ಅನ್ನಾ ಸೆಬಾಸ್ಟಿಯನ್ ಪೆರಯಿಲ್, 26ರ ಹರೆಯದ ಅದಮ್ಯ ಉತ್ಸಾಹದ ಪ್ರತಿಭಾವಂತ ಯುವತಿ. 2023ರ ನವೆಂಬರ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾದ ಅನ್ನಾ, 2024ರ ಮಾರ್ಚ್ ತಿಂಗಳಿನಲ್ಲಿ ಬಹುರಾಷ್ಟ್ರೀಯ ಲೆಕ್ಕ ಪರಿಶೋಧನಾ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದಳು. ಅದು ಆಕೆ ಬಯಸಿದ್ದ ಕನಸಿನ ಕಂಪನಿಯಾಗಿತ್ತು. ಆದರೆ ಮುಂದಿನ ನಾಲ್ಕೇ ತಿಂಗಳ ಅವಧಿಯಲ್ಲಿ ವಿಪರೀತ ಕೆಲಸ, ಸಹಿಸಲು ಸಾಧ್ಯವಾಗದಷ್ಟು ಒತ್ತಡ, ಅನುಕಂಪರಹಿತ ಅಹಿತಕರ ಪರಿಸರದಲ್ಲಿನ ಅವಿಶ್ರಾಂತ ದುಡಿಮೆ ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತಗೊಳಿಸಿ, ಜುಲೈ 21ರಂದು ಆಕೆಯ ಸಾವಿನಲ್ಲಿ ಪರಿಸಮಾಪ್ತಿಯಾಯಿತು.
ಈ ದುರಂತ ನಮ್ಮ ದೇಶದ ಕೆಲವು ಬೃಹತ್ ಕಂಪನಿಗಳ ದುಡಿಮೆ ಸಂಸ್ಕೃತಿಯ ಬಗ್ಗೆ ಹಲವಾರು ಮೂಲಭೂತ ಪ್ರಶ್ನೆಗಳನ್ನೆತ್ತಿ ವ್ಯಾಪಕವಾದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅನ್ನಾಳ ಸಾವಿಗೆ ಕಾರಣವಾದ ಕಂಪನಿಯಲ್ಲಿನ ಕೆಲಸದ ವಿಷಮ ಪರಿಸ್ಥಿತಿಯ ಬಗ್ಗೆ ಆಕೆಯ ತಾಯಿಯು ಕಂಪನಿಯ ಅಧ್ಯಕ್ಷರಿಗೆ ಬರೆದ ಮನಕರಗಿಸುವ, ನೋವಿನ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯವು ಅನ್ನಾಳ ಸಾವಿಗೆ ಕಾರಣವಾದ ಆ ಕಂಪನಿಯ ಕೆಲಸದ ಪರಿಸ್ಥಿತಿಯ ಬಗ್ಗೆ ವಿವರವಾದ ತನಿಖೆಗೆ ಆದೇಶ ನೀಡಿದೆ.
ನಮ್ಮ ದೇಶದ ಕಾರ್ಪೊರೇಟ್ ಕಂಪನಿಗಳ ಕೆಲಸದ ವೈಖರಿಗೆ ‘ಹಸಲ್ ಕಲ್ಚರ್’ (Hustle culture) ಎಂಬ ಹೆಸರಿದೆ. ಸ್ವಂತ ಹಿತವನ್ನು ತ್ಯಾಗ ಮಾಡಿ, ಬಿಡುವನ್ನು ಬಯಸದೆ, ಸದಾಕಾಲ ಕಂಪನಿಯ ಆರ್ಥಿಕ ಏಳಿಗೆಗೆ ತುಟಿಕಚ್ಚಿ, ಮುನ್ನುಗ್ಗಿ ದುಡಿಯುವುದೇ ಈ ಹಸಲ್ ಕಲ್ಚರ್‌ನ ಮೂಲ ತತ್ವ. ಈ ಸಂಸ್ಕೃತಿಯಲ್ಲಿ ಯಶಸ್ಸೊಂದೇ ಮುಖ್ಯ, ಉಳಿದೆಲ್ಲವೂ ಗೌಣ.
ಬ್ರಿಟನ್ ಮತ್ತು ಜರ್ಮನಿಯಂಥ ದೇಶಗಳೇ ವಾರಕ್ಕೆ ನಾಲ್ಕು ದಿನಗಳ ಕೆಲಸವನ್ನು ನಿಗದಿಪಡಿಸುವ ಬಗ್ಗೆ ಯೋಚಿಸುತ್ತಿರಬೇಕಾದರೆ, ಇಲ್ಲಿ ವಾರಕ್ಕೆ 70 ಗಂಟೆಗಳ ದುಡಿಮೆಯನ್ನು ವೈಭವೀಕರಿಸುತ್ತಾ ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಉಸಿರುಗಟ್ಟಿಸುವ ಈ ರೀತಿಯ ದುಡಿಮೆ ಸಂಸ್ಕೃತಿಯ ವಕ್ತಾರರು ಬೃಹತ್ ಕಂಪನಿಗಳ ಪ್ರವರ್ತಕರು ಎಂಬುದನ್ನು ಗಮನಿಸಬೇಕು. ನಮ್ಮ ದೇಶದ ಉದ್ಯಮದ ನೇತಾರರೇ ಆಸ್ಥೆಯಿಂದ ರೂಪಿಸಿ, ಪೋಷಿಸಿ, ಬೆಳೆಸುತ್ತಿರುವ ಮಾದರಿ ಇದು.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಒಂದು ವಾರದ ದುಡಿಮೆಯ ಗಂಟೆಗಳ ಜಾಗತಿಕ ಸರಾಸರಿ 34ರಿಂದ 36 ಗಂಟೆಗಳು. ಆದರೆ ಈ ಸರಾಸರಿ ಪ್ರಮಾಣವು ಭಾರತದಲ್ಲಿ 48ರಿಂದ 50 ಗಂಟೆಗಳು. ಆಕೆ ಮಹಿಳೆಯಾದರೆ ಅವಳ ಮನೆಯ ದುಡಿಮೆಯ 6ರಿಂದ 7 ಗಂಟೆಗಳು ಹೆಚ್ಚುವರಿಯಾಗಿ ಸೇರಿಕೊಳ್ಳುತ್ತವೆ.
ಇಲ್ಲಿರುವ ಪ್ರಶ್ನೆ ಬರೀ ಹೆಚ್ಚಿನ ಅವಧಿಯವರೆಗೆ ಕೆಲಸ ಮಾಡುವುದಲ್ಲ. ಕೆಲಸ ಮಾಡುವ ಸ್ಥಳದಲ್ಲಿನ ಅಹಿತಕರ ಪರಿಸರವೂ ತೀವ್ರ ಒತ್ತಡಕ್ಕೆ ಕಾರಣವಾಗುತ್ತದೆ. ಕಾಲಮಿತಿಯಲ್ಲಿ ಗುರಿ ಮುಟ್ಟಲು ಸಾಧ್ಯವಾಗದ ಸಂದರ್ಭ ಗಳಲ್ಲಿ ಉದ್ಯೋಗಿಗಳ ತೇಜೋವಧೆ, ಹೀಗಳಿಕೆ, ನಿಂದನೆ, ಅಪಮಾನ ಬಹು ಸಾಮಾನ್ಯ. ಅನ್ನಾಳ ತಾಯಿ ಬರೆದ ಪತ್ರವನ್ನು ನೋಡಿದ ಸಾವಿರಾರು ನೆಟ್ಟಿಗರು, ಕೆಲಸದ ಸ್ಥಳದಲ್ಲಿನ ತಮ್ಮ ಕಹಿ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಮಾಹಿತಿ ತಂತ್ರಜ್ಞಾನ, ಸಂವಹನ, ಬ್ಯಾಂಕಿಂಗ್, ವಿಮೆಯಂತಹವು ಒಂದು ಕಾಲದಲ್ಲಿ ಯುವಜನರ ಕನಸಿನ, ಉಜ್ವಲ ಭವಿಷ್ಯದ ಉದ್ಯೋಗ ಕ್ಷೇತ್ರಗಳಾಗಿದ್ದವು. ಇವು ಇದೀಗ ವಿಪರೀತ ಕೆಲಸದ, ಅತ್ಯಧಿಕ ಒತ್ತಡದ ಹಿಡಿತದಲ್ಲಿವೆ. ಈ ಕೆಲವು ಆಯ್ದ ಕ್ಷೇತ್ರಗಳನ್ನು ‘ಕೀ ರಿಸಲ್ಟ್ ಏರಿಯಾ’ಗಳೆಂದು (ಕೆಆರ್‌ಎ) ಗುರುತಿಸುವುದು ವಾಡಿಕೆ. ಈ ಕ್ಷೇತ್ರಗಳಲ್ಲಿನ ಬೆಳವಣಿಗೆ ಉಳಿದ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಈ ಆಯ್ದ ಕ್ಷೇತ್ರಗಳಲ್ಲಿ ಅವಾಸ್ತವಿಕವಾದ ಬೆಳವಣಿಗೆಯ ಗುರಿಗಳನ್ನು ನಿಗದಿಪಡಿಸಿದಾಗ ಉದ್ಯೋಗಿಗಳ ಬದುಕು ದುಸ್ತರವಾಗುತ್ತದೆ. ಸ್ವಲ್ಪ ಸಮಯದ ಹಿಂದೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನ್ನ ಕೆಲವು ಕೆಆರ್‌ಎ ವಿಭಾಗಗಳಲ್ಲಿ ವಾರ್ಷಿಕ ಗುರಿಯನ್ನು ವಿಪರೀತ ಏರಿಸಿದಾಗ, ಆ ಕ್ರಮವನ್ನು ಪ್ರತಿಭಟಿಸಿದ ಉದ್ಯೋಗಿಗಳು, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ‘ಉದ್ಯೋಗಿಗಳು ಯಂತ್ರಮಾನವರಲ್ಲ. ನಮ್ಮನ್ನು ಹಾಗೆ ಭಾವಿಸಬೇಡಿ’ ಎಂದಿದ್ದಾರೆ. ಆದರೆ ಈ ಬಗೆಯ ಸ್ವಾತಂತ್ರ್ಯವು ಎಲ್ಲ ವಲಯಗಳ ಉದ್ಯೋಗಿಗಳಿಗೆ ಇಲ್ಲ. ಕೆಲಸಕ್ಕೆ ಸಂಚಕಾರ ಬರುವ ಸಾಧ್ಯತೆಯಿಂದ ಅಂತಹ ಸಾಹಸಕ್ಕೆ ಕೈಹಾಕುವವರ ಸಂಖ್ಯೆ ಸ್ವಾಭಾವಿಕವಾಗಿಯೇ ಬಹು ಕಡಿಮೆ.
ಅತೀವ ಒತ್ತಡದ ಪರಿಸರದಲ್ಲಿ, ವಿಪರೀತ ಕೆಲಸದ ಹೊರೆಯಿಂದ ಉಂಟಾಗುವ ‘ಬರ್ನ್‍ಔಟ್’ ಸ್ಥಿತಿಯನ್ನು, ‘ಉದ್ಯೋಗಜನ್ಯ ಆರೋಗ್ಯದ ಸಮಸ್ಯೆ’ ಎಂದು 2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿತು. ಈ ಬರ್ನ್‍ಔಟ್ ಸ್ಥಿತಿಯ ಮೂರು ಮುಖ್ಯ ಲಕ್ಷಣಗಳೆಂದರೆ, ನಿರಂತರವಾದ ತೀವ್ರ ಬಳಲಿಕೆ, ಕೆಲಸಕ್ಕೆ ಸಂಬಂಧಿಸಿದಂತೆ ತೀವ್ರ ನಕಾರಾತ್ಮಕವಾದ ಭಾವನೆ ಮತ್ತು ಕಾರ್ಯಸಾಧನೆಯ ಸಾಮರ್ಥ್ಯದಲ್ಲಿ ಗಮನಾರ್ಹವಾದ ಇಳಿಕೆ.
2023ರಲ್ಲಿ ಮೆಕೆನ್ಸಿ ಸಂಸ್ಥೆಯು ಪ್ರಪಂಚದ 30 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಬರ್ನ್‍ಔಟ್ ಗತಿ ಭಾರತದಲ್ಲಿ ಶೇ 60ರಷ್ಟಿದೆ. ಇದು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು. ಜಾಗತಿಕ ಮಟ್ಟದಲ್ಲಿ ಇದು ಸರಾಸರಿ ಶೇ 20ರಷ್ಟು. ಅತಿ ಹೆಚ್ಚಿನ ಕೆಲಸದ ಹೊರೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಸಾಯುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಸದ್ಯದಲ್ಲಿ ಲಭ್ಯವಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳಂತೆ, 2016ರಲ್ಲಿ ದೀರ್ಘಕಾಲದ ಕೆಲಸದ ಅವಧಿ ತಂದ ಸಮಸ್ಯೆಯಿಂದ ಭಾರತದಲ್ಲಿ ಸತ್ತವರ ಸಂಖ್ಯೆ 2,01,840, ಚೀನಾದಲ್ಲಿ 1,60,331. ಜಪಾನ್, ಅಮೆರಿಕ, ಜರ್ಮನಿ ಮತ್ತು ಇಂಗ್ಲೆಂಡ್‍ನಲ್ಲಿ ಅನುಕ್ರಮವಾಗಿ 9,139, 7,382, 2,658 ಹಾಗೂ 1,831.
ಕೆಲಸದ ಅವಧಿಯನ್ನು ಹೆಚ್ಚಿಸಿದ ಮಾತ್ರಕ್ಕೆ ಉತ್ಪಾದಕತೆಯೂ ಹೆಚ್ಚುತ್ತದೆ ಎಂಬ ಕಲ್ಪನೆಯೇ ತಪ್ಪು ಎಂಬುದನ್ನು ಅನೇಕ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಜಪಾನ್‍ನಲ್ಲಿ ವಾರಕ್ಕೆ 60 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುವ ಮಾದರಿಯಿದ್ದರೂ ಹಿಂದಿನ 50 ವರ್ಷಗಳಿಂದ ಅದರ ಉತ್ಪಾದಕತೆ ಜಿ-7 ದೇಶಗಳ ಗುಂಪಿನಲ್ಲಿ ಅತಿ ಕಡಿಮೆಯಿದೆ.
ಉದ್ಯೋಗದ ಸ್ಥಳದಲ್ಲಿ ಹಿತಕರ ಪರಿಸರವಿದ್ದಾಗ ಮಾತ್ರ ಉದ್ಯೋಗಿಗಳು ಸಂಸ್ಥೆಯ ಏಳಿಗೆಗೆ ಮೌಲಿಕ ಕೊಡುಗೆ ನೀಡಲು ಸಾಧ್ಯ. ಕೆಲಸದ ಸ್ಥಳದಲ್ಲಿ ಮುಕ್ತ ಮತ್ತು ಪಾರದರ್ಶಕ ಪರಿಸರವಿದ್ದು, ಉದ್ಯೋಗಿಗಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕು. ತಂಡದ ಮುಖ್ಯಸ್ಥರಿಗೆ ಈ ದಿಕ್ಕಿನಲ್ಲಿ ತರಬೇತಿ ನೀಡಬೇಕು. ಲೈಂಗಿಕ ಕಿರುಕುಳ ವಿರುದ್ಧದ ದೂರುಗಳನ್ನು ಪರಿಶೀಲಿಸಲು ಸಮಿತಿಗಳು ಇರುವಂತೆಯೇ ಅಹಿತಕರ ಪರಿಸರ ಮತ್ತು ಅವಹೇಳನಕಾರಿ ನಡವಳಿಕೆಗಳನ್ನು ಪರಿಶೀಲಿಸಲೂ ಸಮಿತಿಗಳು ಇರಬೇಕೆಂಬುದು ಉದ್ಯೋಗಿಗಳ ಬೇಡಿಕೆ. ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿನ ಉದ್ಯೋಗಿಗಳ ಕ್ಷೇಮಾಭ್ಯುದಯಕ್ಕಾಗಿ ಶ್ರಮಿಸುತ್ತಿರುವ ‘ನೇಸೆಂಟ್ ಐ.ಟಿ ಎಂಪ್ಲಾಯೀಸ್ ಸೆನೆಟ್’, ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಗೃಹ ಸಚಿವಾಲಯ ಗಳಿಗೆ ಪತ್ರ ಬರೆದು, ಉದ್ಯೋಗಿಗಳ ಘನತೆ, ಗೌರವದ ಬಗ್ಗೆ ಕೆಲವು ಕಂಪನಿಗಳು ತೋರುತ್ತಿರುವ ಆಘಾತಕಾರಿ ಉಪೇಕ್ಷೆಯ ನಡವಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಕೋರಿದೆ.
ಫ್ರಾನ್ಸ್, ಬೆಲ್ಜಿಯಂ, ಇಟಲಿ ದೇಶಗಳ ಉದ್ಯೋಗಿಗಳಿಗೆ ‘ರೈಟ್ ಟು ಡಿಸ್‍ಕನೆಕ್ಟ್’ ಸೌಲಭ್ಯವಿದೆ. ಈ ಹಕ್ಕಿನ ಅಡಿಯಲ್ಲಿ, ಕೆಲಸದ ಅವಧಿಯ ನಂತರ ಉದ್ಯೋಗಿಗಳು ಕಂಪನಿಯ ಸಂದೇಶ, ಇ- ಮೇಲ್‍ಗಳಿಗೆ ಉತ್ತರ ನೀಡಬೇಕಿಲ್ಲ. ಕಚೇರಿಯ ಕೆಲಸ ಮಾಡಬೇಕಿಲ್ಲ. ಕಂಪನಿಗಳೂ ತೀರಾ ಅನಿವಾರ್ಯವಾದ ವಿನಾ ಉದ್ಯೋಗಿಗಳನ್ನು ಸಂಪರ್ಕಿಸುವಂತಿಲ್ಲ. ಈ ವರ್ಷ ಆಸ್ಟ್ರೇಲಿಯಾದಲ್ಲೂ ಉದ್ಯೋಗಿಗಳಿಗೆ ಈ ಹಕ್ಕು ದೊರೆತಿದೆ. ಭಾರತದಲ್ಲಿಯೂ ಇಂಥ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುವುದು ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಸೂಕ್ತ.
ಅನ್ನಾ ಸೆಬಾಸ್ಟಿಯನ್ ದುರಂತದ ನಂತರ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ, ಮಹಿಳೆಯರು ನಿರ್ವಹಿಸುವ ಹೆಚ್ಚುವರಿ ಕೌಟುಂಬಿಕ ಕರ್ತವ್ಯಗಳು, ಅವರ ಗರ್ಭಧಾರಣೆ ಮತ್ತು ಮಾಸಿಕ ಋತುಚಕ್ರಕ್ಕೆ ಸಂಬಂಧಿಸಿದಂತೆ ದೈಹಿಕ ಆರೋಗ್ಯವು ಆಕೆಯ ಮೇಲೆ ಹೇರುವ ಒತ್ತಡಗಳನ್ನೂ ಪರಿಗಣಿಸಬೇಕಾದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.