ADVERTISEMENT

ವಿಶ್ಲೇಷಣೆ: ಆನ್‌ಲೈನ್‌ ಮಾರಾಟ ಮತ್ತು ಕಣ್ಕಟ್ಟು ಆಟ

ಬಳಕೆದಾರರ ಆಲೋಚನೆ ಬದಲಿಸುವ ‘ಡಾರ್ಕ್‌ಪ್ಯಾಟರ್ನ್’ಗೆ ಬೀಳಲಿದೆ ಕಡಿವಾಣ

ವೈ.ಜಿ.ಮುರಳೀಧರನ್
Published 13 ಅಕ್ಟೋಬರ್ 2023, 22:59 IST
Last Updated 13 ಅಕ್ಟೋಬರ್ 2023, 22:59 IST
ygm
ygm   

ಸಿನಿಮಾ, ನಾಟಕ, ಸಂಗೀತ ಕಛೇರಿ, ಸ್ಟ್ಯಾಂಡ್‍ಅಪ್ ಕಾಮಿಡಿ ಷೋ ಮುಂತಾದ ಕಾರ್ಯಕ್ರಮಗಳಿಗೆ ಆನ್‍ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವಾಗ, ಟಿಕೆಟ್ ಮೊತ್ತಕ್ಕಿಂತ ಒಂದೆರಡು ರೂಪಾಯಿ ಹೆಚ್ಚಿಗೆ ಪಾವತಿಸಬೇಕಾದ ಅನಿವಾರ್ಯವು ಕೆಲವು ಬಳಕೆದಾರರಿಗೆ ಎದುರಾಗಿರುತ್ತದೆ. ಕಾರಣ, ಆ ಸಣ್ಣ ಮೊತ್ತವನ್ನು ಯಾವುದೋ ಸಮಾಜ ಸೇವಾ ಸಂಸ್ಥೆಗೆ ದೇಣಿಗೆಯಾಗಿ ಬಳಕೆದಾರರಿಂದ ವಸೂಲಿ ಮಾಡಲಾಗಿರುತ್ತದೆ. ಇದೇ ರೀತಿ ವಿಮಾನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸುವಾಗ ಕೆಲವೊಮ್ಮೆ ಟಿಕೆಟ್‌ ಮೊತ್ತಕ್ಕಿಂತ ತುಸು ಅಧಿಕ ಮೊತ್ತವು ಬಳಕೆದಾರರ ಖಾತೆಯಿಂದ ಡೆಬಿಟ್ ಆಗುತ್ತಿತ್ತು. ಟಿಕೆಟ್ ನೀಡುವ ಸಂಸ್ಥೆಯು ಪ್ರಯಾಣಕ್ಕೆ ವಿಮೆ ಮಾಡಿಸಿ ಅದರ ಮೊತ್ತವನ್ನು ಟಿಕೆಟ್ ಮೊತ್ತದಲ್ಲಿ ಸೇರಿಸುತ್ತಿದ್ದುದೇ ಇದಕ್ಕೆ ಕಾರಣ. ಇದನ್ನು ಗಮನಿಸಿದ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು  ಆ ರೀತಿ ಮಾಡಬಾರದೆಂದು ನಿರ್ದೇಶನ ನೀಡಿದ ಮೇಲೆ ಈ ಪರಿಪಾಟವು ಕೊನೆಗೊಂಡಿದೆ.

ಬಳಕೆದಾರರಲ್ಲಿ ಭಯ ಹುಟ್ಟಿಸುವುದು, ಕೀಳರಿಮೆ ಉಂಟುಮಾಡುವುದು, ಅನಗತ್ಯ ಸರಕುಗಳನ್ನು ಅತ್ಯಗತ್ಯ ಎಂಬ ಭಾವನೆ ಬರುವಂತೆ ಮಾಡುವುದು ಎಲ್ಲವೂ ಒಂದು ಕಾಲದಲ್ಲಿ ಜಾಹೀರಾತಿನ ಮೂಲಕ ನಡೆಯುತ್ತಿದ್ದವು. ಆದರೆ ಈಗ ಮಾರಾಟಗಾರರು ಬಳಕೆದಾರರ ಸುಪ್ತ ಮನಸ್ಸಿಗೆ ಕೈಹಾಕಿದ್ದಾರೆ. ಈ ಉದ್ದೇಶಕ್ಕಾಗಿ ವರ್ತನಾ ಮನೋವಿಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ.

ಬಳಕೆದಾರರು ಸರಕನ್ನು ನೋಡಿದ ಕೂಡಲೇ ಅವರಿಗೆ ಅಗತ್ಯವೋ ಇಲ್ಲವೋ ಅದನ್ನು ತಕ್ಷಣ ಖರೀದಿಸುವಂತೆ ಮಾಡಲು ಕೃತಕ ತುರ್ತು ಸೃಷ್ಟಿಸಲಾಗುತ್ತಿದೆ. ಉದಾಹರಣೆಗೆ, ಆನ್‍ಲೈನ್ ಜಾಲತಾಣದಲ್ಲಿ ಒಂದು ಪುಸ್ತಕಕ್ಕಾಗಿ ಹುಡುಕುತ್ತಿರುವಾಗ, ‘ಇದು ಕಡೆಯ ಅವಕಾಶ. ಒಂದು ಪ್ರತಿ ಮಾತ್ರ ಉಳಿದಿದೆ. ಅಷ್ಟರಲ್ಲಿ ಖರೀದಿಸಿ’ ಎಂಬ ಎಚ್ಚರಿಕೆ ಸ್ಕ್ರೀನ್ ಮೇಲೆ ಕಾಣಿಸಿ
ಕೊಳ್ಳುತ್ತದೆ. ಇದನ್ನು ನೋಡಿದ ಕೂಡಲೇ ಬಳಕೆದಾರರು ಆತಂಕಗೊಂಡು, ಪುಸ್ತಕದ ಬೆಲೆ ಎಷ್ಟಾದರೂ ಲೆಕ್ಕಿಸದೆ ಖರೀದಿಸಲು ಮುಂದಾಗುತ್ತಾರೆ. ಆದರೆ ಪುಸ್ತಕದ ಮಳಿಗೆಗಳಲ್ಲಿ ಅದೇ ಪುಸ್ತಕದ ನೂರಾರು ಪ್ರತಿಗಳು ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯವಿರುತ್ತವೆ.

ADVERTISEMENT

ಹ್ಯಾರಿ ಬ್ರಿಗ್‍ನಲ್ ಎಂಬ ಯುಎಕ್ಸ್ ವಿನ್ಯಾಸಕ ಈ ಪದ್ಧತಿಗೆ 2010ರಲ್ಲಿ ‘ಡಾರ್ಕ್‌ಪ್ಯಾಟರ್ನ್’ ಎಂದು ನಾಮಕರಣ ಮಾಡಿದ. ಇದು ಯೂಸರ್ ಇಂಟರ್‌ಫೇಸ್ (ಯುಐ) ತಂತ್ರಜ್ಞಾನದ ಒಂದು ಮಾದರಿ. ಬಳಕೆದಾರರ ಆಲೋಚನೆ ಮತ್ತು ವರ್ತನೆಯನ್ನು ಬದಲಾಯಿಸುವ ಮೂಲಕ ಅವರು ಬಯಸದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುವುದು ಡಾರ್ಕ್‌ಪ್ಯಾಟರ್ನ್ ಉದ್ದೇಶ. ತಮಗೆ ಅಗತ್ಯವಿದೆಯೋ ಇಲ್ಲವೋ ಖರೀದಿಯ ಸೆಳೆತಕ್ಕೆ ಒಳಗಾಗುವ ಬಳಕೆದಾರರೇ ಹೆಚ್ಚು. ಈ ಮನೋದೌರ್ಬಲ್ಯವನ್ನು ಬಳಸಿಕೊಳ್ಳುವ ಆನ್‍ಲೈನ್ ಮಾರಾಟಗಾರರು ನಾನಾ ರೀತಿಯ ಡಾರ್ಕ್‌ಪ್ಯಾಟರ್ನ್‌ಗಳನ್ನು ಹುಟ್ಟುಹಾಕುತ್ತಾರೆ. ಲೇಖಕ ಡೇನಿಯಲ್ ಕಹ್‍ನೇಮ್ಯಾನ್‌ ‘ಥಿಂಕಿಂಗ್ ಫಾಸ್ಟ್ ಆ್ಯಂಡ್ ಸ್ಲೋ’ ಪುಸ್ತಕದಲ್ಲಿ ಪ್ರಚುರಪಡಿಸಿದ ಎರಡು ಬಗೆಯ ಚಿಂತನಾ ವಿಧಾನಗಳನ್ನು ಆಧರಿಸಿ, ಈ ಡಾರ್ಕ್‌ಪ್ಯಾಟರ್ನ್‌ಗಳು ಯಾವ ರೀತಿ ಪರಿಣಾಮ ಉಂಟುಮಾಡುತ್ತಿವೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ.

ಡಾರ್ಕ್‌ಪ್ಯಾಟರ್ನ್‌ಗಳ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರು ಈ ದಿಸೆಯಲ್ಲಿ ಕೆಲವು ಮಾದರಿಗಳನ್ನು ಗುರುತಿಸಿದ್ದಾರೆ. ಚೆಕ್‍ಔಟ್ ಮಾಡುವಾಗ ಬಳಕೆದಾರರ ಅನುಮತಿ ಇಲ್ಲದೆ ಒಂದಿಷ್ಟು ಹಣವನ್ನು ಯಾವುದಾದರೂ ಅನಾಥಾಶ್ರಮ, ಮಕ್ಕಳ ವಸತಿಕೇಂದ್ರದಂಥವುಗಳಿಗೆ ದೇಣಿಗೆ ನೀಡುವ ಹೆಸರಿನಲ್ಲಿ  ಬಿಲ್ ಮೊತ್ತಕ್ಕೆ ಸೇರಿಸಲಾಗುತ್ತದೆ. ಇದನ್ನು ಬಾಸ್ಕೆಟ್ ಸ್ನೀಕಿಂಗ್ ಎನ್ನುತ್ತಾರೆ. ಹೀಗೆ ಮಾಡುವಾಗ ‘ದೇಣಿಗೆ ನೀಡುವುದು ಸಿರಿವಂತರು ಮಾತ್ರ’ ಎಂಬ ಒಕ್ಕಣೆ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದನ್ನು ಕಂಡ ಕೂಡಲೇ ಬಳಕೆದಾರರಲ್ಲಿ ಒಂದು ರೀತಿಯ ಕೀಳರಿಮೆ ಕಾಣಿಸಿಕೊಳ್ಳುತ್ತದೆ. ತಾನು ದೇಣಿಗೆ ನೀಡದಷ್ಟು ಬಡವನಲ್ಲ ಎಂಬ ಭಾವನೆ ಉಂಟಾಗಿ, ಅವರು ದೇಣಿಗೆ ನೀಡಲು ಮುಂದಾಗುತ್ತಾರೆ. ಬಳಕೆದಾರರಲ್ಲಿ ಈ ಬಗೆಯ ವರ್ತನೆ ಉಂಟಾಗುವಂತೆ ಮಾಡುವ ಮೂಲಕ ಡಾರ್ಕ್‌ಪ್ಯಾಟರ್ನ್ ತನ್ನ ಕೆಲಸವನ್ನು ಮಾಡಿರುತ್ತದೆ.

ಬಳಕೆದಾರರಿಗೆ ಇಷ್ಟವಿಲ್ಲದ ಆ್ಯಪ್ ಖರೀದಿಸುವಂತೆ ಒತ್ತಾಯ ಮಾಡುವ ಡಾರ್ಕ್‌ಪ್ಯಾಟರ್ನ್‌ಗಳೂ ಇವೆ. ಉದಾಹರಣೆಗೆ, ಬಳಕೆದಾರರು ಒಂದು ಆ್ಯಪ್ ಮೂಲಕ ಮನೆ ಖರೀದಿಸಲು ಹೊರಟಿದ್ದರೆ ಆ ಮನೆಗೆ ಬೇಕಾಗುವ ಸೋಫಾ, ಕುರ್ಚಿ, ಪೆಯಿಂಟ್, ಒಳಾಂಗಣ ವಿನ್ಯಾಸಕ್ಕೆ ಅಗತ್ಯವಾದ ವಸ್ತುಗಳನ್ನು ಸರಬರಾಜು ಮಾಡುವಂತಹ ಆ್ಯಪ್ ಡೌನ್‍ಲೋಡ್ ಮಾಡುವಂತೆ ಒತ್ತಾಯಿಸಲಾಗುತ್ತದೆ. ಈ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡದಿದ್ದರೆ ಮನೆ ಖರೀದಿಸಲು ಬೇಕಾದ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ.

ಯಾವುದಾದರೂ ಪತ್ರಿಕೆಗೆ ಚಂದಾದಾರರಾಗಲು ಇಚ್ಛಿಸುವ ಬಳಕೆದಾರರಿಗೆ ಸಬ್‌ಸ್ಕ್ರಿಪ್ಷನ್‌ ಟ್ರ್ಯಾಪ್‌ ಎಂಬ ಡಾರ್ಕ್‌ಪ್ಯಾಟರ್ನ್ ಬಳಸಲಾಗುತ್ತಿದೆ. ಪತ್ರಿಕೆಗೆ ಚಂದಾ ಹಣ ಪಾವತಿಸಿದ ನಂತರ ಅದನ್ನು ರದ್ದುಪಡಿಸಲು ಚಂದಾದಾರರು ಹರಸಾಹಸಪಟ್ಟರೂ ಸಾಧ್ಯವಾಗುವುದಿಲ್ಲ. ಚಂದಾ ರದ್ದು ಮಾಡುವ ಗುಂಡಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದಂತೆ ಮಾಡಿರುತ್ತಾರೆ. ಹಾಗೊಮ್ಮೆ ಕಾಣಿಸಿಕೊಂಡರೂ ಆ ಗುಂಡಿಯನ್ನು ಒತ್ತುವುದಕ್ಕೆ ಬರೀ ಒಂದೆರಡು ನಿಮಿಷ ಕಾಲಾವಕಾಶ ಇರುತ್ತದೆ. ಅಷ್ಟರಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಚಂದಾಹಣ ಪತ್ರಿಕೆಯ ಖಾತೆಗೆ ಜಮಾ ಆಗಿರುತ್ತದೆ. ಈ ಮಾದರಿ ಡಾರ್ಕ್‌ಪ್ಯಾಟರ್ನ್ ಅನ್ನು ರೋಕ್ ಮೋಟೆಲ್ ಡಿಸೈನ್ (Roach Motel Design) ಎಂದೂ ಕರೆಯಲಾಗಿದೆ.

ಬಳಕೆದಾರರು ಏನನ್ನು ಖರೀದಿಸಲು ಇಚ್ಛಿಸುತ್ತಾರೋ ಅದರ ಕುರಿತ ಮಾಹಿತಿಗೆ ಮಹತ್ವ ನೀಡುವ ಬದಲು, ಬಳಕೆದಾರರಿಗೆ ಬೇಡದ ಇನ್ಯಾವುದೋ ಸರಕು ಅಥವಾ ವಿಷಯದ ಬಗ್ಗೆ ಮತ್ತೊಂದು ಪಾಪ್‍ಅಪ್ ಕಾಣಿಸಿಕೊಳ್ಳುವಂತೆ ಮಾಡಿ, ಅವರ ಹಾದಿ ತಪ್ಪಿಸುವುದಕ್ಕೆ ಇಂಟರ್‌ಫೇಸ್ ಇಂಟರ್‌ ಫಿಯರೆನ್ಸ್ ಎಂಬ ಡಾರ್ಕ್‌ಪ್ಯಾಟರ್ನ್ ಬಳಸಲಾಗುತ್ತದೆ. ಒಬ್ಬ ಮಾರಾಟಗಾರ ಒಂದು ಸರಕನ್ನು ಕಡಿಮೆ ಬೆಲೆಗೆ ನೀಡುತ್ತೇನೆ ಎಂದು ಜಾಹೀರಾತು ನೀಡಿ ಬಳಕೆದಾರರನ್ನು ತನ್ನ ವೆಬ್‍ಸೈಟ್‍ಗೆ ಆಹ್ವಾನಿಸುತ್ತಾನೆ. ಬಳಕೆದಾರರು ಆ ಸರಕನ್ನು ಖರೀದಿಸಲು ಪ್ರಯತ್ನಿಸಿದಾಗ, ಆ ಮೂಲ ಸರಕು ದಾಸ್ತಾನು ಇಲ್ಲವೆಂದು, ಅದರ ಬದಲಾಗಿ ಮತ್ತೊಂದು ಸರಕನ್ನು (ಸಾಮಾನ್ಯವಾಗಿ ಮೂಲ ಸರಕಿನ ಬೆಲೆಗಿಂತ ಹೆಚ್ಚಾಗಿರುತ್ತದೆ) ಖರೀದಿಸುವಂತೆ ಪ್ರೇರೇಪಿಸಲು ಮಾರಾಟಗಾರರು ಬೇಟ್ ಆ್ಯಂಡ್‌ ಸ್ವಿಚ್ ಮಾದರಿಯ ಡಾರ್ಕ್‌ಪ್ಯಾಟರ್ನ್ ಬಳಸುತ್ತಾರೆ.

ಡ್ರಿಪ್ ಪ್ರೈಸಿಂಗ್ ಎಂಬುದು ಮತ್ತೊಂದು ಮಾದರಿಯ ಡಾರ್ಕ್‌ಪ್ಯಾಟರ್ನ್. ಚದುರಂಗದ ಆಟವಾಡಲು ಉಚಿತ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಎಂಬ ಜಾಹೀರಾತು ನೋಡಿ, ಅನೇಕರು ಅದನ್ನು ಬಳಸಲು ಆರಂಭಿಸುತ್ತಾರೆ. ಅದಾದ ಕೆಲವೇ ದಿನಗಳಲ್ಲಿ, ಚೆಸ್ ಆಟವನ್ನು ಮುಂದುವರಿಸಲು ಇಂತಿಷ್ಟು ಹಣ ಪಾವತಿಸಿ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಾಗ ಇಂತಿಷ್ಟು ದಿನ ಮಾತ್ರ ಈ ಸೌಲಭ್ಯ ಉಚಿತ ಎಂಬ ಮಾಹಿತಿಯನ್ನು
ಬಹಿರಂಗಪಡಿಸಿರುವುದಿಲ್ಲ.

ನ್ಯಾಗಿಂಗ್ ಎಂಬುದು ಮತ್ತೊಂದು ಡಾರ್ಕ್‌ಪ್ಯಾಟರ್ನ್. ಬಳಕೆದಾರರಿಂದ ಖರೀದಿಗೆ ಸಂಬಂಧವಿಲ್ಲದ ಅನಗತ್ಯ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ. ಪದೇಪದೇ ಬಳಕೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯಂತಹ ಮಾಹಿತಿ ಕೇಳಲಾಗುತ್ತದೆ ಅಥವಾ ನಿರ್ದಿಷ್ಟ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಎಂದು ಒತ್ತಾಯಿಸಲಾಗುತ್ತದೆ. ಈ ವಿವರವನ್ನು ನೀಡಿದ ನಂತರ ಬಳಕೆದಾರರ ಮೊಬೈಲ್, ಇಮೇಲ್ ಇನ್‍ಬಾಕ್ಸ್‌ಗೆ ಜಾಹೀರಾತಿನ ಹೊಳೆ ಹರಿದುಬರುತ್ತದೆ.

ಡಾರ್ಕ್‌ಪ್ಯಾಟರ್ನ್‌ಗಳ ಬಳಕೆಗೆ ಮುಖ್ಯವಾಗಿ ಎರಡು ಕಾರಣಗಳುಂಟು. ಒಂದು, ಇಂತಹ ಅನುಚಿತ ವ್ಯಾಪಾರ ಪದ್ಧತಿಯಿಂದ ರಕ್ಷಿಸಿಕೊಳ್ಳಲು ಬಳಕೆದಾರರು ಸಮರ್ಥರಲ್ಲ. ಎರಡನೆಯದು, ಇದನ್ನು ನಿಯಂತ್ರಿಸಲು ಬೇಕಾಗಿರುವ ಕಾನೂನುಗಳ ಕೊರತೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಡಾರ್ಕ್‌ಪ್ಯಾಟರ್ನ್‌ಗಳಿಗೆ ಕಡಿವಾಣ ಹಾಕಲು ಈಗ ಮುಂದಾಗಿದೆ. ಗ್ರಾಹಕ
ಸಂರಕ್ಷಣಾ ಕಾಯ್ದೆ– 2019ರ ಅಡಿಯಲ್ಲಿ ಡಾರ್ಕ್‌ ಪ್ಯಾಟರ್ನ್‌ಗಳನ್ನು ತಡೆಗಟ್ಟುವ ಮಾರ್ಗಸೂಚಿಯನ್ನು ಸದ್ಯದಲ್ಲೇ ಜಾರಿಗೊಳಿಸಲಿದೆ. ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ಆನ್‍ಲೈನ್ ಮಾರಾಟಗಾರರಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅನುಸಾರ ದಂಡ ವಿಧಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.