ADVERTISEMENT

ವಿಶ್ಲೇಷಣೆ | ಪೊರೆವ ದಾದಿಯೂ ಸಲಹುವ ತಾಯಿಯೂ

ಆರೈಕೆಯ ಸಾಕಾರಮೂರ್ತಿಗಳಾದ ಈ ಇಬ್ಬರನ್ನೂ ಆಸ್ಥೆಯಿಂದ ನೆನೆಯಬೇಕಾದ ಹೊತ್ತಿದು

ಡಾ.ಕೆ.ಎಸ್.ಪವಿತ್ರ
Published 10 ಮೇ 2024, 23:22 IST
Last Updated 10 ಮೇ 2024, 23:22 IST
   

ಅದೊಂದು ಆಶುಭಾಷಣ ಸ್ಪರ್ಧೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಸಂಘ ಆಯೋಜಿಸಿದ್ದ ಆಶುಭಾಷಣ ಸ್ಪರ್ಧೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಬಂದ ವಿಷಯ ‘ದೇವರು ಹೆಣ್ಣೇ, ಗಂಡೇ?!’ ಆ ವಿದ್ಯಾರ್ಥಿ ಮಾತನಾಡಿದ್ದು ಹೀಗೆ: ‘ರೋಗಿಗಳಿಗೆ ಶುಶ್ರೂಷೆ ಮಾಡುವ ದಾದಿಯರನ್ನೂ ಮಕ್ಕಳಿಗೆ ಆರೈಕೆ ಮಾಡುವ ಅಮ್ಮನನ್ನೂ ನಾವು ನೋಡಿದರೆ, ದೇವರೆಂಬುದು ಹೆಣ್ಣೇ ಎಂಬುದು ನಮಗೆ ಸ್ಪಷ್ಟವಾಗುತ್ತದೆ!’ ಆ ವಿದ್ಯಾರ್ಥಿ ಹೇಳಿದ, ಆರೈಕೆಯ ಮೂರ್ತಿವೆತ್ತ ಎರಡು ಸಂಕೇತಗಳಾದ ತಾಯಿ ಮತ್ತು ದಾದಿ ಇಬ್ಬರನ್ನೂ ನೆನೆಸಿಕೊಳ್ಳುವ ಸಂದರ್ಭ ಒಂದೇ ದಿನ (ಮೇ 12) ಬಂದಿರುವುದು ಈ ಬಾರಿಯ ವಿಶೇಷ!

ನಾವೆಲ್ಲರೂ ವಿವಿಧ ಕಾಯಿಲೆಗಳಿಂದ ನರಳುತ್ತೇವೆ. ಪರಿಣತ ವೈದ್ಯರ ಚಿಕಿತ್ಸೆ ಹಾಗೂ ಕೈಗುಣದಿಂದ ಗುಣಮುಖರಾದೆವು ಎಂದುಕೊಳ್ಳುತ್ತೇವೆ. ನಮ್ಮ ಗುಣವಾಗುವಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಇಂತಹ ‘ವೈದ್ಯರಿಂದ’ ನಾವು ಆರಾಮ ಆಗುವಂತೆ ಆಯಿತು ಎಂದು ಹೇಳುತ್ತೇವೆ. ಆದರೆ ದಾದಿಯರ ಬಗ್ಗೆ?! ಶುಶ್ರೂಷೆಯ ನಂತರ ನೆನಪಿಸಿಕೊಳ್ಳದ, ಆದರೆ ಶುಶ್ರೂಷೆಯ ಸಮಯದಲ್ಲಿ ಅಪಾರ ಸಾಂತ್ವನವೀಯುವ ವ್ಯಕ್ತಿ ಮಾತ್ರ ವೈದ್ಯರ ಹಿಂದೆಯೇ ಇರುವ ದಾದಿ. ಆರೈಕೆ ಮಾಡುವಲ್ಲಿ ಕೈ ಮುಂದು ಎಂಬ ಕಾರಣಕ್ಕೆ ನರ್ಸಿಂಗ್ ವೃತ್ತಿಯಲ್ಲಿ ಇಂದಿಗೂ ಮಹಿಳೆಯರದೇ ಮೇಲುಗೈ.

ಆರೈಕೆಯೊಂದೇ ಚಿಕಿತ್ಸೆಯಾಗಿರುವ ಇಳಿವಯಸ್ಸಿನ ಕಾಯಿಲೆಗಳಲ್ಲಿ ಇಂದು ದಾದಿಯರ ಕೆಲಸ ನಾವು ಗಮನಿಸ ಲೇಬೇಕಾದಷ್ಟು ಮುಖ್ಯವಾಗಿಬಿಟ್ಟಿದೆ. ದಾದಿಯರ ಸಂಘ ಟನೆ ಗಟ್ಟಿಯಾಗಿಯೇ ಬೆಳೆದುನಿಂತಿದೆ. ಪ್ರತಿವರ್ಷ ಮೇ 12ರಂದು ಅಂತರರಾಷ್ಟ್ರೀಯ ದಾದಿಯರ ದಿನವನ್ನು ಅಂತರರಾಷ್ಟ್ರೀಯ ದಾದಿಯರ ಪರಿಷತ್ತು ಆಚರಿಸುತ್ತಾ ಬಂದಿದೆ.

ADVERTISEMENT

ಈ ಬಾರಿ ದಾದಿಯರ ದಿನದ ಧ್ಯೇಯವಾಕ್ಯ ‘ಅವರ್‌ ನರ್ಸಸ್‌, ಅವರ್‌ ಫ್ಯೂಚರ್‌, ದಿ ಎಕನಾಮಿಕ್‌ ಪವರ್‌ ಆಫ್‌ ಕೇರ್‌’ (ನಮ್ಮ ದಾದಿಯರು, ನಮ್ಮ ಭವಿಷ್ಯ, ಆರೈಕೆಯ ಆರ್ಥಿಕ ಬಲ). ದಾದಿಯರ ಪರಿಷತ್ತು ಇಡೀ ಜಗತ್ತಿನ 2.8 ಕೋಟಿ ದಾದಿಯರ ಆಶೋತ್ತರಗಳನ್ನು ಪ್ರತಿ ನಿಧಿಸುತ್ತದೆ ಎನ್ನುವುದು ಗಮನಾರ್ಹ ಸಂಗತಿ.

ಆರ್ಥಿಕತೆಗೂ ಆರೈಕೆಗೂ ಸಂಬಂಧ ಇದೆಯೇ?! ಹೌದು, ಆರ್ಥಿಕತೆಗೂ ಅರೋಗ್ಯಕ್ಕೂ ಆರೈಕೆಗೂ ನಿಕಟವಾದ ಸಂಬಂಧ ಇದೆ. ಆರ್ಥಿಕ ಬಿಕ್ಕಟ್ಟು ಉದ್ಭವಿಸಿದ ಕಾರಣದಿಂದ ಖರ್ಚಿನಲ್ಲಿ ಕಡಿತ ಮಾಡುವ ತುರ್ತು ಎದುರಾದಾಗಲೆಲ್ಲ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸರ್ಕಾರ ತೆಗೆದಿರಿಸುವ ಮೊತ್ತ ಇಳಿಕೆಯಾಗುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಮೊತ್ತದಲ್ಲಿನ ಕಡಿತದಿಂದ ದೊಡ್ಡ ಪೆಟ್ಟು ಬೀಳುವುದು ನರ್ಸಿಂಗ್ ಕ್ಷೇತ್ರಕ್ಕೆ. ಕಡಿಮೆ ಮಾನವ ಸಂಪನ್ಮೂಲ, ಕಡಿಮೆ ಸೌಲಭ್ಯಗಳ ನಡುವೆಯೇ ತಮ್ಮ ಮಾನವೀಯ ಮುಖವನ್ನು ಕಳೆದುಕೊಳ್ಳದೆ ಶುಶ್ರೂಷಕರು ನಿರಂತರವಾಗಿ ಕೆಲಸ ಮಾಡುತ್ತಲೇ ಸಾಗಬೇಕಾಗುತ್ತದೆ.

ವೃದ್ಧಾಪ್ಯದ ಆರೈಕೆಯ ಅಗತ್ಯ ಇರುವ ಮನೆಗಳು, ಯುದ್ಧದ ಸ್ಥಳಗಳು, ಜೈಲುಗಳು ಮತ್ತು ಆಸ್ಪತ್ರೆಗಳು ಶುಶ್ರೂಷಕಿಯರ ಅಗತ್ಯವನ್ನು ಎತ್ತಿ ತೋರುವ ನಾಲ್ಕು ತಾಣಗಳು. ಎಲ್ಲವೂ ಜನರು ಸಾವನ್ನು ನಿರೀಕ್ಷಿಸ
ಬಹುದಾದ ತಾಣಗಳೇ. ರೋಗಿಗಳು ಹಾಗೂ ಅವರ ಆತ್ಮೀಯರ ನೋವು, ಆತಂಕ, ನರಳುವಿಕೆಯನ್ನು ಹತ್ತಿರದಿಂದ ನೋಡುವ, ಅವರೊಂದಿಗೆ ವೈದ್ಯರಿಗಿಂತ ಹೆಚ್ಚು ಹೊತ್ತು ಕಳೆಯುವ ದಾದಿಯರಿಗೆ ಸಾವು ನೋವನ್ನು ನಿಭಾಯಿಸುವ ಸಾಮರ್ಥ್ಯವೂ ಹೆಚ್ಚೇ.

ದೊಡ್ಡ ಆಸ್ಪತ್ರೆಗಳಲ್ಲಿರುವ ಹಿರಿಯ ಮೇಟ್ರನ್‍ಗಳು ರೋಗಿಗಳ, ಅವರ ಮನೆಯವರ ನೋವು, ದೂರುಗಳನ್ನು ಕೇಳುವ ರೀತಿ, ಅವರನ್ನು ಸಮಾಧಾನಪಡಿಸುವ ವಿಧಾನ, ಜೋರು ಮಾಡಿ, ಅನುನಯಿಸಿ ಊಟ-ತಿಂಡಿ, ಔಷಧಿಗಳನ್ನು ಅವರು ತೆಗೆದುಕೊಳ್ಳುವಂತೆ ಮಾಡುವ ಸಾಮರ್ಥ್ಯವು ವೈದ್ಯಕೀಯ ಜಗತ್ತಿನಲ್ಲಿ ವೈದ್ಯರ ತಂಡ ಸದಾ ಆಶಿಸುವ ಬಹುದೊಡ್ಡ ಬೆಂಬಲ.

ನಮ್ಮ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಾವು ಒಂದು ಸಂಕೀರ್ಣ ಕಾಲಘಟ್ಟದಲ್ಲಿ ಇದ್ದೇವೆ. ದೀರ್ಘಾಯುಷ್ಯದ ಹಂಬಲದಲ್ಲಿ ಹೇಗಾದರೂ ಜೀವ ಉಳಿಸಿಕೊಳ್ಳುವ, ನಮ್ಮ ಆತ್ಮೀಯರನ್ನು ಹೇಗಾದರೂ ಬದುಕಿಸಿಕೊಳ್ಳಲು ಹಾತೊರೆಯುವ ನಮಗೆ, ಜೀವನದ ಗುಣಮಟ್ಟದ ಬಗೆಗೆ ದೂರದೃಷ್ಟಿಯಿಲ್ಲ. ತಂತ್ರಜ್ಞಾನ- ಆಧುನಿಕ ಯಂತ್ರಜ್ಞಾನ ಒಂದೆಡೆ ಜೀವ ಉಳಿಸುವುದ ರೊಂದಿಗೆ, ಮತ್ತೊಂದೆಡೆ, ನೋವು-ಸಾವಿನ ಪ್ರಕ್ರಿಯೆ ಗಳನ್ನು ದೀರ್ಘವಾಗಿಸಲು ಸಹ ಬಲ್ಲವು. ಇಂತಹ ಸಂದರ್ಭದಲ್ಲಿ ರೋಗಿಯ ಹಾಸಿಗೆಯ ಪಕ್ಕದಲ್ಲಿ ನಿಂತು, ತಮ್ಮ ಜ್ಞಾನವನ್ನು ಬಳಸಿ ದಾದಿಯರು ನಮಗೆ ನೀಡಬಹುದಾದ ಪಾಠಗಳು ಒಂದೆರಡಲ್ಲ. ರೋಗಿಯೊಂದಿಗೆ ಹೇಗೆ ಮಾತನಾಡಬೇಕು, ಸಾಯುವ ಸಮಯದಲ್ಲಿ ಅವರಿಗೆ ಏನು ಹೇಳಬೇಕು, ಆತ್ಮೀಯರಿಗೆ ಯಾವಾಗ ನಿದ್ರೆ ಮಾಡುವಂತೆ ಹೇಳಬಹುದು ಇವೆಲ್ಲ ಶುಶ್ರೂಷಕಿಯರು ತಮ್ಮ ಅನುಭವದಿಂದ ಕಂಡುಕೊಳ್ಳುವ ಅಂಶಗಳು.

ಜಾಗತಿಕವಾಗಿ ಆರೋಗ್ಯ ಸೇವೆಗಳಲ್ಲಿ ಆರೈಕೆದಾರರ ಕೊರತೆಯು 2030ರ ವೇಳೆಗೆ ವಿಪರೀತ ಎನ್ನುವ ಮಟ್ಟಕ್ಕೆ ಏರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಇದರಲ್ಲಿ ದಾದಿಯರು ಹಾಗೂ ಶುಶ್ರೂಷಕರ ಕೊರತೆಯೇ ಅಧಿಕ. ಅನುಭವಿ ಶುಶ್ರೂಷಕರು ನಿವೃತ್ತಿ ಹೊಂದುವುದು, ಹೊಸ-ವೃತ್ತಿಪರ ತರಬೇತಿ ಹೊಂದಿದ ಶುಶ್ರೂಷಕರು ವಿವಿಧ ಕಾರಣಗಳಿಂದ ಕ್ಷೇತ್ರದಲ್ಲಿ ಉಳಿಯದಿರುವುದು, ಆರೈಕೆ ಮಾಡುವ ಕಷ್ಟಕ್ಕೆ ಹೆದರಿ ಹೆಚ್ಚು ಜನ ನರ್ಸಿಂಗ್ ಕ್ಷೇತ್ರವನ್ನು ಆರಿಸಿಕೊಳ್ಳದಿರುವುದು ಅದಕ್ಕೆ ಕಾರಣಗಳು.

ಶುಶ್ರೂಷಕರ ಕಾರ್ಯವೈಖರಿಗೆ ಅನುಗುಣವಾಗಿ, ಅವರ ಮೇಲೆ ಇರುವ ಮಾನಸಿಕ, ದೈಹಿಕ ಒತ್ತಡ
ಗಳೆರಡೂ ಗಣನೀಯವಾಗಿ ಹೆಚ್ಚು ಎಂದು ಅಧ್ಯಯನಗಳು ನಿರೂಪಿಸಿವೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ನರ್ಸಿಂಗ್ ಕ್ಷೇತ್ರದಲ್ಲಿ ರಾತ್ರಿ ಪಾಳಿ, ಕೌಟುಂಬಿಕ ಜೀವನವನ್ನು ಜೊತೆಜೊತೆಗೆ ನಿರ್ವಹಿಸಬೇಕಾದ ಹೊಣೆಯು ನರ್ಸಿಂಗ್ ತರಬೇತಿಯನ್ನು ಪಡೆದಿರುವುದರ ನಡುವೆಯೂ ಬಹಳಷ್ಟು ಮಹಿಳೆಯರಿಗೆ ಅದನ್ನು ವೃತ್ತಿಯಾಗಿ ಮುಂದುವರಿಸಲು ಅಡ್ಡಿಗಳಾಗುತ್ತವೆ ಎನ್ನುವುದು ಗಮನಾರ್ಹ.

ಭಾವನಾತ್ಮಕ ದಣಿವು, ಆರೈಕೆ ಮಾಡುವಾಗಿನ ಆಯಾಸವನ್ನು ಶುಶ್ರೂಷಕಿಯರು ತಮ್ಮ ವೃತ್ತಿಯ ಭಾಗವಾಗಿ ಅನುಭವಿಸುವುದು ಸಹಜವೇ ಆಗಿರಬಹುದು. ಆದರೂ ಅದು ಅವರ ವೈಯಕ್ತಿಕ ಜೀವನಕ್ಕೆ, ಕ್ರಮೇಣ ಆರೈಕೆ ಮಾಡುವ ಅವರ ವೃತ್ತಿಪರತೆಯ ಗುಣಮಟ್ಟದ ಇಳಿಕೆಗೆ ದಾರಿಯಾಗಬಹುದು. ದಿನನಿತ್ಯ ಭಯ, ಕೋಪ, ಶೋಕವನ್ನು ವೃತ್ತಿ ಬದುಕಿನಲ್ಲಿ ಹತ್ತಿರದಿಂದ ನೋಡುವ ಮನಸ್ಸು ಕ್ರಮೇಣ ಅವುಗಳನ್ನು ನಿಭಾಯಿಸಲು ಕರುಣೆ, ಆತ್ಮವಿಶ್ವಾಸ, ವೃತ್ತಿಪರತೆಯ ಮುಖವಾಡಗಳನ್ನು ‘ಮಾಸ್ಕ್’ನಂತೆ ಮತ್ತೆ ಮತ್ತೆ ಧರಿಸಬೇಕಾಗಬಹುದು. ಸಹಜವಾಗಿ ಇದು ಮನಸ್ಸನ್ನು ನಿರ್ಲಿಪ್ತ, ನಿರ್ವಿಕಾರ ಸ್ಥಿತಿಯತ್ತ ತಳ್ಳಿ ಅನಾರೋಗ್ಯದತ್ತ ಸಾಗುವಂತೆ ಮಾಡಬಹುದು.

ಸಾಮಾನ್ಯವಾಗಿ ದೈಹಿಕ ಆರೋಗ್ಯ, ಸೋಂಕನ್ನು ನಿರ್ವಹಿಸುವ ಬಗೆ, ಸೋಂಕು ತಗುಲದಂತೆ ಎಚ್ಚರ ವಹಿಸುವುದರ ಕುರಿತು ನರ್ಸಿಂಗ್ ತರಬೇತಿಯಲ್ಲಿ ಮತ್ತೆ ಮತ್ತೆ ಹೇಳಲಾಗುತ್ತದೆ. ಆದರೆ ಭಾವನಾತ್ಮಕ ದಣಿವು, ಭಾವನೆಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ನೀಡುವುದು ಅಪರೂಪವೇ!

ಆರೈಕೆ ಮಾಡುವ ದಾದಿಯರ ಕೆಲಸಕ್ಕೆ ಗೌರವ ಮತ್ತು ಸರಿಯಾದ ಆರ್ಥಿಕ ಮನ್ನಣೆ ಎರಡೂ ಅಗತ್ಯ. ದಾದಿಯು ತಾಯಿಯ ರೂಪ ತಾಳುವುದೂ ತಾಯಿಯು ದಾದಿಯ ಪಾತ್ರ ನಿರ್ವಹಿಸುವುದೂ ಮತ್ತೆ ಮತ್ತೆ ನಾವು ಕಾಣುವ ಸಂಗತಿಗಳಷ್ಟೆ. ಮಗುವಿಗೆ ಜ್ವರ ಬಂದಾಗ ರಾತ್ರಿಯಿಡೀ ಎಚ್ಚರವಿದ್ದು ಮಗುವಿನ ಆರೈಕೆ ಮಾಡುವ ತಾಯಿ, ಇಡೀ ವಾರ್ಡು ಮಲಗಿರುವಾಗ ಕಿರುದೀಪದ ಬೆಳಕಿನಲ್ಲಿ ಕಾಣುವ ದಾದಿ ಎರಡೂ ಮನಸ್ಸಿಗೆ ಸಾಂತ್ವನ, ಸುರಕ್ಷತೆಯ ಭಾವ ನೀಡುವ ಮುಖಗಳೇ!

ಇಬ್ಬರನ್ನೂ ನೆನೆದು, ಮಾನವೀಯತೆಯ ಪಾಠವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದದ್ದು ಈ ಹೊತ್ತಿನ ಆರೋಗ್ಯದ ಅಗತ್ಯ.

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.