ADVERTISEMENT

ವಿಶ್ಲೇಷಣೆ: ಅರಣ್ಯ ಸಂರಕ್ಷಣೆಗೆ ತಿದ್ದುಪಡಿಯ ಕಂಟಕ

ತಿದ್ದುಪಡಿಯಲ್ಲಿನ ಕುಂದುಕೊರತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ

ಎಚ್.ಆರ್.ಕೃಷ್ಣಮೂರ್ತಿ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
   

ಕೃಷಿ ವಿಸ್ತರಣೆ, ನೀರಾವರಿ, ಅಣೆಕಟ್ಟುಗಳ ನಿರ್ಮಾಣ, ಗಣಿಗಾರಿಕೆ, ನಗರೀಕರಣ, ರೈಲು-ರಸ್ತೆಯಂತಹ ಮೂಲ ಸೌಕರ್ಯದ ಯೋಜನೆಯಂತಹವುಗಳಿಗಾಗಿ ಅರಣ್ಯಗಳು ನಾಶವಾಗುತ್ತಿರುವುದು ಹೊಸ ವಿಷಯವೇನಲ್ಲ. ಇದೀಗ ಈ ಪಟ್ಟಿಗೆ ವಾಯುಗುಣ ಬದಲಾವಣೆಯೂ ಸೇರಿದೆ.

ಅಭಿವೃದ್ಧಿ ಯೋಜನೆಗಳ ಸಲುವಾಗಿ ಸ್ವಲ್ಪಮಟ್ಟಿಗಿನ ಅರಣ್ಯ ನಾಶ ಅನಿವಾರ್ಯ. ಆದರೆ ದೂರದೃಷ್ಟಿ ರಹಿತವಾದ, ಅವೈಜ್ಞಾನಿಕವಾದ, ಪರಿಸರವನ್ನು ಹಾಳುಗೆಡವಿ, ಸಂಕಷ್ಟಗಳ ಸರಮಾಲೆಯನ್ನೇ ತರುವ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಲು ಪ್ರಯತ್ನಿಸಿದಾಗ ಪ್ರಜ್ಞಾವಂತ ನಾಗರಿಕರು, ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. 2023ರ ಅಕ್ಟೋಬರ್‌ ತಿಂಗಳಲ್ಲಿ ದೇಶದ ನಾಗರಿಕ ಸೇವೆಯ ನಿವೃತ್ತ ಅಧಿಕಾರಿಗಳು, ಅರಣ್ಯ ಸಂರಕ್ಷಣಾಸಕ್ತರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿ, 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ತಂದಿರುವ ತಿದ್ದುಪಡಿಗಳನ್ನು ಪ್ರಶ್ನಿಸಿದ್ದಾರೆ.

1980ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಅರಣ್ಯ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶವು ನಮ್ಮ ದೇಶದ ಅರಣ್ಯಗಳು ಮತ್ತು ಅವುಗಳಲ್ಲಿನ ಜೀವಿವೈವಿಧ್ಯವನ್ನು ಸಂರಕ್ಷಿಸಿ, ಅರಣ್ಯ ಭೂಮಿಯನ್ನು ಅರಣ್ಯೇತರ ವಾಣಿಜ್ಯೋದ್ದೇಶಗಳಿಗೆ ನೀಡುವುದನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಿಸುವುದು, ನಿಷೇಧಿಸುವುದು. 2021ರ ಮಾರ್ಚ್ ತಿಂಗಳಿನಲ್ಲಿ ಈ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನು ತಂದು, ಅರಣ್ಯ ಪ್ರದೇಶದಲ್ಲಿ ತೈಲ ಮತ್ತು ಅನಿಲ ನಿಕ್ಷೇಪಗಳ ಸರ್ವೇಕ್ಷಣೆ, ರೈಲ್ವೆ ಯೋಜನೆಗಳಿಗೆ ಅರಣ್ಯ ಪ್ರದೇಶದ ಬಳಕೆ, ಪರಿಸರ ಪ್ರವಾಸೋದ್ಯಮ, ನಷ್ಟಭರ್ತಿ ಅರಣ್ಯೀಕರಣದಂತಹವುಗಳಿಗೆ ಅವಕಾಶ ಕಲ್ಪಿಸಲಾಯಿತು.

ADVERTISEMENT

2023ರ ಮಾರ್ಚ್ 29ರಂದು ಕೇಂದ್ರ ಸರ್ಕಾರವು ಅರಣ್ಯ (ಸಂರಕ್ಷಣಾ) ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು. ಅರಣ್ಯ ಪ್ರದೇಶದಲ್ಲಿ ನಡೆಸಬಹುದಾದ ಕೆಲಸ, ಕಾಮಗಾರಿಗಳ ಪಟ್ಟಿಯನ್ನು ವಿಸ್ತರಿಸುವುದರೊಡನೆ ಕೆಲವು ನಿರ್ದಿಷ್ಟ ಅರಣ್ಯ ಪ್ರದೇಶಗಳನ್ನು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವುದಕ್ಕೆ ಅವಕಾಶ ಕಲ್ಪಿಸುವ ಅಂಶಗಳು ಈ ತಿದ್ದುಪಡಿ ಮಸೂದೆಯಲ್ಲಿದ್ದವು. ಯಾವುದೇ ರೀತಿಯ ಗಂಭೀರ ಚರ್ಚೆಗಳಿಲ್ಲದೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯು ಈ ಮಸೂದೆಗೆ ಒಪ್ಪಿಗೆ ನೀಡಿದವು. ರಾಷ್ಟ್ರಪತಿಯವರ ಅನುಮೋದನೆಯ ನಂತರ 2023ರ ಡಿಸೆಂಬರ್ 1ರಿಂದ ಈ ತಿದ್ದುಪಡಿಯು ಕಾಯ್ದೆಯಾಗಿ ಜಾರಿಯಾಗಬೇಕಿತ್ತು. ಆದರೆ ಅದಕ್ಕೆ ಮುನ್ನವೇ, ಈ ತಿದ್ದುಪಡಿಗಳು ಸಂವಿಧಾನ ನೀಡಿರುವ ಹಲವಾರು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂಬ ಕಾರಣ ನೀಡಿ, ನಾಗರಿಕ ಸೇವೆಯ ನಿವೃತ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು.

ಕೇಂದ್ರ ಸರ್ಕಾರ ತಂದಿರುವ ಈ ತಿದ್ದುಪಡಿಗೆ ಸಂಬಂಧಿಸಿದ ಅತಿಮುಖ್ಯ ಆಕ್ಷೇಪವೆಂದರೆ, ಅದು ‘ಅರಣ್ಯ’ದ ಅರ್ಥ ವಿವರಣೆಯನ್ನೇ ಬದಲಿಸಿ, 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಅನ್ವಯದ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ ಮತ್ತು ಬಹಳಷ್ಟು ಅರಣ್ಯ ಪ್ರದೇಶವನ್ನು ಅರಣ್ಯೇತರ ವಾಣಿಜ್ಯೋದ್ದೇಶ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸಿ, ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ ಎಂಬ ಅಂಶಗಳು. ಈ ತಿದ್ದುಪಡಿ ಅನ್ವಯ 1927ರ ‘ಇಂಡಿಯನ್ ಫಾರೆಸ್ಟ್ ಆ್ಯಕ್ಟ್’ ಅಡಿಯಲ್ಲಿ ಅಧಿಸೂಚಿಸಲಾಗಿರುವ ಅಥವಾ ಸರ್ಕಾರಿ, ರೆವಿನ್ಯೂ ದಾಖಲೆಗಳಲ್ಲಿ ನಮೂದಿಸಲಾಗಿರುವ ಅರಣ್ಯ ಪ್ರದೇಶಗಳಿಗೆ ಮಾತ್ರ ಕಾನೂನಾತ್ಮಕ ರಕ್ಷಣೆ ದೊರೆಯುತ್ತದೆ. ಆದರೆ ಅರಣ್ಯವೊಂದರ ಎಲ್ಲ ಗುಣಲಕ್ಷಣಗಳಿದ್ದರೂ ಯಾವುದೇ ಸರ್ಕಾರಿ, ರೆವಿನ್ಯೂ ದಸ್ತಾವೇಜಿನಲ್ಲಿ ದಾಖಲಾಗಿರದಿದ್ದರೆ ಅಂತಹ ‘ಡೀಮ್ಡ್ ಫಾರೆಸ್ಟ್’ ಅಥವಾ ವರ್ಗೀಕರಿಸದ (ಅನ್‍ಕ್ಲಾಸ್ಡ್) ಅರಣ್ಯಗಳಿಗೆ ಕಾನೂನಾತ್ಮಕ ರಕ್ಷಣೆ ದೊರೆಯುವುದಿಲ್ಲ. ಇಂತಹ ಅರಣ್ಯ ಭೂಮಿಯ ಒಡೆತನ ಸರ್ಕಾರದಲ್ಲಿರಬಹುದು, ಸಮುದಾಯ, ಬುಡಕಟ್ಟು ಪಂಗಡ ಅಥವಾ ವ್ಯಕ್ತಿಗಳಲ್ಲಿ ಇರಬಹುದು.

‘ಫಾರೆಸ್ಟ್ ಸರ್ವೆ ಆಫ್ ಇಂಡಿಯಾ’ದ (ಎಫ್‍ಎಸ್‍ಐ) 2021ರ ವರದಿಯಂತೆ, ನಮ್ಮ ದೇಶದ ಶೇ 28 ಭಾಗ ಈ ‘ಡೀಮ್ಡ್ ಫಾರೆಸ್ಟ್’ ಗುಂಪಿಗೆ ಸೇರಿದೆ. ತಿದ್ದುಪಡಿಯ ಪರಿಣಾಮವಾಗಿ ಅದನ್ನು ಸರ್ಕಾರ ಅರಣ್ಯೇತರ ಉದ್ದೇಶಗಳಿಗಾಗಿ ಸುಲಭವಾಗಿ ಗುತ್ತಿಗೆಗೆ ನೀಡಬಹುದು, ಪರಭಾರೆ ಮಾಡಬಹುದು ಎಂಬುದು ಪರಿಸರ ಸಂಘಟನೆಗಳ ವಾದ. ಇದರೊಂದಿಗೆ ಅಂತರರಾಷ್ಟ್ರೀಯ ಗಡಿಯಿಂದ 100 ಕಿ.ಮೀ. ಒಳಗಿನ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯ ದೃಷ್ಟಿಯಿಂದ ಅಗತ್ಯವೆನಿಸುವ ಯೋಜನೆಗಳಿಗೆ ‘ಫಾರೆಸ್ಟ್ ಅಡ್ವೈಸರಿ ಕಮಿಟಿ’ಯ ಒಪ್ಪಿಗೆಯಿಲ್ಲದೆಯೇ ನೀಡಬಹುದು. ಅರಣ್ಯ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ, ಸಫಾರಿ, ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬಹುದು ಎಂಬಂತಹ ಅಂಶಗಳಿವೆ.

ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಈ ವರ್ಷದ ಫೆಬ್ರುವರಿಯಲ್ಲಿ ಮಧ್ಯಂತರ ಆದೇಶವೊಂದನ್ನು ನೀಡಿತು. ಸರ್ಕಾರಿ ಮತ್ತು ರೆವಿನ್ಯೂ ದಸ್ತಾವೇಜುಗಳಲ್ಲಿ ದಾಖಲಾಗಿರುವ ಅರಣ್ಯಗಳು ಮಾತ್ರ ನಿಜವಾದ ಅರಣ್ಯಗಳು ಎಂಬ ಹೊಸ ವ್ಯಾಖ್ಯಾನವನ್ನು ತಿರಸ್ಕರಿಸಿದ ನ್ಯಾಯಾಲಯವು ಅಂತಿಮ ಆದೇಶ ಬರುವವರೆಗೂ, 1996ರಲ್ಲಿ ಗೋದಾವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ‘ಅರಣ್ಯ’ದ ಅರ್ಥ ವಿವರಣೆಯನ್ನೇ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕೆಂದು ಸೂಚಿಸಿತು. ಆ ಅರ್ಥವಿವರಣೆಯಲ್ಲಿ, ಅರಣ್ಯವೆಂದರೆ ನಿಘಂಟು ನೀಡುವ ಅರ್ಥ. ಅದರಂತೆ ‘ವಿಶಾಲ ಪ್ರದೇಶದಲ್ಲಿ, ಸಾಕಷ್ಟು ದಟ್ಟವಾಗಿ ಬೆಳೆದು ನಿಂತಿರುವ ಮರಗಿಡಗಳ ಮತ್ತು ಕುರುಚಲು, ಪೊದೆ, ಸಣ್ಣ ಗಿಡಗಂಟಿಗಳ ಸಮೂಹವೇ ಅರಣ್ಯ’.

ಅಲ್ಲಿ ಒಡೆತನದ ಪ್ರಶ್ನೆ ಬರುವುದಿಲ್ಲ. ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ವರ್ಗೀಕರಿಸಿರಲಿ ಅಥವಾ ಇಲ್ಲದಿರಲಿ, ಅವುಗಳಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಬೇಕೆಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಅದರೊಂದಿಗೆ ಪ್ರತಿ ರಾಜ್ಯವೂ ಪರಿಣತರ ಸಮಿತಿಯೊಂದನ್ನು ರಚಿಸಿ, ಅದರ ಮಾರ್ಗದರ್ಶನದಲ್ಲಿ ವ್ಯಾಪಕವಾದ ಸಮೀಕ್ಷೆಯನ್ನು ನಡೆಸಿ, ವರ್ಗೀಕರಿಸದ ಅರಣ್ಯಗಳ ಬಗ್ಗೆ ಸಮಸ್ತ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕೆಂಬ ಸೂಚನೆಯನ್ನೂ ನೀಡಿತ್ತು. ಆದರೆ 28 ವರ್ಷಗಳ ನಂತರವೂ ಈ ಕೆಲಸ ಮುಗಿದಿರದ ಕಾರಣ, ಈ ವರ್ಷದ ಏಪ್ರಿಲ್ 15ರ ಒಳಗೆ ಎಲ್ಲ ರಾಜ್ಯಗಳೂ ಈ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವಾಲಯದ ಜಾಲತಾಣದಲ್ಲಿ ಪ್ರಕಟಣೆಗೆ ಒದಗಿಸಬೇಕೆಂಬ ಅಂತಿಮ ಎಚ್ಚರಿಕೆ ನೀಡಿತು.

ಕೇಂದ್ರ ಪರಿಸರ ಸಚಿವಾಲಯದ ಜಾಲತಾಣದಲ್ಲಿ ಲಭ್ಯವಿರುವ ಡೀಮ್ಡ್ ಅರಣ್ಯಗಳಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಅನೇಕ ಗೊಂದಲಗಳಿವೆ. ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣತರ ಸಮಿತಿಯನ್ನೇ ರಚಿಸಿಲ್ಲ. ಬಹುತೇಕ ರಾಜ್ಯಗಳು ವರ್ಗೀಕರಿಸದ ಅರಣ್ಯಗಳಿರುವ ಭೌಗೋಳಿಕ ಪ್ರದೇಶವನ್ನು ಸ್ಪಷ್ಟವಾಗಿ ಸೂಚಿಸಿಲ್ಲ. ಕೆಲವು ರಾಜ್ಯಗಳು ಎಫ್‍ಎಸ್‍ಐ ಅಂಕಿಅಂಶಗಳನ್ನೇ ತಮ್ಮದೆಂಬಂತೆ ನೀಡಿವೆ.

ಗುಜರಾತ್‍ ನೀಡಿರುವ ಮಾಹಿತಿಯಂತೆ, ಅಲ್ಲಿನ ವರ್ಗೀಕರಿಸದ ಅರಣ್ಯಗಳ ವಿಸ್ತೀರ್ಣ 192.24 ಚದರ ಕಿ.ಮೀ.ಗಳು. ಆದರೆ ಎಫ್‍ಎಸ್‍ಐ ಮೂಲದಂತೆ ಅದು 4,577 ಚದರ ಕಿ.ಮೀ.ಗಳು. ಕರ್ನಾಟಕದಲ್ಲಿ ಇಂತಹ ಅರಣ್ಯದ ವಿಸ್ತೀರ್ಣ 6.64 ಲಕ್ಷ ಹೆಕ್ಟೇರ್‌. ರಾಜ್ಯಗಳು ಸಲ್ಲಿಸಿರುವ ವಿಶೇಷ ಪರಿಣತರ ವರದಿ ನಿಖರವಾಗಿರಬೇಕು ಮತ್ತು ತಾಳೆಹಾಕಿ ನೋಡಿದಾಗ ಆ ಮಾಹಿತಿ ವಾಸ್ತವಿಕ ಪರಿಸ್ಥಿತಿಯೊಡನೆ ಹೊಂದಿಕೊಳ್ಳಬೇಕು. ಹಾಗಾಗದ ಹೊರತು ಅವು ವಿಶ್ವಾಸಾರ್ಹವಲ್ಲ ಎಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ಅಭಿಪ್ರಾಯ. ವಿಶ್ವಾಸಾರ್ಹವಲ್ಲದ ಮಾಹಿತಿಯ ಆಧಾರದ ಮೇಲೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದರೆ ಅರಣ್ಯನಾಶ ಮತ್ತಷ್ಟು ವ್ಯಾಪಕವಾಗಲಿದೆ ಎಂಬುದು ಅರ್ಜಿದಾರರ ಖಚಿತ ನಿಲುವು.

ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ರಚಿಸಿದ ಜಂಟಿ ಸಂಸದೀಯ ಸಮಿತಿಗೆ ಸುಮಾರು 1,200 ಆಕ್ಷೇಪಗಳು, ತಕರಾರುಗಳು, ಜ್ಞಾಪನಾಪತ್ರಗಳು, ಸಲಹೆಗಳು ಬಂದಿದ್ದವೆಂಬ ಮಾಹಿತಿ ಇದೆ. ವಿಜ್ಞಾನಿಗಳು, ಪರಿಸರ ಕಾನೂನು ತಜ್ಞರು, ನಾಗರಿಕ ಸೇವೆಯ ನಿವೃತ್ತ ಅಧಿಕಾರಿಗಳು, ಪರಿಸರ ಪರ ಸಂಘಟನೆಗಳು ಈ ತಿದ್ದುಪಡಿಯಲ್ಲಿನ ಕುಂದುಕೊರತೆಗಳನ್ನು ಎತ್ತಿ ತೋರಿದರೂ ಅವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ತಜ್ಞರು, ಸಂಘಟನೆಗಳ ವಾದವನ್ನು ಒಪ್ಪದ ಸರ್ಕಾರ, 1996ರಲ್ಲಿ ಗೋದಾವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ವಿವಿಧ ಅಂಶಗಳನ್ನು ಕ್ರೋಡೀಕರಿಸಿ ಮುಂದುವರಿಯುವ ಉದ್ದೇಶದಿಂದಲೇ ಈ ತಿದ್ದುಪಡಿಗಳನ್ನು ತರಲಾಗಿದೆ ಎಂದಿದೆ. ಈ ವಾದ-ವಿವಾದಗಳ ನಡುವೆಯೇ ಸುಪ್ರೀಂ ಕೋರ್ಟ್‌ ಈ ಪ್ರಕರಣದ ತೀರ್ಪನ್ನು ಮುಂದಿನ ತಿಂಗಳು ಪ್ರಕಟಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.