ADVERTISEMENT

ವಿಶ್ಲೇಷಣೆ: ಓಝೋನ್ ಪದರಕ್ಕೆ ಬೇಕು ಕಾಯಕಲ್ಪ

ಆಮ್ಲಜನಕದ ಅಣ್ಣನಂತಿರುವ ಓಝೋನ್ ಕುರಿತ ವೈಜ್ಞಾನಿಕ ಸತ್ಯ ಅನೇಕರಿಗೆ ಗೊತ್ತಿಲ್ಲ

ಗುರುರಾಜ್ ಎಸ್.ದಾವಣಗೆರೆ
Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
   

ಮುಂಬೈ ಮೂಲದ ಎಸ್ಸೆಲ್ ಗ್ರೂಪ್ ಒಡೆತನದ ಇಂಗ್ಲಿಷ್‌ ಸುದ್ದಿವಾಹಿನಿ ‘ವರ್ಲ್ಡ್‌ ಈಸ್ ಒನ್ ನ್ಯೂಸ್’ (ಡಬ್ಲ್ಯುಐಓಎನ್‌) ಎರಡು ವರ್ಷಗಳ ಹಿಂದೆ ಸುದ್ದಿಯೊಂದನ್ನು ಬಿತ್ತರಿಸಿತ್ತು. ಅದೆಂದರೆ, ಕೊರೊನಾ ಲಾಕ್‍ಡೌನ್‍ನಿಂದ ವಿಶ್ವದ ವಿವಿಧ ಭಾಗಗಳ ವಾತಾವರಣದಲ್ಲಿ ಗಾಳಿ ತಿಳಿಯಾಗಿದೆ, ನದಿಗಳ ನೀರು ಶುದ್ಧವಾಗಿದೆ, ಮಾಲಿನ್ಯ ಕಡಿಮೆಯಾಗಿದೆ ಎಂದು ಹೇಳುತ್ತ, ಇದರಿಂದಲೇ ಆರ್ಕ್‍ಟಿಕ್ ‍ಪ್ರದೇಶದ ಮೇಲ್ಭಾಗದ ಓಝೋನ್ ಪದರದ ರಂಧ್ರ ಮುಚ್ಚಿಹೋಗಿದೆ ಎಂದು ಘೋಷಿಸಿಬಿಟ್ಟಿತು. ಹಾಗಂದದ್ದೇ ತಡ, ಶುರುವಾಯಿತು ನೋಡಿ ನೆಟ್ಟಿಗರ ಸಂಭ್ರಮ ಮತ್ತು ತಳಮಳ!

ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಯನ್ನೇ ಆಹಾರ ಮಾಡಿಕೊಂಡ ಸಾಮಾಜಿಕ ಮಾಧ್ಯಮಗಳ ಲಕ್ಷಾಂತರ  ಬಳಕೆದಾರು ಶಹಬ್ಬಾಸ್, ವೆರಿಗುಡ್ ಎಂದು ಕಮೆಂಟು, ಲೈಕ್‌ ಹಾಕಿ, ಜಗತ್ತಿನ ಮೂಲೆ ಮೂಲೆಗೆಲ್ಲಾ ಸುದ್ದಿಯನ್ನು ಶೇರ್ ಮಾಡಿ ನಿರುಮ್ಮಳರಾದರು. ಸುದ್ದಿ ಕೇಳಿ ಕೆಂಡಾಮಂಡಲವಾದ ಕೆಲವರು, ಇದೆಂತಹ ಅತಿರೇಕ, ಲಾಕ್‍ಡೌನ್‍ನಿಂದ ನಾವೆಲ್ಲ ಕಾರು, ಬಸ್ಸು, ಬೈಕು, ರೈಲು ಓಡಿಸದೆ, ಫ್ಯಾಕ್ಟರಿ ನಡೆಸದೆ, ಡೀಸೆಲ್ ಉರಿಸದೆ ಇದ್ದುದರಿಂದ ನೀರು, ಗಾಳಿ, ಹವೆ ಶುದ್ಧವಾಗಿವೆ ಎಂದು ಹೇಳಿ, ನಮ್ಮನ್ನು ‘ಭೂಮಿಯ ಕಳೆ’ ಎಂದು ಚಿತ್ರಿಸಿದ್ದು ಎಷ್ಟು ಸರಿ ಎಂದು ಸಿಡಿಮಿಡಿಗೊಂಡರು. ಯುಟ್ಯೂಬ್‍ನಲ್ಲಿದ್ದ ಆ ವಿಡಿಯೊ ತುಣುಕಿಗೆ ಉಲ್ಟಾ ಹೆಬ್ಬೆರಳಿನ ಚಿತ್ರ ಹಾಕಿ, ಮಲ್ಟಿಪಲ್ ಡಿಸ್‍ಲೈಕ್ ಮಾಡಿ, ಶೂನ್ಯ ರೇಟಿಂಗ್ ನೀಡಿ ಸಿಟ್ಟು ತೀರಿಸಿಕೊಂಡರು.

ವಿಜ್ಞಾನಿಗಳನ್ನು ‘ಈ ಬಗ್ಗೆ ನೀವೇನಂತೀರಿ?’ ಎಂದು ಕೇಳಿದಾಗ, ‘ಉತ್ತರ ಧ್ರುವ ಭಾಗದ ಆರ್ಕ್‍ಟಿಕ್ ಪ್ರದೇಶದ ಓಝೋನ್ ರಂಧ್ರ ಮುಚ್ಚಿರುವುದು ನಿಜ. ಆದರೆ ಅದು ಲಾಕ್‍ಡೌನ್ ಎಫೆಕ್ಟ್‌ನಿಂದ ಆದದ್ದಲ್ಲ’ ಎಂದು ಸ್ಪಷ್ಟನೆ ನೀಡಿ, ‘ಸದ್ಯಕ್ಕೆ ದೊಡ್ಡ ಗಂಡಾಂತರದಿಂದ ಪಾರಾಗಿದ್ದೇವೆ’ ಎಂದರು. ಮುಚ್ಚುವಿಕೆ ಶಾಶ್ವತವೇನೂ ಅಲ್ಲ, ಅದು ಮತ್ತೆ ತೆರೆದುಕೊಳ್ಳದಂತೆ ಭೂಮಿಯ ಮೇಲೆ ನಮ್ಮ ಕೆಲಸಗಳನ್ನು ನಾಜೂಕಾಗಿ ನಡೆಸಬೇಕು. ನಿಜವಾದ ಆತಂಕ ಇರುವುದು ದಕ್ಷಿಣ ಧ್ರುವದ ಅಂಟಾರ್ಕ್ಟಿಕ ಭಾಗದ ವಾಯುಮಂಡಲದಲ್ಲಿರುವ ಓಝೋನ್ ಪದರದ ರಂಧ್ರದ ಕುರಿತು. ಅದು ಮುಚ್ಚಿಕೊಳ್ಳಬೇಕು. ಅದಕ್ಕೆ ಇನ್ನೂ ನಲವತ್ತು ವರ್ಷ ಕಾಯಬೇಕು ಎಂದು ತಜ್ಞರು ಎಚ್ಚರಿಸಿದರು.

ADVERTISEMENT

ಸೂರ್ಯನಿಂದ ನುಗ್ಗಿ ಬರುವ ಕೆಲವು ಹಾನಿಕಾರಕ ವಿಕಿರಣಗಳಿಂದ ನಮ್ಮನ್ನು ರಕ್ಷಿಸುವ ಓಝೋನ್ ಅನಿಲ ಪದರವು ಭೂಮಿಯನ್ನು ತೆಳುವಾದ ಸೀರೆಯಂತೆ ಆವರಿಸಿಕೊಂಡಿದೆ. ಉತ್ತರ– ದಕ್ಷಿಣ ಧ್ರುವ ಮತ್ತು ಇತರ ಕಡೆ ಅಲ್ಲಲ್ಲಿ ಛಿದ್ರವಾಗಿದೆ. ಅದನ್ನು ಭೂಮಿಯ ಮೇಲಿರುವ ನಾವೇ ಮಾಡಿದ್ದೇವೆ. ಓಝೋನ್ ಎಂಬ ಪದ ಕಿವಿಗೆ ಬಿದ್ದ ತಕ್ಷಣ, ಅದರ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವ ನಾವೆಲ್ಲಾ ಒಮ್ಮೆ ಮೇಲೆ ನೋಡುತ್ತೇವೆ ಇಲ್ಲವೆ ಭೂಮಿಯನ್ನು ಆವರಿಸಿರುವ ಅದರ ಪದರಕ್ಕೆ ತೂತು ಬಿದ್ದಿದೆ ಎಂಬುದನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಓಝೋನ್ ನೆಲಮಟ್ಟದಲ್ಲಿಯೂ ನಮ್ಮ ಮಧ್ಯೆಯೂ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಆಮ್ಲಜನಕದ ಅಣ್ಣನಂತಿರುವ ಓಝೋನ್ ನೆಲಮಟ್ಟದಲ್ಲಿದ್ದರೆ ಅಪಾಯಕಾರಿ ಮತ್ತು ಭೂಮಿಯ ಮೇಲೆ ಇಪ್ಪತ್ತು ಕಿ.ಮೀ.ನಷ್ಟು ಎತ್ತರದಲ್ಲಿದ್ದರೆ ಹೆಚ್ಚು ಉಪಕಾರಿ ಎಂಬ ವೈಜ್ಞಾನಿಕ ಸತ್ಯ ಅನೇಕರಿಗೆ ಗೊತ್ತಿಲ್ಲ. ಆದರೆ ವಾತಾವರಣ ವಿಜ್ಞಾನಿಗಳು ಮಾತ್ರ ಓಝೋನ್ ಪದರಕ್ಕೆ ಉಂಟಾದ ರಂಧ್ರವನ್ನು ಮುಚ್ಚುವುದರ ಕುರಿತು ಮೂವತ್ತೇಳು ವರ್ಷಗಳಿಂದ ಬಹಳಷ್ಟು ತಿಳಿವಳಿಕೆ ಸಂಪಾದಿಸಿ, ರಂಧ್ರವನ್ನು ಮುಚ್ಚಿಸುವಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದಾರೆ.

ಬಸ್ಸು, ಕಾರು ಸೇರಿದಂತೆ ವಾಹನಗಳು ಉರಿಸುವ ಡೀಸೆಲ್‍ನಿಂದ ಹೊಮ್ಮುವ ಹೊಗೆ, ನೋವು ನಿವಾರಕ ಸ್ಪ್ರೇಗಳು, ಪೆಯಿಂಟ್, ಮನೆಯ ಫ್ರಿಜ್, ಎ.ಸಿ, ಸುಗಂಧ ಸೂಸುವ ಪರ್‌ಫ್ಯೂಮ್, ಡಿಯೋಡರೆಂಟ್ ಡಬ್ಬಿಗಳಲ್ಲೆಲ್ಲಾ ಬಳಕೆಯಾಗುವ ಕ್ಲೋರೊಫ್ಲೋರೊಕಾರ್ಬನ್ ರಾಸಾಯನಿಕಗಳು (ಸಿಎಫ್‍ಸಿ) ವಾತಾವರಣಕ್ಕೆ ಸೇರಿಕೊಂಡಾಗಲೆಲ್ಲ ಓಝೋನ್‍ನ ಉತ್ಪತ್ತಿ ಇಲ್ಲವೆ ಧ್ವಂಸ, ಎರಡೂ ಏಕಕಾಲಕ್ಕೆ ನಡೆಯುತ್ತದೆ. ಡೀಸೆಲ್ ಉರಿದಾಗ ಹುಟ್ಟುವ ನೈಟ್ರೋಜನ್ ಮಾನಾಕ್ಸೈಡ್ ಮತ್ತು ಮನೆಗಳ ಒಲೆಗಳಲ್ಲಿ ಉರಿಸುವ ಕಟ್ಟಿಗೆಯಿಂದ ಉದಿಸಿ ಆವಿಯಾಗುವ ಸಾವಯವ ಕಣಗಳಿಂದ ನೆಲಮಟ್ಟದಲ್ಲಿ ಓಝೋನ್ ತ್ವರಿತವಾಗಿ ಸೃಷ್ಟಿಯಾಗುತ್ತದೆ.

ಪೆಯಿಂಟ್, ರಸಗೊಬ್ಬರ, ವಾಹನಗಳ ಹೊಗೆಯಿಂದ ಹೊಮ್ಮುವ ಸಾರಜನಕದ ಆಕ್ಸೈಡ್‍ಗಳು ವಾತಾವರಣದಲ್ಲಿ ಲಭ್ಯವಾಗುವ ಆಮ್ಲಜನಕದ ಅಣುಗಳನ್ನು ಒಡೆಯುತ್ತವೆ. ಆಗ ಹುಟ್ಟುವ ಎಳಸು (O) ಆಮ್ಲಜನಕದ ಅಣು ಅಲ್ಲೇ ಇರುವ ಇನ್ನೊಂದು ಆಮ್ಲಜನಕದ ಪೂರ್ಣ ಅಣುವಿನೊಂದಿಗೆ ಸಂಯೋಗಗೊಂಡು ಓಝೋನ್ ತಯಾರಾಗುತ್ತದೆ.

ಸಿಎಫ್‍ಸಿಗಳು ಸೂರ್ಯಕಿರಣಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಕ್ಲೋರಿನ್ ಅಣು ಲಕ್ಷಾಂತರ ಓಝೋನ್ ಕಣಗಳನ್ನು ನಾಶ ಮಾಡುತ್ತದೆ. ಆಮ್ಲಜನಕಕ್ಕೆ (O2) ಹೋಲಿಸಿದರೆ ಓಝೋನ್‌ನ (O3) ಗುಣ ತದ್ವಿರುದ್ಧ. O2 ಪ್ರಾಣ ಉಳಿಸಿದರೆ, ನೆಲಮಟ್ಟದಲ್ಲಿರುವ O3 ಪ್ರಾಣ ತೆಗೆಯುತ್ತದೆ. ಓಝೋನ್ ನಮ್ಮ ಹತ್ತಿರವಿದ್ದಷ್ಟೂ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಉಸಿರಾಡಿದಾಗ ಶ್ವಾಸಕೋಶದ ಉರಿ ಹೆಚ್ಚಿ, ಕೆಮ್ಮು, ಉಬ್ಬಸ ಎಲ್ಲ ಏಕಕಾಲಕ್ಕೆ ಕಾಣಿಸಿಕೊಳ್ಳುತ್ತವೆ. ಬಿಸಿಲು ಹೆಚ್ಚಾಗಿದ್ದು, ಗಾಳಿಯ ಸಂಚಾರವಿಲ್ಲದಿದ್ದರೆ ಓಝೋನ್‍ನ ಪ್ರತಾಪ ವಿಪರೀತವಾಗುತ್ತದೆ. ಅಸ್ತಮಾ ರೋಗಿಗಳ ಪ್ರಥಮ ಶತ್ರು ಎನಿಸಿರುವ ಓಝೋನ್ ಕೆಲವೊಮ್ಮೆ ಪ್ರಾಣಹಾನಿಗೂ ಕಾರಣವಾಗುತ್ತದೆ. ನಾವು ಬಳಸುವ ಗೃಹೋಪಯೋಗಿ ವಸ್ತುಗಳಾದ ಡಿಟರ್ಜೆಂಟ್ ಪೌಡರ್, ಸಾಬೂನು, ದುರ್ವಾಸನೆ ದೂರವಿರಿಸುವ ದ್ರವ್ಯ, ನೀರಿನ ಶುದ್ಧೀಕರಣ ಘಟಕಗಳಲ್ಲಿ ಓಝೋನ್‍ನ ಬಳಕೆ ವ್ಯಾಪಕವಾಗಿದೆ.

ದಕ್ಷಿಣ ಧ್ರುವದ ಅಂಟಾರ್ಕ್ಟಿಕದ ಮೇಲಿನ ಭಾಗದ ವಾಯುಮಂಡಲದಲ್ಲಿರುವ ಓಝೋನ್ ಪದರ ತೂತಾಗಿದೆ ಎಂಬ ಮಾಹಿತಿ 1980ರಲ್ಲಿ ಮೊದಲ ಬಾರಿಗೆ ಸಿಕ್ಕಿತು. ಆಗ ತಕ್ಷಣ ಪದರದ ರಕ್ಷಣೆಯ ಕೆಲಸಗಳು ಶುರುವಾದವು. ಚಳಿಗಾಲದಲ್ಲಿ ಅಂಟಾರ್ಕ್ಟಿಕದ ಮೇಲಿನ ಭಾಗದಲ್ಲಿ ಉಷ್ಣಾಂಶ ತುಂಬಾ ಕಡಿಮೆ ಇರುತ್ತದೆ. ಹಿಮಯುಕ್ತ ಮೋಡಗಳು ಸಿಎಫ್‍ಸಿಗಳನ್ನು ಆಕರ್ಷಿಸಿ ಸೂರ್ಯನ ಅತಿನೇರಳೆ ಕಿರಣಗಳೊಂದಿಗೆ ವರ್ತಿಸಿ ಓಝೋನ್ ಪದರ ಛಿದ್ರಗೊಳ್ಳುವುದು ಹೆಚ್ಚು. ಹಿಮಯುಕ್ತ ಮೋಡಗಳ ಸಾಂದ್ರತೆ ಅಂಟಾರ್ಕ್ಟಿಕ ಭಾಗದ ಮೇಲೆ ಜಾಸ್ತಿ ಇರುವುದರಿಂದ, ಆ ಜಾಗದಲ್ಲೇ, ಮೊದಲು ರಂಧ್ರ ಇರುವುದು ಕಂಡುಬಂದಿತ್ತು. ತೂತಾದ ಜಾಗದಿಂದ ಸೂರ್ಯರಶ್ಮಿ ನೇರವಾಗಿ ನೆಲ ತಲುಪಿ ಸಕಲ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿದದ್ದರಿಂದ ವಿಜ್ಞಾನಿಗಳು ಶೀಘ್ರವಾಗಿ ಸಿಎಫ್‍ಸಿಗಳ ಕಟ್ಟುನಿಟ್ಟಿನ ನಿಷೇಧಕ್ಕೆ ಸಲಹೆ ನೀಡಿದರು.

ಪರಿಸ್ಥಿತಿಯ ತೀವ್ರತೆಯನ್ನು ಅರಿತು ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳೂ ಒಮ್ಮನಸ್ಸಿನಿಂದ ಒಪ್ಪಿಗೆ ನೀಡಿ, 1987ರಲ್ಲಿ ಮಾಂಟ್ರಿಯಲ್ ಒಪ್ಪಂದಕ್ಕೆ ಸಹಿ ಹಾಕಿದವು. ಆಗ ಓಝೋನ್ ಪದರಕ್ಕೆ ಧಕ್ಕೆ ತರುವ ಕ್ಲೋರಿನ್, ಬ್ರೋಮಿನ್ ಮತ್ತು ಅವುಗಳನ್ನು ಒಳಗೊಳ್ಳುವ 40ಕ್ಕೂ ರಾಸಾಯನಿಕ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಯಿತು ಮತ್ತು ಸಿಎಫ್‍ಸಿಗಳ ಬದಲಿಗೆ ಓಝೋನ್ ಪದರಕ್ಕೆ ಕಡಿಮೆ ಹಾನಿ ಮಾಡುವ ಹೈಡ್ರೋಕ್ಲೋರೊ ಫ್ಲೋರೊ ಕಾರ್ಬನ್‌ಗಳನ್ನು (ಎಚ್‍ಸಿಎಫ್‍ಸಿ) ಬಳಸಬೇಕೆಂದು ನಿರ್ಣಯವಾಯಿತು.

ಕೃಷಿ ಉತ್ಪನ್ನಗಳ ದಾಸ್ತಾನಿಗೆ ಬಳಸುವಂಥ ಬೃಹತ್‌ ಶೀತಲೀಕರಣ ವ್ಯವಸ್ಥೆ, ಮನೆಗಳಲ್ಲಿ ಬಳಸುವ ಎ.ಸಿ, ಫ್ರಿಜ್‌ಗಳಿಗೆ ಎಚ್‍ಸಿಎಫ್‍ಸಿ ಬೇಕೇಬೇಕು. ಎಚ್‍ಸಿಎಫ್‍ಸಿಗಳಿಂದಲೂ ಓಝೋನ್ ಪದರಕ್ಕೆ ತೊಂದರೆಯಿದೆ ಮತ್ತು ಭೂಮಿಯ ಬಿಸಿ ಏರಿಸುವಲ್ಲಿ ಕಾರ್ಬನ್ ಡೈ ಆಕ್ಸೈಡ್‍ಗಿಂತ ಎರಡು ಸಾವಿರ ಪಟ್ಟು ಹೆಚ್ಚು ಅಪಾಯಕಾರಿ ಎಂಬುದು ತಿಳಿಯಿತು. ಆಗ 2016ರಲ್ಲಿ ರುವಾಂಡದ ಕಿಗಳಿಯಲ್ಲಿ ಸಭೆ ಸೇರಿ, ಮಾಂಟ್ರಿಯಲ್ ಒಪ್ಪಂದಕ್ಕೆ ತಿದ್ದುಪಡಿ ತಂದು, ಎಚ್‍ಸಿಎಫ್‍ಸಿಗಳನ್ನು 2030ರವರೆಗೆ ಮಾತ್ರ ಬಳಸುವಂತೆ ಆದೇಶಿಸಲಾಯಿತು.

ಇನ್ನು ಇಪ್ಪತ್ತು ವರ್ಷಗಳಲ್ಲಿ ನಮ್ಮ ಎ.ಸಿ, ಫ್ರಿಜ್, ಆಹಾರ ಉತ್ಪನ್ನ ದಾಸ್ತಾನಿಗೆ ಬಳಸುವಂಥ ಬೃಹತ್‌ ಶೀತಲೀಕರಣ ವ್ಯವಸ್ಥೆಯ ಬೇಡಿಕೆ ಎಂಟು ಪಟ್ಟು ಹೆಚ್ಚಲಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಇಂಡಿಯಾ ಕೂಲಿಂಗ್ ಆ್ಯಕ್ಷನ್ ಪ್ಲ್ಯಾನ್ ಪ್ರಾರಂಭಿಸಿದೆ. ಎಚ್‍ಸಿಎಫ್‍ಸಿಯ ಸಂಪೂರ್ಣ ನಿಷೇಧಕ್ಕೆ ಹೆಚ್ಚಿನ ಸಮಯ ಬೇಕೇಬೇಕು ಎಂದು ಹೇಳಿದೆ. ವಿಶ್ವದ ಹವಾನಿಯಂತ್ರಕ ವ್ಯವಸ್ಥೆಯ ಬೇಡಿಕೆಯ ಶೇಕಡ 80ರಷ್ಟನ್ನು ಪೂರೈಸುತ್ತಿರುವ ಚೀನಾ ತನಗೂ ಸಮಯ ಬೇಕು ಎಂದಿದ್ದು, ಸಾಧ್ಯವಾದಷ್ಟೂ ಸಹಕರಿಸುತ್ತೇವೆ ಎಂಬ ಭರವಸೆ ನೀಡಿದೆ. ಅಂದಹಾಗೆ, ನಾಳೆ (ಸೆ.16) ವಿಶ್ವ ಓಝೋನ್‌ ದಿನ ಆಚರಿಸಲಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.