಡಾನೆಗಳು ಕಂಡುಬರುತ್ತವೆ. ಮಾನವ– ಆನೆ ಸಂಘರ್ಷವು ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಇತ್ತು. ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಟವಿತ್ತು. ಆಗ ತಮಿಳುನಾಡಿನ ನೆರವಿಗೆ ಹೋಗಿದ್ದು ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ. ಎಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ, ಅವು ನಡೆದಾಡುವ ಪಥ ಯಾವುದು, ಕಾಡಾನೆಗಳ ಗುಂಪು ಯಾವ ಸಮಯದಲ್ಲಿ ಯಾವ ಭಾಗದಲ್ಲಿ
ಇರುತ್ತದೆ ಎಂಬ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ, ತಮಿಳುನಾಡಿನ ವಾಲ್ಪರೈ ಪ್ರಸ್ಥಭೂಮಿ ವ್ಯಾಪ್ತಿಯ 102 ಹಳ್ಳಿಗಳ ನಿವಾಸಿಗಳಿಗೆ ಹಾಗೂ ಅತಿಹೆಚ್ಚು ಸಂಘರ್ಷಕ್ಕೆ ಗುರಿಯಾಗುವ ಪ್ರದೇಶಗಳಲ್ಲಿನ ಜನರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಹೊಸ ಹಾಗೂ ಸುಲಭವಾದ ಪದ್ಧತಿಯನ್ನು ಸಂಸ್ಥೆಯು ಪರಿಚಯಿಸಿತು. ಈ ವಿಧಾನ ಬಹಳ ಯಶಸ್ವಿ ಆಗಿದ್ದು, ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಕಾಡಾನೆಯ ದಾಳಿಗೆ ಒಬ್ಬ ವ್ಯಕ್ತಿ ಮಾತ್ರ ಬಲಿಯಾಗಿದ್ದಾನೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಅಡಿಯಲ್ಲಿ ಈ ಬೃಹತ್ ಜೀವಿಗಳು ಸಂರಕ್ಷಣೆಗೆ ಒಳಪಟ್ಟಿವೆ. ಇವುಗಳನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ವಾಲ್ಪರೈ ಪ್ರದೇಶಕ್ಕೂ ಕರ್ನಾಟಕದ ಹಾಸನ ಅರಣ್ಯ ವಿಭಾಗದ ಆನೆಗಳ ಆವಾಸಸ್ಥಾನಕ್ಕೂ ಕೆಲವು ಹೋಲಿಕೆಗಳಿವೆ. ವಾಲ್ಪರೈ ಪ್ರದೇಶದ ಜನಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದ್ದರೆ, ಹಾಸನ ವಿಭಾಗದಲ್ಲಿ ಅತಿಹೆಚ್ಚು ಸಂಘರ್ಷ ಸಂಭವಿಸುವ ಪ್ರದೇಶದಲ್ಲೂ ಸುಮಾರು ಇಷ್ಟೇ ಜನಸಂಖ್ಯೆಯಿದೆ. 2002ರಿಂದ 2006ರವರೆಗೆ ಹಾಸನ ವಿಭಾಗದಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿ, ಹಲವು ವಿಷಯಗಳನ್ನು ಕಂಡುಕೊಂಡಿದೆ. 2014ರಲ್ಲಿ ಈ ವಿಭಾಗದಲ್ಲಿ ಒಟ್ಟು ಇಪ್ಪತ್ತೆರಡು ಕಾಡಾನೆಗಳನ್ನು ಸೆರೆಹಿಡಿಯಲಾಗಿತ್ತು. ಅವುಗಳಲ್ಲಿ ಹದಿನೇಳನ್ನು ಸಾಕಾನೆಗಳನ್ನಾಗಿ ಪರಿವರ್ತಿಸಲಾಯಿತು. ಇನ್ನುಳಿದ ಐದು ಆನೆಗಳನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಬಿಡಲಾಯಿತು.
ಅರಣ್ಯ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಈ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಮಾನವ- ಕಾಡಾನೆ ಸಂಘರ್ಷ ಇಳಿಮುಖವಾಗಬೇಕಿತ್ತು. ಆದರೆ, ಕೊಡಗು, ಬಿಸಿಲೆ, ಮೂಡಿಗೆರೆ ಭಾಗದ ಆನೆಗಳು ಹಾಸನ ವಿಭಾಗಕ್ಕೆ ಬಂದು ಸೇರಿಕೊಂಡವು. ಒಂದೇ ಬಾರಿಗೆ ಅಷ್ಟು ಆನೆಗಳನ್ನು ಈ ವಿಭಾಗದಲ್ಲಿ ಸೆರೆಹಿಡಿದಿದ್ದರಿಂದ, ಅಲ್ಲೊಂದು ನಿರ್ವಾತ ಸೃಷ್ಟಿಯಾಯಿತು. ಇದು ಬೇರೆ ಪ್ರದೇಶದ ಆನೆಗಳನ್ನು ಈ ಭಾಗಕ್ಕೆ ಸೆಳೆಯಿತು. ಇದೇ ರೀತಿ 2017–19ರ ಅವಧಿಯಲ್ಲಿ 6 ಕಾಡಾನೆಗಳನ್ನು ಸೆರೆಹಿಡಿಯಲಾಯಿತು. ಆಶ್ಚರ್ಯದ ಸಂಗತಿಯೆಂದರೆ, ಇದೇ ಸಮಯದಲ್ಲಿ ಒಟ್ಟು 12 ಹೊಸ ಕಾಡಾನೆಗಳು ಈ ವಿಭಾಗಕ್ಕೆ ಬಂದು ನೆಲೆಸಿದವು. ಅಂದರೆ, ಆನೆಗಳನ್ನು ಹಿಡಿದು ಸ್ಥಳಾಂತರಿಸುವ ಮಾದರಿಯಿಂದಲೂ ಮಾನವ– ಆನೆ ಸಂಘರ್ಷ ಕಡಿಮೆಯಾಗಲಿಲ್ಲ. ಬದಲಿಗೆ, ಅದು ಇನ್ನಷ್ಟು ಹೆಚ್ಚಾಯಿತು.
ಕಾಫಿ, ಟೀ ತೋಟಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ತಂತಿಬೇಲಿ ನಿರ್ಮಿಸಿರುವುದರಿಂದ ತಿರುಗಾಡಲು ಆನೆಗಳು ಅನಿವಾರ್ಯವಾಗಿ ಮಾನವರು ಬಳಸುವ ರಸ್ತೆಗಳನ್ನೇ ಬಳಸುತ್ತಿವೆ. ಈ ಅಂಶವೂ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಬೆಳಗಿನ 6ರಿಂದ 10 ಗಂಟೆ ಹಾಗೂ ಸಂಜೆಯ 4ರಿಂದ 8 ಗಂಟೆಯ ಸಮಯದಲ್ಲೇ ಅತಿಹೆಚ್ಚು ಸಂಘರ್ಷಗಳು ಉಂಟಾಗಿವೆ. 2010ರಿಂದ 2022ರ ಅವಧಿಯಲ್ಲಿ ಹಾಸನ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 54 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಆನೆಗಳಿವೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ಬೆಳಗಿನ ಸಮಯದಲ್ಲಿ ಕೂಲಿಗಾಗಿಯೋ ಬೇರೆ ಯಾವುದೋ ಕೆಲಸದ ನಿಮಿತ್ತ ಹೋಗುವಾಗ ಮತ್ತು ಸಂಜೆ ತಿರುಗಿ ಬರುವ ಹೊತ್ತಿನಲ್ಲೇ ಆನೆಗಳು ಸಂಚರಿಸುತ್ತವೆ. ತನ್ನ ಪಥದಲ್ಲಿ ಮನುಷ್ಯನನ್ನು ಕಂಡ ಅವು ರೊಚ್ಚಿಗೇಳುತ್ತವೆ.
ಆನೆಪಥ ಛಿದ್ರಗೊಂಡಿರುವುದು, ಒತ್ತುವರಿಆಗಿರುವುದು, ಕಾಡುನಾಶದಂತಹ ಮಾನವನಿರ್ಮಿತ ಚಟುವಟಿಕೆಗಳು ಆನೆಗಳ ದಿಕ್ಕು ತಪ್ಪಿಸುತ್ತಿವೆ. ಇತ್ತ ಹೇಮಾವತಿ ಜಲಾಶಯಗುಂಟ ನಿರ್ಮಿಸಿದ ರೈಲುಕಂಬಿ ಬೇಲಿ, ಅತ್ತ ಚತುಷ್ಪಥ ರಸ್ತೆಯಾಗಿ ಮಾರ್ಪಡುತ್ತಿರುವ ಹಾಸನ– ಮಂಗಳೂರು ಹೆದ್ದಾರಿಯಿಂದ ಆನೆಗಳು ಅನಿವಾರ್ಯವಾಗಿ ಕಾಫಿ ತೋಟಗಳನ್ನೇ ತಮ್ಮ ಪಥವನ್ನಾಗಿ ಬಳಸುತ್ತಿವೆ. ಇದು ಬೆಳೆನಾಶ ಮತ್ತು ಮಾನವನೊಂದಿಗಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆನೆಗಳನ್ನು ನಿಯಂತ್ರಿಸುವ ರೈಲುಕಂಬಿ ಬ್ಯಾರಿಕೇಡ್ ತಂತ್ರವೂ ಸಂಘರ್ಷ ತಪ್ಪಿಸುವಲ್ಲಿ ವಿಫಲವಾಗಿದೆ.
ಹಾಗಾದರೆ, ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲವೇ? ಹಾಸನ, ಸಕಲೇಶಪುರ ಭಾಗಗಳಲ್ಲಿ ಆನೆಗಳ ಜೊತೆಗಿನ ಸಂಘರ್ಷ ಹೆಚ್ಚುತ್ತಿರುವುದರಿಂದ ಅನೇಕ ಕಾಫಿ ತೋಟಗಳ ಮಾಲೀಕರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇಂತಹ ಸಾವಿರಾರು ಎಕರೆ ಕಾಫಿ ತೋಟಗಳನ್ನು ಸರ್ಕಾರವೇ ಖರೀದಿಸಿ, ಆ ಪ್ರದೇಶಗಳನ್ನು ಆನೆಗಳಿಗಾಗಿಯೇ ಮೀಸಲಿಡಬಹುದು. ರಕ್ಷಿತಾರಣ್ಯವೆಂಬ ಹೆಸರಿದ್ದರೂ ಅರಣ್ಯದ ಸ್ವರೂಪವನ್ನು ಕಳೆದುಕೊಂಡ, ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳನ್ನು ಆನೆಗಳ ಸ್ವಚ್ಛಂದ ಓಡಾಟ, ಅವು ಆಹಾರ ಹುಡುಕಿಕೊಳ್ಳಲು ಮತ್ತು ಹಗಲಿನಲ್ಲಿ ತಂಗಲು ಅನುಕೂಲವಾಗುವಂತೆ ನೈಸರ್ಗಿಕ ಹಸಿರು ಕವಚವನ್ನು ಹೆಚ್ಚಿಸಬಹುದು. ಅಭಯಾರಣ್ಯಗಳ ಗಡಿಯಿಂದ ಹೊರಗೆ ಆವಾಸಸ್ಥಾನಗಳನ್ನು ಗುರುತಿಸಿಕೊಂಡು ವಾಸಿಸುತ್ತಿರುವ ಆನೆಗಳು ತಿರುಗಾಡುವ ಪಥವನ್ನು ನಿಖರವಾಗಿ ಗುರುತಿಸಿ, ಆ ಭಾಗದ ಜನರಿಗೆ ಅವುಗಳ ಚಲನವಲನಗಳನ್ನು ಮುಂಚಿತವಾಗಿಯೇ ಮೊಬೈಲ್ ಫೋನ್ ಮೂಲಕ ನೀಡಿ ಎಚ್ಚರಿಸುವ ಕೆಲಸ ಮಾಡಲು ಅವಕಾಶ ಇದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಆನೆಗಳ ಸಂಚಾರವನ್ನು ಹಾಗೂ ಅವು ಚಲಿಸಬಹುದಾದ ಸಂಭಾವ್ಯ ಗಮ್ಯದ ವಿವರಗಳನ್ನು ಆ ಪ್ರದೇಶಗಳ ಜನರಿಗೆ ತಿಳಿಯಪಡಿಸುವುದು ಉತ್ತಮ.
140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅತಿಹೆಚ್ಚು ಜೀವಿವೈವಿಧ್ಯಗಳಿರುವ ಅಪೂರ್ವ ದೇಶವಾಗಿದೆ. 1975ರಿಂದ ಈಚೆಗೆ ಪಶ್ಚಿಮಘಟ್ಟಗಳ ಶೇ 40ರಷ್ಟು ಪ್ರದೇಶ ಮಾನವ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಅಂಕಿಅಂಶ ಹೇಳುತ್ತದೆ. ಆದರೂ ಆನೆಗಳಂತಹ ಬೃಹತ್ ಜೀವಿಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುವುದನ್ನು ರೂಢಿಸಿಕೊಂಡಿವೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಹಬಾಳ್ವೆ ಸಾಧ್ಯ ಎಂಬುದು ಅನೇಕ ಬಾರಿ ಸಾಬೀತಾಗಿರುವ ವಿಚಾರ. ವೈವಿಧ್ಯಮಯವಾದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾನವ ಮತ್ತು ಆನೆಗಳು ಹೊಂದಿಕೊಂಡು ಬದುಕುವುದು ಅನಿವಾರ್ಯ.
ಅಭಯಾರಣ್ಯವನ್ನು ಹೊರತುಪಡಿಸಿ, ಎಲ್ಲೆಲ್ಲಿ ಆನೆಗಳ ಆವಾಸಸ್ಥಾನವಿದೆಯೋ ಎಲ್ಲೆಲ್ಲಿ ಆನೆಪಥ ಹಾದುಹೋಗು ತ್ತದೆಯೋ ಆ ಭಾಗಗಳಲ್ಲಿ ವಾಸಿಸುವವರಿಗೆ ಆನೆಗಳ ಮನೋಧರ್ಮವನ್ನು ಮೊದಲು ಅರ್ಥ ಮಾಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸಂಘರ್ಷಕ್ಕೆ ಕಾರಣವಾಗುವ ಅಂಶಗಳನ್ನು ನಿರ್ದಿಷ್ಟವಾಗಿ ವಿಂಗಡಿಸಿ, ಒಂದೊಂದು ಅಂಶಕ್ಕೂ ಸೂಕ್ತವಾದ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು.
ವಾಲ್ಪರೈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಈಗ ಆನೆಗಳನ್ನು ಕಂಡರೆ ರೇಜಿಗೆ ಎನಿಸುವುದಿಲ್ಲ. ಆನೆಗಳನ್ನು ಅಲ್ಲಿ ಆರಾಧನಾ ಭಾವದಿಂದ ನೋಡಲಾಗುತ್ತದೆ. ಹಿಂಡಿನ ಅಥವಾ ಒಂಟಿ ಸಲಗಗಳ ಚಲನವಲನದ ಮೇಲೆ ತೀವ್ರ ನಿಗಾ ಇಡುವ ವ್ಯವಸ್ಥೆಯನ್ನು ಅಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಆನೆ ಹಿಂಡು ಬೀಡುಬಿಟ್ಟಿರುವ ಹತ್ತಿರದ ಹಳ್ಳಿಗರಿಗೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವುಗಳ ಇರವನ್ನು ಮೊದಲೇ ತಿಳಿಸಲಾಗುತ್ತದೆ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವವರಿಗೆ ಈ ಅಂಶ ವರದಾನವಾಗಿದೆ. ಆದ್ದರಿಂದ, ಅಲ್ಲಿ ಸಂಘರ್ಷದ ಪ್ರಮಾಣ ಶೂನ್ಯದ ಸಮೀಪ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.