ADVERTISEMENT

ವಿಶ್ಲೇಷಣೆ: ಕೋಚಿಂಗ್‌ ಕೇಂದ್ರಕ್ಕೆ ಲಗಾಮು

ಅನುಚಿತ ವ್ಯವಹಾರಗಳಿಗೆ ತಡೆಯೊಡ್ಡುವುದೇ ಕೇಂದ್ರದ ಮಾರ್ಗಸೂಚಿ?

ವೈ.ಜಿ.ಮುರಳೀಧರನ್
Published 19 ಫೆಬ್ರುವರಿ 2024, 19:26 IST
Last Updated 19 ಫೆಬ್ರುವರಿ 2024, 19:26 IST
<div class="paragraphs"><p>ವಿಶ್ಲೇಷಣೆ: ಕೋಚಿಂಗ್‌ ಕೇಂದ್ರಕ್ಕೆ ಲಗಾಮು</p></div>

ವಿಶ್ಲೇಷಣೆ: ಕೋಚಿಂಗ್‌ ಕೇಂದ್ರಕ್ಕೆ ಲಗಾಮು

   

ಒಂದು ಕಾಲದಲ್ಲಿ ಉಪಾಧ್ಯಾಯರ ಮನೆಗಳಿಗೆ ಸೀಮಿತವಾಗಿದ್ದ ‘ಟ್ಯೂಷನ್‌’ ಈಗ ಒಂದು ಬೃಹತ್‌ ಉದ್ಯಮವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲ ಐಐಟಿ, ಐಐಎಂನಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಯುವಜನ ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಕೋಚಿಂಗ್‌ ಕೇಂದ್ರಗಳಿಗೆ ಸೇರುತ್ತಿದ್ದಾರೆ.

ಜೆಇಇ, ಎನ್‌ಇಇಟಿ, ಸಿಎಲ್‌ಎಟಿ ಪ್ರವೇಶ ಪರೀಕ್ಷೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಶುಲ್ಕವೂ ಅಧಿಕವಾಗಿದೆ. ರಾಜಸ್ಥಾನದ ಕೋಟಾವು ‘ಕೋಚಿಂಗ್‌ ಕಾರ್ಖಾನೆ’ ಎಂದೇ ಖ್ಯಾತಿ ಹೊಂದಿದೆ. ಬೆಂಗಳೂರಿನ ವಿಜಯನಗರ ಬಡಾವಣೆ ಅತಿ ಹೆಚ್ಚು ಕೋಚಿಂಗ್‌ ಕೇಂದ್ರಗಳನ್ನು ಹೊಂದಿದೆ.  ದೇಶದ ಕೋಚಿಂಗ್‌ ವ್ಯವಹಾರದ ಒಟ್ಟು ಮೊತ್ತ ₹ 58.08 ಸಾವಿರ ಕೋಟಿ ಎಂದು ಪುಣೆಯಲ್ಲಿರುವ ಇನ್ಫಿನಿಯಮ್‌ ಗ್ಲೋಬಲ್‌ ರಿಸರ್ಚ್‌ ಸಂಸ್ಥೆ ಅಂದಾಜು ಮಾಡಿದೆ. ಇದು 2028ರ ಹೊತ್ತಿಗೆ ₹ 1.34 ಲಕ್ಷ ಕೋಟಿಗೆ ಏರಿಕೆ ಆಗಬಹುದೆಂದು ಅಂದಾಜು ಮಾಡಲಾಗಿದೆ.

ADVERTISEMENT

ದೇಶದಾದ್ಯಂತ ವ್ಯಾಪಿಸಿರುವ ಈ ಕೋಚಿಂಗ್‌ ಕೇಂದ್ರಗಳಲ್ಲಿ ಕೆಲವು ಜವಾಬ್ದಾರಿ ಅರಿತು ಬದ್ಧತೆಯಿಂದ ನಡೆದುಕೊಳ್ಳುತ್ತಿವೆ. ಕೋಚಿಂಗ್‌ ನೀಡುವ ನೆಪದಲ್ಲಿ ಕೆಲವು ಕೇಂದ್ರಗಳು ಅನುಚಿತವಾಗಿ ವರ್ತಿಸುತ್ತಿವೆ. ಇಂತಹ ಅನುಚಿತ ವ್ಯವಹಾರಗಳ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ, ಗ್ರಾಹಕ ವೇದಿಕೆಗಳಲ್ಲಿ ಈ ಸಂಬಂಧ ದೂರುಗಳು ಕೂಡ ದಾಖಲಾಗಿವೆ. ಕೋಚಿಂಗ್‌ ಕೇಂದ್ರಗಳನ್ನು ನಿಯಂತ್ರಿಸಲು ಬಿಗಿಯಾದ ಕಾನೂನು ಇಲ್ಲದ ಕಾರಣ ವಿದ್ಯಾರ್ಥಿಗಳು ಹಣ ಕಳೆದುಕೊಂಡಿದ್ದಾರೆ. ಕೇಂದ್ರಗಳು ಬಿಂಬಿಸಿಕೊಂಡಂತೆ ಉತ್ತಮ ತರಬೇತಿ ಸಹ ದೊರೆಯದ ಕಾರಣ ಅವರ ಅಮೂಲ್ಯ ಸಮಯ ವ್ಯರ್ಥವಾಗಿರುವಂತಹ ನಿದರ್ಶನಗಳೂ ಸಿಗುತ್ತವೆ.

ಕೋಚಿಂಗ್‌ ಕೇಂದ್ರಗಳು ಪಡೆಯುವ ಶುಲ್ಕಕ್ಕೆ ಯಾವುದೇ ಇತಿಮಿತಿ ಇಲ್ಲ. ಕೆಲವು ಕೇಂದ್ರಗಳು ರಸೀದಿಯನ್ನೂ ನೀಡುವುದಿಲ್ಲ. ಇಡೀ ಮೊತ್ತವನ್ನು ನಗದು ರೂಪದಲ್ಲೇ ನೀಡಬೇಕೆಂಬ ಷರತ್ತನ್ನು ಸಹ ಕೆಲವು ಕೇಂದ್ರಗಳಲ್ಲಿ ವಿಧಿಸಲಾಗುತ್ತದೆ.

ಉತ್ತಮ ಉಪನ್ಯಾಸಕರು, ಶ್ರೇಷ್ಠ ಮಟ್ಟದ ಪಠ್ಯಸಾಮಗ್ರಿ, ಮಾರ್ಗದರ್ಶನ ಎಲ್ಲವನ್ನೂ ನೀಡಲಾಗುತ್ತದೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಆಕರ್ಷಿಸಲಾಗುತ್ತದೆ. ಐಐಟಿ, ಐಐಎಂ ಪದವೀಧರರು, ಐಎಎಸ್‌ನಂತಹ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಗಳಿಸಿದವರು ಪಾಠ ಹೇಳಿಕೊಡುತ್ತಾರೆ, ಒಂದು ತರಗತಿಯಲ್ಲಿ ಕಡಿಮೆ ಸಂಖ್ಯೆಯ ಇಂತಿಷ್ಟೇ ವಿದ್ಯಾರ್ಥಿಗಳಿರುತ್ತಾರೆ, ಪ್ರತಿಯೊಬ್ಬರ ಮೇಲೂ ವೈಯಕ್ತಿಕ ನಿಗಾ ವಹಿಸಲಾಗುತ್ತದೆ ಎಂದೆಲ್ಲ ಪರೀಕ್ಷಾರ್ಥಿಗಳಿಗೆ ವಾಗ್ದಾನ ನೀಡಲಾಗುತ್ತದೆ. ಮೋಡಿ ಮಾಡುವಂತಹ ಕರಪತ್ರಗಳು, ನಿಜದ ನೆತ್ತಿ ಮೇಲೆ ಹೊಡೆದಂತೆ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಆದರೆ ವಾಸ್ತವ ಬೇರೆಯೇ ಇರುತ್ತದೆ. ಅದು, ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಇಂತಹ ಅನುಚಿತ ವ್ಯವಹಾರವನ್ನು ತಡೆಗಟ್ಟಲು ಪರಿಣಾಮಕಾರಿ ಕಾನೂನು ಇಲ್ಲದೇ ಇರುವುದು ದೊಡ್ಡ ಕೊರತೆಯಾಗಿ ಪರಿಣಮಿಸಿದೆ.

ಕೋಚಿಂಗ್‌ ಕೇಂದ್ರಗಳ ಹಾವಳಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸುವ ಸಲುವಾಗಿ ಹಾಗೂ ಈ ವ್ಯವಹಾರವನ್ನು ನಿಯಂತ್ರಿಸುವ ಸಲುವಾಗಿ ಕೆಲವು ಪ್ರಯತ್ನಗಳು ನಡೆದಿವೆ. ಈ ಕುರಿತು ಲೋಕಸಭೆಯಲ್ಲಿ ಖಾಸಗಿ ಮಸೂದೆಯೊಂದು ಮಂಡನೆಯಾಗಿತ್ತು. ಕರ್ನಾಟಕ ಸೇರಿದಂತೆ ನಾಲ್ಕೈದು ರಾಜ್ಯಗಳು ಕಡ್ಡಾಯ ಶಿಕ್ಷಣ ಅಧಿನಿಯಮದ ಅಡಿಯಲ್ಲಿ ನಿಯಮ ರೂಪಿಸಿ ಅದನ್ನು ಜಾರಿಗೆ ತಂದಿವೆ. ಹೊಸ ಶಿಕ್ಷಣ ನೀತಿಯಲ್ಲಿ ಈ ಸಂಬಂಧವಾಗಿ ಕೆಲವು ಅಂಶಗಳನ್ನು ಕಾಣಬಹುದು. ರಾಜಸ್ಥಾನದ ಕೋಟಾದಲ್ಲಿ ಸಂಭವಿಸುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟುವ ಬಗ್ಗೆಯೂ ಸರ್ಕಾರ ಗಮನಹರಿಸಿದೆ. ಆದರೆ ಇವು ಯಾವುವೂ ನಿರೀಕ್ಷಿತ ಫಲ ನೀಡಿಲ್ಲ. 

ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಕೋಚಿಂಗ್‌ ಕೇಂದ್ರಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಕೋಚಿಂಗ್‌ ಕೇಂದ್ರಗಳ ನೋಂದಣಿ, ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವಿಕೆ, ವಿದ್ಯಾರ್ಥಿಗಳ ಸುರಕ್ಷತೆ, ಸರ್ವಾಂಗೀಣ ಬೆಳವಣಿಗೆ ಮತ್ತು ಅವರ ಮಾನಸಿಕ ಸ್ವಾಸ್ಥ್ಯಕ್ಕೆ ಕೈಗೊಳ್ಳಬೇಕಾದ ಕ್ರಮಕ್ಕೆ ಸಂಬಂಧಿಸಿದಂತೆ ಐದು ಅಂಶಗಳನ್ನು ಮಾರ್ಗಸೂಚಿ ಒಳಗೊಂಡಿದೆ.

ಈ ಮಾರ್ಗಸೂಚಿಯ ಅನ್ವಯ, ಕನಿಷ್ಠ ಪದವೀಧರರಲ್ಲದವರನ್ನು ಪಾಠ ಹೇಳಿಕೊಡಲು ನೇಮಕ ಮಾಡಿಕೊಳ್ಳುವಂತಿಲ್ಲ. ರ‍್ಯಾಂಕ್‌ ಅಥವಾ ಅಂಕಗಳಿಗೆ ಸಂಬಂಧಿಸಿದಂತೆ ಹಾದಿ ತಪ್ಪಿಸುವ ಜಾಹೀರಾತು ನೀಡುವಂತಿಲ್ಲ. ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಮಾತ್ರ ಕೋಚಿಂಗ್‌ ಕೇಂದ್ರಕ್ಕೆ ಸೇರಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಕೋಚಿಂಗ್‌ ಕೇಂದ್ರಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವ ಮಾನಸಿಕ ಸಮಸ್ಯೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೋಚಿಂಗ್‌ ಕೇಂದ್ರದಲ್ಲಿ ಸಮಾಲೋಚನಾ ವ್ಯವಸ್ಥೆ (ಕೌನ್ಸೆಲಿಂಗ್‌) ಇರಬೇಕೆಂದು ಹೇಳಿದೆ. ಪ್ರತಿಯೊಂದು ಕೋಚಿಂಗ್‌ ಕೇಂದ್ರವೂ ವೆಬ್‌ಸೈಟ್‌ ಹೊಂದುವುದು ಕಡ್ಡಾಯವಾಗಿದೆ. ಅದರಲ್ಲಿ ಉಪನ್ಯಾಸಕರ ವಿವರ, ಅವರ ಶಿಕ್ಷಣದ ಮಟ್ಟ, ಹಾಸ್ಟೆಲ್‌ ಸೌಲಭ್ಯ (ಇದ್ದಲ್ಲಿ), ಎಲ್ಲಕ್ಕಿಂತ ಮುಖ್ಯವಾಗಿ ಶುಲ್ಕದ ವಿವರವನ್ನು ನೀಡಬೇಕಿದೆ.

ಒಂದುವೇಳೆ ವಿದ್ಯಾರ್ಥಿ ಅವಧಿ ಪೂರ್ಣಗೊಳ್ಳುವ ಮೊದಲೇ ಅಭ್ಯಾಸ ಮೊಟಕುಗೊಳಿಸಿದರೆ, ಅನುಪಾತದ ಆಧಾರದ ಮೇಲೆ, ಉಳಿದ ಹಣವನ್ನು 10 ದಿನಗಳ ಒಳಗೆ ಮರುಪಾವತಿ ಮಾಡಬೇಕು. ಒಂದು ಕೋರ್ಸ್‌ಗೆ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದ ನಂತರ ಆ ಶುಲ್ಕದ ಮೊತ್ತವನ್ನು ಹೆಚ್ಚಿಸುವಂತಿಲ್ಲ. ಅಲ್ಲದೆ ಕೋಚಿಂಗ್‌ ಕೇಂದ್ರದಲ್ಲಿ ಇರಬೇಕಾದ ಮೂಲ ಸೌಕರ್ಯದ ವಿವರಗಳನ್ನೂ ಮಾರ್ಗಸೂಚಿ ಹೊಂದಿದೆ. ಕೋಚಿಂಗ್‌ ತರಗತಿಗಳ ಅವಧಿ ಒಂದು ದಿನದಲ್ಲಿ ಐದು ಗಂಟೆಗಿಂತ ಹೆಚ್ಚಾಗಿ ಇರಬಾರದು ಹಾಗೂ ತರಗತಿಗಳನ್ನು ಬೆಳಿಗ್ಗೆ ತೀರಾ ಬೇಗ ಅಥವಾ ಸಂಜೆ ತೀರಾ ತಡವಾಗಿ ನಡೆಸಬಾರದೆಂದು ಸಹ ಮಾರ್ಗಸೂಚಿ ಹೇಳುತ್ತದೆ.

ಕೋಚಿಂಗ್‌ ಕೇಂದ್ರಗಳು ನೀಡುವ ಜಾಹೀರಾತಿನಲ್ಲಿ, ತಮ್ಮ ಕೇಂದ್ರದಲ್ಲಿ ಅಭ್ಯಾಸ ಮಾಡಿದವರು 100ಕ್ಕೆ 100ರಷ್ಟು ಅಂಕ ಪಡೆದಿದ್ದಾರೆ, ಐಐಟಿ, ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉನ್ನತ ರ‍್ಯಾಂಕ್‌ ಪಡೆದಿದ್ದಾರೆ ಎಂದೆಲ್ಲ ಹೇಳಿಕೆ ನೀಡಿ ವಿದ್ಯಾರ್ಥಿಗಳನ್ನು ತಮ್ಮ ಕೇಂದ್ರದತ್ತ ಸೆಳೆಯುವ ತಂತ್ರಕ್ಕೆ ಸಂಬಂಧಿಸಿದಂತೆ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಕರಡು ನಿಯಮವನ್ನು ಪ್ರಕಟಿಸಿದೆ.  ಕೋಚಿಂಗ್‌ ಕೇಂದ್ರಗಳ ಜಾಹೀರಾತುಗಳನ್ನು ನಿಯಂತ್ರಿಸುವ ಉದ್ದೇಶವನ್ನು ಈ ನಿಯಮಗಳು ಹೊಂದಿದ್ದು, ಈ ಸಂಬಂಧ ಪ್ರಾಧಿಕಾರವು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ.

ಕೋಚಿಂಗ್‌ ಕೇಂದ್ರಗಳು ನೀಡುವ ಜಾಹೀರಾತು ಮುಖ್ಯ ಅಂಶಗಳನ್ನು ಮುಚ್ಚಿಡಬಾರದೆಂದು ತಿಳಿಸಿರುವುದಲ್ಲದೆ, ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ವಿವರವನ್ನು ಆಧಾರವಿಲ್ಲದೆ ಪ್ರಕಟಿಸುವುದನ್ನು ನಿಷೇಧಿಸಿದೆ. ಅಂತಹ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯಲಾಗಿತ್ತೇ ಅಥವಾ ಉಚಿತವಾಗಿ ತರಬೇತಿ ನೀಡಲಾಗಿತ್ತೇ ಎಂಬುದನ್ನು ಬಹಿರಂಗಪಡಿಸಬೇಕಿದೆ. ಜಾಹೀರಾತುಗಳಲ್ಲಿ ವಿದ್ಯಾರ್ಥಿಗಳು ಇಷ್ಟನೇ ರ‍್ಯಾಂಕ್‌ ಪಡೆದಿದ್ದಾರೆ ಎಂಬುದಕ್ಕೆ ಸೂಕ್ತ ಆಧಾರ ಇರಬೇಕೆಂದು ಕರಡು ನಿಯಮ ಹೇಳುತ್ತದೆ. ರ‍್ಯಾಂಕ್‌ ಪಡೆಯಲು ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಮತ್ತು ಶ್ರಮವನ್ನು ಕಡೆಗಣಿಸಿ, ಬರೀ ತಮ್ಮ ಕೋಚಿಂಗ್‌ ಕೇಂದ್ರ ಸೇರಿದ್ದರಿಂದಲೇ ರ‍್ಯಾಂಕ್‌ ಪಡೆಯುವಂತಾಯಿತು ಎಂಬಂತಹ ಅಭಿಪ್ರಾಯವು ಜನರಲ್ಲಿ ಮೂಡದಂತೆ ನಿಗಾ ವಹಿಸಬೇಕೆಂದು ಸಹ ಕರಡು ಹೇಳುತ್ತದೆ.

ರ‍್ಯಾಂಕ್‌ ಪಡೆದಿರುವ ವಿದ್ಯಾರ್ಥಿಯ ಅನುಮತಿ ಇಲ್ಲದೆ ಅವರ ಚಿತ್ರ ಮತ್ತು ಇತರ ವಿವರಗಳನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವಂತಿಲ್ಲ. ತಮ್ಮ ಕೋಚಿಂಗ್‌ ಕೇಂದ್ರದಲ್ಲಿ ಅಭ್ಯಾಸ ಮಾಡಿದ ಶೇಕಡ 100ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ ಎಂದಾಗಲೀ ಅಥವಾ ಪ್ಲೇಸ್‌ಮೆಂಟ್‌ ದೊರೆಯುತ್ತದೆ ಎಂದಾಗಲೀ ಜಾಹೀರಾತಿನಲ್ಲಿ ಪ್ರಕಟಿಸುವಂತಿಲ್ಲ.

ಇಂತಹ ಮಾರ್ಗಸೂಚಿಗಳ ಜೊತೆಗೆ, ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಮುಂದಾಗುವ ಯುವಜನಾಂಗ ಎಚ್ಚೆತ್ತುಕೊಳ್ಳಬೇಕಾದುದೂ ಅಷ್ಟೇ ಮುಖ್ಯ. ಈ ಅಭ್ಯರ್ಥಿಗಳು ಮುಂದೆ ಉನ್ನತ ಹುದ್ದೆಗಳಿಗೆ ಏರಿ, ದೇಶದ ಆಡಳಿತದ ಸುಸೂತ್ರ ನಿರ್ವಹಣೆಗೆ ಶಾಸಕಾಂಗದೊಂದಿಗೆ ಕೈಜೋಡಿಸುವ ನಿರೀಕ್ಷೆಯುಳ್ಳವರು. ಹೀಗಾಗಿ, ಕೇಂದ್ರಗಳ ಮಾರ್ಗಸೂಚಿ ಪಾಲನೆಯ ಮೇಲೆ ನಿಗಾ ಇಡಬೇಕಾದುದು ಅವರ ಕರ್ತವ್ಯ ಸಹ ಆಗಿರುತ್ತದೆ. ಕೋಚಿಂಗ್‌ ಕೇಂದ್ರಗಳ ಅವ್ಯವಹಾರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸುವ ಹೊಣೆಗಾರಿಕೆ ಅವರಿಗಿರುತ್ತದೆ. ಈ ದಿಸೆಯಲ್ಲಿ, ಪ್ರಸ್ತುತ ಜಾರಿಯಾಗಿರುವ ಮಾರ್ಗಸೂಚಿಗೆ ಕಾನೂನಿನ ರೂಪ ಕೊಡುವುದಕ್ಕೆ ವಿದ್ಯಾರ್ಥಿಗಳು ಸಂಘಟಿತರಾಗಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.