ನಮ್ಮ ದೇಶದ ಉನ್ನತ ಶಿಕ್ಷಣ ಕ್ಷೇತ್ರದ ವಿದ್ಯಾಸಂಸ್ಥೆಗಳಿಗೆ ಇದು ಪ್ರವೇಶಾತಿ ಪ್ರಕ್ರಿಯೆಯ ಸಮಯ. ಕೆಲವು ಪ್ರಸಿದ್ಧ ಮತ್ತು ಪ್ರತಿಷ್ಠಿತ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದವು ವಿದ್ಯಾರ್ಥಿಗಳನ್ನು ಆಕರ್ಷಿಸಲು ವರ್ಣರಂಜಿತ ಜಾಹೀರಾತುಗಳನ್ನು ಈ ಸಮಯದಲ್ಲಿ ನೀಡುವುದು ಸಾಮಾನ್ಯ. ಅಂತಹ ಜಾಹೀರಾತುಗಳಲ್ಲಿ ಆ ಸಂಸ್ಥೆಯ ರ್‍ಯಾಂಕಿಂಗ್ ಪ್ರಮುಖವಾಗಿ ಗೋಚರಿಸುತ್ತದೆ.
ದೇಶದಲ್ಲಿ ಮಾಧ್ಯಮ ಸಂಸ್ಥೆಗಳು, ಅಕಡೆಮಿಕ್ ಸಂಘಟನೆಗಳು, ಜಾಲತಾಣಗಳಂತಹವು ರ್‍ಯಾಂಕಿಂಗ್ ನಿಗದಿಪಡಿಸುವ ಕೆಲಸವನ್ನು ಮಾಡುತ್ತಾ ಬಂದಿವೆ. ಆದರೆ ಈ ಬಾರಿಯ ಅನೇಕ ಜಾಹೀರಾತುಗಳಲ್ಲಿ, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುತ್ತಿರುವ ಎನ್‍ಐಆರ್‌ಎಫ್ ರ್‍ಯಾಂಕಿಂಗ್ ಎದ್ದು ಕಾಣುತ್ತಿರುವುದು ಒಂದು ವಿಶೇಷ.
ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್‍ವರ್ಕ್ (ಎನ್‍ಐಆರ್‌ಎಫ್) ಮೂಲಭೂತವಾಗಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ದಿಷ್ಟ ಮಾನದಂಡಗಳ ಬಳಕೆಯಿಂದ ಮೌಲ್ಯಮಾಪನ ಮಾಡಿ, ವಿದ್ಯಾಸಂಸ್ಥೆಗಳನ್ನು ಶ್ರೇಣೀಕರಿಸಿ, ಮೊದಲ 100 ರ್‍ಯಾಂಕ್‍ಗಳನ್ನು ನಿಗದಿಪಡಿಸುವ ಅನನ್ಯ ವಿಧಾನ. 2015ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ರೂಪಿಸಿದ ಈ ವಿಧಾನದಲ್ಲಿ ಬೋಧನೆ- ಕಲಿಕೆ- ಸಂಪನ್ಮೂಲಗಳು, ಸಂಶೋಧನೆ- ವೃತ್ತಿಪರತೆ, ವ್ಯಾಸಂಗ ಮುಗಿಸಿ ಉದ್ಯೋಗ- ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವ ಸಾಮರ್ಥ್ಯ, ಸಂಸ್ಥೆಯ ಔಟ್‌ರೀಚ್ ಚಟುವಟಿಕೆ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಒದಗಿಸುವ ವಿಶೇಷ ಅವಕಾಶಗಳು, ವಿದ್ವತ್ ವಲಯದಲ್ಲಿ ವಿದ್ಯಾಸಂಸ್ಥೆಗಿರುವ ಗೌರವ ಮತ್ತು ಮಾನ್ಯತೆಗಳನ್ನು ಐದು ಮುಖ್ಯ ಮಾನದಂಡಗಳಾಗಿ ಪರಿಗಣಿಸಲಾಗಿದೆ.
ಅವುಗಳನ್ನು ಮತ್ತೆ ಉಪ ವಿಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದಕ್ಕೂ ನಿರ್ದಿಷ್ಟ ‘ವೇಟೇಜ್’ ನೀಡಿ, ಒಟ್ಟು ನೂರು ಅಂಕಗಳಿಗೆ, ಸಂಸ್ಥೆ ಪಡೆದ ಅಂಕಗಳನ್ನು ಆಧರಿಸಿ, ಸಂಸ್ಥೆಯ ರ್‍ಯಾಂಕಿಂಗ್ ಅನ್ನು ನಿರ್ಧರಿಸಲಾಗುತ್ತದೆ. ಇದು ಕ್ಲಿಷ್ಟಕರವಾದ, ಸಂಕೀರ್ಣ ಪ್ರಕ್ರಿಯೆ.
2016ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಎನ್‍ಐಆರ್‌ಎಫ್ ರ್‍ಯಾಂಕಿಂಗ್‍ನಲ್ಲಿ ವಿಶ್ವವಿದ್ಯಾಲಯ, ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್ ಮತ್ತು ಫಾರ್ಮಸಿ ವಿಭಾಗಗಳ ಅಡಿಯಲ್ಲಿ ಮೌಲ್ಯಮಾಪನ ನಡೆಸಿ, ಸಂಸ್ಥೆಗಳ ರ್‍ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಕಳೆದ ತಿಂಗಳು ಬಿಡುಗಡೆಯಾದ ಎಂಟನೆಯ ವರ್ಷದ ಪಟ್ಟಿಯಲ್ಲಿ ಮೇಲಿನ ನಾಲ್ಕು ವಿಭಾಗಗಳ ಜೊತೆಗೆ ವೈದ್ಯಕೀಯ, ದಂತ, ಕಾನೂನು, ಕೃಷಿ, ವಾಸ್ತುಶಿಲ್ಪ (ಆರ್ಕಿಟೆಕ್ಚರ್), ಸಂಶೋಧನಾ ವಿಭಾಗಗಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸೇರಿಸಲಾಗಿದೆ. ನವನಿರ್ಮಿತಿ ಅಥವಾ ಇನ್ನೋವೇಶನ್‍ಗೆ ಹೆಸರಾದ ಸಂಸ್ಥೆಗಳು ಮತ್ತು ಎಲ್ಲ ದೃಷ್ಟಿಗಳಿಂದಲೂ ಒಟ್ಟಾರೆಯಾಗಿ ಉತ್ತಮವೆನಿಸುವ ಸಂಸ್ಥೆಗಳ ರ್‍ಯಾಂಕಿಂಗ್ ಪಟ್ಟಿಯೂ ಇದೆ. ದೇಶದ ಅತ್ಯುತ್ತಮ ಕಾಲೇಜುಗಳ ಶ್ರೇಣೀಕರಣ ಮಾಹಿತಿಯೂ ಇಲ್ಲಿದೆ.
ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮೊದಲ ಸ್ಥಾನದಲ್ಲಿದ್ದರೆ, ಸಮಗ್ರ ದೃಷ್ಟಿಯಿಂದ ಮದ್ರಾಸ್ ಐಐಟಿಗೆ ಪ್ರಥಮ ರ್‍ಯಾಂಕ್, ವೈದ್ಯಕೀಯದಲ್ಲಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಗೆ ಅಗ್ರ ಸ್ಥಾನ ಲಭಿಸಿದೆ. ಕಾಲೇಜುಗಳ ವರ್ಗದಲ್ಲಿ ದೆಹಲಿಯ ಮಿರಾಂಡ ಹೌಸ್‍ಗೆ ಮೊದಲ ರ್‍ಯಾಂಕ್ ದೊರೆತಿದೆ.
ವಸ್ತುನಿಷ್ಠ ವೈಜ್ಞಾನಿಕ ವಿಧಾನವನ್ನು ಅನುಸರಿಸಿ, ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ್‍ಯಾಂಕಿಂಗ್ ನೀಡುವ ಕೇಂದ್ರ ಸರ್ಕಾರದ ಪ್ರಯತ್ನ ಶ್ಲಾಘನೀಯವೇನೋ ಹೌದು. ಉತ್ತಮ ರ್‍ಯಾಂಕ್ ಪಡೆದ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಸೆಳೆಯುವುದೂ ನಿಜ. ಈ ಕಾರಣಕ್ಕಾಗಿಯೇ ಎನ್‍ಐಆರ್‌ಎಫ್ ರ್‍ಯಾಂಕ್ ಪಡೆಯಲು ಬಯಸುವ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು ವರ್ಷಗಳು ಕಳೆದಂತೆ ಹೆಚ್ಚುತ್ತಿದೆ. ಆದರೆ ಎನ್‍ಐಆರ್‌ಎಫ್ ರ್‍ಯಾಂಕಿಂಗ್‍ಗೆ ಮತ್ತೊಂದು ಮುಖವೂ ಇದೆ.
ಎನ್‍ಐಆರ್‌ಎಫ್ ರ್‍ಯಾಂಕಿಂಗ್, ಒಂದು ವಿದ್ಯಾಸಂಸ್ಥೆ ಮತ್ತೊಂದಕ್ಕಿಂತ ಉತ್ತಮವೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುವ ಹೋಲಿಕೆಯ ಸೂಚಿ. ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಕಾಲೇಜುಗಳನ್ನು ಆಯ್ಕೆ ಮಾಡುವಾಗ ಈ ರ್‍ಯಾಂಕಿಂಗ್ ನೆರವಾಗುತ್ತದೆ. ಆದರೆ ಈ ಹೋಲಿಕೆಯನ್ನು ಪರಿಗಣಿಸದೇ, ಯಾವುದೇ ಒಂದು ವಿದ್ಯಾಸಂಸ್ಥೆ ತಾನಾಗಿಯೇ, ಸ್ವತಂತ್ರವಾಗಿ ಯಾವ ಮಟ್ಟದಲ್ಲಿದೆ, ಎಷ್ಟು ಸಮರ್ಥವಾಗಿದೆ ಎಂಬ ಮಾಹಿತಿ ಈ ರ್‍ಯಾಂಕಿಂಗ್‍ನಿಂದ ತಿಳಿಯುವುದಿಲ್ಲ. ಅದನ್ನು ತಿಳಿಯಬೇಕಾದರೆ, ಆ ಸಂಸ್ಥೆಗೆ ದೊರೆತಿರುವ ‘ನಿರಪೇಕ್ಷ ಅಂಕ'ವನ್ನು (ಅಬ್ಸಲ್ಯೂಟ್ ಸ್ಕೋರ್) ಹುಡುಕಿ ತೆಗೆದು ಪರಿಶೀಲಿಸಬೇಕು. ಈ ಅಂಕವನ್ನು ಯಾವ ಸಂಸ್ಥೆಯೂ ಜಾಹೀರಾತಿನಲ್ಲಿ ಪ್ರಕಟಿಸುವುದಿಲ್ಲ. ಎನ್‍ಐಆರ್‌ಎಫ್ ರ್‍ಯಾಂಕಿಂಗ್ ನಮಗೆ ತೋರಿಸುವುದು ಅರ್ಧಸತ್ಯ ಮಾತ್ರ. ಉಳಿದರ್ಧ ತಿಳಿಯುವುದು ಮೊದಲ ನೋಟಕ್ಕೆ ಕಾಣದ ನಿರಪೇಕ್ಷ ಅಂಕಗಳಿಂದ.
ಕೇಂದ್ರ ಸರ್ಕಾರ ಜೂನ್ 5ರಂದು ಪ್ರಕಟಿಸಿದ ಎನ್‍ಐಆರ್‌ಎಫ್ ರ್‍ಯಾಂಕಿಂಗ್‍ನಲ್ಲಿ 13 ಶೈಕ್ಷಣಿಕ ಶಿಸ್ತಿಗೆ ಸಂಬಂಧಿಸಿದಂತೆ, ಪ್ರತಿಯೊಂದರಲ್ಲೂ 100 ಉನ್ನತ ಶಿಕ್ಷಣ ಸಂಸ್ಥೆಗಳ ವಿವರಗಳಿವೆ. ಅವು ಪಡೆದಿರುವ ರ್‍ಯಾಂಕ್‍ಗಳ ಜೊತೆಗೆ ನಿರಪೇಕ್ಷ ಅಂಕಗಳ ವಿವರ ಹುಡುಕ ಹೊರಟರೆ ದೊರೆಯುತ್ತದೆ. ಉದಾಹರಣೆಗೆ, ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೊದಲನೆಯ ಸ್ಥಾನ ಪಡೆದಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ದೊರೆತಿರುವ ಅಂಕ 83.16. ಎರಡು ಮತ್ತು ಮೂರನೆಯ ಸ್ಥಾನದಲ್ಲಿರುವ ಜೆಎನ್‍ಯು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳಿಗೆ ದೊರೆತಿರುವ ಅಂಕಗಳು 68.92 ಮತ್ತು 67.73.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಮೂಲದಂತೆ ನಮ್ಮ ದೇಶದಲ್ಲಿ ಸುಮಾರು 56,000 ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇವುಗಳಲ್ಲಿ 2023ರ ಎನ್‍ಐಆರ್‌ಎಫ್ ರ್‍ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಂಸ್ಥೆಗಳ ಸಂಖ್ಯೆ 5,550. ಇವುಗಳಲ್ಲಿ ಶೇ 75ರಷ್ಟು ಸಂಸ್ಥೆಗಳಿಗೆ 60ಕ್ಕಿಂತ ಕಡಿಮೆ ಅಂಕ ಬಂದಿದೆ! ವಿಪರ್ಯಾಸವೆಂದರೆ, ಶೇ 50ಕ್ಕಿಂತ ಕಡಿಮೆ ನಿರಪೇಕ್ಷ ಅಂಕ ಪಡೆದ ಸಂಸ್ಥೆಗಳೂ ಮೊದಲ 100 ರ್‍ಯಾಂಕ್ ಪಟ್ಟಿಯಲ್ಲಿರುವುದು! ಒಂದು ಸಂಸ್ಥೆಗೆ ಒಟ್ಟಾರೆಯಾಗಿ 50 ಅಂಕ ಲಭಿಸಿದ್ದರೆ, ಮೌಲ್ಯಮಾಪನಕ್ಕೆ ಬಳಸಿದ 13 ವಿವಿಧ ಮಾನದಂಡಗಳಲ್ಲಿ ಒಟ್ಟಾರೆಯಾಗಿ ಶೇ 50ರಷ್ಟು ಕೊರತೆಯಿದೆ ಎಂದಾಯಿತು!
ರ್‍ಯಾಂಕಿಂಗ್ ಮೌಲ್ಯಮಾಪನದಲ್ಲಿ ಭಾಗವಹಿಸಿದ 5,550 ಉನ್ನತ ವಿದ್ಯಾಸಂಸ್ಥೆಗಳಲ್ಲಿ 24 ಸಂಸ್ಥೆಗಳಿಗೆ ಮಾತ್ರ 75ಕ್ಕಿಂತ ಹೆಚ್ಚಿನ ಅಂಕ ಬಂದಿದೆ. ಇವುಗಳಲ್ಲಿ ದೆಹಲಿ, ಕರ್ನಾಟಕ, ತಮಿಳುನಾಡಿನಲ್ಲಿ ತಲಾ ನಾಲ್ಕು ಸಂಸ್ಥೆಗಳಿದ್ದರೆ, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ತಲಾ ಎರಡು, ಚಂಡೀಗಢ, ಉತ್ತರಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಗುಜರಾತ್‍ನಲ್ಲಿ ತಲಾ ಒಂದು ಸಂಸ್ಥೆಯಿದೆ. ಉಳಿದಂತೆ ದೇಶದ ಯಾವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಒಂದು ಸಂಸ್ಥೆಯೂ 75ಕ್ಕಿಂತ ಹೆಚ್ಚಿನ ಅಂಕ ಪಡೆದಿಲ್ಲ!
ದೇಶದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್‍ಟೆನ್ಸ್ ಪಟ್ಟಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‍ಫರ್ಮೇಶನ್ ಟೆಕ್ನಾಲಜಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂದ್ರ ವಿಶ್ವವಿದ್ಯಾಲಯಗಳು ಮುಂತಾದವುಗಳಲ್ಲಿ ಅನೇಕವು 75ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿಲ್ಲ.
ಎನ್‍ಐಆರ್‌ಎಫ್ ಪ್ರಕಟಿಸಿರುವ ದತ್ತಾಂಶವನ್ನು, ಅದರಲ್ಲೂ ಮುಖ್ಯವಾಗಿ ವಿವಿಧ ಮಾನದಂಡಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ಪಡೆದಿರುವ ಅಂಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ದೇಶದ ಒಟ್ಟಾರೆ ಉನ್ನತ ಶಿಕ್ಷಣ ಕ್ಷೇತ್ರದ ಕಳವಳಕಾರಿ ಪರಿಸ್ಥಿತಿಯ ಪರಿಚಯವಾಗುತ್ತದೆ. ಬೋಧನೆಯ ಗುಣಮಟ್ಟ, ಪ್ರಾಧ್ಯಾಪಕರ ಅರ್ಹತೆ, ಸಂಶೋಧನಾ ಸಾಮರ್ಥ್ಯ, ಮೂಲ ಸೌಕರ್ಯಗಳು, ನವನಿರ್ಮಿತಿಗಳನ್ನು ಉತ್ತೇಜಿಸಿ, ಪೋಷಿಸಬಲ್ಲ ಪರಿಸರದಂತಹವುಗಳಿಗೆ ಸಂಬಂಧಿಸಿದಂತೆ ಇರುವ ತೀವ್ರ ಕೊರತೆ ಎದ್ದು ಕಾಣುತ್ತದೆ. ಇದು 2023ರ ಎನ್‍ಐಆರ್‌ಎಫ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ 5,550 ಉನ್ನತ ಶಿಕ್ಷಣ ಸಂಸ್ಥೆಗಳಿಂದ ದೊರೆತ ಮಾಹಿತಿ. ಇದನ್ನು ಹೊರತುಪಡಿಸಿ ಸುಮಾರು 50,000 ಉನ್ನತ ಶಿಕ್ಷಣ ಸಂಸ್ಥೆಗಳಿವೆ! ಅವುಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗಿರುವ ಸಾಧ್ಯತೆ ಬಹು ಕಡಿಮೆ.
2023ರ ಎನ್‍ಐಆರ್‌ಎಫ್ ಮೌಲ್ಯಮಾಪನದಿಂದ ದೊರೆತಿರುವ ವಿಶ್ವಾಸಾರ್ಹವಾದ ಮಾಹಿತಿ, ನಿರಾಶಾದಾಯಕವಾಗಿರುವ ಉನ್ನತ ಶಿಕ್ಷಣ ಕೇತ್ರದ ಪರಿಸ್ಥಿತಿಯನ್ನು ನಿಭಾಯಿಸಲು, ಬದಲಿಸಲು ಮಾರ್ಗದರ್ಶಿ ಆಗಬೇಕೆಂಬುದು ಪರಿಣತರ ಅಭಿಪ್ರಾಯ.
ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಗಳ ರ್‍ಯಾಂಕಿಂಗ್ ಗಮನಿಸಲಿ. ಸಂಸ್ಥೆಗಳ ಆಡಳಿತ ವರ್ಗವು ಸಂಸ್ಥೆಗೆ ದೊರೆತಿರುವ ಸ್ಥಾನವನ್ನು ಪ್ರವೇಶಾತಿ ಹೆಚ್ಚಿಸಲು ಸಹ ಬಳಸಲಿ. ಅದರಲ್ಲಿ ಅಂತಹ ತಪ್ಪೇನಿಲ್ಲ. ಆದರೆ ಅವುಗಳ ಜೊತೆಗೆ ಸಂಸ್ಥೆಗೆ ದೊರೆತಿರುವ ನಿರಪೇಕ್ಷ ಅಂಕ ಸೂಚಿಸುವ ಕೊರತೆಯನ್ನು ತುಂಬುವ ದಿಕ್ಕಿನಲ್ಲೂ ಪ್ರಾಮಾಣಿಕ ಪ್ರಯತ್ನ ತೀರಾ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.