ADVERTISEMENT

ವಿಶ್ಲೇಷಣೆ | ಜೀವಿವೈವಿಧ್ಯ: ಕಳೆದೀತು ಸಂಪತ್ತು

ಭಾರತದ ಜೀವಿವೈವಿಧ್ಯ ದಾಖಲಾತಿಯ ಪರಿಶೀಲನಾ ಪಟ್ಟಿ ನಮ್ಮನ್ನು ಎಚ್ಚರಿಸುವಂತಿದೆ

ಅಖಿಲೇಶ್ ಚಿಪ್ಪಳಿ
Published 18 ಜುಲೈ 2024, 22:14 IST
Last Updated 18 ಜುಲೈ 2024, 22:14 IST
   

ಭಾರತೀಯ ಪ್ರಾಣಿಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ದೇಶದ  ಜೀವಿವೈವಿಧ್ಯ ದಾಖಲಾತಿಯ ಪರಿಶೀಲನಾ ಪಟ್ಟಿಯನ್ನು ಬಿಡುಗಡೆ ಮಾಡಿತು. ಜಗತ್ತಿನಲ್ಲೇ ಇಂತಹ ಪ್ರಯತ್ನ ಮಾಡಿದ ಮೊದಲ ದೇಶ ಭಾರತ ಎಂದು ಕೇಂದ್ರ ಪರಿಸರ ಸಚಿವರು ಈ ಸಂದರ್ಭದಲ್ಲಿ ಸಾರಿದರು. ಒಟ್ಟು 1,04,561 ಪ್ರಭೇದಗಳ ಸಮಗ್ರ ದಾಖಲಾತಿಯನ್ನು ಹೊಂದಿದ ಈ ಪಟ್ಟಿಯು ನಮ್ಮ ಜೀವಿವೈವಿಧ್ಯವನ್ನು ಉಳಿಸುವಲ್ಲಿ ನಿಶ್ಚಿತವಾಗಿ ಸಹಕಾರಿಯಾಗಬಹುದು ಎಂಬ ಆಶಾಭಾವ ಹೊಂದೋಣ.

ಸಂಶೋಧಕರು, ವರ್ಗೀಕರಣ ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಂರಕ್ಷಣಾ ನಿರ್ವಾಹಕರು ಹಾಗೂ ನೀತಿ ನಿರೂಪಕರಿಗೆ ಈ ಪಟ್ಟಿಯಿಂದ ಅನುಕೂಲವಾಗಲಿದೆ. ಈ ಪಟ್ಟಿಯ ಪ್ರಕಾರ, ಭಾರತದಲ್ಲಿ 455 ಸ್ತನಿ ಪ್ರಾಣಿಗಳು ಕಂಡುಬಂದಿವೆ. ಅತಿಹೆಚ್ಚು ಸ್ತನಿ ವೈವಿಧ್ಯವನ್ನು ಮೇಘಾಲಯ (169) ಹೊಂದಿದೆ. ಭಾರತದಲ್ಲಿ ಮಾತ್ರ ಕಂಡುಬರುವ 52 ಸ್ತನಿ ಪ್ರಭೇದಗಳಲ್ಲಿ 19 ಪ್ರಭೇದಗಳು ಕರ್ನಾಟಕದಲ್ಲಿ ಇವೆ ಎಂಬುದು ಸಂರಕ್ಷಣೆಯ ದೃಷ್ಟಿಯಿಂದ ಬಹಳ ಮಹತ್ವದ ಅಂಶವಾಗಿದೆ. 1,358 ಪಕ್ಷಿ ಪ್ರಭೇದಗಳ ಪೈಕಿ 79 ಪ್ರಭೇದಗಳು ಭಾರತಕ್ಕೆ ಮಾತ್ರ ಸೀಮಿತವಾಗಿದ್ದು, ಇವುಗಳಲ್ಲಿ 28 ಪ್ರಭೇದಗಳು ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ.

150ಕ್ಕೂ ಹೆಚ್ಚು ವಿಜ್ಞಾನಿಗಳ ಎರಡು ವರ್ಷಗಳ ಸತತ ಪರಿಶ್ರಮದಿಂದ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ವಿಜ್ಞಾನಿಗಳು ದೇಶದಾದ್ಯಂತ ಇರುವ 641 ಹೊಸ ಪ್ರಾಣಿ ಪ್ರಭೇದಗಳನ್ನು ಪತ್ತೆ ಮಾಡಿದ್ದಾರೆ. ಅತಿಹೆಚ್ಚು ಹೊಸ ಪ್ರಭೇದಗಳು ದಾಖಲಾಗಿರುವುದು ಪಶ್ಚಿಮಘಟ್ಟದ ಕೇರಳ ಭಾಗದಲ್ಲಿ ಎಂಬುದು ಗಮನಾರ್ಹ.

ADVERTISEMENT

ಪ್ರಪಂಚದಲ್ಲಿ ಅತಿಹೆಚ್ಚು ಜೀವಿವೈವಿಧ್ಯವನ್ನು ಹೊಂದಿರುವ 17 ದೇಶಗಳಲ್ಲಿ ಭಾರತವೂ ಒಂದಾಗಿದೆ. ಶೇಕಡ 8ರಷ್ಟು ಜೀವಿವೈವಿಧ್ಯ ಸಂಪತ್ತು ನಮ್ಮಲ್ಲಿದೆ. ಇರುವೆ, ಜೇನು, ಕಣಜ, ಜೇಡ, ಚೇಳು, ಗೆದ್ದಲು ಮತ್ತು ಉಣ್ಣೆಗಳ ಹೊಸ ಪ್ರಭೇದಗಳು ಪತ್ತೆಯಾಗಿವೆ. ಜೊತೆಗೆ 47 ಜಾತಿಯ ಮೀನುಗಳು, 20 ಹೊಸ ಸರೀಸೃಪ ಪ್ರಭೇದಗಳ ಜೊತೆಗೆ ಎರಡು ಸ್ತನಿ ಪ್ರಭೇದಗಳು ಪಟ್ಟಿಗೆ ಸೇರ್ಪಡೆಯಾಗಿವೆ.

ವಿಶೇಷವಾಗಿ, ಮೇಕೆ ಜಾತಿಗೆ ಸೇರಿದ ಎರಡು ಸ್ತನಿ ಪ್ರಭೇದಗಳು ಹಿಮಾಚಲಪ್ರದೇಶ ಹಾಗೂ ಲಡಾಕ್‌ನಲ್ಲಿ, ಹೊಸ ಪ್ರಭೇದದ ಬಾವಲಿಯೊಂದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕೇರಳದಲ್ಲಿ 101, ಪಶ್ಚಿಮ ಬಂಗಾಳ 72, ತಮಿಳುನಾಡು 62, ಕರ್ನಾಟಕ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ 45 ಹೊಸ ಪ್ರಭೇದಗಳನ್ನು ಪತ್ತೆ ಮಾಡಲಾಗಿದೆ.

ಚಿಕ್ಕ ಇರುವೆಯಿಂದ ಹಿಡಿದು ಬೃಹತ್ ಆನೆಯವರೆಗಿನ ಎಲ್ಲಾ ವಿವರಗಳನ್ನು 1750ರಿಂದಲೇ ಕಲೆ ಹಾಕಲಾಗುತ್ತಿತ್ತು. ಸ್ಥಾನಿಕ ಪ್ರಭೇದಗಳು, ಅಪಾಯದ ಅಂಚಿನಲ್ಲಿರುವ ಪ್ರಭೇದಗಳು, //ಪರಿಚ್ಛೇದದಲ್ಲಿ/// ಬರುವ ಪ್ರಭೇದಗಳನ್ನು ಕಾಲಕಾಲಕ್ಕೆ ನವೀಕರಿಸಿ ದಾಖಲಿಸಲಾಗುತ್ತದೆ. ವೈಜ್ಞಾನಿಕವಾಗಿ ರಚಿಸಿರುವ ಹೊಸ ಜೀವಿವೈವಿಧ್ಯ ಪಟ್ಟಿಯು ಸಂರಕ್ಷಣೆ ಮತ್ತು ನಿರ್ವಹಣೆ ದೃಷ್ಟಿಯಿಂದ ಬಹಳ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2021ರಲ್ಲೇ ‘ಪರಿಸರಕ್ಕಾಗಿ ಜೀವನಶೈಲಿ’ (ಲೈಫ್‌ಸ್ಟೈಲ್‌ ಫಾರ್‌ ಎನ್‌ವಿರಾನ್‌ಮೆಂಟ್‌) ಎಂಬ ಘೋಷವಾಕ್ಯದ ರಾಯಭಾರಿಯಾಗಿದ್ದರು. ಭೂಗ್ರಹದ ಒಟ್ಟಾರೆ ಆರೋಗ್ಯವನ್ನು ಕಾಪಿಡಲು ಇದು ಸಹಕಾರಿಯಾಗಲಿದೆ ಹಾಗೂ ಪ್ರತಿಯೊಬ್ಬರೂ ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಅವರ ಮತ್ತೊಂದು ಮಹತ್ವಾಕಾಂಕ್ಷೆಯ ಘೋಷಣೆಯೆಂದರೆ ‘ತಾಯಿಗಾಗಿ ಒಂದು ಮರ’ ಎಂಬ ಘೋಷವಾಕ್ಯ. ಇದು ಕೂಡ ಪರಿಸರವನ್ನು ಉಳಿಸುವ ದಿಸೆಯಲ್ಲಿ ಒಂದು ಉಪಕ್ರಮ. ಪ್ರತಿ ಪ್ರಜೆಯೂ ತನ್ನ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನು ನೆಟ್ಟು ಪೋಷಿಸಬೇಕು ಎಂಬುದು ಇದರ ಹಿಂದಿರುವ ಕಾಳಜಿ. ಪ್ರಧಾನಿಯವರ ಆಶಯ ನೆರವೇರಿತೇ ಎಂಬ ಚರ್ಚೆ ಇಲ್ಲಿ ಬೇಡ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರವು ಈ ಹಿಂದಿನ ಎರಡು ಅವಧಿಗಳಲ್ಲಿ ವಾಸ್ತವವಾಗಿ ಎಷ್ಟರಮಟ್ಟಿಗೆ ಪರಿಸರಸ್ನೇಹಿಯಾಗಿತ್ತು ಎಂಬುದನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ.

ಸರ್ಕಾರ ತೆಗೆದುಕೊಂಡ ಹಲವು ನಿರ್ಧಾರಗಳು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕೆಟ್ಟ ಪರಿಣಾಮ ಬೀರುವಂತೆ ಇದ್ದವು.‌‌ ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ಕ್ಕೆ 2022ರಲ್ಲಿ ತಿದ್ದುಪಡಿ ತರಲಾಯಿತು. ತಿದ್ದುಪಡಿಗೆ ಮೊದಲು ಯಾವುದೇ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆನೆಗಳನ್ನು ಸಾಗಿಸಲು ನಿಯಮಗಳು ಬಹಳ ಬಿಗಿಯಾಗಿದ್ದವು. ಆಯಾ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ಕೊಟ್ಟ ನಂತರದಲ್ಲಷ್ಟೇ ಇದಕ್ಕೆ ಅವಕಾಶ ಇತ್ತು. ಕರ್ನಾಟಕದಿಂದ ಗುಜರಾತಿಗೆ ಸಾಕಾನೆಗಳನ್ನು ಸಾಗಿಸುವುದಾದಲ್ಲಿ, ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯಸ್ಥರು ಹಾಗೂ ಯಾವ ರಾಜ್ಯಗಳನ್ನು ಹಾದು ಹೋಗಬೇಕಾಗಿದೆಯೋ ಆ ರಾಜ್ಯಗಳ ಅರಣ್ಯ ಇಲಾಖೆಯ ಮುಖ್ಯಸ್ಥರು ಮತ್ತು ಆನೆಗಳನ್ನು ಪಡೆದುಕೊಳ್ಳುವ ರಾಜ್ಯದ ಅರಣ್ಯ ಇಲಾಖೆಯ ಮುಖ್ಯಸ್ಥರ ಒಪ್ಪಿಗೆ ಕಡ್ಡಾಯವಾಗಿತ್ತು. ಸಾಕಾನೆಗಳ ಯದ್ವಾತದ್ವಾ ಸಾಗಾಣಿಕೆಗೆ ಈ ಕಾನೂನು ತಡೆಯೊಡ್ಡುತ್ತಿತ್ತು. ತಿದ್ದುಪಡಿ ಮೂಲಕ ಈ ಅಂಶ ತೆಗೆದುಹಾಕಲಾಗಿದ್ದು, ಧಾರ್ಮಿಕ ಮತ್ತು ಇನ್ನಿತರ ಉದ್ದೇಶಗಳಿಗೆ ಸಾಕಾನೆಗಳನ್ನು ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಬೇರೆ ರಾಜ್ಯಗಳಿಗೆ ನೀಡುವುದಕ್ಕೆ ಈ ಬಗೆಯ ನಿರ್ಬಂಧ ಇರುವುದಿಲ್ಲ. ಇದರಿಂದ, ಸಾಕಾನೆಗಳಿಗೆ ಅಥವಾ ಪಳಗಿಸಿದ ಆನೆಗಳಿಗೆ ಬೇಡಿಕೆ ಹೆಚ್ಚಲಿದ್ದು, ಇನ್ನಷ್ಟು, ಮತ್ತಷ್ಟು ಕಾಡಾನೆಗಳನ್ನು ಹಿಡಿದು ಪಳಗಿಸುವ ಪ್ರವೃತ್ತಿ ಹೆಚ್ಚಾಗಲಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಕೇಂದ್ರ ಪರಿಸರ ಸಚಿವಾಲಯವು ನದಿ ಜೋಡಣೆ ಯೋಜನೆಗೆ 2021ರ ಡಿಸೆಂಬರ್‌ನಲ್ಲಿ ಅನುಮತಿ ನೀಡಿದೆ. ಮಧ್ಯಪ್ರದೇಶದ ಬುಂದೇಲ್‌ಖಂಡ ವ್ಯಾಪ್ತಿಯ ಕೆನ್ ಮತ್ತು ಬೆತ್ವಾ ನದಿಗಳ ಜೋಡಣೆಗಾಗಿ ₹ 44,605 ಕೋಟಿ  ಮಂಜೂರಾಗಿದೆ. ಈ ನದಿ ಜೋಡಣೆಗಾಗಿ ಪನ್ನಾ ಹುಲಿ ಸಂರಕ್ಷಣಾ ಪ್ರದೇಶದ 27 ಲಕ್ಷ ಬಲಿತ ಮರಗಳ ಹನನವಾಗಲಿದೆ. ಇಷ್ಟು ಸಂಖ್ಯೆಯ ಮರಗಳ ಹನನವು ನದಿಯ ಹರಿವಿನ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಜಲತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವ ಬುಂದೇಲ್‌ಖಂಡ ಪ್ರದೇಶವು ಈ ಯೋಜನೆಯ ನಂತರದಲ್ಲಿ ಇನ್ನಷ್ಟು ಜಲ ಸಂಕಷ್ಟಕ್ಕೆ ಸಿಲುಕಲಿದೆ ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯ.

ಜೀವಿವೈವಿಧ್ಯದ ಆಗರವಾದ ನಿಕೋಬಾರ್ ದ್ವೀಪ ಸಮೂಹವನ್ನು ಅಭಿವೃದ್ಧಿಪಡಿಸುವ ಸಲುವಾಗಿ ₹ 72 ಸಾವಿರ ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ಸಿದ್ಧಪಡಿಸಿ, ಅದಕ್ಕೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದ ಅಲ್ಲಿ ಎಂಟೂವರೆ ಲಕ್ಷ ಮರಗಳ ಹನನವಾಗಲಿದೆ. ಶೋಂಪೆನ್ ಹಾಗೂ ನಿಕೋಬಾರಿ ಸಮುದಾಯಗಳ 1,700 ಮಂದಿ ಶಾಶ್ವತವಾಗಿ ನೆಲೆ ಕಳೆದುಕೊಳ್ಳಲಿದ್ದಾರೆ. ನಿಕೋಬಾರ್‌ಗೆ ಮಾತ್ರ ಸೀಮಿತವಾಗಿರುವ ನಿಕೋಬಾರ್ ಮೆಗಾಪೋಡ್ ಎಂಬ ವಿಶಿಷ್ಟ ಪಕ್ಷಿಯು ಶಾಶ್ವತವಾಗಿ ತನ್ನ ನೆಲೆ ಕಳೆದುಕೊಳ್ಳಲಿದೆ. ಸಾಮಾನ್ಯ ಕಾರಿನಷ್ಟು ದೊಡ್ಡದಾದ ಲೆದರ್‌ಬ್ಯಾಕ್ ಆಮೆಗಳು ನಿಯಮಿತವಾಗಿ ಮೊಟ್ಟೆಯಿಡುವ ಪ್ರದೇಶವೂ ಅಭಿವೃದ್ಧಿಯ ಹೆಸರಿನಲ್ಲಿ ಕಳೆದುಹೋಗಲಿದೆ.

ದೇಶದ ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ಶೇ 33ರಷ್ಟು ಅರಣ್ಯ ಇರಬೇಕು, ಗುಡ್ಡಗಾಡು ಪ್ರದೇಶದಲ್ಲಿ ಈ ಪ್ರಮಾಣ ಶೇ 66ರಷ್ಟು ಇರಬೇಕು ಎಂದು ರಾಷ್ಟ್ರೀಯ ಅರಣ್ಯ ನೀತಿ– 1988 ಹೇಳುತ್ತದೆ. ವಾಸ್ತವಿಕವಾಗಿ ಈ ಪ್ರಮಾಣ ಶೇ 21ಕ್ಕೆ ಇಳಿದಿದೆ ಎಂದು ಕೇಂದ್ರ ಪರಿಸರ ಇಲಾಖೆಯೇ ಹೇಳುತ್ತದೆ. ಅರಣ್ಯ ನೀತಿ ಹೇಳಿರುವಷ್ಟು ಪ್ರಮಾಣದ ಅರಣ್ಯ ಪ್ರದೇಶವು ದೇಶದಲ್ಲಿ ಬೆಳವಣಿಗೆ ಆಗುವವರೆಗೆ ಯಾವುದೇ ಅರಣ್ಯ ಅಥವಾ ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಬಾರದು ಎಂಬ ನಿಯಮ ಜಾರಿಗೆ ತಂದಾಗ ಮಾತ್ರ ಜೀವಿವೈವಿಧ್ಯ ಸಮೃದ್ಧವಾಗಬಲ್ಲದು.

ಆಕರ್ಷಕ ಹಾಗೂ ಎದ್ದು ಕಾಣುವ ಅಂಕಿ-ಅಂಶಗಳಷ್ಟೇ ನಮಗೆ ಮುಖ್ಯವಾಗಿವೆ. ನೆಲಮಟ್ಟದಲ್ಲಿ ನಾವು ಸಂರಕ್ಷಣೆ ಮಾಡಿದ್ದಕ್ಕಿಂತ ಕಳೆದುಕೊಳ್ಳುತ್ತಿರುವುದೇ ಹೆಚ್ಚು ಎಂಬ ಸತ್ಯವನ್ನು ನಾವೀಗ ಒಪ್ಪಿಕೊಳ್ಳಬೇಕಾಗಿದೆ. ಜೀವಿವೈವಿಧ್ಯ ಸಂಪತ್ತನ್ನು ಬರೀ ಅಂಕಿ-ಅಂಶವನ್ನು ಬಳಸಿಕೊಂಡು ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರಗಳು ಮನಗಾಣಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.