‘ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ನಾವು ಅವಸರ ಮಾಡುವುದಿಲ್ಲ’ ಎಂದು ಪ್ರಾರಂಭದಲ್ಲಿ ಹೇಳಿದ್ದ ನಾಸಾ, ಈಗ ಹಲವು ಪರ್ಯಾಯ ಯೋಜನೆಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಅತ್ತ ವಿವಿಧ ಪ್ರಯೋಗಗಳಲ್ಲಿ ಮುಳುಗಿಹೋಗಿರುವ ಸುನಿತಾ, ಸಸ್ಯಗಳ ಬೆಳವಣಿಗೆಯ ಮೇಲೆ ಅಲ್ಲಿನ ಮೈಕ್ರೊಗ್ರ್ಯಾವಿಟಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ನಾಸಾದ ವಾಣಿಜ್ಯ ಹಾರಾಟಗಳ ವಿಭಾಗದ ಮುಖ್ಯಸ್ಥರಾಗಿರುವ ಸ್ಟೀವ್ ಸ್ಟಿಚ್, ‘ನಮ್ಮ ಪ್ರಥಮ ಆದ್ಯತೆ ಏನಿದ್ದರೂ ಸ್ಟಾರ್‌ಲೈನರ್ ನೌಕೆಯನ್ನು ಸರಿಪಡಿಸಿ ಅದರಲ್ಲಿಯೇ ಗಗನಯಾತ್ರಿಗಳನ್ನು ವಾಪಸ್ ಕರೆತರುವುದು. ಅದು ಶೀಘ್ರವಾಗಿ ರಿಪೇರಿಯಾಗದಿದ್ದರೆ, 2025ರ ಫೆಬ್ರುವರಿ ತಿಂಗಳಿನಲ್ಲಿ ಭೂಮಿಗೆ ಮರಳಲಿರುವ ಸ್ಪೇಸ್ ಎಕ್ಸ್‌ನ ಕ್ರೂ ಡ್ರ್ಯಾಗನ್ ಫ್ರೀಡಂ ನೌಕೆಯ ಮೂಲಕ ಸುನಿತಾ ಮತ್ತು ಬುಚ್ ಹಿಂತಿರುಗಿ ಬರಬಹುದು’ ಎಂದು ಹೇಳಿಕೆ ನೀಡಿದ್ದಾರೆ. ಇದು, ಗಗನಯಾತ್ರಿಗಳ ಮರುಪಯಣ ಇನ್ನಷ್ಟು ತಡವಾಗಬಹುದು ಎಂಬ ಸೂಚನೆ ನೀಡಿದೆ. ಹತ್ತು ದಿನಗಳ ವಾಸ್ತವ್ಯವು 60 ದಿನಗಳವರೆಗೂ ವಿಸ್ತರಿಸಿದ್ದು ಮತ್ತು ಮರುಪಯಣದ ದಿನಾಂಕ ಇನ್ನೂ ನಿಗದಿಯಾಗದಿರುವುದು ಹಲವು ಆತಂಕಗಳಿಗೆ ಕಾರಣವಾಗಿದೆ.
ಈ ನಡುವೆ ನಾಸಾ ಆಡಳಿತ ಮಂಡಳಿಯು ಸ್ಪೇಸ್ ಎಕ್ಸ್‌ನವರು ಈ ತಿಂಗಳ 18ರ ನಂತರ ಭೂಮಿಯಿಂದ ಉಡಾಯಿಸಲಿರುವ ಕ್ರೂ ಡ್ರ್ಯಾಗನ್ ಫ್ರೀಡಂ ನೌಕೆಯ ಮೂಲಕ ಗಗನಯಾತ್ರಿಗಳನ್ನು ವಾಪಸ್ ಕರೆತರುವುದು ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಅಂ.ಬಾ.ನಿ) ಇರುವ ಸ್ಟಾರ್‌ಲೈನರ್ ನೌಕೆಯನ್ನು ಖಾಲಿಯಾಗಿಯೇ ಮರಳಿ ಭೂಮಿಗೆ ತರುವುದರ ಕುರಿತು ಯೋಚಿಸುತ್ತಿದೆ.
ಬೋಯಿಂಗ್ ಕಂಪನಿಯ ಬಾಹ್ಯಾಕಾಶ ತಂತ್ರಜ್ಞಾನ ಸರಿಯಾಗಿಲ್ಲ ಎನ್ನುವವರ ಟೀಕೆಗೆ ಉತ್ತರಿಸಿರುವ ಬೋಯಿಂಗ್‌ನ ಅಧಿಕಾರಿ ಮಾರ್ಕ್ ನಪ್ಪಿ, ‘ತುರ್ತು ಸಂದರ್ಭ ಎದುರಾದರೆ ನಮ್ಮ ಗಗನಯಾತ್ರಿಗಳು ನಮ್ಮ ನೌಕೆಯನ್ನೇ ಬಳಸಿ ಭೂಮಿಗೆ ಯಾವುದೇ ಕ್ಷಣದಲ್ಲೂ ಹಿಂತಿರುಗಬಹುದು’ ಎಂದಿದ್ದಾರೆ.
ಸುನಿತಾ ಅವರಿಗೆ ಬಾಹ್ಯಾಕಾಶ ಯಾನ ಹೊಸದೇನೂ ಅಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ
ಸಹಗಗನಯಾತ್ರಿಗಳೊಂದಿಗೆ ಎರಡು ಸಲ ಯಶಸ್ವಿಯಾಗಿ ಹೋಗಿ ಬಂದಿದ್ದಾರೆ. ಬಾಹ್ಯಾಕಾಶದಲ್ಲಿ ನಾಲ್ಕು ಬಾರಿ ನಡೆದು, ಒಟ್ಟು 29 ಗಂಟೆ ಮತ್ತು 17 ನಿಮಿಷಗಳ ನಡಿಗೆಯ ದಾಖಲೆ ಬರೆದಿದ್ದಾರೆ. ಅಲ್ಲಿ 322 ದಿನ ವಾಸ್ತವ್ಯ ಮಾಡಿರುವ ಸುನಿತಾ ವಿಲಿಯಮ್ಸ್ ಈಗ ದುರದೃಷ್ಟವೆಂಬಂತೆ ತಮ್ಮ ಮೂರನೆಯ ಬಾಹ್ಯಾಕಾಶ ಯಾತ್ರೆಯ ಪ್ರಯತ್ನದಲ್ಲಿ ತುಸು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.
ಬೋಯಿಂಗ್ ಮತ್ತು ಲಾಕ್ ಹೀಡ್ ಮಾರ್ಟಿನ್ ಕಂಪನಿಗಳು ಜೂನ್ 5ರಂದು ಜಂಟಿಯಾಗಿ ಕೈಗೊಂಡ ಮೊದಲ ಬಾಹ್ಯಾಕಾಶ ಯಾನದ ಪ್ರಯತ್ನದಲ್ಲಿ ಸ್ಟಾರ್‌ಲೈನರ್‌ನ ಅಟ್ಲಾಸ್ V ರಾಕೆಟ್‌ನಲ್ಲಿ ಕುಳಿತು ಫ್ಲಾರಿಡಾದ ಕೇಪ್ ಕೆನವರಲ್ ಉಡ್ಡಯನ ತಾಣದಿಂದ ಹಾರಿದ ಬುಟ್ಟಿ ಆಕಾರದ ‘ಕೆಲಿಪ್ಸೋ’, ನಾಲ್ಕುನೂರು ಕಿಲೊಮೀಟರ್ ಎತ್ತರದಲ್ಲಿ ಭೂಮಿಯನ್ನು ನಿಮಿಷಕ್ಕೆ 470 ಕಿಲೊಮೀಟರ್ ವೇಗದಲ್ಲಿ ಸುತ್ತುತ್ತಿರುವ ಅಂತರ
ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 7 ತಾಸುಗಳ ನಂತರ ಸೇರಿಕೊಂಡಿತ್ತು. ತಾವು ನಿರ್ಮಿಸಿದ ನೌಕೆಯ ಹಾರಾಟದ ಕ್ಷಮತೆಯನ್ನು ಪರೀಕ್ಷಿಸಲು ಬೋಯಿಂಗ್ ಮಾಡಿದ ಪ್ರಥಮ ಪ್ರಯತ್ನ ಇದಾಗಿತ್ತು.
ಹತ್ತು ದಿನಗಳ ವಾಸ್ತವ್ಯದ ನಂತರ ಹಿಂತಿರುಗಿ ಪಯಣಿಸಿ ಭೂಮಿಯ ವಾತಾವರಣವನ್ನು ಪ್ರವೇಶಿಸಿ ಪ್ಯಾರಾಚೂಟ್ ಮತ್ತು ಏರ್‌ಬ್ಯಾಗ್‌ಗಳ ಸಹಾಯದಿಂದ ಅಮೆರಿಕದ ನೈರುತ್ಯ ಭಾಗದ ಮರಳುಗಾಡಿನಲ್ಲಿ ನೌಕೆಯನ್ನು ಇಳಿಸುವುದೆಂದು ಯೋಜಿಸಲಾಗಿತ್ತು. ನೌಕೆಯ ಪ್ರೊಪಲ್ಶನ್ ರಾಕೆಟ್‌ಗಳಲ್ಲಿ ಸಂಭವಿಸಿದ ಹೀಲಿಯಂ ಸೋರಿಕೆ ಮತ್ತು ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್‌ನಲ್ಲಿನ ದೋಷಗಳಿಂದಾಗಿ ಗಗನಯಾತ್ರಿಗಳ ಮರುಪಯಣ ಸಾಧ್ಯವಾಗುತ್ತಿಲ್ಲ.
ಹೊರಡುವ ಮುನ್ನವೇ ಸರ್ವಿಸ್ ಮಾಡ್ಯೂಲ್‌ನಲ್ಲಿ ಹೀಲಿಯಂ ಅನಿಲ ಸೋರಿಕೆಯಾಗಿತ್ತು. ಪೈಪೋಟಿ ನೀಡುತ್ತಿರುವ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ಎದುರು ‘ಪ್ರಥಮ ಚುಂಬನಂ ದಂತ ಭಗ್ನಂ’ ಎನ್ನುವಂತೆ ಬೋಯಿಂಗ್ ಈಗ ಇರುಸುಮುರುಸು ಅನುಭವಿಸುತ್ತಿದೆ. ನೌಕೆಯ ನಿಯಂತ್ರಣ ಮತ್ತು ಹಾರಾಟಕ್ಕೆ ನೆರವಾಗಲು ನೌಕೆಗೆ ಅಂಟಿಕೊಂಡ 28 ಪ್ರೊಪಲ್ಶನ್ (ಚಿಕ್ಕ) ರಾಕೆಟ್‌ಗಳಿವೆ. ಅವುಗಳಲ್ಲಿ ಐದು ಹಾಳಾಗಿವೆ. ಇವು ರಿಪೇರಿ ಆಗುವವರೆಗೂ ವಿಲಿಯಮ್ಸ್ ಮತ್ತು ಬುಚ್ ಭೂಮಿಗೆ ಹಿಂತಿರುಗುವುದು ಕಷ್ಟಸಾಧ್ಯ. ಅಂ.ಬಾ.ನಿ. ಪ್ರವೇಶಿಸುವುದಕ್ಕೂ ಮುನ್ನ ಗಗನಯಾತ್ರಿಗಳಿಬ್ಬರೂ ತಮ್ಮ ನೌಕೆಯ ಪ್ರೊಪಲ್ಶನ್ ರಾಕೆಟ್‌ಗಳಲ್ಲಿ ಸಂಭವಿಸಿದ ಹೀಲಿಯಂ ಸೋರಿಕೆಯನ್ನು ಸರಿಮಾಡಲು ಸತತ 2 ಗಂಟೆಗಳ ಕಾಲ ಪರೀಕ್ಷೆ ನಡೆಸಿದ್ದರು. ಭೂಮಿಯಿಂದ ಹಾರಿದ ಸ್ಟಾರ್‌ಲೈನರ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಣೆಗೊಳ್ಳುವಾಗ ರಾಕೆಟ್‌ಗಳು ಸರಿಯಾಗಿ ಕೆಲಸ ಮಾಡದ್ದರಿಂದ ಜೋಡಣೆ (ಡಾಕಿಂಗ್) ಕಾರ್ಯ ತಡವಾಗಿತ್ತು.
ಸ್ಟಾರ್‌ಲೈನರ್ ನೌಕೆಯಲ್ಲಿ ಹಿಂದಿನ ಎರಡು ವರ್ಷಗಳಿಂದಲೂ ಒಂದಲ್ಲ ಒಂದು ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಲೇ ಇತ್ತು. ಹಲವು ಬಗೆಯ ರಿಪೇರಿ ಮತ್ತು ಮುನ್ನೆಚ್ಚರಿಕೆಯ ನಂತರ 2022ರಲ್ಲಿ ಮೊದಲ ಮಾನವರಹಿತ ಪರೀಕ್ಷಾರ್ಥ ಉಡ್ಡಯನ ನಡೆದು ಅದು ಯಶಸ್ವಿಯಾಗಿತ್ತು. ತಾಂತ್ರಿಕ ದೋಷಗಳಿಂದಾಗಿ ಇಲ್ಲಿಂದ ಹೊರಡುವಾಗಲೇ ಎರಡು ಸಲ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನೌಕೆ ಏರಿ ಕುಳಿತವರನ್ನು ಕೆಳಗಿಳಿಸಲಾಗಿತ್ತು. ಸಹ ಗಗನಯಾತ್ರಿ ಬುಚ್‌ರೊಂದಿಗೆ ಬರೀ ಏಳು ತಾಸುಗಳಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ವಿಲಿಯಮ್ಸ್‌ಗೆ ಭೂಮಿಗೆ ಮರಳುವ ವಿಷಯ ಇಷ್ಟೊಂದು ಕಗ್ಗಂಟಾಗಿ ಕೂಡುತ್ತದೆ ಎಂಬುದರ ಸಣ್ಣ ಊಹೆಯೂ ಇರಲಿಲ್ಲವೇನೊ.
ಜೂನ್ 6ರಂದು ಅಂ.ಬಾ.ನಿ. ತಲುಪಿದ ಗಗನಯಾತ್ರಿಗಳು ‘ಅಂತರಿಕ್ಷದ ದೊಡ್ಡ ನಗರಕ್ಕೆ ಬಂದು ತಲುಪಿರುವುದು ತುಂಬಾ ಖುಷಿ ನೀಡುತ್ತಿದೆ’ ಎಂದು ರೇಡಿಯೊ ಸಂದೇಶ ಕಳಿಸಿದ್ದರು. ಜೂನ್ 16ಕ್ಕೆ ನೌಕೆಯು ಭೂಮಿಗೆ ಹಿಂತಿರುಗಬೇಕಿತ್ತು. ಹಿಂತಿರುಗಿ ಬರಲು ಏಳು ಗಂಟೆಗಳ ಸಮಯ ಹಿಡಿಯುತ್ತದೆ. ಅದಕ್ಕೆ ಬೇಕಾದ ಹೀಲಿಯಂ ಇಂಧನ ನೌಕೆಯಲ್ಲಿದೆ. ಅದರ ಬಲದಿಂದ ನೌಕೆಯನ್ನು 70 ತಾಸುಗಳವರೆಗೆ ಹಾರಿಸಬಹುದಾಗಿದೆ. ನೌಕೆಯನ್ನು ತಂಪಾಗಿರಿಸಿರುವ ಘಟಕದಲ್ಲಿ ಆಗಿರುವ ಸೋರಿಕೆಯನ್ನು ತಡೆಯಲು ಇನ್ನೂ ಕೆಲವು ವಾರಗಳು ಬೇಕು. ಸ್ಟಾರ್‌ಲೈನರ್ ನೌಕೆಯು 45 ದಿನಗಳವರೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಬಹುದು ಎಂಬ ಪ್ರಾರಂಭಿಕ ಲೆಕ್ಕಾಚಾರಗಳಿದ್ದವು. ಈಗಾಗಲೇ 60 ದಿನಗಳು ಕಳೆದಿವೆ. ನಾಸಾದ ಗ್ರೌಂಡ್ ಸ್ಟೇಷನ್‌ನವರು ನೀಡುವ ಸಲಹೆಗಳನ್ನಾಧರಿಸಿ ಹೀಲಿಯಂ ಸೋರಿಕೆಯ ಭಾಗಗಳ ರಿಪೇರಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಉಡಾವಣೆಗೂ ಮುಂಚೆ ನೌಕೆಯ ದಿಕ್ಕು ತೋರಿಸುವ ಮತ್ತು ನಿಯಂತ್ರಿಸುವ ಥ್ರಸ್ಟರ್‌ಗಳಲ್ಲಿ
ದೋಷ ಕಾಣಿಸಿಕೊಂಡಿತ್ತು. ಆದರೂ ನೌಕೆಯು ಸುರಕ್ಷಿತವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತ್ತು. ನೌಕೆಯನ್ನು ಭೂಮಿಗೆ ವಾಪಸ್ ತರುವ ಬಲವಾದ ರಾಕೆಟ್‌ಗಳು ಇನ್ನೂ ಸುಸ್ಥಿತಿ
ಯಲ್ಲಿವೆ ಎಂದಿರುವ ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳು, ಗಗನಯಾತ್ರಿಗಳು ಭೂಮಿಗೆ ಕ್ಷೇಮವಾಗಿ ಹಿಂತಿರುಗುತ್ತಾರೆ ಎಂಬ ಭರವಸೆಯ ಮಾತಾಡಿವೆ.
ಕೆಲ ದಿನಗಳ ಹಿಂದೆ ಬಾಹ್ಯಾಕಾಶ ನಿಲ್ದಾಣದಿಂದ ನಾಸಾದ ಗ್ರೌಂಡ್ ಸ್ಟೇಷನ್‌ನೊಂದಿಗೆ ಸಂಪರ್ಕ ಸಾಧಿಸಿದ್ದ ಬುಚ್ ಮತ್ತು ಸುನಿತಾ, ‘ಭೂಮಿಗೆ ಸುರಕ್ಷಿತವಾಗಿ ಬಂದೇ ಬರುತ್ತೇವೆ’ ಎಂದಿದ್ದರು. ಹೀಲಿಯಂ ಸೋರಿಕೆಯನ್ನು ಸರಿಪಡಿಸುತ್ತಲೇ ಮರು ಪ್ರಯಾಣಕ್ಕಾಗಿ ನೌಕೆಯ ಏರ್ ಫಿಲ್ಟರ್‌ಗಳ ಕ್ಷಮತೆಯನ್ನು ಪರೀಕ್ಷಿಸಿದ್ದಾರೆ. ಮನುಷ್ಯನ ವಂಶವಾಹಿ ಅನುಕ್ರಮಣಿಕೆ (ಜೀನ್ ಸೀಕ್ವೆನ್ಸಿಂಗ್) ಮೇಲೆ ಮೈಕ್ರೊ ಗ್ರ್ಯಾವಿಟಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಲ್ಲಿರುವ ಪ್ರಯೋಗಶಾಲೆಯಲ್ಲಿ ಪರೀಕ್ಷಿಸುತ್ತಿದ್ದಾರೆ. ಬಾಹ್ಯಾಕಾಶದಲ್ಲಿನ ಹೆಚ್ಚಿನ ವಿಕಿರಣ, ಕ್ಷೀಣ ಗುರುತ್ವಗಳಿಂದಾಗಿ ಸ್ನಾಯು ಕ್ಷೀಣವಾಗುವಿಕೆ, ಮೂತ್ರಕೋಶದಲ್ಲಿ ಕಲ್ಲು ಮತ್ತು ಮೂಳೆಸವೆತದಂತಹ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಈಗಾಗಲೇ ವರದಿಯಾಗಿರುವಂತೆ, ಸ್ಪೇಸ್ ಎಕ್ಸ್ ಕಂಪನಿಯ ಕ್ರೂ ಡ್ರ್ಯಾಗನ್ ಫ್ರೀಡಂ ನೌಕೆಯು ಆಗಸ್ಟ್ 18ರ ನಂತರ ಅಂ.ಬಾ.ನಿ. ಪ್ರವೇಶಿಸಲಿದೆ. ಅಷ್ಟರಲ್ಲಿ ಸ್ಟಾರ್‌ಲೈನರ್ ನೌಕೆ ಅಲ್ಲಿಂದ ಜಾಗ ಖಾಲಿ ಮಾಡಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.