ADVERTISEMENT

ವಿಶ್ಲೇಷಣೆ: ಭೂತಾಯಿ ಮೇಲೆ ಪೀಳಿಗೆಯ ಹಕ್ಕುಸ್ವಾಮ್ಯ

ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗದಂತೆ ಇರಬೇಕು ಇಂದಿನ ನಮ್ಮ ವರ್ತನೆ  

ಪ್ರಜಾವಾಣಿ ವಿಶೇಷ
Published 25 ಸೆಪ್ಟೆಂಬರ್ 2024, 19:40 IST
Last Updated 25 ಸೆಪ್ಟೆಂಬರ್ 2024, 19:40 IST
   

ಪರಿಸರಕ್ಕೆ ಸಂಬಂಧಿಸಿದಂತೆ ಇದೇ 22ರಿಂದ ಮೂರು ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ನಡೆದ ಜಾಗತಿಕ ಸಮಾವೇಶ ಮಹತ್ವಪೂರ್ಣವಾದದ್ದು. ನಮ್ಮ ಪರಿಸರವನ್ನು ಅದರ ಮೂಲಸ್ವರೂಪದಲ್ಲಿ ಮುಂದಿನ ಪೀಳಿಗೆಗೆ ದಾಟಿಸುವ, ಪರಿಸರಾತ್ಮಕ ಚಿಂತನೆಗಳನ್ನು ಗಮನದಲ್ಲಿಟ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸಂವಾದ ಮತ್ತು ಚರ್ಚೆಗಳು ನಡೆದು, ಗೊತ್ತುವಳಿಗಳು ಅಂಗೀಕಾರವಾದಾಗ ಮಾತ್ರ ಇಂತಹ ಸಮಾವೇಶಗಳು ಅರ್ಥಪೂರ್ಣ ಎನಿಸುತ್ತವೆ. ಈ ಬಾರಿಯ ಸಮಾವೇಶದಲ್ಲಿ ನಾಲ್ಕು ಪ್ರಮುಖ ಅಂಶಗಳು ಮುನ್ನೆಲೆಗೆ ಬಂದವು. ಅವುಗಳೆಂದರೆ: ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಮಾಲಿನ್ಯ ಮತ್ತು ಅತಿರೇಕದ ಮಟ್ಟ ತಲುಪಿರುವ ಆರ್ಥಿಕ ಅಸಮಾನತೆ.

ಇವಿಷ್ಟೂ ಅಂಶಗಳು ಜಾಗತಿಕವಾಗಿ ಎಲ್ಲ ದೇಶಗಳ ಜನರನ್ನೂ ಕಾಡಿವೆ, ಕಾಡುತ್ತಲೇ ಇವೆ. ಇವುಗಳನ್ನು ಹತೋಟಿಗೆ ತಂದು ಜನರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕಾದ ತುರ್ತು ಈಗ ಹಿಂದೆಂದಿಗಿಂತಲೂ ಅಧಿಕವಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಭಾರತದಲ್ಲೇ ಕೆಲವರು ಶತಕೋಟ್ಯಧಿಪತಿಗಳಾದರು. ಕೋಟ್ಯಂತರ ಜನ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾಗ, ಕೆಲವರಿಗೆ ಅದು ಲಾಭಕ್ಕೆ ದಾರಿ ಮಾಡಿಕೊಡುವ ಮೆಟ್ಟಿಲಾದದ್ದು ವಿಷಾದದ ಸಂಗತಿಯಲ್ಲವೇ? ಇದು ಭಾರತಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ವಿಶ್ವದ 180 ರಾಷ್ಟ್ರಗಳ ಪೈಕಿ 117ರಲ್ಲಿ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.

ಮುಂದಿನ ಪೀಳಿಗೆಯ ಭವಿಷ್ಯ, ಅವರಿಗೆ ಇರುವ ಬದುಕುವ ಹಕ್ಕು ಮತ್ತು ಪರಿಸರಾತ್ಮಕವಾಗಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ವಿವಿಧ ದೇಶಗಳ ವಿಜ್ಞಾನಿಗಳು ಮತ್ತು ನಾಯಕರು ನ್ಯೂಯಾರ್ಕ್‌ ಸಮಾವೇಶದಲ್ಲಿ ಬೆಳಕು ಚೆಲ್ಲಿದರು. ಗಾಳಿ, ನೀರು, ಬೆಟ್ಟಗುಡ್ಡ, ಜೈವಿಕ ವೈವಿಧ್ಯ ಇವೆಲ್ಲವೂ ನಮಗೆ ಭೂಮಿತಾಯಿ ನೀಡಿರುವ ಅಪೂರ್ವವಾದ ಕೊಡುಗೆಗಳು. ಆದರೆ ಈ ನೈಸರ್ಗಿಕ ಕೊಡುಗೆಗಳು ನಿರಂತರವಾಗಿ, ನಿರ್ದಯವಾಗಿ ಹಾಳುಗೆಡವಲ್ಪಟ್ಟಿವೆ. ದುರಸ್ತಿ ಮಾಡಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ನಾವು ವಿಕೃತಿಯನ್ನು ಮೆರೆದಿದ್ದೇವೆ.

ADVERTISEMENT

ಹದಿನಾಲ್ಕನೇ ಶತಮಾನದ ಕ್ರಿಸ್ಟೊಫರ್ ಕೊಲಂಬಸ್‌ನ ಕಾಲದಿಂದಲೇ ಇಂತಹ ಪ್ರವೃತ್ತಿ ಜಾಗತಿಕವಾಗಿ ಜನಸಮೂಹದ ಮನದಲ್ಲಿ ಬೇರೂರಿದೆ. ‘ನಾವು ಚೆನ್ನಾಗಿ ಬದುಕಿದರೆ ಸಾಕು. ನಾಳೆಯ, ಭವಿಷ್ಯದ ಚಿಂತೆ ನಮಗೇಕೆ? ಪ್ರಕೃತಿಯಲ್ಲಿ ಸಿಗುವ ಎಲ್ಲವನ್ನೂ ದೋಚಿ ಸುಖಪಡೋಣ’ ಎಂಬ ತತ್ವಕ್ಕೆ ಬಹುಪಾಲು ಮಂದಿ ಅಂಟಿಕೊಂಡಿದ್ದಾರೆ. ಅದರಲ್ಲೂ ಹಿಂದಿನ ಮೂರ್ನಾಲ್ಕು ದಶಕಗಳಲ್ಲಿ ಆಗಿರುವ ವಿಧ್ವಂಸಕ ಕೃತ್ಯಗಳಂತೂ ಅಕ್ಷಮ್ಯ.

ಪರಿಸರಹಾನಿ ಮತ್ತು ತತ್ಪರಿಣಾಮವಾಗಿ ಆಗಿರುವ ಪಾರಿಸರಿಕ ಬದಲಾವಣೆಗಳಿಗೆ ಇಂದಿನ ಪೀಳಿಗೆಯವರೇ ಪ್ರಮುಖ ಹೊಣೆಗಾರರು. ಪರಿಸರದ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಆಗುವ ಅನಾಹುತಗಳನ್ನು ಯಾವ ವಿಜ್ಞಾನದಿಂದಲೂ ತಡೆಯಲಾಗದು ಎಂಬ ಸತ್ಯ ನಮ್ಮ ಅರಿವಿಗೆ ಇನ್ನೂ ಬಂದಿಲ್ಲ. ಈ ಭೂಮಿಯಲ್ಲಿ ಉಸಿರಾಡಲು ಯೋಗ್ಯವಾದ ಪ್ರಾಣವಾಯು ಮತ್ತು ಬದುಕಲು ಸಹನೀಯವೆನಿಸುವ ವಾತಾವರಣವನ್ನು ಉಳಿಸಿಕೊಳ್ಳುವುದು ನಮ್ಮ ಹೊಣೆ ಎಂಬುದು ನಾವೆಲ್ಲರೂ ಕಡ್ಡಾಯವಾಗಿ ಅರಿತುಕೊಳ್ಳಬೇಕಾದ ಸಂಗತಿ. ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ನಾವು ಇದಕ್ಕೆ ಬದ್ಧರಾಗಿರಬೇಕು.

ಚೆನ್ನೈ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಶ್ರೀಮತಿ ಅವರು ಒಂದು ಐತಿಹಾಸಿಕ ತೀರ್ಪನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಭೂಮಿತಾಯಿ ಮತ್ತು ಆಕೆಯ ಪ್ರಮುಖ ಘಟಕಗಳನ್ನು ನಮ್ಮ ಸಂವಿಧಾನದ 21ನೇ ವಿಧಿಯ ವ್ಯಾಪ್ತಿಗೆ ತರಬೇಕು. ಭೂಮಿತಾಯಿ ಕೂಡ ಒಂದು ಜೀವಂತ ಘಟಕ, ಆಕೆಗೂ ಬದುಕುವ ಹಕ್ಕಿದೆ ಎಂದು ಅವರು ಹೇಳಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಗಳು ಮಾಲಿನ್ಯ ತಡೆಯುವಲ್ಲಿ ವಿಫಲವಾಗಿರುವ, ಕುಡಿಯುವ ನೀರಿಗೆ ವಿಷಕಾರಕಗಳು ಸೇರಿಕೊಂಡಾಗ ಆದ ಅನಾಹುತಗಳನ್ನು ತಡೆಯುವಲ್ಲಿ ಸಾಂಸ್ಥಿಕ ವೈಫಲ್ಯ ಕಂಡುಬಂದಿರುವ ಸಂದರ್ಭದಲ್ಲಿ ಇಂತಹದ್ದೊಂದು ತೀರ್ಪು ಹೊರಬಂದಿದೆ.

ಮುಂದಿನ ಪೀಳಿಗೆಯವರ ಬದುಕು ಸಹನೀಯವಾಗಿ ಇರಬೇಕಾದಲ್ಲಿ, ಇಂದಿನ ಪೀಳಿಗೆಯವರ ನಡವಳಿಕೆ ಹೇಗಿರಬೇಕು ಎಂಬುದರ ಬಗೆಗಿನ ನಮ್ಮ ನಿಲುವುಗಳು ಅಪಕ್ವವಾಗಿವೆ ಮತ್ತು ಅಸ್ಪಷ್ಟವಾಗಿವೆ. ಜಾಗತಿಕವಾಗಿ ಎಲ್ಲೆಡೆ ಆಗಿರುವ ಪ್ರಾಕೃತಿಕ ದುರಂತಗಳು ಮಾನವನಿರ್ಮಿತ ಕೃತ್ಯಗಳೇ ಆಗಿವೆ. ಕೆಲವೇ ಮಂದಿ ಇದರ ದುರ್ಲಾಭ ಪಡೆದುಕೊಂಡು ಸ್ವಂತ ಜೋಳಿಗೆ ತುಂಬಿಸಿಕೊಳ್ಳುತ್ತಿರುವುದು ಎಲ್ಲೆಡೆ ಕಾಣುತ್ತದೆ. ನಮ್ಮ ಸರ್ಕಾರಗಳು, ಕಾರ್ಪೊರೇಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಇಂದಿನ ಲಾಭವೊಂದನ್ನೇ ಗುರಿಯಾಗಿಸಿ ಕೆಲಸ ಮಾಡುತ್ತಿವೆಯೇ ವಿನಾ ಭವಿಷ್ಯದ ಬಗೆಗಿನ ಚಿಂತನೆ ಅವಕ್ಕೆ ಇಲ್ಲವೇ ಇಲ್ಲ. ಉದಾಹರಣೆಗೆ, ನಮ್ಮ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ ಪ್ರದೇಶದಲ್ಲಿ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಿ ಮನರಂಜನಾ ಪಾರ್ಕ್‌ ನಿರ್ಮಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಜನರ ತೆರಿಗೆ ದುಡ್ಡನ್ನು ಈ ರೀತಿಯ ಅಪಕ್ವವಾದ ಉದ್ದೇಶಕ್ಕೆ ವಿನಿಯೋಗಿಸುವುದು, ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ಹೇಳಿಕೊಳ್ಳುವುದು ಮೂರ್ಖತನದ ಪರಮಾವಧಿ. ನಾಳೆ ಏನಾದರೂ ಅನಾಹುತವಾದರೆ ಸಂಭವಿಸಬಹುದಾದ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯ ಅಂದಾಜನ್ನು ಯಾರೂ ಮಾಡಿದಂತಿಲ್ಲ.

ಇಂದಿನ ಪೀಳಿಗೆಯ ಜನರ ಬೇಕುಗಳನ್ನು ಪೂರೈಸುವುದು, ಅವರ ಮೋಜು–ಮಸ್ತಿಗೆ ಅವಕಾಶ ಮಾಡಿಕೊಡುವುದು, ತನ್ಮೂಲಕ ಕೋಟಿಗಟ್ಟಲೆ ಹಣ ಸುರಿದು ಅದರಲ್ಲಿ ಬಹುಪಾಲು ಮೊತ್ತವನ್ನು ಕಿಕ್‍ಬ್ಯಾಕ್ ರೂಪದಲ್ಲಿ ತಮ್ಮ ಜೋಳಿಗೆಗೆ ತುಂಬಿಸಿಕೊಂಡು ಮೆರೆದಾಡುವುದು ಅಧಿಕಾರಸ್ಥರ ಹುನ್ನಾರವೇ ವಿನಾ ಅವರ್‍ಯಾರಿಗೂ ಪರಿಸರ- ಪ್ರಕೃತಿಯ ಬಗ್ಗೆ ಎಳ್ಳಷ್ಟು ಕಾಳಜಿಯೂ ಇಲ್ಲ.

ನಮ್ಮ ನೀತಿ ಆಯೋಗವಾಗಲೀ ಸರ್ಕಾರದ ಉನ್ನತ ಸ್ತರದಲ್ಲಿರುವ ನೀತಿ ನಿರೂಪಕರಾಗಲೀ ಅತಿ ಸೂಕ್ಷ್ಮವಾದ ಪರಿಸರ ಪ್ರದೇಶಗಳ ಬಗ್ಗೆ ಕಿಂಚಿತ್ತೂ ಚಿಂತನೆ ಮಾಡುತ್ತಿಲ್ಲ. ಹಿಮಾಲಯ, ಲಕ್ಷದ್ವೀಪ, ಪಶ್ಚಿಮ- ಪೂರ್ವಘಟ್ಟವು ನೈಸರ್ಗಿಕವಾಗಿ ಅತಿಸೂಕ್ಷ್ಮ ಪ್ರದೇಶಗಳು. ಇಂತಹ ಜಾಗಗಳಲ್ಲಿ ರಸ್ತೆಗಳು, ಹೆದ್ದಾರಿಗಳು, ಸುರಂಗಮಾರ್ಗಗಳು ನಿರ್ಮಾಣವಾಗುತ್ತಿವೆ. ಪಶ್ಚಿಮಘಟ್ಟಗಳಲ್ಲಿ ವಿವಿಧ ಬಗೆಯ ಗಣಿಗಾರಿಕೆಗಳಿಗೆ ಅವಕಾಶ ಕೊಡಲಾಗಿದೆ. ಮಾರ್ಬಲ್, ಗ್ರಾನೈಟ್‌ಗಳಿಗಾಗಿ ಭೂಮಿತಾಯಿಯ ಒಡಲು ಬಗೆಯಲಾಗುತ್ತಿದೆ. ಕಟ್ಟಡ ನಿರ್ಮಾಣಗಳಿಗಾಗಿ ಎಂ. ಸ್ಯಾಂಡ್ ತಯಾರಿಸಲು ನಮ್ಮ ಕಲ್ಲುಬೆಟ್ಟಗಳನ್ನು ಪುಡಿ ಮಾಡಲಾಗುತ್ತಿದೆ.

ಪರ್ವತಗಳು ಹಾಗೂ ಬೆಟ್ಟಗುಡ್ಡಗಳು ಭೂಮಿಯ ಸ್ಥಿರತೆ, ಭದ್ರತೆಯನ್ನು ದೃಢಪಡಿಸುವ ಪ್ರಾಕೃತಿಕ ನಿರ್ಮಿತಿಗಳು. ಆದರೆ ಈಗ ಆಗುತ್ತಿರುವುದೇನು? ಎಲ್ಲೆಡೆ ವಿಧ್ವಂಸಕತೆ, ಭೂಮಾತೆಯನ್ನು ತುಂಡರಿಸಿ ಗಾಸಿ ಮಾಡುವ ಕೆಲಸ ನಡೆಯುತ್ತಿದೆ. ವಿಶ್ವನಾಯಕರೆಂದು ಬಿಂಬಿಸಿಕೊಳ್ಳುತ್ತಿರುವ ನಮ್ಮ ನಾಯಕರು ಇಂತಹ ವಿಚಾರಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು, ದನಿಯೆತ್ತಬೇಕು, ವಿಧ್ವಂಸಕ ಕೃತ್ಯಗಳನ್ನು ದಮನ ಮಾಡಬೇಕು. ಆದರೆ ಅಂತಹ ಕೆಲಸ ಆಗುತ್ತಿಲ್ಲ.

ನಮ್ಮ ಪುರಾತನ ಗ್ರಂಥಗಳಾದ ಋಗ್ವೇದ ಮತ್ತು ಉಪನಿಷತ್ತುಗಳಲ್ಲಿ, ಭೂಮಿತಾಯಿಯ ಆರೋಗ್ಯವನ್ನು ಕಾಪಾಡುವ ದಿಸೆಯಲ್ಲಿ ನಾವೇನು ಮಾಡಬೇಕು ಎಂಬ ತತ್ವಗಳು ಪ್ರಧಾನವಾಗಿ ಉಲ್ಲೇಖವಾಗಿವೆ. ಎಲ್ಲ ಜೀವಜೀವಿಗಳ ಉಗಮವಾದಾಗಿನಿಂದಲೂ ಪರಸ್ಪರ ಅವಲಂಬನೆ ಮತ್ತು ನೆಮ್ಮದಿಯ ಬದುಕಿಗೆ ಬೇಕಾದ ಸರಳಸೂತ್ರಗಳ ಅನುಸರಣೆ ಎಲ್ಲೆಡೆ ಇತ್ತು. ಯಾರೂ ಪ್ರಕೃತಿಹನನ ಮಾಡುವಂತಹ ದುಷ್ಕೃತ್ಯಗಳನ್ನು ಮಾಡುತ್ತಿರಲಿಲ್ಲ. ಅಂತಹದ್ದೊಂದು ಆಧ್ಯಾತ್ಮಿಕ ಚಿಂತನೆ ಜನರಲ್ಲಿತ್ತು.

ಪೀಳಿಗೆಗಳ ನಡುವೆ ಪಾರಿಸರಿಕ ಐಕಮತ್ಯವನ್ನು ಸಾಧಿಸುವ ದಿಸೆಯಲ್ಲಿ ಕೊಲಂಬಿಯಾದಲ್ಲಿ ತೆಗೆದುಕೊಳ್ಳಲಾದ ಐತಿಹಾಸಿಕ ನಿರ್ಣಯ ನಮ್ಮ ಮುಂದಿದೆ. ಎಲ್ಲ ಸರ್ಕಾರಗಳು, ನ್ಯಾಯಾಲಯಗಳು ಭೂಮಿತಾಯಿಯನ್ನು ರಕ್ಷಿಸುವ ದಿಸೆಯಲ್ಲಿ ಕೆಲಸ ಮಾಡುವುದಕ್ಕೆ ಕಟಿಬದ್ಧವಾದಾಗ ಮಾತ್ರ ಬದಲಾವಣೆ ಸಾಧ್ಯ. ನಮ್ಮ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಇಂತಹ ತತ್ವ ಮತ್ತು ಸೂತ್ರಗಳನ್ನು ಒಪ್ಪಿಕೊಂಡಿದೆ. ಪರಿಸರದ ವಿಚಾರಕ್ಕೆ ಬಂದಾಗ ಕಾನೂನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಹಿಂದೆಬಿದ್ದಿಲ್ಲ.

ಪರಿಸರದ ಆರೋಗ್ಯ ಎಲ್ಲಕ್ಕಿಂತ ಪರಮೋಚ್ಚವಾದ ಸಂಗತಿ. ಮುಂದಿನ ಪೀಳಿಗೆಯ ಭವಿಷ್ಯತ್ತು ಕರಾಳವಾಗದಂತೆ ಇಂದು ನಾವು ನಮ್ಮ ವರ್ತನೆಗಳನ್ನು ರೂಪಿಸಿಕೊಳ್ಳಬೇಕು. ಎಲ್ಲ ಬಗೆಯ ಮಾಲಿನ್ಯಗಳಿಂದ ಭೂಮಿ ಮತ್ತು ಪರಿಸರದ ಮೇಲೆ ದೀರ್ಘಾವಧಿಯಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಅವಲೋಕನ ಮಾಡಬೇಕಿರುವುದು, ಸುಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾಗಿರುವುದು ಬಹು ಅಗತ್ಯ. ಮಾನವ ಸಂಬಂಧಗಳಲ್ಲಿರುವ ಸ್ವಾರ್ಥಪರ ಮನೋಭಾವವನ್ನು ತೊಡೆಯಬೇಕು, ಭೂಮಿತಾಯಿಯ ಗರ್ಭದಲ್ಲಿರುವ ಸಮಗ್ರ ಆಸ್ತಿ ನಮಗೆ ಮಾತ್ರವಲ್ಲ, ಮುಂದಿನ ಪೀಳಿಗೆಗಳಿಗೂ ಒಟ್ಟು ಸಮಷ್ಟಿಗೂ ಸೇರಿದ್ದು ಎಂಬ ಆಧ್ಯಾತ್ಮಿಕ ಚಿಂತನೆ ನಮ್ಮಲ್ಲಿ ಬೇರೂರಬೇಕು. ಆಗ ಮಾತ್ರ ಇವೆಲ್ಲವೂ ಸಾಧ್ಯ. ಇಂದು ಸರ್ಕಾರದ ಮತ್ತು ಖಾಸಗಿ ಮಾಲೀಕತ್ವದ ಎಲ್ಲ ಸಂಘಟನೆಗಳು ಒಂದಾಗಿ, ಭೂಮಿಯ ಸುಸ್ಥಿರತೆ ಹಾಗೂ ಆರೋಗ್ಯವನ್ನು ಕಾಪಾಡುವ ದಿಸೆಯಲ್ಲಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಳ್ಳಬೇಕು.

ಈ ಭೂಮಿ ನಮ್ಮೆಲ್ಲರ ಆಸ್ತಿ. ನಮ್ಮ ಮುಂದಿನ ಪೀಳಿಗೆಗಳಿಗೂ ಅದರ ಮೇಲೆ ಹಕ್ಕುಸ್ವಾಮ್ಯವಿದೆ. ಭೂಮಿತಾಯಿಯ ಒಡಲನ್ನು ಬಗೆದು ಖಾಲಿ ಮಾಡಿ, ಅವಳನ್ನು ಇಂದೇ ದಿವಾಳಿ ಮಾಡುವ ಕೃತ್ಯಕ್ಕೆ ಕೈ ಹಾಕುವುದು ಅಕ್ಷಮ್ಯ ಅಪರಾಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.