ADVERTISEMENT

ವಿಶ್ಲೇಷಣೆ: ತಲೆಗಿಳಿಯಬೇಕಿದೆ ನೆಲಮೂಲದ ಜ್ಞಾನ

ನೆಲಮೂಲದ ಅಗಾಧ ಜ್ಞಾನ, ಔಷಧ ಕ್ರಮಗಳನ್ನು ಸಂರಕ್ಷಿಸುವಲ್ಲಿ ಗಂಭೀರ ಪ್ರಯತ್ನಗಳು ನಡೆಯಬೇಕಿದೆ

ಗುರುರಾಜ್ ಎಸ್.ದಾವಣಗೆರೆ
Published 5 ಜನವರಿ 2022, 19:31 IST
Last Updated 5 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರ್ಯ ಆಗತಾನೆ ಕ್ಷಿತಿಜದಿಂದ ಮೇಲೇರುತ್ತಿದ್ದ. ಭಾನುವಾರದ ಪ್ರಾರ್ಥನೆಗೆ ಚರ್ಚ್‌ಗೆ ತೆರಳುವ ಲಗುಬಗೆಯಲ್ಲಿದ್ದ ನಾಗಾಲ್ಯಾಂಡ್‍ನ ಜುನೆಬೋಟೊ ಜಿಲ್ಲೆಯ ಶಿಯೆಪು ಗ್ರಾಮದ ಜನ ಕೈಯಲ್ಲಿ ಕೊಡೆ ಹಿಡಿದು ನಡೆಯುತ್ತಿದ್ದುದು ಹತ್ತಿರದ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಅಚ್ಚರಿ ಮೂಡಿಸಿತ್ತು.

‘ಹಿತವಾದ ಬಿಸಿಲಿದೆ, ವಾತಾವರಣ ಆಹ್ಲಾದಕರವಾಗಿದೆ, ಇವರೇಕೆ ಛತ್ರಿ ಹಿಡಿದು ಹೊರಟಿದ್ದಾರೆ?’ ಎಂಬ ಪ್ರಶ್ನೆಗೆ ಉತ್ತರ ಬಯಸಿದ ವಿದ್ಯಾರ್ಥಿಯೊಬ್ಬ ಹಳ್ಳಿಯ ರೈತ ಅಶಿಲಿ ಅವೋಮಿಯನ್ನು ಕೇಳುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತು. ‘ನನ್ನ ಕೊಡೆಯ ಕೆಳಗೆ ಬನ್ನಿ’ ಎಂದು ಕೊಡೆ ಚಾಚಿದ ಅಶಿಲಿ, ‘ನೀವೆಲ್ಲ ಟೀವಿ, ಪೇಪರ್, ರೇಡಿಯೊ ಮಾಹಿತಿ ಆಧರಿಸಿ ಪ್ರಕೃತಿಯಲ್ಲಿ ಏನೇನಾಗುತ್ತಿದೆ ಎಂದು ತಿಳಿದುಕೊಳ್ಳುತ್ತೀರಿ. ನಮಗೆ ಪರಿಸರವೇ ಸಿಗ್ನಲ್ ಕೊಡುತ್ತದೆ. ಇವತ್ತು ಮಳೆ ಬರುತ್ತದೆ ಎಂದು ನಮಗೆ ಬೆಳಗ್ಗೆಯೇ ಗೊತ್ತಾಗಿತ್ತು’ ಎಂದ.

ಅವನ ಮಾತಿನಿಂದ ಮತ್ತಷ್ಟು ಅಚ್ಚರಿಗೆ ಬಿದ್ದ ವಿದ್ಯಾರ್ಥಿ, ‘ಅದ್ಯಾವ ಸಿಗ್ನಲ್? ಎಲ್ಲಿಂದ ಬಂತು?’ ಎಂದು ಮೊಬೈಲ್ ಫೋನ್ ನೋಡತೊಡಗಿದ. ವಿದ್ಯಾರ್ಥಿಯ ಗಮನವನ್ನು ಹಲಸಿನ ಮರದ ಕಡೆಗೆ ಸೆಳೆದ ಅಶಿಲಿ, ‘ಅಲ್ಲಿ ನೋಡಿ, ಜೇನುಗೂಡು ಕಾಣ್ತಿದೆಯಾ ನಿಮಗೆ? ಸಾಮಾನ್ಯವಾಗಿ ಬೆಳಗಿನ ಹೊತ್ತು ಜೇನ್ನೊಣಗಳು ಮಕರಂದ ಹುಡುಕಿ ಗೂಡಿನಿಂದ ತೆರಳುತ್ತವೆ. ಇವತ್ತು ಅವು ಅಲ್ಲಿಂದ ಕದಲೇ ಇಲ್ಲ. ಮಳೆ ಬರೋ ಸೂಚನೆ ಇದ್ದರೆ ಮಾತ್ರ ಅವು ಹಾಗೆ ಮಾಡ್ತವೆ. ಅದನ್ನು ನಮ್ಮ ಹಿರಿಯರು ಮತ್ತು ನಾವು ಶತಮಾನಗಳಿಂದ ಗಮನಿಸ್ತಾ ಇದ್ದೇವೆ, ಅದೇ ಸಿಗ್ನಲ್ ನಮಗೆ ಸಿಕ್ಕಿದ್ದು. ಈಗ ಮಳೆ ಬರ್ತಾ ಇದೆಯಲ್ಲ, ಅದಕ್ಕೇ ಕೊಡೆ ಹಿಡಿದುಕೊಂಡು ಚರ್ಚ್‌ಗೆ ಹೋಗ್ತಾ ಇದ್ದೀನಿ, ನಾ ಬರ‍್ಲಾ?’ ಎಂದು ಉತ್ತರಕ್ಕೆ ಕಾಯದೆ ಹೊರಟೇಬಿಟ್ಟ.

ADVERTISEMENT

ಅರೆ, ಆರು ತಿಂಗಳಿನಿಂದ ಇಲ್ಲಿ ರಿಸರ್ಚ್ ಮಾಡ್ತಾ ಇದ್ದೀನಿ, ಗೊತ್ತೇ ಆಗಲಿಲ್ಲವಲ್ಲ, ಇವರಿಗೆ ಇನ್ನೇನೇನು ಗೊತ್ತಿರಬಹುದು ಎಂದು ಹಲುಬಿದ ವಿದ್ಯಾರ್ಥಿ, ಅಶಿಲಿಯ ನೆಲಮೂಲದ ಜ್ಞಾನದ ಬಗ್ಗೆ ಪ್ರೊಫೆಸರ್‌ಗೆ ಹೇಳಲೇಬೇಕೆಂದು ಸಂಶೋಧನಾ ಕೇಂದ್ರದ ಕಡೆ ನಡೆದ.

ಹೌದು, ನಾಗಾಲ್ಯಾಂಡ್‍ನ ‘ಸುಮಿನಾಗ’ ಎಂಬ ಬುಡಕಟ್ಟಿನ ಜನ ನಮ್ಮ ಹವಾಮಾನ ತಜ್ಞರಿಗಿಂತ ಹತ್ತು ಹೆಜ್ಜೆ ಮುಂದಿದ್ದಾರೆ. ಅಶಿಲಿ ಹೇಳಿದ್ದು ತಮ್ಮ ಬುಡಕಟ್ಟಿಗೆ ಗೊತ್ತಿರುವ ಆಗಾಧ ತಿಳಿವಳಿಕೆಯ ಒಂದಂಶವನ್ನಷ್ಟೇ. ಇಂತಹುದೇ ನೂರಾರು ನೈಸರ್ಗಿಕ ಕುರುಹುಗಳ ಬಗ್ಗೆ ತಿಳಿವಳಿಕೆ ಇರುವ ನೂರಾರು ಬುಡಕಟ್ಟುಗಳು ದೇಶದ ಮೂಲೆಮೂಲೆಯ ಕಾಡುಗಳಲ್ಲಿವೆ. ಆದರೆ ಅವರ ಜ್ಞಾನ, ಜೀವನಕ್ರಮ ಮತ್ತು ನಡವಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ನಾವು, ನಿಸರ್ಗಸಹಜ ವಿದ್ಯಮಾನಗಳ ಬಗ್ಗೆ ಅವೈಜ್ಞಾನಿಕ ವಿಶ್ಲೇಷಣೆ ನೀಡುತ್ತ ಕಾಲ ಕಳೆಯುತ್ತೇವೆ.

‘ಬಿದಿರು ಹೂ ಬಿಟ್ಟಾಗ ಬರ ಬರುತ್ತದೆ’ ಎಂಬುದೂ ಅದರಲ್ಲೊಂದು. ವಾಸ್ತವವಾಗಿ ಬಿದಿರು ಹೂವು ಬಿಡುವುದು 60 ವರ್ಷಗಳಿಗೊಮ್ಮೆ. ಆಗ ಬಿದಿರು ಸಾಯುತ್ತಿದೆ ಎಂದರ್ಥ. ದಕ್ಷಿಣ ಭಾರತದಲ್ಲಿ ಬಂಬೂಸ ಆರುಂಡಿನೇಸಿಯ ಮತ್ತು ಡೆಂಡ್ರೊಕೆಲಾಮಸ್ ಸ್ಟ್ರಿಕ್ಟಸ್ ಎಂಬ ಎರಡು ಬಿದಿರಿನ ತಳಿಗಳು ತಮ್ಮ ಜೀವಿತಾವಧಿಯ ಅರವತ್ತು ವರ್ಷ ಪೂರೈಸಿ ಹೂವು ಬಿಟ್ಟು ಅಕ್ಕಿಯನ್ನು ನೆಲಕ್ಕುದುರಿಸಿ ಸಾಯುತ್ತವೆ. ಅವನ್ನು ಭಕ್ಷಿಸಲು ಇಲಿಗಳ ದಂಡೇ ಹರಿದು ಬರುತ್ತದೆ. ಬಿದಿರಕ್ಕಿ ಹೆಚ್ಚಾದಂತೆ, ಅಕ್ಕಿ ತಿನ್ನಲು ಅಗಾಧ ಪ್ರಮಾಣದ ವಂಶ ವೃದ್ಧಿಸಿಕೊಳ್ಳುವ ಇಲಿ- ಹೆಗ್ಗಣಗಳು ಒಂದು ಕಾಳನ್ನೂ ಬಿಡದೆ ಭಕ್ಷಿಸುತ್ತವೆ. ಅಕ್ಕಿ ಖಾಲಿಯಾಗಿ ಬಿದಿರು ಒಣಗಿದ ಕಸಬರಿಗೆಯಂತಾಗುತ್ತದೆ. ಲಕ್ಷಾಂತರ ಇಲಿಗಳಿಗೆ ತಿನ್ನಲು ಆಹಾರ ಬೇಡವೇ? ಆಗ ಆಹಾರ ಸಿಗದ ಇಲಿಗಳು ಕಾಡಿನ ಬದಿಯ ಹೊಲಗಳಿಗೆ ನುಗ್ಗಿ ಬೆಳೆದು ನಿಂತ ಬೆಳೆಗೆ ಮುಗಿಬೀಳುತ್ತವೆ. ರೈತನ ಬೆಳೆ ಖಾಲಿಯಾಗಿ ಧಾನ್ಯದ ಇಳುವರಿ ಕಡಿಮೆಯಾಗಿ ನಾಡಿನಲ್ಲಿ ಆಹಾರ ಕ್ಷಾಮ ತಲೆದೋರುತ್ತದೆ. ಇದು ವೈಜ್ಞಾನಿಕ ಆಧಾರವಿರುವ ನೈಸರ್ಗಿಕ ವಿದ್ಯಮಾನ. ಇದನ್ನೇ ತಪ್ಪಾಗಿ ಅರ್ಥೈಸುವ ಬಹುಸಂಖ್ಯಾತರು ನಾಡಿನಾದ್ಯಂತ ಇದ್ದಾರೆ.

ರೈತರಿಗೆ, ಬುಡಕಟ್ಟು ಜನರಿಗೆ ಕ್ಲೈಮೇಟ್ ಸೈಂಟಿಸ್ಟ್‌ಗಳಿಗಿಂತ ಹೆಚ್ಚು ಜ್ಞಾನವಿದೆ ಎನ್ನುವ ಶಿಲ್ಲಾಂಗ್‍ನ ಮಾರ್ಟಿನ್ ಲೂಥರ್ ಕ್ರಿಶ್ಚಿಯನ್ ಯೂನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿಗಳು ಬುಡಕಟ್ಟು ಜನರನ್ನು ಮಾತನಾಡಿಸಿ, ಅವರೊಟ್ಟಿಗೆ ಕಾಡು ಮೇಡು ಅಲೆದು ಸುಮಾರು 79 ನೈಸರ್ಗಿಕ ಸೂಚಕಗಳನ್ನು ಪಟ್ಟಿ ಮಾಡಿರುವುದಾಗಿ ಹೇಳಿದ್ದಾರೆ.

ಫೈಲೋಸ್ಟಾಚಿಸ್ ಎಂಬ ಬಿದಿರಿನ ಸಸ್ಯವು ತಾಯಿ ಗಿಡಕ್ಕಿಂತ ಎತ್ತರ ಬೆಳೆದಾಗ ಮಾನ್ಸೂನ್ ಮಳೆ ಮಾರುತದಲ್ಲಿ ಹೆಚ್ಚಿನ ಮಳೆ ಬರುತ್ತದೆ, ಚಿಕ್ಕದಿದ್ದರೆ ಮಳೆ ಕುಂಠಿತವಾಗುತ್ತದೆ ಎಂಬುದು ಹಲವು ಸಲ ಋಜುವಾತಾಗಿದೆ ಎನ್ನುವ ಪಿಎಚ್‍.ಡಿ ವಿದ್ಯಾರ್ಥಿಯೊಬ್ಬ,
2020ರಲ್ಲಿ ನಾಗಾಲ್ಯಾಂಡ್‌ನಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸುವಾಗ ನೆಲದ ಬಿಲಗಳಿಂದ ಅಸಂಖ್ಯ ಇಲಿ- ಹೆಗ್ಗಣಗಳು ಹೊರಬಂದಿದ್ದವು ಮತ್ತು ನಾಯಿಗಳು ನಿರಂತರವಾಗಿ ಬೊಗಳಿದ್ದವು ಎಂದು ವರದಿ ದಾಖಲಿಸಿದ್ದಾರೆ. ಸ್ಥಳೀಯ ಹೊಂಡ- ನದಿಗಳಲ್ಲಿ ಸಿಗುವ ಕ್ಯಾಟ್‌ಫಿಶ್‌ಗಳ (ಸಿಲುರಿಫಾರ್ಮ್ಸ್‌) ಹೊಟ್ಟೆಯ ಚರ್ಮ ದಪ್ಪವಾಗಿ ಬೆಳೆದಿದ್ದರೆ ಆ ವರ್ಷ ಚಳಿ ಹೆಚ್ಚು, ದಟ್ಟ ಬಿಸಿಲಿನ ದಿನ ಹೂಲಾಕ್ ಗಿಬ್ಬನ್ (ಒಂದು ಬಗೆಯ ಮಂಗ) ಕರ್ಕಶವಾಗಿ ಕೂಗಿದ ಒಂದೆರಡು ಗಂಟೆಗಳಲ್ಲಿ ಭಾರೀ ಮಳೆ ಬರುತ್ತದೆ, ಕೊಳದ ಮೀನುಗಳು ನೀರಿನ ಮೇಲೆ ತೇಲಲು ಶುರು ಮಾಡಿದರೆ ಆ ದಿನ ಮಳೆ ಬರುತ್ತದೆ, ಅಡುಗೆ ಒಲೆ ಹಚ್ಚಿದಾಗ ಹೊಗೆ ನೇರವಾಗಿ ಮೇಲೆದ್ದರೆ ಆ ದಿನ ವಾತಾವರಣ ತಿಳಿಯಾಗಿರುತ್ತದೆ, ಕೆಂಪು ಇರುವೆಗಳು ತಮ್ಮ ಗೂಡನ್ನು ಮೇಲ್ಮುಖವಾಗಿ ತೆರೆದಿಟ್ಟರೆ ಇಡೀ ದಿನ ಬಿಸಿಲಿರುತ್ತದೆ, ಪೂರ್ವ ಏಷ್ಯಾ ಭಾಗಗಳಿಂದ ಕುಂಡೆಕುಸ್ಕ (Wag Tail) ಹಕ್ಕಿಗಳು ವಲಸೆ ಬಂದರೆ ದೀರ್ಘ ಚಳಿಗಾಲವಿರುತ್ತದೆ, ಹೀಗೆ ನಿಸರ್ಗದ ಹತ್ತು ಹಲವು ಸೂಚನೆಗಳನ್ನು ಗ್ರಹಿಸುವ ಬುಡಕಟ್ಟು ಜನ ಆಯಾ ಪರಿಸ್ಥಿತಿಗೆ ತಕ್ಕಂತೆ ಜೀವಿಸುವುದನ್ನು ಕಲಿತಿದ್ದಾರೆ.

ಆದರೆ ಈ ನೆಲಮೂಲದ ಜ್ಞಾನವನ್ನು ಒಂದೆಡೆ ಸುರಕ್ಷಿತವಾಗಿಡುವ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂಬುದು ಸಂರಕ್ಷಣಾ ತಜ್ಞರ ಅಭಿಪ್ರಾಯ. ಎಲ್ಲೆಲ್ಲಿ ಬುಡಕಟ್ಟುಗಳಿವೆಯೋ ಅಲ್ಲೆಲ್ಲ ಅಗಾಧ ಜ್ಞಾನವಿದೆ, ಔಷಧ ಕ್ರಮಗಳಿವೆ. ಇಪ್ಪತ್ತು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನತಾ ಜೀವವೈವಿಧ್ಯ ದಾಖಲಾತಿ ನಡೆದು, ಅದುವರೆಗೂ ಗೊತ್ತೇ ಇರದಿದ್ದ ಅಪರೂಪದ ಮಾಹಿತಿ ಸಿಕ್ಕಿತ್ತು. ಬೇಟೆಯಿಂದಾಗಿ ಗಿಬ್ಬನ್‍ಗಳ ಸಂಖ್ಯೆ ಕ್ಷೀಣಿಸುತ್ತಿದೆ, ಹಲವು ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಿ ಗೊತ್ತಿರುವ ಹಿರಿಯರು ವಯೋಸಹಜವಾಗಿ ಸಾವನ್ನಪ್ಪುತ್ತಿದ್ದಾರೆ. ಅವರ ಸಾಂಪ್ರದಾಯಿಕ ತಿಳಿವಳಿಕೆಯನ್ನು ದಾಖಲು ಮಾಡಲೇಬೇಕಿದೆ. ಈಗ ಬರುತ್ತಿರುವ ಅನಿಯಂತ್ರಿತ ಅಕಾಲಿಕ ಮಳೆ, ಮಿತಿಮೀರಿದ ಚಳಿ, ಬರ, ನೈಸರ್ಗಿಕ ವಿಕೋಪಗಳ ಮುನ್ಸೂಚನೆ ಅರಿಯಲು, ನೆಲಮೂಲದ ಜ್ಞಾನ ಹೊಂದಿರುವ ಸ್ಥಳೀಯರ ನೆರವು ಪಡೆಯಬೇಕು.

ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್‌ ಆ್ಯಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯವು ಪಾರಂಪರಿಕ ಜ್ಞಾನ, ಶಿಕ್ಷಣದಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಚಿಕಿತ್ಸೆ, ಪ್ರಾಮುಖ್ಯತೆಗಳ ಬಗ್ಗೆ ವಿಶೇಷ ಕೆಲಸ ಮಾಡುತ್ತಿದೆ. ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ನ (ಸಿಎಸ್‌ಐಆರ್‌) ಟ್ರೆಡಿಶನಲ್ ನಾಲೆಡ್ಜ್ ಡಿಜಿಟಲ್ ಲೈಬ್ರರಿಯು (ಟಿಕೆಡಿಎಲ್‌) ನಮ್ಮ ದೇಶದ ಪಾರಂಪರಿಕ ಜ್ಞಾನವನ್ನು ಡಿಜಿಟೈಸ್ ಮಾಡಿಡುವಲ್ಲಿ ಪ್ರಮುಖ ಕೆಲಸ ಮಾಡುತ್ತಿದೆ.

ಗುರುರಾಜ್ ಎಸ್. ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.