ADVERTISEMENT

ವಿಶ್ಲೇಷಣೆ: ನನ್ನ ತೆರಿಗೆ ನನ್ನ ಹಕ್ಕು; ಮುಂದೇನು?

ಆಗಬೇಕಿರುವ ಬುಡಮಟ್ಟದ ಬದಲಾವಣೆಗಳ ಬಗ್ಗೆ ವಾದ ಮಂಡನೆಗೆ ರಾಜ್ಯಗಳು ಸಿದ್ಧವಾಗಬೇಕಿದೆ

ವಸಂತ ಶೆಟ್ಟಿ
Published 26 ಮಾರ್ಚ್ 2024, 19:39 IST
Last Updated 26 ಮಾರ್ಚ್ 2024, 19:39 IST
   

ಹದಿನಾರನೇ ಹಣಕಾಸು ಆಯೋಗ ತನ್ನ ಕೆಲಸ ಆರಂಭಿಸುತ್ತಿರುವ ಹೊತ್ತಲ್ಲೇ ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಈಗಿರುವ ಏರ್ಪಾಡುಗಳಲ್ಲಿನ ತೊಂದರೆಗಳ ಕುರಿತು ಹಲವಾರು ರಾಜ್ಯಗಳು ದನಿ ಎತ್ತಿದ ಬೆಳವಣಿಗೆ ಹಿಂದಿನ ತಿಂಗಳು ನಡೆಯಿತು. ಕರ್ನಾಟಕವೂ ಇದಕ್ಕೆ ದನಿಗೂಡಿಸಿದ್ದಲ್ಲದೆ ದೆಹಲಿಯಲ್ಲಿ ರಾಜ್ಯದ ಮುಖ್ಯಮಂತ್ರಿಯೇ ಪ್ರತಿಭಟನೆ ಮಾಡಿದ್ದೂ ಆಯಿತು. ಲೋಕಸಭೆ ಚುನಾವಣೆಯ ಹೊತ್ತಲ್ಲೇ ಈ ವಿಷಯ ಚರ್ಚೆಗೆ ಬಂದ ಬಗೆ ಸಹಜವಾಗಿ ರಾಜಕೀಯ ಹಗ್ಗಜಗ್ಗಾಟಗಳಿಗೂ ಕಾರಣವಾಯಿತು.

ಸದ್ಯಕ್ಕೆ ವಿಷಯ ತಣ್ಣಗಾದರೂ ಆಯೋಗ ತನ್ನ ಕೆಲಸಗಳನ್ನು ಶುರು ಮಾಡುತ್ತಿರುವ ಈ ಹೊತ್ತಿನಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಮಾಡಬೇಕಿರುವ ಕೆಲವು ಬುಡಮಟ್ಟದ ಬದಲಾವಣೆಗಳ ಕುರಿತು ಆಯೋಗದ ಮುಂದೆ ವಾದ ಮಂಡಿಸಲು ರಾಜ್ಯ ಸರ್ಕಾರಗಳು ಸೂಕ್ತವಾಗಿ ಸಿದ್ಧವಾಗಬೇಕಾದ ತುರ್ತಿದೆ.

ಭಾರತದ ಸಂವಿಧಾನ ರಚಿಸುವ ಹೊತ್ತಿನಲ್ಲಿ ಸಂವಿಧಾನ ರಚನಾ ಸಮಿತಿಯಲ್ಲೂ ತೆರಿಗೆ ಹಂಚಿಕೆಯ ಏರ್ಪಾಡಿನ ಬಗ್ಗೆ ವ್ಯಾಪಕವಾದ ಚರ್ಚೆಗಳಾಗಿದ್ದವು. ಈಗಿನ ಬಿಹಾರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಕೆ.ಟಿ.ಶಾ, ಉತ್ತರಪ್ರದೇಶದ ಜೆ.ಬಿ.ಕೃಪಲಾನಿ, ಮದ್ರಾಸಿನ ಟಿ.ಟಿ.ಕೃಷ್ಣಾಮಾಚಾರಿ, ಮೈಸೂರು ರಾಜ್ಯದ ಎಸ್.ನಾಗಪ್ಪ ಅವರಂತಹ ಹಲವು ಸದಸ್ಯರು ತೆರಿಗೆ ವಿಧಿಸುವ ವಿಷಯದಲ್ಲಿ ರಾಜ್ಯಗಳಿಗೆ ಬಹಳಷ್ಟು ಅವಕಾಶಗಳಿರಬೇಕು ಎಂದು ಗಟ್ಟಿಯಾಗಿ ವಾದಿಸಿದ್ದರು. ಕಾನೂನು ಸುವ್ಯವಸ್ಥೆ, ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ಸೇವೆಯಂತಹ ದೊಡ್ಡ ಜವಾಬ್ದಾರಿಗಳು ರಾಜ್ಯ ಸರ್ಕಾರದವಾಗಿರುವಾಗ ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸಂಪನ್ಮೂಲ ಹೊಂದಿಸಲು ಒಂದು ಮಟ್ಟಿಗಿನ ತೆರಿಗೆ ಸ್ವಾತಂತ್ರ್ಯ ಇರಬೇಕಾದದ್ದು ಅಗತ್ಯ ಅನ್ನುವುದು ಈ ವಾದಗಳ ಬುನಾದಿಯಲ್ಲಿತ್ತು. ಇಷ್ಟಾದರೂ ಸಂವಿಧಾನ ರಚನೆಯ ಹೊತ್ತಿನಲ್ಲಿ ಇದ್ದ ದೇಶದ ರಾಜಕೀಯ ಸಂದರ್ಭದ ಪ್ರಭಾವದಿಂದಾಗಿ, ಸಂವಿಧಾನ ಜಾರಿಗೆ ಬಂದಾಗ ರಾಜಕೀಯವಷ್ಟೇ ಅಲ್ಲದೆ ತೆರಿಗೆ ವಿಧಿಸುವ, ಸಂಗ್ರಹಿಸುವ ವಿಚಾರದಲ್ಲೂ ಬಹುಪಾಲು ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಡಲಾಯಿತು.

ADVERTISEMENT

ಕೇಂದ್ರ ಸರ್ಕಾರ ಸಂಗ್ರಹಿಸುವ ಆದಾಯ ತೆರಿಗೆ ಮತ್ತು ಅಬಕಾರಿ ಸುಂಕವನ್ನು ಮಾತ್ರವೇ ಹಣಕಾಸು ಆಯೋಗ ಅನ್ನುವ ಸ್ವಾಯತ್ತ ಸಂಸ್ಥೆಯ ಮೂಲಕ ಒಂದು ನಿರ್ದಿಷ್ಟ ಸೂತ್ರದಡಿ ರಾಜ್ಯಗಳಿಗೆ ಹಂಚುವ ವ್ಯವಸ್ಥೆ ಜಾರಿಗೆ ಬಂದಿತು. ರಾಜ್ಯಗಳಿಗೆ ಕೆಲವೇ ಕೆಲವು ವಿಷಯಗಳಲ್ಲಿ ತೆರಿಗೆ ಹಾಕುವ ಹಕ್ಕುಗಳನ್ನು ನೀಡಲಾಯಿತು. 1991ರ ಆರ್ಥಿಕ ಸುಧಾರಣೆಗಳ ನಂತರ ಜಾಗತೀಕರಣದ ಅವಕಾಶಗಳನ್ನು ಬಳಸಿಕೊಳ್ಳಲು ಸಮರ್ಥವಾಗಿದ್ದ ಕೆಲವು ರಾಜ್ಯಗಳು ಪ್ರಗತಿಯಲ್ಲಿ ದಾಪುಗಾಲಿಕ್ಕಿ ತಮ್ಮದೇ ತೆರಿಗೆ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಸಾಧ್ಯವಾದರೆ, ಆ ರಾಜ್ಯಗಳ ಪ್ರಗತಿಯಿಂದಾಗಿ ಕೇಂದ್ರದ ತೆರಿಗೆ ಸಂಪನ್ಮೂಲದ ಗಾತ್ರವೂ ಹಿಗ್ಗಿದ ಬೆಳವಣಿಗೆಯಾಯಿತು. ಇದೆಲ್ಲ ಆಗುವಾಗಲೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ವಿಷಯದಲ್ಲಿ ಮೂಲಭೂತವಾದ ಬದಲಾವಣೆಗಳೇನೂ ಆಗಲಿಲ್ಲ.

ಹದಿನಾಲ್ಕನೇ ಹಣಕಾಸು ಆಯೋಗ ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ರದ್ದುಪಡಿಸಿ, ಒಟ್ಟಾರೆ ಕೇಂದ್ರದಿಂದ ರಾಜ್ಯಗಳಿಗೆ (ಎಲ್ಲ ರಾಜ್ಯಗಳಿಗೂ ಸಮಾನವಾಗಿಯಲ್ಲ) ನೀಡುವ ತೆರಿಗೆ ಹಂಚಿಕೆ ಪ್ರಮಾಣವನ್ನು ಶೇಕಡ 32ರಿಂದ 42ಕ್ಕೆ ಏರಿಸಿತು. ಇದು ರಾಜ್ಯಗಳಿಗೆ ದೊರಕುವ ಒಟ್ಟಾರೆ ನಿವ್ವಳ ತೆರಿಗೆ ಪಾಲಿನಲ್ಲಿ ಹೆಚ್ಚೇನೂ ಬದಲಾವಣೆ ತರದಿದ್ದರೂ, ಬರುವ ಹಣವನ್ನು ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ವಿಷಯದಲ್ಲಿ ಒಂದಿಷ್ಟು ಸ್ವಾತಂತ್ರ್ಯ ನೀಡಿದ್ದು ಈ ದಿಸೆಯಲ್ಲಿ ಆದ ಏಕೈಕ ದೊಡ್ಡ ಬದಲಾವಣೆ ಎನ್ನಬಹುದು. ಇದರ ನಂತರ ಜಾರಿಗೆ ಬಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯು ರಾಜ್ಯಗಳಿಗೆ ಇದ್ದ ಕೆಲವೇ ಕೆಲವು ತೆರಿಗೆ ವಿಧಿಸುವ ಅಧಿಕಾರವನ್ನೂ ಮೊಟಕುಗೊಳಿಸಿ, ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಹೊಸತಾದ ಯಾವುದೇ ತೆರಿಗೆ ಪರಿಚಯಿಸುವ ಹಕ್ಕನ್ನು ಇಲ್ಲವಾಗಿಸಿತು.

ಕೇಂದ್ರ ಸರ್ಕಾರ ಸಂಗ್ರಹಿಸುವ ಎಲ್ಲ ತರಹದ ತೆರಿಗೆಗಳನ್ನೂ ‘ಡಿವಿಸಿಬಲ್ ಪೂಲ್’ ವ್ಯಾ‌ಪ್ತಿಗೆ ತಂದು  ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದ ಸಂವಿಧಾನ ತಿದ್ದುಪಡಿಯು ಇಸವಿ 2000ದಲ್ಲಿ ಆಯಿತು. ಆದರೆ ವಿಧಿ 270/271ರ ಅಡಿ ಕೇಂದ್ರ ಸಂಗ್ರಹಿಸುವ ಸೆಸ್ ಮತ್ತು ಸರ್ಚಾರ್ಜ್‍ಗಳನ್ನು ಪೂರ್ತಿಯಾಗಿ ಈ ಹಂಚಿಕೆಯಿಂದ ಹೊರಗಿಡಲಾಯಿತು. ಇದಕ್ಕೂ ಹಿಂದೆ ಇಂತಹ ನಿರ್ಧಾರಗಳನ್ನು ಹಣಕಾಸು ಆಯೋಗದ ಶಿಫಾರಸು ಇದ್ದರಷ್ಟೇ ಮಾಡುವ ನೀತಿಯಿತ್ತು. ಈ ನಿರ್ಣಯ ರಾಜ್ಯಗಳ ಪಾಲಿಗೆ ಬಹಳ ದೊಡ್ಡ ಪೆಟ್ಟು ಕೊಟ್ಟಿತು. ಅಲ್ಲಿಂದೀಚೆಗೆ ಕೇಂದ್ರದ ತೆರಿಗೆ ಸಂಗ್ರಹದ ಗಾತ್ರ ಹಿಗ್ಗುತ್ತಲೇ ಬಂದಿದ್ದರೂ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲಿನ ಗಾತ್ರ ಮಾತ್ರ ಅದೇ ಪ್ರಮಾಣದಲ್ಲಿ ಹಿಗ್ಗಿಲ್ಲ. ಅದುವೇ ಇಂದಿನ ಕೇಂದ್ರ- ರಾಜ್ಯಗಳ ನಡುವಿನ ತಿಕ್ಕಾಟದ ಮೂಲದಲ್ಲಿರುವ ಅಂಶ.

ಈಗಿರುವ ಅಂದಾಜಿನಂತೆ, ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ ಮೂಲಕ ಸಂಗ್ರಹಿಸುವ ತೆರಿಗೆ ಸುಮಾರು  ಏಳು ಲಕ್ಷ ಕೋಟಿ ರೂಪಾಯಿಗಳಷ್ಟಾಗಬಹುದು. ಇದು ಕೇಂದ್ರ ಸರ್ಕಾರದ ಒಟ್ಟಾರೆ ಆದಾಯದ ಶೇ 15ಕ್ಕೂ ಹೆಚ್ಚು. ರಾಜ್ಯಗಳು ಈಗ ಪ್ರಶ್ನೆ ಮಾಡಬೇಕಿರುವುದು ಇದನ್ನೇ.

ಹದಿನೈದನೇ ಹಣಕಾಸು ಆಯೋಗದ ಅನ್ವಯ ಕರ್ನಾಟಕದ ತೆರಿಗೆ ಪಾಲು ಶೇ 4.71ರಿಂದ ಶೇ 3.64ಕ್ಕೆ ಇಳಿದಿದೆ. ಇದಕ್ಕೆ ಬಹುಮುಖ್ಯ ಕಾರಣ, ತೆರಿಗೆ ಹಂಚಿಕೆಯನ್ನು ನಿರ್ಧರಿಸುವ ಮಾನದಂಡಗಳಲ್ಲಿ ಅತಿ ಹೆಚ್ಚು ತೂಕ ಹೊಂದಿರುವ ಇನ್‍ಕಂ ಡಿಸ್ಟನ್ಸ್ (ಆದಾಯದ ಅಂತರ) ಅನ್ನುವ ಮಾನದಂಡ. ಒಂದು ರಾಜ್ಯದ ತಲಾದಾಯ ಮತ್ತು ಅತ್ಯಂತ ಶ್ರೀಮಂತ ರಾಜ್ಯದ ತಲಾದಾಯದ ನಡುವೆ ಇರುವ ಆದಾಯದ ಅಂತರವನ್ನು ಅಳೆಯಲು ಇರುವ ಅಳತೆಗೋಲು ಇದಾಗಿದೆ. 15ನೇ ಹಣಕಾಸು ಆಯೋಗದ ಪ್ರಕಾರ, ಕರ್ನಾಟಕ ಈಗಾಗಲೇ ಈ ವಿಷಯದಲ್ಲಿ ಅತ್ಯಂತ ಮುಂದುವರಿದ ರಾಜ್ಯದ ತಲಾದಾಯಕ್ಕೆ ಹತ್ತಿರ ಬಂದಿರುವ ಕಾರಣ ನಮಗೆ ಸಿಗುವ ತೆರಿಗೆ ಪ್ರಮಾಣದಲ್ಲಿ ಇಷ್ಟು ದೊಡ್ಡ ಮಟ್ಟದ ಇಳಿಕೆಯಾಗಿದೆ. ಹಾಗಿದ್ದರೆ ಕರ್ನಾಟಕದ ಒಟ್ಟಾರೆ ಏಳಿಗೆ ನಿಜಕ್ಕೂ ಅಷ್ಟು ವೇಗವಾಗಿ ಆಗಿದೆಯೇ?

ಕರ್ನಾಟಕದಲ್ಲಿ ನೂರಾರು ಐ.ಟಿ. ಸಂಸ್ಥೆಗಳ ಮುಖ್ಯ ಕಚೇರಿಗಳಿವೆ. ಇವು ದೇಶ-ವಿದೇಶಗಳಿಂದ ಹೆಚ್ಚೆಚ್ಚು ಸಂಪಾದಿಸಿದಂತೆ ರಾಜ್ಯದ ಒಟ್ಟಾರೆ ಜಿಡಿಪಿ ಹೆಚ್ಚುವುದರ ಜೊತೆಗೆ ರಾಜ್ಯದ ತಲಾದಾಯವೂ ಹೆಚ್ಚುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ, ಈ ಸಂಸ್ಥೆಗಳಾಗಲೀ, ಅಲ್ಲಿನ ಉದ್ಯೋಗಿಗಳಾಗಲೀ ನೇರವಾಗಿ ರಾಜ್ಯ ಸರ್ಕಾರಕ್ಕೇನೂ ಆದಾಯ ತೆರಿಗೆ ಪಾವತಿಸುವುದಿಲ್ಲ. ಹೀಗಾಗಿ ತಲಾದಾಯದ ಹೆಚ್ಚಳ ನಿಜವಾದ ಅರ್ಥದಲ್ಲಿ ಕರ್ನಾಟಕದ ಬೊಕ್ಕಸಕ್ಕೇನೂ ಹೆಚ್ಚಿನ ಕೊಡುಗೆ ನೀಡದು. ಆದರೆ ತಲಾದಾಯದ ಏರಿಕೆಯು ಆದಾಯದ ಅಂತರವನ್ನು ಕರ್ನಾಟಕದ ವಿಷಯದಲ್ಲಿ ನಕಾರಾತ್ಮಕವಾಗಿ ಪ್ರಭಾವಿಸಿದ್ದರ ಪರಿಣಾಮವಾಗಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಬಹಳಷ್ಟು ದೊಡ್ಡ ಕೊರತೆ ಉಂಟಾಗಿದೆ. ಈ ವಿಷಯವನ್ನು ಈಗಿನ ಸರ್ಕಾರವಷ್ಟೇ ಅಲ್ಲ, ಈ ಹಿಂದಿನ ಸರ್ಕಾರವೂ ವಿಧಾನಸಭೆಯಲ್ಲಿ ಒಪ್ಪಿಕೊಂಡ ನಿದರ್ಶನವಿದೆ. ಈಗ ಇದನ್ನು ಒಂದು ಪಕ್ಷಾತೀತವಾದ ವಿಷಯವನ್ನಾಗಿ ಕಾಣುವ ಅಗತ್ಯ ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗಿದೆ.

ಹದಿನಾರನೇ ಆಯೋಗದ ಮುಂದೆ ರಾಜ್ಯ ಸರ್ಕಾರ ಎರಡು ವಿಷಯಗಳನ್ನು ಗಟ್ಟಿಯಾಗಿ ಮಂಡಿಸಬೇಕು. ಮೊದಲನೆಯದು, ರಾಜ್ಯವೊಂದರ ಬೇರೆ ಬೇರೆ ಭಾಗಗಳಲ್ಲಿನ ಏಳಿಗೆಯಲ್ಲಿನ ವ್ಯತ್ಯಾಸಗಳನ್ನೂ ಹಣಕಾಸು ಆಯೋಗವು ತೆರಿಗೆ ಹಂಚಿಕೆಯ ಮಾನದಂಡಗಳಲ್ಲಿ ಒಂದಾಗಿ ಪರಿಗಣಿಸಬೇಕು. ಎರಡನೆಯದು, ರಾಜ್ಯಗಳೊಂದಿಗೆ ಹಂಚಿಕೊಳ್ಳದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಎಲ್ಲವನ್ನೂ ತೆರಿಗೆ ಹಂಚಿಕೆಯ ನಿಧಿಯಲ್ಲಿ ಸೇರಿಸಬೇಕು. ಇದಿಲ್ಲದಿದ್ದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ತೆರಿಗೆ ಪಾಲನ್ನು ಈಗಿರುವ ಶೇ 41ರಿಂದ ಶೇ 50ಕ್ಕೆ ಏರಿಸಬೇಕು ಅನ್ನುವ ಬೇಡಿಕೆಯನ್ನಾದರೂ ಇರಿಸಬೇಕು.

ರಾಜ್ಯಗಳ ತೆರಿಗೆ ಪಾಲು ನ್ಯಾಯಯುತವಾಗಿ ಇರುವಂತೆ ಖಾತರಿಪಡಿಸಿಕೊಳ್ಳುವುದು ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗುವ ಕನಸಿಗೂ ಮುಖ್ಯ. ಯಾಕೆಂದರೆ, ಭಾರತದ ಏಳಿಗೆ ಅಂದರೆ ರಾಜ್ಯಗಳ ಏಳಿಗೆಯ ಒಟ್ಟು ಮೊತ್ತ. ರಾಜ್ಯಗಳ ಏಳಿಗೆಯಾಗದೆ ಭಾರತದ ಏಳಿಗೆ ಸಾಧ್ಯವಿಲ್ಲ. ಆಲೂರು ವೆಂಕಟರಾಯರು ಇದನ್ನೇ ‘ಕರ್ನಾಟಕದಿಂದ ಭಾರತ’ ಎಂದಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.