ಬಲಿಷ್ಠ ನಾಯಕರು ಟೀಕೆಯನ್ನು ಕಂಡಾಗ ಕೋಪಗೊಳ್ಳುತ್ತಾರೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ ‘ರಚನಾತ್ಮಕ ಟೀಕೆಗಳನ್ನು’ ಸ್ವಾಗತಿಸಿದಾಗ ಖುಷಿ, ಆಶ್ಚರ್ಯ ಆಗುತ್ತದೆ. ಕೆಲವು ಸಮಯದ ಹಿಂದೆ ಒಂದು ಕಾರ್ಯಕ್ರಮದಲ್ಲಿ ಅವರು, ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಟೀಕೆಗಳು ಬಹಳ ಸಹಜ. ಆ ಟೀಕೆಗಳು ಪ್ರಜಾತಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ’ ಎಂದರು.
ಅವರ ಮಾತಿನ ಹಿಂದೆ ಬೇರೆ ಯಾವ ಅರ್ಥವೂ ಇಲ್ಲ ಎಂದು ಭಾವಿಸಿ ನಾನು, ರೋಗಪೀಡಿತವಾಗಿರುವ ಅರ್ಥ ವ್ಯವಸ್ಥೆಯ ಕುರಿತು ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುವ ಧೈರ್ಯ ತೋರುವೆ (ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ ಎಂಬುದು ಬೇರೆ ಮಾತು). ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಅಗತ್ಯವಿರುವ ವ್ಯವಸ್ಥೆಯೊಂದನ್ನು ಕಟ್ಟಲು ಪ್ರಧಾನಿಯವರು ಬಜೆಟ್ ಮಂಡನೆಗೂ ಮೀರಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಒಂದೆರಡು ಮಾತು ಆಡುತ್ತೇನೆ.
ಬಜೆಟ್‌ಗೂ ಮೊದಲು ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮದ ಕೆಲವು ನಾಯಕರನ್ನು ಭೇಟಿಯಾದರು. ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಯ ಬಗ್ಗೆ ಉದ್ಯಮದ ಪ್ರಮುಖರಿಂದ ಒಂದಿಷ್ಟು ಮಾಹಿತಿ ಪಡೆಯುವ ಉದ್ದೇಶ ಈ ಭೇಟಿಯ ಹಿಂದೆ ಹಿತ್ತು. ಅರ್ಥ ವ್ಯವಸ್ಥೆಯು ಅದಾಗಲೇ ಇಳಿಜಾರಿನ ಹಾದಿಯಲ್ಲಿ ಇತ್ತು. ನಂತರ, ಕೋವಿಡ್ ಕಾರಣದಿಂದಾಗಿ ತೀರಾ ಕೆಟ್ಟ ಸ್ಥಿತಿಗೆ ಕುಸಿಯಿತು. ತೀರಾ ನೀರಸವಾದ ಬಜೆಟ್ ಮಂಡನೆ ಆದಾಗಲೂ ಅದನ್ನು ಹಾಡಿಹೊಗಳುವ ನಮ್ಮ ಕೆಲವು ಉದ್ಯಮಗಳ ನಾಯಕರು ಯಾವಾಗಲೂ ಮಾತನಾಡುವ ಸಂಗತಿಗಳ ಬಗ್ಗೆಯೇ ಮಾತನಾಡುತ್ತಾರೆ. ಸಾಲ ಸಿಗುತ್ತಿಲ್ಲದಿರುವುದು, ಬೇಡಿಕೆಯನ್ನು ಹೆಚ್ಚಿಸಬೇಕಿರುವುದು, ತೆರಿಗೆ ಭಯೋತ್ಪಾದನೆ, ಜಿಎಸ್‌ಟಿ ವ್ಯವಸ್ಥೆಯನ್ನು ಸರಳೀಕರಿಸುವುದು, ಹಣಕಾಸಿನ ನೀತಿಗಳು, ವಿತ್ತೀಯ ಕೊರತೆ ಇತ್ಯಾದಿ ಸಂಗತಿಗಳ ಬಗ್ಗೆ ಅವರು ಮಾತನಾಡುತ್ತಾರೆ.
ಪ್ರಧಾನಿಯವರ ಹಲವು ಸಭೆಗಳಲ್ಲಿ ಹೇಳದೇ ಇದ್ದ ಸಂಗತಿಯು ಸಭೆಗಳಲ್ಲಿ ಹೇಳಿದ ವಿಚಾರಗಳಿಗಿಂತ ಹೆಚ್ಚು ಮಹತ್ವದ್ದಾಗಿತ್ತು – ಅದು, ಸರ್ಕಾರ ಹಾಗೂ ಸಮಾಜದ ಹಲವು ವರ್ಗಗಳ ನಡುವೆ ಉಂಟಾಗಿರುವ ವಿಶ್ವಾಸದ ಕೊರತೆಯನ್ನು ಸರಿಪಡಿಸುವುದು. ಇಂದಿನ ಬಲಪಂಥೀಯ ರಾಜಕಾರಣವು ಕೋಮು ಸೌಹಾರ್ದವನ್ನು ಮತ್ತೆ ಮತ್ತೆ ಕದಡುತ್ತಿದೆ ಎಂಬುದನ್ನು ಮೋದಿ ಅವರಿಗೆ ಹೇಳಬೇಕಿತ್ತು. ಹಣಕಾಸು ಅಥವಾ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಅದು ಉದ್ಯಮಗಳ ಮೇಲೆ ಬೀರುವ ಪ್ರಭಾವ ಮಾತ್ರವಲ್ಲದೆ, ಬೀದಿ ಬದಿಯ ಸಣ್ಣ ವ್ಯಾಪಾರಿ, ಢಾಬಾ, ರೆಸ್ಟಾರೆಂಟ್, ಟ್ಯಾಕ್ಸಿ ಮತ್ತು ಟ್ರಕ್ ಚಾಲಕ, ಅಡುಗೆಯವ... ಇಂಥವರ ಮೇಲೆ ಬೀರುವ ಪ್ರಭಾವವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು ಎಂಬುದನ್ನು ಹೇಳಬೇಕಿತ್ತು.
ಎಡಪಂಥದಲ್ಲಿ ಗುರುತಿಸಿಕೊಂಡಿರುವ, ಅತಿರೇಕದ ವರ್ತನೆ ತೋರುವ ಕೆಲವು ಸಂಘಟನೆಗಳು ಯಾವ ತಪ್ಪನ್ನೂ ಮಾಡುತ್ತಿಲ್ಲ ಎನ್ನಲು ಈ ಮಾತು ಹೇಳುತ್ತಿಲ್ಲ. ಆದರೆ, ಒಕ್ಕೂಟ ಸರ್ಕಾರವು ದೇಶದ ರಾಜಕೀಯ ಹಾಗೂ ಸಾಮಾಜಿಕ ಬದುಕಿನಲ್ಲಿ ಇರುವ ಎಡ–ಬಲ ಪಂಥೀಯ ಮತೀಯವಾದಿ, ಮೂಲಭೂತವಾದಿ ಸಂಘಟನೆಗಳ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು, ತ್ವರಿತವಾಗಿ ಮತ್ತು ನ್ಯಾಯಸಮ್ಮತವಾಗಿ ಅವುಗಳ ವಿರುದ್ಧ ಕ್ರಮ ಜರುಗಿಸಬೇಕು ಎನ್ನಲು ಈ ಮಾತು ಹೇಳಿದ್ದೇನೆ. ಇಷ್ಟೇ ಅಲ್ಲ, ಸರ್ಕಾರದ ಹೊಗಳುಭಟರ ವರ್ಗ ಹಾಗೂ ಸರ್ಕಾರದ ವಿರೋಧಿಗಳ ನಡುವಿನ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕು ಸಹ.
ಉದ್ಯಮದ ಪ್ರತಿನಿಧಿಗಳು ಮುಕ್ತವಾಗಿ ಮಾತನಾಡಬೇಕಿದ್ದ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾದರು. ಅರ್ಥ ವ್ಯವಸ್ಥೆಯು ಮತ್ತೆ ಹಳಿಗೆ ಬರಬೇಕು ಎಂದಾದರೆ ಶಾಂತಿ ಮತ್ತು ಸ್ಥಿರತೆ ಮೂಲಭೂತ ಅಗತ್ಯಗಳು ಎಂಬ ಸರಳ ಮಾತನ್ನು ದೇಶದ ಉದ್ಯಮ ವಲಯವು ಪ್ರಧಾನಿಯವರಿಗೆ ಹೇಳಬೇಕಿತ್ತು.
ಕೆಲವು ಕಂಪನಿಗಳ ಷೇರು ಮೌಲ್ಯವು ಹೆಚ್ಚಾಗುವಂತೆ ಮಾಡಿ, ಆ ಮೂಲಕ ಮಾರುಕಟ್ಟೆಯ ಸೂಚ್ಯಂಕಗಳು ಏರಿಕೆಯಲ್ಲಿ ಇರುವಂತೆ ಮಾಡಿ ಅರ್ಥ ವ್ಯವಸ್ಥೆಯ ಸಮಸ್ಯೆಗಳನ್ನು ಸರಿಪಡಿಸಲು ಆಗುವುದಿಲ್ಲ. ಬೇರೆ ಯಾವ ಸಂಗತಿಗಳೂ ತನಗೆ ಗೊತ್ತಿಲ್ಲ ಎಂಬಂತೆ ವರ್ತಿಸುವ, ಕೆಲವು ಪ್ರಯೋಜನಗಳಿಗೆ ಮಾತ್ರ ಒತ್ತಾಯಿಸುವ ಧೋರಣೆಯನ್ನು ದೇಶದ ಉದ್ಯಮ ವಲಯ ಕೈಬಿಡಬೇಕು. ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲಿ ಎಮರ್ಸನ್, ‘ಶಾಂತಿ ಇರುವಲ್ಲಿ ಬೆಳೆಯುವ ಗಿಡ ವಾಣಿಜ್ಯ ವಹಿವಾಟು. ಇದು ಶಾಂತಿ ಸೃಷ್ಟಿಯಾದ ತಕ್ಷಣ ಬೆಳೆಯುತ್ತದೆ, ಶಾಂತಿ ಇರುವಷ್ಟು ಕಾಲ ಬೆಳೆಯುತ್ತ ಇರುತ್ತದೆ’ ಎಂದು ಹೇಳಿದ್ದ.
ಅಸಮಾನತೆಯು ವ್ಯಾಪಕವಾಗಿ ವಿಸ್ತರಿಸಿ ಬಹುಕಾಲ ಉಳಿದುಕೊಂಡರೆ, ಸಮಾಜದಲ್ಲಿ ಸಂಘರ್ಷವು ನಿರಂತರವಾಗಿ ಇದ್ದರೆ ವಾಣಿಜ್ಯ ವಹಿವಾಟುಗಳು ಹೆಚ್ಚು ಕಾಲ ಸಮೃದ್ಧಿಯಾಗಿ ನಡೆಯಲು ಸಾಧ್ಯವಿಲ್ಲ. ವರ್ಗ, ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷವು ಅರ್ಥ ವ್ಯವಸ್ಥೆ ಕುಸಿಯುವಂತೆ ಮಾಡುತ್ತದೆ. ಒಂದು ದೊಡ್ಡ ಹಡಗು ಮುಳುಗಿದರೆ ಅದರಲ್ಲಿ ಇರುವ ಎಲ್ಲರೂ ಮುಳುಗುತ್ತಾರೆ.
ದೇಶದಲ್ಲಿ ಉದಾರವಾದಿ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ರಾಜಕಾರಣಿಗಳಿಗಿಂತಲೂ ಹೆಚ್ಚಾಗಿ ಉದ್ಯಮ ವಲಯದ ಕೆಲವು ದೈತ್ಯರೇ ದೊಡ್ಡ ಅಪಾಯ. ಏಕೆಂದರೆ, ಅವರಿಗೆ ಸ್ಪರ್ಧೆ ಇರುವುದು ಇಷ್ಟವಿಲ್ಲ. ಲೈಸೆನ್ಸ್ ರಾಜ್ ವ್ಯವಸ್ಥೆ ಅವರಿಗೆ ಮತ್ತೆ ಬೇಕು. ಉದ್ಯಮ ಜಗತ್ತಿನಲ್ಲಿ ಎತ್ತರಕ್ಕೆ ಏರಿದ ನಂತರ ಅವರು ತಾವು ಈ ಹಂತಕ್ಕೆ ಬಂದಿದ್ದಕ್ಕೆ ಕಾರಣ ಸುಧಾರಣೆಗಳು ಎಂಬುದನ್ನೇ ಮರೆತುಬಿಡುತ್ತಾರೆ. ಖಾಸಗೀಕರಣ ಬೇಕು ಎನ್ನುತ್ತಲೇ, ಏಕಸ್ವಾಮ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಬೇಕು.
ನಿಯಮಗಳಿಗೆ ವಿಶೇಷ ವಿನಾಯಿತಿ ಕೋರಲು, ಸ್ಪರ್ಧೆಯಲ್ಲಿ ಬೇರೊಬ್ಬರಿಗಿಂತ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಮರೆಯಲ್ಲಿ ಲಾಬಿ ನಡೆಸುತ್ತಿರುವ ಉದ್ದಿಮೆಗಳು ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಕರೆಗೆ ವಿರುದ್ಧವಾಗಿವೆ. ಅಲ್ಲದೆ, ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಆಕರ್ಷಿಸುವ, ವಾಣಿಜ್ಯೋದ್ಯಮ ನಡೆಸುವ ಪ್ರಕ್ರಿಯೆ ಸುಲಲಿತವಾಗಬೇಕು ಎಂದು ಮೋದಿ ಅವರು ಹೊಂದಿರುವ ಬಯಕೆಗೆ ಕೂಡ ಇವರ ನಡೆಗಳು ಪೂರಕವಾಗಿ ಇಲ್ಲ.
ಭಾರತದ ಬೆಳವಣಿಗೆಯ ಯಶೋಗಾಥೆಯಿಂದ ಆಕರ್ಷಿತರಾಗಿ ಹೂಡಿಕೆದಾರರು ಭಾರತಕ್ಕೆ ಬರುತ್ತಾರೆ. ಪ್ರಧಾನಿಯವರು, ರಾಜ್ಯಗಳ ನಾಯಕರು ವಿದೇಶಗಳಿಗೆ ಹೋದಾಗ ಅವರ ಮಾತುಗಳಿಂದ ಆಕರ್ಷಿತರಾಗಿಯೂಬರುತ್ತಾರೆ. ಆದರೆ, ಒಮ್ಮೆ ಹೂಡಿಕೆ ಮಾಡಿದ ನಂತರದಲ್ಲಿ, ಇಲ್ಲಿ ಸ್ಥಳೀಯ ಉದ್ಯಮ ಪ್ರಮುಖರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಮನಸ್ಸಿಗೆ ಬಂದಂತೆ ಬದಲಾಯಿಸಲಾಗುತ್ತದೆ, ತಮಗೆ (ವಿದೇಶಿ ಹೂಡಿಕೆದಾರರಿಗೆ) ಇಲ್ಲಿ ಬೆಳೆಯಲು ಅನುಕೂಲ ಕಲ್ಪಿಸುವುದಿಲ್ಲ ಎಂಬುದು ಗೊತ್ತಾದರೆ ಭವಿಷ್ಯದಲ್ಲಿ ಹೂಡಿಕೆಗಳು ಬರುವುದಿಲ್ಲ.
ಭಾರತದಲ್ಲಿ ವಹಿವಾಟು ನಡೆಸುವುದಕ್ಕೂ, ಭಾರತದಲ್ಲಿ ಪರಿಚಯ ಯಾರದ್ದಿದೆ ಎಂಬುದಕ್ಕೂ ಸಂಬಂಧ ಇದೆ ಎಂದು ವಿದೇಶಿ ಕಂಪನಿಗಳಿಗೆ ಅನ್ನಿಸುತ್ತಿದೆ. ಸರ್ಕಾರಗಳು ತಾವು ನೀಡಿದ್ದ ಭರವಸೆಯನ್ನು ಮರೆತು, ಇತರ ಎಲ್ಲರಿಗಿಂತಲೂ ಕೆಲವು ಉದ್ದಿಮೆಗಳಿಗೆ ಮಾತ್ರ ಆದ್ಯತೆ ನೀಡಿದರೆ ಅರ್ಥ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ನಮ್ಮ ದೇಶದಿಂದ ಆಗುವ ರಫ್ತುಗಳ ಮೇಲೆ, ನಮ್ಮ ದೇಶದ ಉದ್ಯಮಿಗಳು ವಿದೇಶಗಳಲ್ಲಿ ಮಾಡುವ ಹೂಡಿಕೆಗಳ ಮೇಲೆ ಪ್ರತೀಕಾರದ ಕ್ರಮವೂ ಎದುರಾಗುತ್ತದೆ.
ಸದ್ಯದ ಸಂದರ್ಭದಲ್ಲಿ ಧ್ರುವೀಕೃತಗೊಂಡಿರುವ ದೇಶವನ್ನು ಒಗ್ಗೂಡಿಸಲು ಮೋದಿ ಅವರು ತಮಗೆ ದೊರೆತಿರುವ ಜನಾದೇಶ, ಪಕ್ಷದಲ್ಲಿ ತಮಗೆ ಇರುವ ಅಧಿಕಾರದ ಬಲದಿಂದ ಮುಂದಾಗಬೇಕು. ಮೋದಿ ಅವರು ಭರವಸೆಯನ್ನು ಮತ್ತೆ ಉದ್ದೀಪಿಸಬೇಕು. ಈಗಿನ ಸಂದರ್ಭವು ಎಷ್ಟೇ ಕಷ್ಟಕರವಾಗಿ ಇದ್ದರೂ ಪರಿಸ್ಥಿತಿ ಸರಿಯಾಗುತ್ತದೆ ಎಂದು ಆಶಿಸೋಣ. ಭವಿಷ್ಯದ ಬಗ್ಗೆ ಆಶಾಭಾವ ಹೊಂದಬಹುದು ಎಂದು ಆಶಿಸೋಣ. ಯಾವುದೇ ಅರ್ಥ ವ್ಯವಸ್ಥೆಯ ಪಾಲಿನ ಅಗೋಚರ ಇಂಧನವಾಗಿರುವ ‘ಭರವಸೆ’ಯು ಸಮುದಾಯದ ತಳಮಟ್ಟದಲ್ಲಿ ಈಗ ಕಾಣಿಸುತ್ತಿಲ್ಲ.
ಉದ್ದೇಶಗಳು ಎಷ್ಟೇ ಒಳ್ಳೆಯದಾಗಿದ್ದರೂ ಸಾಮಾಜಿಕ ಸಂಘರ್ಷ ನಿರಂತರವಾಗಿದ್ದರೆ ಯಾವ ಉದ್ಯಮವೂ ಬೆಳೆಯಲಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.